ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಜೂನ್‌ ಪು. 2-7
  • ಯಾಕೋಬ ಸಾಯೋ ಮುಂಚೆ ಹೇಳಿದ ಮಾತುಗಳು—ಭಾಗ 1

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯಾಕೋಬ ಸಾಯೋ ಮುಂಚೆ ಹೇಳಿದ ಮಾತುಗಳು—ಭಾಗ 1
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ರೂಬೇನ
  • ಸಿಮೆಯೋನ ಮತ್ತು ಲೇವಿ
  • ಯೆಹೂದ
  • ಯಾಕೋಬ ಸಾಯೋ ಮುಂಚೆ ಹೇಳಿದ ಮಾತುಗಳು—ಭಾಗ 2
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಯಾಕೋಬ ಮತ್ತು ಏಸಾವ ಒಂದಾದರು
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಯಾಕೋಬನಿಗೆ ಒಂದು ದೊಡ್ಡ ಕುಟುಂಬವಿದೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಜೂನ್‌ ಪು. 2-7

ಅಧ್ಯಯನ ಲೇಖನ 24

ಗೀತೆ 94 ದೇವರ ವಾಕ್ಯಕ್ಕಾಗಿ ಕೃತಜ್ಞರು

ಯಾಕೋಬ ಸಾಯೋ ಮುಂಚೆ ಹೇಳಿದ ಮಾತುಗಳು—ಭಾಗ 1

“ನೀವೆಲ್ಲ ಒಟ್ಟಾಗಿ ಬನ್ನಿ. ಮುಂದೆ ನಿಮಗೆ ಏನಾಗುತ್ತೆ ಅಂತ ಹೇಳ್ತೀನಿ.”—ಆದಿ. 49:1.

ಈ ಲೇಖನದಲ್ಲಿ ಏನಿದೆ?

ಯಾಕೋಬ ಸಾಯೋ ಮುಂಚೆ ತನ್ನ ಮಕ್ಕಳಾದ ರೂಬೇನ, ಸಿಮೆಯೋನ, ಲೇವಿ ಮತ್ತು ಯೆಹೂದನ ಬಗ್ಗೆ ಯಾವ ಭವಿಷ್ಯವಾಣಿ ಹೇಳಿದ?ಅದ್ರಿಂದ ನಾವೇನು ಕಲಿತೀವಿ ಅಂತ ನೋಡೋಣ

1-2. ಯಾಕೋಬ ಸಾಯೋ ಮುಂಚೆ ಏನು ಮಾಡ್ದ? ಯಾಕೆ? (ಚಿತ್ರ ನೋಡಿ.)

ಈಗ ಯಾಕೋಬ ಕಾನಾನಿಂದ ಈಜಿಪ್ಟ್‌ಗೆ ಇಡೀ ಕುಟುಂಬದ ಜೊತೆ ಬಂದು 17 ವರ್ಷ ಆಗಿದೆ. (ಆದಿ. 47:28) ಅವನೀಗ ಮುದುಕನಾಗಿದ್ರೂ ಜೀವನದಲ್ಲಿ ತುಂಬ ಖುಷಿಯಾಗಿದ್ದಾನೆ. ಯಾಕಂದ್ರೆ ಸತ್ತುಹೋಗಿದ್ದ ಅಂತ ಅಂದ್ಕೊಂಡಿದ್ದ ತನ್ನ ಮುದ್ದು ಮಗ ಯೋಸೇಫ ಈಗ ಅವನ ಕಣ್ಣೆದುರೇ ಇದ್ದಾನೆ. ಅಷ್ಟೇ ಅಲ್ಲ, ತನ್ನ ಇಡೀ ಕುಟುಂಬ ಈಗ ಮತ್ತೆ ಒಂದಾಗಿದೆ. ಆದ್ರೆ ಯಾಕೋಬನಿಗೆ ಈಗ ತಾನಿನ್ನು ಜಾಸ್ತಿ ದಿನ ಬದುಕಲ್ಲ ಅಂತ ಗೊತ್ತಾಗಿದೆ. ಅದಕ್ಕೆ ಅವನು ತನ್ನ ಗಂಡು ಮಕ್ಕಳನ್ನೆಲ್ಲ ಕರೆದು ಏನೋ ಮುಖ್ಯವಾದ ವಿಷ್ಯ ಹೇಳ್ತಾನೆ.—ಆದಿ. 49:28.

2 ಆಗಿನ ಕಾಲದಲ್ಲಿ ಕುಟುಂಬದ ಯಜಮಾನ ಸಾಯೋ ಮುಂಚೆ ಈ ತರ ತನ್ನ ಮಕ್ಕಳನ್ನೆಲ್ಲಾ ಕರೆದು ಮುಂದೇನು ಮಾಡಬೇಕು ಅಂತ ಹೇಳೋದು ಸಾಮಾನ್ಯವಾಗಿತ್ತು. (ಯೆಶಾ. 38:1) ಯಾಕೋಬ ತನ್ನ ಮಕ್ಕಳನ್ನೆಲ್ಲಾ ಕರೆದಾಗ ತಾನು ಸತ್ತ ಮೇಲೆ ಆ ಕುಟುಂಬಕ್ಕೆ ಇನ್ನು ಮುಂದೆ ಯಜಮಾನ ಯಾರು ಅಂತಾನೂ ಹೇಳಿರಬಹುದು.

ವಯಸ್ಸಾಗಿ ಹಾಸಿಗೆ ಹಿಡಿದಿರೋ ಯಾಕೋಬ ತನ್ನ 12 ಗಂಡುಮಕ್ಕಳಿಗೆ ಭವಿಷ್ಯವಾಣಿ ಹೇಳ್ತಿದ್ದಾನೆ (ಪ್ಯಾರ 1-2 ನೋಡಿ)


3. ಯಾಕೋಬ ಸಾಯೋ ಮುಂಚೆ ಹೇಳಿದ ಮಾತುಗಳು ಯಾಕೆ ತುಂಬ ಮುಖ್ಯವಾಗಿತ್ತು? (ಆದಿ. 49:1, 2)

3 ಆದಿಕಾಂಡ 49:1, 2 ಓದಿ. ಇದೊಂದು ಮಾಮೂಲಿ ಮಾತುಕತೆ ಆಗಿರ್ಲಿಲ್ಲ. ಯಾಕೋಬ ಒಬ್ಬ ಪ್ರವಾದಿ ಆಗಿದ್ದ. ತನ್ನ ಮಕ್ಕಳಿಗೆ ಮತ್ತು ಅವ್ರ ವಂಶದವರಿಗೆ ಏನೆಲ್ಲಾ ಆಗುತ್ತೆ ಅನ್ನೋ ಮುಖ್ಯ ವಿಷ್ಯನ ಯಾಕೋಬ ಆಗ ಹೇಳಿದ. ಇದನ್ನೆಲ್ಲ ಹೇಳೋ ತರ ಅವನನ್ನ ಯೆಹೋವನೇ ಪ್ರೇರೇಪಿಸಿದನು. ಈ ಕಾರಣದಿಂದ ಯಾಕೋಬನ ಮಾತುಗಳನ್ನ ಅವನು ಸಾಯುವ ಮುಂಚೆ ಹೇಳಿದ ಭವಿಷ್ಯವಾಣಿ ಅಂತ ಹೇಳಬಹುದು.

4. ಈ ಲೇಖನ ಮತ್ತು ಮುಂದಿನ ಲೇಖನದಲ್ಲಿ ನಾವೇನು ಕಲಿತೀವಿ? (“ಯಾಕೋಬನ ಕುಟುಂಬ” ಅನ್ನೋ ಚೌಕ ನೋಡಿ.)

4 ಈ ಲೇಖನದಲ್ಲಿ ಯಾಕೋಬ ಅವನ 4 ಗಂಡು ಮಕ್ಕಳಿಗೆ ಅಂದ್ರೆ ರೂಬೇನ, ಸಿಮೆಯೋನ, ಲೇವಿ ಮತ್ತು ಯೆಹೂದನಿಗೆ ಏನು ಹೇಳಿದ ಅಂತ ನೋಡ್ತೀವಿ. ಮುಂದಿನ ಲೇಖನದಲ್ಲಿ, ಉಳಿದ 8 ಗಂಡು ಮಕ್ಕಳಿಗೆ ಏನು ಹೇಳಿದ ಅಂತ ನೋಡ್ತೀವಿ. ನಾವು ಈಗ ಯಾಕೋಬ ತನ್ನ ಗಂಡು ಮಕ್ಕಳಿಗಷ್ಟೇ ಅಲ್ಲ, ಅವ್ರ ಇಡೀ ವಂಶಕ್ಕೆ ಏನಾಗುತ್ತೆ ಅಂತ ಹೇಳಿದ ಅಂತ ನೋಡೋಣ. ಅವನ ವಂಶ ಮುಂದೆ ಇಸ್ರಾಯೇಲ್‌ ಜನಾಂಗ ಆಯ್ತು. ಯಾಕೋಬ ಹೇಳಿದ ಮಾತು ಹೇಗೆ ನಿಜ ಆಯ್ತು ಅಂತ ಈ ಎರಡು ಲೇಖನಗಳಲ್ಲಿ ಕಲಿತೀವಿ. ಅಷ್ಟೇ ಅಲ್ಲ ಇದ್ರಿಂದ ನಾವೇನು ಪಾಠ ಕಲಿಬಹುದು ಅಂತಾನೂ ನೋಡೋಣ. ಇದು ನಮಗೆ ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಸಹಾಯ ಮಾಡುತ್ತೆ.

ಯಾಕೋಬನ ಕುಟುಂಬ. ಅವನಿಗೆ ಇಬ್ರು ಹೆಂಡತಿಯರು ಲೇಯ ಮತ್ತು ರಾಹೇಲ, ಇಬ್ರು ಉಪಪತ್ನಿಯರು ಬಿಲ್ಹಾ ಮತ್ತು ಜಿಲ್ಪ. ಲೇಯಳಿಂದ ಹುಟ್ಟಿದ ಮಕ್ಕಳು ರೂಬೇನ, ಸಿಮೆಯೋನ, ಲೇವಿ, ಯೆಹೂದ, ಇಸ್ಸಾಕಾರ, ಜೆಬುಲೂನ ಮತ್ತು ದೀನ. ರಾಹೇಲಳಿಂದ ಹುಟ್ಟಿದ ಮಕ್ಕಳು ಯೋಸೇಫ ಮತ್ತು ಬೆನ್ಯಾಮೀನ. ಬಿಲ್ಹಾಳಿಂದ ಹುಟ್ಟಿದ ಮಕ್ಕಳು ದಾನ್‌ ಮತ್ತು ನಫ್ತಾಲಿ. ಜಿಲ್ಪಳಿಂದ ಹುಟ್ಟಿದ ಮಕ್ಕಳು ಗಾದ್‌ ಮತ್ತು ಅಶೇರ್‌.

ರೂಬೇನ

5. ತನ್ನ ತಂದೆ ಸತ್ತಮೇಲೆ ತನಗೆ ಏನೆಲ್ಲಾ ಸಿಗುತ್ತೆ ಅಂತ ರೂಬೇನ ಅಂದ್ಕೊಂಡಿರಬಹುದು?

5 ನಾವೀಗ ಯಾಕೋಬ ಅವನ ಮಕ್ಕಳಿಗೆ ಏನೇನು ಹೇಳಿದ ಅಂತ ನೋಡೋಣ. ಮೊದ್ಲು ಅವನು ರೂಬೇನನನ್ನ ಕರೆದು “ನೀನು ನನ್ನ ಮೊದಲನೇ ಮಗ” ಅಂತ ಹೇಳಿದ. (ಆದಿ. 49:3) ರೂಬೇನ ಮೊದಲನೇ ಮಗ ಆಗಿದ್ರಿಂದ ಅಪ್ಪನ ಆಸ್ತಿಯಲ್ಲಿ ತಮ್ಮಂದಿರಿಗಿಂತ ಎರಡು ಪಟ್ಟು ಹೆಚ್ಚು ಆಸ್ತಿ ತನಗೆ ಸಿಗುತ್ತೆ ಅಂತ ಅವನು ಅಂದ್ಕೊಂಡಿರಬಹುದು. ಅಷ್ಟೇ ಅಲ್ಲ, ‘ಅಪ್ಪ ಸತ್ತಮೇಲೆ ನಾನೇ ಕುಟುಂಬದ ಯಜಮಾನ ಆಗ್ತೀನಿ. ನಾನು ಸತ್ತಮೇಲೆ, ನನ್ನ ವಂಶದವರಿಗೆ ಆ ಹಕ್ಕು ಸಿಗುತ್ತೆ’ ಅಂತಾನೂ ಅವನು ಅಂದ್ಕೊಂಡಿರಬಹುದು.

6. ರೂಬೇನ ಯಾಕೆ ತನ್ನ ಜ್ಯೇಷ್ಠಪುತ್ರನ ಹಕ್ಕನ್ನ ಕಳ್ಕೊಂಡ? (ಆದಿಕಾಂಡ 49:3, 4)

6 ರೂಬೇನ ಜ್ಯೇಷ್ಠಪುತ್ರನ ಹಕ್ಕನ್ನ ಕಳ್ಕೊಂಡು ಬಿಡ್ತಾನೆ. (1 ಪೂರ್ವ. 5:1) ಯಾಕೆ? ಸ್ವಲ್ಪ ವರ್ಷಗಳ ಹಿಂದೆ ಅವನು ತನ್ನ ಅಪ್ಪನ ಉಪಪತ್ನಿಯಾದ ಬಿಲ್ಹಾಳ ಜೊತೆ ಅಂದ್ರೆ ತನ್ನ ಮಲತಾಯಿಯ ಜೊತೆನೇ ಅನೈತಿಕತೆ ಮಾಡಿದ್ದ. ಬಿಲ್ಹಾ ಯಾಕೋಬನ ಮುದ್ದಿನ ಹೆಂಡ್ತಿಯಾಗಿದ್ದ ರಾಹೇಲಳ ದಾಸಿ ಆಗಿದ್ಳು. ಆದ್ರೆ ರಾಹೇಲಳ ಈಗ ಸತ್ತು ಹೋಗಿದ್ಳು. (ಆದಿ. 35:19, 22) ರೂಬೇನ ಯಾಕೋಬನ ಇನ್ನೊಬ್ಬ ಹೆಂಡ್ತಿ ಲೇಯಳ ಮಗನಾಗಿದ್ದ. ‘ನನ್ನ ಅಮ್ಮನ ಸ್ಥಾನನ ಬಿಲ್ಹಾ ಕಿತ್ಕೋಬಾರದು, ಅಪ್ಪ ನನ್ನ ಅಮ್ಮನನ್ನ ಮಾತ್ರ ಪ್ರೀತಿಸಬೇಕು’ ಅನ್ನೋ ಉದ್ದೇಶದಿಂದ ರೂಬೇನ ಬಿಲ್ಹಾನ ಕೆಡಿಸಿರಬಹುದು. ಇಲ್ಲಾಂದ್ರೆ ಬಿಲ್ಹಾನ ನೋಡಿ ಆಸೆ ಪಟ್ಟು ಅವಳ ಜೊತೆ ಲೈಂಗಿಕ ಸಂಬಂಧ ಇಟ್ಟಿರಬಹುದು. ವಿಷ್ಯ ಏನೇ ಆಗಿದ್ರೂ ಅವನು ಮಾಡಿದ್ದು ದೊಡ್ಡ ತಪ್ಪಾಗಿತ್ತು. ಇದ್ರಿಂದ ಯೆಹೋವನಿಗೂ ಯಾಕೋಬನಿಗೂ ತುಂಬ ನೋವಾಯ್ತು.—ಆದಿಕಾಂಡ 49:3, 4 ಓದಿ.

7. ಯಾಕೋಬ ರೂಬೇನ ಬಗ್ಗೆ ಹೇಳಿದ ಭವಿಷ್ಯವಾಣಿ ಹೇಗೆ ನಿಜ ಆಯ್ತು? (“ಯಾಕೋಬ ಹೇಳಿದ ಭವಿಷ್ಯವಾಣಿಗಳು” ಅನ್ನೋ ಚೌಕ ನೋಡಿ.)

7 ಯಾಕೋಬ ರೂಬೇನನಿಗೆ “ನೀನು ಇನ್ನು ಮುಂದೆ ನಿನ್ನ ತಮ್ಮಂದಿರಿಗಿಂತ ಶ್ರೇಷ್ಠನಾಗಿರಲ್ಲ” ಅಂತ ಹೇಳಿದ. ಈ ಮಾತು ನಿಜ ಆಯ್ತು. ಹೇಗಂದ್ರೆ, ರೂಬೇನ ವಂಶದವರು ಯಾರೂ ರಾಜರಾಗ್ಲಿಲ್ಲ, ಪುರೋಹಿತರಾಗ್ಲಿಲ್ಲ ಮತ್ತು ಪ್ರವಾದಿಗಳೂ ಆಗ್ಲಿಲ್ಲ. ಆದ್ರೆ ರೂಬೇನ ಬೇರೆ ಸಂದರ್ಭಗಳಲ್ಲಿ ಒಳ್ಳೆ ಗುಣಗಳನ್ನ ತೋರಿಸಿದ ಅಂತ ಬೈಬಲ್‌ ಹೇಳುತ್ತೆ. ಅಷ್ಟೇ ಅಲ್ಲ, ಅವನು ಮತ್ತೆ ಲೈಂಗಿಕ ಅನೈತಿಕತೆ ಮಾಡಿದ ಅಂತ ಬೈಬಲ್‌ ಎಲ್ಲೂ ಹೇಳಲ್ಲ. ಅವನೀಗ ಬದಲಾಗಿದ್ದ ಅಂತ ಅನಿಸುತ್ತೆ. (ಆದಿ. 37:20-22; 42:37) ಅದಕ್ಕೆ ಯಾಕೋಬ ತನ್ನ ಈ ಮಗನನ್ನ ದೂರ ಮಾಡ್ಲಿಲ್ಲ, ಅವನಿಗೆ ತನ್ನ ಆಸ್ತಿಯಲ್ಲಿ ಪಾಲು ಕೊಟ್ಟ. ಅವನ ವಂಶ ಬೆಳೆದು ಇಸ್ರಾಯೇಲಲ್ಲಿ ಒಂದು ಕುಲ ಆಯ್ತು.—ಯೆಹೋ. 12:6.

ಯಾಕೋಬ ಹೇಳಿದ ಭವಿಷ್ಯವಾಣಿಗಳು

ರೂಬೇನ.

ಮಗ

ರೂಬೇನ

ಭವಿಷ್ಯವಾಣಿ

“ನೀನು . . . ತಮ್ಮಂದಿರಿಗಿಂತ ಶ್ರೇಷ್ಠನಾಗಿರಲ್ಲ.”—ಆದಿ. 49:4.

ನೆರವೇರಿಕೆ

ರೂಬೇನ ವಂಶದಲ್ಲಿ ಯಾರೂ ಇಸ್ರಾಯೇಲಲ್ಲಿ ನಾಯಕರಾಗಲಿಲ್ಲ.—1 ಪೂರ್ವ. 5:1, 2.

8. ರೂಬೇನನಿಂದ ನಾವೇನು ಕಲಿಬಹುದು?

8 ನಾವೇನು ಕಲಿಬಹುದು? ನಾವು ಅನೈತಿಕತೆ ಮಾಡದೇ ಇರೋಕೆ, ಕೆಟ್ಟ ಆಸೆಗಳನ್ನ ಹತೋಟಿಯಲ್ಲಿ ಇಡೋಕೆ ನಮ್ಮ ಕೈಲಾಗಿದ್ದನ್ನೆಲ್ಲಾ ಮಾಡಬೇಕು. ಈ ತರ ಆಸೆಗಳು ಬಂದಾಗ, ‘ಈ ತಪ್ಪು ಮಾಡಿಬಿಟ್ರೆ ಇದ್ರಿಂದ ಯೆಹೋವನಿಗೆ, ನನ್ನ ಕುಟುಂಬದವ್ರಿಗೆ ಮತ್ತೆ ಬೇರೆಯವ್ರಿಗೆ ಎಷ್ಟು ನೋವಾಗುತ್ತೆ?’ ಅಂತ ಯೋಚ್ನೆ ಮಾಡಬೇಕು. ಅಷ್ಟೇ ಅಲ್ಲ, ‘ನಾನೇನ್‌ ಬಿತ್ತುತ್ತೀನೋ ಅದನ್ನೇ ಕೊಯ್ತೀನಿ’ ಅನ್ನೋದನ್ನೂ ನೆನಪಿಸ್ಕೊಬೇಕು. (ಗಲಾ. 6:7) ಯೆಹೋವ ದೇವ್ರಿಗೆ ಎಷ್ಟು ಕರುಣೆ ಇದೆ ಅಂತಾನೂ ನಾವು ರೂಬೇನನಿಂದ ಕಲಿತೀವಿ ಅಲ್ವಾ? ನಾವು ತಪ್ಪು ಮಾಡಿದಾಗ ಅದ್ರಿಂದ ನಮಗೆ ಆಗೋ ಕೆಟ್ಟ ವಿಷ್ಯಗಳನ್ನ ಯೆಹೋವ ತಪ್ಪಿಸಲ್ಲ ನಿಜ. ಆದ್ರೆ ನಾವು ಆ ತಪ್ಪನ್ನ ತಿದ್ಕೊಂಡು ಸರಿಯಾಗಿರೋದನ್ನ ಮಾಡೋಕೆ ಪ್ರಯತ್ನ ಹಾಕಿದಾಗ ಯೆಹೋವ ದೇವರು ನಮ್ಮನ್ನ ಕ್ಷಮಿಸ್ತಾನೆ.

ಸಿಮೆಯೋನ ಮತ್ತು ಲೇವಿ

9. ಸಿಮೆಯೋನ ಮತ್ತೆ ಲೇವಿ ಮಾಡಿದ ಯಾವ ಕೆಲಸ ಯಾಕೋಬನಿಗೆ ಇಷ್ಟ ಆಗ್ಲಿಲ್ಲ? (ಆದಿಕಾಂಡ 49:5-7)

9 ಆದಿಕಾಂಡ 49:5-7 ಓದಿ. ರೂಬೇನ ಆದ್ಮೇಲೆ ಸಿಮೆಯೋನ ಮತ್ತೆ ಲೇವಿ ಹತ್ರ ಯಾಕೋಬ ಮಾತಾಡ್ತಾನೆ. ಅವರು ಹಿಂದೆ ಮಾಡಿದ ಒಂದು ವಿಷ್ಯ ನನಗಿಷ್ಟ ಆಗ್ಲಿಲ್ಲ ಅಂತ ಯಾಕೋಬ ಹೇಳ್ತಾನೆ. ಸ್ವಲ್ಪ ವರ್ಷಗಳ ಹಿಂದೆ ಅವ್ರ ತಂಗಿ ದೀನಳನ್ನ ಕಾನಾನ್ಯ ವ್ಯಕ್ತಿ ಶೆಕೆಮ್‌ ಕೆಡಿಸಿಬಿಟ್ಟಿದ್ದ. ಆಗ ಅವಳ ಎಲ್ಲಾ ಅಣ್ಣತಮ್ಮಂದಿರಿಗೆ ಕೋಪ ನೆತ್ತಿಗೇರಿತು. ಸಿಮೆಯೋನ ಮತ್ತೆ ಲೇವಿಗಂತೂ ಕೋಪನ ಕಂಟ್ರೋಲ್‌ ಮಾಡ್ಕೊಳ್ಳೋಕೆ ಆಗ್ಲಿಲ್ಲ. ಅವರು ಅದನ್ನೇ ಮನಸ್ಸಲ್ಲಿ ಇಟ್ಕೊಂಡು ಒಂದು ಕೆಟ್ಟ ಪ್ಲಾನ್‌ ಮಾಡ್ತಾರೆ. ಅವರು ಶೆಕೆಮ್‌ ಮತ್ತೆ ಅವನ ಊರಿನ ಗಂಡಸ್ರ ಹತ್ರ ಹೋಗಿ ‘ಆಗಿದ್ದೆಲ್ಲ ಆಗೋಯ್ತು, ನಾವಿನ್ನು ಶಾಂತಿಯಿಂದ ಇರೋಣ. ಅದಕ್ಕೆ ನೀವು ಸುನ್ನತಿ ಮಾಡಿಸ್ಕೊಳ್ಳಿ’ ಅಂತ ಹೇಳ್ತಾರೆ. ಆಗ ಆ ಊರಿನ ಗಂಡಸ್ರು ಅದಕ್ಕೆ ಒಪ್ಕೊಳ್ತಾರೆ. ಹೀಗೆ ಅವ್ರೆಲ್ಲ ಸುನ್ನತಿ ಮಾಡಿಸ್ಕೊಂಡು ನೋವಲ್ಲಿದ್ದಾಗ ‘ಸಿಮೆಯೋನ ಮತ್ತು ಲೇವಿ ಕತ್ತಿ ಹಿಡ್ಕೊಂಡು ಪಟ್ಟಣದೊಳಗೆ ಹೋಗ್ತಾರೆ. ಅವ್ರ ಮೇಲೆ ಯಾರಿಗೂ ಅನುಮಾನ ಬರಲ್ಲ. ಅವರು ಅಲ್ಲಿದ್ದ ಎಲ್ಲಾ ಗಂಡಸ್ರನ್ನ ಕೊಂದು ಹಾಕ್ತಾರೆ.’—ಆದಿ. 34:25-29.

10. ಸಿಮೆಯೋನ ಮತ್ತು ಲೇವಿ ಬಗ್ಗೆ ಯಾಕೋಬ ಹೇಳಿದ ಮಾತು ಹೇಗೆ ನಿಜ ಆಯ್ತು? (“ಯಾಕೋಬ ಹೇಳಿದ ಭವಿಷ್ಯವಾಣಿಗಳು” ಅನ್ನೋ ಚೌಕ ನೋಡಿ.)

10 ಯಾಕೋಬನಿಗೆ ಅವನ ಈ ಇಬ್ರು ಮಕ್ಕಳು ಕೊಲೆ ಮಾಡಿದ್ದು ಸಹಿಸಲಾಗದ ನೋವನ್ನ ತಂತು. ಅದಕ್ಕೆ ಅವನು, ಅವರಿಬ್ಬರ ವಂಶದವರು ಒಂದೇ ಕಡೆ ಇರಲ್ಲ, ಇಸ್ರಾಯೇಲಲ್ಲಿ ಚದುರಿ ಹೋಗ್ತಾರೆ ಅಂತ ಹೇಳಿದ. ಅವನು ಹೇಳಿದ ಮಾತು 200 ವರ್ಷ ಆದ್ಮೇಲೆ ಅಂದ್ರೆ, ದೇವರು ಮಾತು ಕೊಟ್ಟ ದೇಶಕ್ಕೆ ಇಸ್ರಾಯೇಲ್ಯರು ಹೋದಾಗ ನಿಜ ಆಯ್ತು. ಯೆಹೂದ ಕುಲಕ್ಕೆ ಸಿಕ್ಕಿದ ಪ್ರದೇಶದೊಳಗಡೆ ಸಿಮೆಯೋನ್‌ ಕುಲಕ್ಕೂ ಆಸ್ತಿ ಸಿಕ್ತು. ಆದ್ರೆ ಈ ಆಸ್ತಿ ಅವ್ರಿಗೆ ಒಂದೇ ಕಡೆ ಸಿಗಲಿಲ್ಲ. (ಯೆಹೋ. 19:1) ಲೇವಿ ಕುಲದವ್ರಿಗೆ 48 ಪಟ್ಟಣಗಳು ಆಸ್ತಿಯಾಗಿ ಸಿಕ್ಕಿದ್ವು. ಅದು ಕೂಡ ಒಂದು ಕಡೆ ಇರಲಿಲ್ಲ, ಬೇರೆಬೇರೆ ಕಡೆ ಇತ್ತು.—ಯೆಹೋ. 21:41.

ಯಾಕೋಬ ತೀರಿ ಹೋಗುವಾಗ ಹೇಳಿದ ಭವಿಷ್ಯವಾಣಿಗಳು

ಸಿಮೆಯೋನ.

ಮಗ

ಸಿಮೆಯೋನ

ಭವಿಷ್ಯವಾಣಿ

“ಯಾಕೋಬನ ದೇಶದಲ್ಲಿ ಅವರನ್ನ ಚದರಿಸ್ತೀನಿ.”—ಆದಿ. 49:7.

ನೆರವೇರಿಕೆ

ಯೆಹೂದ ಕುಲದವ್ರಿಗೆ ಸಿಕ್ಕಿದ್ದ ಪ್ರದೇಶದಲ್ಲಿ ಸಿಮೆಯೋನ್‌ ಕುಲಕ್ಕೆ ಆಸ್ತಿ ಸಿಕ್ತು. ಆದ್ರೆ ಅದು ಎಲ್ಲೆಲ್ಲೋ ಇತ್ತು.—ಯೆಹೋ. 19:1-8.

ಲೇವಿ.

ಮಗ

ಲೇವಿ

ಭವಿಷ್ಯವಾಣಿ

“ಇಸ್ರಾಯೇಲನ ದೇಶದಲ್ಲಿ ಅವರನ್ನ ಚೆಲ್ಲಾಪಿಲ್ಲಿ ಮಾಡ್ತೀನಿ.”—ಆದಿ. 49:7.

ನೆರವೇರಿಕೆ

ಲೇವಿ ಕುಲದವ್ರಿಗೆ ಸಿಕ್ಕಿದ್ದ 48 ಪಟ್ಟಣಗಳು ಒಂದೇ ಕಡೆ ಇರ್ಲಿಲ್ಲ, ಎಲ್ಲೆಲ್ಲೋ ಇತ್ತು.—ಯೆಹೋ. 21:41.

11. ಸಿಮೆಯೋನ್‌ ಮತ್ತೆ ಲೇವಿ ಕುಲದವರು ಯಾವ ಒಳ್ಳೆ ಕೆಲಸ ಮಾಡಿದ್ರು?

11 ಸಿಮೆಯೋನ ಮತ್ತು ಲೇವಿ ಮಾಡಿದ ತಪ್ಪನ್ನ ಅವ್ರ ವಂಶದವರು ಮಾಡ್ಲಿಲ್ಲ. ಅವರು ಒಳ್ಳೇ ಕೆಲಸಗಳನ್ನ ಮಾಡಿದ್ರು. ಲೇವಿ ಕುಲದವರು ಯಾವಾಗ್ಲೂ ಯೆಹೋವ ದೇವರನ್ನೇ ಆರಾಧನೆ ಮಾಡಿದ್ರು, ಆತನಿಗೆ ನಿಯತ್ತಾಗಿದ್ರು. ಒಂದ್ಸಲ ಮೋಶೆ ಸಿನಾಯಿ ಬೆಟ್ಟಕ್ಕೆ ಯೆಹೋವ ದೇವರ ಹತ್ರ ಮಾತಾಡೋಕೆ ಹೋಗಿದ್ದ. ಆಗ ಬೆಟ್ಟದ ಕೆಳಗಿದ್ದ ಜನ್ರೆಲ್ಲ ಕರುವಿನ ಮೂರ್ತಿ ಮಾಡ್ಕೊಂಡು ಆರಾಧನೆ ಮಾಡಿದ್ರು. ಆದ್ರೆ ಲೇವಿ ಕುಲದವರು ಅವ್ರ ಜೊತೆ ಕೈ ಜೋಡಿಸಲಿಲ್ಲ. ಬದಲಿಗೆ ಆ ಆರಾಧನೆ ಮಾಡಿದ ಜನ್ರನ್ನ ನಾಶ ಮಾಡೋಕೆ ಅವರು ಮೋಶೆಗೆ ಸಹಾಯ ಮಾಡಿದ್ರು. (ವಿಮೋ. 32:26-29) ಈ ತರ ನಿಯತ್ತಾಗಿ ಇದ್ದಿದ್ರಿಂದಾನೇ ಆ ಕುಲದಲ್ಲಿದ್ದ ಕೆಲವ್ರಿಗೆ ಯೆಹೋವ ದೇವರು ಪುರೋಹಿತರಾಗಿ ಸೇವೆ ಮಾಡೋ ಅವಕಾಶ ಕೊಟ್ಟನು. (ವಿಮೋ. 40:12-15; ಅರ. 3:11, 12) ಸಿಮೆಯೋನ್‌ ಕುಲದವರು ಯಾವ ಒಳ್ಳೇ ಕೆಲಸ ಮಾಡಿದ್ರು? ದೇವರು ಮಾತು ಕೊಟ್ಟ ದೇಶನ ವಶ ಮಾಡ್ಕೊಳ್ಳೋಕ್ಕೋಸ್ಕರ ಯೆಹೂದ ಕುಲದವ್ರ ಜೊತೆ ಕೈ ಜೋಡಿಸಿ ಕಾನಾನ್ಯರ ವಿರುದ್ಧ ಇವರು ಯುದ್ಧ ಮಾಡಿದ್ರು.—ನ್ಯಾಯ. 1:3, 17.

12. ಸಿಮೆಯೋನ್‌ ಮತ್ತೆ ಲೇವಿ ಇಂದ ನಾವೇನು ಕಲಿಬಹುದು?

12 ನಾವೇನು ಕಲಿಬಹುದು? ನಾವು ಕೋಪದಲ್ಲಿದ್ದಾಗ ಯಾವುದೇ ನಿರ್ಧಾರ ತಗೊಬಾರದು. ನಮ್ಮ ಹತ್ರ ಅಥವಾ ನಮಗಿಷ್ಟ ಇರೋರ ಹತ್ರ ಯಾರಾದ್ರೂ ನೋವಾಗೋ ತರ ನಡ್ಕೊಂಡ್ರೆ ನಮಗೆ ಬೇಜಾರಾಗೋದು ಸಹಜ. (ಕೀರ್ತ. 4:4) ಆದ್ರೆ ನಾವು ಅದನ್ನೇ ಮನಸ್ಸಲ್ಲಿ ಇಟ್ಕೊಂಡು ಅವರ ಮೇಲೆ ದ್ವೇಷ ಸಾಧಿಸಿದ್ರೆ ಯೆಹೋವ ದೇವ್ರಿಗೆ ಇಷ್ಟ ಆಗಲ್ಲ. (ಯಾಕೋ. 1:20) ನಮಗೆ ಯಾರಾದ್ರೂ ಅನ್ಯಾಯ ಮಾಡಿದ್ರೂ ನಾವು ಯೆಹೋವನಿಗೆ ಇಷ್ಟ ಆಗೋ ತರಾನೇ ನಡ್ಕೋಬೇಕು. ನಾವು ಅವ್ರಿಗೆ ನೋವಾಗೋ ತರ ಮಾತಾಡಬಾರದು, ನಡ್ಕೋಬಾರದು. (ರೋಮ. 12:17, 19; 1 ಪೇತ್ರ 3:9) ಇನ್ನು ಕೆಲವೊಮ್ಮೆ, ನಿಮ್ಮ ಅಪ್ಪಅಮ್ಮ ಯೆಹೋವನಿಗೆ ನೋವು ಮಾಡ್ತಿರೋದನ್ನ ನೀವು ನೋಡ್ತಿರಬಹುದು. ಆಗ ‘ನಮ್ಮ ಅಪ್ಪ ಅಮ್ಮನ ಕೈಲೇ ಯೆಹೋವನಿಗೆ ನಿಯತ್ತಾಗಿರೋಕೆ ಆಗ್ತಿಲ್ಲ, ಇನ್ನೂ ನನ್ನಿಂದ ಆಗುತ್ತಾ?’ ಅಂತ ಅಂದ್ಕೊಬೇಡಿ. ನೀವು ಅವ್ರ ಆ ಕೆಟ್ಟ ಮಾದರಿನ ಪಾಲಿಸಬೇಕಿಲ್ಲ. ಯೆಹೋವ ನಿಮಗೆ ಸಹಾಯ ಮಾಡ್ತಾನೆ. ನೀವು ಆತನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಹಾಕ್ತಿರೋ ಒಂದೊಂದು ಪ್ರಯತ್ನನೂ ಆತನು ಆಶೀರ್ವದಿಸ್ತಾನೆ.

ಯೆಹೂದ

13. ಯಾಕೋಬ ಮಾತಾಡೋಕೆ ಬಂದಾಗ ಯೆಹೂದನಿಗೆ ಯಾಕೆ ಭಯ ಆಗಿರುತ್ತೆ?

13 ಯಾಕೋಬ ಈಗ ಯೆಹೂದನ ಹತ್ರ ಮಾತಾಡ್ತಾನೆ. ಅಣ್ಣಂದಿರ ಹತ್ರ ಅಪ್ಪ ಮಾತಾಡಿದ್ದನ್ನ ಅವನು ಕೇಳಿಸ್ಕೊಳ್ತಿದ್ದ. ಅದಕ್ಕೆ ಅವನಿಗೆ ಈಗ ‘ನನಗೇನು ಕಾದಿದ್ಯೋ’ ಅಂತ ಭಯ ಆಗ್ತಿರುತ್ತೆ. ಯಾಕಂದ್ರೆ ಅವನೂ ದೊಡ್ಡದೊಡ್ಡ ತಪ್ಪುಗಳನ್ನ ಮಾಡಿದ್ದ. ಸಿಮೆಯೋನ ಮತ್ತೆ ಲೇವಿ ಶೆಕೆಮ್‌ನನ್ನ ಕೊಂದ್ಮೇಲೆ, ಅವನ ಅಣ್ಣತಮ್ಮಂದಿರ ಜೊತೆ ಇವನೂ ಹೋಗಿ ಆ ಊರನ್ನ ಲೂಟಿ ಮಾಡಿದ್ದ. (ಆದಿ. 34:27) ಅಷ್ಟೇ ಅಲ್ಲ, ಇವನು ಅಣ್ಣತಮ್ಮಂದಿರ ಜೊತೆ ಸೇರಿಕೊಂಡು ಯೋಸೇಫನನ್ನ ಮಾರಿದ್ದ, ‘ಯೋಸೇಫ ಸತ್ತು ಹೋದ’ ಅಂತ ಅಪ್ಪನಿಗೆ ಸುಳ್ಳು ಹೇಳಿದ್ದ. (ಆದಿ. 37:31-33) ಆಮೇಲೆ ತನ್ನ ಸೊಸೆ ತಾಮಾರಳನ್ನ ವೇಶ್ಯೆ ಅಂದ್ಕೊಂಡು ಅವಳ ಜೊತೆ ಅನೈತಿಕತೆ ಮಾಡಿದ್ದ.—ಆದಿ. 38:15-18.

14. ಯೆಹೂದ ಯಾವ ಒಳ್ಳೇ ಕೆಲಸಗಳನ್ನ ಮಾಡಿದ್ದ? (ಆದಿ. 49:8, 9)

14 ಆದ್ರೆ ಯೆಹೂದ ಕೆಲವು ಒಳ್ಳೇ ಕೆಲಸಗಳನ್ನೂ ಮಾಡಿದ್ದ. ವಯಸ್ಸಾಗಿದ್ದ ಅಪ್ಪನನ್ನ ತುಂಬ ಚೆನ್ನಾಗಿ ನೋಡ್ಕೊಂಡಿದ್ದ. ಅಷ್ಟೇ ಅಲ್ಲ, ಎಲ್ರಿಗಿಂತ ಚಿಕ್ಕವನಾಗಿದ್ದ ಬೆನ್ಯಾಮೀನ್‌ಗೆ ಪ್ರೀತಿ ಕಾಳಜಿ ತೋರಿಸಿದ್ದ. (ಆದಿ. 44:18, 30-34) ಅದಕ್ಕೆ ಯಾಕೋಬ ಯೆಹೂದನನ್ನ ಹೊಗಳ್ತಾನೆ, ಅವನಿಗೆ ಆಶೀರ್ವಾದ ಮಾತ್ರ ಕೊಡ್ತಾನೆ.—ಆದಿಕಾಂಡ 49:8, 9 ಓದಿ.

15. ಯಾಕೋಬ ಯೆಹೂದನಿಗೆ ಹೇಳಿದ ಮಾತು ಹೇಗೆ ನಿಜ ಆಯ್ತು?

15 ಯೆಹೂದ ಅವನ ಅಣ್ಣತಮ್ಮಂದಿರಲ್ಲಿ ನಾಯಕನಾಗಿ ಇರ್ತಾನೆ ಅಂತ ಯಾಕೋಬ ಹೇಳಿದ. ಇದು 200 ವರ್ಷ ಆದ್ಮೇಲೆ ನೆರವೇರೋಕೆ ಶುರು ಆಯ್ತು. ಆಗ ಇಸ್ರಾಯೇಲ್ಯರು ದೇವರು ಮಾತು ಕೊಟ್ಟ ದೇಶದ ಕಡೆಗೆ ಹೋಗ್ತಿದ್ರು. ಯೆಹೂದ ಕುಲದವರು ಎಲ್ರಿಗಿಂತ ಮುಂದೆ ಹೋದ್ರು. ಅವ್ರ ಹಿಂದೆ ಬೇರೆ ಕುಲದವರು ಹೋದ್ರು. (ಅರ. 10:14) ಸ್ವಲ್ಪ ವರ್ಷ ಆದ್ಮೇಲೆ ಮಾತು ಕೊಟ್ಟ ದೇಶನ ವಶ ಮಾಡ್ಕೊಳ್ಳೋಕೆ ಯೆಹೂದ ಕುಲದವ್ರೇ ಮೊದ್ಲು ಕಾನಾನ್ಯರ ವಿರುದ್ಧ ಹೋರಾಡಿದ್ರು. (ನ್ಯಾಯ. 1:1, 2) ಇದಿಷ್ಟೇ ಅಲ್ಲ, ದಾವೀದ ಯೆಹೂದ ಕುಲದಲ್ಲಿ ಮೊದಲ್ನೇ ರಾಜನಾದ. ಅವನಾದ್ಮೇಲೆ ತುಂಬ ರಾಜರು ಆ ಕುಲದಿಂದ ಬಂದ್ರು. ಈ ಭವಿಷ್ಯವಾಣಿ ಇನ್ನೂ ಬೇರೆಬೇರೆ ರೀತಿಲಿ ನಿಜ ಆಯ್ತು. ಅದು ಹೇಗೆ?

16. ಆದಿಕಾಂಡ 49:10ರಲ್ಲಿ ಯಾಕೋಬ ಹೇಳಿರೋ ಭವಿಷ್ಯವಾಣಿ ಹೇಗೆ ನಿಜ ಆಯ್ತು? (“ಯಾಕೋಬ ಹೇಳಿದ ಭವಿಷ್ಯವಾಣಿಗಳು” ಅನ್ನೋ ಚೌಕ ನೋಡಿ.)

16 ಇಡೀ ಭೂಮಿನ ಶಾಶ್ವತವಾಗಿ ಆಳೋ ಒಬ್ಬ ರಾಜ ಯೆಹೂದ ಕುಲದಿಂದಾನೇ ಬರ್ತಾನೆ ಅಂತ ಯಾಕೋಬ ಹೇಳಿದ. ಅವನನ್ನ “ಶೀಲೋ” ಅಂತ ಯಾಕೋಬ ಕರೆದಿದ್ದಾನೆ. (ಆದಿಕಾಂಡ 49:10 ಮತ್ತು ಪಾದಟಿಪ್ಪಣಿ ಓದಿ.) ಆ ರಾಜನೇ ಯೇಸು ಕ್ರಿಸ್ತ. ಯೇಸು ಬಗ್ಗೆ ಒಬ್ಬ ದೇವದೂತ, “ದೇವರು ಆತನಿಗೆ ಪೂರ್ವಜನಾದ ದಾವೀದನ ಸಿಂಹಾಸನ ಕೊಡ್ತಾನೆ” ಅಂತ ಹೇಳಿದ. (ಲೂಕ 1:32, 33) ಅಷ್ಟೇ ಅಲ್ಲ, ಯೇಸುನ “ಯೆಹೂದ ಕುಲದ ಸಿಂಹ” ಅಂತಾನೂ ಬೈಬಲ್‌ ಕರೆದಿದೆ.—ಪ್ರಕ. 5:5.

ಯಾಕೋಬ ಹೇಳಿದ ಭವಿಷ್ಯವಾಣಿಗಳು

ಯೆಹೂದ.

ಮಗ

ಯೆಹೂದ

ಭವಿಷ್ಯವಾಣಿ

“ಶೀಲೋ ಬರೋ ತನಕ ರಾಜದಂಡ ಯೆಹೂದನ ಕೈಯಿಂದ ತಪ್ಪಿ ಹೋಗಲ್ಲ.”—ಆದಿ. 49:10.

ನೆರವೇರಿಕೆ

ಯೆಹೂದ ಕುಲದಿಂದ ಬಂದ ಯೇಸು ದೇವರ ಆಳ್ವಿಕೆಯ ರಾಜನಾದ.—ಲೂಕ 1:32, 33.

17. ಯೆಹೋವನಿಂದ ನಾವೇನು ಕಲಿಬಹುದು?

17 ನಾವೇನು ಕಲಿಬಹುದು? ಯೆಹೂದ ದೊಡ್ಡದೊಡ್ಡ ತಪ್ಪುಗಳನ್ನ ಮಾಡಿದ್ರೂ ಯೆಹೋವ ಅವನನ್ನ ಆಶೀರ್ವದಿಸಿದನು. ಇದನ್ನ ನೋಡಿ ಅವನ ಅಣ್ಣತಮ್ಮಂದಿರಿಗೆ ಆಶ್ಚರ್ಯ ಆಗಿರಬಹುದು. ಯೆಹೋವ, ಯೆಹೂದನಲ್ಲಿದ್ದ ಒಳ್ಳೇ ಗುಣಗಳನ್ನ ನೋಡಿದ್ರಿಂದಾನೇ ಅವನನ್ನ ಆಶೀರ್ವದಿಸಿದನು. ಯೆಹೋವ ದೇವ್ರಿಂದ ನಾವೇನು ಕಲಿಬಹುದು? ನಮ್ಮ ಸಹೋದರರಲ್ಲಿ ಯಾರಿಗಾದ್ರೂ ಒಂದು ವಿಶೇಷ ಸುಯೋಗ ಸಿಕ್ಕಿದ್ರೆ ‘ಅಯ್ಯೋ, ಇವ್ರಿಗೆ ಸಿಕ್ತಾ, ಇವ್ರಿಗೆ ಹೆಂಗ್‌ ಸಿಕ್ತು?’ ಅಂತ ಅಂದ್ಕೊಬಾರದು. ಯೆಹೋವ ಅವ್ರಲ್ಲಿರೋ ಒಳ್ಳೇ ಗುಣಗಳನ್ನ ನೋಡಿ ಅವ್ರಿಗೆ ಆ ಸುಯೋಗನ ಕೊಟ್ಟಿರ್ತಾನೆ ಅಂತ ನೆನಪಿಡಬೇಕು. ಯೆಹೋವ ಯಾವಾಗ್ಲೂ ತನ್ನನ್ನ ಆರಾಧಿಸೋ ಜನ್ರಲ್ಲಿ ಒಳ್ಳೇ ಗುಣಗಳನ್ನೇ ನೋಡ್ತಾನೆ. ನಾವೂ ಅದನ್ನೇ ನೋಡಬೇಕು.

18. ನಾವು ಯೆಹೂದ ಕುಲದವರಿಂದ ಏನು ಕಲಿಬಹುದು?

18 ತಾಳ್ಮೆಯಿಂದ ಕಾಯಬೇಕು ಅನ್ನೋ ಪಾಠನ ನಾವು ಯೆಹೂದ ಕುಲದವರಿಂದ ಕಲಿಬಹುದು. ಯೆಹೋವ ಒಂದು ಮಾತು ಕೊಟ್ರೆ ಅದನ್ನ ಮಾಡೇ ಮಾಡ್ತಾನೆ. ಆದ್ರೆ ಅದನ್ನ ನಾವು ಅಂದ್ಕೊಂಡ ರೀತಿಲಿ ಅಥವಾ ಟೈಮಲ್ಲಿ ಮಾಡದೇ ಇರಬಹುದು. ಯೆಹೂದ ಕುಲದವರು ಇದನ್ನ ಅರ್ಥ ಮಾಡ್ಕೊಂಡ್ರು. ಅವರು ನಾಯಕರಾಗ್ತಾರೆ ಅಂತ ಯಾಕೋಬ ಹೇಳಿದ್ದು ತಕ್ಷಣ ನಿಜ ಆಗ್ಲಿಲ್ಲ. ಅವ್ರ ಬದಲು ಬೇರೆಯವರು ನಾಯಕರಾದ್ರು. ಉದಾಹರಣೆಗೆ, ಮೋಶೆ ನಾಯಕನಾದ, ಇವನು ಲೇವಿ ಕುಲದವನಾಗಿದ್ದ. ಆಮೇಲೆ ಯೆಹೋಶುವ ನಾಯಕನಾದ, ಇವನು ಎಫ್ರಾಯೀಮ್‌ ಕುಲದವನಾಗಿದ್ದ. ಆಮೇಲೆ ಸೌಲ ರಾಜನಾದ, ಇವನು ಬೆನ್ಯಾಮಿನ್‌ ಕುಲದವನಾಗಿದ್ದ. ಆಗೆಲ್ಲ ಯೆಹೂದ ಕುಲದವರು ಇವ್ರಿಗೆ ಬೆಂಬಲ ಕೊಟ್ರು. ಅದೇ ತರ ನಮ್ಮನ್ನ ನಡೆಸೋಕೆ ಯೆಹೋವ ದೇವರು ಯಾರನ್ನೇ ನೇಮಿಸ್ಲಿ ನಾವು ಅವ್ರಿಗೆ ಮನಸಾರೆ ಬೆಂಬಲ ಕೊಡಬೇಕು.—ಇಬ್ರಿ. 6:12.

19. ಈ ಲೇಖನದಲ್ಲಿ ನಾವು ಯೆಹೋವ ದೇವರ ಬಗ್ಗೆ ಏನ್‌ ಕಲಿತ್ವಿ?

19 ಯಾಕೋಬ ಸಾಯೋ ಮುಂಚೆ ಮೊದಲ 4 ಮಕ್ಕಳಿಗೆ ಹೇಳಿದ ಮಾತಿಂದ ನಾವೇನ್‌ ಕಲಿತ್ವಿ? “ಮನುಷ್ಯರು ನೋಡೋ ತರ ದೇವರು ನೋಡಲ್ಲ. ಮನುಷ್ಯರು ಕಣ್ಣಿಗೆ ಕಾಣಿಸೋದನ್ನ ನೋಡ್ತಾರೆ. ಆದ್ರೆ ಯೆಹೋವ ಹೃದಯದಲ್ಲಿ ಇರೋದನ್ನ ನೋಡ್ತಾನೆ” ಅಂತ ಕಲಿತ್ವಿ. (1 ಸಮು. 16:7) ಯೆಹೋವ ತಾಳ್ಮೆ ತೋರಿಸ್ತಾನೆ, ನಮ್ಮನ್ನ ಕ್ಷಮಿಸ್ತಾನೆ ಅಂತಾನೂ ಕಲಿತ್ವಿ. ನಾವು ತಪ್ಪು ಮಾಡಿದಾಗ ಯೆಹೋವನಿಗೆ ಬೇಜಾರಾಗುತ್ತೆ ನಿಜ. ಆದ್ರೆ ನಾವು ಯಾವತ್ತೂ ತಪ್ಪೇ ಮಾಡಬಾರದು ಅಂತ ಆತನು ಅಂದ್ಕೊಳಲ್ಲ. ಮಾಡಿದ ತಪ್ಪಿಗೆ ಮನಸಾರೆ ಪಶ್ಚಾತ್ತಾಪ ಪಟ್ರೆ, ತಿದ್ಕೊಂಡು ಸರಿಯಾಗಿರೋದನ್ನ ಮಾಡಿದ್ರೆ ನಮ್ಮನ್ನ ಆತನು ಆಶೀರ್ವದಿಸ್ತಾನೆ ಅಂತ ನೋಡಿದ್ವಿ. ನಾವು ಮುಂದಿನ ಲೇಖನದಲ್ಲಿ ಯಾಕೋಬ ತನ್ನ ಉಳಿದ 8 ಗಂಡು ಮಕ್ಕಳಿಗೆ ಏನ್‌ ಹೇಳಿದ ಅಂತ ನೋಡೋಣ.

ಯಾಕೋಬ ಇವ್ರಿಗೆಲ್ಲ ಹೇಳಿದ ಮಾತಿಂದ ನೀವೇನು ಕಲಿತ್ರಿ?

  • ರೂಬೇನ

  • ಸಿಮೆಯೋನ ಮತ್ತು ಲೇವಿ

  • ಯೆಹೂದ

ಗೀತೆ 49 ಯೆಹೋವನ ಮನಸ್ಸನ್ನ ಖುಷಿಪಡಿಸುವುದು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ