ಬೈಬಲ್ ಅಧ್ಯಯನಕ್ಕೆ ಕುಟುಂಬ ಸದಸ್ಯರೆಲ್ಲರ ಸಂಪೂರ್ಣ ಸಹಕಾರ
1 ಬೈಬಲಿನಲ್ಲಿರುವ ಬೋಧನೆಗಳು ಕೌಟುಂಬಿಕ ಜೀವನವನ್ನು ಅರ್ಥಪೂರ್ಣಗೊಳಿಸುತ್ತೆ, ಯಶಸ್ವಿಗೊಳಿಸುತ್ತೆ ನಿಜ. ಆದರೆ ಕುಟುಂಬದ ಆಧ್ಯಾತ್ಮಿಕ ಯಶಸ್ಸು ಎನ್ನುವುದು ತನ್ನಿಂದ ತಾನೇ ಬರಲ್ಲ. ಆಧ್ಯಾತ್ಮಿಕವಾಗಿ ಸದೃಢವಾದ ಕುಟುಂಬ ಕಟ್ಟಲು ಸಮಯ, ಶ್ರಮ ಅಗತ್ಯ. ಈ ನಿಟ್ಟಿನಲ್ಲಿ ಮನೆಮಂದಿಯೆಲ್ಲ ಒಗ್ಗಟ್ಟಿನಿಂದ ಕೆಲಸಮಾಡಬೇಕಾಗಿದೆ. ಒಳ್ಳೇ ಅಧ್ಯಯನ ರೂಢಿಗಳನ್ನು ಬೆಳೆಸಿಕೊಳ್ಳಲು ಮನೆಮಂದಿಯೆಲ್ಲ ಹೇಗೆ ಪರಸ್ಪರ ಸಹಕರಿಸಿಬಹುದೆಂಬ ವಿಷಯದ ಮೇಲೆ ಈ ಲೇಖನ ಬೆಳಕು ಚೆಲ್ಲುತ್ತೆ.
2 ಪ್ರತಿದಿನ ಬೈಬಲ್ ಓದಿ: ಜ್ಞಾನೋಕ್ತಿ 24:5 ಹೇಳುತ್ತೆ “ಜ್ಞಾನಿಗೆ ತ್ರಾಣ, ಬಲ್ಲವನಿಗೆ ಬಹು ಬಲ.” ದೇವರ ವಾಕ್ಯವನ್ನು ನಿಯತವಾಗಿ ಓದುವುದರಿಂದ ಸಿಗುವ ಜ್ಞಾನ ನಮಗೆ ಮನೋಬಲವನ್ನು ಒದಗಿಸುತ್ತೆ. ನಮ್ಮ ಆಧ್ಯಾತ್ಮಿಕತೆಯ ಮೇಲೆ ಸೈತಾನ ಮಾಡುವ ದಾಳಿಯನ್ನು ಎದುರಿಸಲು ಈ ಮನೋಬಲ ಅಗತ್ಯ. (ಕೀರ್ತ. 1:1, 2) ನೀವು ಕುಟುಂಬವಾಗಿ ಪ್ರತಿದಿನ ಬೈಬಲ್ ಓದುತ್ತಿದ್ದೀರಾ? ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶೆಡ್ಯೂಲ್ನಲ್ಲಿ ಪ್ರತಿವಾರಕ್ಕೆಂದು ಇಂತಿಷ್ಟು ಬೈಬಲ್ ಅಧ್ಯಾಯಗಳನ್ನು ಕೊಡಲಾಗಿರುತ್ತೆ. ಇದನ್ನು ಅನುಸರಿಸಲು ಪ್ರತಿದಿನ ಬರೀ ಹತ್ತು ನಿಮಿಷ ಬೇಕಾಗುತ್ತೆ ಅಷ್ಟೆ. ಸಮಯ ನಿಗದಿಪಡಿಸಿಕೊಳ್ಳಿ. ಉದಾ: ಬೆಳಗ್ಗಿನ ಉಪಹಾರದ ಸಮಯದಲ್ಲಿ, ರಾತ್ರಿ ಊಟವಾದ ಮೇಲೆ ಅಥವಾ ಮಲಗುವ ಮುಂಚೆ ಬೈಬಲ್ ಓದಬಹುದು. ಜೊತೆಗೆ ಪ್ರತಿದಿನ ಬೈಬಲ್ ವಚನಗಳನ್ನು ಪರಿಗಣಿಸಿ ಕಿರುಪುಸ್ತಿಕೆಯಿಂದ ದಿನದ ವಚನವನ್ನು ಚರ್ಚಿಸಬಹುದು. ಈ ರೀತಿ ದಿನನಿತ್ಯ ಕುಟುಂಬವಾಗಿ ಓದುವುದನ್ನು ರೂಢಿಸಿಕೊಳ್ಳಿ.
3 ಪ್ರತಿ ವಾರ ಕುಟುಂಬ ಅಧ್ಯಯನ ನಡೆಸಿ: ಕುಟುಂಬ ಆರಾಧನೆಯ ಸಂಜೆಯೇ ವಾರದ ಅತಿ ಪ್ರಮುಖ ವಿಷಯವಾಗಿರಬೇಕು. ಪ್ರತಿಯೊಬ್ಬರೂ ಉತ್ಸುಕರಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಬೆಂಬಲ ನೀಡಬಹುದು. ಕುಟುಂಬದ ಶಿರಸ್ಸು ಕುಟುಂಬದ ಅಗತ್ಯವನ್ನು ಮನಸ್ಸಿನಲ್ಲಿಟ್ಟು ಅಧ್ಯಯನಕ್ಕೆ ವಿಷಯವನ್ನು ಆರಿಸಿಕೊಳ್ಳುತ್ತಾರೆ. ಹಾಗೇ ಯಾವ ದಿನ, ಸಮಯ, ಎಷ್ಟು ಹೊತ್ತು ಅಧ್ಯಯನ ಮಾಡಬೇಕೆಂದೂ ತೀರ್ಮಾನಿಸುತ್ತಾರೆ. ಇಡೀ ವಾರದಲ್ಲಿ ಕುಟುಂಬ ಅಧ್ಯಯನಕ್ಕೆ ಮೊದಲ ಆದ್ಯತೆ ನೀಡಿ. ಚಿಕ್ಕ ಚಿಕ್ಕ ವಿಷಯ ಅಡ್ಡಿಯಾಗದಂತೆ ನೋಡಿಕೊಳ್ಳಿ.—ಫಿಲಿ. 1:10, 11.
4 ಒಬ್ಬ ತಂದೆಗೆ ಕೆಲಸಕ್ಕೆ ಸಂಬಂಧಪಟ್ಟಂತೆ ಆಗಾಗ್ಗೆ ಫೋನ್ ಬರುತ್ತಿರುತ್ತೆ. ಆದರೆ ಕುಟುಂಬ ಆರಾಧನೆಯ ಸಂಜೆಯಂದು ಅವರು ಫೋನನ್ನು ಸ್ಥಗಿತಗೊಳಿಸುತ್ತಾರೆ. ಕೆಲಸಕ್ಕೆ ಸಂಬಂಧಪಟ್ಟಂತೆ ಯಾರಾದರೂ ಮನೆಗೆ ಬಂದರೆ ಅಧ್ಯಯನ ಮುಗಿಯುವ ತನಕ ಕಾಯಲು ಹೇಳುತ್ತಾರೆ ಇಲ್ಲವೆ ಅವರನ್ನೂ ಅಧ್ಯಯನಕ್ಕೆ ಆಮಂತ್ರಿಸುತ್ತಾರೆ. ಕುಟುಂಬ ಅಧ್ಯಯನಕ್ಕೆ ಯಾವ ವಿಷಯವೂ ಅಡ್ಡಿಯಾಗಬಾರದು ಅಂತ ಮೊದಲೇ ದೃಢಸಂಕಲ್ಪ ಮಾಡಿಕೊಂಡಿರುತ್ತಾರೆ. ಇದು ಅವರ ಮಕ್ಕಳ ಮೇಲೆ ಒಳ್ಳೇ ಪ್ರಭಾವ ಬೀರಿತು, ಕೆಲಸಕ್ಕೂ ತೊಂದರೆಯಾಗಲಿಲ್ಲ.
5 ಕುಟುಂಬ ಸದಸ್ಯರೆಲ್ಲರೂ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಸಹಕರಿಸುವುದು ಬಹಳ ಸಂತಸದ ವಿಷಯ! ಕೌಟುಂಬಿಕ ಬೈಬಲ್ ಅಧ್ಯಯನಕ್ಕೆ ನಮ್ಮ ಸಂಪೂರ್ಣ ಸಹಕಾರ ನೀಡೋಣ, ಯೆಹೋವ ದೇವರ ಅನುಗ್ರಹ ಪಡೆಯೋಣ.—ಕೀರ್ತ. 1:3.