ವಿಮೋಚನಾ ಮೌಲ್ಯದಿಂದ ಪ್ರಯೋಜನಹೊಂದಲು ಇತರರಿಗೆ ಸಹಾಯಮಾಡಿರಿ
ಕ್ರಿಸ್ತನ ಮರಣದ ಜ್ಞಾಪಕಾಚರಣೆಯನ್ನು ಏಪ್ರಿಲ್ 12ರಂದು ನಡೆಸಲಾಗುವುದು
1. ವಿಮೋಚನಾ ಮೌಲ್ಯಕ್ಕಾಗಿ ದೇವಜನರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುವ ಒಂದು ವಿಧವು ಯಾವುದು?
1 “ವರ್ಣಿಸಲಶಕ್ಯವಾದ ದೇವರ [ಉಚಿತಾರ್ಥ] ವರಕ್ಕಾಗಿ ಆತನಿಗೆ ಸ್ತೋತ್ರ.” (2 ಕೊರಿಂ. 9:15) ಈ ಮಾತುಗಳು, ತನ್ನ ಮಗನಾದ ಯೇಸು ಕ್ರಿಸ್ತನ ಮೂಲಕ ದೇವರು ತನ್ನ ಜನರಿಗೆ ತೋರಿಸಿರುವ ಒಳ್ಳೇತನ ಮತ್ತು ಪ್ರೀತಿಪೂರ್ವಕ ದಯೆಯ ಕಡೆಗೆ ನಮಗಿರುವ ಮನೋಭಾವವನ್ನು ಸೂಕ್ತವಾಗಿ ತಿಳಿಯಪಡಿಸುತ್ತದೆ. ಈ ಕೃತಜ್ಞತೆಯು, ಕ್ರಿಸ್ತನ ಮರಣದ ಜ್ಞಾಪಕಾಚರಣೆಗಾಗಿ ಏಪ್ರಿಲ್ 12ರಂದು ನಾವೆಲ್ಲರು ಒಟ್ಟುಸೇರುವಾಗ ವಿಶೇಷವಾಗಿ ವ್ಯಕ್ತವಾಗುವುದು.
2. ಜ್ಞಾಪಕಾಚರಣೆಗೆ ಯೆಹೋವನ ಸೇವಕರೊಂದಿಗೆ ಯಾರು ಹಾಜರಾಗುತ್ತಾರೆ, ಮತ್ತು ವಿಮೋಚನಾ ಮೌಲ್ಯದಿಂದ ಪ್ರಯೋಜನವನ್ನು ಹೊಂದಬೇಕಾದರೆ ಅವರೇನು ಮಾಡುವುದು ಅಗತ್ಯ?
2 ಪ್ರತಿ ವರ್ಷ ಯೆಹೋವನ ಸೇವಕರೊಂದಿಗೆ ಸುಮಾರು ಒಂದು ಕೋಟಿ ಜನರು ಜ್ಞಾಪಕಾಚರಣೆಗೆ ಹಾಜರಾಗುತ್ತಾರೆ. ಹೀಗೆ ಹಾಜರಾಗುವ ಮೂಲಕ ಅವರು ಕ್ರಿಸ್ತನ ಯಜ್ಞಕ್ಕೆ ಸ್ವಲ್ಪಮಟ್ಟಿಗೆ ಗಣ್ಯತೆಯನ್ನು ತೋರಿಸುತ್ತಾರೆ. ಆದರೆ, ಅವರು ವಿಮೋಚನಾ ಮೌಲ್ಯದಿಂದ ಪ್ರಯೋಜನವನ್ನು ಹೊಂದಬೇಕಾದರೆ ಅದರಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುವುದು ಅಗತ್ಯ. (ಯೋಹಾ. 3:16, 36) ಈ ರೀತಿಯ ನಂಬಿಕೆಯನ್ನು ಬೆಳೆಸಿಕೊಳ್ಳುವಂತೆ ನಾವು ಅವರಿಗೆ ಹೇಗೆ ಸಹಾಯಮಾಡಬಲ್ಲೆವು? ಈ ವರ್ಷದ ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ ಅವರು ಒಂದು ವೈಯಕ್ತಿಕ ಬೈಬಲ್ ಅಧ್ಯಯನವನ್ನು ಸ್ವೀಕರಿಸುವಂತೆ ಮತ್ತು ಪ್ರತಿ ವಾರದ ಸಭಾ ಕೂಟಗಳಿಗೆ ಹಾಜರಾಗುವಂತೆ ನಾವು ಅವರಿಗೆ ಉತ್ತೇಜಿಸಸಾಧ್ಯವಿದೆ. ಈ ಮುಂದಿನ ಸಲಹೆಗಳನ್ನು ಪರಿಗಣಿಸಿರಿ.
3. ನಾವು ಯಾರನ್ನು ಜ್ಞಾಪಕಾಚರಣೆಗೆ ಆಮಂತ್ರಿಸುತ್ತೇವೊ ಅವರೊಂದಿಗೆ ಹೇಗೆ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಬಹುದು?
3 ಬೈಬಲ್ ಅಧ್ಯಯನಗಳು: ಆಸಕ್ತ ಜನರನ್ನು ಜ್ಞಾಪಕಾಚರಣೆಗೆ ಆಮಂತ್ರಿಸುವಾಗ ಬೈಬಲ್ ಬೋಧಿಸುತ್ತದೆ ಪುಸ್ತಕದಿಂದ ನೀವೇಕೆ ಅವರೊಂದಿಗೆ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲು ಪ್ರಯತ್ನಿಸಬಾರದು? ಪುಟ 206-8ರ ಕಡೆಗೆ ತಿರುಗಿಸಿ, “ಕರ್ತನ ಸಂಧ್ಯಾ ಭೋಜನ—ದೇವರಿಗೆ ಗೌರವ ತರುವ ಒಂದು ಆಚರಣೆ” ಎಂಬ ವಿಷಯವನ್ನು ಪರಿಗಣಿಸುವ ಮೂಲಕ ಆ ವ್ಯಕ್ತಿಗೆ ಜ್ಞಾಪಕಾಚರಣೆಯ ಬಗ್ಗೆ ವಿವರಿಸಲು ಪ್ರಯತ್ನಿಸಿರಿ. ಈ ಮಾಹಿತಿಯನ್ನು ನೀವು ಒಂದು ಅಥವಾ ಎರಡು ಭೇಟಿಗಳಲ್ಲಿ ಪರಿಗಣಿಸಶಕ್ತರಾಗಬಹುದು ಮತ್ತು ಪ್ರಾಯಶಃ ಮನೆಬಾಗಿಲಲ್ಲೇ ನಿಂತು ಈ ಅಧ್ಯಯನವನ್ನು ನಡೆಸಬಹುದು. ನೀವು ಆ ವಿಷಯಭಾಗವನ್ನು ಪರಿಗಣಿಸಿದ ಬಳಿಕ ಆ ವ್ಯಕ್ತಿಯು “ವಿಮೋಚನ ಮೌಲ್ಯ—ದೇವರ ಅತಿಶ್ರೇಷ್ಠ ಉಡುಗೊರೆ” ಎಂಬ 5ನೇ ಅಧ್ಯಾಯವನ್ನು ಚರ್ಚಿಸಲು ಇಚ್ಛಿಸಬಹುದು. ಕ್ರಮವಾದ ಒಂದು ಬೈಬಲ್ ಅಧ್ಯಯನವು ಆರಂಭವಾದ ಕೂಡಲೆ ಹಿಂದಿನ ನಾಲ್ಕು ಅಧ್ಯಾಯಗಳನ್ನು ಪರಿಗಣಿಸಿರಿ.
4. ಈ ವರ್ಷದ ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ ನಾವು ಯಾರೊಂದಿಗೆ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಸಾಧ್ಯವಿದೆ?
4 ಈ ವಿಧಾನವನ್ನು ಉಪಯೋಗಿಸುತ್ತಾ ನಾವು ಯಾರೊಂದಿಗೆ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಸಾಧ್ಯವಿದೆ? ಪ್ರಾಯಶಃ ನಿಮ್ಮ ಜೊತೆಯಲ್ಲಿ ಕೆಲಸಮಾಡುವವರು, ಸಹಪಾಠಿಗಳು ಅಥವಾ ನೆರೆಹೊರೆಯವರಲ್ಲಿ ಕೆಲವರು ಇಂಥ ಚರ್ಚೆಗಳನ್ನು ನಡೆಸಲು ಒಪ್ಪಿಕೊಳ್ಳಬಹುದು. ಸಹೋದರರು ಸಭೆಯಲ್ಲಿರುವ ಸಹೋದರಿಯರ ಅವಿಶ್ವಾಸಿ ಗಂಡಂದಿರೊಂದಿಗೆ ಬೈಬಲ್ ಅಧ್ಯಯನವನ್ನು ನಡೆಸಬಹುದು. ಮತ್ತು ಸಾಕ್ಷಿಗಳಲ್ಲದ ನಿಮ್ಮ ಸ್ವಂತ ಸಂಬಂಧಿಕರನ್ನು ಕಡೆಗಣಿಸದಿರಿ. ಅಷ್ಟುಮಾತ್ರವಲ್ಲ, ಒಮ್ಮೆ ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸುತ್ತಿದ್ದವರಿಗೆ ಜ್ಞಾಪಕಾಚರಣೆಯ ಆಮಂತ್ರಣಪತ್ರವನ್ನು ನೀಡಲು ನಾವು ವಿಶೇಷ ಪ್ರಯತ್ನವನ್ನು ಮಾಡಬೇಕು. (ಲೂಕ 15:3-7) ಹೀಗೆ, ವಿಮೋಚನಾ ಯಜ್ಞದಿಂದ ಪ್ರಯೋಜನಹೊಂದುವಂತೆ ಇವರೆಲ್ಲರಿಗೂ ಸಹಾಯಮಾಡಲು ನಾವು ಪ್ರಯತ್ನಿಸೋಣ.
5. ವಾರದ ಸಭಾಕೂಟಗಳಿಗೆ ಹಾಜರಾಗುವಂತೆ ಬೈಬಲ್ ವಿದ್ಯಾರ್ಥಿಗಳನ್ನು ಮತ್ತು ಇತರ ಆಸಕ್ತ ಜನರನ್ನು ನಾವು ಹೇಗೆ ಉತ್ತೇಜಿಸಸಾಧ್ಯವಿದೆ?
5 ಸಭಾ ಕೂಟಗಳು: ಹೆಚ್ಚಿನ ಬೈಬಲ್ ವಿದ್ಯಾರ್ಥಿಗಳು ಮತ್ತು ಇತರ ಆಸಕ್ತ ಜನರು ಪ್ರಪ್ರಥಮವಾಗಿ ಹಾಜರಾಗುವ ಕೂಟವು ಜ್ಞಾಪಕಾಚರಣೆಯಾಗಿದೆ. ಆದರೆ, ನಮ್ಮ ಇತರ ಸಭಾ ಕೂಟಗಳಿಂದಲೂ ಪ್ರಯೋಜನವನ್ನು ಪಡೆದುಕೊಳ್ಳುವಂತೆ ನಾವು ಅವರನ್ನು ಹೇಗೆ ಉತ್ತೇಜಿಸಸಾಧ್ಯವಿದೆ? 2005ರ ಏಪ್ರಿಲ್ ತಿಂಗಳ ನಮ್ಮ ರಾಜ್ಯದ ಸೇವೆಯ ಪುಟ 8ರಲ್ಲಿ ಈ ಸಲಹೆಗಳನ್ನು ನೀಡಲಾಗಿತ್ತು: “ಮುಂದಿನ ಬಹಿರಂಗ ಭಾಷಣದ ಶೀರ್ಷಿಕೆಯನ್ನು ಅವರಿಗೆ ತಿಳಿಸಿರಿ. ಕಾವಲಿನಬುರುಜು ಅಧ್ಯಯನದಲ್ಲಿ ಮತ್ತು ಸಭಾ ಪುಸ್ತಕ ಅಧ್ಯಯನದಲ್ಲಿ ಚರ್ಚಿಸಲಿರುವ ವಿಷಯವನ್ನು ಅವರಿಗೆ ತೋರಿಸಿರಿ. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಮತ್ತು ಸೇವಾ ಕೂಟದ ಕುರಿತು ವಿವರಿಸಿರಿ. ನಿಮಗೆ ಶಾಲೆಯಲ್ಲಿ ಭಾಗಗಳಿರುವಾಗ ಒಂದುವೇಳೆ ಅದನ್ನು ನೀವು ಅವರೊಂದಿಗೆ ಪೂರ್ವಾಭಿನಯಿಸಸಾಧ್ಯವಿದೆ. ಕೂಟಗಳಲ್ಲಿ ತಿಳಿಸಲ್ಪಟ್ಟ ಮುಖ್ಯ ಅಂಶಗಳನ್ನು ಅವರೊಂದಿಗೆ ಹಂಚಿಕೊಳ್ಳಿರಿ. ನಮ್ಮ ಸಾಹಿತ್ಯಗಳಲ್ಲಿರುವ ಚಿತ್ರಗಳನ್ನು ಉಪಯೋಗಿಸುತ್ತಾ, ಕೂಟಗಳು ಹೇಗೆ ನಡೆಸಲ್ಪಡುತ್ತವೆ ಎಂಬುದನ್ನು ಅವರು ತಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಲು ಸಹಾಯಮಾಡಿರಿ. ಮೊದಲ ಅಧ್ಯಯನದಿಂದಲೇ ಕೂಟಗಳಿಗೆ ಹಾಜರಾಗುವಂತೆ ಅವರನ್ನು ಆಮಂತ್ರಿಸಿರಿ.”
6. ಪ್ರಾಮಾಣಿಕಹೃದಯದ ಜನರು ವಿಮೋಚನಾ ಮೌಲ್ಯದಿಂದ ಪ್ರಯೋಜನವನ್ನು ಹೊಂದುವಂತೆ ನಾವು ಯಾವ ಎರಡು ವಿಧಗಳಲ್ಲಿ ಅವರಿಗೆ ಸಹಾಯಮಾಡಸಾಧ್ಯವಿದೆ?
6 ಪ್ರಾಮಾಣಿಕಹೃದಯದ ಜನರು ಕ್ರಮವಾಗಿ ಬೈಬಲನ್ನು ಅಧ್ಯಯನಮಾಡುವಾಗ ಮತ್ತು ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುವಾಗ ಅನೇಕವೇಳೆ ಅವರು ಬೇಗನೆ ಆಧ್ಯಾತ್ಮಿಕವಾಗಿ ಪ್ರಗತಿಮಾಡುತ್ತಾರೆ. ಆದುದರಿಂದ, ಈ ಆಧ್ಯಾತ್ಮಿಕ ಏರ್ಪಾಡುಗಳಿಂದ ಮತ್ತು ದೇವರ ಅತಿಶ್ರೇಷ್ಠ ಉಡುಗೊರೆಯಾದ ವಿಮೋಚನಾ ಮೌಲ್ಯದಿಂದ ಪ್ರಯೋಜನವನ್ನು ಹೊಂದುವಂತೆ ನಾವು ಇತರರನ್ನು ಉತ್ತೇಜಿಸೋಣ.