ಅಧ್ಯಯನ ಲೇಖನ 33
ಗೀತೆ 107 “ಯೆಹೋವನ ಅಪ್ಪಟ ಪ್ರೀತಿ”
ಯೆಹೋವ ನಿಜ್ವಾಗ್ಲೂ ನಿಮ್ಮನ್ನ ತುಂಬ ಪ್ರೀತಿಸ್ತಾನೆ!
“ನಾನು ನಿನಗೆ ಶಾಶ್ವತ ಪ್ರೀತಿ ತೋರಿಸಿ ನಿನ್ನನ್ನ ನನ್ನ ಹತ್ರ ಸೆಳ್ಕೊಂಡಿದ್ದೀನಿ.”—ಯೆರೆ. 31:3.
ಈ ಲೇಖನದಲ್ಲಿ ಏನಿದೆ?
ಯೆಹೋವನು ನಮ್ಮನ್ನ ತುಂಬ ಪ್ರೀತಿಸ್ತಾನೆ ಅಂತ ನಂಬಬೇಕು ಮತ್ತು ಈ ನಂಬಿಕೆನ ನಾವು ಜಾಸ್ತಿ ಮಾಡ್ಕೋಬೇಕು. ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ನಾವು ಯಾಕೆ ನಂಬಬೇಕು ಮತ್ತು ಆ ನಂಬಿಕೆಯನ್ನ ಹೇಗೆ ಜಾಸ್ತಿ ಮಾಡ್ಕೊಬಹುದು ಅಂತ ನೋಡೋಣ.
1. ನೀವು ಯಾಕೆ ನಿಮ್ಮನ್ನ ಯೆಹೋವನಿಗೆ ಸಮರ್ಪಿಸಿಕೊಂಡ್ರಿ? (ಚಿತ್ರ ನೋಡಿ.)
ಸಮರ್ಪಣೆ ಸಮಯದಲ್ಲಿ ನೀವು ಯೆಹೋವನಿಗೆ ಕೊಟ್ಟ ಮಾತು ನೆನಪಿದ್ಯಾ? ನೀವು ಯೆಹೋವನ ಬಗ್ಗೆ ತಿಳ್ಕೊಂಡು, ಆತನನ್ನ ಪ್ರೀತಿಸಿ ಈ ನಿರ್ಧಾರನ ಮಾಡಿದ್ರಿ. ‘ಇನ್ನು ಮುಂದೆ ನಾನು ನಿನ್ನ ಇಷ್ಟವನ್ನೇ ಮಾಡ್ತೀನಿ. ಪೂರ್ಣ ಹೃದಯ, ಪ್ರಾಣ, ಮನಸ್ಸು ಮತ್ತು ಶಕ್ತಿಯಿಂದ ನಿನ್ನನ್ನ ಪ್ರೀತಿಸ್ತೀನಿ’ ಅಂತ ಮಾತು ಕೊಟ್ರಿ. (ಮಾರ್ಕ 12:30) ಅವತ್ತಿಂದ ಇವತ್ತಿನ ತನಕ ನಿಮಗೆ ಆತನ ಮೇಲಿರೋ ಪ್ರೀತಿ ಬೆಟ್ಟದಷ್ಟು ಜಾಸ್ತಿ ಆಗಿದೆ ಅಲ್ವಾ? ಯಾರಾದ್ರೂ ನಿಮ್ಮನ್ನ, ‘ನೀನು ಯೆಹೋವನನ್ನ ಪ್ರೀತಿಸ್ತಿಯಾ’ ಅಂತ ಕೇಳಿದ್ರೆ ನೀವೇನು ಹೇಳ್ತೀರಾ? ‘ನಾನು ಎಲ್ರಿಗಿಂತ, ಎಲ್ಲದಕ್ಕಿಂತ ಜಾಸ್ತಿ ಯೆಹೋವನನ್ನ ಪ್ರೀತಿಸ್ತೀನಿ’ ಅಂತ ಹೇಳ್ತೀರ ಅಲ್ವಾ?
ನೀವು ಯೆಹೋವನಿಗೆ ಸಮರ್ಪಿಸ್ಕೊಂಡು ದೀಕ್ಷಾಸ್ನಾನ ಪಡ್ಕೊಂಡಾಗ ನಿಮಗೆ ಯೆಹೋವನ ಮೇಲೆ ಎಷ್ಟು ಪ್ರೀತಿ ಇತ್ತು ನೆನಪಿದ್ಯಾ? (ಪ್ಯಾರ 1 ನೋಡಿ)
2-3. (ಎ) ನಾವು ಏನನ್ನ ನಂಬಬೇಕು ಅಂತ ಯೆಹೋವ ಇಷ್ಟಪಡ್ತಾನೆ? (ಬಿ) ಈ ಲೇಖನದಲ್ಲಿ ನಾವೇನು ಕಲಿತೀವಿ? (ಯೆರೆಮೀಯ 31:3)
2 ನಾವು ಯೆಹೋವನನ್ನ ಮನಸಾರೆ ಪ್ರೀತಿಸಿದ್ರೂ ಆತನ ಪ್ರೀತಿನ ಪಡೆಯೋ ಯೋಗ್ಯತೆ ನಮಗಿಲ್ಲ ಅಂತ ಕೆಲವೊಮ್ಮೆ ಅನಿಸಬಹುದು. ಅದಕ್ಕೆ ಯಾರಾದ್ರೂ ನಮ್ಮ ಹತ್ರ ಬಂದು, ‘ಯೆಹೋವ ನಿಜವಾಗ್ಲೂ ನಿನ್ನನ್ನ ಪ್ರೀತಿಸ್ತಾನಾ?’ ಅಂತ ಕೇಳಿದ್ರೆ, ಏನು ಹೇಳಬೇಕು ಅಂತಾನೇ ಗೊತ್ತಾಗಲ್ಲ. ಚಿಕ್ಕ ವಯಸ್ಸಲ್ಲಿ ಪ್ರೀತಿ ಸಿಗದೇ ಬೆಳೆದ ಒಬ್ಬ ಸಹೋದರಿ ಹೀಗೆ ಹೇಳ್ತಾರೆ, ‘ನಾನು ಯೆಹೋವನನ್ನ ತುಂಬ ಪ್ರೀತಿಸ್ತೀನಿ. ಅದ್ರಲ್ಲಿ ಡೌಟೇ ಇಲ್ಲ. ಆದ್ರೆ ಯೆಹೋವ ನನ್ನನ್ನ ಪ್ರೀತಿಸ್ತಾನಾ ಅಂತ ನನಗೆ ಆಗಾಗ ಡೌಟ್ ಬರುತ್ತೆ.’ ಆತನಿಗೆ ನಿಜವಾಗ್ಲೂ ನಿಮ್ಮ ಬಗ್ಗೆ ಹೇಗೆ ಅನಿಸುತ್ತೆ ಗೊತ್ತಾ?
3 ಯೆಹೋವ ನಿಮ್ಮನ್ನ ತುಂಬ, ತುಂಬ ಪ್ರೀತಿಸ್ತಾನೆ! ಅದನ್ನ ನೀವು ನಂಬಬೇಕು ಅಂತ ಆತನು ಇಷ್ಟಪಡ್ತಾನೆ. (ಯೆರೆಮೀಯ 31:3 ಓದಿ.) ನಿಜ ಏನಂದ್ರೆ, ಆತನೇ ನಿಮ್ಮನ್ನ ತನ್ನ ಹತ್ರ ಸೆಳ್ಕೊಂಡಿದ್ದಾನೆ. ನೀವು ಸಮರ್ಪಿಸಿಕೊಂಡು ದೀಕ್ಷಾಸ್ನಾನ ತಗೊಂಡಾಗ ಆತನು ನಿಮಗೆ ‘ಶಾಶ್ವತ ಪ್ರೀತಿನ’ ಸ್ಪೆಷಲ್ ಗಿಫ್ಟ್ ಆಗಿ ಕೊಟ್ಟನು. ಇದ್ರಿಂದ ಆತನು ನಿಮ್ಮನ್ನ ತುಂಬ ಪ್ರೀತಿಸ್ತಾನೆ, ನಿಮ್ಮ ಕೈಯನ್ನ ಯಾವತ್ತೂ ಬಿಡಲ್ಲ ಅಂತ ಗೊತ್ತಾಗುತ್ತೆ. ಆತನು ತನ್ನೆಲ್ಲಾ ಸೇವಕರನ್ನ ‘ವಿಶೇಷ ಸೊತ್ತಾಗಿ’ ನೋಡ್ತಾನೆ. ಅಂದ್ರೆ ನಿಮ್ಮನ್ನೂ ಯೆಹೋವ ತುಂಬ ಪ್ರೀತಿಸ್ತಾನೆ, ನೀವೂ ಆತನಿಗೆ ವಿಶೇಷ ಸೊತ್ತು! (ಮಲಾ. 3:17) ಪೌಲನಿಗೆ ತನ್ನನ್ನ ಯೆಹೋವ ತುಂಬ ಪ್ರೀತಿಸ್ತಾನೆ ಅಂತ ನಂಬಿಕೆ ಇತ್ತು. ಅದೇ ತರ ನಾವೂ ನಂಬಬೇಕು ಅಂತ ಯೆಹೋವ ಇಷ್ಟ ಪಡ್ತಾನೆ. ಅದಕ್ಕೆ ಪೌಲ, “ಸಾವಾಗ್ಲಿ ಬದುಕಾಗ್ಲಿ ದೇವದೂತರಾಗ್ಲಿ ಸರ್ಕಾರಗಳಾಗ್ಲಿ ಈಗಿರೋ ವಿಷ್ಯಗಳಾಗ್ಲಿ ಮುಂದೆ ಬರೋ ವಿಷ್ಯಗಳಾಗ್ಲಿ ಶಕ್ತಿಗಳಾಗ್ಲಿ ಎತ್ತರವಾಗ್ಲಿ ಆಳವಾಗ್ಲಿ ಬೇರೆ ಯಾವ ಸೃಷ್ಟಿನೇ ಆಗ್ಲಿ ನಮ್ಮ ಪ್ರಭು ಕ್ರಿಸ್ತ ಯೇಸುವಿನ ಮೂಲಕ ದೇವರು ತೋರಿಸೋ ಪ್ರೀತಿಯಿಂದ ನಮ್ಮನ್ನ ದೂರ ಮಾಡಕ್ಕಾಗಲ್ಲ” ಅಂತ ಹೇಳಿದ. (ರೋಮ. 8:38, 39) ಈ ಲೇಖನದಲ್ಲಿ, ಯೆಹೋವ ನಮ್ಮನ್ನ ತುಂಬ ಪ್ರೀತಿಸ್ತಾನೆ ಅಂತ ನಾವು ಯಾಕೆ ನಂಬಬೇಕು ಮತ್ತು ಆ ನಂಬಿಕೆನ ಜಾಸ್ತಿ ಮಾಡ್ಕೊಳೋಕೆ ನಮಗೇನು ಸಹಾಯ ಮಾಡುತ್ತೆ ಅಂತ ನೋಡೋಣ.
ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ನಂಬೋದು ಮುಖ್ಯ!
4. (ಎ) ಸೈತಾನನ ಒಂದು ಕುತಂತ್ರ ಯಾವುದು? (ಬಿ) ಅದನ್ನ ಎದುರಿಸಿ ನಿಲ್ಲೋಕೆ ನಾವೇನು ಮಾಡಬೇಕು?
4 ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ನಂಬಿದ್ರೆ, ಸೈತಾನನ ‘ಕುತಂತ್ರಗಳನ್ನ ನಾವು ಎದುರಿಸಿ ದೃಢವಾಗಿ ನಿಲ್ಲೋಕೆ’ ಆಗುತ್ತೆ. (ಎಫೆ. 6:11) ನಾವು ಯೆಹೋವನ ಸೇವೆನ ನಿಲ್ಲಿಸಬೇಕು ಅನ್ನೋದು ಸೈತಾನನ ಆಸೆ. ಅದಕ್ಕೆ ಅವನು ಏನು ಬೇಕಾದ್ರೂ ಮಾಡೋಕೆ ರೆಡಿ ಇರ್ತಾನೆ. ಅವನು ಬಳಸೋ ಒಂದು ಕುತಂತ್ರ, ‘ಯೆಹೋವನಿಗೆ ನಿಮ್ಮ ಮೇಲೆ ಪ್ರೀತಿ ಇಲ್ಲ’ ಅಂತ ಆತನು ನಮ್ಮನ್ನ ನಂಬಿಸೋದೇ. ಆದ್ರೆ ಇದು ಶುದ್ಧ ಸುಳ್ಳು! ಬೈಬಲ್ ಸೈತಾನನನ್ನ ‘ಸಿಂಹ’ ಅಂತ ಹೇಳುತ್ತೆ. ಸಾಮಾನ್ಯವಾಗಿ ಸಿಂಹಗಳು ತುಂಬ ಬಲಹೀನವಾಗಿರೋ ಮರಿಗಳ ಮೇಲೆ ದಾಳಿ ಮಾಡುತ್ತೆ. ಅದೇ ತರ ನಾವು ಯಾವಾಗ ಬಲಹೀನವಾಗಿ ಇರ್ತೀವಿ ಅಂತ ತಿಳ್ಕೊಳೋಕೆ ಸೈತಾನ ಕಾಯ್ತಾ ಇರ್ತಾನೆ. ಕೆಲವೊಮ್ಮೆ ನಾವು ಹಿಂದೆ ಮಾಡಿದ ತಪ್ಪುಗಳನ್ನ ನೆನಸಿ ಕುಗ್ಗಿ ಹೋಗ್ತೀವಿ, ಈಗಿರೋ ಸಮಸ್ಯೆಗಳ ಬಗ್ಗೆ ಚಿಂತಿಸ್ತಾ ಬೇಜಾರಾಗ್ತೀವಿ ಮತ್ತು ಮುಂದೆ ಜೀವನ ಹೇಗಿರುತ್ತೋ ಅಂತ ಭಯಪಡ್ತೀವಿ. ನಮ್ಮ ಇಂಥ ಪರಿಸ್ಥಿತಿನ ನೋಡಿ ‘ಇದೇ ಸರಿಯಾದ ಸಮಯ’ ಅಂದ್ಕೊಂಡು ನಮ್ಮ ಮೇಲೆ ಅವನು ದಾಳಿ ಮಾಡ್ತಾನೆ. (ಜ್ಞಾನೋ. 24:10) ಆಗ ನಾವು ಯೆಹೋವನ ಸೇವೆನ ಬಿಟ್ಟು ಬಿಡ್ತೀವಿ ಅಂತ ಅವನು ಅಂದ್ಕೊಳ್ತಾನೆ. ನಾವು ಅವನನ್ನ ಮತ್ತು ಅವನ ಕುತಂತ್ರಗಳನ್ನ ಎದುರಿಸಬೇಕು. ಅದನ್ನ ಮಾಡಬೇಕಂದ್ರೆ ‘ಯೆಹೋವನು ನಮ್ಮನ್ನ ತುಂಬ ಪ್ರೀತಿಸ್ತಾನೆ’ ಅಂತ ನಾವು ಮೊದ್ಲು ನಂಬಬೇಕು!—1 ಪೇತ್ರ 5:8, 9; ಯಾಕೋ. 4:7.
5. ಯೆಹೋವ ನಿಮ್ಮನ್ನ ಪ್ರೀತಿಸ್ತಾನೆ ಅಂತ ತಿಳ್ಕೊಳ್ಳೋದು ಯಾಕೆ ಮುಖ್ಯ?
5 ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ನಂಬಿದ್ರೆ ಆತನಿಗೆ ಹತ್ರ ಆಗ್ತೀವಿ. ಯಾಕೆ ಈ ರೀತಿ ಹೇಳಬಹುದು? ಯಾಕಂದ್ರೆ ನಾವು ಬೇರೆಯವ್ರನ್ನ ಪ್ರೀತಿಸೋ ತರ ಮತ್ತು ಬೇರೆಯವ್ರ ಪ್ರೀತಿನ ಪಡ್ಕೊಳ್ಳೋ ತರ ಯೆಹೋವ ನಮ್ಮನ್ನ ಸೃಷ್ಟಿ ಮಾಡಿದ್ದಾನೆ. ಯಾರಾದ್ರೂ ನಮಗೆ ಪ್ರೀತಿ ತೋರಿಸಿದ್ರೆ, ನಾವೂ ಅವ್ರಿಗೆ ಪ್ರೀತಿ ತೋರಿಸಬೇಕು ಅಂತ ನಮಗೆ ಅನಿಸುತ್ತೆ. ಆದ್ರಿಂದ ಯೆಹೋವ ನಮ್ಮನ್ನ ಎಷ್ಟು ಪ್ರೀತಿಸ್ತಾನೆ, ಎಷ್ಟು ಕಾಳಜಿ ಮಾಡ್ತಾನೆ ಅಂತ ತಿಳ್ಕೊಂಡ್ರೆ ನಾವೂ ಆತನನ್ನ ಇನ್ನೂ ಜಾಸ್ತಿ ಪ್ರೀತಿಸೋಕಾಗುತ್ತೆ. (1 ಯೋಹಾ. 4:19) ಹೀಗೆ ನಾವು ಯೆಹೋವನನ್ನ ಜಾಸ್ತಿ ಪ್ರೀತಿಸಿದ್ರೆ, ಆತನೂ ನಮ್ಮನ್ನ ಜಾಸ್ತಿ ಪ್ರೀತಿಸ್ತಾನೆ. ಅದಕ್ಕೇ ಬೈಬಲ್, “ದೇವರಿಗೆ ಹತ್ರ ಆಗಿ, ಆಗ ದೇವರು ನಿಮಗೆ ಹತ್ರ ಆಗ್ತಾನೆ” ಅಂತ ಹೇಳುತ್ತೆ. (ಯಾಕೋ. 4:8) ಹಾಗಾದ್ರೆ ಯೆಹೋವನು ನಮ್ಮನ್ನ ನಿಜವಾಗ್ಲೂ ಪ್ರೀತಿಸ್ತಾನೆ ಅಂತ ಅರ್ಥ ಮಾಡ್ಕೊಳ್ಳೋಕೆ ಏನು ಮಾಡಬೇಕು?
ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ನಂಬೋಕೆ ಯಾವುದು ಸಹಾಯ ಮಾಡುತ್ತೆ?
6. ಯೆಹೋವ ನಿಮ್ಮನ್ನ ಪ್ರೀತಿಸ್ತಾನಾ ಇಲ್ವಾ ಅನ್ನೋ ಅನುಮಾನ ನಿಮಗಿದ್ರೆ ಏನು ಮಾಡಬೇಕು?
6 ಪ್ರಾರ್ಥನೆ ಮಾಡ್ತಾ ಇರಿ. (ಲೂಕ 18:1; ರೋಮ. 12:12) ಯೆಹೋವನಿಗೆ ನಿಮ್ಮ ಬಗ್ಗೆ ಹೇಗೆ ಅನಿಸುತ್ತೆ ಅಂತ ತಿಳ್ಕೊಳ್ಳೋಕೆ ಪ್ರತಿದಿನ ಪದೇಪದೇ ಪ್ರಾರ್ಥನೆ ಮಾಡಿ. ಕೆಲವೊಮ್ಮೆ ನಿಮ್ಮ ಹೃದಯ, ‘ಯೆಹೋವ ನನ್ನನ್ನ ಪ್ರೀತಿಸಲ್ಲ’ ಅಂತ ಹೇಳುತ್ತೆ. ಆದ್ರೆ ದೇವರು ನಿಮ್ಮ ಹೃದಯಕ್ಕಿಂತ ದೊಡ್ಡವನು ಅಂತ ನೆನಪಿಡಿ. ನಿಮಗಿಂತ ಜಾಸ್ತಿ, ನಿಮ್ಮ ಬಗ್ಗೆ ಯೆಹೋವ ತಿಳ್ಕೊಂಡಿದ್ದಾನೆ. (1 ಯೋಹಾ. 3:19, 20) ನಿಮ್ಮ ಬಗ್ಗೆ ನಿಮಗೇ ಗೊತ್ತಿಲ್ಲದಿರೋ ನಿಮ್ಮಲ್ಲಿರೋ ಎಷ್ಟೋ ಒಳ್ಳೆ ಗುಣಗಳನ್ನ ಯೆಹೋವ ನೋಡಿದ್ದಾನೆ. (1 ಸಮು. 16:7; 2 ಪೂರ್ವ. 6:30) ಹಾಗಾಗಿ ನಿಮಗೆ ಏನೆಲ್ಲಾ ಅನಿಸುತ್ತೋ ಅದನ್ನೆಲ್ಲಾ ಯೆಹೋವನ ಹತ್ರ ಹೇಳ್ಕೊಳ್ಳಿ. ‘ನೀನು ನನ್ನನ್ನ ಪ್ರೀತಿಸ್ತೀಯ ಅಂತ ನಂಬೋಕೆ ಸಹಾಯ ಮಾಡು’ ಅಂತ ಕೇಳ್ಕೊಳ್ಳಿ. (ಕೀರ್ತ. 62:8) ನೀವು ಮಾಡಿದ ಪ್ರಾರ್ಥನೆ ಪ್ರಕಾರ ನಡ್ಕೊಳ್ಳಿ.
7-8. ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ಕೀರ್ತನೆ ವಚನಗಳು ಹೇಗೆ ತೋರಿಸುತ್ತೆ?
7 ಬೈಬಲ್ ಹೇಳೋದನ್ನ ನಂಬಿ. ಬೈಬಲಲ್ಲಿ ಯೆಹೋವ ದೇವರು ತಾನು ಎಂಥವನು ಅಂತ ಪವಿತ್ರಶಕ್ತಿಯಿಂದ ಬರೆಸಿದ್ದಾನೆ. ಕೀರ್ತನೆಗಾರನಾದ ದಾವೀದ, “ಹೃದಯ ಒಡೆದು ಹೋಗಿರೋರಿಗೆ ಯೆಹೋವ ಹತ್ರಾನೇ ಇರ್ತಾನೆ, ಮನಸ್ಸು ಚೂರುಚೂರಾಗಿ ಹೋಗಿರೋರನ್ನ ಆತನು ಕಾದು ಕಾಪಾಡ್ತಾನೆ” ಅಂತ ಹೇಳಿದ್ದಾನೆ. (ಕೀರ್ತ. 34:18, ಪಾದಟಿಪ್ಪಣಿ) ಹೃದಯ ಒಡೆದು ಹೋಗೋ ಪರಿಸ್ಥಿತಿ ಬಂದಾಗ ನಾವು ಒಂಟಿ ಆಗಿದ್ದೀವಿ ಅಂತ ನಮಗೆ ಅನಿಸಬಹುದು. ಆದ್ರೆ ಆಗ ಯೆಹೋವ ‘ನಿಮ್ಮ ಪಕ್ಕದಲ್ಲೇ ಇರ್ತೀನಿ’ ಅಂತ ಮಾತು ಕೊಟ್ಟಿದ್ದಾನೆ. ಯಾಕಂದ್ರೆ ನಿಮಗೆ ಆಗ ಬೇರೆಯವ್ರ ಸಹಾಯದ ಅಗತ್ಯ ಇದೆ ಅಂತ ಯೆಹೋವನಿಗೆ ಗೊತ್ತು. ಇನ್ನೊಂದು ವಚನದಲ್ಲಿ ದಾವೀದ, “ನಿನ್ನ ಚರ್ಮದ ಚೀಲದಲ್ಲಿ ನನ್ನ ಕಣ್ಣೀರನ್ನ ಕೂಡಿಸು” ಅಂತ ಹೇಳಿದ್ದಾನೆ. (ಕೀರ್ತ. 56:8) ಅಂದ್ರೆ ನಾವು ಕಷ್ಟಪಡ್ತಿರುವಾಗ ಯೆಹೋವ ಅದನ್ನ ನೋಡ್ತಾನೆ. ನಮಗೆ ಆಗ್ತಿರೋ ದುಃಖನ, ನೋವನ್ನ ಆತನು ಅರ್ಥಮಾಡ್ಕೊಳ್ತಾನೆ. ಒಂದರ್ಥದಲ್ಲಿ ಯೆಹೋವ ನಮ್ಮ ಕಣ್ಣೀರನ್ನ ಬಾಟಲಲ್ಲಿ ಎತ್ತಿಟ್ಕೊಳ್ತಿದ್ದಾನೆ. ‘ನನ್ನ ಚಲನವಲನಗಳು ನಿನಗೆ ಚೆನ್ನಾಗಿ ಗೊತ್ತು’ ಅಂತ ಕೀರ್ತನೆ 139:3 ಹೇಳುತ್ತೆ. ಅಂದ್ರೆ ನಾವೇನೆಲ್ಲ ಮಾಡ್ತಿದ್ದೀವಿ ಅಂತ ಯೆಹೋವ ದೇವ್ರಿಗೆ ಗೊತ್ತಿದೆ. ಆದ್ರೂ ನಾವು ಮಾಡೋ ಒಳ್ಳೇದನ್ನ ಮಾತ್ರ ಆತನು ಗಮನಿಸ್ತಾನೆ. (ಇಬ್ರಿ. 6:10) ಯಾಕೆ? ಯಾಕಂದ್ರೆ ಆತನನ್ನ ಖುಷಿ ಪಡಿಸೋಕೆ ನಾವು ಹಾಕೋ ಪ್ರಯತ್ನವನ್ನ ಯೆಹೋವ ಅಮೂಲ್ಯವಾಗಿ ನೋಡ್ತಾನೆ.a
8 ಈ ವಚನಗಳು ನಮಗೆ ಎಷ್ಟು ಸಮಾಧಾನ ಕೊಡ್ತಲ್ವ? ಈ ವಚನಗಳಿಂದ ಯೆಹೋವ ‘ನಾನು ನಿಮ್ಮನ್ನ ತುಂಬ ಪ್ರೀತಿಸ್ತೀನಿ. ನಿಮ್ಮ ಬಗ್ಗೆ ತುಂಬ ಯೋಚಿಸ್ತೀನಿ’ ಅಂತ ಹೇಳ್ತಿದ್ದಾನೆ. ನಾವೀಗಾಗ್ಲೇ ನೋಡಿದಂತೆ, ‘ಯೆಹೋವ ನಮ್ಮನ್ನ ಪ್ರೀತಿಸಲ್ಲ’ ಅಂತ ನಮ್ಮನ್ನ ನಂಬಿಸೋಕೆ ಸೈತಾನ ಸುಳ್ಳು ಹೇಳಿದ್ದಾನೆ. ಒಂದುವೇಳೆ ನಿಮಗೆ ಯಾವತ್ತಾದ್ರೂ ಈ ಅನುಮಾನ ಬಂದ್ರೆ ಏನು ಮಾಡ್ತೀರಾ? ಒಂದುಸಾರಿ ಹೀಗೆ ಯೋಚನೆ ಮಾಡಿ, ‘ನಾನು ಯಾರ ಮಾತನ್ನ ನಂಬ್ತೀನಿ? ಸುಳ್ಳಿನ ತಂದೆಯಾಗಿರೋ ಸೈತಾನನ ಮಾತನ್ನ ಅಥವಾ ಸತ್ಯ ದೇವರಾದ ಯೆಹೋವನ ಮಾತನ್ನ?’—ಯೋಹಾ. 8:44; ಕೀರ್ತ. 31:5.
9. ತನ್ನನ್ನ ಪ್ರೀತಿಸೋರಿಗೆ ಯೆಹೋವ ಯಾವ ಮಾತು ಕೊಟ್ಟಿದ್ದಾನೆ? (ವಿಮೋಚನಕಾಂಡ 20:5, 6)
9 ತನ್ನನ್ನ ಪ್ರೀತಿಸೋರ ಬಗ್ಗೆ ಯೆಹೋವನಿಗೆ ಹೇಗೆ ಅನಿಸುತ್ತೆ ಅಂತ ಯೋಚಿಸಿ. ಒಂದುಸಲ ಯೆಹೋವ ಮೋಶೆ ಮತ್ತು ಇಸ್ರಾಯೇಲ್ಯರಿಗೆ ‘ಯಾರು ನನ್ನನ್ನ ಪ್ರೀತಿಸ್ತಾರೋ ಅವ್ರಿಗೆ ನಾನೂ ಶಾಶ್ವತ ಪ್ರೀತಿ ತೋರಿಸ್ತೀನಿ’ ಅಂತ ಹೇಳಿದನು. (ವಿಮೋಚನಕಾಂಡ 20:5, 6 ಓದಿ.) ನಮ್ಮ ಹತ್ರ ಪ್ರೀತಿ ತಗೊಂಡು, ‘ನಾನು ನಿಂಗೆ ಪ್ರೀತಿ ತೋರಿಸಲ್ಲ ಹೋಗು’ ಅಂತ ಯೆಹೋವ ಯಾವತ್ತೂ ಹೇಳಲ್ಲ. (ನೆಹೆ. 1:5) ಒಂದುವೇಳೆ ನಿಮಗೆ ಯೆಹೋವ ನನ್ನ ಪ್ರೀತಿಸ್ತಾನಾ ಅನ್ನೋ ಅನುಮಾನ ಬಂದ್ರೆ, ‘ನಾನು ಯೆಹೋವನನ್ನ ಪ್ರೀತಿಸ್ತೀನಾ?’ ಅಂತ ನಿಮ್ಮನ್ನೇ ಕೇಳ್ಕೊಳ್ಳಿ. ಆಮೇಲೆ, ‘ಯೆಹೋವನನ್ನ ಪ್ರೀತಿಸೋಕೆ, ಖುಷಿಪಡಿಸೋಕೆ ನಾನೇ ಇಷ್ಟೆಲ್ಲಾ ಪ್ರಯತ್ನ ಹಾಕ್ತಿದ್ದೀನಿ ಅಂದ್ಮೇಲೆ, ನನ್ನನ್ನ ಪ್ರೀತಿಸೋಕೆ ಯೆಹೋವ ಇನ್ನೆಷ್ಟು ಪ್ರಯತ್ನ ಹಾಕ್ತಿರಬಹುದಲ್ವಾ?’ ಅಂತ ಯೋಚಿಸಿ. ‘ಯೆಹೋವನ ಮೇಲೆ ನಿಮಗೆ ಪ್ರೀತಿ ಇದ್ಯಾ’ ಅನ್ನೋ ಅನುಮಾನ ನಿಮಗಿಲ್ಲ ತಾನೇ, ನೀವು ಪ್ರೀತಿಸಿದ್ರೆ ಯೆಹೋವನೂ ‘ಪ್ರೀತಿಸ್ತೀನಿ’ ಅಂತ ಮಾತುಕೊಟ್ಟಿದ್ದಾನೆ ಅಂತ ನೆನಪಿಡಿ. (ದಾನಿ. 9:4; 1 ಕೊರಿಂ. 8:3) ಆದ್ರಿಂದ ಅನುಮಾನ ಬಿಡಿ. ಯೆಹೋವ ನಿಮ್ಮನ್ನ ಯಾವಾಗಲೂ ಪ್ರೀತಿಸ್ತಾನೆ, ಯಾವತ್ತೂ ನಿಮ್ಮ ಕೈ ಬಿಡಲ್ಲ ಅಂತ ದಯವಿಟ್ಟು ನಂಬಿಕೆ ಇಡಿ!
10-11. ಬಿಡುಗಡೆ ಬೆಲೆ ಬಗ್ಗೆ ನಾವು ಏನನ್ನ ನೆನಪಿಟ್ಕೊಬೇಕು ಅಂತ ಯೆಹೋವ ಇಷ್ಟಪಡ್ತಾನೆ? (ಗಲಾತ್ಯ 2:20)
10 ಬಿಡುಗಡೆ ಬೆಲೆ ಬಗ್ಗೆ ಯೋಚನೆ ಮಾಡಿ. ಯೇಸುವಿನ ಬಿಡುಗಡೆ ಬೆಲೆ ಯೆಹೋವನು ಮಾನವರಿಗೆಲ್ಲ ಕೊಟ್ಟ ಅದ್ಭುತ ಗಿಫ್ಟ್! (ಯೋಹಾ. 3:16) ಆದ್ರೆ ಅದು ಯೆಹೋವನು ನಿಮಗೋಸ್ಕರ ಕೊಟ್ಟ ವೈಯಕ್ತಿಕ ಗಿಫ್ಟ್ ಅಂತ ನಿಮಗೆ ಅನ್ಸುತ್ತಾ? ಅಪೊಸ್ತಲ ಪೌಲನಿಗೆ ಹಾಗೆ ಅನಿಸ್ತು. ಅವನು ಕ್ರೈಸ್ತನಾಗೋ ಮುಂಚೆ ದೊಡ್ಡದೊಡ್ಡ ತಪ್ಪುಗಳನ್ನ ಮಾಡಿದ್ದ. ಕ್ರೈಸ್ತನಾದ ಮೇಲೂ ತನ್ನ ಪಾಪದ ವಿರುದ್ಧ ಹೋರಾಡ್ತಾನೇ ಇದ್ದ. (ರೋಮ. 7:24, 25; 1 ತಿಮೊ. 1:12-14) ಆದ್ರೆ ಬಿಡುಗಡೆ ಬೆಲೆ ಯೆಹೋವನು ತನಗೋಸ್ಕರ ವೈಯಕ್ತಿಕವಾಗಿ ಕೊಟ್ಟ ಗಿಫ್ಟ್ ಅಂತ ನೆನಸಿದ. (ಗಲಾತ್ಯ 2:20 ಓದಿ.) ಅದಕ್ಕೇ ‘ಯೇಸು ನನಗೋಸ್ಕರ ತನ್ನ ಜೀವವನ್ನೇ ಕೊಟ್ಟ’ ಅಂತ ಪೌಲ ಬರೆದ. ಈ ಮಾತುಗಳನ್ನ ಬರೆಯೋಕೆ ಯೆಹೋವನೇ ಪೌಲನಿಗೆ ಪವಿತ್ರ ಶಕ್ತಿ ಕೊಟ್ಟ ಅಂತ ನಾವು ಮರಿಬಾರದು. (ರೋಮ. 15:4) ಬೈಬಲಿನಲ್ಲಿರೋ ಪ್ರತಿಯೊಂದು ವಿಷ್ಯನ ನಮ್ಮ ಪ್ರಯೋಜನಕ್ಕೆ ಅಂತಾನೇ ಯೆಹೋವನು ಬರೆಸಿದ್ದಾನೆ. ಪೌಲನ ತರ ನೀವೂ ಯೇಸುವಿನ ಬಿಡುಗಡೆ ಬೆಲೆನ ಯೆಹೋವ ನಮಗೆ ವೈಯಕ್ತಿಕವಾಗಿ ಕೊಟ್ಟ ಗಿಫ್ಟ್ ತರ ನೋಡಬೇಕು ಅಂತ ಯೆಹೋವ ಇಷ್ಟಪಡ್ತಾನೆ. ನೀವು ಯಾವಾಗ ಆ ತರ ನೋಡ್ತೀರೋ ಆಗ ಯೆಹೋವ ನಿಮ್ಮನ್ನ ತುಂಬ ಪ್ರೀತಿಸ್ತಾನೆ ಅನ್ನೋ ನಂಬಿಕೆ ಇನ್ನಷ್ಟು ಜಾಸ್ತಿ ಆಗುತ್ತೆ.
11 ಯೇಸು ಭೂಮಿಗೆ ಬಂದು ತನ್ನ ಪ್ರಾಣವನ್ನ ತ್ಯಾಗ ಮಾಡಿ ನಮಗೋಸ್ಕರ ಬಿಡುಗಡೆ ಬೆಲೆ ಕೊಟ್ಟಿದ್ದಾನೆ. ಅದಕ್ಕೇ ನಾವು ಯೆಹೋವನಿಗೆ ಥ್ಯಾಂಕ್ಸ್ ಹೇಳಬೇಕು. ಯೇಸು ಭೂಮಿಗೆ ಬರೋಕೆ ಇನ್ನೊಂದು ಕಾರಣನೂ ಇತ್ತು. ಬೇರೆಯವ್ರಿಗೆ ಯೆಹೋವನ ಬಗ್ಗೆ ಸತ್ಯ ಕಲಿಸೋದೇ ಆ ಕಾರಣ. (ಯೋಹಾ. 18:37) ಹೀಗೆ ಯೇಸು ಕಲಿಸಿದ ಸತ್ಯದಲ್ಲಿ ‘ಯೆಹೋವ ನಿಮ್ಮನ್ನ ತುಂಬ ಪ್ರೀತಿಸ್ತಾನೆ’ ಅನ್ನೋದು ಕೂಡ ಒಂದು!
‘ಯೆಹೋವ ನಿಮ್ಮನ್ನ ಪ್ರೀತಿಸ್ತಾನೆ’ ಅಂತ ಯೇಸುನೇ ಹೇಳಿದ್ದಾನೆ!
12. ಯೇಸು ಯೆಹೋವನ ಬಗ್ಗೆ ಹೇಳಿದ್ದನ್ನೆಲ್ಲ ನಾವು ಯಾಕೆ ನಂಬಬಹುದು?
12 ಯೇಸು ಭೂಮಿಗೆ ಬಂದಾಗ ಯೆಹೋವನಲ್ಲಿ ಎಂಥ ಗುಣಗಳಿವೆ ಅಂತ ಜನ್ರಿಗೆ ಕಲಿಸಿದನು. (ಲೂಕ 10:22) ಯೇಸು ಯೆಹೋವನ ಬಗ್ಗೆ ಹೇಳಿದ್ದನ್ನೆಲ್ಲ ನಾವು ನಂಬಬಹುದು. ಯಾಕಂದ್ರೆ ಯೇಸು ಭೂಮಿಗೆ ಬರುವ ಮುಂಚೆ ಯೆಹೋವನ ಜೊತೆ ಸ್ವರ್ಗದಲ್ಲಿ ಕೋಟ್ಯಾಂತರ ವರ್ಷ ಇದ್ದನು, ಆತನನ್ನ ನೇರವಾಗಿ ನೋಡಿದ್ದನು ಮತ್ತು ಮಾತಾಡಿದ್ದನು. (ಕೊಲೊ. 1:15) ಹಾಗಾಗಿ ಯೆಹೋವ ದೇವರು ತನ್ನ ನಂಬಿಗಸ್ತ ದೇವದೂತ್ರನ್ನ, ಭೂಮಿಯಲ್ಲಿರೋ ಸೇವಕರನ್ನ ಎಷ್ಟು ಪ್ರೀತಿಸ್ತಾನೆ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ಯೇಸು ಇನ್ನೂ ಯಾವೆಲ್ಲಾ ರೀತಿಯಲ್ಲಿ ಅರ್ಥ ಮಾಡಿಸಿದ್ದಾನೆ?
13. ಯೆಹೋವನನ್ನ ನಾವು ಹೇಗೆ ನೋಡಬೇಕು ಅಂತ ಯೇಸು ಇಷ್ಟಪಡ್ತಾನೆ?
13 ಯೇಸು, ಯೆಹೋವನನ್ನ ಹೇಗೆ ನೋಡಿದ್ನೋ, ಅದೇ ತರ ನಾವು ನೋಡಬೇಕು ಅಂತ ಇಷ್ಟಪಡ್ತಾನೆ. ಸುವಾರ್ತಾ ಪುಸ್ತಕಗಳಲ್ಲಿ ಯೇಸು ಯೆಹೋವನನ್ನ 160ಕ್ಕಿಂತ ಹೆಚ್ಚು ಸಾರಿ ‘ತಂದೆ’ ಅಂತ ಕರೆದನು. ಯೇಸು ಶಿಷ್ಯರ ಜೊತೆ ಯೆಹೋವನ ಬಗ್ಗೆ ಮಾತಾಡುವಾಗ, “ನಿಮ್ಮ ತಂದೆ,” ಅಥವಾ “ಸ್ವರ್ಗದಲ್ಲಿರೋ ನಿಮ್ಮ ತಂದೆ” ಅಂತ ಕರೆದನು. (ಮತ್ತಾ. 5:16; 6:26) ಯೇಸು ಭೂಮಿಗೆ ಬರೋ ಮುಂಚೆ ಯೆಹೋವನನ್ನ ನಂಬಿಗಸ್ತ ಸೇವಕರು ಯಾವ ಬಿರುದುಗಳಿಂದ ಕರಿತಿದ್ರು? ‘ಸರ್ವಶಕ್ತ,’ ‘ಸರ್ವೋನ್ನತ,’ ಮತ್ತು ‘ಮಹಾನ್ ಸೃಷ್ಟಿಕರ್ತ’ ಅಂತೆಲ್ಲ ಕರೀತಿದ್ರು. ಆದ್ರೆ ಯೇಸು ಬಂದ್ಮೇಲೆ ತುಂಬ ಸಾರಿ ಯೆಹೋವನನ್ನ ‘ತಂದೆ’ ಅಂತ ಕರೆದನು. ಇದ್ರಿಂದ ತನ್ನ ಸೇವಕರು ತನ್ನನ್ನ ಒಬ್ಬ ತಂದೆ ತರ ನೋಡ್ಬೇಕು ಅಂತ ಯೆಹೋವ ಬಯಸ್ತಾನೆ ಅಂತ ಗೊತ್ತಾಗುತ್ತೆ. ಈಗ ನಾವು ಯೇಸು ಯೆಹೋವನನ್ನ ‘ನಮ್ಮ ತಂದೆ’ ಅಂತ ಕರೆದ ಎರಡು ಉದಾಹರಣೆಗಳನ್ನ ನೋಡೋಣ.
14. ಯೆಹೋವನು ನಮ್ಮೆಲ್ರನ್ನ ಅಮೂಲ್ಯವಾಗಿ ನೋಡ್ತಾನೆ ಅಂತ ಯೇಸು ಹೇಗೆ ಹೇಳಿದನು? (ಮತ್ತಾಯ 10:29-31) (ಚಿತ್ರ ನೋಡಿ.)
14 ಮೊದಲನೇ ಉದಾಹರಣೆ ಮತ್ತಾಯ 10:29-31ರಲ್ಲಿದೆ. (ಓದಿ.) ಅಲ್ಲಿ ಗುಬ್ಬಿಗಳ ಬಗ್ಗೆ ಇದೆ. ಅವು ಯೆಹೋವನನ್ನ ಪ್ರೀತಿಸಲ್ಲ, ಆತನಿಗೆ ಆರಾಧನೆನೂ ಮಾಡಲ್ಲ. ಹಾಗಿದ್ರೂ ಅವು ಎಲ್ಲಿವೆ, ಏನು ಮಾಡ್ತಿವೆ ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು. ಆತನು ಅವುಗಳನ್ನ ತುಂಬ ಅಮೂಲ್ಯವಾಗಿ ನೋಡ್ತಾನೆ. ಹಾಗಂದ್ಮೇಲೆ ತನ್ನ ಸೇವಕರಾದ ನಮ್ಮನ್ನ ಇನ್ನೆಷ್ಟು ಪ್ರೀತಿಸ್ತಾನೆ ಅಲ್ವಾ? ಅಷ್ಟೇ ಅಲ್ಲ ನಮ್ಮ ತಲೆಯಲ್ಲಿ ಎಷ್ಟು ಕೂದಲಿದೆ ಅಂತಾನೂ ಯೆಹೋವನಿಗೆ ಚೆನ್ನಾಗಿ ಗೊತ್ತು. ಈ ತರ ನಮ್ಮ ಬಗ್ಗೆ ಚಿಕ್ಕಚಿಕ್ಕ ವಿಷ್ಯಾನೂ ಆತನಿಗೆ ಗೊತ್ತಿರೋದ್ರಿಂದ ನಮ್ಮನ್ನ ಎಷ್ಟು ಪ್ರೀತಿಸ್ತಾನೆ, ನಮ್ಮ ಬಗ್ಗೆ ಎಷ್ಟು ಕಾಳಜಿ ಮಾಡ್ತಾನೆ ಅಂತ ಗೊತ್ತಾಗುತ್ತೆ. ಇದನ್ನೆಲ್ಲ ಯೇಸು ಹೇಳಿದ ಉದ್ದೇಶನೇ ‘ಯೆಹೋವ ನಮ್ಮನ್ನ ತುಂಬ ಪ್ರೀತಿಸ್ತಾನೆ’ ಅಂತ ನಾವು ಅರ್ಥ ಮಾಡ್ಕೊಬೇಕು ಅಂತ. ನೀವು ಅದನ್ನ ಅರ್ಥ ಮಾಡ್ಕೊತಿದ್ದೀರಾ?
ಒಂದೊಂದು ಗುಬ್ಬಚ್ಚಿಯನ್ನೂ ಯೆಹೋವ ಅಮೂಲ್ಯವಾಗಿ ನೋಡ್ತಾನೆ. ಅದು ಕೆಳಗೆ ಬೀಳೋದನ್ನೂ ಆತನು ಗಮನಿಸ್ತಾನೆ. ಅಂದ್ಮೇಲೆ ಆತನನ್ನ ಆರಾಧಿಸ್ತಿರೋ ನಿಮ್ಮನ್ನ ಆತನು ಇನ್ನೆಷ್ಟು ಪ್ರೀತಿಸ್ತಾನೆ, ಅಮೂಲ್ಯವಾಗಿ ನೋಡ್ತಾನೆ ಅಲ್ವಾ! (ಪ್ಯಾರ 14 ನೋಡಿ)
15. ಯೋಹಾನ 6:44ರಲ್ಲಿ ಯೇಸು ಹೇಳಿದ ಮಾತುಗಳು ನಮ್ಮ ಸ್ವರ್ಗೀಯ ತಂದೆ ಬಗ್ಗೆ ಏನು ತಿಳಿಸುತ್ತೆ?
15 ಯೇಸು ಯೆಹೋವನನ್ನ ‘ನಮ್ಮ ತಂದೆ’ ಅಂತ ಕರೆದ ಎರಡನೇ ಉದಾಹರಣೆ ನೋಡೋಣ. (ಯೋಹಾನ 6:44 ಓದಿ.) ಸ್ವರ್ಗದಲ್ಲಿರೋ ನಿಮ್ಮ ತಂದೆ ತನ್ನ ಹತ್ರ ನಿಮ್ಮನ್ನ ಕರೆದಿದ್ದಾನೆ. ಯಾಕೆ ಗೊತ್ತಾ? ಯಾಕಂದ್ರೆ ಆತನು ನಿಮ್ಮಲ್ಲಿರೋ ಒಳ್ಳೇ ಹೃದಯ ನೋಡಿದ್ದಾನೆ. (ಅ. ಕಾ. 13:48) ಯೇಸು, ಯೋಹಾನ 6:44ರಲ್ಲಿ ಈ ಮಾತುಗಳನ್ನ ಹೇಳಿದಾಗ, ಯೆರೆಮೀಯ 31:3ರಲ್ಲಿ ಯೆಹೋವನು ಹೇಳಿದ ಮಾತುಗಳು ಆತನ ಮನಸ್ಸಲ್ಲಿ ಇದ್ದಿರಬಹುದು. ಅಲ್ಲಿ ‘ನಾನು ನಿನಗೆ ಶಾಶ್ವತ ಪ್ರೀತಿ ತೋರಿಸಿ, ನಿನ್ನನ್ನ ನನ್ನ ಹತ್ರ ಸೆಳ್ಕೊಂಡಿದ್ದೀನಿ’ ಅಂತ ಇದೆ. (ಯೆರೆ. 31:3, ಪಾದಟಿಪ್ಪಣಿ ಅನ್ನು ಹೋಶೇಯ 11:4 ಜೊತೆ ಹೋಲಿಸಿ.) ಈ ಮಾತಿನ ಬಗ್ಗೆ ಸ್ವಲ್ಪ ಯೋಚನೆ ಮಾಡಿ. ನಮ್ಮಲ್ಲಿ ನಾವೇ ನೋಡದಿರೋ ಎಷ್ಟೋ ಒಳ್ಳೆ ಗುಣಗಳನ್ನ ಯೆಹೋವ ನೋಡಿ ನಮ್ಮನ್ನ ತನ್ನ ಹತ್ರ ಸೆಳ್ಕೊಂಡಿದ್ದಾನೆ.
16. (ಎ) ಯೇಸು ಒಂದರ್ಥದಲ್ಲಿ ನಮಗೆ ಏನು ಹೇಳ್ತಿದ್ದಾನೆ? (ಬಿ) ಅದನ್ನ ನಾವು ಯಾಕೆ ನಂಬಬೇಕು? (ಸಿ) ಯೆಹೋವನೇ ಬೆಸ್ಟ್ ತಂದೆ ಅಂತ ಅರ್ಥ ಮಾಡ್ಕೊಳೋಕೆ ನಿಮಗೆ ಯಾವುದು ಸಹಾಯ ಮಾಡುತ್ತೆ? (“ನಮಗೆಲ್ಲರಿಗೆ ಬೇಕಾಗಿರುವ ತಂದೆ” ಅನ್ನೋ ಚೌಕ ನೋಡಿ.)
16 ಯೇಸು ಯೆಹೋವನನ್ನ ‘ನಮ್ಮ ತಂದೆ’ ಅಂತ ಕರೆದನು. ಅಂದ್ರೆ ಒಂದರ್ಥದಲ್ಲಿ ಯೇಸು, ‘ಯೆಹೋವ, ಬರೀ ನನ್ನ ತಂದೆ ಅಲ್ಲ, ನಿಮಗೂ ತಂದೆನೇ, ನಿಮ್ಮನ್ನೂ ತುಂಬ ಪ್ರೀತಿಸ್ತಾನೆ’ ಅಂತ ಹೇಳಿದ್ದಾನೆ. ನಿಮಗೆ ‘ಯೆಹೋವ ನನ್ನನ್ನ ಪ್ರೀತಿಸ್ತಾನಾ?’ ಅನ್ನೋ ಅನುಮಾನ ಬಂದ್ರೆ, ಯೇಸು ಹೇಳಿದ ಈ ಮಾತುಗಳನ್ನ ನಂಬಿ, ಅದನ್ನ ನೆನಪಿಟ್ಕೊಳ್ಳಿ. ಯಾಕಂದ್ರೆ ಯೇಸು ಯಾವಾಗಲೂ ಸತ್ಯನೇ ಹೇಳ್ತಾನೆ. ಯೇಸುಗಿಂತ ಚೆನ್ನಾಗಿ ಯೆಹೋವನ ಬಗ್ಗೆ ಬೇರೆ ಯಾರಿಗೂ ಗೊತ್ತಿಲ್ಲ.—1 ಪೇತ್ರ 2:22.
ಯೆಹೋವ ನಿಮ್ಮನ್ನ ಪ್ರೀತಿಸ್ತಾನೆ ಅಂತ ಯಾವಾಗ್ಲೂ ನಂಬಿ
17. ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ನಾವ್ಯಾಕೆ ಯಾವಾಗ್ಲೂ ನಂಬಬೇಕು?
17 ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ನಾವು ಯಾವಾಗ್ಲೂ ನಂಬಬೇಕು. ನಮ್ಮ ವಿರೋಧಿಯಾದ ಸೈತಾನ ಏನಾದ್ರೂ ಕುತಂತ್ರ ಮಾಡಿ ನಾವು ಯೆಹೋವನಿಗೆ ಮಾಡೋ ಸೇವೆನ ನಿಲ್ಲಿಸಬೇಕು ಅಂತ ಕಾಯ್ತಾ ಇರ್ತಾನೆ. ಯೆಹೋವ ನಮ್ಮನ್ನ ಪ್ರೀತಿಸಲ್ಲ ಅಂತ ನಮ್ಮನ್ನ ನಂಬಿಸಿ, ನಮಗೆ ಮೋಸ ಮಾಡೋಕೆ ನೋಡ್ತಾನೆ. ಆದ್ರೆ ಸೈತಾನ ಗೆಲ್ಲೋಕೆ ನಾವು ಯಾವತ್ತೂ ಬಿಟ್ಟು ಕೊಡಬಾರದು!—ಯೋಬ 27:5.
18. ಯೆಹೋವ ನಿಮ್ಮನ್ನ ಪ್ರೀತಿಸ್ತಾನೆ ಅಂತ ನಂಬೋಕೆ ಏನೆಲ್ಲ ಮಾಡಬೇಕು?
18 ಯೆಹೋವ ನಿಮ್ಮನ್ನ ಪ್ರೀತಿಸ್ತಾನೆ ಅಂತ ಯಾವಾಗ್ಲೂ ನಂಬೋಕೆ ನೀವು ಕೆಲವು ವಿಷ್ಯ ಮಾಡಬೇಕು. (1) ಪ್ರಾರ್ಥನೆ ಮಾಡಿ. ಯೆಹೋವನು ಹೇಗೆ ನಿಮ್ಮಲ್ಲಿ ಒಳ್ಳೆ ಗುಣಗಳನ್ನ ನೋಡ್ತಾನೋ ಅದೇ ತರ ನೀವು ನಿಮ್ಮಲ್ಲಿರೋ ಒಳ್ಳೇ ಗುಣಗಳನ್ನ ನೋಡಿ. (2) ಬೈಬಲ್ ಓದಿ. ಯೆಹೋವ ನಿಮ್ಮನ್ನ ಎಷ್ಟು ಅಮೂಲ್ಯವಾಗಿ ನೋಡ್ತಾನೆ ಅಂತ ಅರ್ಥ ಮಾಡ್ಕೊಳ್ಳಿ. (3) ಯಾರು ಯೆಹೋವನನ್ನ ಪ್ರೀತಿಸ್ತಾರೋ ಅವ್ರನ್ನ ಆತನೂ ಪ್ರೀತಿಸ್ತಾನೆ ಅಂತ ಅರ್ಥ ಮಾಡ್ಕೊಳ್ಳಿ. ನಿಮ್ಮ ಹತ್ರ ಪ್ರೀತಿ ತಗೊಂಡು, ‘ನಾನು ನಿನ್ನನ್ನ ಪ್ರೀತಿಸಲ್ಲ ಹೋಗು’ ಅಂತ ಯೆಹೋವ ಯಾವತ್ತೂ ಹೇಳಲ್ಲ ಅಂತ ನೆನಪಿಡಿ. (4) ಬಿಡುಗಡೆ ಬೆಲೆ ಯೆಹೋವನು ನಿಮಗೋಸ್ಕರ ಕೊಟ್ಟಂಥ ವೈಯಕ್ತಿಕ ಗಿಫ್ಟ್ ಅಂತ ಅರ್ಥ ಮಾಡ್ಕೊಳ್ಳಿ. (5) ಯೇಸು ಹೇಳಿದಂತೆ ಯೆಹೋವ ನಿಮ್ಮ ತಂದೆಯಾಗಿದ್ದಾನೆ ಅಂತ ನಂಬಿ. ನೀವಿದನ್ನೆಲ್ಲ ಮಾಡಿದ್ರೆ ಯಾರಾದ್ರೂ ನಿಮ್ಮ ಹತ್ರ ಬಂದು ‘ಯೆಹೋವ ನಿನ್ನನ್ನ ಪ್ರೀತಿಸ್ತಾನಾ?’ ಅಂತ ಕೇಳಿದ್ರೆ ‘ಹೌದು, ನನ್ನನ್ನ ಪ್ರೀತಿಸ್ತಾನೆ, ಆತನನ್ನ ಪ್ರೀತಿಸೋಕೆ ನಾನೂ ನನ್ನ ಕೈಲಾಗಿದ್ದೆಲ್ಲ ಮಾಡ್ತೀನಿ’ ಅಂತ ಯಾವುದೇ ಡೌಟ್ ಇಲ್ಲದೆ ಧೈರ್ಯವಾಗಿ ಹೇಳಬಹುದು.
ಗೀತೆ 154 ಪ್ರೀತಿ ಶಾಶ್ವತ