ಅಧ್ಯಯನ ಲೇಖನ 25
ಗೀತೆ 96 ಯೆಹೋವನ ಅಮೂಲ್ಯ ಗ್ರಂಥ
ಯಾಕೋಬ ಸಾಯೋ ಮುಂಚೆ ಹೇಳಿದ ಮಾತುಗಳು—ಭಾಗ 2
“ಅವನು ಪ್ರತಿಯೊಬ್ಬನಿಗೆ ತಕ್ಕ ಆಶೀರ್ವಾದ ಕೊಟ್ಟ.”—ಆದಿ. 49:28.
ಈ ಲೇಖನದಲ್ಲಿ ಏನಿದೆ?
ಯಾಕೋಬ ಸಾಯೋ ಮುಂಚೆ ತನ್ನ ಉಳಿದ ಎಂಟು ಗಂಡು ಮಕ್ಕಳಿಗೆ ಏನಂತ ಹೇಳಿದ, ಮತ್ತೆ ಅದ್ರಿಂದ ನಾವೇನು ಕಲಿತೀವಿ ಅಂತ ನೋಡೋಣ.
1. ಈ ಲೇಖನದಲ್ಲಿ ಏನು ಕಲಿತೀವಿ?
ಯಾಕೋಬನ ಸುತ್ತ ಅವನ ಗಂಡು ಮಕ್ಕಳು ನಿಂತಿದ್ದಾರೆ. ಹಿಂದಿನ ಲೇಖನದಲ್ಲಿ ನಾವು ನೋಡಿದ ತರ ಯಾಕೋಬ ತನ್ನ ನಾಲ್ಕು ಮಕ್ಕಳಿಗೆ ಅಂದ್ರೆ ರೂಬೇನ, ಸಿಮೆಯೋನ, ಲೇವಿ ಮತ್ತು ಯೆಹೂದನಿಗೆ ಆಶೀರ್ವಾದ ಮಾಡಿದ. ಅವನು ಅವ್ರಿಗೆ ಹೇಳಿದ ಮಾತುಗಳನ್ನ ಕೇಳಿಸ್ಕೊಂಡಾಗ ಅಲ್ಲಿದ್ದ ಎಲ್ರಿಗೂ ಖಂಡಿತ ಆಶ್ಚರ್ಯ ಆಗಿರುತ್ತೆ. ಈಗ ಇನ್ನುಳಿದ ಎಂಟು ಗಂಡು ಮಕ್ಕಳಿಗೆ ಯಾಕೋಬ ಏನಂತ ಹೇಳ್ತಾನೆ ಅಂತ ಎಲ್ರೂ ತವಕದಿಂದ ಕಾಯ್ತಿದ್ದಾರೆ. ಈಗ ಜೆಬುಲೂನ, ಇಸ್ಸಾಕಾರ, ದಾನ್, ಗಾದ್, ಅಶೇರ್, ನಫ್ತಾಲಿ, ಯೋಸೇಫ ಮತ್ತು ಬೆನ್ಯಾಮೀನನಿಗೆ ಯಾಕೋಬ ಸಾಯೋ ಮುಂಚೆ ಏನು ಹೇಳಿದ ಅಂತ ನೋಡೋಣ. ಅವನು ಅವ್ರಿಗೆ ಹೇಳಿದ ಮಾತುಗಳಿಂದ ನಾವೇನು ಕಲಿಬಹುದು ಅಂತ ತಿಳಿಯೋಣ.a
ಜೆಬುಲೂನ
2. (ಎ) ಜೆಬುಲೂನನಿಗೆ ಯಾವ ಆಶೀರ್ವಾದ ಸಿಕ್ತು? (ಬಿ) ಅದು ಹೇಗೆ ನೆರವೇರಿತು? (ಆದಿಕಾಂಡ 49:13) (ಚೌಕ ನೋಡಿ.)
2 ಆದಿಕಾಂಡ 49:13 ಓದಿ. ಯಾಕೋಬ ಜೆಬುಲೂನನಿಗೆ ‘ನಿನ್ನ ವಂಶಕ್ಕೆ ಮಾತು ಕೊಟ್ಟ ದೇಶದ ಉತ್ತರ ಭಾಗದಲ್ಲಿ ಆಸ್ತಿ ಸಿಗುತ್ತೆ. ಅದು ಸಮುದ್ರ ತೀರದ ಹತ್ರ ಇರುತ್ತೆ’ ಅಂತ ಹೇಳಿದ. 200 ವರ್ಷ ಆದ್ಮೇಲೆ ಜೆಬುಲೂನನ ವಂಶದವ್ರಿಗೆ ಆಸ್ತಿ ಸಿಕ್ತು. ಆ ಜಾಗದ ಒಂದು ಕಡೆ ಗಲಿಲಾಯ ಸಮುದ್ರ ಇತ್ತು, ಇನ್ನೊಂದು ಕಡೆ ಮೆಡಿಟರೇನಿಯನ್ ಸಮುದ್ರ ಇತ್ತು. ಇದ್ರ ಬಗ್ಗೆ ಮೋಶೆ, ‘ಜೆಬುಲೂನನೇ, ನಿನ್ನ ವ್ಯಾಪಾರದಲ್ಲಿ ಖುಷಿ ಪಡು’ ಅಂತ ಹೇಳಿದ. (ಧರ್ಮೋ. 33:18) ಅವನು ಹೇಳಿದ ಮಾತಿನ ಅರ್ಥ ಏನು? ಜೆಬುಲೂನನ ವಂಶದವರು ಸಮುದ್ರದ ತೀರದಲ್ಲಿ ಜೀವಿಸ್ತಿದ್ರು. ಹಾಗಾಗಿ ಇವ್ರಿಗೆ ಎರಡೂ ಕಡೆ ಇದ್ದ ಸಮುದ್ರದ ತೀರಕ್ಕೆ ಹೋಗಿ ವ್ಯಾಪಾರ ಮಾಡೋ ಅವಕಾಶ ಇತ್ತು.
3. ಖುಷಿಯಾಗಿರೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?
3 ನಾವೇನು ಕಲಿಬಹುದು? ನಾವು ಎಲ್ಲೇ ಇರಲಿ, ಪರಿಸ್ಥಿತಿ ಹೇಗೆ ಇರಲಿ ಸಂತೋಷವಾಗಿರೋದು ನಮ್ಮ ಕೈಲಿದೆ. ‘ಹಾಸಿಗೆ ಇದ್ದಷ್ಟೇ ಕಾಲು ಚಾಚಿ’ ಅನ್ನೋ ಗಾದೆ ತರ ನಮ್ಮ ಹತ್ರ ಇರೋದ್ರಲ್ಲೇ ಸಂತೃಪ್ತಿಪಟ್ರೆ, ನಾವು ಖುಷಿಯಾಗಿರ್ತೀವಿ. (ಕೀರ್ತ. 16:6; 24:5) ಕೆಲವೊಂದು ಸಲ ನಮ್ಮ ಹತ್ರ ಏನಿಲ್ವೋ ಅದ್ರ ಬಗ್ಗೆ ನಾವು ಜಾಸ್ತಿ ಯೋಚ್ನೆ ಮಾಡಿಬಿಡ್ತೀವಿ. ಆಗ ನಮ್ಮ ಸಂತೋಷ ಕಳ್ಕೊಳ್ತೀವಿ. ಅದ್ರ ಬದ್ಲು ನಮ್ಮ ಹತ್ರ ಇರೋ ಒಳ್ಳೆ ವಿಷ್ಯಗಳ ಬಗ್ಗೆ ಯೋಚ್ನೆ ಮಾಡೋಣ. ಆಗ ಯಾವಾಗ್ಲೂ ಖುಷಿಯಾಗಿರ್ತೀವಿ.—ಗಲಾ. 6:4.
ಇಸ್ಸಾಕಾರ
4. (ಎ) ಇಸ್ಸಾಕಾರನಿಗೆ ಯಾಕೋಬ ಏನಂತ ಆಶೀರ್ವಾದ ಮಾಡಿದ? (ಬಿ) ಅದು ಹೇಗೆ ನೆರವೇರಿತು? (ಆದಿಕಾಂಡ 49:14, 15) (ಚೌಕ ನೋಡಿ.)
4 ಆದಿಕಾಂಡ 49:14, 15 ಓದಿ. ಕತ್ತೆ ಕಷ್ಟಪಟ್ಟು ಕೆಲಸ ಮಾಡೋ ತರ ಇಸ್ಸಾಕಾರ ಕೂಡ ಬೆವರು ಸುರಿಸಿ ಕಷ್ಟಪಟ್ಟು ಕೆಲಸ ಮಾಡ್ತಾನೆ ಅಂತ ಯಾಕೋಬ ಹೊಗಳಿದ. ಅಷ್ಟೇ ಅಲ್ಲ, ಇಸ್ಸಾಕಾರನಿಗೆ ಒಂದು ಫಲವತ್ತಾದ ಭೂಮಿ ಆಸ್ತಿಯಾಗಿ ಸಿಗುತ್ತೆ ಅಂತಾನೂ ಹೇಳಿದ. ಅವನು ಹೇಳಿದ ತರನೇ ಈ ಕುಲಕ್ಕೆ ಯೊರ್ದನ್ ನದಿ ಪಕ್ಕದಲ್ಲಿರೋ ಫಲವತ್ತಾದ ಭೂಮಿ ಸಿಕ್ತು. (ಯೆಹೋ. 19:22) ಈ ಜಾಗದಲ್ಲಿ ಬೆಳೆ ಬೆಳೆಯೋಕೆ ಅವರು ಬೆವರು ಸುರಿಸಿ ದುಡಿತಿದ್ರು. ಅಷ್ಟೇ ಅಲ್ಲ, ಬೇರೆಯವ್ರಿಗೆ ಸಹಾಯ ಮಾಡೋಕೂ ಕಷ್ಟಪಟ್ಟು ಕೆಲಸ ಮಾಡ್ತಿದ್ರು. (1 ಅರ. 4:7, 17) ಉದಾಹರಣೆಗೆ, ಶತ್ರು ಸಿಸೇರನ ವಿರುದ್ಧ ಯುದ್ಧ ಮಾಡೋಕೆ ನ್ಯಾಯಾಧೀಶ ಬಾರಾಕ ಮತ್ತು ಪ್ರವಾದಿನಿ ದೆಬೋರ ಇಸ್ರಾಯೇಲ್ಯರ ಹತ್ರ ಸಹಾಯ ಕೇಳಿದ್ರು. ಆಗ ಇಸ್ಸಾಕಾರನ ಕುಲದವರು ಸಹಾಯ ಮಾಡಿದ್ರು. ಇದೊಂದೇ ಸಲ ಅಲ್ಲ, ಹೀಗೆ ಎಷ್ಟೊಂದು ಸಲ ಯುದ್ಧ ಮಾಡೋಕೆ ಅವರು ಮುಂದೆ ಬಂದ್ರು.—ನ್ಯಾಯ. 5:15.
5. ನಾವ್ಯಾಕೆ ಬೆವರು ಸುರಿಸಿ ಕಷ್ಟಪಡಬೇಕು?
5 ನಾವೇನು ಕಲಿಬಹುದು? ಇಸ್ಸಾಕಾರನ ಕುಲದವರು ಕಷ್ಟಪಟ್ಟು ಕೆಲಸ ಮಾಡೋದನ್ನ ನೋಡಿ ಯೆಹೋವ ಅವ್ರನ್ನ ಮೆಚ್ಕೊಂಡನು. (ಪ್ರಸಂ. 2:24) ನಾವು ಯೆಹೋವನಿಗಾಗಿ ಕಷ್ಟಪಟ್ರೆ ಆತನು ನಮ್ಮನ್ನೂ ಮೆಚ್ಕೊಳ್ತಾನೆ. ಉದಾಹರಣೆಗೆ, ಸಹೋದರರು ಸಭೆಗೋಸ್ಕರ, ಸಭೆಲಿರೋ ಪ್ರತಿಯೊಬ್ರಿಗೋಸ್ಕರ ತುಂಬ ಕಷ್ಟಪಟ್ಟು ಕೆಲಸ ಮಾಡ್ತಾರೆ. (1 ತಿಮೊ. 3:1) ಅವರು ಇಸ್ಸಾಕಾರನ ಕುಲದವ್ರ ತರ ಈಗ ಯುದ್ಧಕ್ಕೆ ಹೋಗಲ್ಲ ನಿಜ. ಆದ್ರೆ ಸಭೆಯವ್ರಿಗೆ ಯೆಹೋವನ ಜೊತೆ ಇರೋ ಸಂಬಂಧ ಹಾಳಾಗಬಾರದು ಅಂತ ಹಗಲೂ ರಾತ್ರಿ ದುಡಿತಾರೆ. (1 ಕೊರಿಂ. 5:1, 5; ಯೂದ 17-23) ಅಷ್ಟೇ ಅಲ್ಲ, ಇಡೀ ಸಭೆನ ಬಲಪಡಿಸೋಕೆ, ಪ್ರೋತ್ಸಾಹಿಸೋಕೆ ಒಳ್ಳೊಳ್ಳೆ ಭಾಷಣಗಳನ್ನ ತಯಾರಿ ಮಾಡಿ ಕೊಡ್ತಾರೆ.—1 ತಿಮೊ. 5:17.
ದಾನ್
6. ದಾನ್ ಕುಲದವ್ರ ಬಗ್ಗೆ ಯಾಕೋಬ ಏನು ಹೇಳಿದ? (ಆದಿಕಾಂಡ 49:17, 18) (ಚೌಕ ನೋಡಿ.)
6 ಆದಿಕಾಂಡ 49:17, 18 ಓದಿ. ದಾನ್ ಕುಲನ ತನಗಿಂತ ದೊಡ್ಡದಾಗಿರೋ ಯುದ್ಧದ ಕುದುರೆಗಳನ್ನ ಕಚ್ಚಿ ಸಾಯಿಸೋ ವಿಷಕಾರಿ ಹಾವಿಗೆ ಯಾಕೋಬ ಹೋಲಿಸ್ತಾನೆ. ದಾನ್ ಕುಲದವರು ತಮಗಿಂತ ಬಲಿಷ್ಠ ಆಗಿರೋ ಶತ್ರುಗಳ ವಿರುದ್ಧ ಹೋರಾಡ್ತಾರೆ, ಧೈರ್ಯಶಾಲಿಗಳಾಗಿ ಇರ್ತಾರೆ ಅಂತ ಅವನು ಹೇಳಿದ. ಅವನು ಹೇಳಿದ್ದು ನಿಜ ಆಯ್ತು. ದೇವರು ಮಾತು ಕೊಟ್ಟ ದೇಶಕ್ಕೆ ಇಸ್ರಾಯೇಲ್ಯರು ಹೋಗುವಾಗ ಎಲ್ರಿಗೂ ಸಂರಕ್ಷಣೆ ಕೊಡೋಕೆ ದಾನ್ ಕುಲದವರು ಹಿಂದೆ ಹೋಗ್ತಿದ್ರು. (ಅರ. 10:25) ದಾನ್ ಕುಲದವರು ಹಿಂದೆ ನಿಂತು ಮಾಡ್ತಿದ್ದ ಕೆಲಸ ಮುಂದೆ ಹೋಗ್ತಿದ್ದ ಇಸ್ರಾಯೇಲ್ಯರಿಗೆ ಪೂರ್ತಿ ಕಾಣಿಸ್ತಿರ್ಲಿಲ್ಲ. ಆದ್ರೆ ಇವರು ಮಾಡ್ತಿದ್ದ ಕೆಲಸ ತುಂಬ ಮುಖ್ಯ ಆಗಿತ್ತು.
7. ನಮಗೆ ಯಾವುದೇ ನೇಮಕ ಸಿಗ್ಲಿ ಅದನ್ನ ಹೇಗೆ ನೋಡಬೇಕು?
7 ನಾವೇನು ಕಲಿಬಹುದು? ನೀವು ಮಾಡೋ ಕೆಲಸನ ಯಾರೂ ಗಮನಿಸದೇ ಇರಬಹುದು, ಮೆಚ್ಕೊಳದೇ ಹೋಗಬಹುದು. ಉದಾಹರಣೆಗೆ ನೀವು ರಾಜ್ಯ ಸಭಾಗೃಹನ ಕ್ಲೀನ್ ಮಾಡ್ತಾ ಇರಬಹುದು ಅಥವಾ ಸಮ್ಮೇಳನ, ಅಧಿವೇಶನಗಳು ನಡೀವಾಗ ಬೇರೆಬೇರೆ ಡಿಪಾರ್ಟ್ಮೆಂಟಲ್ಲಿ ಕೆಲಸ ಮಾಡಿರಬಹುದು. ನೀವು ಇದನ್ನೆಲ್ಲ ಮಾಡ್ತಿದ್ದೀರ ಅಂದ್ರೆ, ವೆರಿ ಗುಡ್! ಬೇರೆ ಯಾರೂ ನಿಮ್ಮನ್ನ ಗಮನಿಸಿಲ್ಲ ಅಂದ್ರೂ ಯೆಹೋವ ಅಂತೂ ನೀವು ಮಾಡೋ ಒಂದೊಂದು ಕೆಲಸಾನೂ ಗಮನಿಸ್ತಾನೆ, ಮೆಚ್ಕೊಳ್ತಾನೆ. ಯಾಕಂದ್ರೆ, ಜನ ನೋಡ್ಲಿ ಅಂತ ನೀವು ಈ ಕೆಲ್ಸಗಳನ್ನ ಮಾಡ್ತಿಲ್ಲ, ಯೆಹೋವನ ಮೇಲೆ ನಿಮಗಿರೋ ಪ್ರೀತಿನ ತೋರಿಸೋಕೆ ಮಾಡ್ತಿದ್ದೀರ. ಹಾಗಾಗಿ ಯೆಹೋವ ನಿಮ್ಮನ್ನ ನೋಡಿ ಹೆಮ್ಮೆ ಪಡ್ತಾನೆ.—ಮತ್ತಾ. 6:1-4.
ಗಾದ್
8. ಗಾದ್ ಕುಲದವ್ರ ಮೇಲೆ ದಾಳಿ ಮಾಡೋದು ಶತ್ರುಗಳಿಗೆ ಯಾಕೆ ತುಂಬ ಸುಲಭ ಆಗಿತ್ತು? (ಆದಿಕಾಂಡ 49:19) (ಚೌಕ ನೋಡಿ.)
8 ಆದಿಕಾಂಡ 49:19 ಓದಿ. ಗಾದನ ಮೇಲೆ ಕೊಳ್ಳೆ ಹೊಡೆಯೋರ ಗುಂಪು ದಾಳಿ ಮಾಡುತ್ತೆ ಅಂತ ಯಾಕೋಬ ಹೇಳಿದ. 200 ವರ್ಷ ಆದ್ಮೇಲೆ ಗಾದನ ಕುಲದವ್ರಿಗೆ ಯೋರ್ದನ್ ನದಿ ಪಕ್ಕದಲ್ಲಿದ್ದ ಜಾಗ ಆಸ್ತಿಯಾಗಿ ಸಿಕ್ತು. ಆದ್ರೆ ಅದು ಶತ್ರು ದೇಶಗಳಿಗೆ ಹತ್ರದಲ್ಲೇ ಇತ್ತು. ಹಾಗಾಗಿ ಶತ್ರುಗಳು ಇವ್ರ ಮೇಲೆ ಸುಲಭವಾಗಿ ದಾಳಿ ಮಾಡಬಹುದಿತ್ತು. ಆದ್ರೂ ಗಾದ್ ಕುಲದವರು ಅವ್ರಿಗೆ ಸಿಕ್ಕಿದ ಜಾಗದಲ್ಲೇ ಜೀವನ ಮಾಡೋ ತೀರ್ಮಾನ ಮಾಡಿದ್ರು. ಯಾಕಂದ್ರೆ ಅಲ್ಲಿ ಒಳ್ಳೆ ಹುಲ್ಲು ಸಿಕ್ತಿತ್ತು. ಅವ್ರ ಪ್ರಾಣಿಗಳಿಗೆ ಒಳ್ಳೆ ಮೇವು ಸಿಕ್ತಿತ್ತು. (ಅರ. 32:1, 5) ಗಾದ್ ಕುಲದವರು ತುಂಬ ಧೈರ್ಯಶಾಲಿಗಳು. ಆದ್ರೂ ಶತ್ರು ಸೈನ್ಯಗಳಿಂದ ನಮ್ಮನ್ನ ಯೆಹೋವನೇ ಕಾಪಾಡ್ತಾನೆ ಅಂತ ಅವರು ನಂಬಿಕೆ ಇಟ್ಟಿದ್ರು. ಅಷ್ಟೇ ಅಲ್ಲ, ಮಾತು ಕೊಟ್ಟ ದೇಶದ ಉಳಿದ ಭಾಗನ ಬೇರೆ ಕುಲದವರು ವಶ ಮಾಡ್ಕೊಳೋಕೆ ಹೋಗುವಾಗ ಗಾದ್ ಕುಲದವರು ತಮ್ಮ ಸೈನಿಕರನ್ನ ಅವ್ರ ಜೊತೆ ಕಳಿಸ್ಕೊಟ್ರು. (ಅರ. 32:16-19) ಈ ತರ ಸೈನಿಕರು ಎಷ್ಟೋ ವರ್ಷಗಳವರೆಗೆ ಹೋರಾಡಿದ್ರು. ಅವರು ದೂರ ಇದ್ದಾಗ ತಮ್ಮ ಹೆಂಡ್ತಿ ಮಕ್ಕಳನ್ನ ಯೆಹೋವನೇ ಕಾಪಾಡ್ತಾನೆ ಅಂತ ನಂಬಿದ್ರು. ಅವರು ತೋರಿಸಿದ ಧೈರ್ಯ ಮತ್ತು ತ್ಯಾಗಕ್ಕೆ ಯೆಹೋವ ಅವ್ರನ್ನ ತುಂಬ ಆಶೀರ್ವದಿಸಿದನು.—ಯೆಹೋ. 22:1-4.
9. ನಮಗೆ ಯೆಹೋವನ ಮೇಲೆ ನಂಬಿಕೆ ಇದ್ರೆ ಏನು ಮಾಡ್ತೀವಿ?
9 ನಾವೇನು ಕಲಿಬಹುದು? ಕಷ್ಟ ಸಮಸ್ಯೆ ಮಧ್ಯೆನೂ ಯೆಹೋವನ ಸೇವೆ ಮಾಡ್ತಾ ಇರೋಕೆ ಆತನ ಮೇಲೆ ಭರವಸೆ ಇಡೋದನ್ನ ಕಲಿಬೇಕು. (ಕೀರ್ತ. 37:3) ಇವತ್ತು ಎಷ್ಟೋ ಜನ ಕಷ್ಟಗಳ ಮಧ್ಯೆನೂ ರಾಜ್ಯ ಸಭಾಗೃಹ ಕಟ್ಟೋ ಕೆಲಸಕ್ಕೆ ಸಹಾಯ ಮಾಡ್ತಿದ್ದಾರೆ. ಅಗತ್ಯ ಇರೋ ಕಡೆ ಹೋಗಿ ಸೇವೆ ಮಾಡ್ತಿದ್ದಾರೆ ಮತ್ತು ಸಂಘಟನೆಗೆ ಬೇರೆಬೇರೆ ರೀತಿ ಬೆಂಬಲ ಕೊಡ್ತಿದ್ದಾರೆ. ಇದನ್ನೆಲ್ಲ ಮಾಡೋಕೆ ಅವರು ತುಂಬ ತ್ಯಾಗ ಮಾಡ್ತಿದ್ದಾರೆ. ಏನೇ ಆದ್ರೂ ಯೆಹೋವ ನಮ್ಮ ಕೈ ಬಿಡಲ್ಲ ಅಂತ ನಂಬಿಕೆ ಇಟ್ಟಿರೋದ್ರಿಂದನೇ ಅವರು ಇದನ್ನೆಲ್ಲ ಮಾಡ್ತಿದ್ದಾರೆ.—ಕೀರ್ತ. 23:1.
ಅಶೇರ್
10. ಅಶೇರ್ ಕುಲದವರು ಏನು ಮಾಡಬೇಕಿತ್ತು? (ಆದಿಕಾಂಡ 49:20) (ಚೌಕ ನೋಡಿ.)
10 ಆದಿಕಾಂಡ 49:20 ಓದಿ. ಯಾಕೋಬ ಅಶೇರ್ ಕುಲದವ್ರಿಗೆ ಶ್ರೀಮಂತಿಕೆ ಇರುತ್ತೆ ಅಂತ ಹೇಳಿದ. ಅವನು ಹೇಳಿದ್ದು ಹೇಗೆ ನಿಜ ಆಯ್ತು? ಅಶೇರ್ ಕುಲದವ್ರಿಗೆ ಆಸ್ತಿಯಾಗಿ ಸಿಕ್ಕ ಜಾಗಗಳಲ್ಲಿ ಕೆಲವೊಂದು ತುಂಬ ಫಲವತ್ತಾಗಿತ್ತು. (ಧರ್ಮೋ. 33:24) ಆ ಜಾಗದ ಹತ್ರ ಮೆಡಿಟೆರೇನಿಯನ್ ಸಮುದ್ರ ಇತ್ತು, ಅಲ್ಲಿ ಸೀದೋನ್ ಬಂದರಿತ್ತು. ಆದ್ರಿಂದ ವ್ಯಾಪಾರ ತುಂಬ ಚೆನ್ನಾಗಿ ನಡೀತಿತ್ತು. ಹೀಗೆ ಶ್ರೀಮಂತಿಕೆ ತುಂಬಿ ತುಳುಕ್ತಿತ್ತು. ಆದ್ರೆ ಅಶೇರ್ ಕುಲದವರು ಆ ಜಾಗದಿಂದ ಕಾನಾನ್ಯರನ್ನ ಓಡಿಸಲಿಲ್ಲ. (ನ್ಯಾಯ. 1:31, 32) ಕಾನಾನ್ಯರ ಜೊತೆಗಿದ್ದ ಸಹವಾಸ ಅಥವಾ ಶ್ರೀಮಂತಿಕೆ, ಸತ್ಯಾರಾಧನೆ ಕಡೆಗೆ ಇವ್ರಿಗಿದ್ದ ಹುರುಪನ್ನ ಕಳ್ಕೊಳ್ಳೋಕೆ ಕಾರಣ ಆಗಿರಬಹುದು. ಉದಾಹರಣೆಗೆ, ನ್ಯಾಯಾಧೀಶ ಬಾರಾಕ, ಕಾನಾನ್ಯರನ್ನ ಓಡಿಸೋಕೆ ಸಹಾಯ ಮಾಡಿ ಅಂತ ಕೇಳ್ಕೊಂಡಾಗ ಅಶೇರ್ ಕುಲದವ್ರಲ್ಲಿ ಯಾರೂ ಮುಂದೆ ಬರಲಿಲ್ಲ. ಹಾಗಾಗಿ ಇವರು, ‘ಮೆಗಿದ್ದೋ ಬುಗ್ಗೆ ಹತ್ರ’ ಯೆಹೋವ ಇಸ್ರಾಯೇಲ್ಯರಿಗೆ ಯುದ್ಧದಲ್ಲಿ ಕೊಟ್ಟ ಅದ್ಭುತ ಜಯನ ನೋಡೋ ಅವಕಾಶನ ಕಳ್ಕೊಂಡ್ರು. (ನ್ಯಾಯ. 5:19-21) ಯುದ್ಧದಲ್ಲಿ ಜಯ ಸಿಕ್ಕಿದ್ಮೇಲೆ ಬಾರಾಕ ಮತ್ತು ದೆಬೋರ ವಿಜಯಗೀತೆ ಹಾಡಿದ್ರು. ಅದ್ರಲ್ಲಿ ‘ಅಶೇರ ಸಮುದ್ರ ತೀರದಲ್ಲಿ ಸುಮ್ಮನೆ ಕೂತ’ ಅಂದ್ರೆ ಸಹಾಯ ಮಾಡ್ಲಿಲ್ಲ ಅಂತ ಹೇಳಿದ್ರು. ಈ ಸಾಲುಗಳನ್ನ ಕೇಳಿಸ್ಕೊಂಡಾಗ ಅಶೇರ್ ಕುಲದವ್ರಿಗೆ ತುಂಬ ಅವಮಾನ ಆಗಿರುತ್ತೆ.—ನ್ಯಾಯ. 5:17.
11. ದುಡ್ಡು ಮಾಡೋದು ನಮ್ಮ ಜೀವನದಲ್ಲಿ ಯಾಕೆ ಎಲ್ಲದಕ್ಕಿಂತ ಮುಖ್ಯ ಆಗಿರಬಾರದು?
11 ನಾವೇನು ಕಲಿಬಹುದು? ನಾವು ನಮ್ಮ ಜೀವನದಲ್ಲಿ ಯೆಹೋವನಿಗೆ ಬೆಸ್ಟ್ ಕೊಡ್ಬೇಕು. ಆದ್ರೆ ಇವತ್ತು ಜನ ದುಡ್ಡೇ ದುನಿಯಾ ಅಂದ್ಕೊಂಡಿದ್ದಾರೆ. (ಜ್ಞಾನೋ. 18:11) ದುಡ್ಡಿದ್ರೆ ಸಾಕು ಆರಾಮಾಗಿ ಸಂತೋಷವಾಗಿ ಇರಬಹುದು ಅಂತ ನಂಬಿದ್ದಾರೆ. ಜೀವನ ಮಾಡೋಕೆ ನಮ್ಮೆಲ್ರಿಗೂ ದುಡ್ಡು ಬೇಕು ನಿಜ. (ಪ್ರಸಂ. 7:12; ಇಬ್ರಿ. 13:5) ಆದ್ರೆ ಅದು ಯಾವತ್ತೂ ಯೆಹೋವನ ಸೇವೆಗಿಂತ ಮುಖ್ಯ ಆಗಬಾರದು. ಹಾಗಾಗಿ ಯೆಹೋವ ದೇವರ ಸೇವೆಗೆ ನಮ್ಮ ಸಮಯ, ಶಕ್ತಿನೆಲ್ಲ ಬಳಸೋಣ. ನಾವು ಹೀಗೆ ಮಾಡಿದ್ರೆ ‘ಪರದೈಸಲ್ಲಿ ಭದ್ರವಾಗಿರೋ ಜೀವನ ಕೊಡ್ತೀನಿ’ ಅಂತ ಆತನು ಮಾತು ಕೊಟ್ಟಿದ್ದಾನೆ.—ಕೀರ್ತ. 4:8.
ನಫ್ತಾಲಿ
12. ಯಾಕೋಬ ನಫ್ತಾಲಿ ಬಗ್ಗೆ ಹೇಳಿದ ಮಾತು ಹೇಗೆ ನಿಜ ಆಗಿರಬಹುದು? (ಆದಿಕಾಂಡ 49:21) (ಚೌಕ ನೋಡಿ.)
12 ಆದಿಕಾಂಡ 49:21 ಓದಿ. ಯಾಕೋಬ, ನಫ್ತಾಲಿಗೆ ‘ಅವನು ಆಡೋ ಮಾತು ತುಂಬಾ ಇಂಪು’ ಅಂತ ಹೇಳಿದ. ಇದು ಯೇಸು ಭೂಮಿಲಿ ಸೇವೆ ಮಾಡ್ತಿದ್ದಾಗ ಮಾತಾಡಿದ ರೀತಿಗೆ ಸೂಚಿಸ್ತಿರಬಹುದು. ಯೇಸು ನಫ್ತಾಲಿ ಕುಲಕ್ಕೆ ಸೇರಿದ ಕಪೆರ್ನೌಮಲ್ಲಿ ತುಂಬ ದಿನ ಇದ್ದು ಸೇವೆ ಮಾಡಿದ್ದನು. ಅದಕ್ಕೆ ಬೈಬಲ್ ಆ ಊರನ್ನ ‘ಯೇಸುವಿನ ಊರು’ ಅಂತ ಹೇಳುತ್ತೆ. (ಮತ್ತಾ. 4:13; 9:1; ಯೋಹಾ. 7:46) ಯೇಸು ಬಗ್ಗೆ ಯೆಶಾಯ ಒಂದು ಭವಿಷ್ಯವಾಣಿಯಲ್ಲಿ ಜೆಬುಲೂನ ಮತ್ತೆ ನಫ್ತಾಲಿ ‘ದೊಡ್ಡ ಬೆಳಕನ್ನ’ ನೋಡ್ತಾರೆ ಅಂತ ಹೇಳಿದ. (ಯೆಶಾ. 9:1, 2) ಯೇಸು ತನ್ನ ಬೋಧನೆಯ ಮೂಲಕ “ಎಲ್ಲ ರೀತಿಯ ಜನ್ರಿಗೆ ಬೆಳಕು ಕೊಡೋ ನಿಜವಾದ ಬೆಳಕು” ಆದನು.—ಯೋಹಾ. 1:9.
13. ಯೆಹೋವನಿಗೆ ಇಷ್ಟ ಆಗೋ ತರ ಮಾತಾಡೋಕೆ ನಾವೇನು ಮಾಡಬೇಕು?
13 ನಾವೇನು ಕಲಿಬಹುದು? ನಾವೇನ್ ಮಾತಾಡ್ತೀವಿ, ಹೇಗೆ ಮಾತಾಡ್ತೀವಿ ಅನ್ನೋದನ್ನ ಯೆಹೋವ ನೋಡ್ತಿರ್ತಾನೆ. ಹಾಗಾಗಿ ಯೆಹೋವನಿಗೆ ಇಷ್ಟ ಆಗೋ ತರ ನಾವು ಹೇಗೆ ಇಂಪಾಗಿ ಮಾತಾಡಬಹುದು? ನಾವು ಯಾವಾಗಲೂ ಸತ್ಯನೇ ಮಾತಾಡಬೇಕು. (ಕೀರ್ತ. 15:1, 2) ಅಷ್ಟೇ ಅಲ್ಲ, ಬೇರೆಯವ್ರಿಗೆ ಪ್ರೋತ್ಸಾಹ ಕೊಡೋ ತರ ಯಾವಾಗಲೂ ಮಾತಾಡಬೇಕು. ಉದಾಹರಣೆಗೆ, ಯಾರಾದ್ರೂ ಏನಾದ್ರೂ ಒಳ್ಳೆ ಕೆಲಸ ಮಾಡಿದಾಗ ಅವ್ರನ್ನ ನಾವು ಹೊಗಳಬೇಕು. ಆದ್ರೆ ನಾವು ಯಾವತ್ತೂ ಬೇರೆಯವ್ರಲ್ಲಿ ತಪ್ಪನ್ನು ಹುಡುಕಬಾರದು, ಅವ್ರಿಗೆ ನೋವಾಗೋ ತರ ಮಾತಾಡಬಾರದು. (ಎಫೆ. 4:29) ಅಷ್ಟೇ ಅಲ್ಲ, ನಾವು ಚೆನ್ನಾಗಿ ಮಾತಾಡೋ ಕಲೆನ ಬೆಳೆಸ್ಕೊಳ್ಳೋ ಗುರಿ ಇಡಬಹುದು. ಇದನ್ನ ಬೆಳೆಸ್ಕೊಂಡ್ರೆ ಸೇವೆಲಿ ಸಿಗೋ ಜನ್ರ ಜೊತೆ ಮಾತಾಡ್ತಾ ಮಾತಾಡ್ತಾ ಯೆಹೋವ ದೇವ್ರ ಬಗ್ಗೆ ಹೇಳಬಹುದು.
ಯೋಸೇಫ
14. ಯಾಕೋಬ ಯೋಸೇಫನ ವಿಷ್ಯದಲ್ಲಿ ಹೇಳಿದ ಮಾತು ಹೇಗೆ ನಿಜ ಆಯ್ತು? (ಆದಿಕಾಂಡ 49:22, 26) (ಚೌಕ ನೋಡಿ.)
14 ಆದಿಕಾಂಡ 49:22, 26 ಓದಿ. ಯಾಕೋಬನಿಗೆ ಯೋಸೇಫನನ್ನ ನೋಡಿ ತುಂಬ ಹೆಮ್ಮೆ ಆಯ್ತು. ಯೆಹೋವ, ಯೋಸೇಫನನ್ನ ಅವನ ‘ಅಣ್ಣತಮ್ಮಂದಿರಲ್ಲಿ ಆಯ್ಕೆ ಮಾಡಿ’ ಅವನ ಕೈಲಿ ವಿಶೇಷ ಕೆಲಸ ಮಾಡಿಸಿದನು. ಯಾಕೋಬ ಯೋಸೇಫನಿಗೆ ‘ತುಂಬ ಹಣ್ಣುಗಳನ್ನು ಬಿಡುವ ಮರದ ಕೊಂಬೆ’ ಅಂತ ಹೇಳ್ತಾನೆ. ಯಾಕೋಬನೇ ಆ ಮರ, ಯೋಸೇಫ ಅದ್ರ ಕೊಂಬೆ ಆಗಿದ್ದನು. ಲೇಯಳಿಗೆ ಹುಟ್ಟಿದ ಮೊದಲನೇ ಮಗ ರೂಬೇನನಿಗೆ ಜ್ಯೇಷ್ಠಪುತ್ರನ ಹಕ್ಕು ಸಿಗಬೇಕಿತ್ತು. ಆದ್ರೆ ಅವನು ತಪ್ಪು ಮಾಡಿದ್ರಿಂದ ಆ ಹಕ್ಕನ್ನ ಕಳ್ಕೊಂಡ. (ಆದಿ. 48:5, 6; 1 ಪೂರ್ವ. 5:1, 2) ಅದಕ್ಕೆ ರಾಹೇಲಳ ಮೊದಲನೇ ಮಗನಾದ ಯೋಸೇಫನಿಗೆ ಆ ಹಕ್ಕು ಸಿಕ್ತು. ಈ ಹಕ್ಕಿನ ಪ್ರಕಾರ ಅವನಿಗೆ ಎರಡು ಪಾಲು ಆಸ್ತಿ ಸಿಗಬೇಕಿತ್ತು. ಇದು ಸಿಕ್ತಾ? ಹೌದು, ಯೋಸೇಫನ ಮಕ್ಕಳಾದ ಎಫ್ರಾಯಿಮ್ ಮತ್ತು ಮನಸ್ಸೆಗೆ ಇಸ್ರಾಯೇಲಿನ ಎರಡು ಕುಲ ಆಗೋ ಅವಕಾಶ ಸಿಕ್ತು. ಆ ಎರಡು ಕುಲಗಳಿಗೂ ಆಸ್ತಿ ಸಿಕ್ತು.—ಆದಿ. 49:25; ಯೆಹೋ. 14:4.
15. ತನಗೆ ಅನ್ಯಾಯ ಆದ್ರೂ ಯೋಸೇಫ ಹೇಗೆ ನಡ್ಕೊಂಡ?
15 ಯಾಕೋಬ ಯೋಸೇಫನ ಬಗ್ಗೆ, “ಬಿಲ್ಲುಗಾರರು ಪದೇ ಪದೇ ಅವನ ಮೇಲೆ ಬಾಣ ಎಸೆದು ದಾಳಿ ಮಾಡಿದ್ರು. ಅವನ ವಿರುದ್ಧ ಯಾವಾಗ್ಲೂ ಮನಸ್ಸಲ್ಲಿ ಕಡು ದ್ವೇಷ ಇಟ್ಕೊಂಡ್ರು” ಅಂತ ಹೇಳಿದ. (ಆದಿ. 49:23) ಈ ತರ ಮಾಡಿದ್ದು ಅವನ ಸ್ವಂತ ಅಣ್ಣಂದಿರೇ. ಅವರು ಅವನಿಗೆ ಎಷ್ಟೊಂದು ಸಲ ಅನ್ಯಾಯ ಮಾಡಿದ್ರು. ಇದ್ರಿಂದ ಅವನು ತುಂಬ ಕಷ್ಟಪಡಬೇಕಾಯ್ತು. ಆದ್ರೂ ಯೋಸೇಫ ಅಣ್ಣಂದಿರ ಮೇಲೆ ಅಥವಾ ಯೆಹೋವನ ಮೇಲೆ ಕೋಪ ಮಾಡ್ಕೊಳ್ಳಲಿಲ್ಲ. ಈ ತರ ಕಷ್ಟಗಳು ಬಂದಾಗ “ಅವನ ಬಿಲ್ಲು ನಡುಗಲಿಲ್ಲ. ಅವನ ಕೈಗಳು ಬಲಿಷ್ಠವಾಗಿ ಚುರುಕಾಗಿಯೇ ಇತ್ತು.” (ಆದಿ. 49:24) ಯಾಕೋಬ ಹೇಳಿದ ಈ ಮಾತು ಹೇಗೆ ನಿಜ ಆಯ್ತು? ಯೋಸೇಫ ತನಗೆ ಕಷ್ಟಗಳು ಬಂದಾಗ ತಾಳ್ಕೊಳೋಕೆ ಯೆಹೋವನ ಸಹಾಯ ಕೇಳಿದ. ಆಮೇಲೆ ಅವ್ರ ಅಣ್ಣ ತಮ್ಮಂದಿರನ್ನು ಕ್ಷಮಿಸಿದ. ಅಷ್ಟೇ ಅಲ್ಲ ಅವ್ರ ಜೊತೆ ಪ್ರೀತಿ, ಕಾಳಜಿಯಿಂದ ನಡ್ಕೊಂಡ. (ಆದಿ. 47:11, 12) ತನಗೆ ಬಂದ ಕಷ್ಟಗಳನ್ನ ಎದುರಿಸ್ತಾ ಒಳ್ಳೆ ಗುಣಗಳನ್ನ ಬೆಳೆಸ್ಕೊಂಡ. (ಕೀರ್ತ. 105:17-19) ಅವನು ಈ ತರ ನಡ್ಕೊಂಡಿದ್ರಿಂದ ಯೆಹೋವ ತುಂಬ ಅಮೂಲ್ಯ ಕೆಲ್ಸ ಮಾಡೋಕೆ ಅವನನ್ನ ಬಳಸಿದನು.
16. ಕಷ್ಟ ಬಂದಾಗ ಹೇಗೆ ನಡ್ಕೋಬೇಕಂತ ಯೋಸೇಫನಿಂದ ಕಲಿತೀವಿ?
16 ನಾವೇನು ಕಲಿಬಹುದು? ಕಷ್ಟ ಸಮಸ್ಯೆಗಳು ಬಂದಾಗ ಯಾವತ್ತೂ ಯೆಹೋವನ ಮೇಲಿರೋ ಮತ್ತು ಸಹೋದರರ ಮೇಲಿರೋ ಪ್ರೀತಿನ ಕಮ್ಮಿ ಮಾಡ್ಕೊಬಾರದು. ನಮಗೆ ತರಬೇತಿ ಕೊಡೋಕಂತಾನೇ ಯೆಹೋವ ಕೆಲವು ಕಷ್ಟಗಳು ಬರೋ ತರ ಬಿಡ್ತಾನೆ ಅಂತ ನೆನಪಿಡಬೇಕು. (ಇಬ್ರಿ. 12:7) ಈ ತರಬೇತಿನ ನಾವು ಪಡ್ಕೊಂಡ್ರೆ ಒಳ್ಳೆ ಗುಣಗಳನ್ನ ಬೆಳೆಸ್ಕೊಳ್ತೀವಿ, ಈಗಾಗ್ಲೇ ಇರೋ ಒಳ್ಳೇ ಗುಣಗಳನ್ನ ಇನ್ನೂ ಚೆನ್ನಾಗಿ ತೋರಿಸೋಕೆ ಕಲಿತೀವಿ. (ಇಬ್ರಿ. 12:11) ಉದಾಹರಣೆಗೆ, ಬೇರೆಯವ್ರಿಗೆ ಕರುಣೆ ತೋರಿಸೋಕೆ, ಕ್ಷಮಿಸೋಕೆ ಕಲಿತೀವಿ. ಯೋಸೇಫ ತಾಳ್ಕೊಂಡಿದ್ರಿಂದ ಯೆಹೋವ ಅವನನ್ನ ತುಂಬ ಆಶೀರ್ವದಿಸಿದನು. ನಾವು ತಾಳ್ಕೊಂಡ್ರೆ ನಮ್ಮನ್ನೂ ಆಶೀರ್ವದಿಸ್ತಾನೆ.
ಬೆನ್ಯಾಮೀನ
17. ಯಾಕೋಬ ಬೆನ್ಯಾಮೀನನಿಗೆ ಹೇಳಿದ ಮಾತು ಹೇಗೆ ನಿಜ ಆಯ್ತು? (ಆದಿಕಾಂಡ 49:27) (ಚೌಕ ನೋಡಿ.)
17 ಆದಿಕಾಂಡ 49:27 ಓದಿ. ‘ಬೆನ್ಯಾಮೀನ ತೋಳದ ಹಾಗೆ ಬೇಟೆ ಆಡ್ತಾನೆ, ಅವನು ಬೇಟೆಯನ್ನು ಬೆಳಿಗ್ಗೆ ತಿಂತಾನೆ, ಕೊಳ್ಳೆ ಹೊಡೆದದ್ದನ್ನ ಸಂಜೆ ಹಂಚ್ಕೊಳ್ತಾನೆ’ ಅಂತ ಯಾಕೋಬ ಹೇಳಿದ. (ನ್ಯಾಯ. 20:15, 16; 1 ಪೂರ್ವ. 12:2) ಏನು ಈ ಮಾತಿನ ಅರ್ಥ? ಬೆಳಿಗ್ಗೆ ಹೊತ್ತಲ್ಲಿ ಅಂದ್ರೆ ಇಸ್ರಾಯೇಲ್ಯರಲ್ಲಿ ರಾಜರ ಆಳ್ವಿಕೆ ಶುರುವಾದಾಗ ಬೆನ್ಯಾಮೀನ್ ಕುಲದವನಾದ ಸೌಲ ಮೊದಲನೇ ರಾಜನಾಗ್ತಾನೆ. ಅವನೊಬ್ಬ ವೀರ ಸೈನಿಕನಾಗಿದ್ದ, ಫಿಲಿಷ್ಟಿಯರನ್ನ ಸೋಲಿಸಿದ. (1 ಸಮು. 9:15-17, 21) ಸಂಜೆ ಹೊತ್ತಲ್ಲಿ ಅಂದ್ರೆ, ಪರ್ಶಿಯರು ಆಳ್ತಿದ್ದಾಗ ರಾಣಿ ಎಸ್ತೆರ್ ಮತ್ತು ಮೋರ್ದಕೈ ಇಸ್ರಾಯೇಲ್ಯರು ಸರ್ವನಾಶ ಆಗದೇ ಇರೋ ತರ ಕಾಪಾಡಿದ್ರು. ಇವರಿಬ್ರೂ ಬೆನ್ಯಾಮೀನ್ ಕುಲದವರಾಗಿದ್ರು.—ಎಸ್ತೇ. 2:5-7; 8:3; 10:3.
18. ಬೆನ್ಯಾಮೀನ್ ಕುಲದವ್ರ ತರ ನಾವು ಹೇಗೆ ಯೆಹೋವನಿಗೆ ನಿಯತ್ತಾಗಿರಬಹುದು?
18 ನಾವೇನು ಕಲಿಬಹುದು? ಬೆನ್ಯಾಮೀನ್ ಕುಲದಿಂದ ಒಬ್ಬ ರಾಜ ಆದಾಗ ಆ ಕುಲದವ್ರಿಗೆ ಹೆಮ್ಮೆ ಆಗಿರುತ್ತೆ. ಆದ್ರೆ ಯೆಹೋವ ಆ ರಾಜತನವನ್ನ ಯೆಹೂದ ಕುಲದ ದಾವೀದನಿಗೆ ಕೊಟ್ಟಾಗ ಅವರು ಬೇಜಾರು ಮಾಡಿಕೊಳ್ಳಲಿಲ್ಲ. ಮುಂದೆ ಅವರು ಆ ಬದಲಾವಣೆಗೆ ಬೆಂಬಲ ಕೊಟ್ರು. (2 ಸಮು. 3:17-19) ಸ್ವಲ್ಪ ವರ್ಷ ಆದ್ಮೇಲೆ ಬೇರೆ ಕುಲದವರು ಯೆಹೂದ ಕುಲದವರ ಮೇಲೆ, ಯೆಹೋವ ನೇಮಿಸಿದ ರಾಜನ ಮೇಲೆ ದಂಗೆ ಎದ್ರು. ಆದ್ರೆ ಬೆನ್ಯಾಮೀನ್ ಕುಲದವರು ಮಾತ್ರ ಯಾವಾಗ್ಲೂ ಯೆಹೋವನ ಏರ್ಪಾಡಿಗೆ ನಿಯತ್ತಾಗೇ ಇದ್ರು. (1 ಅರ. 11:31, 32; 12:19, 21) ನಾವು ಸಹ ಯೆಹೋವನಿಗೆ ಮತ್ತು ಆತನು ಇವತ್ತು ಆರಿಸಿಕೊಳ್ತಿರೋ ಸಹೋದರರಿಗೆ ನಿಯತ್ತಾಗಿರೋಣ, ಬೆಂಬಲ ಕೊಡೋಣ.—1 ಥೆಸ. 5:12.
19. ಯಾಕೋಬ ಸಾಯೋ ಮುಂಚೆ ಹೇಳಿದ ಮಾತುಗಳಿಂದ ನಮಗೇನು ಪ್ರಯೋಜ್ನ?
19 ಯಾಕೋಬ ಸಾಯೋ ಮುಂಚೆ ತನ್ನ ಗಂಡು ಮಕ್ಕಳಿಗೆ ಹೇಳಿದ ಮಾತುಗಳಿಂದ ನಮಗೂ ತುಂಬ ಪ್ರಯೋಜ್ನ ಇದೆ. ಒಂದು, ಅವನು ಹೇಳಿದ ಮಾತುಗಳು ಹೇಗೆ ನಿಜ ಆಯ್ತು ಅಂತ ತಿಳ್ಕೊಂಡ್ರೆ ಯೆಹೋವ ಬೈಬಲಲ್ಲಿ ಹೇಳಿರೋ ಪ್ರತಿಯೊಂದು ಮಾತೂ ಮುಂದೆ ನಿಜ ಆಗುತ್ತೆ ಅನ್ನೋ ನಂಬಿಕೆ ಬರುತ್ತೆ. ಎರಡು, ಯಾಕೋಬ ತನ್ನ ಮಕ್ಕಳಿಗೆ ಹೇಳಿದ ಮಾತಿಂದ ನಾವು ತುಂಬ ಪಾಠಗಳನ್ನು ಕಲಿತ್ವಿ. ಅದನ್ನೆಲ್ಲ ಪಾಲಿಸಿದ್ರೆ ಯೆಹೋವನ ಮನಸ್ಸನ್ನು ಖುಷಿ ಪಡಿಸೋಕೆ ಆಗುತ್ತೆ.
ಗೀತೆ 143 ನಿರೀಕ್ಷಿಸುತ್ತಾ, ಸಹಿಸುತ್ತಾ ಕಾಯೋಣ
a ಯಾಕೋಬ ತನ್ನ ಮೊದಲ ನಾಲ್ಕು ಮಕ್ಕಳಿಗೆ ಆಶೀರ್ವಾದ ಮಾಡ್ವಾಗ ದೊಡ್ಡವ್ರಿಂದ ಚಿಕ್ಕವ್ರಿಗೆ ಆಶೀರ್ವಾದ ಮಾಡಿದ. ಆದ್ರೆ ಇನ್ನುಳಿದ ಮಕ್ಕಳಿಗೆ ಆಶೀರ್ವಾದ ಮಾಡ್ವಾಗ ಈ ತರ ಮಾಡ್ಲಿಲ್ಲ.