ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w23 ಫೆಬ್ರವರಿ ಪು. 8-13
  • ನೀವು ಬೈಬಲನ್ನ ಹೇಗೆ ಓದ್ತಾ ಇದ್ದೀರಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀವು ಬೈಬಲನ್ನ ಹೇಗೆ ಓದ್ತಾ ಇದ್ದೀರಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಓದಿದ್ದನ್ನ ಚೆನ್ನಾಗಿ ಅರ್ಥ ಮಾಡ್ಕೊಳಿ
  • ನಿಧಿ ತರ ಇರೋ ತತ್ವಗಳನ್ನ ಹುಡುಕಿ
  • ಏನ್‌ ಬದಲಾವಣೆ ಮಾಡ್ಕೊಬೇಕು ಅಂತ ಯೋಚ್ನೆ ಮಾಡಿ
  • ಖುಷಿಯಾಗಿರೋಕೆ ಬೈಬಲ್‌ ಓದ್ತಾ ಇರಿ
  • ದೈನಿಕ ಬೈಬಲ್‌ ವಾಚನದಿಂದ ಪ್ರಯೋಜನ ಪಡೆಯುವುದು
    ಕಾವಲಿನಬುರುಜು—1995
  • ವಾಚನದಲ್ಲಿ ಶ್ರದ್ಧೆಯಿಂದ ನಿಮ್ಮನ್ನೇ ನಿರತರಾಗಿಸಿಕೊಳ್ಳಿ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • “ದೇವರ ಮಾತಿನ ಪ್ರಕಾರ ನಡೀರಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ದೇವರ ವಾಕ್ಯದಲ್ಲಿ ಆನಂದವನ್ನು ಪಡೆದುಕೊಳ್ಳಿರಿ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
w23 ಫೆಬ್ರವರಿ ಪು. 8-13

ಅಧ್ಯಯನ ಲೇಖನ 7

ನೀವು ಬೈಬಲನ್ನ ಹೇಗೆ ಓದ್ತಾ ಇದ್ದೀರಾ?

“ನೀನು ಓದ್ತಾ ಇರೋದು ನಿನಗೆ ಅರ್ಥ ಆಗ್ತಾ ಇದ್ಯಾ?”​—ಅ. ಕಾ. 8:30.

ಗೀತೆ 115 ನಮ್ಮ ದಾರಿಯನ್ನು ಸಫಲಗೊಳಿಸುವುದು

ಈ ಲೇಖನದಲ್ಲಿ ಏನಿದೆ?a

1. ಯೇಸುಗೆ ಪವಿತ್ರ ಗ್ರಂಥ ತುಂಬ ಮುಖ್ಯವಾಗಿತ್ತು ಅಂತ ನಾವು ಹೇಗೆ ಹೇಳ್ಬೋದು?

ಯೇಸು ಜನ್ರಿಗೆ ಹೇಗೆ ಕಲಿಸ್ತಿದ್ದನು? ಆತನು ಅವ್ರಿಗೆ ಕಲಿಸುವಾಗೆಲ್ಲಾ ಪವಿತ್ರ ಗ್ರಂಥದಲ್ಲಿರೋ ವಚನಗಳನ್ನೇ ಜಾಸ್ತಿ ಬಳಸ್ತಿದ್ದನು. ಅದ್ರಲ್ಲಿ ಇರೋದನ್ನ ಜನ್ರಿಗೆ ಓದಿ ಹೇಳ್ತಿದ್ದನು. ಅದ್ರಲ್ಲಿರೋ ವಿಷ್ಯಾನ ಅವ್ರಿಗೆ ಅರ್ಥ ಮಾಡಿಸ್ತಿದ್ದನು. ಆತನು ಮೂರುವರೆ ವರ್ಷ ಜನ್ರಿಗೆ ಕಲಿಸುವಾಗ ಎಷ್ಟು ವಚನಗಳನ್ನ ಬಳಸಿರ್ತಾನೆ ಅಂತ ಸ್ವಲ್ಪ ಯೋಚ್ನೆ ಮಾಡಿ. (ಮತ್ತಾ. 5:17, 18, 21, 22, 27, 28; ಲೂಕ 4:16-20) ಆತನು ದೀಕ್ಷಾಸ್ನಾನ ಪಡ್ಕೊಂಡ ಮೇಲೆ ಮಾತಾಡಿದ ವಿಷ್ಯಗಳು ನಿಮಗೆ ನೆನಪಿದ್ಯಾ? ಯೇಸು ಪವಿತ್ರ ಗ್ರಂಥದಲ್ಲಿದ್ದ ಮಾತುಗಳನ್ನೇ ಹೇಳಿದ್ದನು.b ಅಷ್ಟೇ ಅಲ್ಲ, ತಾನು ಸಾಯೋ ಕೊನೇ ಕ್ಷಣಗಳಲ್ಲೂ ಪವಿತ್ರ ಗ್ರಂಥದಲ್ಲಿರೋ ವಚನಗಳನ್ನೇ ಹೇಳಿ ಪ್ರಾಣ ಬಿಟ್ಟನು.​—ಧರ್ಮೋ. 8:3; ಕೀರ್ತ. 31:5; ಲೂಕ 4:4; 23:46.

ಚಿತ್ರಗಳು: 1. ಅಪ್ಪ ಅಮ್ಮ ಹೇಳ್ಕೊಡ್ತಾ ಇರೋದನ್ನ ಪುಟ್ಟ ಯೇಸು ಕೇಳಿಸ್ಕೊಳ್ತಿದ್ದಾನೆ. 2. ಯೇಸು ಈಗ ಸ್ವಲ್ಪ ದೊಡ್ಡವನಾಗಿದ್ದಾನೆ. ಸಭಾಮಂದಿರದಲ್ಲಿ ಪವಿತ್ರ ಗ್ರಂಥ ಓದ್ತಿರೋದನ್ನ ಆತನು ಮತ್ತು ಆತನ ಮನೆಯವ್ರೆಲ್ಲ ಕೂತು ಕೇಳಿಸ್ಕೊತಿದ್ದಾರೆ. 3. ಯೇಸು ದೊಡ್ಡವನಾದ ಮೇಲೆ ಸುರುಳಿಯನ್ನ ಹಿಡ್ಕೊಂಡು ಓದ್ತಿದ್ದಾನೆ.

ಯೇಸು ತುಂಬ ಇಷ್ಟಪಟ್ಟು ಪವಿತ್ರ ಗ್ರಂಥ ಓದ್ತಿದ್ದನು. ಬರೀ ಓದೋದಷ್ಟೇ ಅಲ್ಲ ಅದ್ರಲ್ಲಿ ಇರೋದನ್ನ ಯಾವಾಗ್ಲೂ ಪಾಲಿಸ್ತಿದ್ದನು (ಪ್ಯಾರ 2 ನೋಡಿ)

2. ವಚನಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಯೇಸುಗೆ ಯಾವುದು ಸಹಾಯ ಮಾಡ್ತು? (ಮುಖಪುಟ ಚಿತ್ರ ನೋಡಿ.)

2 ಯೇಸು ಚಿಕ್ಕವಯಸ್ಸಿಂದಾನೇ ದೇವರ ವಾಕ್ಯನ ಕೇಳಿಸಿಕೊಂಡಿದ್ದನು, ಓದಿದ್ದನು ಮತ್ತು ಅದ್ರ ಬಗ್ಗೆ ಚೆನ್ನಾಗಿ ತಿಳ್ಕೊಂಡಿದ್ದನು. ಯೇಸುವಿನ ಅಪ್ಪ ಅಮ್ಮ ಆತನಿಗೆ ದೇವರ ಬಗ್ಗೆ ಹೇಳ್ಕೊಡುವಾಗೆಲ್ಲಾ ದೇವರ ವಾಕ್ಯದಲ್ಲಿರೋ ವಚನಗಳನ್ನ ಹೇಳಿರ್ತಾರೆ.c (ಧರ್ಮೋ. 6:6, 7) ಅವರು ಸಬ್ಬತ್‌ ದಿನಗಳಲ್ಲಿ ಸಭಾಮಂದಿರಕ್ಕೆ ಹೋಗ್ತಿದ್ದಾಗ ಆತನೂ ಅವ್ರ ಜೊತೆ ಹೋಗ್ತಿದ್ದನು. (ಲೂಕ 4:16) ಅಲ್ಲಿ ವಚನಗಳನ್ನ ಓದ್ತಿದ್ದಾಗ ಅದನ್ನ ಕೇಳಿಸಿಕೊಳ್ತಿದ್ದನು. ಆತನು ದೊಡ್ಡವನಾಗ್ತಾ ಹೋದ ಹಾಗೆ ಪವಿತ್ರ ಗ್ರಂಥನ ಓದೋಕೆ ಕಲಿತನು. ಹೀಗೆ ಅದ್ರಲ್ಲಿದ್ದ ವಚನಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಂಡನು. ಅಷ್ಟೇ ಅಲ್ಲ, ಅದನ್ನ ಮನಸಾರೆ ಇಷ್ಟಪಟ್ಟು ಪಾಲಿಸೋಕೂ ಕಲಿತನು. ಯೇಸುಗೆ 12 ವರ್ಷ ಇದ್ದಾಗ ಏನ್‌ ಮಾಡಿದನು ಅಂತ ನಿಮಗೆ ನೆನಪಿದ್ಯಾ? ಆತನು ದೇವಾಲಯದಲ್ಲಿ ಮೋಶೆಯ ನಿಯಮ ಪುಸ್ತಕಗಳನ್ನ ಅರೆದು ಕುಡಿದಿದ್ದ ಗುರುಗಳ ಜೊತೆ ಕೂತು ಮಾತಾಡ್ತಿದ್ದನು. ಆತನು ಕೊಡ್ತಿದ್ದ ಉತ್ರ ಕೇಳಿ ಅವರು “ತುಂಬ ಆಶ್ಚರ್ಯಪಡ್ತಿದ್ರು.”​—ಲೂಕ 2:46, 47, 52.

3. ನಾವು ಈ ಲೇಖನದಲ್ಲಿ ಏನ್‌ ಕಲಿತೀವಿ?

3 ಯೇಸು ಕಾಲದಲ್ಲಿದ್ದ ಫರಿಸಾಯರು, ಪಂಡಿತರು, ಸದ್ದುಕಾಯರು ಪವಿತ್ರ ಗ್ರಂಥನ ಓದ್ತಾ ಇದ್ರು. ಆದ್ರೆ, ಅವರು ಅದನ್ನ ಸರಿಯಾಗಿ ಅರ್ಥ ಮಾಡ್ಕೊಳ್ತಾ ಇರ್ಲಿಲ್ಲ. ಅದಕ್ಕೆ ಯೇಸು ಅವ್ರನ್ನ ತಿದ್ದಿದನು. ಆತನು ಅವ್ರಿಗೆ ಹೇಳಿದ ಮಾತುಗಳಿಂದ ನಾವು ಇವತ್ತು ಹೇಗೆ ಬೈಬಲ್‌ ಓದ್ಬೇಕು ಅಂತ ಕಲಿತೀವಿ. ಬೈಬಲ್‌ ಓದ್ವಾಗ ಮುಖ್ಯವಾಗಿ ನಾವು 3 ವಿಷ್ಯ ಮಾಡ್ಬೇಕು. (1) ಓದಿದ್ದನ್ನ ಚೆನ್ನಾಗಿ ಅರ್ಥ ಮಾಡ್ಕೊಬೇಕು (2) ಅದ್ರಲ್ಲಿ ನಿಧಿ ತರ ಅಡಗಿರೋ ತತ್ವಗಳನ್ನು ಹುಡುಕ್ಬೇಕು (3) ಏನ್‌ ಬದಲಾವಣೆ ಮಾಡ್ಕೊಬೇಕು ಅಂತ ಯೋಚ್ನೆ ಮಾಡ್ಬೇಕು. ಅದನ್ನ ಹೇಗೆ ಮಾಡೋದು ಅಂತ ಈ ಲೇಖನದಲ್ಲಿ ನೋಡೋಣ. ಹೀಗೆ ಮಾಡಿದ್ರೆ ನಾವು ಪ್ರತಿದಿನ ಬೈಬಲ್‌ ಓದ್ವಾಗ ಯೇಸು ತರ ಇಷ್ಟಪಟ್ಟು ಓದ್ತೀವಿ. ಅಷ್ಟೇ ಅಲ್ಲ, ಓದಿದ್ದನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ತೀವಿ.

ಓದಿದ್ದನ್ನ ಚೆನ್ನಾಗಿ ಅರ್ಥ ಮಾಡ್ಕೊಳಿ

4. ನಾವು ಬೈಬಲನ್ನ ಹೇಗೆ ಓದ್ಬೇಕು ಅಂತ ಲೂಕ 10:25-29ರಲ್ಲಿ ಗೊತ್ತಾಗುತ್ತೆ?

4 ನಾವು ಬೈಬಲ್‌ ಓದ್ವಾಗ ಅದ್ರಲ್ಲಿ ಇರೋದನ್ನ ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನ ಮಾಡ್ಬೇಕು. ಇಲ್ಲಾಂದ್ರೆ ಅದ್ರಿಂದ ಏನೂ ಪ್ರಯೋಜನ ಆಗಲ್ಲ. ಇದಕ್ಕೊಂದು ಉದಾಹರಣೆ ನೋಡಿ. ಒಂದ್ಸಲ ಯೇಸು ಹತ್ರ “ನಿಯಮ ಪುಸ್ತಕವನ್ನ ಅರಿದು ಕುಡಿದಿದ್ದ” ಒಬ್ಬ ವ್ಯಕ್ತಿ ಬಂದ. ಅವನು ‘ಶಾಶ್ವತ ಜೀವ ಸಿಗಬೇಕಾದ್ರೆ ಏನ್‌ ಮಾಡ್ಬೇಕು’ ಅಂತ ಕೇಳ್ದ. (ಲೂಕ 10:25-29 ಓದಿ.) ಅದಕ್ಕೆ ಯೇಸು, “ನಿಯಮ ಪುಸ್ತಕದಲ್ಲಿ ಏನು ಮಾಡಬೇಕಂತ ಇದೆ? ನಿನಗೇನು ಅರ್ಥ ಆಯ್ತು?” ಅಂತ ಕೇಳಿದನು. ಅದಕ್ಕೆ ಅವನು ದೇವರನ್ನ ಮತ್ತು ನೆರೆಯವರನ್ನ ಪ್ರೀತಿಸಬೇಕು ಅಂತ ಹೇಳ್ದ. (ಯಾಜ. 19:18; ಧರ್ಮೋ. 6:5) ಅವನು ಹೇಳಿದ ಉತ್ರ ಸರಿಯಾಗೇ ಇತ್ತು. ನಿಯಮ ಪುಸ್ತಕದಲ್ಲಿ ಇದ್ದಿದ್ದನ್ನೇ ಅವನು ಹೇಳ್ದ. ಆದ್ರೆ ಅವನು ಅದನ್ನ ನಿಜವಾಗ್ಲೂ ಅರ್ಥ ಮಾಡ್ಕೊಂಡಿದ್ನಾ? ಇಲ್ಲ. ಅದಕ್ಕೆ ಅವನು “ಅಷ್ಟಕ್ಕೂ ನನ್ನ ನೆರೆಯವನು ಯಾರು?” ಅಂತ ಯೇಸು ಹತ್ರ ಕೇಳ್ದ. ಇದ್ರಿಂದ ನಮಗೇನು ಗೊತ್ತಾಗುತ್ತೆ? ಆ ವ್ಯಕ್ತಿ ನಿಯಮ ಪುಸ್ತಕನ ಓದಿದ್ದ. ಆದ್ರೆ ವಚನಗಳಲ್ಲಿ ಇರೋದನ್ನ ಸರಿಯಾಗಿ ಅರ್ಥ ಮಾಡ್ಕೊಂಡಿರಲಿಲ್ಲ. ಅದಕ್ಕೆ ಅದನ್ನ ಜೀವನದಲ್ಲಿ ಹೇಗೆ ಪಾಲಿಸ್ಬೇಕು ಅಂತ ಅವನಿಗೆ ಗೊತ್ತಿರ್ಲಿಲ್ಲ.

ಓದಿದ್ದನ್ನ ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯ ಬೆಳೆಸ್ಕೊಳ್ಳೋಕೆ ನಮ್ಮಿಂದ ಆಗುತ್ತೆ

5. (ಎ) ನಾವು ಓದ್ವಾಗ ಯಾಕೆ ಪ್ರಾರ್ಥನೆ ಮಾಡ್ಬೇಕು? (ಬಿ) ಬೈಬಲನ್ನ ಯಾಕೆ ನಿಧಾನವಾಗಿ ಓದ್ಬೇಕು?

5 ನಾವು ಬೈಬಲನ್ನ ಓದ್ವಾಗ ಅದನ್ನ ಚೆನ್ನಾಗಿ ಅರ್ಥ ಮಾಡ್ಕೊಂಡು ಓದೋಕೆ ಏನ್‌ ಮಾಡ್ಬೇಕು? ಮೊದಲನೇದಾಗಿ, ಓದೋ ಮುಂಚೆ ಪ್ರಾರ್ಥನೆ ಮಾಡಿ. ಯಾಕಂದ್ರೆ ವಚನಗಳನ್ನ ಗಮನಕೊಟ್ಟು ಓದೋಕೆ ಅದನ್ನ ಅರ್ಥ ಮಾಡ್ಕೊಳ್ಳೋಕೆ ನಮಗೆ ಪವಿತ್ರ ಶಕ್ತಿಯ ಸಹಾಯ ಬೇಕು. ಆಮೇಲೆ ಅವಸರ ಅವಸರವಾಗಿ ಓದ್ಬೇಡಿ. ನಿಧಾನವಾಗಿ ಓದಿ. ನೀವು ಜೋರಾಗಿ ಓದ್ಬೋದು ಅಥವಾ ಅದ್ರ ಆಡಿಯೋ ರೆಕಾರ್ಡಿಂಗಳನ್ನ ಕೇಳಿಸ್ಕೊಳ್ತಾ ಓದ್ಬೋದು. ಈ ರೀತಿ ಓದಿದ್ರೆ ನಿಮಗೆ ಚೆನ್ನಾಗಿ ಅರ್ಥ ಆಗುತ್ತೆ. ಅಷ್ಟೇ ಅಲ್ಲ ಓದಿದ್ದು ನೆನಪಲ್ಲೂ ಇರುತ್ತೆ. (ಯೆಹೋ. 1:8) ಓದಿದ ಮೇಲೆ ಕೊನೇಲಿ ಇನ್ನೂ ಒಂದ್ಸಲ ಪ್ರಾರ್ಥನೆ ಮಾಡಿ. ಬೈಬಲನ್ನ ನಮಗೆ ಗಿಫ್ಟಾಗಿ ಕೊಟ್ಟಿದ್ದಕ್ಕೆ ಯೆಹೋವನಿಗೆ ಥ್ಯಾಂಕ್ಸ್‌ ಹೇಳಿ. ಓದಿದ್ದನ್ನ ಜೀವನದಲ್ಲಿ ಪಾಲಿಸೋಕೆ ಸಹಾಯ ಮಾಡಪ್ಪಾ ಅಂತ ಕೇಳಿ.

ಚಿತ್ರಗಳು: 1. ಒಬ್ಬ ಸಹೋದರಿ ಟಿಪ್ಪಣಿ ಬರೆದು ಬೈಬಲ್‌ಗೆ ಅಂಟಿಸ್ತಿದ್ದಾಳೆ. 2. ಒಬ್ಬ ಸಹೋದರ ಟ್ಯಾಬ್‌ನಲ್ಲಿ ಒಂದು ಲೇಖನ ಓದ್ತಿದ್ದಾನೆ. ಮುಖ್ಯವಾದ ವಿಷ್ಯಗಳಿಗೆ ಬಣ್ಣ ಹಾಕಿ ಟಿಪ್ಪಣಿ ಬರಿತಿದ್ದಾನೆ. 3. ಒಬ್ಬ ಸಹೋದರಿ “JW ಲೈಬ್ರರಿ” ಆ್ಯಪ್‌ನಲ್ಲಿ ಬಣ್ಣ ಹಚ್ಚಿ ಟಿಪ್ಪಣಿ ಬರಿತಿದ್ದಾಳೆ.

ಓದಿದ ವಿಷ್ಯನ ಬರೆದಿಟ್ರೆ ಚೆನ್ನಾಗಿ ಅರ್ಥ ಆಗುತ್ತೆ, ನೆನಪಲ್ಲಿ ಉಳಿಯುತ್ತೆ (ಪ್ಯಾರ 6 ನೋಡಿ)

6. (ಎ) ಬೈಬಲ್‌ ಓದ್ವಾಗ ನಾವು ಯಾಕೆ ಪ್ರಶ್ನೆಗಳನ್ನ ಕೇಳ್ಕೊಬೇಕು? (ಬಿ) ಓದಿದ ವಿಷ್ಯನ ಯಾಕೆ ಬರೆದಿಡಬೇಕು? (ಚಿತ್ರನೂ ನೋಡಿ.)

6 ಬೈಬಲ್‌ ಓದ್ವಾಗ ಅದನ್ನ ಅರ್ಥ ಮಾಡ್ಕೊಳ್ಳೋಕೆ ಇನ್ನೂ ಏನ್‌ ಮಾಡ್ಬೋದು? ಕೆಲವು ಪ್ರಶ್ನೆಗಳನ್ನ ಕೇಳ್ಕೊಳಿ. ಈ ಘಟನೆ ನಡಿವಾಗ ಅಲ್ಲಿ ಯಾರೆಲ್ಲಾ ಇದ್ರು? ಯಾರು ಯಾರ ಹತ್ರ ಮಾತಾಡ್ತಿದ್ದಾರೆ? ಏನ್‌ ಹೇಳ್ತಿದ್ದಾರೆ? ಯಾಕೆ ಹೇಳ್ತಿದ್ದಾರೆ? ಯಾವಾಗ ಹೇಳ್ತಿದ್ದಾರೆ? ಈ ಘಟನೆ ಎಲ್ಲಿ ನಡೀತಿದೆ? ಅಂತ ಯೋಚ್ನೆ ಮಾಡಿ. ಆಗ ನಾವು ಓದಿದ ವಚನಗಳಲ್ಲಿ ಮುಖ್ಯವಾದ ವಿಷ್ಯ ಏನು ಅಂತ ಗೊತ್ತಾಗುತ್ತೆ. ನೀವು ಓದಿದ್ರ ಬಗ್ಗೆ ಚುಟುಕಾಗಿ ಬರೆದಿಡಿ. ಏನೇನ್‌ ಬರೆದಿಡಬಹುದು? ನಿಮ್ಮ ಮನಸ್ಸಿಗೆ ಬಂದ ಪ್ರಶ್ನೆಗಳನ್ನ, ನೀವು ಸಂಶೋಧನೆ ಮಾಡಿ ತಿಳ್ಕೊಂಡ ವಿಷ್ಯಗಳನ್ನ ಮತ್ತು ಮುಖ್ಯ ವಿಷ್ಯಗಳನ್ನ ಬರೆದಿಡಬಹುದು. ಆ ಮಾಹಿತಿನ ನೀವು ಎಲ್ಲೆಲ್ಲಿ ಬಳಸ್ಬೇಕು ಅಂತ ಅಂದ್ಕೊಂಡಿದ್ದೀರೋ ಅದನ್ನ ಬರೆದಿಡಬಹುದು. ಓದ್ವಾಗ ನಿಮಗೆ ಹೇಗನಿಸ್ತು ಅನ್ನೋದನ್ನೂ ಬರೆದಿಡಬಹುದು. ಹೀಗೆ ಬರಿಯೋದ್ರಿಂದ, ಓದಿದ್ದನ್ನ ನೀವು ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಆಗುತ್ತೆ. ಆ ವಿಷ್ಯಗಳು ನಿಮ್ಮ ಮನಸ್ಸಲ್ಲೂ ಉಳಿಯುತ್ತೆ. ಅಷ್ಟೇ ಅಲ್ಲ, ಬೈಬಲನ್ನ ಓದ್ವಾಗ ಯೆಹೋವ ‘ನನ್ನ ಹತ್ರನೇ ಮಾತಾಡ್ತಿದ್ದಾನೆ’ ಅಂತ ನಮಗೆ ಅನ್ಸುತ್ತೆ.

7. ನಾವು ಬೈಬಲ್‌ ಓದ್ವಾಗ ಇನ್ನೂ ಏನು ಮಾಡ್ಬೇಕು ಮತ್ತು ಯಾಕೆ? (ಮತ್ತಾಯ 24:15)

7 ಬೈಬಲಲ್ಲಿ ಇರೋದನ್ನ ಅರ್ಥ ಮಾಡ್ಕೊಳ್ಳೋಕೆ ನಾವು ಬುದ್ಧಿ ಉಪಯೋಗಿಸ್ಬೇಕು ಅಂತ ಯೇಸು ಹೇಳಿದನು. (ಮತ್ತಾಯ 24:15 ಓದಿ.) ನಾವು ಬೈಬಲ್‌ ಓದ್ವಾಗ ಬುದ್ಧಿ ಉಪಯೋಗಿಸೋದು ಹೇಗೆ? ವಚನಗಳನ್ನ ಓದ್ವಾಗ ಒಂದು ವಿಷ್ಯಕ್ಕೂ ಇನ್ನೊಂದು ವಿಷ್ಯಕ್ಕೂ ಏನು ಸಂಬಂಧ ಇದೆ, ಏನು ವ್ಯತ್ಯಾಸ ಇದೆ ಅನ್ನೋದನ್ನ ಗಮನಿಸ್ಬೇಕು. ಓದಿದ ತಕ್ಷಣ ಅರ್ಥ ಆಗದಿರೋ ವಿಷ್ಯಗಳನ್ನ ತಿಳ್ಕೊಳ್ಳೋಕೆ ಪ್ರಯತ್ನ ಮಾಡ್ಬೇಕು. ಬೈಬಲಲ್ಲಿರೋ ಭವಿಷ್ಯವಾಣಿಗಳು ಹೇಗೆ ನಿಜ ಆಗ್ತಿದೆ ಅಂತ ತಿಳ್ಕೊಳ್ಳೋಕೂ ನಾವು ಬುದ್ಧಿ ಉಪಯೋಗಿಸ್ಬೇಕು ಅಂತ ಯೇಸು ಹೇಳಿದ್ದಾನೆ. ಅದಕ್ಕಷ್ಟೇ ಅಲ್ಲ, ಬೈಬಲಲ್ಲಿ ಇರೋ ಬೇರೆಲ್ಲಾ ವಿಷ್ಯಗಳನ್ನ ಅರ್ಥ ಮಾಡ್ಕೊಳ್ಳೋಕೂ ನಾವು ಬುದ್ಧಿ ಉಪಯೋಗಿಸ್ಬೇಕು.

8. ಬೈಬಲನ್ನ ಓದ್ವಾಗ ನಾವು ಬುದ್ಧಿ ಉಪಯೋಗಿಸೋದು ಹೇಗೆ?

8 ತನ್ನ ವಾಕ್ಯನ ಅರ್ಥ ಮಾಡ್ಕೊಳ್ಳೋಕೆ ಬೇಕಾದ ಸಾಮರ್ಥ್ಯ, ಬುದ್ಧಿನ ಯೆಹೋವ ನಮಗೆ ಖಂಡಿತ ಕೊಡ್ತಾನೆ. ಅದಕ್ಕೆ ಬುದ್ಧಿ ಕೊಡಪ್ಪಾ ಅಂತ ನಾವು ಯೆಹೋವನ ಹತ್ರ ಕೇಳ್ಬೇಕು. (ಜ್ಞಾನೋ. 2:6) ಆಮೇಲೆ ಏನ್‌ ಮಾಡ್ಬೇಕು? ನಾವು ಬೈಬಲ್‌ ಓದ್ವಾಗ ಚೆನ್ನಾಗಿ ಗಮನಿಸಬೇಕು. ಓದ್ತಾ ಇರೋ ವಿಷ್ಯಕ್ಕೂ ನಿಮಗೆ ಈಗಾಗ್ಲೇ ಗೊತ್ತಿರೋ ವಿಷ್ಯಕ್ಕೂ ಏನ್‌ ಸಂಬಂಧ ಅಂತ ಯೋಚ್ನೆ ಮಾಡ್ಬೇಕು. ಅದಕ್ಕೆ ನಮ್ಮ ಪ್ರಕಾಶನಗಳು ಸಹಾಯ ಮಾಡುತ್ತೆ. ಉದಾಹರಣೆಗೆ, ಬೈಬಲ್‌ ಓದ್ವಾಗ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಅನ್ನೋ ಪುಸ್ತಕ ಬಳಸಿ. ಬೈಬಲಲ್ಲಿರೋ ವಿಷ್ಯಗಳನ್ನ ಅರ್ಥಮಾಡ್ಕೊಳ್ಳೋಕೆ ಮತ್ತು ಅದನ್ನ ಜೀವನದಲ್ಲಿ ಪಾಲಿಸೋಕೆ ಇಂಥ ಪುಸ್ತಕಗಳು ನಿಮಗೆ ಸಹಾಯ ಮಾಡುತ್ತೆ. (ಇಬ್ರಿ. 5:14) ಹೀಗೆ ಬೈಬಲ್‌ ಓದ್ವಾಗ ಬುದ್ಧಿ ಉಪಯೋಗಿಸಿದ್ರೆ ಅದನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ತೀವಿ.

ನಿಧಿ ತರ ಇರೋ ತತ್ವಗಳನ್ನ ಹುಡುಕಿ

9. ಸದ್ದುಕಾಯರು ದೇವರ ವಾಕ್ಯನ ಓದಿದ್ರೂ ಯಾವ ವಿಷ್ಯ ಅರ್ಥ ಮಾಡ್ಕೊಂಡಿರಲಿಲ್ಲ?

9 ಯೇಸು ಕ್ರಿಸ್ತನ ಕಾಲದಲ್ಲಿದ್ದ ಸದ್ದುಕಾಯರಿಗೆ ಬೈಬಲಿನ ಮೊದಲ 5 ಹೀಬ್ರು ಪುಸ್ತಕಗಳು ಚೆನ್ನಾಗಿ ಗೊತ್ತಿತ್ತು. ಅದನ್ನ ಅವರು ಅರಿದು ಕುಡಿದಿದ್ರು. ಆದ್ರೆ ಆ ವಚನಗಳ ಹಿಂದೆ ಇದ್ದ ಮುಖ್ಯವಾದ ಸತ್ಯಗಳನ್ನ ಅವರು ತಿಳ್ಕೊಂಡಿರಲಿಲ್ಲ. ಇದಕ್ಕೊಂದು ಉದಾಹರಣೆ ನೋಡಿ. ಒಂದ್ಸಲ ಯೇಸು ಸದ್ದುಕಾಯರ ಜೊತೆ ಮಾತಾಡ್ತಿದ್ದನು. ಸತ್ತವರು ಮತ್ತೆ ಜೀವಂತವಾಗಿ ಎದ್ದು ಬರ್ತಾರೆ ಅಂತ ಹೇಳ್ತಿದ್ದನು. ಆದ್ರೆ ಅವರು ಅದನ್ನ ಒಪ್ಕೊಳ್ಳಲಿಲ್ಲ. ಅದಕ್ಕೆ ಯೇಸು ಹೀಗೆ ಹೇಳಿದನು: “ನೀವು ಮೋಶೆ ಪುಸ್ತಕದಲ್ಲಿ ಓದಿಲ್ವಾ? ದೇವರು ಮುಳ್ಳಿನ ಪೊದೆ ಹತ್ರ ಮೋಶೆಗೆ ‘ನಾನು ಅಬ್ರಹಾಮ, ಇಸಾಕ, ಯಾಕೋಬನ ದೇವರು’ ಅಂದನು.” (ಮಾರ್ಕ 12:18, 26) ಯೇಸು ಯಾಕೆ ಆ ಪ್ರಶ್ನೆ ಕೇಳಿದನು? ಸದ್ದುಕಾಯರು ಈ ವಚನಾನ ಎಷ್ಟೋ ಸಾರಿ ಓದಿದ್ರು. ಆದ್ರೆ ಅವರು, ದೇವರು ಸತ್ತವರನ್ನ ಮತ್ತೆ ಜೀವಂತವಾಗಿ ಎಬ್ಬಿಸ್ತಾನೆ ಅನ್ನೋ ಸತ್ಯನ ಅರ್ಥ ಮಾಡ್ಕೊಂಡಿರಲಿಲ್ಲ. ಅದಕ್ಕೇ ಯೇಸು ಹಾಗೆ ಕೇಳಿದನು.​—ಮಾರ್ಕ 12:27; ಲೂಕ 20:38.d

10. ನಾವು ಬೈಬಲ್‌ ಓದ್ವಾಗ ಏನನ್ನ ಹುಡುಕೋಕೆ ಪ್ರಯತ್ನ ಮಾಡ್ಬೇಕು?

10 ಇದ್ರಿಂದ ನಮಗೇನು ಪಾಠ? ನಾವು ಬೈಬಲ್‌ ಓದ್ವಾಗ, ‘ಆ ವಚನದಿಂದ ಅಥವಾ ಆ ಘಟನೆಯಿಂದ ನಾನೇನ್‌ ಕಲಿಬೋದು’ ಅಂತ ಯೋಚ್ನೆ ಮಾಡಿ. ಓದಿದ ತಕ್ಷಣ ಅರ್ಥ ಆಯ್ತು ಅಂತ ಮುಂದಕ್ಕೆ ಹೋಗಿಬಿಡ್ಬೇಡಿ. ಅದ್ರಲ್ಲಿ ಇರೋ ಸತ್ಯಗಳನ್ನ, ತತ್ವಗಳನ್ನ ಹುಡುಕೋಕೆ ಪ್ರಯತ್ನ ಮಾಡಿ. ಯಾಕಂದ್ರೆ ಇವು ನಿಧಿ ಇದ್ದ ಹಾಗೆ. ಇವು ನಮಗೆ ಸುಮ್ನೆ ಮೇಲ್ಮೇಲೆ ಓದಿದ್ರೆ ಸಿಗಲ್ಲ.

11. ಬೈಬಲಲ್ಲಿ ನಿಧಿ ತರ ಇರೋ ತತ್ವಗಳನ್ನ ಕಂಡುಹಿಡಿಯೋಕೆ 2 ತಿಮೊತಿ 3:16, 17 ಹೇಗೆ ಸಹಾಯ ಮಾಡುತ್ತೆ?

11 ಬೈಬಲಲ್ಲಿ ನಿಧಿ ತರ ಇರೋ ಸತ್ಯಗಳನ್ನ, ತತ್ವಗಳನ್ನ ಕಂಡುಹಿಡಿಯೋಕೆ ಏನ್‌ ಮಾಡ್ಬೇಕು? 2 ತಿಮೊತಿ 3:16, 17 ನೋಡಿ. (ಓದಿ.) ‘ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳು’ (1) ಜನ್ರಿಗೆ ಕಲಿಸೋಕೆ (2) ತಪ್ಪನ್ನ ತೋರಿಸೋಕೆ (3) ಎಲ್ಲ ವಿಷ್ಯವನ್ನ ಸರಿಮಾಡೋಕೆ (4) ನಮ್ಮ ಆಲೋಚನೆಗಳನ್ನ ತಿದ್ದೋಕೆ ಸಹಾಯ ಮಾಡುತ್ತೆ. ನಾವು ಬೈಬಲಲ್ಲಿ ಯಾವ ಪುಸ್ತಕ ಓದಿದ್ರೂ ಈ 4 ವಿಷ್ಯಗಳನ್ನ ಮನಸ್ಸಲ್ಲಿ ಇಡ್ಬೇಕು. ಕೆಲವು ಪುಸ್ತಕಗಳನ್ನ ಅಪರೂಪವಾಗಿ ಓದ್ತೀವಿ. ಅದ್ರಿಂದ ಕಲಿಯೋಕೆ ಏನೂ ಇಲ್ಲ ಅಂತ ಅನಿಸ್ಬೋದು. ಆದ್ರೆ ಅಂಥ ಪುಸ್ತಕಗಳನ್ನ ಓದುವಾಗ್ಲೂ ನಾವು ಈ 4 ವಿಷ್ಯಗಳನ್ನ ಗಮನಿಸ್ಬೇಕು. ಒಂದು ಘಟನೆ ಬಗ್ಗೆ ಓದ್ವಾಗ ಮೊದಲನೇದಾಗಿ, ಅದು ಯೆಹೋವನ ಬಗ್ಗೆ, ಆತನ ಉದ್ದೇಶಗಳ ಬಗ್ಗೆ ಏನು ಕಲಿಸುತ್ತೆ ಅಂತ ನೋಡಿ. ಅದ್ರಲ್ಲಿ ಯಾವ ತತ್ವ ಇದೆ ಅಂತಾನೂ ಯೋಚ್ನೆ ಮಾಡಿ. ಎರಡನೇದಾಗಿ, ‘ಇದು ನನ್ನಲ್ಲಿರೋ ತಪ್ಪುಗಳನ್ನ ತೋರಿಸ್ತಾ ಇದ್ಯಾ?’ ಅಂತ ನೋಡಿ. ‘ಈ ವಚನಗಳು ನನ್ನಲ್ಲಿರೋ ಕೆಟ್ಟ ಆಸೆಗಳನ್ನ, ಕೆಟ್ಟ ಸ್ವಭಾವಗಳನ್ನ ತೋರಿಸ್ತಾ ಇದ್ಯಾ? ಅದನ್ನ ಸರಿಮಾಡ್ಕೊಳ್ಳೋಕೆ ಈ ವಚನಗಳು ಸಹಾಯ ಮಾಡ್ತಿದ್ಯಾ?’ ಅಂತ ಯೋಚ್ನೆ ಮಾಡಿ. ಮೂರನೇದಾಗಿ, ‘ಬೇರೆಯವರು ಏನಾದ್ರೂ ತಪ್ಪಾಗಿ ಯೋಚ್ನೆ ಮಾಡ್ತಾ ಇದ್ರೆ ಅದನ್ನ ಸರಿಮಾಡೋಕೆ ಈ ವಚನಗಳು ಹೇಗೆ ಸಹಾಯ ಮಾಡುತ್ತೆ?’ ಅಂತ ನೋಡಿ. ಉದಾಹರಣೆಗೆ ‘ಸೇವೆಯಲ್ಲಿ ಸಿಗೋ ಜನ್ರಿಗೆ ತಪ್ಪಭಿಪ್ರಾಯ ಇದ್ರೆ ಅದನ್ನ ಸರಿಮಾಡೋಕೆ ಈ ವಚನನ ಹೇಗೆ ಬಳಸ್ಲಿ?’ ಅಂತ ಯೋಚ್ನೆ ಮಾಡಿ. ನಾಲ್ಕನೇದಾಗಿ, ನೀವು ಓದ್ತಾ ಇರೋ ವಿಷ್ಯ ದೇವರ ಆಲೋಚನೆ ಪ್ರಕಾರ ನಿಮ್ಮ ಆಲೋಚನೆನ ತಿದ್ತಾ ಇದ್ಯಾ ಅಂತ ಕೇಳ್ಕೊಳಿ. ನಾವು ಬೈಬಲ್‌ ಓದ್ವಾಗ ಈ 4 ವಿಷ್ಯಗಳನ್ನ ಮನಸ್ಸಲ್ಲಿ ಇಟ್ರೆ ಅದ್ರಲ್ಲಿ ಯಾವ ತತ್ವ ಇದೆ ಅಂತ ಅರ್ಥ ಮಾಡ್ಕೊಳ್ತೀವಿ. ಅದ್ರಿಂದ ಇನ್ನೂ ಜಾಸ್ತಿ ಕಲಿಯಕ್ಕಾಗುತ್ತೆ.

ಏನ್‌ ಬದಲಾವಣೆ ಮಾಡ್ಕೊಬೇಕು ಅಂತ ಯೋಚ್ನೆ ಮಾಡಿ

12. ಯೇಸು ಫರಿಸಾಯರಿಗೆ “ನೀವು ಓದಿಲ್ವಾ?” ಅಂತ ಯಾಕೆ ಕೇಳಿದನು?

12 ಒಂದ್ಸಲ ಫರಿಸಾಯರು ಯೇಸು ಹತ್ರ ಬಂದು ಆತನ ಶಿಷ್ಯರು ಸಬ್ಬತ್‌ ನಿಯಮ ಮುರೀತಾ ಇದ್ದಾರೆ ಅಂತ ದೂರು ಹೇಳಿದ್ರು. ಆಗ ಯೇಸು ಪವಿತ್ರ ಗ್ರಂಥದಲ್ಲಿರೋ ಎರಡು ಉದಾಹರಣೆಗಳನ್ನ ಅವ್ರಿಗೆ ನೆನಪಿಸಿದನು. ಆಮೇಲೆ ಹೋಶೇಯ ಪುಸ್ತಕದಲ್ಲಿರೋ ಒಂದು ವಚನ ಕೂಡ ಹೇಳಿದನು. ಇದನ್ನ “ನೀವು ಓದಿಲ್ವಾ?” ಅಂತ ಕೇಳಿದನು. (ಮತ್ತಾ. 12:1-7)e ಯೇಸು ಯಾಕೆ ಈ ತರ ಕೇಳಿದನು? ಯಾಕಂದ್ರೆ ಅವರು ದೇವರ ವಾಕ್ಯ ಓದ್ವಾಗ ತಾವೇನು ಬದಲಾವಣೆ ಮಾಡ್ಕೊಬೇಕು ಅಂತ ಯೋಚ್ನೆ ಮಾಡ್ತಿರ್ಲಿಲ್ಲ. ಅವರು ತಮಗೋಸ್ಕರ ಅಲ್ಲ, ಬೇರೆಯವ್ರಲ್ಲಿ ತಪ್ಪು ಹುಡುಕೋಕೆ ದೇವರ ವಾಕ್ಯ ಓದ್ತಿದ್ರು. ತಾವು ಬೇರೆಯವ್ರಿಗಿಂತ ಒಳ್ಳೆಯವರು ಅಂತ ತೋರಿಸ್ಕೊಳ್ಳೋಕೆ ಓದ್ತಿದ್ರು. ಒಂದುವೇಳೆ ಅವರು ತಮಗೋಸ್ಕರ ಓದಿದ್ರೆ ಅವ್ರಿಗೆ ಆ ವಚನಗಳಲ್ಲಿ ಇದ್ದಿದ್ದು ಅರ್ಥ ಆಗ್ತಿತ್ತು. ಯೆಹೋವ ಸಬ್ಬತ್‌ ದಿನಾನ ಯಾಕೆ ಇಟ್ಟಿದ್ದಾನೆ ಅಂತ ಗೊತ್ತಾಗ್ತಿತ್ತು. ಆಗ ಅವರು ಯೇಸುವಿನ ಶಿಷ್ಯರಿಗೆ ಕರುಣೆ ತೋರಿಸೋಕೆ ಆಗ್ತಿತ್ತು.​—ಮತ್ತಾ. 23:23; ಯೋಹಾ. 5:39, 40.

13. ನಾವು ಯಾವ ಉದ್ದೇಶದಿಂದ ಬೈಬಲ್‌ ಓದ್ಬೇಕು ಮತ್ತು ಯಾಕೆ?

13 ಯೇಸು ಫರಿಸಾಯರಿಗೆ ಹೇಳಿದ ಮಾತುಗಳಿಂದ ನಾವೇನ್‌ ಕಲಿಬೋದು? ನಾವು ಬೈಬಲನ್ನ ಬೇರೆಯವ್ರಲ್ಲಿ ತಪ್ಪು ಹುಡುಕೋಕೆ ಓದ್ಬಾರ್ದು. ‘ನಂಗೆಲ್ಲಾ ಗೊತ್ತು, ನಾನು ಎಲ್ಲಾ ಸರಿಯಾಗೇ ಮಾಡ್ತಾ ಇದ್ದೀನಿ’ ಅಂತನೂ ಅಂದ್ಕೊಬಾರ್ದು. ಬದಲಿಗೆ ‘ಇದ್ರಿಂದ ನನಗೇನು ಪಾಠ, ನಾನೆಲ್ಲಿ ತಿದ್ಕೊಬೇಕು’ ಅಂತ ಯೋಚಿಸ್ಬೇಕು. ಯಾಕಂದ್ರೆ “ದೇವರ ಮಾತನ್ನ ಕೇಳಿಸ್ಕೊಂಡಾಗ ಅದನ್ನ ದೀನತೆಯಿಂದ ಒಪ್ಕೊಳ್ಳಿ. ಮನಸ್ಸಿಗೆ ತಗೊಳ್ಳಿ” ಅಂತ ಬೈಬಲ್‌ ಹೇಳುತ್ತೆ. (ಯಾಕೋ. 1:21) ದೀನತೆ ಇದ್ರೇನೇ ನಾವು ಬದ್ಲಾಗೋಕೆ ಮನಸ್ಸು ಮಾಡ್ತೀವಿ. ಬೈಬಲಲ್ಲಿ ದಯೆ, ಪ್ರೀತಿ, ಕರುಣೆ ಬಗ್ಗೆ ಓದಿದಾಗ ಆ ಗುಣಗಳನ್ನ ಬೆಳೆಸ್ಕೊತೀವಿ.

ಬೈಬಲಲ್ಲಿ ಓದಿದ ವಿಷ್ಯ ನಮ್ಮ ಮನಸ್ಸಿಗೆ ಹೋಗಿದ್ಯಾ ಇಲ್ವಾ ಅಂತ ಹೇಗೆ ಗೊತ್ತಾಗುತ್ತೆ? (ಪ್ಯಾರ 14 ನೋಡಿ)f

14. ಬೈಬಲಲ್ಲಿ ಓದಿದ ವಿಷ್ಯ ನಮ್ಮ ಮನಸ್ಸಿಗೆ ಹೋಗಿದ್ಯಾ ಇಲ್ವಾ ಅಂತ ನಮಗೆ ಹೇಗೆ ಗೊತ್ತಾಗುತ್ತೆ? (ಚಿತ್ರಗಳನ್ನೂ ನೋಡಿ.)

14 ಬೈಬಲಲ್ಲಿ ಓದಿದ ವಿಷ್ಯ ನಮ್ಮ ಮನಸ್ಸಿಗೆ ಹೋಗಿದ್ಯಾ ಇಲ್ವಾ ಅಂತ ನಮಗೆ ಹೇಗೆ ಗೊತ್ತಾಗುತ್ತೆ? ನಾವು ಬೇರೆಯವ್ರ ಜೊತೆ ನಡ್ಕೊಳ್ಳೋ ರೀತಿಯಿಂದ ಗೊತ್ತಾಗುತ್ತೆ. ಫರಿಸಾಯರು ದೇವರ ವಾಕ್ಯನ ಓದಿ ಬದ್ಲಾವಣೆಗಳನ್ನ ಮಾಡ್ಕೊಳ್ಳಿಲ್ಲ. ಅದಕ್ಕೆ ಅವರು “ಯಾವ ತಪ್ಪನ್ನೂ ಮಾಡದೆ ಇರುವವರನ್ನ ಅಪರಾಧಿಗಳು” ಅಂತ ಹೇಳ್ತಿದ್ರು. (ಮತ್ತಾ. 12:7) ಅವ್ರ ತರ ನಾವು ಇರಬಾರ್ದು. ಅದಕ್ಕೆ ಕೆಲವು ಪ್ರಶ್ನೆಗಳನ್ನ ನಾವು ಕೇಳ್ಕೊಬೇಕು. ನಾನು ಬೇರೆಯವ್ರಲ್ಲಿ ಒಳ್ಳೇದನ್ನ ನೋಡ್ತೀನಾ ಅಥವಾ ಅವ್ರಲ್ಲಿರೋ ತಪ್ಪುಗಳನ್ನೇ ಯಾವಾಗ್ಲೂ ಗಮನಿಸ್ತಾ ಇರ್ತೀನಾ? ಬೇರೆಯವರು ತಪ್ಪು ಮಾಡಿದಾಗ ನಾನು ಕ್ಷಮಿಸ್ತೀನಾ? ಅಥವಾ ದ್ವೇಷ ಸಾಧಿಸ್ತೀನಾ? ಈ ತರ ಪ್ರಶ್ನೆ ಕೇಳ್ಕೊಳ್ಳೋದ್ರಿಂದ ನಮ್ಮ ಯೋಚ್ನೆಗಳು, ಭಾವನೆಗಳು ಮತ್ತು ನಡ್ಕೊಳ್ಳೋ ರೀತಿ ಯೆಹೋವನಿಗೆ ಇಷ್ಟ ಆಗ್ತಿದ್ಯಾ ಇಲ್ವಾ ಅಂತ ನಮಗೇ ಗೊತ್ತಾಗುತ್ತೆ.​—1 ತಿಮೊ. 4:12, 15; ಇಬ್ರಿ. 4:12.

ಖುಷಿಯಾಗಿರೋಕೆ ಬೈಬಲ್‌ ಓದ್ತಾ ಇರಿ

15. ಪವಿತ್ರ ಗ್ರಂಥ ಓದೋದು ಅಂದ್ರೆ ಯೇಸುಗೆ ಎಷ್ಟು ಇಷ್ಟ?

15 ಯೇಸುಗೆ ಪವಿತ್ರ ಗ್ರಂಥ ಓದೋದು ಅಂದ್ರೆ ಎಷ್ಟು ಇಷ್ಟ ಅಂತ ಬೈಬಲ್‌ ಮುಂಚೆನೇ ಹೇಳಿತ್ತು. ಕೀರ್ತನೆ 40:8ರಲ್ಲಿ “ನನ್ನ ದೇವರೇ, ನಿನ್ನ ಇಷ್ಟವನ್ನ ಮಾಡೋದೇ ನನ್ನ ಆಸೆ, ನಿನ್ನ ನಿಯಮ ಪುಸ್ತಕ ನನ್ನ ಅಂತರಾಳದಲ್ಲಿದೆ” ಅಂತ ಇದೆ. ಈ ಮಾತು ಸುಳ್ಳಾಗಲಿಲ್ಲ. ಯಾಕಂದ್ರೆ ಯೇಸುಗೆ ನಿಜವಾಗ್ಲೂ ದೇವರ ವಾಕ್ಯದ ಮೇಲೆ ಅಷ್ಟು ಪ್ರೀತಿ ಇತ್ತು. ಯೇಸು ದೇವರ ವಾಕ್ಯನ ಇಷ್ಟಪಟ್ಟು ಓದ್ತಾ ಇದ್ದಿದ್ದಕ್ಕೇ ಜೀವನದಲ್ಲಿ ಖುಷಿಯಾಗಿದ್ದನು. ಯೆಹೋವನ ಸೇವೆನ ಸಂತೋಷವಾಗಿ ಮಾಡ್ತಾ ಇದ್ದನು. ನಾವು ಕೂಡ ಬೈಬಲನ್ನ ಇಷ್ಟಪಟ್ಟು ಓದಿ ಅದ್ರಲ್ಲಿ ಇರೋದನ್ನ ಪಾಲಿಸಿದ್ರೆ ಜೀವನದಲ್ಲಿ ಖುಷಿಯಾಗಿ ಇರ್ತೀವಿ.​—ಕೀರ್ತ. 1:1-3.

16. ಬೈಬಲನ್ನ ಸರಿಯಾಗಿ ಓದೋಕೆ ನಾವೇನ್‌ ಮಾಡ್ಬೇಕು? (“ಯೇಸುವಿನ ಮಾತುಗಳಿಂದ ನೀವೇನ್‌ ಕಲಿತ್ರಿ?” ಅನ್ನೋ ಚೌಕ ನೋಡಿ.)

16 ಯೇಸು ಹೇಳಿದ ಮಾತುಗಳಿಂದ, ಆತನ ಮಾದರಿಯಿಂದ ನಾವೇನ್‌ ಕಲಿತ್ವಿ? ಬೈಬಲನ್ನ ಸರಿಯಾಗಿ ಓದೋದು ಹೇಗೆ ಅಂತ ಕಲಿತ್ವಿ. ಬೈಬಲ್‌ ಓದೋ ಮುಂಚೆ ಪ್ರಾರ್ಥನೆ ಮಾಡ್ಬೇಕು, ನಿಧಾನವಾಗಿ ಓದ್ಬೇಕು, ಪ್ರಶ್ನೆಗಳನ್ನ ಕೇಳ್ಕೊಬೇಕು ಮತ್ತು ಅರ್ಥ ಮಾಡ್ಕೊಂಡಿದ್ದನ್ನ ಚಿಕ್ಕದಾಗಿ ಬರೆದಿಡಬೇಕು. ಹೀಗೆ ಮಾಡಿದ್ರೆ ಓದಿದ ವಿಷ್ಯ ನಮಗೆ ಚೆನ್ನಾಗಿ ಅರ್ಥ ಆಗುತ್ತೆ. ವಚನಗಳನ್ನ ಓದ್ವಾಗ ನಾವು ಬುದ್ಧಿ ಉಪಯೋಗಿಸ್ಬೇಕು. ಓದಿದ ವಿಷ್ಯನ ಇನ್ನೂ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ನಮ್ಮ ಪ್ರಕಾಶನಗಳಲ್ಲಿ ಸಂಶೋಧನೆ ಮಾಡ್ಬೇಕು. ಅಪರೂಪವಾಗಿ ಓದೋ ಪುಸ್ತಕಗಳಲ್ಲೂ ನಿಧಿ ತರ ಇರೋ ಬೈಬಲ್‌ ತತ್ವಗಳನ್ನ ಕಂಡುಹಿಡಿಬೇಕು. ಅದನ್ನ ಎಲ್ಲೆಲ್ಲಾ ಉಪಯೋಗಿಸ್ಬೋದು ಅಂತ ಯೋಚಿಸ್ಬೇಕು. ಯೆಹೋವ ಇದನ್ನ ನನಗೋಸ್ಕರಾನೇ ಬರೆಸಿಟ್ಟಿದ್ದಾನೆ ಅಂದ್ಕೊಂಡು ಓದ್ಬೇಕು. ನಾವು ಇದನ್ನೆಲ್ಲ ಮಾಡಿದ್ರೆ ಬೈಬಲಿಂದ ತುಂಬ ವಿಷ್ಯಗಳನ್ನ ಕಲಿತೀವಿ, ಯೆಹೋವನಿಗೆ ಇನ್ನೂ ಹತ್ರ ಆಗ್ತೀವಿ.​—ಕೀರ್ತ. 119:17, 18; ಯಾಕೋ. 4:8.

ಯೇಸುವಿನ ಮಾತುಗಳಿಂದ ನೀವೇನ್‌ ಕಲಿತ್ರಿ?

  • ನೀವು ಓದಿದ್ದನ್ನ ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನ ಮಾಡಿ. ಅದನ್ನ ಜೀವನದಲ್ಲಿ ಪಾಲಿಸೋದು ಹೇಗೆ ಅಂತ ಬುದ್ಧಿ ಉಪಯೋಗಿಸಿ ತಿಳ್ಕೊಳಿ.​—ಮತ್ತಾ. 24:15; ಲೂಕ 10:25-37.

  • ಬೈಬಲ್‌ ಓದ್ವಾಗ ನಿಧಿ ತರ ಇರೋ ತತ್ವಗಳನ್ನ ಅಥವಾ ಪಾಠಗಳನ್ನ ಹುಡುಕಿ.​—ಮಾರ್ಕ 12:18-27.

  • ಬೈಬಲನ್ನ ಓದಿ ಏನ್‌ ಬದಲಾವಣೆ ಮಾಡ್ಕೊಬೇಕು ಅಂತ ಯೋಚ್ನೆ ಮಾಡಿ. ಬೇರೆಯವ್ರ ಜೊತೆ ದಯೆಯಿಂದ ನಡ್ಕೊಳಿ.​—ಮತ್ತಾ. 12:1-8.

ಬೈಬಲ್‌ ಓದ್ವಾಗ . . .

  • ಓದಿದ್ದನ್ನ ಅರ್ಥ ಮಾಡ್ಕೊಳ್ಳೋಕೆ ಏನು ಮಾಡ್ಬೇಕು?

  • ನಿಧಿ ತರ ಇರೋ ತತ್ವಗಳನ್ನ ಹುಡುಕೋಕೆ ಏನು ಮಾಡ್ಬೇಕು?

  • ನಮ್ಮನ್ನ ಬದ್ಲಾಯಿಸಿಕೊಳ್ಳೋಕೆ ಏನು ಮಾಡ್ಬೇಕು?

ಗೀತೆ 116 ಬೆಳಕು ಹೆಚ್ಚುತ್ತದೆ

a ಇವತ್ತು ಲೋಕದಲ್ಲಿ ತುಂಬ ಜನ ಬೈಬಲ್‌ ಓದ್ತಾರೆ, ಆದ್ರೆ ಅದನ್ನ ಅರ್ಥ ಮಾಡ್ಕೊಳ್ತಿಲ್ಲ. ಯೇಸುವಿನ ಕಾಲದಲ್ಲೂ ಕೆಲವರು ಹೀಗೇ ಇದ್ರು. ದೇವರ ವಾಕ್ಯದಲ್ಲಿ ಇರೋದನ್ನ ಅರ್ಥ ಮಾಡ್ಕೊಳ್ಳದೆ ಸುಮ್ನೆ ಓದ್ಕೊಂಡು ಹೋಗ್ತಿದ್ರು. ಅದಕ್ಕೆ ಯೇಸು ಅವ್ರಿಗೆ ಏನ್‌ ಹೇಳಿದನು ಅಂತ ಗಮನಿಸಿ. ಆತನು ಹೇಳಿದ ಮಾತುಗಳಿಂದ ಬೈಬಲನ್ನ ಹೇಗೆ ಓದ್ಬೇಕು ಅಂತ ಕಲಿತೀವಿ.

b ಯೇಸು ದೀಕ್ಷಾಸ್ನಾನ ತಗೊಂಡಾಗ, ಯೆಹೋವ ಆತನಿಗೆ ಪವಿತ್ರಶಕ್ತಿ ಕೊಟ್ಟನು. ಆಗ ಯೇಸು ಈ ಮುಂಚೆ ಸ್ವರ್ಗದಲ್ಲಿದ್ದಾಗ ಏನ್‌ ಮಾಡ್ತಿದ್ದ, ಹೇಗಿದ್ದ ಅನ್ನೋದೆಲ್ಲಾ ಆತನ ನೆನಪಿಗೆ ಬಂತು.​—ಮತ್ತಾ. 3:16.

c ಮರಿಯ ಪವಿತ್ರ ಗ್ರಂಥಗಳಲ್ಲಿದ್ದ ವಚನಗಳನ್ನ ಚೆನ್ನಾಗಿ ತಿಳ್ಕೊಂಡಿದ್ದಳು. ಮಾತಾಡುವಾಗ್ಲೂ ಅವುಗಳನ್ನ ಬಳಸ್ತಿದ್ದಳು. (ಲೂಕ 1:46-55) ಯೋಸೇಫ ಮತ್ತು ಮರಿಯ ಬಡವರಾಗಿ ಇದ್ದಿದ್ರಿಂದ ಸುರುಳಿಗಳನ್ನ ತಗೊಳಕ್ಕೆ ಆಗದೆ ಇದ್ದಿರಬಹುದು. ಅದಕ್ಕೆ ಅವರು ಸಭಾಮಂದಿರಕ್ಕೆ ಹೋದಾಗೆಲ್ಲಾ ದೇವರ ವಾಕ್ಯನ ಓದ್ವಾಗ ಚೆನ್ನಾಗಿ ಕೇಳಿಸ್ಕೊಳ್ತಿದ್ರು ಮತ್ತು ಅದನ್ನ ಜ್ಞಾಪಕದಲ್ಲಿ ಇಟ್ಕೊಳ್ತಿದ್ರು.

d 2013, ಏಪ್ರಿಲ್‌ 1ರ ಕಾವಲಿನಬುರುಜುವಿನಲ್ಲಿ “ದೇವರ ಸಮೀಪಕ್ಕೆ ಬನ್ನಿರಿ​—ಯೆಹೋವ ದೇವರು ಸತ್ತವರಿಗಲ್ಲ ಜೀವಿತರಿಗೆ ದೇವರಾಗಿದ್ದಾರೆ” ಅನ್ನೋ ಲೇಖನ ನೋಡಿ.

e ಮತ್ತಾಯ 19:4-6 ನೋಡಿ. ಇನ್ನೊಂದು ಸಂದರ್ಭದಲ್ಲೂ ಯೇಸು ಫರಿಸಾಯರಿಗೆ “ನೀವು ಇದನ್ನ ಓದಿಲ್ವಾ?” ಅಂತ ಕೇಳಿದನು. ಯಾಕಂದ್ರೆ ಯೆಹೋವ ಸೃಷ್ಟಿ ಮಾಡಿದ್ರ ಬಗ್ಗೆ ಫರಿಸಾಯರು ಪವಿತ್ರ ಗ್ರಂಥದಲ್ಲಿ ಓದಿದ್ರು. ಆದ್ರೆ ಅದ್ರಲ್ಲಿ ಮದುವೆ ಬಗ್ಗೆ ಯೆಹೋವ ಏನು ಕಲಿಸ್ತಿದ್ದಾನೆ ಅನ್ನೋದನ್ನ ಅರ್ಥ ಮಾಡ್ಕೊಂಡಿರ್ಲಿಲ್ಲ.

f ಚಿತ್ರ ವಿವರಣೆ: ಕೂಟದಲ್ಲಿ ಆಡಿಯೋ ವಿಡಿಯೋ ನೋಡ್ಕೊಳ್ತಿರೋ ಒಬ್ಬ ಸಹೋದರ ಎಡವಟ್ಟು ಮಾಡ್ಬಿಟ್ರು. ಆದ್ರೆ ಅದನ್ನೇ ದೊಡ್ಡದು ಮಾಡದೇ ಕೂಟ ಮುಗಿದ ಮೇಲೆ ಸಹೋದರರು ಅವ್ರ ಹತ್ರ ಹೋಗಿ ‘ನೀವು ನಿಮ್ಮ ಕೆಲಸನ ತುಂಬ ಚೆನ್ನಾಗಿ ಮಾಡಿದ್ರಿ’ ಅಂತ ಹೇಳ್ತಿದ್ದಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ