ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr25 ಸೆಪ್ಟೆಂಬರ್‌ ಪು. 1-13
  • “ಜೀವನ ಮತ್ತು ಸೇವೆ ಕೂಟದ ಕೈಪಿಡಿ” ರೆಫೆರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಜೀವನ ಮತ್ತು ಸೇವೆ ಕೂಟದ ಕೈಪಿಡಿ” ರೆಫೆರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2025
  • ಉಪಶೀರ್ಷಿಕೆಗಳು
  • ಸೆಪ್ಟೆಂಬರ್‌ 1-7
  • ಸೆಪ್ಟೆಂಬರ್‌ 8-14
  • ಸೆಪ್ಟೆಂಬರ್‌ 15-21
  • ಸೆಪ್ಟೆಂಬರ್‌ 22-28
  • ಸೆಪ್ಟೆಂಬರ್‌ 29–ಅಕ್ಟೋಬರ್‌ 5
  • ಅಕ್ಟೋಬರ್‌ 6-12
  • ಅಕ್ಟೋಬರ್‌ 13-19
  • ಅಕ್ಟೋಬರ್‌ 20-26
  • ಅಕ್ಟೋಬರ್‌ 27–ನವೆಂಬರ್‌ 2
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2025
mwbr25 ಸೆಪ್ಟೆಂಬರ್‌ ಪು. 1-13

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

© 2025 Watch Tower Bible and Tract Society of Pennsylvania

ಸೆಪ್ಟೆಂಬರ್‌ 1-7

ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 29

ಬೈಬಲಿಗೆ ವಿರುದ್ಧವಾಗಿರೋ ಆಚಾರ-ವಿಚಾರಗಳನ್ನ, ಪದ್ಧತಿಗಳನ್ನ ನಂಬೋಕೆ ಹೋಗಬೇಡಿ

wp16.06-E 6, ಚೌಕ

ಸ್ವರ್ಗದ ಬಗ್ಗೆ ಇರೋ ದರ್ಶನಗಳು

ಇವತ್ತು ಲಕ್ಷಾಂತರ ಜನ ಮೂಢನಂಬಿಕೆ ಮತ್ತು ಕೆಟ್ಟ ದೇವದೂತರ ಭಯ ಅನ್ನೋ ಬಂಧನದಲ್ಲಿ ಬಂಧಿಯಾಗಿದ್ದಾರೆ. ಈ ಭಯದಿಂದ ಆಚೆ ಬರೋಕೆ ತಾಯ್ತ ಕಟ್ಕೊತಾರೆ, ಮಾಟ ಮಂತ್ರ ಮಾಡ್ತಾರೆ, ಮೋಡಿ ಮಾಡೋರ ಮೇಲೆ ನಂಬಿಕೆ ಇಡ್ತಾರೆ, ಮಂತ್ರಿಸಿದ ಔಷಧಿಗಳನ್ನ ತಗೊತಾರೆ. ಆದ್ರೆ ನಾವು ಆ ತರ ಮಾಡಬೇಕಾಗಿಲ್ಲ. ಯಾಕಂದ್ರೆ ಮನಸ್ಸಿಗೆ ನೆಮ್ಮದಿ ಕೊಡೋ ಈ ಮಾತನ್ನ ಬೈಬಲ್‌ ಹೇಳುತ್ತೆ. “ಯಾರ ಹೃದಯ ಪೂರ್ಣವಾಗಿ ತನ್ನ ಕಡೆ ಇರುತ್ತೋ ಅಂಥವರಿಗೆ ಸಹಾಯ ಮಾಡೋಕೆ ಯೆಹೋವ ಭೂಮಿಯಲ್ಲಿ ಎಲ್ಲ ಕಡೆ ನೋಡ್ತಾ ಇದ್ದಾನೆ.” (2 ಪೂರ್ವಕಾಲವೃತ್ತಾಂತ 16:9) ಸತ್ಯ ದೇವರಾಗಿರೋ ಯೆಹೋವ ಸೈತಾನನಿಗಿಂತ ಜಾಸ್ತಿ ಶಕ್ತಿಶಾಲಿ ಆಗಿದ್ದಾನೆ. ನಾವು ಆತನ ಮೇಲೆ ನಂಬಿಕೆ ಇಟ್ರೆ ಆತನು ಖಂಡಿತ ನಮ್ಮನ್ನ ಕಾಪಾಡ್ತಾನೆ.

ಯೆಹೋವ ನಮ್ಮನ್ನ ಕಾಪಾಡಬೇಕಂದ್ರೆ ಆತನ ಇಷ್ಟ ಏನು ಅಂತ ತಿಳ್ಕೊಬೇಕು ಮತ್ತು ಅದೇ ತರ ನಡ್ಕೊಬೇಕು. ಉದಾಹರಣೆಗೆ ಒಂದನೇ ಶತಮಾನದ ಎಫೆಸದಲ್ಲಿದ್ದ ಕ್ರೈಸ್ತರು ಕೂಡ ಹೀಗೇ ಮಾಡಿದ್ರು. ಮಾಟ ಮಂತ್ರಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನ ಸುಟ್ಟು ಹಾಕಿದ್ರು. (ಅಪೊಸ್ತಲರ ಕಾರ್ಯ 19:19, 20) ಅದೇ ತರ ಯೆಹೋವ ನಮ್ಮನ್ನೂ ಕಾಪಾಡಬೇಕಂದ್ರೆ ಮಾಟ ಮಂತ್ರಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನ, ವಸ್ತುಗಳನ್ನ, ತಾಯ್ತಗಳನ್ನ ತೆಗೆದುಹಾಕಬೇಕು. ಕೆಟ್ಟ ದೇವದೂತರಿಗೆ ಸಂಬಂಧಪಟ್ಟ ಯಾವ ವಿಷ್ಯಗಳನ್ನೂ ಮಾಡಬಾರದು.

w19.04 17 ¶13

ಸಾವಿನ ಸತ್ಯವನ್ನು ಸಮರ್ಥಿಸಿ

13 ನಿಮಗೆ ಒಂದು ಆಚಾರ ಸರಿನಾ ತಪ್ಪಾ ಅಂತ ಗೊತ್ತಾಗದಿದ್ದರೆ ಯೆಹೋವನಿಗೆ ಪ್ರಾರ್ಥಿಸಿ ವಿವೇಕ ಕೊಡುವಂತೆ ಕೇಳಿ. (ಯಾಕೋಬ 1:5 ಓದಿ.) ಆಮೇಲೆ ನಮ್ಮ ಸಂಘಟನೆ ಕೊಟ್ಟಿರುವ ಪ್ರಕಾಶನಗಳಲ್ಲಿ ಅದರ ಬಗ್ಗೆ ಸಂಶೋಧನೆ ಮಾಡಿ. ಅಗತ್ಯವಿದ್ದರೆ ಸಭೆಯ ಹಿರಿಯರ ಹತ್ತಿರ ಮಾತಾಡಿ. ಅವರು ನೀವು ಏನು ಮಾಡಬೇಕು, ಏನು ಮಾಡಬಾರದು ಎಂದು ಹೇಳಲ್ಲ. ಅದರ ಬದಲು ನಿಮ್ಮ ಸನ್ನಿವೇಶಕ್ಕೆ ಅನ್ವಯಿಸುವಂಥ ಬೈಬಲ್‌ ತತ್ವಗಳನ್ನು ತೋರಿಸುತ್ತಾರೆ. ಈ ಪ್ಯಾರದಲ್ಲಿ ಹೇಳಿರುವ ಹೆಜ್ಜೆಗಳನ್ನು ನೀವು ತಗೊಂಡರೆ ನಿಮ್ಮ ‘ಗ್ರಹಣ ಶಕ್ತಿಗಳಿಗೆ ತರಬೇತಿ‘ ಕೊಡುತ್ತೀರಿ. ಆಗ “ಸರಿ ಮತ್ತು ತಪ್ಪಿನ ಭೇದವನ್ನು” ತಿಳುಕೊಳ್ಳುತ್ತೀರಿ.—ಇಬ್ರಿ. 5:14.

w18.11 11 ¶12

‘ನಿನ್ನ ಸತ್ಯದಲ್ಲಿ ನಡೆಯುವೆನು’

12 ದೇವರಿಗೆ ಇಷ್ಟವಾಗದ ಸಂಪ್ರದಾಯಗಳು ಮತ್ತು ಪದ್ಧತಿಗಳು. ನಮ್ಮ ಕುಟುಂಬದವರು, ಜೊತೆಗೆ ಕೆಲಸಮಾಡುವವರು, ಶಾಲೆಯಲ್ಲಿ ನಮ್ಮ ಜೊತೆ ಓದುವವರು ಅವರ ಹಬ್ಬ-ಆಚರಣೆಗಳಿಗೆ ನಮ್ಮನ್ನು ಕರೆಯುತ್ತಾರೆ. ಯೆಹೋವನಿಗೆ ಇಷ್ಟವಾಗದ ಸಂಪ್ರದಾಯಗಳಲ್ಲಿ ಮತ್ತು ಹಬ್ಬಗಳಲ್ಲಿ ನಾವು ಭಾಗವಹಿಸುವಂತೆ ಒತ್ತಾಯ ಮಾಡುತ್ತಾರೆ. ಆಗ ಅದನ್ನು ಎದುರಿಸಲು ನಮಗೆ ಯಾವುದು ಸಹಾಯ ಮಾಡುತ್ತದೆ? ಆ ಹಬ್ಬಗಳನ್ನು ಯೆಹೋವನು ಯಾಕೆ ಇಷ್ಟಪಡಲ್ಲ ಎನ್ನುವುದಕ್ಕಿರುವ ಕಾರಣಗಳು ನಮಗೆ ಸ್ಪಷ್ಟವಾಗಿ ಅರ್ಥವಾಗಿರಬೇಕು. ನಮ್ಮ ಪ್ರಕಾಶನಗಳಲ್ಲಿ ಸಂಶೋಧನೆ ಮಾಡಿ ಆ ಕೆಲವು ಹಬ್ಬಗಳು ಹೇಗೆ ಆರಂಭವಾದವು ಎಂದು ಪುನಃ ಮನಸ್ಸಿಗೆ ತಂದುಕೊಳ್ಳಬೇಕು. ಇದು ನಮಗೆ ಸ್ಪಷ್ಟವಾದರೆ ‘ಕರ್ತನಿಗೆ ಅಂಗೀಕಾರವಾದ’ ದಾರಿಯಲ್ಲೇ ನಾವು ನಡೆಯುತ್ತಿದ್ದೇವೆ ಎಂಬ ಭರವಸೆ ಇರುತ್ತದೆ. (ಎಫೆ. 5:10) ಯೆಹೋವನ ಮೇಲೆ ಮತ್ತು ಆತನ ವಾಕ್ಯದ ಮೇಲೆ ನಮಗೆ ನಂಬಿಕೆ ಇರುವುದಾದರೆ ಜನರು ಏನು ನೆನಸುತ್ತಾರೆ ಎನ್ನುವ ಭಯ ಇರುವುದಿಲ್ಲ.—ಜ್ಞಾನೋ. 29:25.

ಬೈಬಲಿನಲ್ಲಿರುವ ರತ್ನಗಳು

it-1-E

“ಹೊಗಳಿ ಅಟ್ಟಕ್ಕೇರಿಸೋದು” ¶1

ಹೊಗಳಿ ಅಟ್ಟಕ್ಕೇರಿಸೋದು

ಒಬ್ಬ ವ್ಯಕ್ತಿಯನ್ನ ಅಟ್ಟಕ್ಕೇರಿಸೋದು ಅಂದ್ರೆ ಅತಿಯಾಗಿ ಹೊಗಳೋದು ಅಥವಾ ಸುಮ್‌ಸುಮ್ನೆ ಹೊಗಳೋದು ಅಂತರ್ಥ. ಈ ತರ ಹೊಗಳಿಕೆ ಸಿಕ್ಕಾಗ ಆ ವ್ಯಕ್ತಿಗೆ ಬೇರೆವ್ರಿಗಿಂತ ತಾನೇ ಶ್ರೇಷ್ಠ ಅಂತ ಅನಿಸಿಬಿಡುತ್ತೆ. ಇದ್ರಿಂದ ಅವನು ತಪ್ಪಾದ ತೀರ್ಮಾನಗಳನ್ನ ಮಾಡಬಹುದು. ಅವನು ಸ್ವಾರ್ಥಿಯಾಗಿ ನಡ್ಕೊಬಹುದು ಅಥವಾ ಅಹಂಕಾರಿ ಆಗಬಹುದು. ಇದ್ರಿಂದ ಅವನಿಗೆ ಮುಂದೆ ತುಂಬ ತೊಂದ್ರೆ ಆಗುತ್ತೆ. ಒಬ್ಬ ವ್ಯಕ್ತಿ ಬೇರೆವ್ರನ್ನ ಸುಮ್‌ಸುಮ್ನೆ ಹೊಗಳೋದು ಅವ್ರ ಮೆಚ್ಚಿಗೆ ಅಥವಾ ಅವ್ರಿಂದ ಲಾಭ ಪಡ್ಕೊಳ್ಳೋಕೆ. ಈ ತರ ಹೊಗಳಿಸಿಕೊಂಡವನಿಗೆ ತನ್ನನ್ನ ಹೊಗಳಿದವರಿಗೋಸ್ಕರ ಏನಾದ್ರೂ ಒಳ್ಳೇದು ಮಾಡಲೇಬೇಕು ಅನ್ನೋ ಒತ್ತಡ ಬರುತ್ತೆ. ಕೆಲವರು ಬೇರೆವ್ರನ್ನ ತೊಂದ್ರೆಲಿ ಸಿಕ್ಕಿ ಹಾಕಿಸಬೇಕು ಅಂತಾನೇ ಹೊಗಳಿ ಅಟ್ಟಕ್ಕೇರಿಸ್ತಾರೆ. (ಜ್ಞಾನೋ 29:5) ಸುಮ್‌ಸುಮ್ನೆ ಹೊಗಳಿ ಅಟ್ಟಕ್ಕೇರಿಸೋ ವ್ಯಕ್ತಿಗಳಲ್ಲಿ ದೇವರ ವಿವೇಕ ಇರಲ್ಲ. ಅಂಥ ವ್ಯಕ್ತಿಗಳು ಈ ಲೋಕದವ್ರ ತರ ಇರ್ತಾರೆ. ಒಳಗೆ ಒಂಥರ ಹೊರಗೆ ಒಂಥರ ಇರ್ತಾರೆ, ನ್ಯಾಯವಾಗಿ ನಡ್ಕೊಳ್ಳಲ್ಲ, ಸ್ವಾರ್ಥಿಗಳಾಗಿರ್ತಾರೆ. (ಯಾಕೋ 3:17) ಕಪಟ, ಸುಳ್ಳು ಹೇಳೋದು, ಬೆಣ್ಣೆ ಹಚ್ಚಿ ಮಾತಾಡೋದು, ಬೇರೆವ್ರ ಹತ್ರ ಇಲ್ಲದೇ ಇರೋದನ್ನ ಇದೆ ಅಂತ ಹೊಗಳೋದು ಇದೆಲ್ಲಾ ದೇವರಿಗೆ ಇಷ್ಟ ಇಲ್ಲ.—2ಕೊರಿಂ 1:12; ಗಲಾ 1:10; ಎಫೆ 4:25; ಕೊಲೊ 3:9; ಪ್ರಕ 21:8.

ಸೆಪ್ಟೆಂಬರ್‌ 8-14

ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 30

“ಬಡತನವನ್ನಾಗಲಿ, ಹಣ ಆಸ್ತಿಯನ್ನಾಗಲಿ ನನಗೆ ಕೊಡಬೇಡ”

w18.01 24 ¶10-12

ಯಾವ ರೀತಿಯ ಪ್ರೀತಿ ನಿಜ ಸಂತೋಷವನ್ನು ತರುತ್ತದೆ?

10 ನಮ್ಮೆಲ್ಲರಿಗೂ ದುಡ್ಡು ಬೇಕು ಅನ್ನುವುದು ನಿಜಾನೇ. ಅದರಿಂದ ನಮಗೆ ಆಶ್ರಯ ಅಥವಾ ಭದ್ರತೆ ಸಿಗುತ್ತದೆ. (ಪ್ರಸಂ. 7:12) ಆದರೆ ನಮ್ಮ ಮೂಲಭೂತ ಆವಶ್ಯಕತೆಗಳನ್ನು ಪೂರೈಸುವಷ್ಟು ಮಾತ್ರ ಇದ್ದರೆ ನಾವು ಸಂತೋಷವಾಗಿರಲು ಸಾಧ್ಯನಾ? ಸಾಧ್ಯ! (ಪ್ರಸಂಗಿ 5:12 ಓದಿ.) ಯಾಕೆ ಎಂಬವನ ಮಗನಾದ ಆಗೂರನು ಬರೆದದ್ದು: “ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ಕೊಡದೆ ನನಗೆ ತಕ್ಕಷ್ಟು ಆಹಾರವನ್ನು ಭೋಜನಮಾಡಿಸು.” ರಾಜ ಯಾಕೆ ಬಡತನ ಬೇಡ ಅನ್ನುತ್ತಿದ್ದಾನೆ ಅನ್ನುವುದು ನಮಗೆ ಅರ್ಥವಾಗುತ್ತದೆ. ಕೈಯಲ್ಲಿ ಏನೂ ಇಲ್ಲ ಅಂದರೆ ಕದಿಯಲು ಮನಸ್ಸಾಗುತ್ತದೆ. ಕದಿಯುವುದರಿಂದ ದೇವರ ಹೆಸರಿಗೆ ಕಳಂಕ ಉಂಟಾಗುತ್ತದೆ ಎಂಬ ಕಾರಣಕ್ಕೆ ಅವನು ಬಡತನ ಬೇಡ ಅಂದನು. ಆದರೆ ಅವನು ಐಶ್ವರ್ಯನೂ ಬೇಡ ಅಂತಿದ್ದಾನಲ್ಲಾ? “ಹೊಟ್ಟೆತುಂಬಿದವನಾದರೆ ಯೆಹೋವನು ಯಾರೋ ಎಂದು ನಿನ್ನನ್ನು ತಿರಸ್ಕರಿಸೇನು” ಎಂಬ ಭಯ ಅವನಿಗಿತ್ತು. (ಜ್ಞಾನೋ. 30:8, 9) ದೇವರಲ್ಲಿ ನಂಬಿಕೆ ಇಡುವ ಬದಲು ದುಡ್ಡನ್ನೇ ನಂಬಿಕೊಂಡಿರುವ ಜನರ ಬಗ್ಗೆ ನಿಮಗೆ ಗೊತ್ತಿರಬಹುದು.

11 ಹಣಪ್ರೇಮಿಗಳು ದೇವರನ್ನು ಮೆಚ್ಚಿಸಲು ಸಾಧ್ಯವಿಲ್ಲ. ಇದರ ಬಗ್ಗೆ ಯೇಸು ಹೇಳಿದ್ದು: “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು; ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುವನು; ಅಥವಾ ಒಬ್ಬನಿಗೆ ಅಂಟಿಕೊಂಡು ಇನ್ನೊಬ್ಬನನ್ನು ಕಡೆಗಣಿಸುವನು. ನೀವು ದೇವರನ್ನೂ ಐಶ್ವರ್ಯವನ್ನೂ ಸೇವಿಸಲಾರಿರಿ.” ಆತನು ಹೀಗೂ ಹೇಳಿದನು: “ಭೂಮಿಯಲ್ಲಿ ನಿಮಗಾಗಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳುವುದನ್ನು ನಿಲ್ಲಿಸಿರಿ; ಇಲ್ಲಿ ನುಸಿ ಮತ್ತು ಕಿಲುಬು ಅದನ್ನು ಹಾಳುಮಾಡಿಬಿಡುತ್ತದೆ; ಕಳ್ಳರು ಒಳನುಗ್ಗಿ ಕದಿಯುತ್ತಾರೆ. ಆದರೆ ಸ್ವರ್ಗದಲ್ಲಿ ನಿಮಗಾಗಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳಿರಿ; ಅಲ್ಲಿ ನುಸಿಯಾಗಲಿ ಕಿಲುಬಾಗಲಿ ಅದನ್ನು ಹಾಳುಮಾಡುವುದಿಲ್ಲ; ಕಳ್ಳರು ಒಳನುಗ್ಗಿ ಕದಿಯುವುದೂ ಇಲ್ಲ.”—ಮತ್ತಾ. 6:19, 20, 24.

12 ಯೆಹೋವನ ಸೇವಕರಲ್ಲಿ ಅನೇಕರು ಸರಳವಾದ ಜೀವನ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಇದು ಅವರಿಗೆ ಯೆಹೋವನ ಸೇವೆಯನ್ನು ಹೆಚ್ಚು ಮಾಡಲು ಸಹಾಯ ಮಾಡಿದೆ ಮತ್ತು ಇದರಿಂದ ಅವರ ಸಂತೋಷ ಹೆಚ್ಚಾಗಿದೆ ಎಂದವರು ಹೇಳುತ್ತಾರೆ. ಅಮೆರಿಕದಲ್ಲಿರುವ ಜ್ಯಾಕ್‌ ತನ್ನ ಹೆಂಡತಿಯೊಟ್ಟಿಗೆ ಪಯನೀಯರ್‌ ಸೇವೆ ಮಾಡಲಿಕ್ಕಾಗಿ ತನ್ನ ದೊಡ್ಡ ಮನೆಯನ್ನು ಮಾರಿದರು ಮತ್ತು ಮಾಡುತ್ತಿದ್ದ ಕೆಲಸವನ್ನು ಬಿಟ್ಟುಬಿಟ್ಟರು. ಅವರು ಹೇಳುವುದು: “ಸುಂದರವಾದ ಸ್ಥಳದಲ್ಲಿದ್ದ ನಮ್ಮ ಚಂದದ ಮನೆ ಮತ್ತು ಜಮೀನನ್ನು ಮಾರಲು ನಮಗೆ ಮನಸ್ಸೇ ಇರಲಿಲ್ಲ.” ಆದರೆ ಎಷ್ಟೋ ವರ್ಷಗಳಿಂದ ಅವರು ಕೆಲಸದಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳಿಂದಾಗಿ ತುಂಬ ಕಿರಿಕಿರಿಯಾಗಿ ಮನೆಗೆ ಬರುತ್ತಿದ್ದರು. ಅವರು ಏನು ಹೇಳುತ್ತಾರೆಂದರೆ, “ಪಯನೀಯರ್‌ ಆಗಿರುವ ನನ್ನ ಹೆಂಡತಿ ಯಾವಾಗಲೂ ಸಂತೋಷವಾಗಿ ಇರುತ್ತಿದ್ದಳು. ‘ನನ್ನ ಬಾಸ್‌ನಷ್ಟು ಒಳ್ಳೆಯವರು ಬೇರೆ ಯಾರೂ ಇಲ್ಲ!’ ಅನ್ನುತ್ತಿದ್ದಳು. ಈಗ ನಾನೂ ಪಯನೀಯರ್‌ ಸೇವೆ ಮಾಡುತ್ತಿರುವುದರಿಂದ ನಾವಿಬ್ಬರೂ ಒಂದೇ ಯಜಮಾನ ಅಂದರೆ ಯೆಹೋವನ ಸೇವೆ ಮಾಡುತ್ತಿದ್ದೇವೆ.”

w87-E 5/15 30 ¶8

ಯೆಹೋವನಿಗೆ ಭಯ ಪಡಿ, ಆಗ ನೀವು ಖುಷಿಯಾಗಿ ಇರ್ತೀರ

◆ 30:15, 16—ಈ ವಚನದಲ್ಲಿ ಹೇಳಿರೋ ಉದಾಹರಣೆಗಳ ಅರ್ಥ ಏನು?

ದುರಾಸೆ ಇರೋ ವ್ಯಕ್ತಿಗೆ ಎಷ್ಟಿದ್ರೂ ತೃಪ್ತಿ ಆಗಲ್ಲ ಅಂತ ಈ ಉದಾಹರಣೆಗಳಿಂದ ಗೊತ್ತಾಗುತ್ತೆ. ಜಿಗಣೆಗಳಿಗೆ ಎಷ್ಟು ರಕ್ತ ಕುಡಿದ್ರೂ ಸಾಕಾಗಲ್ಲ. ಅದೇ ತರ ದುರಾಸೆ ಇರೋ ವ್ಯಕ್ತಿಗೆ ಎಷ್ಟೇ ದುಡ್ಡಿದ್ರೂ ಅಧಿಕಾರ ಇದ್ರೂ ಸಾಕಾಗಲ್ಲ. ಸಮಾಧಿನೂ ಹೀಗೆನೇ, ಅದ್ರ ಬಾಯಿ ಸತ್ತವ್ರಿಗೆ ಯಾವಾಗ್ಲೂ ತೆರೆದೇ ಇರುತ್ತೆ. ಹೆರದ ಗರ್ಭ ಕೂಡ ‘ನಂಗೆ ಮಕ್ಕಳನ್ನ ಕೊಡು’ ಅಂತ ಕೇಳ್ತಾನೆ ಇರುತ್ತೆ. (ಆದಿಕಾಂಡ 30:1) ಬರಡು ಭೂಮಿ ಎಷ್ಟೇ ಮಳೆ ನೀರನ್ನ ಕುಡಿದ್ರೂ ಅದು ಮತ್ತೆ ಒಣಗಿ ಹೋಗುತ್ತೆ. ಬೆಂಕಿ, ಅದಕ್ಕೆ ಹಾಕಿದ ವಸ್ತುಗಳನ್ನಷ್ಟೇ ಅಲ್ಲ ಅದ್ರ ಜ್ವಾಲೆ ಎಲ್ಲೆಲ್ಲಿ ಹರಡುತ್ತೋ ಅಲ್ಲಿರೋ ವಸ್ತುಗಳನ್ನೆಲ್ಲಾ ಸುಟ್ಟು ಹಾಕುತ್ತೆ. ಅದೇ ತರ ದುರಾಸೆ ಇರೋ ವ್ಯಕ್ತಿಗಳು ಇರ್ತಾರೆ. ಆದ್ರೆ ಯಾರಿಗೆ ದೇವರಿಂದ ಬಂದಿರೋ ವಿವೇಕ ಇರುತ್ತೋ ಅವ್ರು ಈ ಸ್ವಾರ್ಥ ಮನೋಭಾವದಿಂದ ದೂರ ಇರ್ತಾರೆ.

w12 1/1 10 ¶3

ಆದಾಯಕ್ಕೆ ತಕ್ಕಂತೆ ಜೀವನ ಹೇಗೆ?

ಮೊದಲು ಹಣ ಉಳಿಸಿ, ಆಮೇಲೆ ಖರೀದಿಸಿ. ಏನಾದರೂ ಖರೀದಿ ಮಾಡುವ ಮುಂಚೆ ಅದಕ್ಕಾಗಿ ಹಣ ಉಳಿಸುವುದು ಹಳೇಕಾಲದ್ದೆಂಬಂತೆ ತೋರಿದರೂ, ಅದು ಆರ್ಥಿಕ ಸಂಕಷ್ಟವನ್ನು ತಪ್ಪಿಸುವ ಅತ್ಯಂತ ವಿವೇಕಯುತ ವಿಧಾನಗಳಲ್ಲೊಂದು. ಹೀಗೆ ಮಾಡಿ ಅನೇಕರು ಸಾಲಸೋಲಗಳಿಂದ ಬಚಾವಾಗಿದ್ದಾರೆ. ಅದರ ಜೊತೆಗೆ, ವಸ್ತುವಿನ ಬೆಲೆಯನ್ನು ಹೆಚ್ಚಿಸುವ ಅಧಿಕ ಬಡ್ಡಿಯಂಥ ಅನೇಕ ತಾಪತ್ರಯಗಳನ್ನು ತಪ್ಪಿಸಲು ಶಕ್ತರಾಗುತ್ತಾರೆ. ಬೈಬಲಿನಲ್ಲಿ, ಇರುವೆಯನ್ನು ಬುದ್ಧಿವಂತಿಕೆಯುಳ್ಳದ್ದೆಂದು ಚಿತ್ರಿಸಲಾಗಿದೆ. ಏಕೆಂದರೆ ಅದು ಮೊದಲು ‘ಸುಗ್ಗಿಯಲ್ಲಿ ತನ್ನ ತೀನಿಯನ್ನು ಕೂಡಿಸಿ’ ಮುಂದೆ ಅದನ್ನು ಬಳಸುತ್ತದೆ.—ಜ್ಞಾನೋಕ್ತಿ 6:6-8; 30:24, 25.

w24.06 12 ¶18

ಯಾವಾಗ್ಲೂ ಯೆಹೋವನ ಅತಿಥಿಗಳಾಗಿರಿ!

18 ಹಣದ ಬಗ್ಗೆ ನಾವು ಹೇಗೆ ಯೋಚಿಸ್ತಾ ಇದ್ದೀವಿ ಅಂತ ಆಗಾಗ ನಮ್ಮನ್ನ ಪರೀಕ್ಷೆ ಮಾಡ್ಕೊಳ್ತಾ ಇರಬೇಕು. ಅದಕ್ಕೆ ಕೆಲವು ಪ್ರಶ್ನೆ ಸಹಾಯ ಮಾಡುತ್ತೆ. ‘ನಾನು ಯಾವಾಗ್ಲೂ ಹಣದ ಬಗ್ಗೆ ಯೋಚಿಸ್ತೀನಾ ಮತ್ತು ಅದ್ರಿಂದ ಏನೆಲ್ಲ ತಗೋಬಹುದು ಅನ್ನೋದ್ರ ಬಗ್ಗೆ ಯೋಚಿಸ್ತೀನಾ? ನಾನು ಯಾರ ಹತ್ರ ಆದ್ರೂ ಹಣ ತಗೊಂಡ್ರೆ ಅವರಿಗೆ ಕೊಡೋಕೆ ತಡ ಮಾಡ್ತಿದ್ದೀನಾ ಅಥವಾ ಅವರಿಗೆ ಈ ಹಣದ ಅಗತ್ಯ ಇಲ್ಲ ಅಂತ ಅಂದ್ಕೊಳ್ತೀನಾ? ನನ್ನ ಹತ್ರ ಹಣ ಇರೋದ್ರಿಂದ ನಾನು ಎಲ್ರಿಗಿಂತ ದೊಡ್ಡವನು ಅಂತ ಅಂದ್ಕೊಳ್ತೀನಾ ಅಥವಾ ಬೇರೆಯವರಿಗೆ ಧಾರಾಳತನ ತೋರಿಸೋಕೆ ಹಿಂಜರಿತಿದ್ದೀನಾ? ಶ್ರೀಮಂತರಾಗಿರೋ ಸಹೋದರ ಸಹೋದರಿಯರನ್ನ ನೋಡಿ ಅವರಿಗೆ ಹಣದಾಸೆ ಇದೆ ಅಂತ ನಾನು ಅಂದ್ಕೊಳ್ತೀನಾ? ನಾನು ಬಡವರನ್ನ ಮೂಲೆಗೆ ತಳ್ಳಿ ಬರೀ ಶ್ರೀಮಂತರನ್ನ ಫ್ರೆಂಡ್ಸ್‌ ಮಾಡ್ಕೊಳ್ತೀನಾ?’ ಆದ್ರೆ ಒಂದು ವಿಷಯ ನೆನಪಿಡಿ. ಯೆಹೋವನ ಅತಿಥಿಗಳಾಗಿರೋದು ನಮ್ಮೆಲ್ಲರಿಗೂ ಸಿಕ್ಕಿರೋ ಒಂದು ದೊಡ್ಡ ಸುಯೋಗ. ಹಾಗಾಗಿ ನಾವು ಯಾವಾಗ್ಲೂ ಆತನ ಅತಿಥಿಗಳಾಗಿ ಇರೋಕೆ ಹಣದಾಸೆಯಿಂದ ದೂರ ಇರಬೇಕು. ಹೀಗೆ ಮಾಡಿದ್ರೆ ಯೆಹೋವ ಯಾವತ್ತೂ ನಮ್ಮ ಕೈಬಿಡಲ್ಲ.—ಇಬ್ರಿಯ 13:5 ಓದಿ.

ಬೈಬಲಿನಲ್ಲಿರುವ ರತ್ನಗಳು

w09 4/15 17 ¶11-13

ಸೃಷ್ಟಿಯಲ್ಲಿ ತೋರಿಬರುವ ಯೆಹೋವನ ವಿವೇಕ

11 ನಮಗೆ ಮಹತ್ತ್ವದ ಪಾಠಗಳನ್ನು ಕಲಿಸಬಲ್ಲ ಸಣ್ಣ ಜಂತುಗಳಲ್ಲಿ ಬೆಟ್ಟದ ಮೊಲವೂ (ಬಂಡೆ ಮೊಲ) ಒಂದು. (ಜ್ಞಾನೋಕ್ತಿ 30:26 ಓದಿ.) ಇದರ ಕಿವಿಗಳು ಚಿಕ್ಕದಾಗಿದ್ದು ದುಂಡಗಾಗಿವೆ ಮತ್ತು ಕಾಲುಗಳು ಗಿಡ್ಡವಾಗಿವೆ. ಈ ಚಿಕ್ಕ ಪ್ರಾಣಿ ಕಲ್ಲುಬಂಡೆಗಳಿರುವ ಪ್ರದೇಶದಲ್ಲಿ ಜೀವಿಸುತ್ತದೆ. ಅದರ ತೀಕ್ಷ್ಣ ದೃಷ್ಟಿಯಿಂದಾಗಿ ಅದಕ್ಕೆ ತುಂಬ ಸಹಾಯವಾಗುತ್ತದೆ. ಅದು ಬಂಡೆಗಳ ಎಡೆಯಲ್ಲಿ ವಾಸಮಾಡುವುದರಿಂದ ಪರಭಕ್ಷಕ ಪ್ರಾಣಿಗಳಿಂದ ಅದಕ್ಕೆ ಸುರಕ್ಷೆ ಸಿಗುತ್ತದೆ. ಹಲವಾರು ಮೊಲಗಳು ಒಟ್ಟಿಗೆಸೇರಿ ಒಂದೆಡೆ ವಾಸಿಸುವುದು ತಾನೇ ಅವುಗಳಿಗೆ ಸಂರಕ್ಷಣೆಯಾಗಿದೆ ಮತ್ತು ಚಳಿಗಾಲದಲ್ಲಿ ಬೆಚ್ಚಗಿರಲು ಸಾಧ್ಯವಾಗುತ್ತದೆ.

12 ಬೆಟ್ಟದ ಮೊಲದಿಂದ ನಾವೇನು ಕಲಿಯಬಲ್ಲೆವು? ಮೊದಲಾಗಿ ಗಮನಿಸಬೇಕಾದದ್ದೇನೆಂದರೆ, ಈ ಪ್ರಾಣಿಯನ್ನು ಸುಲಭವಾಗಿ ಹಿಡಿಯಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕಿರುವ ತೀಕ್ಷ್ಣ ದೃಷ್ಟಿಯಿಂದ ಅದು ಪರಭಕ್ಷಕ ಜೀವಿಗಳನ್ನು ದೂರದಿಂದಲೇ ಪತ್ತೆಹಚ್ಚುತ್ತದೆ ಮತ್ತು ಅದು ಯಾವಾಗಲೂ ತನ್ನ ಜೀವ ಕಾಪಾಡಬಲ್ಲ ಬಿಲ ಅಥವಾ ಸಂದುಗಂದುಗಳ ಹತ್ತಿರವೇ ಸುಳಿದಾಡುತ್ತಿರುತ್ತದೆ. ತದ್ರೀತಿಯಲ್ಲಿ ಸೈತಾನನ ಲೋಕದಲ್ಲಿರುವ ಅಪಾಯಗಳನ್ನು ಪತ್ತೆಹಚ್ಚಲು ನಮಗೂ ತೀಕ್ಷ್ಣವಾದ ಆಧ್ಯಾತ್ಮಿಕ ದೃಷ್ಟಿ ಇರಬೇಕು. ಅಪೊಸ್ತಲ ಪೇತ್ರನು ಕ್ರೈಸ್ತರಿಗೆ ಸಲಹೆ ನೀಡಿದ್ದು: “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಪಿಶಾಚನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.” (1 ಪೇತ್ರ 5:8) ಯೇಸು ಭೂಮಿಯಲ್ಲಿದ್ದಾಗ, ತನ್ನ ಸಮಗ್ರತೆಯನ್ನು ಮುರಿಯಲು ಸೈತಾನನು ಮಾಡಿದ ಎಲ್ಲಾ ಪ್ರಯತ್ನಗಳ ವಿಷಯದಲ್ಲಿ ಎಚ್ಚರವಾಗಿದ್ದನು. (ಮತ್ತಾ. 4:1-11) ಹೀಗೆ ಯೇಸು ತನ್ನ ಹಿಂಬಾಲಕರಿಗೆ ಉತ್ತಮ ಮಾದರಿಯನ್ನಿಟ್ಟನು.

13 ನಾವು ಎಚ್ಚರವಾಗಿರಬಲ್ಲ ಒಂದು ವಿಧವು ಯೆಹೋವನು ಲಭ್ಯಗೊಳಿಸುತ್ತಿರುವ ಆಧ್ಯಾತ್ಮಿಕ ಸಂರಕ್ಷಣೆಯ ಸದುಪಯೋಗ ಮಾಡಿಕೊಳ್ಳುವ ಮೂಲಕವೇ. ದೇವರ ವಾಕ್ಯದ ಅಧ್ಯಯನ ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗುವುದನ್ನು ನಾವು ಅಲಕ್ಷಿಸಲೇಬಾರದು. (ಲೂಕ 4:4; ಇಬ್ರಿ. 10:24, 25) ಅಲ್ಲದೇ, ಬೆಟ್ಟದ ಮೊಲಗಳು ಒಟ್ಟಿಗೆಸೇರಿ ಒಂದೆಡೆಯಲ್ಲಿ ವಾಸಿಸುವಂತೆಯೇ ನಮಗೆ ಜೊತೆ ಕ್ರೈಸ್ತರ ಆಪ್ತ ಒಡನಾಟವಿರಬೇಕು. ಇದರಿಂದ, “ಉತ್ತೇಜನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು” ಸಾಧ್ಯವಾಗುತ್ತದೆ. (ರೋಮ. 1:12) ಯೆಹೋವನ ಸಂರಕ್ಷಣೆ ಪಡೆಯಲು ಅಗತ್ಯವಿರುವುದೆಲ್ಲವನ್ನು ಮಾಡುವ ಮೂಲಕ, “ಯೆಹೋವನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ವಿಮೋಚಕನೂ ನನ್ನ ದೇವರೂ ನನ್ನ ಆಶ್ರಯಗಿರಿಯೂ ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ನನ್ನ ದುರ್ಗವೂ ಆಗಿದ್ದಾನೆ” ಎಂದು ಕೀರ್ತನೆಗಾರ ದಾವೀದನು ಬರೆದ ಮಾತುಗಳನ್ನು ನಾವೂ ಒಪ್ಪಿಕೊಳ್ಳುತ್ತೇವೆಂದು ತೋರಿಸಿಕೊಡುತ್ತೇವೆ.—ಕೀರ್ತ. 18:2.

ಸೆಪ್ಟೆಂಬರ್‌ 15-21

ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 31

ಅಮ್ಮ ಪ್ರೀತಿಯಿಂದ ಕೊಟ್ಟ ಸಲಹೆಗಳಿಂದ ಕಲಿಯೋ ಪಾಠಗಳು

w11 7/1 26 ¶7-8

ನಿಮ್ಮ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ನಾಟಿಸಿರಿ

ಸೆಕ್ಸ್‌ ಕುರಿತ ಪೂರ್ಣ ಸತ್ಯ ಕಲಿಸಿ. ಎಚ್ಚರಿಕೆಗಳು ಅತ್ಯಗತ್ಯ. (1 ಕೊರಿಂಥ 6:18; ಯಾಕೋಬ 1:14, 15) ಆದರೆ ಬೈಬಲ್‌ ಸೆಕ್ಸ್‌ ಅನ್ನು ಮುಖ್ಯವಾಗಿ ದೇವರ ಕೊಡುಗೆಯಾಗಿ ಚಿತ್ರಿಸುತ್ತದೆ, ಸೈತಾನನ ಪಾಶವಾಗಿ ಅಲ್ಲ. (ಜ್ಞಾನೋಕ್ತಿ 5:18, 19; ಪರಮ ಗೀತ 1:2) ನೀವು ಹದಿಹರೆಯದ ನಿಮ್ಮ ಮಕ್ಕಳಿಗೆ ಬರೇ ಅದರ ಅಪಾಯಗಳ ಕುರಿತೇ ತಿಳಿಸಿದರೆ, ಅವರು ಸೆಕ್ಸ್‌ ಬಗ್ಗೆ ವಕ್ರವಾದ, ಶಾಸ್ತ್ರಾಧಾರಿತವಲ್ಲದ ದೃಷ್ಟಿಕೋನ ತಾಳಾರು. ಫ್ರಾನ್ಸ್‌ ದೇಶದ ಕೊರೀನಾ ಎಂಬ ಯುವತಿ ಹೇಳಿದ್ದು: “ನನ್ನ ಹೆತ್ತವರು ಯಾವಾಗಲೂ ಲೈಂಗಿಕ ಅನೈತಿಕತೆಯ ಬಗ್ಗೆ ಎಚ್ಚರಿಸುತ್ತಾ ಇರುತ್ತಿದ್ದರು. ಇದರಿಂದಾಗಿ ಲೈಂಗಿಕ ಸಂಬಂಧಗಳ ಬಗ್ಗೆ ನನ್ನಲ್ಲಿ ನಕಾರಾತ್ಮಕ ಮನೋಭಾವ ಬೆಳೆಯಿತು.”

ನಿಮ್ಮ ಮಕ್ಕಳಿಗೆ ಸೆಕ್ಸ್‌ ಕುರಿತ ಪೂರ್ಣ ಸತ್ಯ ತಿಳಿದಿರುವಂತೆ ನೋಡಿಕೊಳ್ಳಿ. ಮೆಕ್ಸಿಕೊದಲ್ಲಿರುವ ನಾಡಿಯ ಎಂಬ ಹೆಸರಿನ ತಾಯಿ ಹೇಳಿದ್ದು: “ಸೆಕ್ಸ್‌ನಲ್ಲಿ ತಪ್ಪೇನಿಲ್ಲ, ಅದು ಸ್ವಾಭಾವಿಕ, ಯೆಹೋವ ದೇವರೇ ಅದನ್ನು ಮಾನವರ ಆನಂದಕ್ಕಾಗಿ ಕೊಟ್ಟನೆಂಬದನ್ನು ನನ್ನ ಹದಿಹರೆಯದ ಮಕ್ಕಳಿಗೆ ಹೇಳಲು ಯಾವಾಗಲೂ ಪ್ರಯತ್ನಿಸಿದ್ದೇನೆ. ಆದರೆ ಅದನ್ನು ವಿವಾಹದ ಚೌಕಟ್ಟಿನೊಳಗೆ ಮಾತ್ರ ಆನಂದಿಸಬೇಕು, ನಾವದನ್ನು ಬಳಸುವ ವಿಧದ ಮೇಲೆ ಹೊಂದಿಕೊಂಡು ಸುಖ ಇಲ್ಲವೇ ದುಃಖ ಸಿಗುವುದೆಂದು ಅವರಿಗೆ ಹೇಳಿಕೊಟ್ಟಿದ್ದೇನೆ.”

ijwhf ಲೇಖನ 4 ¶11-13

ಮದ್ಯಪಾನದ ಬಗ್ಗೆ ಮಕ್ಕಳೊಂದಿಗೆ ಮಾತಾಡಿ

ಈ ವಿಷಯದ ಬಗ್ಗೆ ಮಾತಾಡಲು ನೀವೇ ಹೆಜ್ಜೆ ತಗೊಳ್ಳಿ. “ಕುಡಿಯೋದರ ಬಗ್ಗೆ ಮಕ್ಕಳಿಗೆ ಗಲಿಬಿಲಿ ಇರಬಹುದು. ನನ್ನ 8 ವರ್ಷ ಪ್ರಾಯದ ಮಗನಿಗೆ, ಮದ್ಯ ಕುಡಿಯೋದು ಸರೀನಾ ತಪ್ಪಾ ನಿನ್ನ ಅಭಿಪ್ರಾಯವೇನೆಂದು ಕೇಳಿದೆ. ನಾನು ಒಳ್ಳೇ ವಾತಾವರಣ ಸೃಷ್ಟಿಸಿ ಮಗನಿಗೆ ಮುಜುಗರವಾಗದಂತೆ ಹಾಯಾಗಿರೋ ಸಮಯದಲ್ಲಿ ಮಾತಾಡಿದ್ದರಿಂದ ಅವನಿಗೆ ಮುಚ್ಚುಮರೆಯಿಲ್ಲದೆ ಮಾತಾಡಲು ಸಹಾಯವಾಯಿತು” ಎಂದು ಬ್ರಿಟನ್‌ನ ಮಾರ್ಕ್‌ ಹೇಳುತ್ತಾರೆ.

ಒಮ್ಮೆ ಅಲ್ಲ, ಬೇರೆ ಬೇರೆ ಸಂದರ್ಭಗಳಲ್ಲಿ ಮದ್ಯಪಾನದ ಬಗ್ಗೆ ಮಕ್ಕಳತ್ರ ಮಾತಾಡುವುದರಿಂದ ಅದು ಅವರ ಮನಸ್ಸಲ್ಲಿ ಅಚ್ಚೊತ್ತುತ್ತೆ. ನಿಮ್ಮ ಮಕ್ಕಳು ಬೆಳೆಯುತ್ತಿದ್ದಂತೆ ಮದ್ಯಪಾನದ ಬಗ್ಗೆ ಮಾತ್ರವಲ್ಲ, ಸಂಚಾರಿ ನಿಯಮದ ಬಗ್ಗೆ, ಲೈಂಗಿಕ ವಿಷಯಗಳ ಬಗ್ಗೆ ಹೇಳಿಕೊಡಿ.

ಒಳ್ಳೇ ಮಾದರಿಯಿಡಿ. ಮಕ್ಕಳು ಸ್ಪಂಜಿನಂತಿರುತ್ತಾರೆ. ಅವರು ಸುತ್ತಮುತ್ತ ನಡೆಯೋದನ್ನ ಬೇಗನೆ ಹೀರಿಕೊಳ್ಳುತ್ತಾರೆ. ಒಂದು ಸಮೀಕ್ಷೆಯ ಪ್ರಕಾರ ಹೆತ್ತವರೇ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತಾರಂತೆ. ಒತ್ತಡದಿಂದ ಹೊರಗೆ ಬರಲು ಮತ್ತು ಹಾಯಾಗಿರಲಿಕ್ಕಾಗಿ ನೀವು ಕುಡಿಯೋದಾದರೆ ಅದು ಮಗುವನ್ನೂ ಪ್ರಭಾವಿಸುತ್ತದೆ. ಜೀವನದ ಚಿಂತೆಗಳಿಂದ, ಸಮಸ್ಯೆಯಿಂದ ಹೊರಗೆ ಬರಲು ಮದ್ಯಪಾನವೇ ದಾರಿ ಎಂದು ಅವರಿಗನಿಸುತ್ತದೆ. ಆದ್ದರಿಂದ, ಒಳ್ಳೇ ಮಾದರಿಯಿಡಿ. ನೀವು ಅಮಲೇರುವಷ್ಟು ಕುಡಿಯಬೇಡಿ.

g17.2 9 ¶5

ಮಕ್ಕಳಿಗೆ ದೀನತೆಯನ್ನು ಕಲಿಸಿ

ಕೊಡುವುದನ್ನು ಕಲಿಸಿ. ‘ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ’ ಎಂದು ನಿಮ್ಮ ಮಕ್ಕಳಿಗೆ ಮನಗಾಣಿಸಿ. (ಅಪೊಸ್ತಲರ ಕಾರ್ಯಗಳು 20:35) ಹೇಗೆ? ಶಾಪಿಂಗ್‌, ಸಾರಿಗೆ, ದುರಸ್ತಿ ಕೆಲಸದಂಥ ಸಹಾಯದ ಅಗತ್ಯವಿರುವ ಜನರ ಪಟ್ಟಿಯನ್ನು ನೀವೂ ನಿಮ್ಮ ಮಗ/ಮಗಳು ಒಟ್ಟಾಗಿ ತಯಾರಿಸಬಹುದು. ನಂತರ, ನೀವು ಅವರಲ್ಲಿ ಕೆಲವರಿಗೆ ಸಹಾಯ ಮಾಡುವಾಗ ನಿಮ್ಮ ಜೊತೆಯಲ್ಲಿ ಮಕ್ಕಳನ್ನು ಕರಕೊಂಡು ಹೋಗಿ. ಇತರರ ಅಗತ್ಯಗಳನ್ನು ಪೂರೈಸುವಾಗ ನಿಮಗೆ ಸಿಗುವ ಸಂತೋಷ ಮತ್ತು ಸಂತೃಪ್ತಿಯನ್ನು ನೋಡಲು ನಿಮ್ಮ ಮಗುವಿಗೆ ಅವಕಾಶ ಕೊಡಿ. ಹೀಗೆ ಮಾಡುವಾಗ ನೀವು ಅತ್ಯುತ್ತಮ ರೀತಿಯಲ್ಲಿ ಅಂದರೆ ನಿಮ್ಮ ಮಾದರಿಯ ಮೂಲಕ ಮಕ್ಕಳಿಗೆ ದೀನತೆಯನ್ನು ಕಲಿಸುವಿರಿ. —ಬೈಬಲ್‌ ತತ್ವ: ಲೂಕ 6:38.

ಬೈಬಲಿನಲ್ಲಿರುವ ರತ್ನಗಳು

w93 2/1 11 ¶7-8

ಬೈಬಲ್‌ ಸಮಯಗಳಲ್ಲಿ ವಿದ್ಯೆ

7 ಇಸ್ರಾಯೇಲಿನಲ್ಲಿ, ಮಕ್ಕಳಿಗೆ ಶೈಶವದಿಂದ ತಂದೆಯೂ ತಾಯಿಯೂ ಕಲಿಸುತ್ತಿದ್ದರು. (ಧರ್ಮೋಪದೇಶಕಾಂಡ 11:18,19; ಜ್ಞಾನೋಕ್ತಿ 1:8; 31:26) ಫ್ರೆಂಚ್‌ ಡಿಕ್ಶೊನೇರ್‌ ಡ ಲ ಬೀಬ್ಲ್‌ನಲ್ಲಿ, ವಿದ್ವಾಂಸ ಇ. ಮಾಂಜೆನೊ ಬರೆದದ್ದು: “ಮಗುವು ಮಾತಾಡುವಂತಾಗುವಷ್ಟರಲ್ಲಿಯೆ, ನಿಯಮಶಾಸ್ತ್ರದಿಂದ ಕೆಲವು ಭಾಗಗಳನ್ನು ಕಲಿಯಿತು. ಅವನ ತಾಯಿಯು ಒಂದು ವಚನವನ್ನು ಪುನರುಚ್ಚರಿಸುವಳು; ಅದನ್ನಾತನು ತಿಳಿದಾದ ಮೇಲೆ, ಅವಳು ಇನ್ನೊಂದನ್ನು ಅವನಿಗೆ ಹೇಳಿ ಕೊಡುವಳು. ನಂತರ, ಅವರು ಜ್ಞಾಪಕದಿಂದ ಈಗಾಗಲೆ ಪಠಿಸುವ ವಚನಗಳ ಬರೆಯಲ್ಪಟ್ಟ ಮೂಲ ಪಾಠವನ್ನು ಮಕ್ಕಳ ಕೈಗಳಲ್ಲಿ ಹಾಕಲಾಗುವುದು. ಹೀಗೆ, ಅವರು ವಾಚನಕ್ಕೆ ಪರಿಚಯಿಸಲ್ಪಟ್ಟರು ಮತ್ತು ಅವರು ಬೆಳೆದು ದೊಡ್ಡವರಾಗುವಾಗ, ಕರ್ತನ ನಿಯಮವನ್ನು ಓದುವುದು ಮತ್ತು ಅದರ ಮೇಲೆ ಮನನ ಮಾಡುವುದರ ಮೂಲಕ ಅವರ ಧಾರ್ಮಿಕ ಬೋಧನೆಯನ್ನವರು ಮುಂದುವರಿಸಬಹುದಾಗಿತ್ತು.”

8 ಉಪಯೋಗಿಸಲ್ಪಟ್ಟ ಬುನಾದಿ ಕಲಿಸುವಿಕೆಯ ವಿಧಾನವು ವಿಷಯಗಳನ್ನು ಬಾಯಿಪಾಠವಾಗಿ ಕಲಿಯುವಂಥಾದ್ದಾಗಿತ್ತೆಂದು ಇದು ಸೂಚಿಸುತ್ತದೆ. ಯೆಹೋವನ ನಿಯಮಗಳ ಮತ್ತು ಆತನ ಜನರೊಂದಿಗಿನ ಆತನ ವ್ಯವಹರಿಸುವಿಕೆಗಳ ಕುರಿತು ಕಲಿತಂಥ ವಿಷಯಗಳು ಹೃದಯದೊಳಕ್ಕೆ ತೂರಿಹೋಗಬೇಕಾಗಿತ್ತು. (ಧರ್ಮೋಪದೇಶಕಾಂಡ 6:6, 7) ಅವುಗಳನ್ನು ಮನನ ಮಾಡಬೇಕಾಗಿತ್ತು. (ಕೀರ್ತನೆ 77:11, 12) ಎಳೆಯರಿಗೆ ಮತ್ತು ವೃದ್ಧರಿಗೆ ಜ್ಞಾಪಿಸಿಕೊಳ್ಳಲನುಕೂಲವಾಗುವಂತೆ, ವಿವಿಧ ಜ್ಞಾಪಕ ಸಹಾಯಕಗಳನ್ನು ಬಳಸಲಾಗುತಿತ್ತು. ಇವುಗಳಲ್ಲಿ ಕೀರ್ತನೆಯಲ್ಲಿನ ಅನುಕ್ರಮದ ವಚನಗಳು ಅಕ್ಷರಮಾಲೆಯ ಕ್ರಮದಲ್ಲಿ ವಿಭಿನ್ನ ಅಕ್ಷರದೊಂದಿಗೆ ಆರಂಭವಾಗುವ, ಅಕ್ಷರ ಮಾಲೆಯ ಪದ ಬಂಧಗಳು (ಜ್ಞಾನೋಕ್ತಿ 31:10-31 ರಲ್ಲಿರುವಂತೆ); ಅನುಪ್ರಾಸ (ಒಂದೇ ಅಕ್ಷರ ಯಾ ಧ್ವನಿಯೊಂದಿಗೆ ಆರಂಭವಾಗುವ ವಾಕ್ಯಗಳು); ಮತ್ತು ಜ್ಞಾನೋಕ್ತಿಗಳು 30ನೇ ಅಧ್ಯಾಯದ ಅರ್ಧದ ನಂತರ ಭಾಗದಲ್ಲಿ ಬಳಸಲಾಗಿರುವಂಥ, ಸಂಖ್ಯೆಗಳ ಉಪಯೋಗಗಳು ಸೇರಿದ್ದವು. ಅಭಿರುಚಿಕರವಾಗಿಯೆ, ಪ್ರಾಚೀನ ಹೀಬ್ರು ಬರವಣಿಗೆಯ ಅತಿ ಪುರಾತನ ಉದಾಹರಣೆಗಳಲ್ಲಿ ಒಂದಾದ ಗೆಸರ್‌ ಕ್ಯಾಲೆಂಡರ್‌, ಶಾಲಾ ಹುಡುಗನ ಜ್ಞಾಪಕ ಶಕಿಗ್ತಾಗಿರುವ ಅಭ್ಯಾಸವಾಗಿದೆಯೆಂದು ಕೆಲವು ವಿದ್ವಾಂಸರಿಂದ ಆಲೋಚಿಸಲಾಗಿದೆ.

ಸೆಪ್ಟೆಂಬರ್‌ 22-28

ಬೈಬಲಿನಲ್ಲಿರುವ ನಿಧಿ | ಪ್ರಸಂಗಿ 1-2

ಮುಂದಿನ ಪೀಳಿಗೆಗೆ ತರಬೇತಿ ಕೊಡ್ತಾ ಇರಿ

w17.01 27-28 ¶3-4

ನಂಬಿಗಸ್ತ ಪುರುಷರಿಗೆ ಜವಾಬ್ದಾರಿ ವಹಿಸಿಕೊಡಿ

3 ಯೆಹೋವನ ಸೇವೆ ಮಾಡುವುದು ನಮಗೆ ತುಂಬ ಇಷ್ಟ. ನಮ್ಮ ನೇಮಕಗಳೆಂದರೆ ನಮಗೆ ಪಂಚಪ್ರಾಣ. ನಮಗೆ ನಮ್ಮ ನೇಮಕ ಎಷ್ಟು ಇಷ್ಟ ಅಂದರೆ ಜೀವಂತ ಇರುವ ವರೆಗೆ ಅದನ್ನು ಮಾಡುತ್ತಾ ಇರಲು ಬಯಸುತ್ತೇವೆ. ಆದರೆ ನಮಗೆ ವಯಸ್ಸಾಗುತ್ತಾ ಹೋಗುತ್ತದೆ ಅನ್ನುವುದು ದುಃಖದ ಸಂಗತಿ. ಚಿಕ್ಕ ವಯಸ್ಸಲ್ಲಿ ಮಾಡಿದಷ್ಟು ನಮ್ಮಿಂದ ಮಾಡಕ್ಕಾಗಲ್ಲ. (ಪ್ರಸಂ. 1:4) ಇದರಿಂದ ಸಾರುವ ಕೆಲಸವನ್ನು ಮಾಡುವಾಗ ಕೆಲವು ಸವಾಲುಗಳು ಎದುರಾಗುತ್ತವೆ. ಇಂದು ಸಾರುವ ಕೆಲಸ ತುಂಬ ವೇಗವಾಗಿ ಸಾಗುತ್ತಿದೆ. ಯೆಹೋವನ ಸಂಘಟನೆ ಸಾಧ್ಯವಾದಷ್ಟು ಹೆಚ್ಚು ಜನರಿಗೆ ಸುವಾರ್ತೆಯನ್ನು ಮುಟ್ಟಿಸಲಿಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಬೇಕಾಗುತ್ತದೆ. ಆದರೆ ಈ ನವನವೀನ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳುವುದೇ ಕೆಲವೊಮ್ಮೆ ದೊಡ್ಡವರಿಗೆ ಕಷ್ಟವಾಗುತ್ತದೆ. (ಲೂಕ 5:39) ವಯಸ್ಸಾಗುತ್ತಾ ಹೋದಾಗ ಯೌವನದಲ್ಲಿದ್ದ ಶಕ್ತಿ ಬಲ ಕಡಿಮೆ ಆಗಿಬಿಡುತ್ತದೆ. (ಜ್ಞಾನೋ. 20:29) ಆದ್ದರಿಂದ ಯೆಹೋವನ ಸಂಘಟನೆಯಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ದೊಡ್ಡವರು ತಮಗಿಂತ ಚಿಕ್ಕ ವಯಸ್ಸಿನವರಿಗೆ ಪ್ರೀತಿಯಿಂದ ತರಬೇತಿ ಕೊಡಬೇಕು. ಇದು ವಿವೇಕಯುತವೂ ಆಗಿದೆ.—ಕೀರ್ತನೆ 71:18 ಓದಿ.

4 ಅಧಿಕಾರದ ಸ್ಥಾನದಲ್ಲಿರುವವರಿಗೆ ತಮಗಿಂತ ಚಿಕ್ಕ ವಯಸ್ಸಿನವರಿಗೆ ಜವಾಬ್ದಾರಿಯನ್ನು ವಹಿಸಿಕೊಡುವುದು ಕೆಲವೊಮ್ಮೆ ಕಷ್ಟ ಆಗುತ್ತದೆ. ತಮ್ಮ ಅಚ್ಚುಮೆಚ್ಚಿನ ನೇಮಕವನ್ನು ಬಿಟ್ಟುಕೊಡಲು ಅವರಿಗೆ ಮನಸ್ಸಾಗಲಿಕ್ಕಿಲ್ಲ. ‘ನನಗೀ ಕೆಲಸ ತುಂಬ ಇಷ್ಟ, ಹೇಗೆ ಬಿಟ್ಟುಕೊಡ್ಲಿ’ ಎಂದು ಒಳಗೊಳಗೆ ಕೊರಗಬಹುದು. ‘ನಾನು ಈ ಕೆಲಸವನ್ನು ಮುಂದೆ ನಿಂತು ಮಾಡಿಲ್ಲವಾದರೆ ಇದು ಸರಿಯಾಗಿ ಆಗುವುದಿಲ್ಲ’ ಎಂಬ ಭಾವನೆ ಸಹ ಇರುತ್ತದೆ. ಇದನ್ನು ಹೇಗೆ ಒಳ್ಳೇದಾಗಿ ಮಾಡುವುದೆಂದು ಬೇರೆಯವರಿಗೆ ಕಲಿಸುವಷ್ಟು ಪುರುಸೊತ್ತಿಲ್ಲ ಎಂದು ಅವರು ನೆನಸಬಹುದು. ಚಿಕ್ಕ ವಯಸ್ಸಿನವರಿಗೂ ಒಂದು ಮಾತು: ಹೆಚ್ಚಿನ ಜವಾಬ್ದಾರಿ ಸಿಗುವ ವರೆಗೆ ತಾಳ್ಮೆಯಿಂದಿರಿ.

ಬೈಬಲಿನಲ್ಲಿರುವ ರತ್ನಗಳು

it-1-E

“ಪ್ರಸಂಗಿ” ¶1

ಪ್ರಸಂಗಿ

ಕೊಹೀಲೆತ್‌ ಅನ್ನೋ ಹೀಬ್ರು ಪದದ ಅರ್ಥ “ಸಭೆ ಸೇರಿಸುವವನು” ಅಥವಾ “ಒಟ್ಟುಗೂಡಿಸುವವನು” ಅಂತಾಗಿದೆ. ಬೈಬಲಿನಲ್ಲಿ ರಾಜ ಸೊಲೊಮೋನನನ್ನ “ಸಭೆ ಸೇರಿಸುವವನು” ಅಂತ ಹೇಳಿದೆ. ಇದರರ್ಥ ಏನಂದ್ರೆ ಅವನು ಎಲ್ಲಾ ಇಸ್ರಾಯೇಲ್ಯರನ್ನ ದೇವರನ್ನ ಆರಾಧಿಸೋಕೆ ಒಟ್ಟು ಸೇರಿಸಬೇಕಾಗಿತ್ತು. (ಪ್ರಸಂ 1:1, 12) ಜನರು ಯೆಹೋವನಿಗೆ ನಿಯತ್ತಾಗಿ ಇರೋ ತರ ಮತ್ತು ಸತ್ಯಾರಾಧನೆ ಮಾಡೋ ತರ ನೋಡ್ಕೊಳ್ಳೋದು ರಾಜನ ಕೆಲ್ಸ ಆಗಿತ್ತು. (1ಅರ 8:1-5, 41-43, 66) ಒಬ್ಬ ರಾಜ ತನ್ನ ಜನರು ಯೆಹೋವನನ್ನ ಆರಾಧಿಸೋ ತರ ನೋಡ್ಕೊಂಡ್ರೆ ಅವನೊಬ್ಬ ಒಳ್ಳೇ ರಾಜ ಆಗ್ತಿದ್ದ. (2ಅರ 16:1-4; 18:1-6) ಸೊಲೊಮೋನ ಈಗಾಗಲೇ ತನ್ನ ಜನರನ್ನ ಯೆಹೋವನಿಗೆ ಹತ್ರ ಆಗೋದಕ್ಕೆ ಒಟ್ಟುಗೂಡಿಸಿದ್ದ. ಅದಕ್ಕೆ ಅವನು ಪ್ರಸಂಗಿ ಪುಸ್ತಕದಲ್ಲಿ ತನ್ನ ಜನರಿಗೆ ಈ ಲೋಕದ ವ್ಯರ್ಥ ವಿಷ್ಯಗಳ ಮೇಲಲ್ಲ, ದೇವರಿಗೆ ಗೌರವ ತರೋ ವಿಷ್ಯಗಳಿಗೆ ಗಮನ ಕೊಡೋಕೆ ಹೇಳಿದ.

ಸೆಪ್ಟೆಂಬರ್‌ 29–ಅಕ್ಟೋಬರ್‌ 5

ಬೈಬಲಿನಲ್ಲಿರುವ ನಿಧಿ | ಪ್ರಸಂಗಿ 3-4

ಮೂರು ಎಳೆಗಳಿರೋ ಹಗ್ಗನ ಗಟ್ಟಿಮಾಡ್ಕೊಳ್ಳಿ

ijwhf ಲೇಖನ 10 ¶2-8

ತಂತ್ರಜ್ಞಾನದಿಂದ ನಿಮ್ಮ ಜೀವನ ಅತಂತ್ರ ಆಗದಿರಲಿ

● ತಂತ್ರಜ್ಞಾನನಾ ಸರಿಯಾಗಿ ಬಳಸಿದ್ರೆ ಗಂಡ ಹೆಂಡತಿಗೆ ಇದ್ರಿಂದ ಪ್ರಯೋಜ್ನ ಇದೆ. ಉದಾಹರಣೆಗೆ, ಗಂಡ ಹೆಂಡತಿ ಕೆಲ್ಸ ಮಾಡೋವಾಗ ದೂರ ಇದ್ರೆ ಒಬ್ರಿಗೊಬ್ಬರು ಮಾತಾಡೋಕೆ ಆಗುತ್ತೆ.

“‘ಐ ಲವ್‌ ಯು’ ಅಥವಾ ‘ನಾನು ನಿನ್ನ ಬಗ್ಗೆನೇ ಯೋಚ್ನೆ ಮಾಡ್ತಿದ್ದೀನಿ’ ಅನ್ನೋದು ಸಿಂಪಲ್‌ ಮೆಸೆಜ್‌ ಆಗಿರಬಹುದು. ಆದ್ರೆ ಅದು ಸಂಬಂಧನ ಸ್ಟ್ರಾಂಗ್‌ ಮಾಡುತ್ತೆ.”—ಜೋನಾತನ್‌.

● ತಂತ್ರಜ್ಞಾನನಾ ಅದ್ರದ್ದೇ ಆದ ಜಾಗದಲ್ಲಿ ಇಟ್ಟಿಲ್ಲ ಅಂದ್ರೆ ಮದ್ವೆ ಜೀವನದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ. ಉದಾಹರಣೆಗೆ, ಕೆಲವರು ಮೊಬೈಲ್‌ ಟ್ಯಾಬ್‌ಗಳಲ್ಲಿ ಎಷ್ಟು ಮುಳುಗಿ ಹೋಗಿರ್ತಾರೆ ಅಂದ್ರೆ ಸಂಗಾತಿಗೆ ಸಮಯ ಕೊಡೋಕೆ ಅವ್ರ ಹತ್ರ ಸಮಯನೇ ಉಳಿದಿರೋಲ್ಲ.

“ನಾನು ಮೊಬೈಲ್‌ನಲ್ಲಿ ಜಾಸ್ತಿ ಮುಳುಗಿ ಹೋಗದೇ ಇದ್ದಿದ್ರೆ ನನ್ನ ಗಂಡ ನನ್ನ ಜೊತೆ ಜಾಸ್ತಿ ಮಾತಾಡ್ತಿದ್ರು ಅನ್ಸುತ್ತೆ.”—ಜುಲಿಸ.

● ಮೊಬೈಲನ್ನು ಉಪಯೋಗಿಸಿಕೊಂಡು ಸಂಗಾತಿ ಜೊತೆನೂ ಚೆನ್ನಾಗಿ ಮಾತಾಡ್ಕೊಂಡು ಇರಬಹುದು ಅಂತ ಕೆಲವರು ಹೇಳ್ತಾರೆ. “ಮಲ್ಟಿಟಾಸ್ಕಿಂಗ್‌ ಬಗ್ಗೆ ಇರೋ ಸತ್ಯ”ದ ಬಗ್ಗೆ ಸಮಾಜಶಾಸ್ತ್ರಜ್ಞೆ ಶೆರಿ ಟರ್ಕಲ್‌ ಹೇಳೋದು ಏನಂದ್ರೆ “ನಾವು ಒಂದೇ ಸಮಯದಲ್ಲಿ ಜಾಸ್ತಿ ಕೆಲ್ಸ ಮಾಡೋಕೆ ಹೋದ್ರೆ ಎಲ್ಲಾ ಕೆಲ್ಸನೂ ಹಾಳಾಗುತ್ತೆ, ಯಾವುದನ್ನೂ ಚೆನ್ನಾಗಿ ಮಾಡೋಕಾಗಲ್ಲ.” ಈ ತರ ಕೆಲ್ಸ ಮಾಡೋದು ಒಂದು ವರ ಅಂತ ಕೆಲವರು ಹೇಳೋದಾದ್ರೂ ಅದು ನಿಜ ಅಲ್ಲ.

“ನನ್ನ ಗಂಡನ ಜೊತೆ ಮಾತಾಡೋಕೆ ನಂಗೆ ತುಂಬಾ ಖುಷಿ ಆಗುತ್ತೆ. ಆದ್ರೆ ಅವ್ರು ಎರಡು ಮೂರು ಕೆಲ್ಸನಾ ಒಟ್ಟಿಗೆ ಮಾಡ್ತಾ ನನ್ನ ಜೊತೆ ಮಾತಾಡೋವಾಗ ಅಲ್ಲ. ಆ ತರ ಕೆಲ್ಸ ಮಾಡೋವಾಗ ನಾನು ಎದುರಿಗಿದ್ರೂ ಅವರಿಗೆ ಲೆಕ್ಕಕ್ಕೆ ಇಲ್ಲದಂಗೆ. ಅದ್ರಲ್ಲಿ ಅವ್ರು ಅಷ್ಟು ಮುಳುಗಿ ಹೋಗಿರ್ತಾರೆ.”—ಸಾರಾ.

ಪಾಠ: ತಂತ್ರಜ್ಞಾನನಾ ನೀವು ಬಳಸೋ ರೀತಿಯಿಂದ ನಿಮ್ಮ ಕುಟುಂಬನಾ ಕಟ್ಟಲೂಬಹುದು, ಹೊಡಿಲೂಬಹುದು.

w23.05 23-24 ¶12-14

“ಯಾಹುವಿನ ಜ್ವಾಲೆ” ಯಾವಾಗ್ಲೂ ಉರೀತಾ ಇರಲಿ

12 ಅಕ್ವಿಲ ಮತ್ತು ಪ್ರಿಸ್ಕಿಲ್ಲಯಿಂದ ಏನು ಕಲಿಬಹುದು? ಅವರು ತುಂಬ ಕೆಲಸಗಳನ್ನ ಜೊತೆಜೊತೆಯಾಗಿ ಮಾಡ್ತಿದ್ರು. ಅದೇ ತರ ನೀವು ಜೊತೆಯಾಗಿ ಏನೆಲ್ಲ ಮಾಡಬಹುದು ಅಂತ ಯೋಚ್ನೆ ಮಾಡಿ. ಅವ್ರಿಬ್ರು ಜೊತೆಯಾಗಿ ಸಿಹಿಸುದ್ದಿ ಸಾರ್ತಾ ಇದ್ರು. ನೀವು ಕೂಡ ಆಗಾಗ ಅವ್ರ ತರಾನೇ ಸಿಹಿಸುದ್ದಿ ಸಾರಬಹುದಲ್ವಾ? ಅಷ್ಟೇ ಅಲ್ಲ, ಅವ್ರಿಬ್ರು ಕೆಲಸನೂ ಒಟ್ಟಿಗೆ ಮಾಡ್ತಿದ್ರು. ಅದರರ್ಥ ನೀವು ಕೂಡ ಒಂದೇ ಕಡೆ ಕೆಲಸಕ್ಕೆ ಹೋಗಬೇಕಂತಲ್ಲ. ಆದ್ರೆ ಮನೆಕೆಲಸನ ಇಬ್ರೂ ಸೇರಿ ಮಾಡಬಹುದಲ್ವಾ? (ಪ್ರಸಂ. 4:9) ಈ ರೀತಿ ಜೊತೆಯಾಗಿ ಕೆಲಸ ಮಾಡಿದಾಗ ಮಾತಾಡೋಕೆ ನಿಮಗೆ ತುಂಬ ಟೈಮ್‌ ಸಿಗುತ್ತೆ. ನೀವಿಬ್ರು ಫ್ರೆಂಡ್ಸ್‌ ತರ ಆಗ್ತಿರ. ರಾಬರ್ಟ್‌ ಮತ್ತು ಲಿಂಡ ಮದುವೆಯಾಗಿ 50 ವರ್ಷ ಆಗಿದೆ. ಅವ್ರಿಬ್ರು ಜೊತೆಯಾಗಿ ಏನೇನು ಮಾಡ್ತಾರೆ ಅನ್ನೋದ್ರ ಬಗ್ಗೆ ಸಹೋದರ ಹೀಗೆ ಹೇಳ್ತಾರೆ: “ನಿಜ ಹೇಳಬೇಕಂದ್ರೆ, ಜೊತೆಯಾಗಿ ಇರೋಕೆ ನಮ್ಮಿಬ್ರಿಗೆ ಸಮಯನೇ ಸಿಗಲ್ಲ. ಅದಕ್ಕೆ ನಾವು ಮನೆಕೆಲಸನ ಒಟ್ಟಿಗೆ ಮಾಡ್ತೀವಿ. ಮನೇಲಿ ಪಾತ್ರೆ ಏನಾದ್ರೂ ತೊಳಿಯೋಕೆ ಇದ್ರೆ ನಾನು ಅದನ್ನ ತೊಳಿತೀನಿ. ಅವಳು ಅದನ್ನೆಲ್ಲ ಒರೆಸಿಡ್ತಾಳೆ. ನಾನು ತೋಟದಲ್ಲಿ ಕಳೆ ಕೀಳುವಾಗ ನನ್ನ ಜೊತೆ ಕೈ ಜೋಡಿಸ್ತಾಳೆ. ಆಗ ನನಗೆ ತುಂಬ ಖುಷಿ ಆಗುತ್ತೆ. ನಾವಿಬ್ರು ಹೀಗೆ ಒಟ್ಟಿಗೆ ಕೆಲಸ ಮಾಡೋದ್ರಿಂದ ಒಬ್ರಿಗೊಬ್ರು ತುಂಬ ಹತ್ರ ಆಗಿದ್ದೀವಿ. ಇದ್ರಿಂದ ನಮ್ಮ ಪ್ರೀತಿ ಇಲ್ಲಿ ತನಕ ಬಾಡಿಹೋಗಿಲ್ಲ, ಬೆಳಿತಾನೇ ಇದೆ.”

13 ಜೊತೆಯಾಗಿ ಸಮಯ ಕಳಿಯೋದು ಅಂದ್ರೆ ಸುಮ್ನೆ ಒಟ್ಟಿಗೆ ಇರೋದಲ್ಲ. ಬ್ರಸಿಲ್‌ನಲ್ಲಿರೋ ಸಹೋದರಿ ಏನು ಹೇಳ್ತಾರೆ ನೋಡಿ: “ನಾವು ತುಂಬ ಬಿಜ಼ಿಯಾಗಿ ಇರೋದ್ರಿಂದ ‘ನಾವು ಒಂದೇ ಮನೆಯಲ್ಲಿ ಇದ್ದೀವಲ್ಲಾ, ಒಟ್ಟಿಗೆ ಇದ್ದೀವಲ್ಲಾ, ಇನ್ನೇನು ಬೇಕು’ ಅಂತ ಯೋಚ್ನೆ ಮಾಡಿಬಿಡ್ತೀವಿ. ಆದ್ರೆ ನಾನು ನನ್ನ ಗಂಡನ ಜೊತೆ ಇದ್ರೆ ಸಾಕಾಗಲ್ಲ. ಅವ್ರಿಗೆ ಗಮನ ಕೊಡಬೇಕು ಅನ್ನೋದನ್ನ ಅರ್ಥ ಮಾಡ್ಕೊಂಡೆ.” ಬ್ರೂನೋ ಮತ್ತು ಅವ್ರ ಹೆಂಡತಿ ಟೇಸ್‌ ಏನು ಮಾಡ್ತಾರೆ ಅಂತ ನೋಡಿ. ಆ ಸಹೋದರ ಹೇಳೋದು: “ನಾವಿಬ್ರು ಒಟ್ಟಿಗೆ ಇರುವಾಗ ನಮ್ಮ ಫೋನ್‌ಗಳನ್ನ ದೂರ ಇಟ್ಟುಬಿಡ್ತೀವಿ. ಇದ್ರಿಂದ ಒಬ್ರಿಗೊಬ್ರು ಗಮನ ಕೊಡಕ್ಕಾಗುತ್ತೆ.”

14 ಕೆಲವೊಮ್ಮೆ ಗಂಡ-ಹೆಂಡತಿಗೆ ಒಟ್ಟಿಗೆ ಸಮಯ ಕಳಿಯೋಕೆ ಇಷ್ಟಾನೇ ಆಗಲ್ಲ. ಯಾಕಂದ್ರೆ ಗಂಡನಿಗೆ ಇಷ್ಟ ಆಗಿದ್ದು ಹೆಂಡತಿಗೆ ಇಷ್ಟ ಆಗಲ್ಲ. ಅಥವಾ ಹೆಂಡತಿ ಮಾಡಿದ್ದು ಗಂಡನಿಗೆ ಕಿರಿಕಿರಿ ಅನಿಸಿಬಿಡಬಹುದು. ಆಗೇನು ಮಾಡೋದು? ಕಟ್ಟಿಗೆಗೆ ಬೆಂಕಿ ಹಚ್ಚಿದ ತಕ್ಷಣ ಅದು ಜೋರಾಗಿ ಉರಿದು ಬಿಡುತ್ತಾ? ಇಲ್ಲ, ಮೊದ್ಲು ಚಿಕ್ಕಚಿಕ್ಕ ಕಟ್ಟಿಗೆಗಳನ್ನ ಹಾಕಬೇಕು. ಆಮೇಲೆ ದೊಡ್ಡ ದೊಡ್ಡ ಕಟ್ಟಿಗೆಗಳನ್ನ ಸೇರಿಸಿದಾಗ ಆ ಬೆಂಕಿ ಜಾಸ್ತಿ ಉರಿಯುತ್ತೆ. ಅದೇ ತರ ನೀವು ಮೊದ್ಲು ಸ್ವಲ್ಪ ಸಮಯ ಜೊತೆಯಾಗಿ ಇರೋಕೆ ಶುರುಮಾಡಿ. (ಯಾಕೋ. 3:18) ನಿಮ್ಮಿಬ್ರಿಗೂ ಇಷ್ಟ ಆಗೋ ವಿಷ್ಯಗಳನ್ನ ಮಾಡಿ. ಹೀಗೆ ಮಾಡ್ತಾ ಮಾಡ್ತಾ ನಿಮ್ಮ ಪ್ರೀತಿಯ ಜ್ವಾಲೆನೂ ಜೋರಾಗಿ ಉರಿಯುತ್ತೆ.

w23.05 21 ¶3

“ಯಾಹುವಿನ ಜ್ವಾಲೆ” ಯಾವಾಗ್ಲೂ ಉರೀತಾ ಇರಲಿ

3 ಗಂಡ-ಹೆಂಡತಿ ಇಬ್ರೂ ಯೆಹೋವನ ಮೇಲೆ ಜಾಸ್ತಿ ಪ್ರೀತಿ ಬೆಳೆಸ್ಕೊಂಡ್ರೆ ಅವ್ರಿಬ್ರ ಮಧ್ಯ ಇರೋ ಪ್ರೀತಿ ಹೇಗೆ ಜಾಸ್ತಿ ಆಗುತ್ತೆ? ಅವ್ರಿಗೆ ಯೆಹೋವನ ಮೇಲೆ ಪ್ರೀತಿ, ಗೌರವ ಇದ್ರೆ ಆತನ ಮಾತನ್ನ ಕೇಳ್ತಾರೆ. ಇದ್ರಿಂದ ಅವ್ರ ಜೀವನದಲ್ಲಿ ಸಮಸ್ಯೆ ಬಂದ್ರೂ ಅದನ್ನ ಪರಿಹಾರ ಮಾಡ್ಕೊಳ್ಳೋಕೆ ಆಗುತ್ತೆ. ಕೆಲವೊಮ್ಮೆ ಸಮಸ್ಯೆಗಳೇ ಬರದಿರೋ ತರ ನೋಡ್ಕೊಳ್ಳೋಕೂ ಆಗುತ್ತೆ. ಆಗ ಅವ್ರ ಮಧ್ಯ ಇರೋ ಪ್ರೀತಿ ಆರಿಹೋಗಲ್ಲ. (ಪ್ರಸಂಗಿ 4:12 ಓದಿ.) ಅಷ್ಟೇ ಅಲ್ಲ ಅವ್ರಿಬ್ರಿಗೆ ಯೆಹೋವನ ಮೇಲೆ ಪ್ರೀತಿ ಇದ್ರೆ ಆತನಲ್ಲಿರೋ ಗುಣಗಳನ್ನ ಬೆಳೆಸ್ಕೊಳ್ತಾರೆ. ಆಗ ಒಬ್ರನ್ನೊಬ್ರು ಅರ್ಥ ಮಾಡ್ಕೊಳ್ತಾರೆ, ತಾಳ್ಮೆ ತೋರಿಸ್ತಾರೆ, ಕ್ಷಮಿಸ್ತಾರೆ. (ಎಫೆ. 4:32–5:1) ಇಂಥ ಗುಣಗಳನ್ನ ಬೆಳೆಸ್ಕೊಂಡ್ರೆ ಪ್ರೀತಿ ತೋರಿಸೋಕೆ ಸುಲಭ ಆಗುತ್ತೆ. ಇದನ್ನೇ ಸಹೋದರಿ ಲೀನಾ ಹೇಳ್ತಾರೆ. ಅವ್ರಿಗೆ ಮದುವೆ ಆಗಿ 25 ವರ್ಷ ದಾಟಿದೆ. ಅವರು ಹೇಳೋದು: “ಯೆಹೋವನ ತರ ನಡ್ಕೊಳ್ಳೋ ವ್ಯಕ್ತಿನ ಪ್ರೀತಿಸೋಕೆ, ಗೌರವಿಸೋಕೆ ಒಂಚೂರೂ ಕಷ್ಟ ಆಗಲ್ಲ.”

ಬೈಬಲಿನಲ್ಲಿರುವ ರತ್ನಗಳು

it-2-E

“ಪ್ರೀತಿ” ¶39

ಪ್ರೀತಿ

“ಪ್ರೀತಿಸೋಕೆ ಒಂದು ಸಮಯ.” ಒಬ್ಬ ವ್ಯಕ್ತಿ ತನಗೆ ಯೆಹೋವನ ಪ್ರೀತಿ ಪಡಿಯೋ ಯೋಗ್ಯತೆ ಇಲ್ಲ ಅಂತ ತೋರಿಸಿದ್ರೆ ಅಥವಾ ಕೆಟ್ಟ ಕೆಲಸಗಳನ್ನ ಮಾಡ್ತಾನೇ ಇದ್ರೆ ಅವನಿಗೆ ದೇವರ ಪ್ರೀತಿ ಸಿಗಲ್ಲ. ಜನ ದೇವರನ್ನ ದ್ವೇಷಿಸೋ ತನಕ ಅವ್ರಿಗೆ ಆತನ ಪ್ರೀತಿ ಸಿಕ್ತಾನೇ ಇರುತ್ತೆ. ಆದ್ರೆ ಯಾವಾಗ ಅವ್ರು ದೇವರನ್ನ ದ್ವೇಷಿಸ್ತಾರೋ ಆಗ ಆ ಪ್ರೀತಿ ನಿಂತು ಹೋಗುತ್ತೆ. ಯೆಹೋವ ದೇವರು ಮತ್ತು ಯೇಸು ಕ್ರಿಸ್ತ ಇಬ್ರೂ ಒಳ್ಳೇದನ್ನ ಪ್ರೀತಿಸ್ತಾರೆ, ಕೆಟ್ಟದ್ದನ್ನ ದ್ವೇಷಿಸ್ತಾರೆ. (ಕೀರ್ತ 45:7; ಇಬ್ರಿ 1:9) ಯಾರು ದೇವರನ್ನ ತುಂಬ ದ್ವೇಷಿಸ್ತಾರೋ ಅಂಥವ್ರಿಗೆ ನಾವು ಪ್ರೀತಿ ತೋರಿಸಬಾರದು. ಅಂಥವ್ರಿಗೆ ಪ್ರೀತಿ ತೋರಿಸೋದು ವ್ಯರ್ಥನೇ. ಯಾಕಂದ್ರೆ ಅವರು ಯಾವತ್ತೂ ಯೆಹೋವನನ್ನ ಪ್ರೀತಿಸಲ್ಲ. (ಕೀರ್ತ 139:21, 22; ಯೆಶಾ 26:10) ಅದಕ್ಕೇ ದೇವರು ಅವ್ರನ್ನ ದ್ವೇಷಿಸ್ತಾನೆ ಮತ್ತು ಸರಿಯಾದ ಸಮಯದಲ್ಲಿ ಶಿಕ್ಷೆ ಕೊಡ್ತಾನೆ.—ಕೀರ್ತ 21:8, 9; ಪ್ರಸಂ 3:1, 8.

ಅಕ್ಟೋಬರ್‌ 6-12

ಬೈಬಲಿನಲ್ಲಿರುವ ನಿಧಿ | ಪ್ರಸಂಗಿ 5-6

ಸತ್ಯ ದೇವರಾಗಿರೋ ಯೆಹೋವನಿಗೆ ಗೌರವ ಕೊಡಿ

w08 8/15 15-16 ¶17-18

ಘನತೆಯಿಂದ ನಡೆದುಕೊಳ್ಳುವ ಮೂಲಕ ಯೆಹೋವನನ್ನು ಗೌರವಿಸಿ

17 ಯೆಹೋವನಿಗೆ ಆರಾಧನೆ ಸಲ್ಲಿಸುವಾಗ ನಾವು ಘನತೆಯಿಂದ ನಡೆದುಕೊಳ್ಳಲು ವಿಶೇಷ ಗಮನಕೊಡಬೇಕು. “ದೇವರ ಆಲಯಕ್ಕೆ ನೀನು ಹೋಗುವಾಗ ನಿನ್ನ ಹೆಜ್ಜೆಯನ್ನು ಗಮನಿಸು” ಎನ್ನುತ್ತದೆ ಪ್ರಸಂಗಿ 5:1 (NIBV). ಪವಿತ್ರ ಸ್ಥಳದಲ್ಲಿರುವಾಗ ಕಾಲಿನ ಕೆರಗಳನ್ನು ತೆಗೆದಿಡುವಂತೆ ಯೆಹೋವನು ಮೋಶೆ ಯೆಹೋಶುವರಿಗೆ ಆಜ್ಞಾಪಿಸಿದ್ದನು. (ವಿಮೋ. 3:5; ಯೆಹೋ. 5:15) ತಮ್ಮ ಗೌರವ ಮತ್ತು ಭಕ್ತಿಭಾವದ ಸಂಕೇತವಾಗಿ ಅವರು ಹೀಗೆ ಮಾಡಬೇಕಾಗಿತ್ತು. “ರಹಸ್ಯಾಂಗವು ಕಾಣಿಸದಂತೆ” ಇಸ್ರಾಯೇಲಿನ ಯಾಜಕರು ನಾರಿನ ಚಡ್ಡಿಗಳನ್ನು ತೊಡಲೇಬೇಕಿತ್ತು. (ವಿಮೋ. 28:42, 43) ಇದು, ಅವರು ಯಜ್ಞವೇದಿಯ ಬಳಿ ಕೆಲಸಮಾಡುವಾಗ ಅಸಭ್ಯ ರೀತಿಯಲ್ಲಿ ಮೈಕಾಣದಂತೆ ತಡೆಯುತ್ತಿತ್ತು. ಯಾಜಕನ ಕುಟುಂಬದ ಪ್ರತಿ ಸದಸ್ಯನು ಘನತೆಯ ದೈವಿಕ ಮಟ್ಟವನ್ನು ಕಾಪಾಡಿಕೊಳ್ಳಬೇಕಿತ್ತು.

18 ಹಾಗಾದರೆ, ಘನತೆಯಿಂದ ಆರಾಧನೆ ಸಲ್ಲಿಸುವುದರಲ್ಲಿ ದೇವರನ್ನು ಗೌರವಿಸುವುದು ಸೇರಿದೆ. ನಮಗೆ ಗೌರವ ಸಿಗಬೇಕಾದರೆ ಮೊದಲು ನಾವು ಗೌರವದಿಂದ ನಡೆದುಕೊಳ್ಳಬೇಕು. ನಾವು ಘನತೆಯಿಂದ ನಡೆದುಕೊಳ್ಳುವ ನಾಟಕವಾಡಬಾರದು. ಬದಲಿಗೆ ಅದು ಹೃತ್ಪೂರ್ವಕವಾಗಿರಬೇಕು ಏಕೆಂದರೆ ಯೆಹೋವನು ಹೃದಯವನ್ನು ನೋಡುತ್ತಾನೆ. (1 ಸಮು. 16:7; ಜ್ಞಾನೋ. 21:2) ಘನತೆಯು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರಬೇಕು. ಅದು ನಮ್ಮ ನಡವಳಿಕೆ, ಮನೋಭಾವ, ಇತರರೊಂದಿಗಿನ ಸಂಬಂಧ ಮತ್ತು ನಮ್ಮ ಕುರಿತು ನಮಗಿರುವ ದೃಷ್ಟಿಕೋನವನ್ನೂ ಅನಿಸಿಕೆಯನ್ನೂ ಪ್ರಭಾವಿಸಬೇಕು. ನಾವು ಏನೇ ಹೇಳಲಿ, ಏನೇ ಮಾಡಲಿ ಎಲ್ಲಾ ಸಮಯಗಳಲ್ಲಿ ಘನತೆಯು ವ್ಯಕ್ತವಾಗಬೇಕು. ನಮ್ಮ ನಡತೆ, ಬಟ್ಟೆ ಹಾಗೂ ಕೇಶಾಲಂಕಾರದ ವಿಷಯದಲ್ಲೂ ನಾವು ಅಪೊಸ್ತಲ ಪೌಲನ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅವನು ಹೇಳಿದ್ದು : “ನಿಂದೆಗೆ ಅವಕಾಶಕೊಡದೆ ಎಲ್ಲಾ ಸಂಗತಿಗಳಲ್ಲಿ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗ ಮಾಡಿಕೊಳ್ಳುತ್ತೇವೆ.” (2 ಕೊರಿಂ. 6:3, 4) ನಾವು ‘ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಅಲಂಕಾರವಾಗಿರಬೇಕು.’—ತೀತ 2:10.

w09 11/15 11 ¶21

ಬೈಬಲ್‌ ಅಧ್ಯಯನದಿಂದ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸಿ

21 ಯೇಸು ಪೂರ್ಣ ನಂಬಿಕೆಯಿಂದಲೂ ಪೂಜ್ಯಭಾವದಿಂದಲೂ ಪ್ರಾರ್ಥಿಸಿದನು. ಉದಾಹರಣೆಗೆ, ಲಾಜರನನ್ನು ಪುನರುತ್ಥಾನಗೊಳಿಸುವುದಕ್ಕೆ ಮುಂಚೆ “ಯೇಸು ಕಣ್ಣುಗಳನ್ನು ಆಕಾಶದ ಕಡೆಗೆತ್ತಿ, ‘ತಂದೆಯೇ, ನೀನು ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕೆ ನಿನಗೆ ಕೃತಜ್ಞತೆ ಸಲ್ಲಿಸುತ್ತೇನೆ. ನೀನು ಯಾವಾಗಲೂ ನನಗೆ ಕಿವಿಗೊಡುತ್ತೀ ಎಂಬುದು ನನಗೆ ತಿಳಿದಿತ್ತು’ . . . ಎಂದನು.” (ಯೋಹಾ. 11:41, 42) ನಿಮ್ಮ ಪ್ರಾರ್ಥನೆಗಳು ಇಂಥ ಪೂಜ್ಯಭಾವ ಮತ್ತು ನಂಬಿಕೆಯ ಪುರಾವೆಯನ್ನು ಕೊಡುತ್ತವೊ? ಯೇಸು ಕೊಟ್ಟ ಪೂಜ್ಯಭಾವದಿಂದ ಕೂಡಿದ ಮಾದರಿ ಪ್ರಾರ್ಥನೆಯನ್ನು ಅಧ್ಯಯನ ಮಾಡಿ. ಯೆಹೋವನ ನಾಮದ ಪವಿತ್ರೀಕರಣ, ದೇವರ ರಾಜ್ಯದ ಬರೋಣ ಮತ್ತು ಆತನ ಚಿತ್ತದ ನೆರವೇರಿಕೆಗಳೇ ಆ ಪ್ರಾರ್ಥನೆಯ ಪ್ರಾಮುಖ್ಯ ಅಂಶಗಳಾಗಿವೆ ಎಂಬುದನ್ನು ನೀವು ಕಂಡುಕೊಳ್ಳುವಿರಿ. (ಮತ್ತಾ. 6:9, 10) ನಿಮ್ಮ ಸ್ವಂತ ಪ್ರಾರ್ಥನೆಗಳ ಬಗ್ಗೆ ಯೋಚಿಸಿರಿ. ಅವು ದೇವರ ರಾಜ್ಯದಲ್ಲಿ, ಆತನ ಚಿತ್ತವನ್ನು ಮಾಡುವುದರಲ್ಲಿ ಮತ್ತು ಆತನ ಪವಿತ್ರ ನಾಮದ ಪವಿತ್ರೀಕರಣದಲ್ಲಿ ನಿಮಗೆ ತೀವ್ರಾಸಕ್ತಿಯಿದೆ ಎಂಬುದನ್ನು ತೋರಿಸುತ್ತವೊ? ತೋರಿಸಲೇಬೇಕು.

w17.04 6 ¶12

“ನಿನ್ನ ಹರಕೆಯನ್ನು ಒಪ್ಪಿಸು”

12 ನೀವು ದೀಕ್ಷಾಸ್ನಾನ ಪಡೆದಾಗ, ಜೀವನದಲ್ಲಿ ಯೆಹೋವನ ಸೇವೆಗೆ ಮೊದಲನೇ ಸ್ಥಾನ ಕೊಡುತ್ತೇನೆ ಮತ್ತು ಆತನ ಮಟ್ಟಗಳನ್ನು ಪಾಲಿಸಲು ಸಂಪೂರ್ಣ ಪ್ರಯತ್ನ ಮಾಡುತ್ತೇನೆ ಎಂದು ಮಾತು ಕೊಟ್ಟಿರಿ. ಆದರೆ ದೀಕ್ಷಾಸ್ನಾನ ಒಂದು ಆರಂಭ ಅಷ್ಟೆ. ಸಮಯ ಕಳೆದಂತೆ ನಾವು ಕೊಟ್ಟ ಮಾತನ್ನು ಪಾಲಿಸುತ್ತಿದ್ದೇವಾ ಎಂದು ಪರೀಕ್ಷಿಸಿಕೊಳ್ಳುತ್ತಾ ಇರಬೇಕು. ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು: ‘ನನ್ನ ದೀಕ್ಷಾಸ್ನಾನ ಆದ ದಿನದಿಂದ ಯೆಹೋವನ ಜೊತೆ ನನ್ನ ಸಂಬಂಧ ಬಲವಾಗುತ್ತಾ ಬಂದಿದೆಯಾ? ನಾನು ಈಗಲೂ ಸಂಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡುತ್ತಿದ್ದೇನಾ? (ಕೊಲೊ. 3:23) ದಿನದಲ್ಲಿ ಹಲವಾರು ಸಲ ಪ್ರಾರ್ಥನೆ ಮಾಡುತ್ತೇನಾ? ಪ್ರತಿದಿನ ಬೈಬಲ್‌ ಓದುತ್ತೇನಾ? ತಪ್ಪದೆ ಕೂಟಗಳಿಗೆ ಹೋಗುತ್ತೇನಾ? ಸಾಧ್ಯವಾದಷ್ಟು ಹೆಚ್ಚು ಸಲ ಸೇವೆಗೆ ಹೋಗುತ್ತೇನಾ? ಅಥವಾ ಇದರಲ್ಲೆಲ್ಲಾ ನನ್ನ ಉತ್ಸಾಹ ಕಡಿಮೆಯಾಗಿದೆಯಾ?’ ಯೆಹೋವನ ಸೇವೆಯಲ್ಲಿ ನಾವು ನಿಷ್ಕ್ರಿಯರಾಗುವ ಅಪಾಯ ಇದೆ ಎಂದು ಅಪೊಸ್ತಲ ಪೇತ್ರ ನಮಗೆ ಎಚ್ಚರಿಕೆ ಕೊಟ್ಟಿದ್ದಾನೆ. ನಾವು ನಂಬಿಕೆ, ಜ್ಞಾನ, ತಾಳ್ಮೆ, ದೇವಭಕ್ತಿಯನ್ನು ಬೆಳೆಸಿಕೊಳ್ಳುತ್ತಾ ಇದ್ದರೆ ಈ ಅಪಾಯದಿಂದ ತಪ್ಪಿಸಿಕೊಳ್ಳಬಹುದು.—2 ಪೇತ್ರ 1:5-8 ಓದಿ.

ಬೈಬಲಿನಲ್ಲಿರುವ ರತ್ನಗಳು

w20.09 31 ¶3-5

ವಾಚಕರಿಂದ ಪ್ರಶ್ನೆಗಳು

ಪ್ರಸಂಗಿ 5:8ರಲ್ಲಿ ಬಡವರ ಮೇಲೆ ದಬ್ಬಾಳಿಕೆ ಮಾಡೋ, ಅವ್ರಿಗೆ ಅನ್ಯಾಯ ಮಾಡೋ ಅಧಿಕಾರಿ ಬಗ್ಗೆ ಹೇಳಲಾಗಿದೆ. ಆ ಅಧಿಕಾರಿ ತನಗಿಂತ ಮೇಲಿನ ಸ್ಥಾನದಲ್ಲಿ ಇರುವವ್ರು ಅಥ್ವಾ ಸರಕಾರದಲ್ಲಿ ಹೆಚ್ಚು ಅಧಿಕಾರ ಇರುವವ್ರು ತನ್ನನ್ನ ಗಮನಿಸ್ತಾರೆ ಅನ್ನೋದನ್ನ ನೆನಪಲ್ಲಿಡಬೇಕು. ಅಷ್ಟೇ ಅಲ್ಲ, ಅವ್ರಿಗಿಂತಲೂ ಇನ್ನೂ ಮೇಲಿನ ಸ್ಥಾನದಲ್ಲಿ ಬೇರೆಯವ್ರು ಇರಬಹುದು. ಹಾಗಿದ್ರೂ ಮಾನವ ಸರಕಾರದಲ್ಲಿ ಇರೋ ಎಲ್ಲಾ ಅಧಿಕಾರಿಗಳು ಭ್ರಷ್ಟರಾಗಿರೋ ಸಾಧ್ಯತೆ ಇದೆ. ಇದ್ರಿಂದ ಸಾಮಾನ್ಯ ಜನ್ರಿಗೆ ಅನ್ಯಾಯ ಆಗಿ ಅವ್ರು ಕಷ್ಟ ಅನುಭವಿಸಬೇಕಾಗುತ್ತೆ.

ಇಂಥ ಪರಿಸ್ಥಿತಿಯಲ್ಲಿ ನಮ್ಮ ಕೈಯಲ್ಲಿ ಏನೂ ಮಾಡೋಕಾಗಲ್ಲ ಅಂತ ಅನಿಸಬಹುದು. ಆದ್ರೆ ಯೆಹೋವನು ಮಾನವ ಸರಕಾರದಲ್ಲಿರೋ ಉನ್ನತ ಅಧಿಕಾರಿಗಳನ್ನ ಸಹ ನೋಡ್ತಿದ್ದಾನೆ ಅನ್ನೋದು ನಮ್ಗೆ ಸಾಂತ್ವನ ಕೊಡುತ್ತೆ. ನಾವು ಯೆಹೋವನ ಮೊರೆ ಹೋಗಬಹುದು ಮತ್ತು ನಮ್ಮ ಭಾರವನ್ನೆಲ್ಲ ಆತನ ಮೇಲೆ ಹಾಕಬಹುದು. (ಕೀರ್ತ. 55:22; ಫಿಲಿ. 4:6, 7) “ಯೆಹೋವನು ಭೂಲೋಕದ ಎಲ್ಲಾ ಕಡೆಯಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥ ಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ” ಅಂತ ನಮಗೆ ಗೊತ್ತು.—2 ಪೂರ್ವ. 16:9.

ಹಾಗಾಗಿ, ಮಾನವ ಸರಕಾರದಲ್ಲಿರೋ ಯಾವುದೇ ಅಧಿಕಾರಿಗಳಿಗಿಂತ ಮೇಲಿನ ಸ್ಥಾನದಲ್ಲಿ ಇನ್ನೊಬ್ರು ಇರ್ತಾರೆ ಅನ್ನೋದನ್ನ ಪ್ರಸಂಗಿ 5:8 ನೆನಪಿಗೆ ತರುತ್ತೆ. ಮುಖ್ಯವಾಗಿ, ಎಲ್ರಿಗಿಂತ ಹೆಚ್ಚಿನ ಅಧಿಕಾರ ಮತ್ತು ಸ್ಥಾನ ಯೆಹೋವನಿಗಿದೆ ಅನ್ನೋದನ್ನ ನೆನಪಿಸುತ್ತೆ. ಆತನು ಈಗ ತನ್ನ ರಾಜ್ಯದ ರಾಜನಾಗಿರೋ ಯೇಸು ಕ್ರಿಸ್ತನ ಮೂಲಕ ಆಳ್ತಿದ್ದಾನೆ. ಎಲ್ಲವನ್ನ ನೋಡ್ತಿರೋ ಸರ್ವೋನ್ನತನು ಮತ್ತು ಆತನ ಮಗನು ಯಾವಾಗ್ಲೂ ನ್ಯಾಯವನ್ನೇ ನಡಿಸ್ತಾರೆ.

ಅಕ್ಟೋಬರ್‌ 13-19

ಬೈಬಲಿನಲ್ಲಿರುವ ನಿಧಿ | ಪ್ರಸಂಗಿ 7-8

‘ಸಾವಿನ ಮನೆಗೆ ಹೋಗಿ’

it-2-E

“ಅಳೋದು” ¶9

ಅಳೋದು

ಅಳೋಕೆ ಒಂದು ಸಮಯ. ಪ್ರಸಂಗಿ 3:1, 4ರಲ್ಲಿ “ಅಳೋಕೆ ಒಂದು ಸಮಯ, ನಗೋಕೆ ಒಂದು ಸಮಯ, ಗೋಳಾಡೋಕೆ ಒಂದು ಸಮಯ, ಕುಣಿದಾಡೋಕೆ ಒಂದು ಸಮಯ” ಇದೆ ಅಂತ ಹೇಳುತ್ತೆ. ಇವತ್ತು ತುಂಬ ಜನ ಸಾಯೋ ಸ್ಥಿತಿಲಿ ಇದ್ದಾರೆ. ಒಬ್ಬ ವಿವೇಕಿ “ಔತಣದ ಮನೆಗೆ ಹೋಗೋದಕ್ಕಿಂತ” “ಸಾವಿನ ಮನೆಯಲ್ಲಿರೋಕೆ ಇಷ್ಟಪಡ್ತಾನೆ.” (ಪ್ರಸಂ 7:2, 4; ಜ್ಞಾನೋ 14:13 ಹೋಲಿಸಿ.) ಹಾಗಾಗಿ ವಿವೇಕ ಇರೋ ವ್ಯಕ್ತಿ ಸಾವಿನ ನೋವಲ್ಲಿ ಇರೋರಿಗೆ ಸಮಾಧಾನ ಮಾಡೋಕೆ ಹೋಗ್ತಾನೆ ಹೊರತು ತನ್ನ ಖುಷಿ ಹಿಂದೆ ಹೋಗಲ್ಲ. ಇದ್ರಿಂದ ಆ ವ್ಯಕ್ತಿಗೆ ಮನುಷ್ಯರು ಇವತ್ತಿದ್ದು ನಾಳೆ ಸತ್ತುಹೋಗ್ತಾರೆ ಅನ್ನೋದು ಯಾವಾಗ್ಲೂ ನೆನಪಲ್ಲಿರುತ್ತೆ. ಅಷ್ಟೇ ಅಲ್ಲ, ಅವನು ದೇವರ ಬಗ್ಗೆ ಸರಿಯಾಗಿ ಯೋಚ್ನೆ ಮಾಡ್ತಾನೆ.

w19.06 23 ¶15

ಒತ್ತಡದಲ್ಲಿ ಇರುವವರಿಗೆ ಸಹಾಯ ಮಾಡಿ

15 ವಿಲಿಯಮ್‌ ಅವರ ಹೆಂಡತಿ ಕೆಲವು ವರ್ಷಗಳ ಹಿಂದೆ ತೀರಿಹೋದರು. ವಿಲಿಯಮ್‌ ಹೇಳುವುದು: “ನನ್ನ ಹೆಂಡತಿಯ ಬಗ್ಗೆ ಬೇರೆಯವರು ಒಳ್ಳೇ ವಿಷಯಗಳನ್ನು ನೆನಪಿಸಿಕೊಂಡು ಹೇಳುವಾಗ ನನಗೆ ಸಾಂತ್ವನ ಸಿಗುತ್ತೆ. ಬೇರೆಯವರಿಗೆ ಅವಳ ಮೇಲೆ ಪ್ರೀತಿ-ಗೌರವ ಇತ್ತು ಅಂತ ಗೊತ್ತಾದಾಗ ಖುಷಿ ಆಗುತ್ತೆ. ಇದು ನನಗೆ ಎಷ್ಟು ಸಹಾಯ ಮಾಡುತ್ತೆ ಅಂತ ಮಾತಲ್ಲಿ ಹೇಳಕ್ಕಾಗಲ್ಲ. ಯಾಕೆಂದರೆ ನನ್ನ ಹೆಂಡತಿ ನನ್ನ ಜೀವ ಆಗಿದ್ದಳು, ನನ್ನ ಜೀವನನೇ ಆಗಿದ್ದಳು.” ಬಿಯಾಂಕ ಎಂಬ ಸಹೋದರಿ ಗಂಡನನ್ನು ಕಳಕೊಂಡರು. ಆ ಸಹೋದರಿ ಹೇಳುವುದು: “ನನ್ನ ಜೊತೆ ಯಾರಾದರೂ ಪ್ರಾರ್ಥನೆ ಮಾಡಿದಾಗ, ಒಂದೆರಡು ಬೈಬಲ್‌ ವಚನಗಳನ್ನು ನನಗೆ ಓದಿ ಹೇಳಿದಾಗ ಸಾಂತ್ವನ ಸಿಗುತ್ತೆ. ಅವರು ನನ್ನ ಹತ್ತಿರ ನನ್ನ ಗಂಡನ ಬಗ್ಗೆ ಮಾತಾಡಿದರೆ ಖುಷಿಯಾಗುತ್ತೆ. ನಾನೂ ನನ್ನ ಗಂಡನ ಬಗ್ಗೆ ಮಾತಾಡುವಾಗ ಅವರು ಕೇಳಿಸಿಕೊಂಡರೆ ನನಗೆ ತುಂಬ ಸಹಾಯ ಆಗುತ್ತೆ.”

w17.07 16 ¶16

“ಅಳುವವರೊಂದಿಗೆ ಅಳಿರಿ”

16 ದುಃಖಿಸುತ್ತಿರುವ ಸಹೋದರ ಸಹೋದರಿಯರಿಗೆ ನಮ್ಮ ಪ್ರಾರ್ಥನೆಗಳು ಸಹಾಯ ಮಾಡುತ್ತವೆ. ನಮ್ಮ ಪ್ರಾರ್ಥನೆಗಳಲ್ಲಿ ಅವರನ್ನು ನೆನಪಿಸಿಕೊಳ್ಳಬಹುದು ಮಾತ್ರವಲ್ಲ ಅವರ ಜೊತೆ ಸಹ ಪ್ರಾರ್ಥಿಸಬಹುದು. ಪ್ರಾರ್ಥನೆ ಮಾಡುವಾಗ ನಾವು ಅತ್ತುಬಿಡಬಹುದು ಎಂಬ ಕಾರಣಕ್ಕೆ ಹಿಂಜರಿಯಬಾರದು. ನಾವು ಮನದಾಳದಿಂದ ಮಾಡುವ ಅಂಥ ಪ್ರಾರ್ಥನೆ ತುಂಬ ಸಾಂತ್ವನ ನೀಡುತ್ತದೆ. “ಸಹೋದರಿಯರು ನನ್ನನ್ನು ಸಂತೈಸಲು ಬಂದಾಗ ಒಂದು ಪ್ರಾರ್ಥನೆ ಮಾಡುತ್ತೀರಾ ಅಂತ ಕೆಲವೊಮ್ಮೆ ಕೇಳುತ್ತೇನೆ. ಅವರು ಪ್ರಾರ್ಥಿಸಲು ಶುರುಮಾಡಿದಾಗ ಒತ್ತಿಒತ್ತಿ ಬರುವ ದುಃಖದಿಂದಾಗಿ ನಿಂತುನಿಂತು ಒಂದೊಂದೇ ಮಾತು ಹೇಳುತ್ತಾರೆ. ಆದರೆ ಕೆಲವು ವಾಕ್ಯ ಹೇಳುವಷ್ಟರಲ್ಲಿ ತಮ್ಮ ಸ್ವರ ಸುಧಾರಿಸಿಕೊಂಡು ಮನದಾಳದ ಪ್ರಾರ್ಥನೆ ಮಾಡುತ್ತಾರೆ. ಅವರ ಆ ಬಲವಾದ ನಂಬಿಕೆ, ಪ್ರೀತಿ, ಕಾಳಜಿ ನನ್ನ ನಂಬಿಕೆಯನ್ನು ತುಂಬ ಬಲಪಡಿಸಿದೆ” ಎನ್ನುತ್ತಾರೆ ಡಲೀನ್‌.

w17.07 16 ¶17-19

“ಅಳುವವರೊಂದಿಗೆ ಅಳಿರಿ”

17 ಆಪ್ತರನ್ನು ಕಳಕೊಂಡ ದುಃಖ ಪ್ರತಿಯೊಬ್ಬರನ್ನು ಎಷ್ಟು ಸಮಯದ ವರೆಗೆ ಕಾಡುತ್ತದೆಂದು ಹೇಳಲು ಸಾಧ್ಯವಿಲ್ಲ. ಕೆಲವು ದಿನಗಳ ಮಟ್ಟಿಗೆ ಬಂಧುಮಿತ್ರರು ಜೊತೆಯಲ್ಲಿದ್ದು ಅಥವಾ ಆಗಾಗ ಬಂದು ಭೇಟಿಮಾಡಿ ದುಃಖಿತರನ್ನು ಸಂತೈಸುತ್ತಾರೆ. ಅವರೆಲ್ಲರೂ ಆಮೇಲೆ ತಮ್ಮತಮ್ಮ ಕೆಲಸಕಾರ್ಯಗಳಲ್ಲಿ ಮುಳುಗಿಹೋಗುತ್ತಾರೆ. ಆದರೆ ಆಪ್ತರನ್ನು ಕಳಕೊಂಡವರು ತಮ್ಮ ದುಃಖದಿಂದ ಇನ್ನೂ ಚೇತರಿಸಿಕೊಂಡಿರುವುದಿಲ್ಲ. ಅವರಿಗೆ ಸಾಂತ್ವನ ಇನ್ನೂ ಬೇಕಿರುತ್ತದೆ. ಹಾಗಾಗಿ ಅವರಿಗೆ ಸಹಾಯ ಕೊಡಲು ಮುಂದೆ ಬನ್ನಿ. “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.” (ಜ್ಞಾನೋ. 17:17) ಅವರಿಗೆ ನಮ್ಮ ಬೆಂಬಲ ಬೇಕಾಗಿರುವಷ್ಟು ಕಾಲ ಜೊತೆ ಕ್ರೈಸ್ತರಾದ ನಾವು ಸಾಂತ್ವನ ಕೊಡುತ್ತಾ ಇರಬೇಕು.—1 ಥೆಸಲೊನೀಕ 3:7 ಓದಿ.

18 ಆಪ್ತರ ಸಾವಿನಿಂದಾಗಿ ಶೋಕಿಸುತ್ತಿರುವವರ ದುಃಖ ತಟ್ಟನೇ ಏನೋ ಕಾರಣಕ್ಕೆ ಹೊರಗೆ ಬರಬಹುದು ಎನ್ನುವುದನ್ನೂ ನಾವು ಮನಸ್ಸಿನಲ್ಲಿಡಬೇಕು. ವಾರ್ಷಿಕೋತ್ಸವ, ಫೋಟೋಗಳು, ಚಟುವಟಿಕೆಗಳು, ಒಂದು ವಿಧದ ಸಂಗೀತ, ವಾಸನೆ, ಶಬ್ದ, ವರ್ಷದ ಒಂದು ಋತು ತೀರಿಹೋದ ವ್ಯಕ್ತಿಯನ್ನು ನೆನಪಿಗೆ ತರಬಹುದು. ತಮ್ಮ ಸಂಗಾತಿ ಇಲ್ಲದೆ ಒಬ್ಬರೇ ಮೊದಲನೇ ಸಲ ಏನಾದರೂ ಮಾಡಬೇಕಾಗಿ ಬಂದಾಗ ಅಂದರೆ ಸಮ್ಮೇಳನವನ್ನೋ ಯೇಸುವಿನ ಮರಣದ ಸ್ಮರಣೆಯನ್ನೋ ಹಾಜರಾಗುವಾಗ ತುಂಬ ದುಃಖವಾಗುತ್ತದೆ. “ಹೆಂಡತಿ ತೀರಿಹೋದ ನಂತರ ಮದುವೆ ದಿನ ಬಂದಾಗ ನನಗೆ ತುಂಬ ಕಷ್ಟವಾಗುತ್ತದೆ ಅಂತ ನನಗೆ ಗೊತ್ತಿತ್ತು” ಎಂದು ಒಬ್ಬ ಸಹೋದರ ಹೇಳುತ್ತಾರೆ. “ಆ ದಿನ ಬಂದಾಗ ನಿಜವಾಗಲೂ ನನಗೆ ಸ್ವಲ್ಪ ಕಷ್ಟವಾಯಿತು. ಆದರೆ ಆ ದಿನ ನಾನು ಒಬ್ಬನೇ ಇರಬಾರದು ಅಂತ ಕೆಲವು ಸಹೋದರ ಸಹೋದರಿಯರು ನನ್ನ ಕೆಲವು ಆಪ್ತ ಗೆಳೆಯರನ್ನು ಸೇರಿಸಿ ನನ್ನ ಜೊತೆ ಸಮಯ ಕಳೆಯುವಂತೆ ಏರ್ಪಡಿಸಿದರು” ಎನ್ನುತ್ತಾರೆ ಆ ಸಹೋದರ.

19 ಆಪ್ತರ ಸಾವಿನ ದುಃಖದಲ್ಲಿರುವವರಿಗೆ ಕೆಲವು ವಿಶೇಷವಾದ ದಿನಗಳಂದು ಮಾತ್ರ ಉತ್ತೇಜನ ಕೊಟ್ಟರೆ ಸಾಕಾಗುವುದಿಲ್ಲ ಎನ್ನುವುದನ್ನೂ ಮನಸ್ಸಿನಲ್ಲಿಡಿ. “ವಿಶೇಷವಲ್ಲದ ದಿನಗಳಂದು ಕೂಡ ಬೇರೆಯವರು ನನಗೆ ಎಷ್ಟೋ ಸಲ ಸಹಾಯ ಕೊಟ್ಟದ್ದರಿಂದ, ನನ್ನ ಜೊತೆ ಸಮಯ ಕಳೆದದ್ದರಿಂದ ತುಂಬ ಪ್ರಯೋಜನವಾಗಿದೆ” ಎಂದು ಯೂನಿಯಾ ಹೇಳುತ್ತಾರೆ. “ಹೀಗೆ ಯಾವುದೇ ನಿರ್ದಿಷ್ಟ ಕಾರಣ ಇಲ್ಲದಿದ್ದರೂ ನನ್ನ ಜೊತೆ ಕಳೆದ ಆ ಸಮಯ ತುಂಬ ಸಾಂತ್ವನ ಕೊಟ್ಟಿದೆ ಮತ್ತು ನನಗೆ ತುಂಬ ಅಮೂಲ್ಯವಾಗಿದೆ” ಎಂದೂ ಅವರು ಹೇಳುತ್ತಾರೆ. ಶೋಕಿಸುತ್ತಿರುವವರನ್ನು ಕಾಡುವ ದುಃಖ, ಒಂಟಿಭಾವನೆಯನ್ನು ನಾವು ಪೂರ್ತಿಯಾಗಿ ತೆಗೆದುಹಾಕಲು ಆಗಲ್ಲ. ಆದರೆ ಅವರಿಗೆ ಸಾಂತ್ವನ ಕೊಡಲು ನಮ್ಮಿಂದಾದ ಸಹಾಯ ಮಾಡಬಹುದು. (1 ಯೋಹಾ. 3:18) ಗ್ಯಾಬಿ ಹೇಳುವುದು: “ನಾನು ನಡೆಯುತ್ತಿದ್ದ ದುಃಖದ ಹಾದಿಯಲ್ಲಿ ಹಿರಿಯರು ಪ್ರೀತಿಯಿಂದ ನನ್ನ ಪಕ್ಕದಲ್ಲೇ ಹೆಜ್ಜೆಯಿಟ್ಟು ನಡೆದದ್ದಕ್ಕಾಗಿ ಯೆಹೋವನಿಗೆ ಋಣಿಯಾಗಿದ್ದೇನೆ. ಇದರಿಂದಾಗಿ ಯೆಹೋವನು ಪ್ರೀತಿಯಿಂದ ನನ್ನನ್ನು ತಬ್ಬಿಕೊಂಡಿರುವಂತೆ ನನಗೆ ಅನಿಸಿದೆ.”

ಬೈಬಲಿನಲ್ಲಿರುವ ರತ್ನಗಳು

w23.03 31 ¶18

“ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ”

18 ಕೆಲವೊಂದು ಸಲ ನಮ್ಮ ಮನಸ್ಸಿಗೆ ನೋವು ಮಾಡಿರೋ ಸಹೋದರ ಅಥವಾ ಸಹೋದರಿ ಹತ್ರ ಹೋಗಿ ಮಾತಾಡಬೇಕು ಅಂತ ನಮಗೆ ಅನಿಸುತ್ತೆ. ಆಗ ನಾವು ಕೆಲವು ಪ್ರಶ್ನೆಗಳನ್ನ ಕೇಳ್ಕೊಬೇಕು. ‘ನನಗೆ ಎಲ್ಲಾ ವಿಷ್ಯನೂ ಗೊತ್ತಿದ್ಯಾ?’ (ಜ್ಞಾನೋ. 18:13) ‘ಅವರು ಬೇಕುಬೇಕು ಅಂತಾನೇ ಹೀಗೆ ಮಾಡಿದ್ರಾ?’ (ಪ್ರಸಂ. 7:20) ‘ನಾನು ಯಾವತ್ತಾದ್ರೂ ಈ ತರ ತಪ್ಪು ಮಾಡಿದ್ದೀನಾ?’ (ಪ್ರಸಂ. 7:21, 22) ‘ನಾನು ಅವ್ರ ಹತ್ರ ಹೋಗಿ ಮಾತಾಡಿದ್ರೆ ಸಮಸ್ಯೆ ಸರಿ ಹೋಗುತ್ತಾ ಅಥವಾ ಇನ್ನೂ ದೊಡ್ಡದಾಗುತ್ತಾ?’ (ಜ್ಞಾನೋಕ್ತಿ 26:20 ಓದಿ.) ಈ ತರ ಪ್ರಶ್ನೆಗಳನ್ನ ಕೇಳ್ಕೊಂಡಾಗ ಅವರು ಮಾಡಿದ ತಪ್ಪನ್ನ ಮನಸ್ಸಲ್ಲಿ ಇಟ್ಕೊಳ್ಳದೇ ಕ್ಷಮಿಸೋಕೆ ಸುಲಭ ಆಗುತ್ತೆ.

ಅಕ್ಟೋಬರ್‌ 20-26

ಬೈಬಲಿನಲ್ಲಿರುವ ನಿಧಿ | ಪ್ರಸಂಗಿ 9-10

ಸಮಸ್ಯೆಗಳು ಬಂದಾಗ ಮನಸ್ಸಲ್ಲಿಡಬೇಕಾದ ವಿಷ್ಯಗಳು

w13 8/15 14 ¶20-21

ಯಾವತ್ತೂ ‘ಯೆಹೋವನ ಮೇಲೆ ಕುದಿಯಬೇಡಿ’

20 ತಪ್ಪು ನಿಜವಾಗಿ ಯಾರದ್ದು ಎಂದು ನೆನಪಿಡಿ. ಯಾಕೆ? ಕೆಲವೊಮ್ಮೆ ನಮ್ಮ ಸಮಸ್ಯೆಗಳಿಗೆ ನಾವೇ ಕಾರಣರಾಗಿರುತ್ತೇವೆ. ಅದನ್ನು ನಾವು ಒಪ್ಪಿಕೊಳ್ಳಬೇಕು. (ಗಲಾ. 6:7) ನಮ್ಮ ಸಮಸ್ಯೆಗಳಿಗೆ ಯೆಹೋವನ ಮೇಲೆ ತಪ್ಪುಹೊರಿಸಬಾರದು. ಏಕೆಂದು ಅರ್ಥಮಾಡಿಕೊಳ್ಳಲು ಈ ಉದಾಹರಣೆ ಗಮನಿಸಿ. ವೇಗವಾಗಿ ಓಡುವ ಸಾಮರ್ಥ್ಯವಿರುವ ಕಾರೊಂದು ಒಬ್ಬ ವ್ಯಕ್ತಿಯ ಬಳಿ ಇದೆ. ಅವನು ತಿರುವು ಇದ್ದಲ್ಲಿ ಆ ಕಾರನ್ನು ಸೂಚಿತ ಮಿತಿಗಿಂತ ಹೆಚ್ಚು ವೇಗದಲ್ಲಿ ಓಡಿಸಿ, ಒಂದು ಕಡೆ ಡಿಕ್ಕಿ ಹೊಡೆಯುತ್ತಾನೆ. ಈ ಅಪಘಾತಕ್ಕೆ ಆ ಕಾರಿನ ಉತ್ಪಾದಕನೇ ಕಾರಣ ಎಂದು ನಾವು ಹೇಳುತ್ತೇವಾ? ಇಲ್ಲ ಅಲ್ಲವೆ? ಹಾಗೆಯೇ ಯೆಹೋವನು ನಮಗೆ ಇಚ್ಛಾಸ್ವಾತಂತ್ರ್ಯ ಕೊಟ್ಟಿದ್ದಾನೆ. ಮಾತ್ರವಲ್ಲ ಅದನ್ನು ಬಳಸಿ ಹೇಗೆ ಸರಿಯಾದ ನಿರ್ಣಯಗಳನ್ನು ಮಾಡಬೇಕೆಂದು ಮಾರ್ಗದರ್ಶನವನ್ನೂ ಕೊಟ್ಟಿದ್ದಾನೆ. ಹಾಗಿದ್ದ ಮೇಲೆ ನಾವು ತಪ್ಪು ನಿರ್ಣಯ ಮಾಡಿ ನಮ್ಮ ಸೃಷ್ಟಿಕರ್ತನ ಮೇಲೆ ತಪ್ಪು ಹೊರಿಸುವುದು ಸರಿನಾ?

21 ಆದರೆ ಎಲ್ಲ ಸಮಸ್ಯೆಗಳಿಗೆ ನಾವೇ ಕಾರಣರಾಗಿರುವುದಿಲ್ಲ. ಕೆಲವೊಂದು ವಿಷಯಗಳು ‘ಕಾಲ ಹಾಗೂ ಮುಂಗಾಣದ ಘಟನೆಯಿಂದಾಗಿ’ ನಡೆಯುತ್ತವೆ. (ಪ್ರಸಂ. 9:11, NW) ಇದೆಲ್ಲದರ ನಡುವೆ ನಾವು ಒಂದು ವಿಷಯವನ್ನು ಮರೆಯಬಾರದು, ಏನೆಂದರೆ, ಕೆಟ್ಟತನಕ್ಕೆ ಮುಖ್ಯ ಕಾರಣ ಪಿಶಾಚನಾದ ಸೈತಾನನೇ. (1 ಯೋಹಾ. 5:19; ಪ್ರಕ. 12:9) ಅವನೇ ನಮ್ಮ ವೈರಿ. ಯೆಹೋವನಲ್ಲ.—1 ಪೇತ್ರ 5:8.

w19.09 5 ¶10

ದೀನರು ಯೆಹೋವನಿಗೆ ಅಮೂಲ್ಯರು

10 ದೀನತೆ ಇದ್ದರೆ ಅನ್ಯಾಯ ಆಗುವಾಗಲೂ ಜೀವನ ನಡೆಸಿಕೊಂಡು ಹೋಗುವುದು ಸುಲಭ. ರಾಜ ಸೊಲೊಮೋನ ಹೇಳಿದ್ದು: “ಆಳುಗಳು ಕುದುರೆಸವಾರಿ ಮಾಡುವದನ್ನೂ ಪ್ರಭುಗಳು ಆಳುಗಳಂತೆ ನೆಲದ ಮೇಲೆ ನಡೆಯುವದನ್ನೂ ನೋಡಿದ್ದೇನೆ.” (ಪ್ರಸಂ. 10:7) ಒಳ್ಳೆಯ ಸಾಮರ್ಥ್ಯ ಇದ್ದರೂ ಕೆಲವೊಮ್ಮೆ ನಮ್ಮನ್ನು ಯಾರೂ ಕ್ಯಾರೇ ಅನ್ನಲ್ಲ. ಆದರೆ ಯಾವುದೇ ಸಾಮರ್ಥ್ಯ ಇಲ್ಲದವರಿಗೆ ಜನರಿಂದ ತುಂಬ ಗೌರವ ಸಿಗಬಹುದು. ಆಗ ನಾವು ಸೊಲೊಮೋನ ಹೇಳಿದಂತೆ ನಮಗೆ ಸಿಗದಿರುವ ವಿಷಯದ ಬಗ್ಗೆ ಕೊರಗುವ ಬದಲು ಜೀವನ ಹೇಗಿದೆಯೋ ಹಾಗೇ ಸ್ವೀಕರಿಸಬೇಕು. (ಪ್ರಸಂ. 6:9) ನಾವು ದೀನರಾಗಿದ್ದರೆ ಇದನ್ನು ಮಾಡಲು ಸುಲಭ ಆಗುತ್ತದೆ.

w11 10/15 8 ¶1-2

ಮನರಂಜನೆ ಪರೀಕ್ಷಿಸಿ ಆಯ್ಕೆ ಮಾಡಿ

ನಾವು ಕೇವಲ ಬದುಕಬೇಕೆಂದಲ್ಲ, ಹರ್ಷಾನಂದದಿಂದ ಬದುಕಬೇಕೆನ್ನುವುದು ಯೆಹೋವನ ಇಚ್ಛೆ ಎಂದು ಸೂಚಿಸುವ ಅನೇಕ ವಾಕ್ಯಗಳನ್ನು ನಾವು ಬೈಬಲಿನ ಉದ್ದಕ್ಕೂ ಕಾಣಬಹುದು. ಉದಾಹರಣೆಗೆ, ಕೀರ್ತನೆ 104:14, 15 ಯೆಹೋವ ದೇವರ ಕುರಿತು ಹೀಗನ್ನುತ್ತದೆ: “ಮನುಷ್ಯರಿಗೋಸ್ಕರ ಪೈರುಗಳನ್ನು ಹುಟ್ಟಿಸುತ್ತೀ; ಅವರು ಭೂವ್ಯವಸಾಯಮಾಡಿ ಆಹಾರವನ್ನೂ ಹೃದಯಾನಂದಕರವಾದ ದ್ರಾಕ್ಷಾರಸವನ್ನೂ ಮುಖಕ್ಕೆ ಕಾಂತಿಯನ್ನುಂಟುಮಾಡುವ ಎಣ್ಣೆಯನ್ನೂ ಪ್ರಾಣಾಧಾರವಾದ ರೊಟ್ಟಿಯನ್ನೂ ಸಂಪಾದಿಸಿಕೊಳ್ಳುತ್ತಾರೆ.” ನಮ್ಮ ಜೀವಪೋಷಣೆಗೆ ಬೇಕಾದ ಆಹಾರ, ಎಣ್ಣೆ, ದ್ರಾಕ್ಷಾಮದ್ಯ ಮುಂತಾದವುಗಳನ್ನು ನಾವು ಈ ಭೂಮಿಯ ಹುಟ್ಟುವಳಿಯಲ್ಲಿ ಪಡೆದುಕೊಳ್ಳುವಂತೆ ಯೆಹೋವನು ಮಾಡುತ್ತಾನೆ ಎಂದು ಈ ವಚನ ತಿಳಿಸುತ್ತದೆ. ಮಾತ್ರವಲ್ಲ ದ್ರಾಕ್ಷಾಮದ್ಯ “ಹೃದಯಾನಂದಕರ” ಎಂದೂ ತಿಳಿಸುತ್ತದೆ. ಜೀವಿಸಲು ದ್ರಾಕ್ಷಾಮದ್ಯ ಅತ್ಯಾವಶ್ಯಕವೇನಲ್ಲ. ಆದರೂ ನಮ್ಮ ಆನಂದಕ್ಕಾಗಿ ದೇವರದನ್ನು ಕೊಟ್ಟಿದ್ದಾನೆ. (ಪ್ರಸಂ. 9:7; 10:19) ಹೌದು, ನಾವು ಸಂತೋಷದಿಂದ ಇರಬೇಕು ಮತ್ತು ನಮ್ಮ “ಹೃದಯ” ಆನಂದದಿಂದ ತುಂಬಿರಬೇಕು ಎನ್ನುವುದು ಯೆಹೋವ ದೇವರ ಇಚ್ಛೆ.—ಅ. ಕಾ. 14:16, 17.

2 ಹಾಗಾಗಿ, ನಾವು ಕೆಲವೊಮ್ಮೆ “ಹೊಲದ ಲಿಲಿಹೂವು,” “ಆಕಾಶದ ಪಕ್ಷಿ” ಇವುಗಳನ್ನು ಗಮನಿಸಲು ಅಥವಾ ಮನರಂಜಿಸುವ ಇತರ ಚಟುವಟಿಕೆಗಳಲ್ಲಿ ಆನಂದಿಸಲು ಸಮಯ ತೆಗೆದುಕೊಂಡರೆ ಅದರಲ್ಲೇನೂ ತಪ್ಪಿಲ್ಲ. (ಮತ್ತಾ. 6:26, 28; ಕೀರ್ತ. 8:3, 4) ಏಕೆಂದರೆ, ಆರೋಗ್ಯಪೂರ್ಣವಾದ ಆನಂದಮಯ ಜೀವನ “ದೇವರ ಅನುಗ್ರಹ.” (ಪ್ರಸಂ. 3:12, 13) ದೇವರ ಆ ಅನುಗ್ರಹದಲ್ಲಿ ಬಿಡುವಿನ ಸಮಯದಲ್ಲಿ ಆನಂದಿಸುವುದು ಸಹ ಸೇರಿದೆ. ಹಾಗಾಗಿ ನಾವು ಆ ಸಮಯವನ್ನು ದೇವರಿಗೆ ಮೆಚ್ಚಿಕೆಯಾಗುವಂಥ ರೀತಿಯಲ್ಲಿ ಬಳಸಬೇಕು.

ಬೈಬಲಿನಲ್ಲಿರುವ ರತ್ನಗಳು

it-1-E

“ಬೆನ್ನ ಹಿಂದೆ ಮಾತಾಡೋದು, ಚಾಡಿ ಹೇಳೋದು” ¶4, 8

ಬೆನ್ನ ಹಿಂದೆ ಮಾತಾಡೋದು, ಚಾಡಿ ಹೇಳೋದು

ಬೆನ್ನ ಹಿಂದೆ ಮಾತಾಡೋದ್ರಿಂದ ಚಾಡಿ ಹೇಳೋ ಸ್ವಭಾವ ಬಂದುಬಿಡುತ್ತೆ, ಮತ್ತು ಆ ಸುದ್ದಿನ ಹಬ್ಬಿಸಿರೋ ವ್ಯಕ್ತಿಗೂ ಅದ್ರಿಂದ ತೊಂದ್ರೆ ಆಗುತ್ತೆ. ಅದಕ್ಕೇ ಪ್ರಸಂಗಿ 10:12-14ರಲ್ಲಿ ಈ ವಿವೇಕದ ಮಾತುಗಳಿವೆ: “ಅವಿವೇಕಿ ತನ್ನ ನುಡಿಗಳಿಂದ ತನ್ನ ಮೇಲೆ ತಾನೇ ನಾಶ ತಂದ್ಕೊಳ್ತಾನೆ. ಅವನ ಬಾಯಿಂದ ಬರೋ ಮೊದಲ ಮಾತುಗಳು ಮೂರ್ಖತನ, ಕೊನೇ ಮಾತುಗಳೂ ಹುಚ್ಚುತನ. ಅವು ನಾಶಕ್ಕೆ ನಡಿಸುತ್ತೆ. ಹಾಗಿದ್ರೂ ಅವನು ಮಾತಾಡ್ತಾ ಇರ್ತಾನೆ.” ಇಲ್ಲಿ ಹೇಳಿರೋ ಮಾತು ಎಷ್ಟು ನಿಜ ಅಲ್ವಾ?

ಬೆನ್ನಹಿಂದೆ ಮಾತಾಡೋದ್ರಿಂದ ಏನೂ ತೊಂದ್ರೆ ಆಗಲ್ಲ ಅಂತ ನಮಗೆ ಅನಿಸಬಹುದು. ಆದ್ರೆ ಅದು ಚಾಡಿಗೆ ಸುಲಭವಾಗಿ ತಿರುಗಿಬಿಡುತ್ತೆ. ಇದ್ರಿಂದ ತುಂಬ ತೊಂದ್ರೆಯಾಗುತ್ತೆ, ನೋವಾಗುತ್ತೆ, ಜಗಳಗಳಾಗುತ್ತೆ. ಚಾಡಿ ಹೇಳೋದ್ರ ಹಿಂದೆ ಕೆಟ್ಟ ಉದ್ದೇಶ ಇರಲಿ ಇಲ್ಲದೆ ಇರಲಿ, ಹಾಗೆ ಮಾಡಿದ್ರೆ ಯೆಹೋವನ ಮೆಚ್ಚಿಗೆಯನ್ನ ಕಳ್ಕೊಂಡುಬಿಡ್ತೀವಿ. ಯಾಕಂದ್ರೆ “ಸಹೋದರರ ಮಧ್ಯ ಜಗಳ ಬಿತ್ತೋ” ವ್ಯಕ್ತಿಯನ್ನ ದೇವರು ದ್ವೇಷಿಸ್ತಾನೆ. (ಜ್ಞಾನೋ 6:16-19) ಡಯಾಬೋಲೊಸ್‌ ಅನ್ನೋ ಗ್ರೀಕ್‌ ಪದಕ್ಕೆ “ಚಾಡಿ ಹೇಳೋನು” ಅಥವಾ “ಚಾಡಿಕೋರ” ಅನ್ನೋ ಅರ್ಥ ಇದೆ. ಈ ಪದನ ‘ಪಿಶಾಚನಾದ’ ಸೈತಾನನಿಗೆ ಉಪಯೋಗಿಸಲಾಗಿದೆ. ಯಾಕಂದ್ರೆ ಅವನು ದೇವರ ಮೇಲೆ ದೂರು ಹೇಳೋ ಒಬ್ಬ ದೊಡ್ಡ ಚಾಡಿಕೋರನಾಗಿದ್ದ.—ಯೋಹಾ 8:44; ಪ್ರಕ 12:9, 10; ಆದಿ 3:2-5.

ಅಕ್ಟೋಬರ್‌ 27–ನವೆಂಬರ್‌ 2

ಬೈಬಲಿನಲ್ಲಿರುವ ನಿಧಿ | ಪ್ರಸಂಗಿ 11-12

ಆರೋಗ್ಯವಾಗಿರಿ, ಖುಷಿಯಾಗಿರಿ

g-E 3/15 13 ¶6-7

ಶುದ್ಧ ಗಾಳಿ ಮತ್ತು ಸೂರ್ಯನ ಬೆಳಕು—ನೈಸರ್ಗಿಕ “ರೋಗ ನಿರೋಧಕಗಳು”

ಸೂರ್ಯನ ಬೆಳಕು ನಮಗೆ ಹಾನಿ ತರೋ ಸೂಕ್ಷ್ಮಜೀವಿಗಳನ್ನ ಸಾಯಿಸುತ್ತೆ. ಒಂದು ವರದಿ ಹೇಳೋ ಪ್ರಕಾರ ಗಾಳಿಯಲ್ಲಿರೋ ಎಷ್ಟೋ ಸೂಕ್ಷ್ಮಜೀವಿಗಳು ಸೂರ್ಯನ ಬೆಳಕಲ್ಲಿ ಬದಕೋಕಾಗಲ್ಲ.

ಹಾಗಾಗಿ ನೀವು ಆಗಾಗ ಹೊರಗಡೆ ಹೋಗಿ ಬಿಸಿಲು ಕಾಯೋದು ಒಳ್ಳೇದು. ಇದ್ರಿಂದ ಶುದ್ಧ ಗಾಳಿನೂ ಸಿಗುತ್ತೆ. ನಿಮಗೆ ಒಳ್ಳೇ ಆರೋಗ್ಯನೂ ಇರುತ್ತೆ.

w23.02 21 ¶6-7

ಜೀವ ದೇವರು ಕೊಟ್ಟಿರೋ ಒಂದು ದೊಡ್ಡ ಗಿಫ್ಟ್‌!

6 ನಾವು ಆರೋಗ್ಯವಾಗಿ ಇರೋಕೆ ಏನ್‌ ತಿನ್ನಬೇಕು? ಏನ್‌ ಕುಡಿಬೇಕು? ಅನ್ನೋ ದೊಡ್ಡ ಪಟ್ಟಿನ ಯೆಹೋವ ಬೈಬಲಲ್ಲಿ ಕೊಟ್ಟಿಲ್ಲ. ಆದ್ರೆ ‘ದೇಹಕ್ಕೆ ಹಾನಿ ಮಾಡೋ ವಿಷ್ಯಗಳನ್ನ ದೂರ ಮಾಡಿ’ ಅಂತ ಹೇಳಿದ್ದಾನೆ. (ಪ್ರಸಂ. 11:10) ಉದಾಹರಣೆಗೆ ಹೊಟ್ಟೆ ಬಿರಿಯೋ ತರ ತಿನ್ನೋದು, ಕಂಠ ಪೂರ್ತಿ ಕುಡಿಯೋದು ಜೀವಕ್ಕೆ ಅಪಾಯ ಅಂತ ಬೈಬಲಲ್ಲಿ ಎಚ್ಚರಿಸಿದ್ದಾನೆ. (ಜ್ಞಾನೋ. 23:20) ಹಾಗಾಗಿ ನಾವು ಏನ್‌ ತಿಂತೀವಿ, ಏನ್‌ ಕುಡಿತೀವಿ ಅನ್ನೋ ವಿಷ್ಯದಲ್ಲಿ ಹುಷಾರಾಗಿ ಇರ್ಬೇಕು ಅಂತ ಯೆಹೋವ ಬಯಸ್ತಾನೆ. ಅಷ್ಟೇ ಅಲ್ಲ ನಾವು ಎಷ್ಟು ತಿಂತೀವಿ, ಕುಡಿತೀವಿ ಅನ್ನೋ ವಿಷ್ಯದಲ್ಲೂ ಎಚ್ಚರವಾಗಿ ಇರ್ಬೇಕು ಅಂತ ಹೇಳ್ತಿದ್ದಾನೆ.—1 ಕೊರಿಂ. 6:12; 9:25.

7 ತಿನ್ನೋ ಕುಡಿಯೋ ವಿಷ್ಯದಲ್ಲಿ ನಾವು ನಿರ್ಧಾರಗಳನ್ನ ಮಾಡುವಾಗ ಚೆನ್ನಾಗಿ ಯೋಚ್ನೆ ಮಾಡ್ಬೇಕು. ಆಗ ನಾವು ಯೆಹೋವ ಕೊಟ್ಟಿರೋ ಜೀವಕ್ಕೆ ಬೆಲೆ ಕೊಡ್ತೀವಿ ಅಂತ ತೋರಿಸ್ಕೊಡ್ತೀವಿ. (ಕೀರ್ತ. 119:99, 100; ಜ್ಞಾನೋಕ್ತಿ 2:11 ಓದಿ.) ಉದಾಹರಣೆಗೆ ನಿಮಗೆ ಇಷ್ಟವಾದ ತಿಂಡಿ ಇದೆ ಅಂತ ನೆನಸಿ. ಆದ್ರೆ ಅದನ್ನ ತಿಂದ್ರೆ ನಿಮ್ಮ ಆರೋಗ್ಯ ಹಾಳಾಗುತ್ತೆ ಅಂತ ನಿಮಗೆ ಗೊತ್ತು. ನೀವು ಅದನ್ನ ತಿಂತೀರಾ? ಇಲ್ಲ ಅಲ್ವಾ! ಬುದ್ಧಿ ಇರುವವ್ರ ತರ ನಡ್ಕೊಳ್ತೀರ. ಆರೋಗ್ಯ ಕಾಪಾಡ್ಕೊಳ್ಳೋಕೆ ಇನ್ನೂ ಕೆಲವು ವಿಷ್ಯಗಳನ್ನ ಮಾಡ್ಬೇಕು. ಸಾಕಷ್ಟು ನಿದ್ದೆ ಮಾಡ್ಬೇಕು, ವ್ಯಾಯಾಮ ಮಾಡ್ಬೇಕು, ನಮ್ಮನ್ನ ಮತ್ತು ನಮ್ಮ ಮನೆಯನ್ನ ಕ್ಲೀನಾಗಿ ಇಟ್ಕೊಬೇಕು.

w24.09 2 ¶2-3

“ದೇವರ ಮಾತಿನ ಪ್ರಕಾರ ನಡೀರಿ”

2 ಯೆಹೋವನ ಜನ್ರೆಲ್ಲ ಖುಷಿಖುಷಿಯಾಗಿ ಇರ್ತಾರೆ. ಯಾಕಂದ್ರೆ ನಮಗೆ ಖುಷಿಯಾಗಿ ಇರೋಕೆ ಎಷ್ಟೊಂದು ಕಾರಣಗಳಿದೆ. ಅದ್ರಲ್ಲಿ ಮುಖ್ಯವಾದ ಕಾರಣ ಯಾವುದು? ಪ್ರತಿದಿನ ನಾವು ದೇವರ ವಾಕ್ಯ ಓದ್ತಾ ಇರೋದ್ರಿಂದ ಮತ್ತು ಅದ್ರ ಪ್ರಕಾರ ನಡಿತಾ ಇರೋದ್ರಿಂದನೇ.—ಯಾಕೋಬ 1:22-25 ಓದಿ.

3 ದೇವರ ಮಾತನ್ನ ಪಾಲಿಸಿದ್ರೆ ನಮಗೆ ತುಂಬ ಪ್ರಯೋಜನಗಳು ಸಿಗುತ್ತೆ. “ದೇವರ ಮಾತಿನ ಪ್ರಕಾರ” ನಡೆದ್ರೆ ನಾವು ಆತನ ಮನಸ್ಸನ್ನ ಖುಷಿ ಪಡಿಸಬಹುದು! ಇದನ್ನ ನೆನಸ್ಕೊಂಡ್ರೆನೇ ನಮಗೆ ಖುಷಿಯಾಗುತ್ತಲ್ವಾ! (ಪ್ರಸಂ. 12:13) ಅಷ್ಟೇ ಅಲ್ಲ, ನಮ್ಮ ಕುಟುಂಬ ಖುಷಿಖುಷಿಯಾಗಿ ಇರುತ್ತೆ, ಸಭೆಯಲ್ಲಿ ಒಳ್ಳೊಳ್ಳೆ ಸ್ನೇಹಿತರನ್ನ ಮಾಡ್ಕೊಬಹುದು. ಇದು ನಿಜ ಅಂತ ನಿಮಗೆ ಅನಿಸಲ್ವಾ? ಒಂದುವೇಳೆ ದೇವರ ಮಾತಿನ ಪ್ರಕಾರ ನಡಿದೇ ಇದ್ರೆ ಏನಾಗುತ್ತೆ? ತುಂಬ ಸಮಸ್ಯೆಗಳಲ್ಲಿ ಸಿಕ್ಕಿ ಹಾಕೊಳ್ತೀವಿ. ದೇವರ ಮಾತನ್ನ ಪಾಲಿಸಿದ್ರೆ ತುಂಬ ಸಮಸ್ಯೆಗಳಿಂದ ದೂರ ಇರಬಹುದು. ಅದಕ್ಕೇ ದಾವೀದ ಯೆಹೋವನ ಆಜ್ಞೆಗಳು, ನಿಯಮಗಳು, ನ್ಯಾಯತೀರ್ಪಿನ ಬಗ್ಗೆ ಹೇಳ್ತಾ “ಅವನ್ನ ಪಾಲಿಸಿದ್ರೆ ದೊಡ್ಡ ಬಹುಮಾನ ಸಿಗುತ್ತೆ” ಅಂತ ಹೇಳಿದ್ದಾನೆ.—ಕೀರ್ತ. 19:7-11.

ಬೈಬಲಿನಲ್ಲಿರುವ ರತ್ನಗಳು

it-1-E

“ಪ್ರೇರಣೆ” ¶10

ಪ್ರೇರಣೆ

ದೇವರು ಬೈಬಲ್‌ ಬರಹಗಾರರಿಗೆ ತಾನು ಹೇಳೋದನ್ನಷ್ಟೇ ಅಲ್ಲ, ಅವರು ನೋಡಿದ್ದನ್ನ ತಮ್ಮ ಸ್ವಂತ ಮಾತಿನಲ್ಲಿ, ಅವ್ರೇ ಪದಗಳನ್ನ ಆಯ್ಕೆ ಮಾಡಿ ಬರಿಯೋಕೆ ಪ್ರೇರಿಸಿದನು ಅನ್ನೋದಕ್ಕೆ ತುಂಬ ಆಧಾರಗಳಿವೆ. (ಹಬ 2:2) ಹಾಗಂತ ಅವ್ರಿಗೆ ಇಷ್ಟ ಬಂದ ಹಾಗೆ ಬರಿಯೋಕೆ ಬಿಡ್ತಿರಲಿಲ್ಲ, ಅವ್ರನ್ನ ಮಾರ್ಗದರ್ಶಿಸ್ತಿದ್ದನು. ಹೀಗೆ ಬೈಬಲಲ್ಲಿರೋ ವಿಷ್ಯಗಳು ಸರಿಯಾಗಿದ್ಯಾ, ಸತ್ಯವಾಗಿದ್ಯಾ ಮತ್ತು ತನ್ನ ಉದ್ದೇಶಕ್ಕೆ ತಕ್ಕ ಹಾಗಿದ್ಯಾ ಅನ್ನೋದನ್ನ ನೋಡ್ಕೊಂಡನು. (ಜ್ಞಾನೋ 30:5, 6) ಬರಹಗಾರರು ಒಂದು ವಿಷ್ಯನ ಬರಿಯೋ ಮುಂಚೆ ಎಷ್ಟು ಯೋಚ್ನೆ ಮಾಡ್ತಿದ್ರು, ಪದಗಳನ್ನ ಆಯ್ಕೆ ಮಾಡೋಕೆ ಎಷ್ಟು ಶ್ರಮ ಹಾಕ್ತಿದ್ರು ಅಂತ ಪ್ರಸಂಗಿ 12:9, 10ರಲ್ಲಿದೆ. (ಲೂಕ 1:1-4 ಹೋಲಿಸಿ.) ಉದಾಹರಣೆಗೆ, ಅಪೊಸ್ತಲ ಯೋಹಾನ ಒಬ್ಬ ದೇವದೂತನಿಂದ ಒಂದು ಪ್ರಕಟನೆ ಪಡ್ಕೊಂಡಾಗ ಅದನ್ನ ದೇವರು ಮಾರ್ಗದರ್ಶಿಸಿದ ತರಾನೇ ಬರೆದ.—ಪ್ರಕ 1:1, 2, 10, 11.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ