ಸ್ಮಾರಕ ಸಮಯದಲ್ಲಿ ‘ನಾವೇನಾಗಿದ್ದೇವೆಂದು ಪರೀಕ್ಷಿಸಿಕೊಳ್ಳುವುದು.’
“ನಾವು ಏನಾಗಿದ್ದೇವೆಂದು ಪರೀಕ್ಷಿಸಿಕೊಳ್ಳುವಲ್ಲಿ ನ್ಯಾಯವಿಚಾರಣೆಗೊಳಗಾಗೆವು. . . . ದಂಡನೆಗೆ ಗುರಿಯಾಗೆವು.”—1 ಕೊರಿಂಥದವರಿಗೆ. 11:31, 32.
1. ಸತ್ಯ ಕ್ರೈಸ್ತರು ಖಂಡಿತವಾಗಿ ಯಾವುದರಿಂದ ತಪ್ಪಲು ಬಯಸುವರು, ಮತ್ತು ಏಕೆ?
ಒಬ್ಬ ಕ್ರೈಸ್ತನು ಎಂದಿಗೂ ಬಯಸದ ವಿಷಯವು ಯೆಹೋವನಿಂದ ಪ್ರತಿಕೂಲ ತೀರ್ಪಿಗೆ ಒಳಗಾಗುವುದೇ. “ಸರ್ವ ಲೋಕಕ್ಕೆ ನ್ಯಾಯತೀರಿಸುವವ”ನನ್ನು ಅಸಮಾಧಾನಗೊಳಿಸುವುದು ನಾವು ‘ಲೋಕದೊಂದಿಗೆ ದಂಡನೆಗೆ ಗುರಿ’ಯಾಗುವುದಕ್ಕೆ ಮತ್ತು ರಕ್ಷಣಾ ನಷ್ಟಕ್ಕೆ ನಡಿಸೀತು. ನಮ್ಮ ನಿರೀಕ್ಷೆ ಯೇಸುವಿನೊಂದಿಗೆ ಸ್ವರ್ಗೀಯ ಜೀವನದ್ದಾಗಿರಲಿ ಅಥವಾ ಭೂಪ್ರಮೋದವನದಲ್ಲಿ ಅನಂತ ಜೀವನದ್ದಾಗಿರಲಿ, ಫಲಿತಾಂಶ ಇದೇ.—ಆದಿಕಾಂಡ 18:25; 1 ಕೊರಿಂಥದವರಿಗೆ 11:32.
2, 3. ಯಾವ ವಿಷಯದಲ್ಲಿ ನಮಗೆ ಪ್ರತಿಕೂಲ ತೀರ್ಪು ದೊರೆಯಬಹುದು ಮತ್ತು ಪೌಲನು ಇದರ ವಿಷಯ ಏನಂದನು?
2 1 ಕೊರಿಂಥದವರಿಗೆ 11 ನೇ ಅಧ್ಯಾಯದಲ್ಲಿ ಅಪೊಸ್ತಲ ಪೌಲನು ನಾವು ತೀರ್ಪಿಗೆ ಒಳಗಾಗಬಹುದಾದ ಒಂದು ಕ್ಷೇತ್ರದ ವಿಷಯ ಮಾತಾಡಿದನು. ಅವನ ಹೇಳಿಕೆಗಳು ಅಭಿಷಿಕ್ತ ಕ್ರೈಸ್ತರಿಗೆ ಸಂಬೋಧಿಸಲ್ಪಟ್ಟಿರುವುದಾದರೂ ಅವನ ಸಲಹೆಗಳು ಸರ್ವರಿಗೂ, ಮುಖ್ಯವಾಗಿ ಈ ಸಮಯದಲ್ಲಿ, ಪ್ರಾಮುಖ್ಯ. ನಾವೇನಾಗಿದ್ದೇವೆಂದು ಪರೀಕ್ಷಿಸಿ ಕೊಳ್ಳುವುದು ದೇವರ ಮನ್ನಣೆ ನಮಗೆ ದೊರಕುವಂತೆಯೂ ನಾವು ತೀರ್ಪಿಗೆ ಒಳಗಾಗದಂತೆ ಸಹಾಯ ಮಾಡಬಲ್ಲದು. ಕರ್ತನ ಸಂಧ್ಯಾ ಭೋಜನದ ವಾರ್ಷಿಕಾಚರಣೆಯನ್ನು ಚರ್ಚಿಸುತ್ತಾ ಪೌಲನು ಬರೆದದ್ದು:
3 “ಕರ್ತನಾದ ಯೇಸು ತಾನು ಒಪ್ಪಿಸಲ್ಪಡಲಿದ್ದ ರಾತ್ರಿಯಲ್ಲಿ, ಒಂದು ರೊಟ್ಟಿಯನ್ನು ತಕ್ಕೊಂಡು ಉಪಕಾರ ಸ್ತುತಿ ಮಾಡಿ, ‘ನಿಮ್ಮ ಪರವಾಗಿರುವ ನನ್ನ ದೇಹವೆಂದು ಇದರ ಅರ್ಥ. ನನ್ನ ಸ್ಮರಣಾರ್ಥವಾಗಿ ಇದನ್ನು ಮಾಡಿರಿ’ ಎಂದನು. ಸಂಧ್ಯಾ ಭೋಜನವಾದ ಬಳಿಕ ಅದೇ ರೀತಿ ಪಾತ್ರೆಯ ವಿಷಯದಲ್ಲೂ ಮಾಡಿ ಹೇಳಿದ್ದು: ‘ಈ ಪಾತ್ರೆ ನನ್ನ ರಕ್ತದ ಆಧಾರದ ಮೇಲಿರುವ ಹೊಸ ಒಡಂಬಡಿಕೆ ಎಂದರ್ಥ. ಇದನ್ನು ನೀವು ಕುಡಿಯುವಷ್ಟು ಸಲ ನನ್ನ ಸ್ಮರಣಾರ್ಥವಾಗಿ ಮಾಡುತ್ತಾ ಹೋಗಿರಿ.’ ಏಕೆಂದರೆ, ನೀವು ಈ ರೊಟ್ಟಿಯನ್ನು ತಿಂದು ಪಾತ್ರೆಯಲ್ಲಿ ಕುಡಿಯುವಷ್ಟು ಸಲ, ಕರ್ತನ ಮರಣವನ್ನು ಅವನು ಬರುವ ತನಕ ಘೋಷಿಸುತ್ತಾ ಇರುತ್ತೀರಿ.”—1 ಕೊರಿಂಥದವರಿಗೆ 11:23-26, NW.a
4. ಮಾರ್ಚ್ 30, 1991 ರ ಸಂಜೆ ಏನು ನಡೆಯುವುದು?
4 ಯೆಹೋವನ ಸಾಕ್ಷಿಗಳು ಮಾರ್ಚ್ 30, 1991ರ ಸೂರ್ಯಾಸ್ತಮಾನವಾದ ಮೇಲೆ ಕ್ರಿಸ್ತನ ಮರಣದ ಸ್ಮಾರಕವನ್ನು ಆಚರಿಸುವರು. ಸಾಮಾನ್ಯವಾಗಿ, ಒಂದು ಸಭೆಯೇ ಒಟ್ಟಾಗಿ ಕೂಡಿ ಬರುತ್ತದೆ. ಹೀಗೆ, ಇನ್ನೂ ಸಾಕ್ಷಿಗಳಾಗಿರದ ಜನರಿಗೂ ಅಲ್ಲಿ ಸ್ಥಳವಿರುವುದು. ಆ ಕೂಟ ಹೇಗಿರುತ್ತದೆ? ಬೈಬಲ್ ಭಾಷಣವಾದ ಬಳಿಕ, ಪ್ರಾರ್ಥನೆ ಮಾಡಿ, ರೊಟ್ಟಿಯನ್ನು ದಾಟಿಸಲಾಗುವುದು. ಪಾತ್ರೆ ದಾಟಿಸಲ್ಪಡುವ ಮೊದಲು ಇನ್ನೊಂದು ಪ್ರಾರ್ಥನೆಯಿರುವುದು. ಇದೊಂದು ವಿಧಿವಿಹಿತ ಸಂಸ್ಕಾರ ಅಥವಾ ಕಟ್ಟುನಿಟ್ಟಾದ ವಿಧಾನವಾಗಿರುವದರ ಬದಲು ರೊಟ್ಟಿ ಮತ್ತು ಪಾತ್ರೆಯ ಸಂಖ್ಯೆ ಮತ್ತು ಅದನ್ನು ದಾಟಿಸಲಾಗುವ ವಿಧ ಸ್ಥಳೀಕ ಪರಿಸ್ಥಿತಿಗೆ ಹೊಂದಿ ಕೊಂಡಿರುವುದು. ಮುಖ್ಯ ವಿಷಯವೇನಂದರೆ, ರೊಟ್ಟಿ ಮತ್ತು ಪಾತ್ರೆಯನ್ನು ಅಧಿಕಾಂಶ ಜನರು ಕೇವಲ ದಾಟಿಸಿ ಅದರಲ್ಲಿ ಪಾಲು ತೆಗೆದು ಕೊಳ್ಳದಿದ್ದರೂ ಅದು ಹಾಜರಿರುವ ಸರ್ವರಿಗೆ ದೊರಕ ಬೇಕು. ಆದರೆ ದಾಟಿಸುವುದು ಯಾವ ವಸ್ತುಗಳನ್ನು ಮತ್ತು ಅವುಗಳ ಅರ್ಥವೇನು? ಇದಲ್ಲದೆ, ನಾವೇನಾಗಿ ಇದ್ದೇವೆಂದು ಪರೀಕ್ಷಿಸುವ ಸಲುವಾಗಿ ಇದಕ್ಕೆ ಮೊದಲೇ ನಾವೇನನ್ನು ಪರಿಗಣಿಸಬೇಕು?
“ಇದು ನನ್ನ ದೇಹವೆಂದು ಅರ್ಥ”
5, 6. (ಎ)ಯೇಸು ರೊಟ್ಟಿಯನ್ನು ತಕ್ಕೊಂಡು ಏನು ಮಾಡಿದನು? (ಬಿ) ಅವನು ಯಾವ ವಿಧದ ರೊಟ್ಟಿಯನ್ನು ಉಪಯೋಗಿಸಿದನು?
5 ಸ್ಮಾರಕದ ವಿಷಯದಲ್ಲಿ ಪೌಲನು “ಕರ್ತನಿಂದ ಹೊಂದಿದ್ದು” ಏನೆಂಬದನ್ನು ನಾವು ಓದಿದ್ದೇವೆ. ಇದರ ಕುರಿತು ಮೂವರು ಸುವಾರ್ತಾ ಲೇಖಕರ ವೃತ್ತಾಂತಗಳೂ ಇವೆ. ಯೇಸು ಈ ಆಚರಣೆಯನ್ನು ಆರಂಭಿಸಿದಾಗ ಇವರಲ್ಲಿ ಒಬ್ಬನು ಅಲ್ಲಿ ಹಾಜರಾಗಿದ್ದನು. (1 ಕೊರಿಂಥದವರಿಗೆ 11:23; ಮತ್ತಾಯ 26:26-29; ಮಾರ್ಕ 14:22-25; ಲೂಕ 22:19, 20) ಯೇಸು ಮೊದಲು ರೊಟ್ಟಿಯನ್ನು ತಕ್ಕೊಂಡು ಪ್ರಾರ್ಥನೆ ಮಾಡಿ, ಮುರಿದು ಹಂಚಿದನೆಂದು ಈ ವೃತ್ತಾಂತಗಳು ತಿಳಿಸುತ್ತವೆ. ಆ ರೊಟ್ಟಿ ಯಾವುದು? ಇದಕ್ಕೆ ಹೊಂದಿಕೆಯಾಗಿ, ಇಂದು ಏನು ಉಪಯೋಗಿಸಲ್ಪಡುತ್ತದೆ? ಇದರ ಅರ್ಥವೇನು, ಅಥವಾ ಅದು ಯಾವುದನ್ನು ಪ್ರತಿನಿಧೀಕರಿಸುತ್ತದೆ?
6 ಯೆಹೂದಿ ಪಸ್ಕದೂಟದ ವಸ್ತುಗಳು ಅಲ್ಲಿದ್ದವು. ಇದರಲ್ಲಿ ಒಂದು ಹುಳಿರಹಿತ ರೊಟ್ಟಿ. ಇದನ್ನು ಮೋಶೆ, “ಕಷ್ಟವನ್ನು ಸೂಚಿಸುವ ಹುಳಿಯಿಲ್ಲದ ರೊಟ್ಟಿ” ಎಂದು ಕರೆದನು. (ಧರ್ಮೋಪದೇಶಕಾಂಡ 16:3; ವಿಮೋಚನಕಾಂಡ 12:8) ಇದನ್ನು ಗೋಧಿಹಿಟ್ಟಿನಿಂದ ಹುಳಿ, ಉಪ್ಪು ಅಥವಾ ರುಚಿಕಾರಕ ವಸ್ತುಗಳಿಲ್ಲದೆ ಮಾಡಲಾಗುತ್ತಿತ್ತು. ಹುಳಿಹಿಡಿಸದ (ಹಿಬ್ರು, ಮಾಟ್ಸಾ) ರೊಟ್ಟಿಯಾಗಿದ್ದುದರಿಂದ ಅದು ಚಪ್ಪಟೆಯೂ ಭಿದುರವೂ ಆಗಿತ್ತು. ತಿನ್ನುವ ಗಾತ್ರಕ್ಕೆ ಅದನ್ನು ಒಡೆಯಬೇಕಾಗಿತ್ತು.—ಮಾರ್ಕ 6:41; 8:6; ಅಪೊಸ್ತಲರ ಕೃತ್ಯ 27:35.
7. ಸ್ಮಾರಕದಲ್ಲಿ ಯೆಹೋವನ ಸಾಕ್ಷಿಗಳು ರೊಟ್ಟಿಯಾಗಿ ಯಾವುದನ್ನು ಉಪಯೋಗಿಸುತ್ತಾರೆ?
7 ಕರ್ತನ ರಾತ್ರಿ ಭೋಜನದಲ್ಲಿ ಯೇಸು ಹುಳಿ ಹಿಡಿಸದ ರೊಟ್ಟಿಯನ್ನು ಉಪಯೋಗಿಸಿದರ್ದಿಂದ ಇಂದು ಯೆಹೋವನ ಸಾಕ್ಷಿಗಳೂ ಹಾಗೆಯೇ ಉಪಯೋಗಿಸುತ್ತಾರೆ. ಯೆಹೂದ್ಯರು ಸಾಧಾರಣವಾಗಿ ಉಪಯೋಗಿಸುವ ಮ್ಯಾಟ್ಸಾತ್ ರೊಟ್ಟಿ, ಅದರಲ್ಲಿ ಮೊಳೆಧಾನ್ಯ, ಈರುಳ್ಳಿ ಅಥವಾ ಮೊಟ್ಟೆ ಹಾಕಲ್ಪಡದಿರುವಲ್ಲಿ (ಇವುಗಳು ಸೇರಿರುವ ಮ್ಯಾಟ್ಸಾತ್ “ಕಷ್ಟವನ್ನು ಸೂಚಿಸುವ” ರೊಟ್ಟಿಯ ವರ್ಣನೆಗೆ ಸದೃಶ್ಯವಾಗಿರದು.) ಇದಕ್ಕೆ ಯೋಗ್ಯವಾಗಿದೆ. ಅಥವಾ ಇನ್ನಾರಾದರೂ ಗೋಧಿಹಿಟ್ಟಿಗೆ ನೀರು ಸೇರಿಸಿರುವ ನಾದಿದ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿ ಮಾಡುವಂತೆ ಸಭೆಯ ಹಿರಿಯರು ಏರ್ಪಡಿಸಬಹುದು. ಗೋಧಿ ಹಿಟ್ಟು ಸಿಕ್ಕದಿರುವಲ್ಲಿ ಹುಳಿಹಿಡಿಸದ ರೊಟ್ಟಿಯನ್ನು ಬಾರ್ಲಿ, ಅಕ್ಕಿ, ಜೋಳ ಅಥವಾ ಇತರ ಧಾನ್ಯದ ಹಿಟ್ಟಿನಿಂದ ಮಾಡಬಹುದು. ನಾದಿದ ಹಿಟ್ಟನ್ನು ತೆಳುವಾಗಿ ಲಟಿಸ್ಟಿ ತುಸು ಎಣ್ಣೆ ಸವರಿದ ಕುಕಿಂಗ್ ಶೀಟಿನಲ್ಲಿ ಸುಡಲಾಗುತ್ತದೆ.
8. ಹುಳಿಯಿಲ್ಲದ ರೊಟ್ಟಿ ಯೋಗ್ಯವಾದ ಚಿಹ್ನೆಯೇಕೆ ಮತ್ತು ಅದರಲ್ಲಿ ಪಾಲಿಗರಾಗುವುದು ಏನನ್ನು ಸೂಚಿಸುತ್ತದೆ? (ಇಬ್ರಿಯರಿಗೆ 10:5-7; 1 ಪೇತ್ರ 4:1)
8 ಇಂಥ ರೊಟ್ಟಿ ಯೋಗ್ಯವಾಗಿದೆ, ಏಕೆಂದರೆ ಇದರಲ್ಲಿ ಬೈಬಲಿನಲ್ಲಿ ಭ್ರಷ್ಟತೆ ಅಥವಾ ಪಾಪವನ್ನು ಸೂಚಿಸುವ ಹುಳಿ (ಕಿಣ್ವ) ಇಲ್ಲ. ಸಭೆಯಲ್ಲಿದ್ದ ಒಬ್ಬ ದುರಾಚಾರಿಯ ಕುರಿತು ಪೌಲನಂದದ್ದು: “ಸ್ವಲ್ಪ ಹುಳಿ ಕಲಸಿದರೆ ಕಣಿಕವೆಲ್ಲಾ ಹುಳಿಯಾಗುತ್ತದೆಂಬದು ನಿಮಗೆ ತಿಳಿಯದೋ? ನೀವು ಹುಳಿಯಿಲ್ಲದವರೆನಿಸಿಕೊಂಡದ್ದರಿಂದ ಹಳೇ ಹುಳಿಯನ್ನು ತೆಗೆದು ಹಾಕಿ ಹೊಸ ಕಣಿಕದಂತಾಗಿರಿ. ಯಾಕಂದರೆ ನಮ್ಮ ಪಸ್ಕದ ಕುರಿಯು ಕೊಯಿದದೆ. ಅದಾವದಂದರೆ ಕ್ರಿಸ್ತನೇ. ಆದಕಾರಣ ನಾವು ಹಳೇ ಹುಳಿಯನ್ನು ಅಂದರೆ ದುರ್ಮಾರ್ಗತ್ವ, ದುಷ್ಟತ್ವ, ಎಂಬ ಹುಳಿಯನ್ನು ಇಟ್ಟುಕೊಳ್ಳದೆ ಸರಳತೆ ಸತ್ಯತೆ ಎಂಬ ಹುಳಿಯಿಲ್ಲದ ರೊಟ್ಟಿಯನ್ನೇ ತೆಗೆದುಕೊಂಡು ಹಬ್ಬವನ್ನು ಆಚರಿಸೋಣ.” (1 ಕೊರಿಂಥದವರಿಗೆ 5:6-8; ಇದಕ್ಕೆ ಮತ್ತಾಯ 13:33; 16:6, 12 ಹೋಲಿಸಿ.) ಹುಳಿಯಿಲ್ಲದ ರೊಟ್ಟಿ ಯೇಸುವಿನ ಮಾನವ ದೇಹದ ಯೋಗ್ಯ ಸಂಕೇತವೇ ಸರಿ, ಏಕೆಂದರೆ ಅವನು “ಪರಿಶುದ್ಧನೂ ನಿರ್ದೋಷಿಯೂ ನಿಷ್ಕಲಂಕನೂ ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವವನೂ” ಆಗಿದ್ದನು. (ಇಬ್ರಿಯ 7:26) ತನ್ನ ಅಪೊಸ್ತಲರಿಗೆ “ಈ [ರೊಟ್ಟಿಯನ್ನು] ತಕ್ಕೊಂಡು ತಿನ್ನಿರಿ. ನನ್ನ ದೇಹವೆಂದು ಇದರ ಅರ್ಥ” ಎಂದು ಹೇಳಿದಾಗ ಯೇಸು ತನ್ನ ಪರಿಪೂರ್ಣ ಮಾನವ ದೇಹದಲ್ಲಿ ಅಲ್ಲಿ ಹಾಜರಿದ್ದನು. (ಮತ್ತಾಯ 26:26, ಜೇಮ್ಸ್ ಮೊಫಟರ ಎ ನ್ಯೂ ಟ್ರಾನ್ಸ್ಲೇಶನ್ ಆಫ್ ದ ಬೈಬಲ್) ರೊಟ್ಟಿಯಲ್ಲಿ ಪಾಲು ತಕ್ಕೊಳ್ಳುವುದೆಂದರೆ ಒಬ್ಬನು ತನ್ನ ಪರವಾಗಿ ಯೇಸುವಿನ ಯಜ್ಞದ ಪ್ರಯೋಜನಗಳಲ್ಲಿ ನಂಬಿ ಅವುಗಳನ್ನು ಅಂಗೀಕರಿಸುತ್ತಾನೆ ಎಂದರ್ಥ. ಆದರೂ, ಇದಕ್ಕಿಂತ ಹೆಚ್ಚಿನದ್ದು ಅದರಲ್ಲಿ ಸೇರಿದೆ.
ಅರ್ಥಪೂರ್ಣ ದ್ರಾಕ್ಷಾಮದ್ಯ
9. ಇನ್ಯಾವ ದ್ಯೋತಕವನ್ನು ಉಪಯೋಗಿಸಬೇಕೆಂದು ಯೇಸು ಹೇಳಿದನು?
9 ಯೇಸು ಇನ್ನೊಂದು ಸಂಕೇತ ಸೂಚಕವನ್ನು ಉಪಯೋಗಿಸಿದನು: “ಅವನು ಒಂದು ಪಾತ್ರೆಯನ್ನು ತಕ್ಕೊಂಡು, ಉಪಕಾರ ಸ್ತುತಿ ಮಾಡಿದ ಮೇಲೆ ಅವರಿಗೆ ಕೊಡುತ್ತಾ ಹೇಳಿದ್ದು, ನೀವೆಲ್ಲರೂ ಇದರಿಂದ ಕುಡಿಯಿರಿ. ಇದು ನನ್ನ ರಕ್ತ, ನೂತನ ಒಡಂಬಡಿಕೆಯ ರಕ್ತ, ಪಾಪಗಳ ಕ್ಷಮೆ ಗಳಿಸಲಿಕ್ಕಾಗಿ ಅನೇಕರ ಪರವಾಗಿ ಸುರಿಸಲಾಗುವ ರಕ್ತವೆಂದು ಅರ್ಥ.” (ಮತ್ತಾಯ 26:27, 28, ಮೊಫಟ್) ಅವನು ದಾಟಿಸಿದ ಆ ಸಾಮುದಾಯಿಕ ಪಾತ್ರೆಯಲ್ಲಿ ಏನಿತ್ತು ಮತ್ತು ನಾವು ಏನಾಗಿದ್ದೇವೆಂದು ಪರೀಕ್ಷಿಸಲು ಪ್ರಯತ್ನಿಸುವಾಗ ನಮಗೆ ಇದು ಯಾವ ಅರ್ಥದಲ್ಲಿದೆ?
10. ಯೆಹೂದಿ ಪಸ್ಕದೊಳಗೆ ದ್ರಾಕ್ಷಾಮದ್ಯ ಹೇಗೆ ಬಂತು?
10 ಮೋಶೆ ಆರಂಭದಲ್ಲಿ ಪಸ್ಕ ಹಬ್ಬದ ಹೊರ ಮೇರೆಯನ್ನು ಕೊಟ್ಟಾಗ ಅವನು ಯಾವ ಪಾನೀಯವನ್ನೂ ಹೆಸರಿಸಲಿಲ್ಲ. ದ್ರಾಕ್ಷಾಮದ್ಯವನ್ನು ಬಹು ಸಮಯಾನಂತರ, ಪ್ರಾಯಶಃ, ಸಾ. ಶ. ಪೂ. ಎರಡನೇ ಶತಮಾನದಲ್ಲಿ ಪಸ್ಕಕ್ಕೆ ಪರಿಚಯಿಸಲಾಯಿತೆಂದು ಅನೇಕ ತಜ್ಞರ ಅಭಿಪ್ರಾಯ.b ಹೇಗೂ, ಈ ಊಟದ ಸಮಯದಲ್ಲಿ ದ್ರಾಕ್ಷಾ ಮದ್ಯ ಒಂದನೇ ಶತಮಾನದಲ್ಲಿ ಮಾಮೂಲಿಯಾಗಿತ್ತು ಮತ್ತು ಯೇಸು ಇದಕ್ಕೆ ಆಕ್ಷೇಪವೆತ್ತಲಿಲ್ಲ. ಸ್ಮಾರಕವನ್ನು ಸ್ಥಾಪಿಸಿದಾಗ ಅವನು ಪಸ್ಕದ ದ್ರಾಕ್ಷಾಮದ್ಯವನ್ನು ಉಪಯೋಗಿಸಿದನು.
11. ಯಾವ ರೀತಿಯ ದ್ರಾಕ್ಷಾಮದ್ಯವನ್ನು ಉಪಯೋಗಿಸುವುದು ಕರ್ತನ ಸಂಧ್ಯಾ ಭೋಜನದ ವೇಳೆ ಯೋಗ್ಯವಾಗಿದೆ?
11 ಯೆಹೂದಿ ಪಸ್ಕ ದ್ರಾಕ್ಷೆಯ ಕೊಯ್ಲು ಮುಗಿದು ಬಹು ಸಮಯವಾದ ಬಳಿಕ ಬರುತ್ತಿದ್ದರಿಂದ ಯೇಸು ಹುಳಿಹಿಡಿಸದ ದ್ರಾಕ್ಷಾರಸವನ್ನಲ್ಲ, ತನ್ನ ರಕ್ತವನ್ನು ಸುಲಭವಾಗಿ ಪ್ರತಿನಿಧೀಕರಿಸುವ ಕೆಂಪು ದ್ರಾಕ್ಷಾಮದ್ಯವನ್ನು ಉಪಯೋಗಿಸಿದ್ದಿರಬೇಕು. (ಪ್ರಕಟನೆ 14:20 ಹೋಲಿಸಿ.) ಕ್ರಿಸ್ತನ ರಕ್ತಕ್ಕೆ ಏನನ್ನೂ ಸೇರಿಸುವ ಅಗತ್ಯವಿರಲಿಲ್ಲ. ಆದುದರಿಂದ, ಬ್ರಾಂಡಿಯನ್ನು ಸೇರಿಸಿ ಮಾಡಿದ ದ್ರಾಕ್ಷಾಮದ್ಯ (ಪೋರ್ಟ್, ಶೆರಿ, ಮಸ್ಕೆಟೆಲ್ ಮುಂತಾದವುಗಳಂತೆ) ದ ಬದಲಿಗೆ ಅಥವಾ ಮಸಾಲೆ ಅಥವಾ ಮೂಲಿಕೆಗಳನ್ನು ಸೇರಿಸಿ ಮಾಡಿದ ದ್ರಾಕ್ಷಾಮದ್ಯ (ವೆರ್ಮೂತ್, ಡುಬೋನ್ ಮತ್ತು ಇತರ ಅನೇಕ ದ್ರಾಕ್ಷಾಮದ್ಯಗಳಂತೆ) ದ ಬದಲಿಗೆ ಸಾದಾ ದ್ರಾಕ್ಷಾಮದ್ಯ ಯೋಗ್ಯವಾಗಿದೆ. ಆದರೆ ದ್ರಾಕ್ಷಾಮದ್ಯವನ್ನು ಹೇಗೆ ತಯಾರಿಸಿದ್ದಾರೆ, ಹುಳಿಸುವ ಸಮಯದಲ್ಲಿ ಸಾದಾ ರುಚಿ ಮತ್ತು ಮದ್ಯಸಾರವಿರುವಂತೆ ಸ್ವಲ್ಪ ಸಕ್ಕರೆ ಸೇರಿಸಿದ್ದಾರೋ, ಮತ್ತು ಹಾಳಾಗದಂತೆ ತಡೆಯಲು ಸ್ವಲ್ಪ ಗಂಧಕ ಸೇರಿಸಿದ್ದಾರೋ ಎಂಬ ವಿಷಯ ನಾವು ಚಿಂತಿತರಾಗುವ ಅವಶ್ಯವಿಲ್ಲ.c ಅನೇಕ ಸಭೆಗಳು ಮಾರಾಟದ ಕೆಂಪು ದ್ರಾಕ್ಷಾಮದ್ಯ (ಶಿಯಾಂಟಿ, ಬರ್ಗಂಡಿ, ಬ್ಯುಜೋಲೆ ಅಥವಾ ಕಾರ್ಲಿಟ್ನಂಥಾ)ವನ್ನು ಅಥವಾ ಗೃಹನಿರ್ಮಿತ ಕೆಂಪು ದ್ರಾಕ್ಷಾಮದ್ಯವನ್ನು ಉಪಯೋಗಿಸುತ್ತಾರೆ. ದ್ರಾಕ್ಷಾರಸ ಮತ್ತು ರೊಟ್ಟಿ ಕೇವಲ ಚಿಹ್ನೆ ಅಥವಾ ಸಂಕೇತವಾಗಿದೆ. ಆದುದರಿಂದ, ಉಪಯೋಗಿಸಲ್ಪಡದೆ ಇರುವ ಈ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋಗಿ, ಆ ಬಳಿಕ ಇತರ ಆಹಾರ ಪಾನೀಯಗಳಂತೆ ಉಪಯೋಗಿಸಬಹುದು.
12. ದ್ರಾಕ್ಷಾಮದ್ಯಕ್ಕೆ ಯಾವ ಸೂಚಕಾರ್ಥವಿದೆಯೆಂದು ಯೇಸು ವಿವರಿಸಿದನು?
12 ಪಸ್ಕದ ರಾತ್ರಿಯಲ್ಲಿ ಯೇಸು ರಕ್ತದ ಕುರಿತು ಮಾತಾಡಿದ ವಿಷಯವು ಈಜಿಪ್ಟಿನಲ್ಲಿ ಕುರಿಮರಿಯ ರಕ್ತವನ್ನು ಜ್ಞಾಪಕಕ್ಕೆ ತಂದಿರಬಹುದು. ಆದರೆ ಯೇಸು ಪ್ರತ್ಯೇಕವಾದ ಇನ್ನೊಂದು ಉಪಮೆಯನ್ನು ಕೊಟ್ಟನೆಂದು ಗಮನಿಸಿರಿ: “ಈ ಪಾತ್ರೆಯೆಂದರೆ, ಯಾವುದು ನಿಮ್ಮ ಪರವಾಗಿ ಸುರಿಸಲ್ಪಡಲಿದೆಯೇ ಆ ನನ್ನ ರಕ್ತದ ಆಧಾರದ ಮೇಲಿರುವ ಹೊಸ ಒಡಂಬಡಿಕೆ.” (ಲೂಕ 22:20, NW) ದೇವರು ಈ ಮೊದಲು ಮಾಂಸಿಕ ಇಸ್ರಾಯೇಲ್ ಜನಾಂಗದೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿದ್ದನು ಮತ್ತು ಅದನ್ನು ಪ್ರಾಣಿ ಯಜ್ಞಗಳ ರಕ್ತದಿಂದ ಉದ್ಘಾಟಿಸಲಾಗಿತ್ತು. ಆ ಯಜ್ಞಗಳ ಮತ್ತು ಯೇಸುವಿನ ಯಜ್ಞದ ಮಧ್ಯೆ ಅನುರೂಪತೆ ಇತ್ತು. ದೇವರು ಒಂದು ಒಡಂಬಡಿಕೆಯನ್ನು ತನ್ನ ಜನಾಂಗದೊಂದಿಗೆ ಉದ್ಘಾಟಿಸಿದರಲ್ಲಿ ಇವೆರಡೂ ಸೇರಿದ್ದವು. (ವಿಮೋಚನಕಾಂಡ 24:3-8; ಇಬ್ರಿಯ 9:17-20) ಮಾಂಸಿಕ ಇಸ್ರಾಯೇಲ್ಯರಿಗೆ ಒಂದು ರಾಜ-ಯಾಜಕ ಜನಾಂಗವನ್ನುಂಟುಮಾಡುವ ಪ್ರತೀಕ್ಷೆಯನ್ನು ಕೊಡುವುದೇ ಧರ್ಮ ಶಾಸ್ತ್ರದ ಒಡಂಬಡಿಕೆಯ ಒಂದು ಭಾಗವಾಗಿತ್ತು. (ವಿಮೋಚನಕಾಂಡ 19:5, 6) ಆದರೆ, ಇಸ್ರಾಯೇಲು ಯೆಹೋವನ ಒಡಂಬಡಿಕೆ ಪಾಲಿಸಲು ತಪ್ಪಿದ ಕಾರಣ, ಆತನು “ಮೊದಲನೆಯ ಒಡಂಬಡಿಕೆಯ” ಸ್ಥಾನದಲ್ಲಿ “ಹೊಸ ಒಡಂಬಡಿಕೆಯನ್ನು” ತರುವನೆಂದು ಹೇಳಿದನು. (ಇಬ್ರಿಯ 9:1, 15; ಯೆರೆಮೀಯ 31:31-34) ಯೇಸು ತನ್ನ ನಂಬಿಗಸ್ತ ಅಪೊಸ್ತಲರ ಮಧ್ಯೆ ಈಗ ದಾಟಿಸಿದ ದ್ರಾಕ್ಷಾಮದ್ಯದ ಪಾತ್ರೆ ಈ ಹೊಸ ಒಡಂಬಡಿಕೆಯನ್ನು ಪ್ರತಿನಿಧೀಕರಿಸಿತು.
13, 14. (ಎ)ಹೊಸ ಒಡಂಬಡಿಕೆಯಲ್ಲಿರುವುದು ಎಂಬದರ ಅರ್ಥವೇನು? (ಬಿ) ಒಬ್ಬನು ದ್ಯೋತಕಗಳಲ್ಲಿ ಪಾಲಿಗನಾಗುವುದು ಏನನ್ನು ಸೂಚಿಸುತ್ತದೆ?
13 ಈ ಹೊಸ ಒಡಂಬಡಿಕೆಯೊಳಗೆ ತರಲ್ಪಡುವ ಕ್ರೈಸ್ತರು ರಾಜ-ಯಾಜಕರ ಆತ್ಮಿಕ ಜನಾಂಗವಾಗುತ್ತಾರೆ. (ಗಲಾತ್ಯದವರಿಗೆ 6:16) ಅಪೊಸ್ತಲ ಪೇತ್ರನು ಬರೆದುದು: “ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾಶಿಶಯಗಳನ್ನು ಪ್ರಚಾರ ಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ ರಾಜ ವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸಕ್ವೀಯ ಪ್ರಜೆಯೂ ಆಗಿರುತ್ತೀರಿ.” (1 ಪೇತ್ರ 2:9) ಅವರು ಪಡೆಯುವ ರಕ್ಷಣೆ, ಯೇಸುವಿನ ಜೊತೆ ಪ್ರಭುಗಳಾಗಿ ಸ್ವರ್ಗ ಜೀವಿತವನ್ನು ಅನುಭವಿಸುವುದೆಂಬದು ಸ್ಪಷ್ಟ . ಇದನ್ನು ಪ್ರಕಟನೆ 20:6 ದೃಢೀಕರಿಸಿ ಹೇಳುವುದು: “ಪ್ರಥಮ ಪುನರುತ್ಥಾನದಲ್ಲಿ ಸೇರಿರುವವನು ಧನ್ಯನೂ ಪರಿಶುದ್ಧನೂ ಆಗಿದ್ದಾನೆ. . . . ಅವರು ದೇವರಿಗೂ ಕ್ರಿಸ್ತನಿಗೂ ಯಾಜಕರಾಗಿ ಕ್ರಿಸ್ತನೊಂದಿಗೆ ಆ ಸಾವಿರ ವರುಷ ಆಳುವರು.”
14 ವಾಸ್ತವವೇನಂದರೆ, ಅಪೊಸ್ತಲರು ಸಾಂಕೇತಿಕ ರೊಟ್ಟಿ ಮತ್ತು ದ್ರಾಕ್ಷಾಮದ್ಯದಲ್ಲಿ ಪಾಲು ತಕ್ಕೊಳ್ಳುವಂತೆ ನಿರ್ದೇಶಿಸಿದ ಬಳಿಕ ಯೇಸು ಅವರಿಗೆ, ಅವರು ‘ತನ್ನ ರಾಜ್ಯದಲ್ಲಿ ತನ್ನ ಮೇಜಿನಲ್ಲಿ ತಿಂದು, ಕುಡಿದು, ಸಿಂಹಾಸನಗಳ ಮೇಲೆ ಕುಳಿತು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವರು’ ಎಂದು ಹೇಳಿದನು. (ಲೂಕ 22:28-30) ಈ ಕಾರಣದಿಂದ, ಸ್ಮಾರಕದ ಸಂಕೇತ ವಸ್ತುಗಳಲ್ಲಿ ಪಾಲು ತೆಗೆದು ಕೊಳ್ಳುವುದು ಕೇವಲ ಯೇಸುವಿನ ಯಜ್ಞದಲ್ಲಿ ನಂಬುವದಕ್ಕಿಂತಲೂ ಹೆಚ್ಚು ಮಹತ್ವದ್ದು. ಪ್ರತಿಯೊಬ್ಬ ಕ್ರೈಸ್ತನು, ಅವನು ಎಲ್ಲಿಯೇ ನಿತ್ಯ ಜೀವ ಪಡೆಯಲಿ, ಪ್ರಾಯಶ್ಚಿತ್ತ ಯಜ್ಞವನ್ನು ಅಂಗೀಕರಿಸಿ ಅದರಲ್ಲಿ ನಂಬ ತಕ್ಕದ್ದು. (ಮತ್ತಾಯ 20:28; ಯೋಹಾನ 6:51) ಆದರೆ ಈ ದ್ಯೋತಕಗಳಲ್ಲಿ ಪಾಲು ತಕ್ಕೊಳ್ಳುವುದು ಒಬ್ಬನು ಹೊಸ ಒಡಂಬಡಿಕೆಯೊಳಗೆ ಇದ್ದಾನೆಂದೂ ಯೇಸುವಿನೊಂದಿಗೆ ರಾಜ್ಯದಲ್ಲಿ ಇರಲು ಆರಿಸಲ್ಪಟ್ಟಿದ್ದಾನೆಂದೂ ಸೂಚಿಸುತ್ತದೆ.
ಸ್ಮಾರಕ ಸಮಯದಲ್ಲಿ ಪರೀಕ್ಷಿಸಿಕೊಳ್ಳುವ ಆವಶ್ಯಕತೆ
15. ಯೇಸು ದೇವರ ಸೇವಕರುಗಳಿಗೆ ಹೊಸ ನಿರೀಕ್ಷೆಯನ್ನು ಹೇಗೆ ಪರಿಚಯಿಸಿದನು?
15 ಹಿಂದಿನ ಲೇಖನ ವಿಶದೀಕರಿಸಿರುವಂತೆ, ಯೇಸುವಿನ ಸಮಯಕ್ಕೆ ಮೊದಲು ದೇವರ ನಿಷ್ಠ ಸೇವಕರುಗಳಿಗೆ ಸ್ವರ್ಗಕ್ಕೆ ಹೋಗುವ ನಿರೀಕ್ಷೆ ಇರಲಿಲ್ಲ. ಅವರು ಮಾನವ ಕುಲದ ಮೂಲ ಬೀಡಾದ ಭೂಮಿಯ ಮೇಲೆ ಅನಂತ ಜೀವನ ಪಡೆಯಲು ಮುನ್ನೋಡುತ್ತಿದ್ದರು. ಆತ್ಮವಾಗಿ ಪುನರುತ್ಥಾನ ಮಾಡಲ್ಪಟ್ಟವರಲ್ಲಿ ಮೊದಲಿಗನು ಯೇಸು ಕ್ರಿಸ್ತನು ಮತ್ತು ಮನುಷ್ಯ ವರ್ಗದವರಿಂದ ಸ್ವರ್ಗಕ್ಕೆ ಒಯ್ಯಲ್ಪಟ್ಟವರಲ್ಲೂ ಅವನೇ ಪ್ರಥಮನು. (ಎಫೆಸದವರಿಗೆ 1:20-22; 1 ಪೇತ್ರ 3:18, 22) ಇದನ್ನು ದೃಢೀಕರಿಸುತ್ತಾ ಪೌಲನು ಬರೆದದ್ದು: “ಯೇಸು ನಮಗೋಸ್ಕರ ಪ್ರತಿಷ್ಠಿಸಿದ ಜೀವವುಳ್ಳ ಹೊಸ ದಾರಿಯಲ್ಲಿ ಆತನ ರಕ್ತದ ಮೂಲಕ . . . ಪ್ರವೇಶಿಸುವುದಕ್ಕೆ ನಮಗೆ ಧೈರ್ಯವುಂಟಾಯಿತು.” (ಇಬ್ರಿಯ 10:19, 20) ಯೇಸು ಈ ಮಾರ್ಗವನ್ನು ತೆರೆದ ಬಳಿಕ ಅವನನ್ನು ಹಿಂಬಾಲಿಸಿ ಯಾರು ಹೋಗುವರು?
16. ರೊಟ್ಟಿ, ದ್ರಾಕ್ಷಾಮದ್ಯಗಳಲ್ಲಿ ಪಾಲು ತಕ್ಕೊಳ್ಳುವವರಿಗೆ ಭವಿಷ್ಯದಲ್ಲಿ ಏನು ಕಾದಿದೆ?
16 ಯೇಸು, ಕರ್ತನ ಸಂಧ್ಯಾ ಭೋಜನವನ್ನು ಆರಂಭಿಸಿದ ರಾತ್ರಿ, ಅಪೊಸ್ತಲರಿಗೆ ತಾನು ಸ್ವರ್ಗದಲ್ಲಿ ಅವರಿಗಾಗಿ ಸ್ಥಳವನ್ನು ಸಿದ್ಧಪಡಿಸುತ್ತಿದ್ದೇನೆಂದು ಹೇಳಿದನು. (ಯೋಹಾನ 14:2, 3) ಆದರೆ ಯೇಸು, ರೊಟ್ಟಿ ಮತ್ತು ಪಾತ್ರೆಯಲ್ಲಿ ಪಾಲು ತೆಗೆದುಕೊಳ್ಳುತ್ತಿದ್ದವರಿಗೆ ಅವರು ಅವನೊಂದಿಗೆ ರಾಜ್ಯದಲ್ಲಿರುವರೆಂದೂ ಸಿಂಹಾಸನಗಳ ಮೇಲೆ ಕುಳಿತು ನ್ಯಾಯ ತೀರಿಸುವರೆಂದು ಹೇಳಿದ್ದನ್ನೂ ಜ್ಞಾಪಿಸಿಕೊಳ್ಳಿರಿ. ಹಾಗಾದರೆ ಇವರಲ್ಲಿ ಅಪೊಸ್ತಲರು ಮಾತ್ರ ಇರುವರೋ? ಇಲ್ಲ, ಅಪೊಸ್ತಲ ಯೋಹಾನನಿಗೆ, ಸಮಯಾನಂತರ, ಇತರ ಕ್ರೈಸ್ತರೂ ಜಯಿಸಿ, ‘ಯೇಸುವಿನೊಂದಿಗೆ ಅವನ ಸಿಂಹಾಸನದಲ್ಲಿ ಕುಳಿತುಕೊಂಡು’, ಹೀಗೆ ಅವರೆಲ್ಲರೂ ಕೂಡಿ ‘ಭೂಮಿಯನ್ನು ಆಳಲು ಒಂದು ರಾಜ್ಯ ಮತ್ತು ಯಾಜಕರು’ ಆಗುವರೆಂದು ತಿಳಿದುಬಂತು. (ಪ್ರಕಟನೆ 3:21; 5:10) ಯೋಹಾನನಿಗೆ ಮತ್ತೂ ತಿಳಿದುಬಂದದ್ದೇನಂದರೆ “ಭೂಮಿಯಿಂದ ಕೊಂಡುಕೊಳ್ಳಲ್ಪಟ್ಟ” ಕ್ರೈಸ್ತರ ಒಟ್ಟು ಸಂಖ್ಯೆ 1,44,000 ಎಂಬುದಾಗಿ. (ಪ್ರಕಟನೆ 14:1-3) ಮತ್ತು ಹಿಂದಿನ ಕಾಲದಿಂದ ದೇವರನ್ನು ಆರಾಧಿಸಿಕೊಂಡು ಬಂದವರ ಸಂಖ್ಯೆಗೆ ಹೋಲಿಸುವಾಗ ಇದು ಸಂಬಂಧ ಸೂಚಕವಾಗಿ ಚಿಕ್ಕ ಗುಂಪಾಗಿರುವದರಿಂದ ಸ್ಮಾರಕ ಸಮಯದಲ್ಲಿ ವಿಶೇಷ ವಿವೇಚನೆಯು ಅಗತ್ಯ.—ಲೂಕ 12:32.
17, 18. (ಎ)ಕೊರಿಂಥದ ಕೆಲವು ಕ್ರೈಸ್ತರಲ್ಲಿ ಯಾವ ಅಭ್ಯಾಸವಿತ್ತು? (ಬಿ) ಆಹಾರ, ಪಾನೀಯಗಳ ಮಿತಿಮೀರಿದ ಉಪಯೋಗವು ಅಷ್ಟು ಗಂಭೀರವೇಕೆ? (ಇಬ್ರಿಯ 10:28-31)
17 ಕೆಲವು ಅಪೊಸ್ತಲರು ಇನ್ನೂ ಜೀವಿಸುತ್ತಿದಾಗ್ದ ಮತ್ತು ದೇವರು ಕ್ರೈಸ್ತರನ್ನು “ದೇವಜನರು” ಆಗಲು ಕರೆಯುತ್ತಿದ್ದಾಗ ಪೌಲನು ಕೊರಿಂಥದವರಿಗೆ ಬರೆದ ಪತ್ರದಲ್ಲಿ ಈ ಪ್ರಸ್ತಾಪವನ್ನೆಬ್ಬಿಸಿದನು. ಅಲ್ಲಿ ದ್ಯೋತಕಗಳಲ್ಲಿ ಪಾಲು ತೆಗೆದುಕೊಳ್ಳುತ್ತಿದ್ದವರ ಮಧ್ಯೆ ಒಂದು ಕೆಟ್ಟ ಪದ್ಧತಿ ಬೆಳೆದು ಬಂದಿದೆಯೆಂದು ಪೌಲನಂದನು. ಕೆಲವರು ಸಂಧ್ಯಾಭೋಜನಕ್ಕೆ ಮೊದಲೇ ಮಾಡುತ್ತಿದ್ದ ಊಟದ ಸಮಯದಲ್ಲಿ ಜಾಸ್ತಿ ಊಟ ಮತ್ತು ಕುಡಿತಗಳನ್ನು ಮಾಡುತ್ತಿದ್ದದರಿಂದ ಅವರು ಅರೆನಿದ್ದೆಯಲ್ಲಿದ್ದು ಅದು ಅವರ ಚಿತ್ತ ಸ್ವಾಸ್ಥ್ಯವನ್ನು ಮಂದಗೊಳಿಸುತ್ತಿತ್ತು. ಈ ಕಾರಣ, ರೊಟ್ಟಿಯಿಂದ ಪ್ರತಿನಿಧಿತವಾದ ಯೇಸುವಿನ ಭೌತಿಕ ಶರೀರವನ್ನು ಅವರು “ವಿವೇಚಿಸತ್ತಿರಲಿಲ್ಲ.” ಇದು ಅಷ್ಟು ಗಂಭೀರ ವಿಷಯವೇ? ಹೌದು! ಹೀಗೆ ಅಯೋಗ್ಯವಾಗಿ ಪಾಲು ತೆಗೆದು ಕೊಳ್ಳುವದರಿಂದ ಅವರು “ಕರ್ತನ ದೇಹಕ್ಕೂ ರಕ್ತಕ್ಕೂ ದ್ರೋಹ” ಮಾಡಿದವರಾದರು. ಆದರೆ ಅವರು ಮಾನಸಿಕವಾಗಿಯೂ ಆತ್ಮಿಕವಾಗಿಯೂ ಜಾಗೃತರಾಗಿರುವಲ್ಲಿ ‘ಅವರು ತಾವೇನಾಗಿದ್ದೇವೆಂದು ವಿವೇಚಿಸಿ ನ್ಯಾಯ ವಿಚಾರಣೆಗೆ ಒಳಗಾಗರು.’—1 ಕೊರಿಂಥದವರಿಗೆ 1:2; 11:20-22, 27-31.
18 ಅವರು ಏನು ಪರೀಕ್ಷಿಸಬೇಕಿತ್ತು ಮತ್ತು ಹೇಗೆ? ಪ್ರಧಾನವಾಗಿ, ಅವರು ತಮ್ಮ ಹೃದಯ ಮತ್ತು ಮನಗಳಲ್ಲಿ, ಸ್ವರ್ಗೀಯ ಜೀವನದ ಬಾಧ್ಯಸ್ಥರುಗಳಾದ 1,44,000 ಮಂದಿಗಳ ಮಧ್ಯೆ ತಮಗಿರುವ ಕರೆಯನ್ನು ಮಾನ್ಯ ಮಾಡಬೇಕಿತ್ತು. ಅವರಿದನ್ನು ಹೇಗೆ ವಿವೇಚಿಸಿದರು, ಮತ್ತು ಇಂದಿನ ಅನೇಕರು, ದೇವರು ಅಪೊಸ್ತಲರ ದಿನಗಳಿಂದ ಹಿಡಿದು ಆಯ್ದುಕೊಳ್ಳುತ್ತಾ ಬಂದಿರುವ ಈ ಗುಂಪಿನ ಭಾಗವಾಗಿ ತಾವಿದ್ದೇವೆಂದು ನಂಬಬೇಕೋ?
19. 1990 ರ ಸ್ಮಾರಕಾಚರಣೆಯಲ್ಲಿ ಎದ್ದು ತೋರಿಬಂದ ವಿಷಯವೇನು?
19 ವಾಸ್ತವವಾಗಿ, ನಿಜಕ್ರೈಸ್ತರಲ್ಲಿ ಒಂದು ಅತಿ ಚಿಕ್ಕ ಅಲ್ಪ ಸಂಖ್ಯಾತರು ಮಾತ್ರ ಈ ವಿಷಯದಲ್ಲಿ ತಮ್ಮನ್ನು ಪರೀಕ್ಷಿಸಿಕೊಳ್ಳುತ್ತಾರೆ. 1990ರ ಕರ್ತನ ಸಂಧ್ಯಾ ಭೋಜನದಾಚರಣೆಯಲ್ಲಿ ಭೂವ್ಯಾಪಕವಾಗಿ 94,79,000 ಕ್ಕೂ ಹೆಚ್ಚು ಜನರು ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಕೂಡಿ ಬಂದರು. ಸುಮಾರು 8,700 ಮಾತ್ರ ‘ಸ್ವರ್ಗೀಯ ರಾಜ್ಯಕ್ಕಾಗಿ ರಕ್ಷಿಸಲ್ಪಡುವ’ ನಿರೀಕ್ಷೆಯನ್ನು ಪ್ರದರ್ಶಿಸಿದರು. (2 ತಿಮೊಥಿ 4:18) ಆದರೆ ಬಹುತೇಕ ಜನರು, ಹೌದು, ನಿಷ್ಠ, ಆಶೀರ್ವದಿತ ಕ್ರೈಸ್ತರಾದ ಲಕ್ಷಾಂತರ ಜನರು, ತಮಗಿರುವ ನ್ಯಾಯವಾದ ನಿರೀಕ್ಷೆ ಭೂಮಿಯ ಮೇಲೆ ಸದಾಕಾಲ ಜೀವಿಸುವುದೇ ಆಗಿದೆಯೆಂದು ವಿವೇಚಿಸಿ ತಿಳಿದುಕೊಂಡಿದ್ದಾರೆ.
20. 1,44,000 ಸಂಖ್ಯೆಯ ಭಾಗವಾಗಿರುವವರಿಗೆ ತಾವು ಕರೆಯಲ್ಪಟ್ಟವರೆಂಬ ಪ್ರಜ್ಞೆ ಹೇಗೆ ಬರುತ್ತದೆ? (1 ಯೋಹಾನ 2:27)
20 ಸಾ. ಶ. 33 ರ ಪಂಚಾಶತ್ತಮದಲ್ಲಿ ದೇವರು ಈ 1,44,000 ಮಂದಿಯನ್ನು ಸ್ವರ್ಗೀಯ ಜೀವನಕ್ಕಾಗಿ ಆರಿಸಿಕೊಳ್ಳಲು ತೊಡಗಿದನು. ಈ ನಿರೀಕ್ಷೆ ಹೊಸದಾಗಿದದ್ದರಿಂದ ಮತ್ತು ಯೇಸುವಿನ ಸಮಯಕ್ಕೆ ಹಿಂದೆ ಜೀವಿಸುತ್ತಿದ್ದ ದೇವರ ಸೇವಕರುಗಳಿಗೆ ಇಲ್ಲದೆ ಇದ್ದ ನಿರೀಕ್ಷೆಯಾಗಿದದ್ದರಿಂದ, ಆರಿಸಲ್ಪಟ್ಟವರಿಗೆ ಈ ನಿರೀಕ್ಷೆ ತಿಳಿಯುವುದು ಅಥವಾ ಅದರ ಆಶ್ವಾಸನೆ ದೊರೆಯುವುದು ಹೇಗೆ? ದೇವರ ಪವಿತ್ರಾತ್ಮ ಅದಕ್ಕೆ ನೀಡುವ ಸಾಕ್ಷಿಯನ್ನು ಪಡೆಯುವುದರ ಮೂಲಕ ಅವರಿದನ್ನು ವಿವೇಚಿಸಿ ತಿಳಿಯುತ್ತಾರೆ. ಅವರು ಆತ್ಮನನ್ನು ಪ್ರತ್ಯಕ್ಷವಾಗಿ ಕಾಣುತ್ತಾರೆ (ಅದು ವ್ಯಕ್ತಿಯಲ್ಲ) ಎಂದು ಇದರ ಅರ್ಥವಲ್ಲ. ಅಥವಾ ಆತ್ಮ ಅವರೊಂದಿಗೆ ಮಾತು ಸಂಪರ್ಕ ಬೆಳಸುವುದನ್ನು ಅವರು ಮಾನಸಿಕವಾಗಿ ಕಾಣುತ್ತಾರೆ ಅಥವಾ ಆತ್ಮ ಕ್ಷೇತ್ರದಿಂದ ಅವರು ಶಬ್ದಗಳನ್ನು ಕೇಳುತ್ತಾರೆಂದೂ ಇದರ ಅರ್ಥವಲ್ಲ. ಪೌಲನು ವಿವರಿಸುವುದು: “ಆತ್ಮವು ತಾನೇ ನಮ್ಮ ಆತ್ಮದೊಂದಿಗೆ ನಾವು ದೇವರ ಮಕ್ಕಳೆಂದು ಸಾಕ್ಷಿ ಕೊಡುತ್ತದೆ. . . . ನಾವು ಬಾಧ್ಯಸ್ಥರು ಆಗಿದ್ದೇವೆ. ದೇವರ ಬಾಧ್ಯಸ್ಥರು ನಿಶ್ಚಯ. ಆದರೆ ಕ್ರಿಸ್ತನೊಂದಿಗೆ ಜೊತೆ ಬಾಧ್ಯಸ್ಥರೂ ಆಗಿದ್ದೇವೆ. ನಾವು ಕೂಡಿ ಬಾಧೆಪಡುವುದಾದರೆ ಕೂಡಿ ಮಹಿಮೆಗೇರಿಸಲ್ಪಡುವವರೂ ಆಗುವೆವು.”—ರೋಮಾಪುರದವರಿಗೆ 8:16, 17, NW.
21. (ಎ)ಅಭಿಷಿಕ್ತರಿಗೆ ತಮ್ಮ ನಿರೀಕ್ಷೆ ಸ್ವರ್ಗದ್ದು ಎಂದು ತಿಳಿಯುವದು ಹೇಗೆ? (1 ಕೊರಿಂಥದವರಿಗೆ 10:15-17) (ಬಿ) ಅಭಿಷಿಕ್ತರು ಯಾವ ತರಹದ ವ್ಯಕ್ತಿಗಳು, ಮತ್ತು ಅವರು ವಿನಯದಿಂದ ತಮ್ಮ ನಿರೀಕ್ಷೆಗೆ ಹೇಗೆ ಸಾಕ್ಷಿ ನೀಡುತ್ತಾರೆ?
21 ಈ ಸಾಕ್ಷಿ ಅಥವಾ ಗ್ರಹಿಕೆ, ಅವರು ಯೋಚನೆ ಮತ್ತು ನಿರೀಕ್ಷೆಗಳನ್ನು ಪುನಃ ಹೊಂದಿಸಿಕೊಳ್ಳುವಂತೆ ಮಾಡುತ್ತದೆ. ಅವರು ಇನ್ನೂ ಯೆಹೋವನ ಭೂಸೃಷ್ಟಿಯ ಒಳ್ಳೇ ವಸ್ತುಗಳಲ್ಲಿ ಆನಂದಿಸುತ್ತಾರಾದರೂ ಅವರ ಜೀವಿತದ ಪ್ರಧಾನ ಗುರಿ ಮತ್ತು ಚಿಂತೆ, ಕ್ರಿಸ್ತನೊಂದಿಗೆ ಜೊತೆ ಬಾಧ್ಯಸ್ಥರಾಗುವುದೇ. ಅವರು ಭಾವಾವೇಶದಿಂದಾಗಿ ಈ ನಿರೀಕ್ಷೆಯುಳ್ಳವರಾಗಲಿಲ್ಲ. ಅವರು ತಮ್ಮ ವೀಕ್ಷಣ ಮತ್ತು ನಡತೆಯಲ್ಲಿ ಸಮತೆಯುಳ್ಳ ಸಾದಾ ವ್ಯಕ್ತಿಗಳು. ಆದರೆ ದೇವರಾತ್ಮದಿಂದ ಈಗ ಶುದ್ಧೀಕರಿಸಲ್ಪಟ್ಟಿರುವ ಅವರು ತಮ್ಮ ಕರೆಯ ಕುರಿತು ಮಂದಟ್ಟಾಗಿರುವರಾಗಿದ್ದು ಸಂದೇಹಿಸುತ್ತಾ ಹೋಗುವವರಲ್ಲ. ತಾವು ನಂಬಿಗಸ್ತರಾಗಿರುವಲ್ಲಿ ತಮ್ಮ ರಕ್ಷಣೆ ಸ್ವರ್ಗಕ್ಕೆಂದು ಅವರು ಗ್ರಹಿಸಿದ್ದಾರೆ. (2 ಥೆಸಲೊನೀಕದವರಿಗೆ 2:13; 2 ತಿಮೊಥಿ 2:10-12) ಯೇಸುವಿನ ಯಜ್ಞ ತಮಗೆ ಯಾವ ಅರ್ಥದಲ್ಲಿದೆ ಎಂಬುದನ್ನು ತಿಳಿದು ಮತ್ತು ತಾವು ಆತ್ಮಾಭಿಷಿಕ್ತ ಕ್ರೈಸ್ತರೆಂಬದನ್ನು ವಿವೇಚಿಸುತ್ತಾ ಅವರು ವಿನಯಶೀಲತೆಯಿಂದ ಸ್ಮಾರಕ ದ್ಯೋತಕಗಳಲ್ಲಿ ಪಾಲುಗಾರರಾಗುತ್ತಾರೆ.
22. ಕರ್ತನ ಸಂಧ್ಯಾಭೋಜನಕ್ಕೆ ಹಾಜರಾಗುವವರಲ್ಲಿ ಬಹು ಸಂಖ್ಯಾತರು ಏನು ವಿವೇಚಿಸಿ ತಿಳಿಯುವರು?
22 ಮಾರ್ಚ್ 30 ರಂದು ವಿಧೇಯತೆಯಿಂದ ಕೂಡಿಬರುವ ಬಹು ಸಂಖ್ಯಾತರಿಗೆ ಈ ನಿರೀಕ್ಷೆಯಿಲ್ಲ. ಏಕೆಂದರೆ ಸ್ವರ್ಗರಾಜ್ಯಕ್ಕೆ ಕರೆಯುತ್ತಾ ದೇವರು ಅವರನ್ನು ಅಭಿಷೇಕಿಸಿರುವುದಿಲ್ಲ. ನಾವು ಗಮನಿಸಿರುವಂತೆ, ಈ 1,44,000 ಮಂದಿಯನ್ನು ದೇವರು ಅಪೊಸ್ತಲರ ದಿನಗಳಿಂದ ಆರಿಸ ತೊಡಗಿದನು. ಆದುದರಿಂದ, ಆ ಕರೆಯು ಮುಗಿಯುವಲ್ಲಿ ಆತನನ್ನು ಆರಾಧಿಸಲು ಮುಂಬರುವ ಇತರರು, ಯೇಸು ಸ್ವರ್ಗೀಯ ಜೀವನ ದಾರಿಯನ್ನು ತೆರೆಯುವುದಕ್ಕೆ ಮೊದಲೇ ಸತ್ತಿದ್ದ ಮೋಶೆ, ದಾವೀದ, ಸ್ನಾನಿಕ ಯೋಹಾನ ಮತಿತ್ತರ ನಂಬಿಗಸ್ತರಿಗಿದ್ದ ನಿರೀಕ್ಷೆಯುಳ್ಳವರಾಗುವರೆಂಬದು ನಾವು ನಿರೀಕ್ಷಿಸಬಹುದಾದ ವಿಷಯ. ಹೀಗೆ, ಇಂದಿರುವ ಲಕ್ಷಾಂತರ ಮಂದಿ ನಿಷ್ಠರಾದ ಮತ್ತು ಆಸಕ್ತಿಯ ಕ್ರೈಸ್ತರು ಸ್ಮಾರಕ ದ್ಯೋತಕಗಳಲ್ಲಿ ಪಾಲು ತೆಗೆದುಕೊಳ್ಳುವದಿಲ್ಲ. ಇಂಥ ಕ್ರೈಸ್ತರು ದೇವರ ಮುಂದೆ ತಾವೇನಾಗಿದ್ದೇವೆಂದು, ತಮ್ಮ ಸಮಂಜಸವಾದ ನಿರೀಕ್ಷೆಯನ್ನು ಗ್ರಹಿಸುತ್ತಾ ವಿವೇಚಿಸಿ ತಿಳಿಯುತ್ತಾರೆ. ಅವರಿಗೆ ಪಾಪ ಕ್ಷಮಾಪಣೆಯಾಗಿ ಬಳಿಕ ಭೂಮಿಯಲ್ಲಿ ಅನಂತ ಜೀವನವನ್ನು ಪಡೆಯುವವರಾಗುತ್ತಾ ಹೀಗೆ, ಅವರು ಯೇಸುವಿನ ರಕ್ತ ಮತ್ತು ಶರೀರದ ಪ್ರಯೋಜನವನ್ನು ಪಡೆಯುತ್ತಾರೆ.
23. ಸ್ಮಾರಕವು ಸಂತೋಷದ ಆಚರಣೆಯೇಕೆ? (2 ಪೂರ್ವಕಾಲ ವೃತ್ತಾಂತ 30:21 ಹೋಲಿಸಿ.)
23 ಆದುದರಿಂದ, ನಾವು ಮಾರ್ಚ್ 30 ರ ಸಂತೋಷದ ಆಚರಣೆಯನ್ನು ಮುನ್ನೋಡೋಣ. ಅದು ವಿವೇಚನೆಯನ್ನು ಉಪಯೋಗಿಸುವ ಸಮಯವಾದರೂ ಆನಂದದ ಸಮಯವೂ ಆಗಿದೆ. ಸ್ವರ್ಗೀಯ ನಿರೀಕ್ಷೆಯ ಚಿಕ್ಕ ಸಂಖ್ಯೆಗೆ ಅದು ಸಂತೋಷದ ಸಮಯ. ಇವರು ಆ ರೊಟ್ಟಿ ಮತ್ತು ಪಾತ್ರೆಯಲ್ಲಿ ಯೋಗ್ಯವಾಗಿ ಮತ್ತು ವಿಧೇಯತೆಯಿಂದ ಪಾಲಿಗರಾಗುವರು. (ಪ್ರಕಟನೆ 19:7) ಸಂತೋಷಿಗಳಾದ ಲಕ್ಷಾಂತರ ಮಂದಿ ಕ್ರೈಸ್ತರಿಗೂ ಇದು ಆನಂದದ ಸಮಯ. ಅವರು ಆ ಸಾಯಂಕಾಲ ಆಚರಿಸುತ್ತಾ ಕಲಿತು ಈ ಭೂಮಿಯಲ್ಲಿ ಆ ಅರ್ಥಗರ್ಭಿತ ಆಚರಣೆಯನ್ನು ಸದಾಕಾಲ ಸ್ಮರಿಸುವ ನಿರೀಕ್ಷೆಯುಳ್ಳವರಾಗುವರು.—ಯೋಹಾನ 3:29. (w90 2/15)
[ಅಧ್ಯಯನ ಪ್ರಶ್ನೆಗಳು]
a “ಅವನನ್ನು ಒಪ್ಪಿಸಲಾದ ರಾತ್ರಿಯಲ್ಲಿ ಕರ್ತನಾದ ಯೇಸು ರೊಟ್ಟಿಯನ್ನು ತೆಗೆದುಕೊಂಡು, ಉಪಕಾರ ಸ್ತುತಿ ಮಾಡಿ, ‘ಇದು ನಿಮಗಾಗಿರುವ ನನ್ನ ದೇಹ, ಇದನ್ನು ನನ್ನ ಜ್ಞಾಪಕಾರ್ಥವಾಗಿ ಮಾಡಿರಿ’ ಎಂದನು. ಅದೇ ರೀತಿ, ರಾತ್ರಿಯೂಟ ಮುಗಿದ ಮೇಲೆ ಅವನು ಪಾತ್ರೆಯನ್ನು ತೆಗೆದುಕೊಂಡು, ‘ಇದು ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ. ನೀವು ಪ್ರತಿ ಸಲ ಪಾನ ಮಾಡುವಾಗ ನನ್ನ ಜ್ಞಾಪಕಾರ್ಥವೆಂದು ಮಾಡಿರಿ’ ಎಂದನು.”—ಎನ್ ಎಕ್ಸ್ಪಾಂಡೆಡ್ ಪಾರಾಫ್ರೇಸ್ ಆಫ್ ದಿ ಎಪಿಸ್ಟಲ್ಸ್ ಆಫ್ ಪೌಲ್, ಎಫ್. ಎಫ್. ಬ್ರೂಸ್ ಅವರಿಂದ.
b ದ್ರಾಕ್ಷಾಮದ್ಯ ಏಕೆ ಸೇರಿಸಲ್ಪಟ್ಟಿತೆಂಬದಕ್ಕೆ ಒಬ್ಬ ಪಂಡಿತರ ಅಭಿಪ್ರಾಯ ಹೀಗಿದೆ: “[ಪಸ್ಕವು] ವಯಸ್ಕ ಪುರುಷರ ಘನವಾದ ವಾರ್ಷಿಕ ಕೂಟವಾಗಿ ಇನ್ನು ಮುಂದೆ ಇರಬಾರದಿತ್ತು. ಅದನ್ನು ಕುಟುಂಬೋತ್ಸವದ ಸಂದರ್ಭವಾಗಿ ಮಾಡಬೇಕಾಗಿತ್ತು ಮತ್ತು ಇಲ್ಲಿ ಸ್ವಾಭಾವಿಕವಾಗಿ ದ್ರಾಕ್ಷಾಮದ್ಯ ಪಾನಕ್ಕೆ ಸ್ಥಳ ದೊರೆಯಿತು.”—ದ ಹಿಬ್ರೂ ಪಾಸೋವರ್—ಫ್ರಮ್ ದಿ ಅರ್ಲಿಯೆಷ್ಟ್ ಟೈಮ್ಸ್ ಟು ಎ. ಡಿ. 70, ಜೆ. ಬಿ. ಸೇಗಲ್ ಅವರಿಂದ.
c ಹಳೇ ಕಾಲದಿಂದಲೂ ದ್ರಾಕ್ಷಾಮದ್ಯವನ್ನು ಶುದ್ಧೀಕರಿಸಲು ಮತ್ತು ಅದಕ್ಕೆ ಬಣ್ಣ ಮತ್ತು ರುಚಿಕೊಡಲು ಉಪ್ಪು ಮತ್ತು ಮೊಟ್ಟೆಯ ಲೋಳೆಯನ್ನು ಉಪಯೋಗಿಸಲಾಗುತ್ತಿತ್ತು. ರೋಮನರು ದ್ರಾಕ್ಷಾಮದ್ಯ ತಯಾರಿಯಲ್ಲಿ ಸೋಂಕು ಕಳೆಯಲು ಗಂಧಕವನ್ನು ಉಪಯೋಗಿಸುತ್ತಿದ್ದರು.
ನಿಮ್ಮ ಉತ್ತರವೇನು?
◻ ಸ್ಮಾರಕದಲ್ಲಿ ಹುಳಿಯಿಲ್ಲದ ರೊಟ್ಟಿಯನ್ನು ದಾಟಿಸುವುದೇಕೆ, ಮತ್ತು ಅದೇನು ಸೂಚಿಸುತ್ತದೆ?
◻ ಕರ್ತನ ರಾತ್ರಿಭೋಜನದಲ್ಲಿ ದಾಟಿಸಲಾಗುವ ಪಾತ್ರೆ ಯಾವುದು, ಮತ್ತು ಅದು ಯಾವುದನ್ನು ಪ್ರತಿನಿಧೀಕರಿಸುತ್ತದೆ?
◻ ಸ್ಮಾರಕಾಚರಣೆಯ ಸಂಬಂಧದಲ್ಲಿ ವಿವೇಚನೆ ಏಕೆ ಅಗತ್ಯ?
◻ ಸಮೀಪಿಸುತ್ತಿರುವ ಸ್ಮಾರಕವನ್ನು ನೀವೇಕೆ ಮುನ್ನೋಡುತ್ತಿದ್ದೀರಿ?