ಆಡಿಯೋ ರೆಕಾರ್ಡಿಂಗ್ಗಳನ್ನು ಸದುಪಯೋಗಿಸಿಕೊಳ್ಳಿ
1. ಮುದ್ರಿತ ಪ್ರಕಾಶನಗಳ ಜೊತೆಗೆ ಇನ್ಯಾವ ಸಾಧನ ನಮಗೆ ಲಭ್ಯವಿದೆ?
1 ಮನಸ್ಸಿಗೆ ಮುದನೀಡುವ ಮತ್ತು ನಿಷ್ಕೃಷ್ಟವಾದ ಸತ್ಯದ ಮಾತುಗಳನ್ನು ಅನೇಕರು jw.orgಯ ಮೂಲಕ ಓದಿ ಆನಂದಿಸುತ್ತಾರೆ. (ಪ್ರಸಂ. 12:10) ಅದರಲ್ಲಿ, ಆಡಿಯೋ ರೆಕಾರ್ಡಿಂಗ್ಗಳು ಸಹ ಇವೆ. ಅವುಗಳನ್ನು ನೀವು ಉಪಯೋಗಿಸಿದ್ದೀರಾ? ಇದರ ಸಹಾಯದಿಂದ ನಮ್ಮ ವೆಬ್ಸೈಟ್ನಲ್ಲಿರುವ ಮಾಹಿತಿಯನ್ನು ಕೇಳಿಸಿಕೊಳ್ಳಬಹುದು. ಹಾಗಾದರೆ, ಈ ಆಡಿಯೋ ರೆಕಾರ್ಡಿಂಗ್ಗಳನ್ನು ಯಾವಾಗೆಲ್ಲಾ ಉಪಯೋಗಿಸಬಹುದು?
2. ವೈಯಕ್ತಿಕ ಅಥವಾ ಕುಟುಂಬ ಅಧ್ಯಯನದಲ್ಲಿ ಆಡಿಯೋ ರೆಕಾರ್ಡಿಂಗ್ಗಳನ್ನು ಹೇಗೆ ಉಪಯೋಗಿಸಬಹುದು?
2 ವೈಯಕ್ತಿಕ ಅಥವಾ ಕುಟುಂಬ ಅಧ್ಯಯನದಲ್ಲಿ: ಬೈಬಲಿನ, ಪತ್ರಿಕೆಗಳ ಮತ್ತು ಇತರ ಪ್ರಕಾಶನಗಳ ಆಡಿಯೋ ರೆಕಾರ್ಡಿಂಗ್ಗಳನ್ನು ನೀವು ಪ್ರಯಾಣಿಸುವಾಗ, ದಿನ ನಿತ್ಯದ ಕೆಲಸಗಳನ್ನು ಮಾಡುವಾಗ ಕೇಳಿಸಿಕೊಳ್ಳುವ ಮೂಲಕ ನಿಮ್ಮ ಸಮಯವನ್ನು ಸದುಪಯೋಗಿಸಿಕೊಳ್ಳಬಹುದು. (ಎಫೆ. 5:15, 16) ಕುಟುಂಬ ಆರಾಧನೆಯಲ್ಲಿ ಅವುಗಳನ್ನು ಕೇಳಿಸಿಕೊಳ್ಳುತ್ತಾ ನಿಮ್ಮ ಸ್ವಂತ ಪ್ರತಿಯಲ್ಲಿ ಅದನ್ನು ಹಿಂಬಾಲಿಸಬಹುದು. ಹೀಗೆ, ಕುಟುಂಬ ಆರಾಧನೆಯನ್ನು ವಿಭಿನ್ನವಾಗಿ ಮಾಡಬಹುದು. ವೈಯಕ್ತಿಕ ಅಧ್ಯಯನದಲ್ಲಿ ಇದನ್ನು ಕೇಳಿಸಿಕೊಳ್ಳುವ ಮೂಲಕ ನಿಮ್ಮ ಓದುವ ಕೌಶಲವನ್ನು ಉತ್ತಮಗೊಳಿಸಬಹುದು. ಜೊತೆಗೆ, ಹೊಸ ಭಾಷೆ ಕಲಿಯುತ್ತಿರುವುದಾದರೆ ಇದು ತುಂಬ ಪ್ರಯೋಜನಕಾರಿ.
3. ಸೇವೆಯಲ್ಲಿ ಆಡಿಯೋ ರೆಕಾರ್ಡಿಂಗ್ಗಳಿಂದ ಯಾರಿಗೆಲ್ಲಾ ಪ್ರಯೋಜನವಾಗಬಹುದು?
3 ಸೇವೆಯಲ್ಲಿ: ಪತ್ರಿಕೆಗಳನ್ನು ‘ಓದಲು ಸಮಯ ಇಲ್ಲ’ ಎಂದು ಹೇಳುವ ಜನರು ರೆಕಾರ್ಡಿಂಗ್ಗಳನ್ನು ಕೇಳಿಸಿಕೊಳ್ಳಲು ಇಷ್ಟಪಡಬಹುದು. ಸಾಮಾನ್ಯವಾಗಿ, ಬೇರೆ ಭಾಷೆಯ ಜನರು ತಮ್ಮ “ಸ್ವಂತ ಭಾಷೆಯಲ್ಲಿ” ರಾಜ್ಯ ಸಂದೇಶವನ್ನು ಕೇಳಿಸಿಕೊಳ್ಳುವಾಗ ಉತ್ತಮವಾಗಿ ಪ್ರತಿಕ್ರಿಯಿಸುತ್ತಾರೆ. (ಅ. ಕಾ. 2:6-8) ಹಾಗಾಗಿ ಕ್ಷೇತ್ರ ಸೇವೆಯಲ್ಲೂ ನಾವು ಆಡಿಯೋ ರೆಕಾರ್ಡಿಂಗ್ಗಳನ್ನು ಉಪಯೋಗಿಸಬಹುದು. ಕೆಲವು ಸಂಸ್ಕೃತಿಗಳಲ್ಲಿ ಕೇಳಿಸಿಕೊಳ್ಳುವುದಕ್ಕೆ ತುಂಬ ಪ್ರಾಮುಖ್ಯತೆ ಕೊಡುತ್ತಾರೆ. ಉದಾಹರಣೆಗೆ, ಹಮಂಗ್ ಸಂಸ್ಕೃತಿಯಲ್ಲಿ, ಜನರು ಹಿಂದಿನ ಘಟನೆಗಳನ್ನು ತಮ್ಮ ಮುಂದಿನ ಪೀಳಿಗೆಗೆ ಹೇಳುವ ಮೂಲಕ ದಾಟಿಸುತ್ತಾರೆ. ಆ ಸಂಸ್ಕೃತಿಯವರು ಕೇಳಿಸಿಕೊಂಡ ವಿಷಯಗಳನ್ನು ತುಂಬ ಚೆನ್ನಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳುತ್ತಾರೆ. ಆಫ್ರಿಕಾದ ಅನೇಕ ಸಂಸ್ಕೃತಿಗಳಲ್ಲಿ ಕಥೆಗಳನ್ನು ಹೇಳುವ ಮೂಲಕ ಕಲಿಸುತ್ತಾರೆ.
4. ಟೆರಿಟೊರಿಯಲ್ಲಿರುವ ಜನರಿಗೆ ಸಹಾಯ ಮಾಡುವುದರ ಕುರಿತು ನೀವು ಯಾವೆಲ್ಲಾ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು?
4 ಟೆರಿಟೊರಿಯಲ್ಲಿರುವ ಜನರಿಗೆ ಅವರ ಭಾಷೆಯಲ್ಲೇ ಆಡಿಯೋ ರೆಕಾರ್ಡಿಂಗ್ ಒಂದನ್ನು ಹಾಕುವುದರಿಂದ ಒಳ್ಳೇ ಫಲಿತಾಂಶ ಸಿಗಬಹುದಾ? ಯಾರಿಗಾದರೂ ಇ-ಮೇಲ್ ಮೂಲಕ ಪ್ರಕಾಶನ ಒಂದರ ರೆಕಾರ್ಡಿಂಗನ್ನು ಕಳುಹಿಸಬಹುದಾ? ಮನೆಯವರಿಗೆ, ಮುದ್ರಿತ ಪ್ರತಿಯನ್ನು ಕೊಡುವುದರ ಜೊತೆಗೆ ಅದರ ರೆಕಾರ್ಡಿಂಗನ್ನು ಸಿ.ಡಿ.ಯಲ್ಲಿ ಹಾಕಿ ಕೊಡಲು ನಮ್ಮಿಂದಾಗುತ್ತಾ? ಎಂದು ಕೇಳಿಕೊಳ್ಳಿ. ಯಾರಿಗಾದರೂ ನೀವು ಆಡಿಯೋ ರೂಪದಲ್ಲಿರುವ ಇಡೀ ಪುಸ್ತಕ, ಕಿರುಹೊತ್ತಗೆ, ಪತ್ರಿಕೆ ಅಥವಾ ಟ್ರ್ಯಾಕ್ಟನ್ನು ಕೊಟ್ಟರೆ ಅದನ್ನು ತಿಂಗಳ ವರದಿಯಲ್ಲಿ ಸೇರಿಸಬಹುದು. ಆಡಿಯೋ ರೆಕಾರ್ಡಿಂಗ್ಗಳನ್ನು ವೈಯಕ್ತಿಕ ಅಧ್ಯಯನದಲ್ಲಿ ಮತ್ತು ಸೇವೆಯಲ್ಲಿ ಸತ್ಯದ ಬೀಜವನ್ನು ಬಿತ್ತಲು ಉಪಯೋಗಿಸುವಂತೆ ವಿನ್ಯಾಸಿಸಲಾಗಿದೆ.—1 ಕೊರಿಂ. 3:6.