ನಿಮ್ಮ ಸಹೋದರನನ್ನು ನೀವು ಸಂಪಾದಿಸಿಕೊಳ್ಳುವ ಸಂಭವವಿದೆ
“ನೀನು ಹೋಗಿ ನೀನೂ ಅವನೂ ಇಬ್ಬರೇ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು. ಅವನು ನಿನ್ನ ಮಾತನ್ನು ಕೇಳಿದರೆ ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ.”—ಮತ್ತಾಯ 18:15.
1, 2. ತಪ್ಪುಗಳೊಂದಿಗೆ ವ್ಯವಹರಿಸುವುದರ ಕುರಿತು ಯೇಸು ಯಾವ ಪ್ರಾಯೋಗಿಕ ಸಲಹೆಯನ್ನು ನೀಡಿದನು?
ಯೇಸುವಿನ ಭೂಶುಶ್ರೂಷೆಯು ಮುಗಿಯಲು ಒಂದು ವರ್ಷಕ್ಕಿಂತಲೂ ಕಡಿಮೆ ಸಮಯವಿದ್ದುದರಿಂದ, ತನ್ನ ಶಿಷ್ಯರಿಗಾಗಿ ಅತ್ಯಾವಶ್ಯಕ ಪಾಠಗಳು ಅವನಲ್ಲಿದ್ದವು. ಮತ್ತಾಯ ಪುಸ್ತಕದ 18ನೆಯ ಅಧ್ಯಾಯದಲ್ಲಿ ನೀವು ಅವುಗಳ ಬಗ್ಗೆ ಓದಸಾಧ್ಯವಿದೆ. ಅವುಗಳಲ್ಲಿ ಒಂದು, ನಾವು ಮಕ್ಕಳಂತೆ ದೀನಭಾವದವರಾಗಿರುವುದರ ಮಹತ್ವವೇ ಆಗಿತ್ತು. “ಈ ಚಿಕ್ಕವರಲ್ಲಿ ಒಬ್ಬ”ನನ್ನು ಸಹ ಎಡವಿಸದಿರುವಂತೆ ನಾವು ಜಾಗ್ರತೆ ವಹಿಸಬೇಕು ಮತ್ತು ದಾರಿತಪ್ಪಿರುವ ‘ಚಿಕ್ಕವರು’ ನಾಶಹೊಂದದಂತೆ ನಾವು ಅವರನ್ನು ಸರಿಯಾದ ದಾರಿಗೆ ತರಲು ಪಯತ್ನಿಸಬೇಕು ಎಂದು ಅವನು ಆ ಬಳಿಕ ಒತ್ತಿಹೇಳಿದನು. ತದನಂತರ, ಕ್ರೈಸ್ತರ ನಡುವೆ ತಲೆದೋರುವ ತೊಂದರೆಗಳನ್ನು ಸರಿಪಡಿಸುವುದರ ಬಗ್ಗೆ ಅಮೂಲ್ಯವಾದ, ಪ್ರಾಯೋಗಿಕ ಸಲಹೆಯನ್ನು ಯೇಸು ನೀಡಿದನು.
2 ಅವನ ಮಾತುಗಳನ್ನು ನೀವು ಜ್ಞಾಪಿಸಿಕೊಳ್ಳಬಹುದು: “ನಿನ್ನ ಸಹೋದರನು ತಪ್ಪುಮಾಡಿದರೆ [“ಪಾಪಮಾಡಿದರೆ,” NW] ನೀನು ಹೋಗಿ ನೀನೂ ಅವನೂ ಇಬ್ಬರೇ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು. ಅವನು ನಿನ್ನ ಮಾತನ್ನು ಕೇಳಿದರೆ ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ. ಅವನು ಕೇಳದೆಹೋದರೆ ಎರಡು ಮೂರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಾಪನೆಯಾಗುವ ಹಾಗೆ ಇನ್ನೂ ಒಬ್ಬಿಬ್ಬರನ್ನು ನಿನ್ನ ಸಂಗಡ ಕರಕೊಂಡುಹೋಗು. ಅವನು ಅವರ ಮಾತನ್ನು ಕೇಳದೆಹೋದರೆ ಸಭೆಗೆ ಹೇಳು; ಆದರೆ ಸಭೆಯ ಮಾತನ್ನೂ ಕೇಳದೆಹೋದರೆ ಅವನು ನಿನಗೆ ಅಜ್ಞಾನಿಯಂತೆಯೂ ಭ್ರಷ್ಟನಂತೆಯೂ ಇರಲಿ [“ಅನ್ಯನಂತೆಯೂ ಸುಂಕ ವಸೂಲಿಗಾರನಂತೆಯೂ ಇರಲಿ,” NW].” (ಮತ್ತಾಯ 18:15-17) ನಾವು ಈ ಸಲಹೆಯನ್ನು ಯಾವಾಗ ಅನ್ವಯಿಸಬೇಕು, ಮತ್ತು ಹಾಗೆ ಮಾಡುವುದರಲ್ಲಿ ನಮ್ಮ ಮನೋಭಾವವು ಏನಾಗಿರತಕ್ಕದ್ದು?
3. ಬೇರೆಯವರ ತಪ್ಪುಗಳ ವಿಷಯದಲ್ಲಿ ನಾವು ಯಾವ ಮನೋಭಾವವನ್ನು ಹೊಂದಿರಬೇಕು?
3 ನಾವೆಲ್ಲರೂ ಅಪರಿಪೂರ್ಣರಾಗಿದ್ದು, ತಪ್ಪುಗಳನ್ನು ಮಾಡುವ ಪ್ರವೃತ್ತಿಯುಳ್ಳವರಾಗಿರುವುದರಿಂದ, ನಾವು ಕ್ಷಮಿಸುವ ಗುಣವನ್ನು ವಿಕಸಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ ಎಂಬುದನ್ನು ಹಿಂದಿನ ಲೇಖನವು ಒತ್ತಿಹೇಳಿತು. ಒಬ್ಬ ಜೊತೆ ಕ್ರೈಸ್ತನು ಹೇಳಿದ ಅಥವಾ ಮಾಡಿದ ಯಾವುದೋ ಕೃತ್ಯದಿಂದ ಉಂಟಾಗಿರುವ ಮಾನಸಿಕ ವೇದನೆಯ ವಿಷಯದಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ. (1 ಪೇತ್ರ 4:8) ಅನೇಕವೇಳೆ ಆ ತಪ್ಪನ್ನು ಅಲಕ್ಷಿಸುವುದು, ಅಂದರೆ ತಪ್ಪನ್ನು ಕ್ಷಮಿಸಿ, ಅದನ್ನು ಮರೆತುಬಿಡುವುದು ಅತ್ಯುತ್ತಮವಾದ ಮಾರ್ಗವಾಗಿದೆ. ಹೀಗೆ ಮಾಡುವುದರಿಂದ ಕ್ರೈಸ್ತ ಸಭೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ನಾವು ಸಹಾಯ ಮಾಡುತ್ತಿದ್ದೇವೆ ಎಂದು ನಾವು ಭಾವಿಸಸಾಧ್ಯವಿದೆ. (ಕೀರ್ತನೆ 133:1; ಜ್ಞಾನೋಕ್ತಿ 19:11) ಆದರೂ, ನಿಮಗೆ ನೋವನ್ನು ಉಂಟುಮಾಡಿರುವಂತಹ ನಿಮ್ಮ ಸಹೋದರ ಅಥವಾ ಸಹೋದರಿಯೊಂದಿಗೆ, ಆ ಘಟನೆಯ ಬಗ್ಗೆ ಮಾತಾಡಿ, ಸಮಸ್ಯೆಯನ್ನು ಬಗೆಹರಿಸಬೇಕು ಎಂಬ ಅನಿಸಿಕೆ ನಿಮಗಾಗುವಂತಹ ಸಂದರ್ಭವಿರಬಹುದು. ಅಂತಹ ಸಂದರ್ಭದಲ್ಲಿ, ಯೇಸುವಿನ ಮೇಲಿನ ಮಾತುಗಳು ಮಾರ್ಗದರ್ಶನವನ್ನು ನೀಡುತ್ತವೆ.
4. ಮತ್ತಾಯ 18:15ರಲ್ಲಿ ಕೊಡಲ್ಪಟ್ಟಿರುವ ಮೂಲತತ್ವವನ್ನು ನಾವು ಬೇರೆಯವರ ತಪ್ಪುಗಳಿಗೆ ಹೇಗೆ ಅನ್ವಯಿಸಸಾಧ್ಯವಿದೆ?
4 “ನೀನೂ ಅವನೂ ಇಬ್ಬರೇ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು” ಎಂದು ಯೇಸು ಸಲಹೆ ನೀಡಿದನು. (ಓರೆ ಅಕ್ಷರಗಳು ನಮ್ಮವು.) ಇದು ವಿವೇಕಭರಿತ ಸಲಹೆಯಾಗಿದೆ. ಕೆಲವು ಜರ್ಮನ್ ಭಾಷಾಂತರಗಳು ಇದನ್ನು ಈ ಮಾತುಗಳಲ್ಲಿ ವ್ಯಕ್ತಪಡಿಸುತ್ತವೆ: ಅವನ ತಪ್ಪನ್ನು “ನಾಲ್ಕು ಕಣ್ಣುಗಳ ಮುಂದೆ,” ಅಂದರೆ ನಿಮ್ಮ ಹಾಗೂ ಅವನ ಕಣ್ಣುಗಳ ಮುಂದೆ ತಿಳಿಯಪಡಿಸಿರಿ. ಒಂದು ಸಮಸ್ಯೆಯನ್ನು ನೀವು ಖಾಸಗಿಯಾಗಿ ಬಗೆಹರಿಸಲು ಪ್ರಯತ್ನಿಸುವಾಗ, ಅದನ್ನು ಬಗೆಹರಿಸುವುದು ಹೆಚ್ಚು ಸುಲಭವಾಗುತ್ತದೆ. ನಿಮ್ಮ ಮನಸ್ಸಿಗೆ ನೋವಾಗುವಂತೆ ಅಥವಾ ನಿಷ್ಠುರವಾಗಿ ಮಾತಾಡಿದ ಅಥವಾ ವರ್ತಿಸಿದ ಒಬ್ಬ ಸಹೋದರನು, ನಿಮ್ಮ ಮುಂದೆ ಮಾತ್ರ ತನ್ನ ತಪ್ಪನ್ನು ಸುಲಭವಾಗಿ ಒಪ್ಪಿಕೊಳ್ಳಬಹುದು. ಬೇರೆಯವರು ಇದನ್ನು ಕೇಳಿಸಿಕೊಳ್ಳುತ್ತಿರುವಲ್ಲಿ, ತಾನು ಮಾಡಿದ ತಪ್ಪನ್ನು ಅಲ್ಲಗಳೆಯುವಂತೆ ಅಥವಾ ತಾನು ಮಾಡಿದ್ದೇ ಸರಿಯೆಂದು ವಾದಿಸುವಂತೆ ಅಪರಿಪೂರ್ಣ ಮಾನವ ಸ್ವಭಾವವು ಅವನನ್ನು ಪ್ರಚೋದಿಸಬಹುದು. ಆದರೆ ನೀವು “ನಾಲ್ಕು ಕಣ್ಣುಗಳ ಮುಂದೆ” ಆ ವಿಷಯವನ್ನು ಚರ್ಚಿಸುವಲ್ಲಿ, ಆ ಇನ್ನೊಬ್ಬ ವ್ಯಕ್ತಿಯು ಮಾಡಿದ್ದು ಒಂದು ಪಾಪವಲ್ಲ ಅಥವಾ ಉದ್ದೇಶಪೂರ್ವಕವಾದ ತಪ್ಪಲ್ಲ, ಬದಲಾಗಿ ಇದು ಕೇವಲ ಒಂದು ತಪ್ಪಭಿಪ್ರಾಯವಾಗಿದೆ ಎಂದು ನೀವು ಕಂಡುಕೊಳ್ಳಬಹುದು. ಅದು ಒಂದು ತಪ್ಪಭಿಪ್ರಾಯವಾಗಿದೆ ಎಂಬುದನ್ನು ನೀವಿಬ್ಬರೂ ಅರ್ಥಮಾಡಿಕೊಂಡ ಬಳಿಕ, ಒಂದು ಕ್ಷುಲ್ಲಕ ಸಂಗತಿಯನ್ನು ದೊಡ್ಡದಾಗಿ ಮಾಡಿ, ನಿಮ್ಮ ಸಂಬಂಧವನ್ನು ಹಾಳುಮಾಡಿಕೊಳ್ಳುವುದಕ್ಕೆ ಬದಲಾಗಿ, ನೀವದನ್ನು ಬಗೆಹರಿಸಸಾಧ್ಯವಿದೆ. ಆದುದರಿಂದ, ಮತ್ತಾಯ 18:15ರಲ್ಲಿ ಕೊಡಲ್ಪಟ್ಟಿರುವ ಮೂಲತತ್ವವನ್ನು, ದೈನಂದಿನ ಜೀವಿತದಲ್ಲಿ ಸಂಭವಿಸುವ ಚಿಕ್ಕಪುಟ್ಟ ತಪ್ಪುಗಳಿಗೂ ಅನ್ವಯಿಸಸಾಧ್ಯವಿದೆ.
ಅವನು ಹೇಳಿದ ವಿಷಯದ ಅರ್ಥವೇನು?
5, 6. ಸಂದರ್ಭೋಚಿತವಾಗಿ, ಮತ್ತಾಯ 18:15ನೆಯ ವಚನವು ಯಾವ ರೀತಿಯ ಪಾಪಗಳಿಗೆ ಸೂಚಿತವಾಗಿತ್ತು, ಮತ್ತು ಇದನ್ನು ಯಾವುದು ಸ್ಪಷ್ಟಪಡಿಸುತ್ತದೆ?
5 ನಿಷ್ಕೃಷ್ಟವಾಗಿ ಹೇಳುವುದಾದರೆ, ಯೇಸು ಯಾವ ಸಲಹೆಯನ್ನು ಕೊಟ್ಟನೋ ಅದು ಹೆಚ್ಚಾಗಿ ಗಂಭೀರವಾದ ತಪ್ಪುಗಳಿಗೆ ಅನ್ವಯವಾಗುತ್ತದೆ. “ನಿನ್ನ ಸಹೋದರನು ತಪ್ಪುಮಾಡಿದರೆ [“ಪಾಪಮಾಡಿದರೆ,” NW]” ಎಂದು ಯೇಸು ಹೇಳಿದನು. ವಿಶಾಲಾರ್ಥದಲ್ಲಿ, “ಪಾಪ” ಅಂದರೆ ಯಾವುದೇ ರೀತಿಯ ತಪ್ಪು ಅಥವಾ ಅಪರಾಧವಾಗಿರಸಾಧ್ಯವಿದೆ. (ಯೋಬ 2:10; ಜ್ಞಾನೋಕ್ತಿ 21:4; ಯಾಕೋಬ 4:17) ಆದರೂ, ಇಲ್ಲಿ ಯೇಸು ಗಂಭೀರ ಪಾಪದ ಕುರಿತಾಗಿಯೇ ಹೇಳಿದ್ದಿರಬೇಕು ಎಂದು ಪೂರ್ವಾಪರ ವಚನವು ಸೂಚಿಸುತ್ತದೆ. ಅದು ಎಷ್ಟು ಗಂಭೀರವಾಗಿತ್ತೆಂದರೆ, ಒಬ್ಬ ತಪ್ಪಿತಸ್ಥನನ್ನು “ಅನ್ಯನಂತೆಯೂ ಸುಂಕ ವಸೂಲಿಗಾರನಂತೆಯೂ” ಪರಿಗಣಿಸುವಂತೆ ಮಾಡಸಾಧ್ಯವಿತ್ತು. ಹಾಗಾದರೆ, ಈ ವಾಕ್ಸರಣಿಯು ಏನನ್ನು ಸೂಚಿಸುತ್ತದೆ?
6 ಆ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಯೇಸುವಿನ ಶಿಷ್ಯರಿಗೆ, ತಮ್ಮ ಸ್ವದೇಶೀಯರು ಅನ್ಯರೊಂದಿಗೆ ಸಹವಾಸ ಮಾಡುವುದಿಲ್ಲವೆಂಬುದು ಗೊತ್ತಿತ್ತು. (ಯೋಹಾನ 4:9; 18:28; ಅ. ಕೃತ್ಯಗಳು 10:28) ಅಷ್ಟುಮಾತ್ರವಲ್ಲ, ಜನ್ಮತಃ ಯೆಹೂದ್ಯರಾಗಿದ್ದರೂ ಕಾಲಕ್ರಮೇಣ ಜನರ ಮೇಲೆ ದೌರ್ಜನ್ಯ ನಡೆಸುವವರಾಗಿ ಪರಿಣಮಿಸಿದ್ದ ಸುಂಕ ವಸೂಲಿಗಾರರನ್ನು ಅವರು ತಮ್ಮಿಂದ ದೂರವಿಡುತ್ತಿದ್ದರು ಎಂಬುದಂತೂ ಖಂಡಿತ. ಆದುದರಿಂದ, ನಿಷ್ಕೃಷ್ಟವಾಗಿ ಹೇಳುವುದಾದರೆ, ಮತ್ತಾಯ 18:15-17ರಲ್ಲಿರುವ ವಚನಗಳು, ನಾವು ಕ್ಷಮಿಸಿ ಮರೆತುಬಿಡಸಾಧ್ಯವಿರುವ ವೈಯಕ್ತಿಕ ತಪ್ಪುಗಳು ಅಥವಾ ಅಪರಾಧಗಳಿಗಲ್ಲ, ಬದಲಾಗಿ ಗಂಭೀರವಾದ ಪಾಪಗಳಿಗೆ ಅನ್ವಯವಾಗುತ್ತವೆ.—ಮತ್ತಾಯ 18:21, 22.a
7, 8. (ಎ) ಯಾವ ರೀತಿಯ ಪಾಪಗಳನ್ನು ಹಿರಿಯರು ನಿರ್ವಹಿಸಬೇಕು? (ಬಿ) ಮತ್ತಾಯ 18:15-17ಕ್ಕನುಸಾರವಾಗಿ, ಯಾವ ಪಾಪಗಳನ್ನು ಇಬ್ಬರು ಕ್ರೈಸ್ತರ ನಡುವೆಯೇ ಬಗೆಹರಿಸಲು ಪ್ರಯತ್ನಿಸಸಾಧ್ಯವಿದೆ?
7 ಧರ್ಮಶಾಸ್ತ್ರದ ಕೆಳಗೆ, ಕೆಲವು ರೀತಿಯ ಪಾಪಗಳು, ಮನನೋಯಿಸಲ್ಪಟ್ಟ ವ್ಯಕ್ತಿಯ ಕಡೆಯಿಂದ ಕೇವಲ ಕ್ಷಮಾಪಣೆಗಿಂತಲೂ ಹೆಚ್ಚಿನದ್ದನ್ನು ಅಗತ್ಯಪಡಿಸುತ್ತಿದ್ದವು. ದೇವದೂಷಣೆ, ಧರ್ಮಭ್ರಷ್ಟತೆ, ವಿಗ್ರಹಾರಾಧನೆ, ಮತ್ತು ವ್ಯಭಿಚಾರ, ಜಾರತ್ವ, ಹಾಗೂ ಸಲಿಂಗೀಕಾಮಗಳಂತಹ ಲೈಂಗಿಕ ಪಾಪಗಳನ್ನು ಹಿರಿಯರಿಗೆ (ಅಥವಾ ಯಾಜಕರಿಗೆ) ವರದಿಸಬೇಕಾಗಿತ್ತು ಮತ್ತು ಅವರು ಅದನ್ನು ನಿರ್ವಹಿಸಬೇಕಾಗುತ್ತಿತ್ತು. ಕ್ರೈಸ್ತ ಸಭೆಯಲ್ಲಿಯೂ ಇದು ಸತ್ಯವಾಗಿದೆ. (ಯಾಜಕಕಾಂಡ 5:1; 20:10-13; ಅರಣ್ಯಕಾಂಡ 5:30; 35:12; ಧರ್ಮೋಪದೇಶಕಾಂಡ 17:9; 19:16-19; ಜ್ಞಾನೋಕ್ತಿ 29:24) ಆದರೂ, ಇಲ್ಲಿ ಯೇಸು ಯಾವುದರ ಕುರಿತಾಗಿ ಮಾತಾಡಿದನೋ ಆ ಪಾಪಗಳು, ಇಬ್ಬರು ವ್ಯಕ್ತಿಗಳ ನಡುವೆ ಬಗೆಹರಿಸಸಾಧ್ಯವಿರುವ ಪಾಪಗಳಾಗಿವೆ ಎಂಬುದನ್ನು ಗಮನಿಸಿರಿ. ಕೆಲವು ಉದಾಹರಣೆಗಳು ಇಲ್ಲಿ ಕೊಡಲ್ಪಟ್ಟಿವೆ: ಕೋಪದಿಂದ ಅಥವಾ ಹೊಟ್ಟೆಕಿಚ್ಚಿನಿಂದ ಒಬ್ಬ ವ್ಯಕ್ತಿಯು ತನ್ನ ಜೊತೆಮಾನವನ ಮೇಲೆ ಮಿಥ್ಯಾಪವಾದವನ್ನು ಹೊರಿಸುತ್ತಾನೆ. ಒಂದು ಕೆಲಸದ ಕಾಂಟ್ರ್ಯಾಕ್ಟನ್ನು ಹಿಡಿದಿರುವ ಒಬ್ಬ ಕ್ರೈಸ್ತನು, ನಿರ್ದಿಷ್ಟವಾದ ಸಾಮಗ್ರಿಗಳನ್ನು ಉಪಯೋಗಿಸಿ, ನಿಗದಿತ ತಾರೀಖಿನಂದು ಆ ಕೆಲಸವನ್ನು ಮುಗಿಸುತ್ತೇನೆಂದು ಮಾತುಕೊಟ್ಟಿರುತ್ತಾನೆ. ಇನ್ನೊಬ್ಬ ಕ್ರೈಸ್ತನು, ನಿಗದಿತ ಸಮಯಕ್ಕನುಸಾರ ಅಥವಾ ನಿರ್ದಿಷ್ಟ ತಾರೀಖಿಗೆ ಮುಂಚೆ ಹಣವನ್ನು ಹಿಂದಿರುಗಿಸಲು ಒಪ್ಪಿಕೊಂಡಿರುತ್ತಾನೆ. ಒಂದುವೇಳೆ ತನ್ನ ಯಜಮಾನನು ತನಗೆ ತರಬೇತಿ ನೀಡುವಲ್ಲಿ, (ತಾನು ಕೆಲಸಗಳನ್ನು ಬದಲಾಯಿಸುವುದಾದರೂ) ಒಪ್ಪಂದ ಮಾಡಿಕೊಂಡ ಕಾಲಾವಧಿಯ ವರೆಗೆ ಅಥವಾ ಗೊತ್ತಾದ ಕ್ಷೇತ್ರದಲ್ಲಿ, ತನ್ನ ಯಜಮಾನನ ಗಿರಾಕಿಗಳನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ಪ್ರಯತ್ನಿಸುವುದಿಲ್ಲ ಅಥವಾ ತನ್ನ ಯಜಮಾನನಿಗೆ ಪೈಪೋಟಿ ಮಾಡುವುದಿಲ್ಲ ಎಂದು ಒಬ್ಬ ವ್ಯಕ್ತಿಯು ಮಾತುಕೊಟ್ಟಿರುತ್ತಾನೆ.b ಒಬ್ಬ ಸಹೋದರನು ಕೊಟ್ಟ ಮಾತಿಗನುಸಾರ ನಡೆದುಕೊಳ್ಳದೆ, ಇಂತಹ ತಪ್ಪುಗಳ ವಿಷಯದಲ್ಲಿ ಪಶ್ಚಾತ್ತಾಪವನ್ನು ತೋರಿಸದೆ ಇರುವಲ್ಲಿ, ಖಂಡಿತವಾಗಿಯೂ ಈ ಸಮಸ್ಯೆಯು ಗಂಭೀರವಾಗಸಾಧ್ಯವಿದೆ. (ಪ್ರಕಟನೆ 21:8) ಆದರೆ ಯಾರು ಈ ಸಮಸ್ಯೆಯಲ್ಲಿ ಒಳಗೂಡಿದ್ದಾರೋ ಅವರಿಬ್ಬರೂ ಸೇರಿಕೊಂಡು ಇಂತಹ ತಪ್ಪುಗಳನ್ನು ಬಗೆಹರಿಸಸಾಧ್ಯವಿದೆ.
8 ಈ ಸಮಸ್ಯೆಯನ್ನು ಬಗೆಹರಿಸಲು ನೀವು ಏನು ಮಾಡುವಿರಿ? ಯೇಸುವಿನ ಮಾತುಗಳಲ್ಲಿ ಮೂರು ಹಂತಗಳು ಒಳಗೂಡಿವೆ. ಅವುಗಳನ್ನು ನಾವೀಗ ಒಂದೊಂದಾಗಿ ಪರಿಗಣಿಸೋಣ. ಅವುಗಳನ್ನು ಕಟ್ಟುನಿಟ್ಟಾದ ಕಾನೂನುಬದ್ಧ ಹೆಜ್ಜೆಗಳೆಂದು ನೆನಸುವುದಕ್ಕೆ ಬದಲಾಗಿ, ಪ್ರೀತಿಪರ ಗುರಿಯ ಮೇಲೆ ನಿಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿ, ಯೇಸುವಿನ ಮಾತುಗಳ ಅರ್ಥವನ್ನು ಗ್ರಹಿಸಲು ಪ್ರಯತ್ನಿಸಿರಿ.
ನಿಮ್ಮ ಸಹೋದರನನ್ನು ಸಂಪಾದಿಸಿಕೊಳ್ಳಲು ಪ್ರಯತ್ನಿಸಿರಿ
9. ಮತ್ತಾಯ 18:15ನ್ನು ಅನ್ವಯಿಸುವ ವಿಷಯದಲ್ಲಿ ನಾವು ಯಾವುದನ್ನು ಮನಸ್ಸಿನಲ್ಲಿಟ್ಟುಕೊಂಡಿರಬೇಕು?
9 ಯೇಸು ಆರಂಭಿಸಿದ್ದು: “ನಿನ್ನ ಸಹೋದರನು ಪಾಪಮಾಡಿದರೆ ನೀನು ಹೋಗಿ ನೀನೂ ಅವನೂ ಇಬ್ಬರೇ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು. ಅವನು ನಿನ್ನ ಮಾತನ್ನು ಕೇಳಿದರೆ ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ.” ಕೇವಲ ಸಂದೇಹದ ಆಧಾರದ ಮೇಲೆ ಈ ಹೆಜ್ಜೆಯನ್ನು ತೆಗೆದುಕೊಳ್ಳಬಾರದು ಎಂಬುದು ಸ್ಪಷ್ಟ. ನಿಮ್ಮ ಸಹೋದರನು ಮಾಡಿದ್ದು ತಪ್ಪು, ಆದುದರಿಂದ ಈ ಸಮಸ್ಯೆಯನ್ನು ಸರಿಪಡಿಸುವ ಅಗತ್ಯವಿದೆ ಎಂಬುದನ್ನು ಅವನಿಗೆ ಮನದಟ್ಟು ಮಾಡಿಸಲು ನೀವು ಉಪಯೋಗಿಸಸಾಧ್ಯವಿರುವ ಪುರಾವೆ ಅಥವಾ ನಿರ್ದಿಷ್ಟ ಮಾಹಿತಿಯು ನಿಮ್ಮ ಬಳಿಯಿರಬೇಕು. ಆ ಘಟನೆಯು ಹೆಚ್ಚು ಗಂಭೀರವಾಗಿ ಪರಿಣಮಿಸದಂತೆ ಅಥವಾ ತಪ್ಪುಮಾಡಿದ ಸಹೋದರನು ತನ್ನ ಮನೋಭಾವದಲ್ಲಿ ಕಠಿನವಾಗಿ ಹೋಗುವಂತೆ ಬಿಡದಿರಲು, ಅತಿ ಬೇಗನೆ ಕ್ರಮವನ್ನು ಕೈಕೊಳ್ಳುವುದು ಒಳ್ಳೇದು. ಅಷ್ಟುಮಾತ್ರವಲ್ಲ, ಸದಾ ಆ ಘಟನೆಯ ಬಗ್ಗೆಯೇ ಯೋಚಿಸಿ ಕೊರಗುತ್ತಿರುವುದರಿಂದ ನಿಮಗೂ ಹಾನಿಯಾಗಸಾಧ್ಯವಿದೆ ಎಂಬುದನ್ನು ಮರೆಯಬೇಡಿ. ಕೇವಲ ನಿಮ್ಮ ಹಾಗೂ ಅವನ ನಡುವೆ ಮಾತ್ರ ಈ ಚರ್ಚೆಯು ನಡೆಯುತ್ತದಾದ್ದರಿಂದ, ಇತರರ ಸಹಾನುಭೂತಿಯನ್ನು ಪಡೆದುಕೊಳ್ಳಲಿಕ್ಕಾಗಿ ಅಥವಾ ನಿಮ್ಮ ಸ್ವಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲಿಕ್ಕಾಗಿ ಈ ವಿಷಯದ ಬಗ್ಗೆ ಮುಂಚಿತವಾಗಿಯೇ ಬೇರೆಯವರೊಂದಿಗೆ ಮಾತಾಡಬೇಡಿ. (ಜ್ಞಾನೋಕ್ತಿ 12:25; 17:9) ಏಕೆ? ನಿಮ್ಮ ಗುರಿಯನ್ನು ಸಾಧಿಸುವ ಉದ್ದೇಶದಿಂದಲೇ.
10. ನಮ್ಮ ಸಹೋದರನನ್ನು ಸಂಪಾದಿಸಿಕೊಳ್ಳಲು ನಮಗೆ ಯಾವುದು ಸಹಾಯ ಮಾಡುವುದು?
10 ನಿಮ್ಮ ಸಹೋದರನಿಗೆ ಶಿಕ್ಷೆನೀಡುವುದು, ಅಪಮಾನಮಾಡುವುದು, ಅಥವಾ ಅವನನ್ನು ಸರ್ವನಾಶಮಾಡುವುದು ನಿಮ್ಮ ಗುರಿಯಾಗಿರಬಾರದು, ಬದಲಾಗಿ ಅವನನ್ನು ಸಂಪಾದಿಸಿಕೊಳ್ಳುವುದೇ ನಿಮ್ಮ ಹೇತುವಾಗಿರಬೇಕು. ಖಂಡಿತವಾಗಿಯೂ ಅವನು ತಪ್ಪುಮಾಡಿರುವಲ್ಲಿ, ಯೆಹೋವನೊಂದಿಗಿನ ಅವನ ಸಂಬಂಧವು ಅಪಾಯದಲ್ಲಿದೆ. ನೀವು ಅವನನ್ನು ನಿಮ್ಮ ಕ್ರೈಸ್ತ ಸಹೋದರನಾಗಿ ಇಟ್ಟುಕೊಳ್ಳಲು ಬಯಸುತ್ತೀರಿ ಎಂಬುದು ನಿಶ್ಚಯ. ಖಾಸಗಿ ಚರ್ಚೆಯಲ್ಲಿ ನೀವು ಬಿರುನುಡಿಗಳನ್ನು ಅಥವಾ ನಿಂದಾತ್ಮಕ ಧ್ವನಿಯನ್ನು ಉಪಯೋಗಿಸದೆ, ಶಾಂತಚಿತ್ತರಾಗಿ ಉಳಿಯುವಲ್ಲಿ, ನಿಮ್ಮ ಪ್ರಯತ್ನದಲ್ಲಿ ನೀವು ಹೆಚ್ಚು ಸಫಲರಾಗುವ ಸಾಧ್ಯತೆಯಿರುವುದು. ಪ್ರೀತಿಯಿಂದ ಕೂಡಿದ ಈ ಮುಖಾಮುಖಿ ಮಾತುಕತೆಯಲ್ಲಿ, ನೀವಿಬ್ಬರೂ ಅಪರಿಪೂರ್ಣರೂ ಪಾಪಪ್ರವೃತ್ತಿಯುಳ್ಳವರೂ ಆಗಿದ್ದೀರಿ ಎಂಬುದನ್ನು ನೆನಪಿನಲ್ಲಿಡಿರಿ. (ರೋಮಾಪುರ 3:23, 24) ಅವನ ಬಗ್ಗೆ ನೀವು ಯಾರ ಹತ್ತಿರವೂ ಹೇಳಿಲ್ಲ ಮತ್ತು ಪ್ರಾಮಾಣಿಕ ರೀತಿಯಲ್ಲಿ ನೀವು ಅವನಿಗೆ ಸಹಾಯ ಮಾಡಲು ಬಯಸುತ್ತೀರಿ ಎಂಬುದು ಅವನ ಅರಿವಿಗೆ ಬಂದಾಗ, ಆ ಸಮಸ್ಯೆಗೆ ಸುಲಭವಾದ ಪರಿಹಾರ ಸಿಗಬಹುದು. ಈ ದಯಾಪರವಾದ, ನೇರವಾದ ಕ್ರಮದ ಫಲಿತಾಂಶವಾಗಿ, ನೀವಿಬ್ಬರೂ ಸೇರಿ ತಪ್ಪನ್ನು ಮಾಡಿದ್ದೀರಿ ಅಥವಾ ನಿಜವಾಗಿಯೂ ತಪ್ಪಭಿಪ್ರಾಯವು ಸಮಸ್ಯೆಯ ಮೂಲಕಾರಣವಾಗಿತ್ತು ಎಂಬುದು ಇತ್ಯರ್ಥವಾಗುವಲ್ಲಿ, ಈ ಕ್ರಮವು ವಿಶೇಷವಾಗಿ ವಿವೇಕವನ್ನು ಪ್ರತಿಫಲಿಸುವುದು.—ಜ್ಞಾನೋಕ್ತಿ 25:9, 10; 26:20; ಯಾಕೋಬ 3:5, 6.
11. ತಪ್ಪನ್ನು ಮಾಡಿರುವ ವ್ಯಕ್ತಿಯು ನಮ್ಮ ಮಾತಿಗೆ ಕಿವಿಗೊಡದಿರುವಲ್ಲಿ ನಾವೇನು ಮಾಡಬಹುದು?
11 ಒಂದು ತಪ್ಪು ಸಂಭವಿಸಿದೆ ಮತ್ತು ಅದು ತುಂಬ ಗಂಭೀರವಾದದ್ದಾಗಿದೆ ಎಂಬುದನ್ನು ಅವನು ಅರ್ಥಮಾಡಿಕೊಳ್ಳಲು ನೀವು ಅವನಿಗೆ ಸಹಾಯ ಮಾಡುವಲ್ಲಿ, ಅವನಲ್ಲಿ ಪಶ್ಚಾತ್ತಾಪ ಮನೋಭಾವವು ಉಂಟಾಗಬಹುದು. ಆದರೂ, ಅಹಂಕಾರವು ಒಂದು ತಡೆಯಾಗಿರಸಾಧ್ಯವಿದೆ ಎಂಬುದು ಖಂಡಿತ. (ಜ್ಞಾನೋಕ್ತಿ 16:18; 17:19) ಆದುದರಿಂದ, ಮೊದಮೊದಲು ಅವನು ತನ್ನ ತಪ್ಪನ್ನು ಒಪ್ಪಿಕೊಂಡು, ಪಶ್ಚಾತ್ತಾಪ ತೋರಿಸುವುದಿಲ್ಲವಾದರೂ, ಮುಂದಿನ ಕ್ರಮವನ್ನು ತೆಗೆದುಕೊಳ್ಳುವುದಕ್ಕೆ ಮೊದಲು ನೀವು ಸ್ವಲ್ಪ ಕಾಯಬಹುದು. ‘ಒಂದೇ ಸಲ ಹೋಗಿ ಅವನ ತಪ್ಪನ್ನು ಅವನಿಗೆ ತಿಳಿಸು’ ಎಂದು ಯೇಸು ಹೇಳಲಿಲ್ಲ. ಇದು ನೀವು ಬಗೆಹರಿಸಸಾಧ್ಯವಿರುವಂತಹ ಒಂದು ಪಾಪವಾಗಿರುವುದರಿಂದ, ಗಲಾತ್ಯ 6:1ರಲ್ಲಿ ತಿಳಿಸಲ್ಪಟ್ಟಿರುವ ಮನೋಭಾವದಿಂದ—ಮತ್ತು “ನಾಲ್ಕು ಕಣ್ಣುಗಳ ಮುಂದೆ”—ಅವನ ಬಳಿಗೆ ಪುನಃ ಹೋಗಲು ಪ್ರಯತ್ನಿಸಿರಿ. ಆಗ ನೀವು ಸಫಲರಾಗಬಹುದು. (ಹೋಲಿಸಿರಿ ಯೂದ 22, 23.) ಒಂದು ತಪ್ಪು ಮಾಡಲ್ಪಟ್ಟಿದೆ ಎಂಬುದು ನಿಮಗೆ ಚೆನ್ನಾಗಿ ಗೊತ್ತಿದ್ದರೂ, ನಿಮ್ಮ ಪ್ರಯತ್ನಕ್ಕೆ ಅವನು ಪ್ರತಿಕ್ರಿಯೆ ತೋರಿಸುವುದಿಲ್ಲವಾದರೆ, ಆಗೇನು ಮಾಡಬೇಕು?
ಪ್ರೌಢ ವ್ಯಕ್ತಿಗಳ ಸಹಾಯವನ್ನು ಪಡೆದುಕೊಳ್ಳಿರಿ
12, 13. (ಎ) ತಪ್ಪುಗಳೊಂದಿಗೆ ವ್ಯವಹರಿಸುವುದರಲ್ಲಿ ಯಾವ ಎರಡನೆಯ ಹೆಜ್ಜೆಯನ್ನು ಯೇಸು ತಿಳಿಯಪಡಿಸಿದನು? (ಬಿ) ಈ ಹೆಜ್ಜೆಯನ್ನು ತೆಗೆದುಕೊಳ್ಳುವಾಗ ಯಾವ ಮುನ್ನೆಚ್ಚರಿಕೆಗಳನ್ನು ವಹಿಸಬೇಕು?
12 ಗಂಭೀರವಾದ ಒಂದು ತಪ್ಪನ್ನು ಮಾಡಿರುವ ದೋಷಾಪರಾಧವು ನಿಮ್ಮ ಮೇಲಿರುವಲ್ಲಿ, ಇತರರು ನಿಮಗೆ ಸ್ವಲ್ಪ ಸಹಾಯವನ್ನು ಮಾಡಲು ಪ್ರಯತ್ನಿಸಿ, ತದನಂತರ ಅವರು ತಮ್ಮ ಪ್ರಯತ್ನಗಳನ್ನು ನಿಲ್ಲಿಸಿಬಿಡುವಂತೆ ನೀವು ಬಯಸುತ್ತೀರೊ? ಖಂಡಿತವಾಗಿಯೂ ಇಲ್ಲ. ಅದೇ ರೀತಿಯಲ್ಲಿ, ನಿಮ್ಮ ಸಹೋದರನನ್ನು ಸಂಪಾದಿಸಿಕೊಳ್ಳಲಿಕ್ಕಾಗಿ, ದೇವರನ್ನು ಸ್ವೀಕಾರಯೋಗ್ಯವಾಗಿ ಆರಾಧಿಸುವುದರಲ್ಲಿ ನಿಮ್ಮೊಂದಿಗೆ ಹಾಗೂ ಇತರರೊಂದಿಗೆ ಅವನನ್ನು ಜೊತೆಯಾಗಿರಿಸಿಕೊಳ್ಳಲಿಕ್ಕಾಗಿ ನೀವು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಬೇಕು. ಆದರೆ ಮೊದಲ ಹೆಜ್ಜೆಯನ್ನು ತೆಗೆದುಕೊಂಡ ಬಳಿಕ ನೀವು ಪ್ರಯತ್ನವನ್ನು ಬಿಟ್ಟುಬಿಡಬಾರದು ಎಂದು ಯೇಸು ತೋರಿಸಿದನು. ಯೇಸು ಎರಡನೆಯ ಹೆಜ್ಜೆಯನ್ನು ತಿಳಿಯಪಡಿಸಿದನು: “ಅವನು ಕೇಳದೆಹೋದರೆ ಎರಡು ಮೂರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಾಪನೆಯಾಗುವ ಹಾಗೆ ಇನ್ನೂ ಒಬ್ಬಿಬ್ಬರನ್ನು ನಿನ್ನ ಸಂಗಡ ಕರಕೊಂಡುಹೋಗು.”
13 “ಎರಡು ಮೂರು ಸಾಕ್ಷಿ”ಗಳನ್ನು ಕರೆದುಕೊಂಡುಹೋಗುವಂತೆ ಅವನು ಹೇಳಿದನು. ಮೊದಲ ಹೆಜ್ಜೆಯನ್ನು ತೆಗೆದುಕೊಂಡ ಬಳಿಕ, ನೀವು ಈ ಸಮಸ್ಯೆಯನ್ನು ಇನ್ನಿತರರೊಂದಿಗೆ ಚರ್ಚಿಸುವ, ಒಬ್ಬ ಸಂಚರಣ ಮೇಲ್ವಿಚಾರಕರನ್ನು ಸಂಪರ್ಕಿಸುವ, ಅಥವಾ ಇದರ ಬಗ್ಗೆ ಬೇರೆ ಸಹೋದರರಿಗೆ ಪತ್ರವನ್ನು ಬರೆಯುವ ಸ್ವಾತಂತ್ರ್ಯ ನಿಮಗಿದೆ ಎಂದು ಅವನು ಹೇಳಲಿಲ್ಲ. ಮಾಡಲ್ಪಟ್ಟಿರುವ ತಪ್ಪಿನ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರುವುದಾದರೂ, ಆ ತಪ್ಪು ಇನ್ನೂ ಕೂಡ ಸಂಪೂರ್ಣವಾಗಿ ರುಜುವಾಗಿರುವುದಿಲ್ಲ. ಮಿಥ್ಯಾಪವಾದವಾಗಿ ಪರಿಣಮಿಸಸಾಧ್ಯವಿರುವ ತಪ್ಪು ಮಾಹಿತಿಯನ್ನು ಹಬ್ಬಿಸಲು ನೀವು ಬಯಸಲಾರಿರಿ. (ಜ್ಞಾನೋಕ್ತಿ 16:28; 18:8) ಆದರೆ ನಿಮ್ಮೊಂದಿಗೆ ಒಬ್ಬರು ಅಥವಾ ಇಬ್ಬರು ವ್ಯಕ್ತಿಗಳನ್ನು ಕರೆದುಕೊಂಡುಹೋಗುವಂತೆ ಯೇಸು ಹೇಳಿದನು. ಏಕೆ? ಮತ್ತು ಅವರು ಯಾರಾಗಿರಸಾಧ್ಯವಿದೆ?
14. ಎರಡನೆಯ ಹೆಜ್ಜೆಯಲ್ಲಿ ಯಾರನ್ನು ನಾವು ನಮ್ಮೊಂದಿಗೆ ಕರೆದುಕೊಂಡುಹೋಗಬಹುದು?
14 ಒಂದು ತಪ್ಪು ಮಾಡಲ್ಪಟ್ಟಿದೆ ಎಂಬುದನ್ನು ನಿಮ್ಮ ಸಹೋದರನಿಗೆ ಮನಗಾಣಿಸುವ ಮೂಲಕ ಮತ್ತು ನಿಮ್ಮೊಂದಿಗೆ ಹಾಗೂ ದೇವರೊಂದಿಗೆ ಒಳ್ಳೆಯ ಸಂಬಂಧವನ್ನಿರಿಸಿಕೊಳ್ಳಲಿಕ್ಕಾಗಿ ಪಶ್ಚಾತ್ತಾಪಪಡುವಂತೆ ಅವನನ್ನು ಪ್ರಚೋದಿಸುವ ಮೂಲಕ, ನೀವು ನಿಮ್ಮ ಸಹೋದರನನ್ನು ಸಂಪಾದಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ. ಈ ಗುರಿಯನ್ನು ಸಾಧಿಸಲಿಕ್ಕಾಗಿ, ಮಾಡಿದ ತಪ್ಪಿಗೆ ‘ಇಬ್ಬರು ಮೂವರು’ ಮಂದಿ ಸಾಕ್ಷಿಗಳಿರುವಲ್ಲಿ ಸನ್ನಿವೇಶವು ಅನುಕೂಲಕರವಾಗಿರುವುದು. ಆ ಘಟನೆಯು ಸಂಭವಿಸಿದ್ದನ್ನು ಅವರು ಕಣ್ಣಾರೆ ನೋಡಿರಬಹುದು, ಅಥವಾ ಒಂದು ವ್ಯಾಪಾರ ವ್ಯವಹಾರದಲ್ಲಿ ಏನು ಮಾಡಲಾಗಿತ್ತು (ಇಲ್ಲವೆ ಏನನ್ನು ಮಾಡಿರಲಿಲ್ಲ) ಎಂಬುದರ ಕುರಿತು ಸೂಕ್ತವಾದ ಮಾಹಿತಿಯು ಅವರ ಬಳಿ ಇರಬಹುದು. ಒಂದುವೇಳೆ ಇಂತಹ ಸಾಕ್ಷಿಗಳು ಲಭ್ಯವಿರದಿದ್ದಲ್ಲಿ, ಯಾರನ್ನು ಸಾಕ್ಷಿಗಳಾಗಿ ಕರೆತರಲಾಗುತ್ತದೋ ಅವರು, ವಾಗ್ವಾದಕ್ಕೊಳಗಾಗಿರುವ ವಿಷಯದ ಬಗ್ಗೆ ಅನುಭವವಿದ್ದು, ಏನು ಸಂಭವಿಸಿತೋ ಅದು ನಿಜವಾಗಿಯೂ ತಪ್ಪಾಗಿತ್ತು ಎಂಬುದನ್ನು ತೀರ್ಮಾನಿಸಲು ಶಕ್ತರಾಗಿರಬಹುದು. ಅಷ್ಟುಮಾತ್ರವಲ್ಲ, ಮುಂದೆ ಯಾವಾಗಲಾದರೂ ಅಗತ್ಯ ಬೀಳುವಲ್ಲಿ, ಈ ಮುಂಚೆ ಯಾವ ವಾಸ್ತವಾಂಶಗಳನ್ನು ನೀವು ಪ್ರಸ್ತುತಪಡಿಸಿದಿರಿ ಮತ್ತು ತಪ್ಪಿತಸ್ಥನಿಗೆ ಸಹಾಯ ಮಾಡಲು ನೀವು ಎಷ್ಟು ಪ್ರಯತ್ನವನ್ನು ಮಾಡಿದಿರಿ ಎಂಬುದನ್ನು ಸಮರ್ಥಿಸುತ್ತಾ, ನಡೆದ ಸಂಗತಿಯನ್ನು ತಿಳಿಯಪಡಿಸಲು ನೀವು ಈ ವ್ಯಕ್ತಿಗಳನ್ನು ಸಾಕ್ಷಿಗಳಾಗಿ ಉಪಯೋಗಿಸಸಾಧ್ಯವಿದೆ. (ಅರಣ್ಯಕಾಂಡ 35:30; ಧರ್ಮೋಪದೇಶಕಾಂಡ 17:6) ಆದುದರಿಂದ, ಅವರು ಮೂಕ ಪ್ರೇಕ್ಷಕರಾಗಿರುವುದಿಲ್ಲ; ಆದರೂ, ಅವರು ಅಲ್ಲಿ ಉಪಸ್ಥಿತರಿರುವುದು, ನಿಮ್ಮ ಹಾಗೂ ತಮ್ಮ ಸಹೋದರನನ್ನು ಸಂಪಾದಿಸಿಕೊಳ್ಳಲು ಸಹಾಯ ಮಾಡಲಿಕ್ಕಾಗಿಯೇ.
15. ನಾವು ಎರಡನೆಯ ಹೆಜ್ಜೆಯನ್ನು ತೆಗೆದುಕೊಳ್ಳಬೇಕಾಗಿರುವಲ್ಲಿ, ಕ್ರೈಸ್ತ ಹಿರಿಯರ ನೆರವನ್ನು ಪಡೆದುಕೊಳ್ಳುವುದು ಏಕೆ ಸಹಾಯಕರವಾಗಿ ಪರಿಣಮಿಸಬಹುದು?
15 ನೀವು ಸಾಕ್ಷಿಗಳಾಗಿ ತರುವಂತಹ ಜನರು, ಸಭೆಯ ಹಿರಿಯರೇ ಆಗಿರಬೇಕು ಎಂದು ನೀವು ಭಾವಿಸುವ ಅಗತ್ಯವಿಲ್ಲ. ಆದರೂ, ಹಿರಿಯರಾಗಿ ಸೇವೆಸಲ್ಲಿಸುತ್ತಿರುವ ಪ್ರೌಢ ವ್ಯಕ್ತಿಗಳು, ತಮ್ಮ ಆತ್ಮಿಕ ಅರ್ಹತೆಗಳ ಕಾರಣ ನಿಮಗೆ ಸಹಾಯ ಮಾಡಲು ಶಕ್ತರಾಗಿರಬಹುದು. ಅಂತಹ ಹಿರಿಯರು “ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ” ಇದ್ದಾರೆ. (ಯೆಶಾಯ 32:1, 2) ಸಹೋದರ ಸಹೋದರಿಯರೊಂದಿಗೆ ತರ್ಕಿಸುವುದರಲ್ಲಿ ಮತ್ತು ಅವರಿಗೆ ತಿದ್ದುಪಾಟು ನೀಡುವುದರಲ್ಲಿ ಅವರಿಗೆ ಅನುಭವವಿದೆ. ಮತ್ತು ಆ ತಪ್ಪಿತಸ್ಥನು, ಇಂತಹ “ಪುರುಷರ ರೂಪದಲ್ಲಿ ದಾನ”ಗಳಲ್ಲಿ ದೃಢಭರವಸೆಯಿಡಲು ಸಕಾರಣವಿದೆ.c (ಎಫೆಸ 4:8, 11, 12) ಇಂತಹ ಪ್ರೌಢ ವ್ಯಕ್ತಿಗಳ ಮುಂದೆ ಈ ಘಟನೆಯ ಬಗ್ಗೆ ಮಾತಾಡುವುದು ಮತ್ತು ಅವರೊಂದಿಗೆ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದು, ಹೊಸ ಸನ್ನಿವೇಶವನ್ನು ಉಂಟುಮಾಡಬಲ್ಲದು ಹಾಗೂ ಬಗೆಹರಿಸಲು ಅಸಾಧ್ಯವಾಗಿ ಕಂಡುಬರುವ ಸಮಸ್ಯೆಯನ್ನು ಬಗೆಹರಿಸಬಲ್ಲದು.—ಹೋಲಿಸಿರಿ ಯಾಕೋಬ 5:14, 15.
ಅವನನ್ನು ಸಂಪಾದಿಸಿಕೊಳ್ಳಲಿಕ್ಕಾಗಿ ಮಾಡುವ ಕೊನೆಯ ಪ್ರಯತ್ನ
16. ಯೇಸು ತಿಳಿಸಿದ ಮೂರನೆಯ ಹೆಜ್ಜೆಯು ಯಾವುದು?
16 ಸಮಸ್ಯೆಯನ್ನು ಬಗೆಹರಿಸುವುದರಲ್ಲಿ ಎರಡನೆಯ ಹೆಜ್ಜೆಯೂ ವಿಫಲವಾದರೆ, ಖಂಡಿತವಾಗಿಯೂ ಸಭಾ ಹಿರಿಯರು ಮೂರನೆಯ ಹೆಜ್ಜೆಯಲ್ಲಿ ಒಳಗೂಡಿರುತ್ತಾರೆ. “ಅವನು ಅವರ [ಎರಡು ಮೂರು ಸಾಕ್ಷಿಗಳ] ಮಾತನ್ನು ಕೇಳದೆಹೋದರೆ ಸಭೆಗೆ ಹೇಳು; ಆದರೆ ಸಭೆಯ ಮಾತನ್ನೂ ಕೇಳದೆ ಹೋದರೆ ಅವನು ನಿನಗೆ ಅಜ್ಞಾನಿಯಂತೆಯೂ ಭ್ರಷ್ಟನಂತೆಯೂ ಇರಲಿ [“ಅನ್ಯನಂತೆಯೂ ಸುಂಕ ವಸೂಲಿಗಾರನಂತೆಯೂ ಇರಲಿ,” NW].” ಇದರಲ್ಲಿ ಏನು ಒಳಗೂಡಿದೆ?
17, 18. (ಎ) ‘ಸಭೆಗೆ ಹೇಳುವುದರ’ ಪ್ರಮುಖತೆಯನ್ನು ಅರ್ಥಮಾಡಿಕೊಳ್ಳಲು ನಮಗೆ ಯಾವ ವಿಧಾನವು ಸಹಾಯ ಮಾಡುತ್ತದೆ? (ಬಿ) ಇಂದು ಈ ಹೆಜ್ಜೆಯನ್ನು ನಾವು ಹೇಗೆ ಅನ್ವಯಿಸುತ್ತೇವೆ?
17 ಇಡೀ ಸಭೆಯ ಕ್ರಮದ ಕೂಟದ ಸಮಯದಲ್ಲಿ ಇಲ್ಲವೆ ವಿಶೇಷ ಕೂಟದ ಸಮಯದಲ್ಲಿ, ಒಂದು ಪಾಪವನ್ನು ಅಥವಾ ತಪ್ಪನ್ನು ಸಭೆಯ ಮುಂದೆ ತರಬೇಕೆಂಬ ಸೂಚನೆಯೋಪಾದಿ ಇದನ್ನು ನಾವು ಪರಿಗಣಿಸಬಾರದು. ದೇವರ ವಾಕ್ಯದಿಂದ ನಾವು ಸೂಕ್ತವಾದ ಕ್ರಮವನ್ನು ಕಂಡುಕೊಳ್ಳಸಾಧ್ಯವಿದೆ. ಪುರಾತನ ಇಸ್ರಾಯೇಲ್ನಲ್ಲಿ ದಂಗೆಯೇಳುವಿಕೆ, ಹೊಟ್ಟೆಬಾಕತನ, ಮತ್ತು ಕುಡಿಕತನಗಳು ಸಂಭವಿಸಿದ್ದಲ್ಲಿ ಏನು ಮಾಡಬೇಕಾಗಿತ್ತು ಎಂಬುದನ್ನು ಗಮನಿಸಿರಿ: “ಒಬ್ಬ ಮಗನು ತಂದೆತಾಯಿಗಳ ಆಜ್ಞೆಗೆ ಒಳಗಾಗದೆ ಶಿಕ್ಷಿಸಲ್ಪಟ್ಟರೂ ಮೊಂಡನೂ ಅವಿಧೇಯನೂ ಆಗಿ ಅವರ ಮಾತನ್ನು ಕೇಳದೆಹೋದರೆ ತಂದೆತಾಯಿಗಳು ಅವನನ್ನು ಹಿಡಿದು ಊರುಬಾಗಲಿಗೆ ಹಿರಿಯರ ಮುಂದೆ ತಂದು ಅವರಿಗೆ—ಈ ನಮ್ಮ ಮಗನು ನಮ್ಮ ಮಾತನ್ನು ಕೇಳುವದೇ ಇಲ್ಲ, ಆಜ್ಞೆಗೆ ಒಳಗಾಗುವದಿಲ್ಲ; ಇವನು ಮೊಂಡ ಕುಡಿಕ ತುಂಟ ಎಂದು ಸಾಕ್ಷಿ ಹೇಳಬೇಕು. ಆ ಊರಿನವರೆಲ್ಲರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು.” (ಓರೆ ಅಕ್ಷರಗಳು ನಮ್ಮವು.)—ಧರ್ಮೋಪದೇಶಕಾಂಡ 21:18-21.
18 ಒಬ್ಬ ವ್ಯಕ್ತಿಯ ಪಾಪಗಳ ಬಗ್ಗೆ, ಇಡೀ ಜನಾಂಗಕ್ಕಾಗಲಿ ಅಥವಾ ಅವನ ಸ್ವಂತ ಕುಲದ ಜನರಿಗಾಗಲಿ ಹೇಳುತ್ತಿರಲಿಲ್ಲ ಮತ್ತು ಅವರು ತೀರ್ಪು ನೀಡುತ್ತಿರಲಿಲ್ಲ. ಬದಲಾಗಿ, “ಹಿರಿಯ”ರೋಪಾದಿ ಅಂಗೀಕರಿಸಲ್ಪಟ್ಟವರು, ಸಭೆಯ ಪ್ರತಿನಿಧಿಗಳೋಪಾದಿ ಆ ಸಮಸ್ಯೆಯೊಂದಿಗೆ ವ್ಯವಹರಿಸುತ್ತಿದ್ದರು. (‘ಯಾಜಕರಿಂದ ಹಾಗೂ ಆಗ ಇದ್ದ ನ್ಯಾಯಾಧಿಪತಿಗಳಿಂದ’ ನಿರ್ವಹಿಸಲ್ಪಟ್ಟಿದ್ದ ಒಂದು ಸಂಗತಿಯ ಕುರಿತು ಧರ್ಮೋಪದೇಶಕಾಂಡ 19:16, 17ನ್ನು ನೋಡಿರಿ.) ಅದೇ ರೀತಿಯಲ್ಲಿ ಇಂದು, ಮೂರನೆಯ ಹೆಜ್ಜೆಯನ್ನು ತೆಗೆದುಕೊಳ್ಳುವ ಅಗತ್ಯವಿರುವಾಗ, ಸಭೆಯ ಪ್ರತಿನಿಧಿಗಳಾಗಿರುವ ಹಿರಿಯರು ಈ ಸಮಸ್ಯೆಯೊಂದಿಗೆ ವ್ಯವಹರಿಸುತ್ತಾರೆ. ಏನೇ ಆದರೂ, ಕ್ರೈಸ್ತ ಸಹೋದರನನ್ನು ಸಂಪಾದಿಸಿಕೊಳ್ಳುವುದೇ ಅವರ ಗುರಿಯಾಗಿದೆ. ನ್ಯಾಯವಾದ ರೀತಿಯಲ್ಲಿ ವರ್ತಿಸುವ ಮೂಲಕ, ಸಮಸ್ಯೆಯ ಬಗ್ಗೆ ಅವಸರದಿಂದ ತೀರ್ಪುಕೊಡದಿರುವ ಮೂಲಕ ಅಥವಾ ಪಕ್ಷಪಾತವನ್ನು ತೋರಿಸದಿರುವ ಮೂಲಕ ಅವರು ಇದನ್ನು ವ್ಯಕ್ತಪಡಿಸುತ್ತಾರೆ.
19. ಈ ವಿಚಾರದ ಬಗ್ಗೆ ವಿಚಾರಣೆ ನಡೆಸುವಂತೆ ನೇಮಿಸಲ್ಪಟ್ಟಿರುವ ಹಿರಿಯರು ಏನು ಮಾಡಲು ಪ್ರಯತ್ನಿಸುವರು?
19 ನಿಜವಾಗಿಯೂ ತಪ್ಪು ಮಾಡಲ್ಪಟ್ಟಿದೆಯೋ (ಅಥವಾ ಮಾಡಲ್ಪಡುತ್ತಿದೆಯೋ) ಎಂಬುದನ್ನು ಕಂಡುಕೊಳ್ಳಲಿಕ್ಕಾಗಿ, ವಾಸ್ತವಾಂಶಗಳನ್ನು ಪರಿಶೀಲಿಸಲು ಮತ್ತು ಅಗತ್ಯವಿರುವ ಸಾಕ್ಷಿಗಳಿಗೆ ಕಿವಿಗೊಡಲು ಹಿರಿಯರು ಪ್ರಯತ್ನಿಸುವರು. ಅವರು ಯಾವುದೇ ರೀತಿಯ ಭ್ರಷ್ಟಾಚಾರದಿಂದ ಸಭೆಯನ್ನು ಸಂರಕ್ಷಿಸಲು ಬಯಸುತ್ತಾರೆ ಮತ್ತು ಲೋಕದ ಆತ್ಮವು ಸಭೆಯೊಳಗೆ ನುಸುಳದಂತೆ ನೋಡಿಕೊಳ್ಳುತ್ತಾರೆ. (1 ಕೊರಿಂಥ 2:12; 5:7) ಅವರು ತಮ್ಮ ಶಾಸ್ತ್ರೀಯ ಅರ್ಹತೆಗಳಿಗನುಸಾರ “ಸ್ವಸ್ಥಬೋಧನೆಯಿಂದ ಜನರನ್ನು ಎಚ್ಚರಿಸುವದಕ್ಕೂ ಎದುರಿಸುವವರ ಬಾಯಿಕಟ್ಟುವದಕ್ಕೂ” ಪ್ರಯತ್ನಿಸುವರು. (ತೀತ 1:9) ಯಾರ ಕುರಿತಾಗಿ ಯೆಹೋವನ ಪ್ರವಾದಿಯು ಈ ಕೆಳಗಿನಂತೆ ಬರೆದನೋ ಆ ಇಸ್ರಾಯೇಲ್ಯರಂತೆ ಆ ತಪ್ಪಿತಸ್ಥನು ವರ್ತಿಸುವುದಿಲ್ಲವೆಂಬುದು ನಮ್ಮ ನಿರೀಕ್ಷೆಯಾಗಿದೆ: “ನಾನು ಕೂಗಲು ನೀವು ಉತ್ತರಕೊಡಲಿಲ್ಲ. ನಾನು ಹೇಳಲು ನೀವು ಕೇಳಲಿಲ್ಲ; ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನು ನಡಿಸಿ ನನಗೆ ಇಷ್ಟವಲ್ಲದ್ದನ್ನು ಆರಿಸಿಕೊಂಡಿರಿ.”—ಯೆಶಾಯ 65:12.
20. ಒಬ್ಬ ಪಾಪಿಯು ಬುದ್ಧಿವಾದಕ್ಕೆ ಕಿವಿಗೊಡಲು ಮತ್ತು ಪಶ್ಚಾತ್ತಾಪವನ್ನು ವ್ಯಕ್ತಪಡಿಸಲು ನಿರಾಕರಿಸುವಲ್ಲಿ, ಯಾವ ತೀರ್ಮಾನಕ್ಕೆ ಬರಬೇಕು ಎಂದು ಯೇಸು ಹೇಳಿದನು?
20 ಆದರೂ, ತೀರ ಕೆಲವೇ ಸಂದರ್ಭಗಳಲ್ಲಿ ಮಾತ್ರ ಪಾಪಿಯು ಈ ರೀತಿಯ ಮನೋಭಾವವನ್ನು ತೋರಿಸುತ್ತಾನೆ. ಒಂದುವೇಳೆ ಅವನು ಇಂತಹ ಮನೋಭಾವವನ್ನು ತೋರಿಸುವಲ್ಲಿ, ಯೇಸುವಿನ ಮಾರ್ಗದರ್ಶನವು ಸ್ಪಷ್ಟವಾಗಿದೆ: “ಅವನು ನಿನಗೆ ಅನ್ಯನಂತೆಯೂ ಸುಂಕ ವಸೂಲಿಗಾರನಂತೆಯೂ ಇರಲಿ.” ದಯಾರಹಿತರಾಗಿ ವರ್ತಿಸಬೇಕು ಅಥವಾ ಅವರಿಗೆ ನೋವನ್ನುಂಟುಮಾಡಲು ಅಪೇಕ್ಷಿಸಬೇಕೆಂದು ಕರ್ತನು ಶಿಫಾರಸ್ಸು ಮಾಡಲಿಲ್ಲ. ಆದರೂ, ಪಶ್ಚಾತ್ತಾಪವನ್ನು ತೋರಿಸದಿರುವಂತಹ ಪಾಪಿಗಳನ್ನು ಸಭೆಯಿಂದ ಬಹಿಷ್ಕರಿಸುವುದರ ಕುರಿತು ಅಪೊಸ್ತಲ ಪೌಲನು ಕೊಟ್ಟ ಮಾರ್ಗದರ್ಶನದ ವಿಷಯದಲ್ಲಿ ಯಾವುದೇ ಸಂದೇಹವಿಲ್ಲ. (1 ಕೊರಿಂಥ 5:11-13) ಇದು ಸಹ, ಕಾಲಕ್ರಮೇಣ ಪಾಪಿಯನ್ನು ಸಂಪಾದಿಸಿಕೊಳ್ಳುವ ಗುರಿಯನ್ನು ಸಾಧಿಸುವುದರಲ್ಲಿ ಸಾಫಲ್ಯವನ್ನು ತರಬಹುದು.
21. ಸಭೆಯಿಂದ ಬಹಿಷ್ಕರಿಸಲ್ಪಟ್ಟಿರುವ ವ್ಯಕ್ತಿಯೊಬ್ಬನ ಮುಂದೆ ಯಾವ ಅವಕಾಶವು ತೆರೆದಿರುತ್ತದೆ?
21 ಪೋಲಿಹೋದ ಮಗನ ಕುರಿತಾದ ಯೇಸುವಿನ ದೃಷ್ಟಾಂತದಿಂದ ನಾವು ಈ ಸಾಧ್ಯತೆಯನ್ನು ಕಂಡುಕೊಳ್ಳಸಾಧ್ಯವಿದೆ. ಆ ದೃಷ್ಟಾಂತದಲ್ಲಿ ತಿಳಿಸಲ್ಪಟ್ಟಂತೆ, ತನ್ನ ತಂದೆಯ ಮನೆಯ ಪ್ರೀತಿಭರಿತ ಸಹವಾಸವನ್ನು ತೊರೆದು, ಸ್ವಲ್ಪ ಕಾಲಾವಧಿಯ ತನಕ ಹೊರಗೆ ಜೀವಿಸಿದ ಬಳಿಕ ಆ ಪಾಪಿಗೆ ‘ಬುದ್ಧಿಬಂತು.’ (ಲೂಕ 15:11-18) ಕೆಲವು ತಪ್ಪಿತಸ್ಥರು ಸಕಾಲದಲ್ಲಿ ಪಶ್ಚಾತ್ತಾಪಪಟ್ಟು, “ಸೈತಾನನ ಉರ್ಲಿಗೆ ಬಿದ್ದವರಾದ ಇವರು . . . ದೇವರ ಚಿತ್ತವನ್ನು ಅನುಸರಿಸುವದಕ್ಕೆ ಸ್ವಸ್ಥಚಿತ್ತ”ರಾಗಸಾಧ್ಯವಿದೆ ಎಂದು ಪೌಲನು ತಿಮೊಥೆಯನಿಗೆ ಹೇಳಿದನು. (2 ತಿಮೊಥೆಯ 2:24-26) ಯಾರು ಪಾಪಮಾಡಿದವರಾಗಿದ್ದು, ಪಶ್ಚಾತ್ತಾಪ ತೋರಿಸದ ಕಾರಣದಿಂದ ಸಭೆಯಿಂದ ಬಹಿಷ್ಕರಿಸಲ್ಪಟ್ಟಿದ್ದಾರೋ ಅವರಿಗೆ, ಒಂದಲ್ಲ ಒಂದು ದಿನ, ದೇವರ ಅಂಗೀಕಾರ ಹಾಗೂ ನಿಷ್ಠಾವಂತ ಕ್ರೈಸ್ತರ ಆದರಣೀಯ ಸಹವಾಸ ಹಾಗೂ ಸಾಮಾಜಿಕ ಸಂಪರ್ಕದ ಕೊರತೆಯ ಅನಿಸಿಕೆಯಾಗುವುದು ಮತ್ತು ಆಗ ಅವರಿಗೆ ಬುದ್ಧಿಬರುವುದು ಎಂದು ನಾವು ನಿಶ್ಚಯವಾಗಿಯೂ ನಿರೀಕ್ಷಿಸುತ್ತೇವೆ.
22. ಇಷ್ಟೆಲ್ಲ ಆದರೂ ನಾವು ಹೇಗೆ ನಮ್ಮ ಸಹೋದರನನ್ನು ಸಂಪಾದಿಸಿಕೊಳ್ಳಬಹುದು?
22 ಅನ್ಯರು ಹಾಗೂ ಸುಂಕ ವಸೂಲಿಗಾರರು, ವಿಮೋಚನೆಯನ್ನು ಪಡೆದುಕೊಳ್ಳಲು ಅಸಮರ್ಥರಾಗಿದ್ದಾರೆ ಎಂದು ಯೇಸು ಅವರ ಬಗ್ಗೆ ನೆನಸಲಿಲ್ಲ. ಸುಂಕ ವಸೂಲಿಗಾರರಲ್ಲಿ ಒಬ್ಬನಾಗಿದ್ದ ಲೇವಿಯನಾದ ಮತ್ತಾಯನು, ಯಥಾರ್ಥಭಾವದಿಂದ ‘ಯೇಸುವನ್ನು ಹಿಂಬಾಲಿಸಿದನು’ ಮತ್ತು ಯೇಸು ಅವನನ್ನು ತನ್ನ ಅಪೊಸ್ತಲನನ್ನಾಗಿಯೂ ಆರಿಸಿಕೊಂಡನು. (ಮಾರ್ಕ 2:15; ಲೂಕ 15:1) ಆದುದರಿಂದ, ಇಂದು ಒಬ್ಬ ಪಾಪಿಯು “ಸಭೆಯ ಮಾತನ್ನೂ ಕೇಳದೆಹೋದರೆ” ಮತ್ತು ಸಭೆಯಿಂದ ಬಹಿಷ್ಕರಿಸಲ್ಪಡುವುದಾದರೆ, ಅವನು ಸಕಾಲದಲ್ಲಿ ಪಶ್ಚಾತ್ತಾಪಪಟ್ಟು, ಸರಿಯಾದ ದಾರಿಗೆ ಬರುವನೋ ಇಲ್ಲವೋ ಎಂಬುದನ್ನು ಕಾದುನೋಡಸಾಧ್ಯವಿದೆ. ಪುನಃ ಅವನು ಸರಿಯಾದ ದಾರಿಯನ್ನು ಹಿಡಿದು, ಪುನಃ ಸಭೆಯ ಸದಸ್ಯನಾಗಿ ಪರಿಣಮಿಸುವಾಗ, ಸತ್ಯಾರಾಧನೆಯ ಮಂದೆಯಲ್ಲಿ ನಮ್ಮ ಸಹೋದರನನ್ನು ಪುನಃ ಸಂಪಾದಿಸಿಕೊಳ್ಳಲು ನಾವು ಅತ್ಯಾನಂದಪಡುವೆವು.
[ಅಧ್ಯಯನ ಪ್ರಶ್ನೆಗಳು]
a ಮೆಕ್ಲಿಂಟಕ್ ಮತ್ತು ಸ್ಟ್ರಾಂಗ್ರವರ ವಿಶ್ವಕೋಶ ಹೀಗೆ ಹೇಳುತ್ತದೆ: “ಹೊಸ ಒಡಂಬಡಿಕೆಯ ಸಮಯದಲ್ಲಿ, ತೆರಿಗೆ ವಸೂಲಿಗಾರರು [ಸುಂಕ ವಸೂಲಿಮಾಡುವವರು], ಹೆಚ್ಚಾಗಿ ಯೆಹೂದ್ಯೇತರರ ಜೊತೆ ಪದೇಪದೇ ಸಹವಾಸ ಮಾಡುತ್ತಿದ್ದು, ರೋಮನ್ ಪ್ರಜಾಪೀಡಕರ ಇಚ್ಛಾನುಸಾರ ನಡೆದುಕೊಳ್ಳುವ ಮೂಲಕ ಅಪವಿತ್ರರಾಗಿದ್ದ ಕಾರಣ, ಅವರನ್ನು ದ್ರೋಹಿಗಳು ಹಾಗೂ ಧರ್ಮಭ್ರಷ್ಟರೋಪಾದಿ ಪರಿಗಣಿಸಲಾಗುತ್ತಿತ್ತು. ಅವರನ್ನು ಪಾಪಿಗಳ ಗುಂಪಿಗೆ ಸೇರಿಸಲಾಗಿತ್ತು . . . ಆದುದರಿಂದ, ಸಭ್ಯ ಜನರು ಎಂದೂ ಸುಂಕ ವಸೂಲಿಗಾರರೊಂದಿಗೆ ಸಹವಾಸ ಮಾಡುತ್ತಿರಲಿಲ್ಲ. ಸಮಾಜದಿಂದ ಬಹಿಷ್ಕೃತರಾಗಿದ್ದವರು ಮಾತ್ರ ಸುಂಕ ವಸೂಲಿಗಾರರೊಂದಿಗೆ ಗೆಳೆತನ ಬೆಳೆಸುತ್ತಿದ್ದರು ಅಥವಾ ಅವರ ಜೊತೆಗಿರುತ್ತಿದ್ದರು.”
b ಸ್ವಲ್ಪಮಟ್ಟಿಗೆ ಮೋಸ, ವಂಚನೆ, ಅಥವಾ ಕಪಟೋಪಾಯಗಳನ್ನು ಒಳಗೂಡಿರುವಂತಹ ವ್ಯಾಪಾರ ಅಥವಾ ಹಣಕಾಸಿನ ವ್ಯವಹಾರಗಳನ್ನು, ಯೇಸು ತಿಳಿಸಿದ ಪಾಪದ ಗುಂಪಿಗೆ ಸೇರಿಸಸಾಧ್ಯವಿದೆ. ಒಂದು ನಿರ್ದೇಶನದೋಪಾದಿ, ಮತ್ತಾಯ 18:15-17ರಲ್ಲಿ ದಾಖಲಿಸಲ್ಪಟ್ಟಿರುವ ಮಾರ್ಗದರ್ಶನವನ್ನು ನೀಡಿದ ಬಳಿಕ, ಯಾರು ಸಾಲವನ್ನು ಕೊಡಬೇಕಾಗಿದ್ದು, ಅದನ್ನು ಹಿಂದಿರುಗಿಸಲು ಅಸಮರ್ಥರಾಗಿದ್ದರೋ ಆ ದಾಸರ (ಕೆಲಸಗಾರರ) ಕುರಿತಾದ ಒಂದು ದೃಷ್ಟಾಂತವನ್ನು ಯೇಸು ಹೇಳಿದನು.
c ಒಬ್ಬ ಬೈಬಲ್ ವಿದ್ವಾಂಸನು ಹೇಳಿಕೆ ನೀಡಿದ್ದು: “ಕೆಲವೊಮ್ಮೆ ಏನಾಗುತ್ತದೆಂದರೆ, ಒಬ್ಬ ತಪ್ಪಿತಸ್ಥನು ಒಬ್ಬ ವ್ಯಕ್ತಿಯ—ವಿಶೇಷವಾಗಿ ತಪ್ಪಿತಸ್ಥನಿಗೆ ಈ ವ್ಯಕ್ತಿಯೊಂದಿಗೆ ಈಗಾಗಲೇ ಮನಸ್ತಾಪವಿದ್ದಲ್ಲಿ—ಸಲಹೆಗಿಂತಲೂ, ಇಬ್ಬರು ಅಥವಾ ಮೂವರು ವ್ಯಕ್ತಿಗಳ (ವಿಶೇಷವಾಗಿ ಇವರು ಗೌರವಾರ್ಹರಾದ ವ್ಯಕ್ತಿಗಳಾಗಿರುವಲ್ಲಿ) ಸಲಹೆಯನ್ನು ಪರಿಗಣಿಸಲು ಮನಃಪೂರ್ವಕವಾಗಿ ಸಿದ್ಧನಿರುತ್ತಾನೆ.”
ನೀವು ಜ್ಞಾಪಿಸಿಕೊಳ್ಳಬಲ್ಲಿರೊ?
◻ ಮೂಲತಃ, ಮತ್ತಾಯ 18:15-17ರಲ್ಲಿರುವ ವಚನಗಳು ಎಂತಹ ರೀತಿಯ ಪಾಪಕ್ಕೆ ಅನ್ವಯವಾಗುತ್ತವೆ?
◻ ನಾವು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಬೇಕಾಗಿರುವಲ್ಲಿ, ಯಾವ ವಿಚಾರವನ್ನು ಜ್ಞಾಪಕದಲ್ಲಿಟ್ಟುಕೊಳ್ಳತಕ್ಕದ್ದು?
◻ ನಾವು ಎರಡನೆಯ ಹೆಜ್ಜೆಯನ್ನು ತೆಗೆದುಕೊಳ್ಳಬೇಕಾಗಿರುವಲ್ಲಿ, ಯಾರ ಸಹಾಯವನ್ನು ಪಡೆದುಕೊಳ್ಳುವುದು ಒಳ್ಳೇದಾಗಿರಬಹುದು?
◻ ಮೂರನೆಯ ಹೆಜ್ಜೆಯನ್ನು ತೆಗೆದುಕೊಳ್ಳುವುದರಲ್ಲಿ ಯಾರು ಒಳಗೂಡಿದ್ದಾರೆ, ಮತ್ತು ನಾವು ನಮ್ಮ ಸಹೋದರನನ್ನು ಹೇಗೆ ಸಂಪಾದಿಸಿಕೊಳ್ಳಸಾಧ್ಯವಿದೆ?
[ಪುಟ 18 ರಲ್ಲಿರುವ ಚಿತ್ರ]
ಯೆಹೂದ್ಯರು ಸುಂಕ ವಸೂಲಿಗಾರರೊಂದಿಗೆ ಸೇರುತ್ತಿರಲಿಲ್ಲ. ಮತ್ತಾಯನು ತನ್ನ ಮಾರ್ಗಗಳನ್ನು ಬದಲಾಯಿಸಿ, ಯೇಸುವನ್ನು ಹಿಂಬಾಲಿಸಿದನು
[ಪುಟ 20 ರಲ್ಲಿರುವ ಚಿತ್ರ]
ಅನೇಕವೇಳೆ ನಾವು ಒಂದು ಸಮಸ್ಯೆಯನ್ನು “ನಾಲ್ಕು ಕಣ್ಣುಗಳ ಮುಂದೆ” ಬಗೆಹರಿಸಸಾಧ್ಯವಿದೆ