ಅಧ್ಯಯನ ಲೇಖನ 41
ಗೀತೆ 108 ದೇವರ ನಿಷ್ಠೆಯ ಪ್ರೀತಿ
ದೇವರ ಪ್ರೀತಿ ಶಾಶ್ವತ
“ ಯೆಹೋವನಿಗೆ ಧನ್ಯವಾದ ಹೇಳಿ, ಆತನು ಒಳ್ಳೆಯವನು. ಆತನ ಪ್ರೀತಿ ಶಾಶ್ವತ.”—ಕೀರ್ತ. 136:1.
ಈ ಲೇಖನದಲ್ಲಿ ಏನಿದೆ?
ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅನ್ನೋದು ಬೈಬಲಿನಲ್ಲಿರೋ ಮುಖ್ಯ ಸತ್ಯ. ಇದನ್ನ ಅರ್ಥಮಾಡ್ಕೊಂಡ್ರೆ ಕಷ್ಟ ಸಮಸ್ಯೆಗಳನ್ನ ನಿಭಾಯಿಸೋಕೆ ಸಹಾಯ ಆಗುತ್ತೆ. ಅದು ಹೇಗೆ ಅಂತ ನೋಡೋಣ.
1-2. ನಮ್ಮೆಲ್ರಿಗೂ ಆಗಾಗ ಹೇಗನಿಸುತ್ತೆ?
ಒಂದು ದೊಡ್ಡ ಸಮುದ್ರದಲ್ಲಿ ಹಡಗು ಹೋಗ್ತಾ ಇದೆ ಅಂತ ನೆನಸಿ. ಇದ್ದಕ್ಕಿದ್ದಂತೆ ಜೋರಾದ ಬಿರುಗಾಳಿ ಶುರು ಆಗುತ್ತೆ. ಸಮುದ್ರದ ದೊಡ್ಡ-ದೊಡ್ಡ ಅಲೆಗಳು ಹಡಗಿಗೆ ಬಡಿತಾಯಿದೆ. ಇಂಥ ಪರಿಸ್ಥಿತಿಲಿ ಈ ಹಡಗು ಆ ಕಡೆ, ಈ ಕಡೆ ಅಲ್ಲಾಡದೆ ಸ್ಥಿರವಾಗಿ ನಿಲ್ಲೋಕೆ ಯಾವುದು ಸಹಾಯ ಮಾಡುತ್ತೆ? ಲಂಗರು! ಸಮುದ್ರ ಬಿರುಗಾಳಿಯಿಂದ ಎಷ್ಟೇ ಆರ್ಭಟಿಸಿದ್ರೂ ದೊಡ್ಡ-ದೊಡ್ಡ ಅಲೆಗಳು ಅಪ್ಪಳಿಸಿದ್ರೂ ಹಡಗನ್ನ ಕಾಪಾಡೋದು ಲಂಗರು ಮಾತ್ರ!
2 ಜೀವನದಲ್ಲಿ ಬಿರುಗಾಳಿ ತರ ಕಷ್ಟಗಳು ಬಂದಾಗ ನಿಮ್ಮ ಪರಿಸ್ಥಿತಿನೂ ಆ ಹಡಗಿನ ತರ ಆಗಿಬಿಡುತ್ತೆ. ನಿಮ್ಮ ಭಾವನೆಗಳು ಸಮುದ್ರದ ಅಲೆಗಳ ತರ ನಿಮ್ಮನ್ನ ತಲೆಕೆಳಗೆ ಮಾಡಬಹುದು. ಒಂದು ದಿನ ‘ಯೆಹೋವ ನನ್ನನ್ನ ತುಂಬ ಪ್ರೀತಿಸ್ತಾನೆ, ನನ್ನ ಕೈ ಬಿಡಲ್ಲ’ ಅನ್ನೋ ನಂಬಿಕೆ ಇರುತ್ತೆ, ಇನ್ನೊಂದು ದಿನ ‘ಯೆಹೋವ ನನ್ನ ಕಷ್ಟಗಳನ್ನು ನೋಡ್ತಿದ್ದಾನೋ ಇಲ್ವೋ’ ಅಂತ ಅನಿಸಿಬಿಡುತ್ತೆ. (ಕೀರ್ತ. 10:1; 13:1) ಅಂಥ ಟೈಮಲ್ಲಿ ಒಬ್ಬ ಫ್ರೆಂಡ್ ಬಂದು ನಿಮಗೆ ಧೈರ್ಯ ಹೇಳಬಹುದು, ಸಮಾಧಾನ ಮಾಡಬಹುದು. ಆಗ ನಿಮ್ಮ ಮನಸ್ಸಿಗೆ ನಿರಾಳ ಅನಿಸಬಹುದು. (ಜ್ಞಾನೋ. 17:17; 25:11) ಇಲ್ಲಿಗೆ ಮುಗೀತಾ? ಇಲ್ಲ. ಸ್ವಲ್ಪ ಟೈಮ್ ಆದ್ಮೇಲೆ ‘ಯೆಹೋವ ನನ್ನ ಕೈ ಬಿಟ್ಟು ಬಿಟ್ಟಿದ್ದಾನೆ, ನನ್ನನ್ನ ಮರೆತುಬಿಟ್ಟಿದ್ದಾನೆ’ ಅನ್ನೋ ಸಂಶಯ ಮತ್ತೆ ಬರಬಹುದು. ಆ ಹಡಗಿಗೆ ಲಂಗರು ಸಹಾಯ ಮಾಡಿದ ಹಾಗೆ ನಮ್ಮ ಕಷ್ಟಗಳನ್ನ ತಾಳ್ಕೊಳೋಕೆ ಯಾವುದು ಸಹಾಯ ಮಾಡುತ್ತೆ? ಯೆಹೋವನು ನಿಮ್ಮನ್ನ ಪ್ರೀತಿಸ್ತಾನೆ, ನಿಮಗೆ ಖಂಡಿತ ಸಹಾಯ ಮಾಡ್ತಾನೆ ಅಂತ ನಂಬೋಕೆ ಯಾವುದು ಸಹಾಯ ಮಾಡುತ್ತೆ? ಈ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ರ ನೋಡೋಣ.
3. (ಎ) “ಶಾಶ್ವತ ಪ್ರೀತಿ” ಅಂದ್ರೇನು? (ಕೀರ್ತನೆ 31:7; 136:1) (ಬಿ) ಯೆಹೋವನ ತರ ಬೇರೆ ಯಾರೂ ಈ ಶಾಶ್ವತ ಪ್ರೀತಿನ ತೋರಿಸೋಕಾಗಲ್ಲ ಅಂತ ಯಾಕೆ ಹೇಳಬಹುದು? (ಚಿತ್ರ ನೋಡಿ.)
3 ಯೆಹೋವನು ನಮಗೆ ಶಾಶ್ವತ ಪ್ರೀತಿ ತೋರಿಸ್ತಾನೆ ಅಂತ ನೆನಪಿಸ್ಕೊಬೇಕು. ಇದು ಕಷ್ಟಗಳು ಬಂದಾಗ ನಮಗೆ ಲಂಗರದಂತೆ ಸಹಾಯ ಮಾಡೋ ಮೊದಲನೇ ವಿಷ್ಯ! (ಕೀರ್ತನೆ 31:7; 136:1 ಓದಿ.) “ಶಾಶ್ವತ ಪ್ರೀತಿ” ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ತೋರಿಸೋ ಅಪಾರ ಪ್ರೀತಿನ, ಆಪ್ತ ಬಾಂಧವ್ಯನ ಸೂಚಿಸುತ್ತೆ. ಈ ಬಂಧ ಯಾವತ್ತೂ ಮುರಿದು ಹೋಗಲ್ಲ. ಯೆಹೋವನ ತರ ಬೇರೆ ಯಾರೂ ಶಾಶ್ವತ ಪ್ರೀತಿನ ತೋರಿಸೋಕೆ ಆಗಲ್ಲ. ಅದಕ್ಕೆ ಬೈಬಲ್, ಆತನು “ಧಾರಾಳವಾಗಿ ಶಾಶ್ವತ ಪ್ರೀತಿ ತೋರಿಸ್ತಾನೆ” ಅಂತ ಹೇಳುತ್ತೆ. (ವಿಮೋ. 34:6, 7) ಅಷ್ಟೇ ಅಲ್ಲ “ನಿನಗೆ ಮೊರೆಯಿಡೋ ಪ್ರತಿಯೊಬ್ರಿಗೂ ಶಾಶ್ವತ ಪ್ರೀತಿಯನ್ನ ಅಪಾರವಾಗಿ ತೋರಿಸ್ತೀಯ” ಅಂತಾನೂ ಹೇಳುತ್ತೆ. (ಕೀರ್ತ. 86:5) ಇದ್ರ ಅರ್ಥ ಏನು? ಯೆಹೋವನು ತನಗೆ ನಿಯತ್ತಾಗಿರೋರನ್ನ ಯಾವತ್ತೂ ಕೈ ಬಿಡಲ್ಲ. ಅಂಥವ್ರಿಗೆ ಶಾಶ್ವತ ಪ್ರೀತಿನ ಮಳೆ ತರ ಸುರಿಸ್ತಾನೆ. ಹಾಗಾಗಿ ನೆನಪಿಡಿ, ಬಿರುಗಾಳಿ ತರ ಕಷ್ಟಗಳು ಬಂದಾಗ ನಿಮಗೆ ಲಂಗರದ ತರ ಸಹಾಯ ಮಾಡೋದು ಯೆಹೋವನ ಶಾಶ್ವತ ಪ್ರೀತಿನೇ.—ಕೀರ್ತ. 23:4.
ದೊಡ್ಡ-ದೊಡ್ಡ ಅಲೆಗಳು ಬಂದಾಗ ಹಡಗು ಆ ಕಡೆ ಈ ಕಡೆ ಅಲ್ಲಾಡದೆ ಇರೋಕೆ ಲಂಗರು ಸಹಾಯ ಮಾಡುತ್ತೆ. ಹಾಗೇ ಕಷ್ಟಗಳು ಬಂದಾಗ ಯೆಹೋವನ ಮೇಲಿರೋ ನಂಬಿಕೆ ಧೈರ್ಯವಾಗಿ ಎದುರಿಸೋಕೆ ಸಹಾಯ ಮಾಡುತ್ತೆ (ಪ್ಯಾರ 3 ನೋಡಿ)
ಯೆಹೋವ ನಮ್ಮನ್ನ ನಿಜವಾಗ್ಲೂ ಪ್ರೀತಿಸ್ತಾನೆ!
4. (ಎ) ಬೈಬಲಿನ ಮುಖ್ಯ ಸತ್ಯ ಅಂದ್ರೇನು? ಉದಾಹರಣೆ ಕೊಡಿ. (ಬಿ) ಅವನ್ನ ನಾವ್ಯಾಕೆ ಪೂರ್ತಿ ನಂಬ್ತೀವಿ?
4 ‘ಯೆಹೋವ ನಮ್ಮನ್ನ ಪ್ರೀತಿಸ್ತಾನೆ’ ಅನ್ನೋದು ಬೈಬಲಿನ ಒಂದು ಮುಖ್ಯ ಸತ್ಯ ಆಗಿದೆ. ಇದನ್ನ ನಾವು ಅರ್ಥ ಮಾಡ್ಕೊಬೇಕು. ಆಗ ಇದು ಕಷ್ಟಗಳನ್ನ ತಾಳ್ಕೊಳ್ಳೋಕೆ ನಮಗೆ ಲಂಗರದ ತರ ಸಹಾಯ ಮಾಡುತ್ತೆ. ಬೈಬಲ್‌ನ ಮುಖ್ಯ ಸತ್ಯ ಅಂದ ತಕ್ಷಣ ನಿಮ್ಮ ಮನಸ್ಸಿಗೆ ಏನೆಲ್ಲ ಬರುತ್ತೆ? ನೀವು ಮೊದಮೊದ್ಲು ಕಲಿತ ವಿಷ್ಯಗಳು ನೆನಪಾಗಬಹುದು. ಉದಾಹರಣೆಗೆ, ದೇವ್ರ ಹೆಸರು ಯೆಹೋವ, ಆತನ ಮಗ ಯೇಸು, ತೀರಿಹೋಗಿರೋ ಜನರೆಲ್ಲ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗಲ್ಲ, ಅವರು ಗಾಢ ನಿದ್ರೆ ಮಾಡ್ತಿದ್ದಾರೆ ಮತ್ತು ಮುಂದೆ ದೇವರು ಇಡೀ ಭೂಮಿಯನ್ನ ಪರದೈಸ್ ಮಾಡಿದಾಗ ಅದ್ರಲ್ಲಿ ಎಲ್ಲಾ ಜನ್ರು ಶಾಶ್ವತವಾಗಿ ಇರ್ತಾರೆ ಅನ್ನೋದೆಲ್ಲ ನೆನಪಾಗಬಹುದು. (ಕೀರ್ತ. 83:18; ಪ್ರಸಂ. 9:5; ಯೋಹಾ. 3:16; ಪ್ರಕ. 21:3, 4) ಇದೆಲ್ಲ ನೂರಕ್ಕೆ ನೂರು ಸತ್ಯ ಅಂತ ನೀವು ತಿಳ್ಕೊಂಡಿದ್ದೀರ. ಆದ್ರೆ ಯಾರೋ ಬಂದು ‘ಇವೆಲ್ಲಾ ಸುಳ್ಳು’ ಅಂತ ಹೇಳಿದ್ರೆ ನೀವು ನಂಬ್ತೀರಾ? ಖಂಡಿತ ಇಲ್ಲ. ಯಾಕಂದ್ರೆ ನೀವು ಇವನ್ನ ಸುಮ್ಮನೆ ನಂಬ್ಲಿಲ್ಲ. ಪ್ರತಿಯೊಂದು ವಿಷ್ಯಕ್ಕೂ ಎಷ್ಟೋ ಆಧಾರಗಳನ್ನ ತಿಳ್ಕೊಂಡ ಮೇಲೆ ನಂಬಿಕೆ ಬೆಳೆಸಿಕೊಂಡಿದ್ದೀರ. ನಾವೀಗ ‘ಯೆಹೋವನು ನಮ್ಮನ್ನ ಪ್ರೀತಿಸ್ತಾನೆ’ ಅನ್ನೋ ವಿಷ್ಯನ ಯಾಕೆ ಬೈಬಲಿನ ಒಂದು ಮುಖ್ಯ ಸತ್ಯ ಅಂತ ಕರೀತಿವಿ ಅಂತ ನೋಡೋಣ. ‘ಯೆಹೋವನು ನಮ್ಮನ್ನ ಪ್ರೀತಿಸಲ್ಲ, ನಮಗೆ ಸಹಾಯ ಮಾಡಲ್ಲ’ ಅನ್ನೋ ಸಂಶಯನ ಹೊಡೆದು ಓಡಿಸೋಕೆ ಇದು ಹೇಗೆ ಸಹಾಯ ಮಾಡುತ್ತೆ ಅಂತಾನೂ ನೋಡೋಣ.
5. ಸತ್ಯ ಕಲಿತಾಗ ಸುಳ್ಳಿನ ಕೋಟೆನ ಕೆಡವಿ ಹಾಕೋಕೆ ಒಬ್ಬ ವ್ಯಕ್ತಿ ಏನೆಲ್ಲ ಮಾಡ್ತಾನೆ?
5 ಬೈಬಲ್ ಬಗ್ಗೆ ಕಲಿಯೋಕೆ ಶುರು ಮಾಡಿದಾಗ ಹಿಂದೆ ನಂಬ್ತಿದ್ದ ವಿಷ್ಯಗಳನ್ನ ಬಿಟ್ಟು ಬಿಡೋಕೆ ನಿಮಗೆ ಯಾವುದು ಸಹಾಯ ಮಾಡ್ತು? ನೀವು ಹಿಂದೆ ನಂಬ್ತಿದ್ದ ವಿಷ್ಯಕ್ಕೂ, ಬೈಬಲಿನಲ್ಲಿ ಇರೋ ವಿಷ್ಯಕ್ಕೂ ಎಷ್ಟು ವ್ಯತ್ಯಾಸ ಇದೆ ಅಂತ ನೀವು ಹೋಲಿಸಿ ನೋಡಿರಬಹುದು. ಉದಾಹರಣೆಗೆ, ಯೇಸುನೇ ಸರ್ವಶಕ್ತ ದೇವರು ಅಂತ ನೀವು ಹಿಂದೆ ನಂಬಿದ್ದಿರಬಹುದು. ಆದ್ರೆ ಬೈಬಲ್ ಕಲಿಯೋಕೆ ಶುರು ಮಾಡಿದಾಗ, ‘ಯೇಸು ದೇವರಾ? ಅಲ್ವಾ?’ ಅನ್ನೋ ಪ್ರಶ್ನೆ ಬಂದಿರಬಹುದು. ಆದ್ರೆ ನೀವು ಬೈಬಲಿಂದ ಕಾರಣಗಳನ್ನ ತಿಳ್ಕೊಂಡಾಗ, ‘ಯೇಸು ದೇವರಲ್ಲ’ ಅಂತ ನಿಮಗೆ ಗೊತ್ತಾಯ್ತು. ಯಾಕಂದ್ರೆ ಬೈಬಲ್ ಯೇಸುನ, “ಎಲ್ಲ ಸೃಷ್ಟಿಗಳಿಗಿಂತ ಮೊಟ್ಟಮೊದ್ಲು ಸೃಷ್ಟಿಯಾದವನು” ಅಂತ ಹೇಳುತ್ತೆ. ಅಷ್ಟೇ ಅಲ್ಲ, ಆತನನ್ನ “ದೇವರ ಒಬ್ಬನೇ ಮಗ” ಅಂತ ಹೇಳುತ್ತೆ. ಇದನ್ನ ತಿಳ್ಕೊಂಡ ಮೇಲೆ ನೀವು ಹಿಂದೆ ನಂಬ್ತಿದ್ದ ವಿಷ್ಯನ ಬಿಟ್ಟು, ಬೈಬಲ್ ಹೇಳೋದನ್ನ ನಂಬಿದ್ರಿ. (ಕೊಲೊ. 1:15; ಯೋಹಾ. 3:18) ಈ ಹೆಜ್ಜೆ ತಗೊಳ್ಳೋದು ಅಷ್ಟು ಸುಲಭ ಆಗಿರಲಿಲ್ಲ. ಯಾಕಂದ್ರೆ, ನೀವು ಹಿಂದೆ ಕಲಿತಿದ್ದ ವಿಷ್ಯ “ದೊಡ್ಡ ದೊಡ್ಡ ಕೋಟೆಗಳ” ತರ ಇತ್ತು. ಅವನ್ನ ಕೆಡವಿ ಹಾಕೋಕೆ ನಿಮಗೆ ಕಷ್ಟ ಆಯ್ತು. (2 ಕೊರಿಂ. 10:4, 5) ಆದ್ರೆ ಸತ್ಯ ಕಲಿತ ಮೇಲೆ ಆ ಸುಳ್ಳಿನ ಕೋಟೆನ ಮತ್ತೆ ಕಟ್ಟೋದ್ರ ಬಗ್ಗೆ ನೀವು ಯೋಚ್ನೆ ಮಾಡ್ಲಿಲ್ಲ!—ಫಿಲಿ. 3:13.
6. ಯೆಹೋವನ ಪ್ರೀತಿ ಶಾಶ್ವತವಾಗಿರುತ್ತೆ ಅಂತ ನೀವ್ಯಾಕೆ ನಂಬ್ತೀರಾ?
6 ‘ಯೆಹೋವ ನಿಮ್ಮನ್ನ ಪ್ರೀತಿಸಲ್ಲ’ ಅನ್ನೋದು ಒಂದು ದೊಡ್ಡ ಸುಳ್ಳಿನ ಕೋಟೆ ಆಗಿದೆ. ಅದನ್ನ ನೀವು ಕೆಡವಿ ಹಾಕ್ಲೇಬೇಕು. ಕೆಲವೊಂದು ಸಲ ನಿಮಗೆ, ‘ಯೆಹೋವ ನನ್ನನ್ನ ಪ್ರೀತಿಸ್ತಾನೋ ಇಲ್ವೋ’ ಅನ್ನೋ ಡೌಟ್ ಬರಬಹುದು. ಆದ್ರೆ ಅದನ್ನ ಹಾಗೇ ಬಿಟ್ಟು ಬಿಡಬೇಡಿ. ನಿಮ್ಮ ಸಂಶಯನ ಕೀರ್ತನೆ 136:1ರಲ್ಲಿರೋ ಯೆಹೋವನ ಮಾತುಗಳಿಗೆ ಹೋಲಿಸಿ ನೋಡಿ. ಇಲ್ಲಿ ಯೆಹೋವ ತನ್ನ ಪ್ರೀತಿನ “ಶಾಶ್ವತ” ಅಂತ ಯಾಕೆ ಹೇಳ್ತಿದ್ದಾನೆ? ಆತನ “ಪ್ರೀತಿ ಶಾಶ್ವತ” ಅಂತ ಈ ಕೀರ್ತನೆಯಲ್ಲಿ 26 ಸಾರಿ ಪದೇ-ಪದೇ ಯಾಕೆ ಹೇಳಲಾಗಿದೆ ಅಂತ ಯೋಚ್ನೆ ಮಾಡಿ. ನಾವೀಗ ಕಲಿತ ಹಾಗೆ ‘ಯೆಹೋವನು ತನ್ನ ಜನ್ರಿಗೆ ಶಾಶ್ವತ ಪ್ರೀತಿನ ತೋರಿಸ್ತಾನೆ’ ಅನ್ನೋದು ಬೈಬಲ್ ಕಲಿಸೋ ಒಂದು ಮುಖ್ಯ ಸತ್ಯ ಆಗಿದೆ. ನೀವು ಹಿಂದೆ ನಂಬ್ತಿದ್ದ ವಿಷ್ಯಗಳು ಸುಳ್ಳು, ಬೈಬಲ್ ಹೇಳ್ತಿರೋದು ಸತ್ಯ ಅಂತ ಗೊತ್ತಾದಾಗ, ಹಿಂದಿನ ವಿಷ್ಯನೆಲ್ಲ ಬಿಟ್ಟು ನೀವು ಬೈಬಲನ್ನ ನಂಬೋಕೆ ಶುರು ಮಾಡಿದ್ರಿ. ‘ಯೆಹೋವ ನಮ್ಮನ್ನ ಪ್ರೀತಿಸಲ್ಲ, ನಾವು ಯಾವುದಕ್ಕೂ ಲಾಯಕಿಲ್ಲ’ ಅನ್ನೋದು ಶುದ್ಧ ಸುಳ್ಳಾಗಿದೆ. ಬೇರೆಲ್ಲ ಸುಳ್ಳನ್ನ ನೀವು ಹೇಗೆ ಕೆಡವಿ ಹಾಕಿದ್ರೋ ಅದೇ ತರ ಈ ಸುಳ್ಳನ್ನೂ ಕೆಡವಿ ಹಾಕಿ.
7. ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ಭರವಸೆ ಕೊಡೋ ಕೆಲವು ವಚನಗಳ ಬಗ್ಗೆ ಹೇಳಿ.
7 ಯೆಹೋವ ನಮ್ಮನ್ನ ಪ್ರೀತಿಸುತ್ತಾನೆ ಅನ್ನೋದಕ್ಕೆ ಬೈಬಲಲ್ಲಿ ತುಂಬ ಆಧಾರಗಳಿವೆ. ಉದಾಹರಣೆಗೆ, ಯೇಸು ತನ್ನ ಹಿಂಬಾಲಕರಿಗೆ “ನಿಮಗೆ ಈ ಚಿಕ್ಕ ಗುಬ್ಬಿಗಳಿಗಿಂತ ತುಂಬ ಬೆಲೆ ಇದೆ” ಅಂತ ಹೇಳಿದನು. (ಮತ್ತಾ. 10:31) ಯೆಹೋವನು ತನ್ನ ಜನ್ರಿಗೆ, “ನಾನು ನಿನ್ನನ್ನ ಬಲಪಡಿಸ್ತೀನಿ. ಹೌದು, ನಾನು ನಿನಗೆ ಸಹಾಯ ಮಾಡ್ತೀನಿ, ನಾನು ನಿನ್ನನ್ನ ನನ್ನ ಬಲಗೈಯಿಂದ ಗಟ್ಟಿಯಾಗಿ ಹಿಡ್ಕೊಳ್ತೀನಿ” ಅಂತ ಮಾತು ಕೊಟ್ಟಿದ್ದಾನೆ. (ಯೆಶಾ. 41:10) ಈ ಮಾತುಗಳಿಂದ ಯೆಹೋವ ನಮ್ಮನ್ನ ಎಷ್ಟು ಪ್ರೀತಿಸ್ತಾನೆ ಅಂತ ಗೊತ್ತಾಗುತ್ತೆ. ಯೇಸು, ‘ನಿಮಗೆ ಗುಬ್ಬಿಗಳಿಗಿಂತ ತುಂಬ ಬೆಲೆ ಇರಬಹುದು’ ಅಂತ ಹೇಳಿಲ್ಲ, ಬದಲಿಗೆ ‘ತುಂಬ ಬೆಲೆ ಇದೆ’’ ಅಂತ ಹೇಳಿದ್ದಾನೆ. ಯೆಹೋವನು, ‘ನಾನು ನಿಮಗೆ ಸಹಾಯ ಮಾಡಬಹುದು’ ಅಂತ ಹೇಳಿಲ್ಲ. ‘ನಾನು ಸಹಾಯ ಮಾಡ್ತೀನಿ’ ಅಂತ ಹೇಳಿದ್ದಾನೆ. ಕಷ್ಟ ಬಂದಾಗ, ‘ಯೆಹೋವ ನನ್ನನ್ನ ಪ್ರೀತಿಸ್ತಾನೋ ಇಲ್ವೋ’ ಅನ್ನೋ ಸಂಶಯ ಬಂದ್ರೆ ನೀವೇನು ಮಾಡ್ತೀರಾ? ಇಂಥ ವಚನಗಳನ್ನ ಓದಿ. ಇವು ‘ಯೆಹೋವ ನನ್ನನ್ನ ಪ್ರೀತಿಸ್ತಾನೆ ಅಂತ ಏನೋ ಬರೀ ಬಾಯಿ ಮಾತಿಗೆ ಹೇಳ್ತಿಲ್ಲ, ಆತನು ಗ್ಯಾರಂಟಿ ನನ್ನನ್ನ ಪ್ರೀತಿಸ್ತಾನೆ’ ಅನ್ನೋ ಭರವಸೆ ತುಂಬುತ್ತೆ. ಯಾಕಂದ್ರೆ ಈ ಮಾತುಗಳು ನೂರಕ್ಕೆ ನೂರು ಸತ್ಯ! ಹಾಗಾಗಿ ನಿಮಗೆ ಸಂಶಯ ಬಂದಾಗೆಲ್ಲಾ ಪ್ರಾರ್ಥನೆ ಮಾಡಿ, ಈ ವಚನಗಳ ಬಗ್ಗೆ ಯೋಚ್ನೆ ಮಾಡಿ. ಆಗ 1 ಯೋಹಾನ 4:16ರಲ್ಲಿ ಹೇಳೋ ಹಾಗೆ ‘ದೇವರು ನಮ್ಮನ್ನ ಪ್ರೀತಿಸ್ತಾನೆ ಅಂತ ನಮಗೆ ಚೆನ್ನಾಗಿ ಗೊತ್ತು, ಆ ನಂಬಿಕೆ ನಮಗಿದೆ” ಅಂತ ಧೈರ್ಯವಾಗಿ ಹೇಳ್ತೀರ!a
8. ಯೆಹೋವ ನಿಮ್ಮನ್ನ ಪ್ರೀತಿಸ್ತಾನೋ ಇಲ್ವೋ ಅಂತ ಸಂಶಯ ಬಂದ್ರೆ ಏನು ಮಾಡಬೇಕು?
8 ಇಷ್ಟೆಲ್ಲಾ ಕಲಿತ ಮೇಲೂ ‘ಯೆಹೋವ ನನ್ನನ್ನ ಪ್ರೀತಿಸ್ತಾನೋ ಇಲ್ವೋ’ ಅನ್ನೋ ಡೌಟ್ ಬಂದ್ರೆ ಏನು ಮಾಡಬೇಕು? ನಿಮಗೆ ಅನಿಸ್ತಿರೋ ವಿಷ್ಯನ, ಯೆಹೋವನ ಬಗ್ಗೆ ನಿಮಗೆ ಈಗಾಗ್ಲೇ ಗೊತ್ತಿರೋ ವಿಷ್ಯದ ಜೊತೆ ಹೋಲಿಸಿ ನೋಡಿ. ಯಾಕಂದ್ರೆ ನಿಮ್ಮ ಅನಿಸಿಕೆ ಅಥವಾ ಭಾವನೆ ಬದಲಾಗುತ್ತೆ. ಆದ್ರೆ ಯೆಹೋವನ ಬಗ್ಗೆ ನಿಮಗೆ ಈಗಾಗ್ಲೇ ಗೊತ್ತಿರೋ ವಿಷ್ಯ, ನೀವು ಬೈಬಲಿಂದ ಕಲಿತ ಸತ್ಯ ಆಗಿದೆ. ಇದು ಯಾವತ್ತೂ ಬದಲಾಗಲ್ಲ. ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅನ್ನೋ ಸತ್ಯನ ನಾವು ನಂಬಿಲ್ಲ ಅಂದ್ರೆ ಒಂದರ್ಥದಲ್ಲಿ ಯೆಹೋವ ಮುಖ್ಯ ಗುಣವಾಗಿರೋ ಪ್ರೀತಿ ಬಗ್ಗೆನೇ ನಾವು ಸಂಶಯಪಟ್ಟಂತೆ ಇರುತ್ತೆ.—1 ಯೋಹಾ. 4:8.
ಯೆಹೋವನ ಪ್ರೀತಿ ಬಗ್ಗೆ ಯೋಚಿಸಿ
9-10. (ಎ) “ಅಪ್ಪನಿಗೂ ನಿಮ್ಮ ಮೇಲೆ ತುಂಬ ಪ್ರೀತಿ ಇದೆ” ಅನ್ನೋ ಮಾತನ್ನ ಯೇಸು ಹೇಳಿದಾಗ ಆತನು ಯಾವುದ್ರ ಬಗ್ಗೆ ಮಾತಾಡ್ತಿದ್ದನು? (ಬಿ) ಈ ಮಾತಿನ ಅರ್ಥ ತಿಳ್ಕೊಳ್ಳೋದ್ರಿಂದ ನಮಗೇನು ಪ್ರಯೋಜ್ನ? (ಯೋಹಾನ 16:26, 27) (ಚಿತ್ರ ನೋಡಿ.)
9 ಯೆಹೋವನ ಪ್ರೀತಿ ಬಗ್ಗೆ ಇನ್ನೂ ಚೆನ್ನಾಗಿ ತಿಳ್ಕೊಳ್ಳೋಕೆ ಯೇಸು ನಮಗೆ ಸಹಾಯ ಮಾಡ್ತಾನೆ. ಯೇಸು ತನ್ನ ಹಿಂಬಾಲಕರಿಗೆ “ಅಪ್ಪನಿಗೂ ನಿಮ್ಮ ಮೇಲೆ ತುಂಬ ಪ್ರೀತಿ ಇದೆ” ಅಂತ ಹೇಳಿದನು. (ಯೋಹಾನ 16:26, 27 ಓದಿ.) ಯೇಸು ತನ್ನ ಶಿಷ್ಯರನ್ನ ಖುಷಿಪಡಿಸೋಕೆ ಈ ಮಾತುಗಳನ್ನ ಹೇಳಿಲ್ಲ. ಈ ವಚನಗಳ ಹಿನ್ನೆಲೆ ನೋಡಿದ್ರೆ ಯೇಸು ಇಲ್ಲಿ ಮುಖ್ಯವಾಗಿ ಶಿಷ್ಯರ ಭಾವನೆಗಳ ಬಗ್ಗೆ ಆಗಲಿ ಅಥವಾ ಯೆಹೋವನ ಪ್ರೀತಿ ಬಗ್ಗೆ ಆಗಲಿ ಮಾತಾಡ್ತಿರಲಿಲ್ಲ. ಬದ್ಲಿಗೆ ಆತನು ಪ್ರಾರ್ಥನೆ ಬಗ್ಗೆ ಮಾತಾಡ್ತಿದ್ದನು.
10 ಯೇಸು ತನ್ನ ಶಿಷ್ಯರಿಗೆ, ನನಗೆ ಪ್ರಾರ್ಥನೆ ಮಾಡಿ ಅಂತ ಹೇಳಿಲ್ಲ. ನನ್ನ ಹೆಸ್ರಿನ ಮೂಲಕ ಪ್ರಾರ್ಥನೆ ಮಾಡಿ ಅಂತ ಹೇಳಿದನು. (ಯೋಹಾ. 16:23, 24) ಈ ವಿಷ್ಯನ ಶಿಷ್ಯರು ತಿಳ್ಕೊಳ್ಳೋದು ತುಂಬ ಮುಖ್ಯ ಆಗಿತ್ತು. ಇಲ್ಲಾಂದ್ರೆ ಯೇಸು ಸತ್ತು, ಮತ್ತೆ ಎದ್ದು ಬಂದ್ಮೇಲೆ ಅವ್ರಿಗೆ ಆತನ ಜೊತೆ ಮಾತಾಡಬೇಕು, ಆತನಿಗೆ ಪ್ರಾರ್ಥನೆ ಮಾಡಬೇಕು ಅಂತ ಅನಿಸೋ ಸಾಧ್ಯತೆ ಇತ್ತು. ಯೇಸು ಶಿಷ್ಯರಿಗೆ ಫ್ರೆಂಡ್ ತರ ಇದ್ದನು. ಅದಕ್ಕೆ ಅವರು, ‘ನಾವು ಪ್ರಾರ್ಥನೆಲಿ ಯೇಸುಗೆ ಏನೇ ಹೇಳಿದ್ರೂ ಅದನ್ನ ಆತನು ತಂದೆ ಹತ್ರ ನಮ್ಮ ಪರವಾಗಿ ಹೇಳ್ತಾನೆ’ ಅಂತ ಅಂದ್ಕೊಂಡಿರಬಹುದು. ಆದ್ರೆ ‘ಆ ತರ ಯೋಚ್ನೆ ಮಾಡಬಾರದು’ ಅಂತ ಯೇಸು ಅವ್ರಿಗೆ ಹೇಳಿದನು. ಯಾಕೆ? ಯಾಕಂದ್ರೆ ಯೇಸು ಅವ್ರಿಗೆ ‘ನನಗೆ ಅಷ್ಟೇ ಅಲ್ಲ, ಅಪ್ಪನಿಗೂ ನಿಮ್ಮ ಮೇಲೆ ತುಂಬ ಪ್ರೀತಿ ಇದೆ’ ಅಂತ ಹೇಳಿದನು. ಪ್ರಾರ್ಥನೆ ಬಗ್ಗೆ ಬೈಬಲ್‌ನಲ್ಲಿರೋ ಒಂದು ಮುಖ್ಯ ಸತ್ಯ ಇದು. ನೀವು ಬೈಬಲ್ ಓದ್ತಾ-ಓದ್ತಾ ಯೇಸು ಬಗ್ಗೆ ತಿಳ್ಕೊಂಡು ಆತನನ್ನ ಪ್ರೀತಿಸೋಕೆ ಶುರು ಮಾಡಿದೀರ. (ಯೋಹಾ. 14:21) ಆದ್ರೆ ಒಂದನೇ ಶತಮಾನದ ಕ್ರೈಸ್ತರು ಅರ್ಥ ಮಾಡ್ಕೊಂಡ ತರ ಯೆಹೋವನಿಗೂ ನಿಮ್ಮ ಮೇಲೆ ಪ್ರೀತಿ ಇದೆ ಅಂತ ನೀವೂ ಅರ್ಥ ಮಾಡ್ಕೊಳಿ. ಆತನಿಗೆ ಪ್ರಾರ್ಥನೆ ಮಾಡಿ. ನೀವು ಪ್ರತಿ ಸಾರಿ ಪ್ರಾರ್ಥನೆ ಮಾಡ್ವಾಗ ಯೆಹೋವ ನಿಮ್ಮನ್ನೂ ಪ್ರೀತಿಸ್ತಾನೆ ಅಂತ ನಂಬ್ತಿದ್ದೀರ ಅಂತ ತೋರಿಸಿ ಕೊಡ್ತೀರ.—1 ಯೋಹಾ. 5:14.
“ಅಪ್ಪನಿಗೂ ನಿಮ್ಮ ಮೇಲೆ ತುಂಬ ಪ್ರೀತಿಯಿದೆ” ಅಂತ ನೀವು ನಂಬಿ ಯೆಹೋವನಿಗೆ ಧೈರ್ಯವಾಗಿ ಪ್ರಾರ್ಥನೆ ಮಾಡಬೇಕು (ಪ್ಯಾರ 9-10 ನೋಡಿ)b
ಸಂಶಯ ಯಾಕೆ ಬರ್ತಿದೆ ಅಂತ ಅರ್ಥ ಮಾಡಿಕೊಳ್ಳಿ
11. ‘ಯೆಹೋವ ನಮ್ಮನ್ನ ಪ್ರೀತಿಸ್ತಾನಾ ಇಲ್ವಾ’ ಅಂತ ನಾವು ಸಂಶಯಪಟ್ರೆ ಸೈತಾನನಿಗೆ ಯಾಕೆ ಖುಷಿಯಾಗುತ್ತೆ?
11 ಯೆಹೋವ ನಮ್ಮನ್ನ ಪ್ರೀತಿಸಲ್ಲ ಅನ್ನೋ ಸಂಶಯ ಎಲ್ಲಿಂದ ಬರುತ್ತೆ? ಸೈತಾನನಿಂದ ಬರುತ್ತೆ ಅಂತ ನೀವು ಹೇಳಬಹುದು. ಒಂದರ್ಥದಲ್ಲಿ ಇದು ನಿಜಾನೇ. ಸೈತಾನ “ನಮ್ಮನ್ನ ನುಂಗೋಕೆ” ಪ್ರಯತ್ನ ಮಾಡ್ತಿದ್ದಾನೆ. ‘ಯೆಹೋವ ನನ್ನನ್ನ ಪ್ರೀತಿಸಲ್ಲ’ ಅಂತ ನಾವು ಅಂದ್ಕೊಂಡ್ರೆ ಮೊದ್ಲು ಕುಣಿದು ಕುಪ್ಪಳಿಸೋದು ಅವನೇ! (1 ಪೇತ್ರ. 5:8) ಆದ್ರೆ ಯೆಹೋವ ನಮ್ಮ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟು, ತನ್ನ ಒಬ್ಬನೇ ಮಗನನ್ನ ನಮಗೋಸ್ಕರ ಬಿಡುಗಡೆ ಬೆಲೆಯಾಗಿ ಕೊಟ್ಟನು. ಆದ್ರೆ ಇದನ್ನ ಪಡ್ಕೊಳೋಕೆ ನಾವು ಅಯೋಗ್ಯರು ಅಂತ ಅಂದ್ಕೊಬೇಕು ಅಂತ ಸೈತಾನ ಇಷ್ಟಪಡ್ತಾನೆ. (ಇಬ್ರಿ. 2:9) ಯೆಹೋವ ನಮ್ಮನ್ನ ಪ್ರೀತಿಸ್ತಾನೋ ಇಲ್ವೋ ಅಂತ ಸಂಶಯಪಟ್ರೆ, ಆತನಿಂದ ದೂರ ಹೋಗಿ ಆತನ ಸೇವೆ ಬಿಟ್ಟುಬಿಟ್ರೆ ಲಾಭ ಯಾರಿಗೆ? ಸೈತಾನನಿಗೆ! ಯೆಹೋವ ನಮ್ಮನ್ನ ಒಂಚೂರೂ ಪ್ರೀತಿಸಲ್ಲ ಅಂತ ನಾವು ನಂಬಬೇಕು ಅನ್ನೋದು ಸೈತಾನನ ಆಸೆ. ಆದ್ರೆ ಅದು ನಿಜ ಅಲ್ಲ! ನಿಜ ಹೇಳಬೇಕಂದ್ರೆ, ಯೆಹೋವ, ಸೈತಾನನ್ನ ಪ್ರೀತಿಸಲ್ಲ, ನಮ್ಮನ್ನ ತುಂಬ ಪ್ರೀತಿಸ್ತಾನೆ. ಇದು ಸೈತಾನನಿಗೂ ಚೆನ್ನಾಗಿ ಗೊತ್ತು. ಅದಕ್ಕೆ ಸೈತಾನ ತನ್ನ “ಕುತಂತ್ರಗಳನ್ನ” ಬಳಸಿ ಯೆಹೋವ ನಮ್ಮನ್ನ ಪ್ರೀತಿಸಲ್ಲ, ನಾವು ಯಾವುದಕ್ಕೂ ಲಾಯಕಿಲ್ಲ ಅಂತ ನಂಬಿಸೋಕೆ ಹರ ಸಾಹಸ ಮಾಡ್ತಿದ್ದಾನೆ. (ಎಫೆ. 6:11) ಆದ್ರೆ ನಾವು ಅವನ ಕುತಂತ್ರಗಳನ್ನ ತಿಳ್ಕೊಂಡ್ರೆ, “ಸೈತಾನನನ್ನ ವಿರೋಧಿಸಿ” ದೃಢವಾಗಿ ನಿಲ್ಲಬಹುದು.—ಯಾಕೋ. 4:7.
12-13. ನಮ್ಮಲ್ಲಿರೋ ಪಾಪ ಏನೆಲ್ಲ ಮಾಡಿಬಿಡುತ್ತೆ? ಉದಾಹರಣೆ ಕೊಡಿ.
12 ಯೆಹೋವ ನಮ್ಮನ್ನ ಪ್ರೀತಿಸ್ತಾನಾ ಇಲ್ವಾ ಅನ್ನೋ ಸಂಶಯ ಬರೋಕೆ ಇನ್ನೊಂದು ಕಾರಣನೂ ಇದೆ. ಅದು ನಮ್ಮಲ್ಲಿರೋ ಪಾಪ ಮತ್ತು ಅಪರಿಪೂರ್ಣತೆ. (ಕೀರ್ತ. 51:5; ರೋಮ. 5:12) ಪಾಪದಿಂದ ಯೆಹೋವನ ಜೊತೆ ನಮಗಿರೋ ಸಂಬಂಧ ಹಾಳಾಗಿದೆ. ಅಷ್ಟೇ ಅಲ್ಲ, ಇದ್ರಿಂದ ನಮ್ಮ ಯೋಚ್ನೆ, ಭಾವನೆ ಮತ್ತು ನಮ್ಮ ಆರೋಗ್ಯನೂ ಹಾಳಾಗಿದೆ.
13 ನಮ್ಮಲ್ಲಿರೋ ಪಾಪ ನಮ್ಮ ಭಾವನೆಗಳನ್ನ ತಪ್ಪು ದಾರಿಗೆ ನಡೆಸುತ್ತೆ. ಅದಕ್ಕೆ ನಾವು ತಪ್ಪು ಮಾಡಿದಾಗ ನಮ್ಮ ಮನಸ್ಸು ಚುಚ್ಚುತ್ತೆ, ನಮಗೆ ಭಯ, ನಾಚಿಕೆ ಮತ್ತು ಚಿಂತೆ ಆಗುತ್ತೆ. ಆದ್ರೆ ಇನ್ನು ಕೆಲವು ಸಲ ನಾವು ತಪ್ಪು ಮಾಡಿಲ್ಲ ಅಂದ್ರೂ ನಮ್ಮೊಳಗೆ ಪಾಪ ಇರೋದ್ರಿಂದ ಈ ಭಾವನೆಗಳು ನಮ್ಮನ್ನ ಕಿತ್ತು ತಿನ್ನುತ್ತೆ. (ರೋಮ. 8:20, 21) ಕಂಪನಿಯವರು ಎಷ್ಟೋ ಚೆನ್ನಾಗಿ ಕಾರನ್ನ ಮಾಡಿದ್ರೂ ಅದ್ರ ಟೈರ್ ಪಂಕ್ಚರಾದ್ರೆ ಆ ಕಾರು ಚೆನ್ನಾಗಿ ಓಡಲ್ಲ. ಕರೆಕ್ಟ್ ತಾನೇ? ಅದೇ ತರ, ಯೆಹೋವ ನಮ್ಮನ್ನ ಪರಿಪೂರ್ಣವಾಗಿ ಸೃಷ್ಟಿ ಮಾಡಿದ್ರೂ ಈಗ ನಮ್ಮಲ್ಲಿ ಪಾಪ ಮತ್ತು ಅಪರಿಪೂರ್ಣತೆ ಇರೋದ್ರಿಂದ, ನಾವು ಆತನಿಗೆ ಇಷ್ಟ ಆಗೋ ತರ ನಡ್ಕೊಳೋಕೆ ಕೆಲವೊಮ್ಮೆ ಆಗ್ತಿಲ್ಲ. ಅದಕ್ಕೇ ‘ಯೆಹೋವ ನನ್ನನ್ನ ನಿಜವಾಗಲೂ ಪ್ರೀತಿಸ್ತಾನಾ?’ ಅನ್ನೋ ಸಂಶಯ ಬರುತ್ತೆ. ಸಂಶಯ ಬಂದಾಗೆಲ್ಲ ಯೆಹೋವನು “ಮಹಾನ್ ದೇವರು, ಭಯವಿಸ್ಮಯ ಹುಟ್ಟಿಸೋನು, ನಿನ್ನನ್ನ ಪ್ರೀತಿಸಿ ನಿನ್ನ ಆಜ್ಞೆಗಳನ್ನ ಪಾಲಿಸೋರ ಜೊತೆ ಮಾಡ್ಕೊಂಡಿರೋ ಒಪ್ಪಂದವನ್ನ ನೀನು ಮುರಿಯಲ್ಲ. ಅವ್ರ ಕಡೆ ಶಾಶ್ವತ ಪ್ರೀತಿ ತೋರಿಸ್ತೀಯ” ಅನ್ನೋ ಮಾತುಗಳನ್ನ ನಾವು ನೆನಪಿಸ್ಕೋಬೇಕು.—ನೆಹೆ. 1:5.
14. ಬಿಡುಗಡೆ ಬೆಲೆ ಯೆಹೋವನ ಪ್ರೀತಿ ಬಗ್ಗೆ ಏನು ಕಲಿಸುತ್ತೆ? (ರೋಮನ್ನರಿಗೆ 5:8) (“ಪಾಪಕ್ಕಿರೋ ಮೋಸದ ಶಕ್ತಿಗೆ” ಬಲಿ ಬೀಳಬೇಡಿ ಅನ್ನೋ ಚೌಕ ನೋಡಿ.)
14 ಯೆಹೋವನ ಪ್ರೀತಿ ಪಡೆಯೋ ಯೋಗ್ಯತೆ ನಮಗಿಲ್ಲ ಅಂತ ನಮಗೆ ಆಗಾಗ ಅನಿಸಬಹುದು. ನಿಜ ಹೇಳಬೇಕಂದ್ರೆ, ಆ ಯೋಗ್ಯತೆ ನಮ್ಮಲ್ಲಿ ಯಾರಿಗೂ ಇಲ್ಲ! ನಾವು ಯಾವುದೇ ಕೆಲಸ ಮಾಡಿದ್ರೂ ಅಥವಾ ಅದೇನೇ ಮಾಡಿದ್ರೂ ಆ ಯೋಗ್ಯತೆ ಪಡೆಯೋಕೆ ನಮ್ಮಿಂದ ಆಗಲ್ಲ. ಆದ್ರೆ ಯೆಹೋವ ನಮ್ಮ ಮೇಲೆ ತುಂಬ ಪ್ರೀತಿ ಇಟ್ಟು, ನಮ್ಮನ್ನ ಪಾಪದಿಂದ ಬಿಡಿಸೋಕೆ ತನ್ನ ಮಗನನ್ನೇ ನಮಗೋಸ್ಕರ ಬಿಡುಗಡೆ ಬೆಲೆಯಾಗಿ ಕೊಟ್ಟಿದ್ದಾನೆ. (1 ಯೋಹಾ. 4:10) ನೆನಪಿಡಿ, ಯೇಸು ಈ ಭೂಮಿಗೆ ಬಂದಿದ್ದು ತಪ್ಪೇ ಮಾಡದಿರೋ ಜನ್ರಿಗೋಸ್ಕರ ಅಲ್ಲ! ತಪ್ಪು ಮಾಡಿರೋ ಪಾಪಿಗಳಿಗೋಸ್ಕರ, ಅವ್ರನ್ನ ರಕ್ಷಿಸೋಕೆ ಈ ಭೂಮಿಗೆ ಬಂದನು. (ರೋಮನ್ನರಿಗೆ 5:8 ಓದಿ.) ನಾವೆಲ್ರೂ ಜೀವನದಲ್ಲಿ ಒಂದಲ್ಲ ಒಂದು ತಪ್ಪು ಮಾಡ್ತೀವಿ. ಇದು ಯೆಹೋವನಿಗೆ ಗೊತ್ತಿದೆ. ನಮ್ಮಲ್ಲಿರೋ ಈ ಪಾಪ, ‘ಯೆಹೋವ ನನ್ನನ್ನ ಪ್ರೀತಿಸ್ತಾನಾ?’ ಅನ್ನೋ ಸಂಶಯ ಬರೋ ತರ ಮಾಡುತ್ತೆ ಅನ್ನೋದನ್ನ ನಾವು ಅರ್ಥ ಮಾಡ್ಕೋಬೇಕು. ಆಗ ನಾವಿದನ್ನ ಇನ್ನೂ ಧೈರ್ಯವಾಗಿ ಎದುರಿಸ್ತೀವಿ.—ರೋಮ. 7:24, 25.
ಯಾವಾಗ್ಲೂ ನಿಯತ್ತಾಗಿರಿ
15-16. ಯೆಹೋವನಿಗೆ ನಾವು ನಿಯತ್ತಾಗಿದ್ರೆ ಏನು ಪ್ರಯೋಜ್ನ? (2 ಸಮುವೇಲ 22:26)
15 ನಾವು ಯಾವಾಗ್ಲೂ ಸರಿಯಾದ ನಿರ್ಧಾರಗಳನ್ನ ಮಾಡ್ತಾ ಯೆಹೋವನಿಗೆ “ನಿಷ್ಠೆಯಿಂದ ಇರಬೇಕು” ಅಂತ ಆತನು ಆಸೆಪಡ್ತಾನೆ. (ಧರ್ಮೋ. 30:19, 20) ನಾವು ಹೀಗೆ ಮಾಡಿದ್ರೆ ಯೆಹೋವನೂ ನಮ್ಮ ಜೊತೆ ನಿಯತ್ತಾಗಿ ನಡ್ಕೊಳ್ತಾನೆ. (2 ಸಮುವೇಲ 22:26 ಓದಿ.) ನಾವು ಎಲ್ಲಿವರೆಗೂ ಯೆಹೋವನಿಗೆ ನಿಷ್ಠರಾಗಿ ಇರ್ತಿವೋ ಅಲ್ಲಿ ತನಕ ಯೆಹೋವ ನಮಗೆ ಸಹಾಯ ಮಾಡ್ತಾನೆ, ಕಷ್ಟಗಳನ್ನ ಎದುರಿಸೋಕೆ ಬಲ ಕೊಡ್ತಾನೆ.
16 ನಾವು ಈ ಲೇಖನದಲ್ಲಿ ಕಲಿತ ಹಾಗೆ ಬಿರುಗಾಳಿ ತರ ಕಷ್ಟಗಳು ಬಂದಾಗ, ಸ್ಥಿರವಾಗಿ ನಿಲ್ಲೋಕೆ ನಮಗೆ ಲಂಗರದಂತೆ ತುಂಬ ಕಾರಣಗಳಿವೆ. ಯೆಹೋವ ನಮ್ಮನ್ನ ಪ್ರೀತಿಸ್ತಾನೆ, ನಮಗೆ ಸಹಾಯ ಮಾಡ್ತಾನೆ ಅಂತ ಬೈಬಲ್ ಮಾತು ಕೊಟ್ಟಿದೆ. ‘ಯೆಹೋವ ನನ್ನನ್ನ ನಿಜವಾಗ್ಲೂ ಪ್ರೀತಿಸ್ತಾನಾ?’ ಅನ್ನೋ ಸಂಶಯ ಬಂದ್ರೆ, ನಿಮಗೆ ಹೇಗೆ ಅನಿಸುತ್ತೆ ಅನ್ನೋದಕ್ಕಿಂತ ಯೆಹೋವನ ಬಗ್ಗೆ ನಿಮಗೆ ಈಗಾಗಲೇ ಏನು ಗೊತ್ತು ಅನ್ನೋದ್ರ ಬಗ್ಗೆ ಯೋಚನೆ ಮಾಡಿ. ಯೆಹೋವನ ಪ್ರೀತಿ ಶಾಶ್ವತ ಅಂತ ಬೈಬಲ್ ಹೇಳುತ್ತೆ. ಇದನ್ನ ನಂಬೋಕೆ ನಮಗೆ ನೂರಾರು ಕಾರಣಗಳಿವೆ.
ಗೀತೆ 159 ಸ್ತುತಿ ಗೀತೆ ಹಾಡುವೆ
a ಬೇರೆ ಉದಾಹರಣೆಗಳು ಧರ್ಮೋಪದೇಶಕಾಂಡ 31:8, ಕೀರ್ತನೆ 94:14 ಮತ್ತು ಯೆಶಾಯ 49:15ರಲ್ಲಿದೆ.
b ಚಿತ್ರ ವಿವರಣೆ: ಕಾಯಿಲೆ ಬಿದ್ದ ಹೆಂಡ್ತಿನ ನೋಡ್ಕೊಳೋಕೆ, ವಿವೇಚನೆಯಿಂದ ಹಣ ಖರ್ಚು ಮಾಡೋಕೆ ಮತ್ತು ತನ್ನ ಮಗಳನ್ನ ಸತ್ಯದಲ್ಲಿ ಬೆಳೆಸೋಕೆ ಒಬ್ಬ ಸಹೋದರ ಪ್ರಾರ್ಥನೆ ಮಾಡ್ತಿದ್ದಾನೆ.