ನಿಮ್ಮ ಜ್ಞಾನಮಿತಿಯನ್ನು ವಿಕಸಿಸುವ ಉದ್ದೇಶದಿಂದ ಓದಿರಿ
ದೂರದ ಸ್ಥಳಗಳಿಗೆ ಪ್ರಯಾಣಿಸಲು, ವಿಭಿನ್ನ ಸಂಸ್ಕ್ರತಿಗಳ ಜನರನ್ನು ಸಂಧಿಸಲು, ಭಯೋತ್ಪಾದಕ ಜಲಪಾತ, ಶೋಭಾಯಮಾನವಾದ ಪರ್ವತ, ರಹಸ್ಯಗರ್ಭಿತವಾದ ಕಾಡುಗಳನ್ನು ನೋಡಿ ಮತ್ತು ಪರಿಶೋಧಿಸಿ, ವಿಚಿತ್ರ ಪಕ್ಷಿ, ಪ್ರಾಣಿ, ಮತ್ತು ಸಸ್ಯಗಳ ಕುರಿತು ಕಲಿಯಲು ನಿಮಗೆ ಎಂದಾದರೂ ಮನಸ್ಸಿದ್ದದ್ದುಂಟೆ? ಅಥವಾ, ಸಾಗರದ ತಳಕ್ಕೆ ಧುಮುಕಲು, ಹೊರಾಂತರಿಕ್ಷಕ್ಕೆ ಏರಿಹೋಗಲು, ಸೂಕ್ಷ್ಮದರ್ಶಕೀಯ ಜಗತ್ತನ್ನು ಪರೀಕ್ಷಿಸಲು, ಮಿದುಳು, ಕಣ್ಣು, ಹೃದಯಗಳ ಆಶ್ಚರ್ಯವನ್ನು ಅಭ್ಯಸಿಸಲು, ಯಾ ಜನನದ ಅದ್ಭುತವನ್ನು ನೋಡಲು ನಿಮಗೆ ಮನಸ್ಸುಂಟೆ? ಪ್ರಾಯಶಃ, ಸಮಯದಲ್ಲಿ ಹಿಂದೆ ಹೋಗಿ, ಇತಿಹಾಸ ಮತ್ತು ಭೂಸಂಶೋಧನಾ ಶಾಸ್ತ್ರದ ಮೂಲಕ ಗತ ಇತಿಹಾಸವನ್ನು ಪರೀಕ್ಷಿಸಲು ನಿಮಗೆ ಇಷ್ಟವಿದೆಯೆ?
ಈ ಎಲ್ಲ ಉದ್ರೇಕಿಸುವ ಸಾಹಸ ಕಾರ್ಯಗಳು ನಿಮಗೆ ಮುದ್ರಿತ ಪುಟಗಳ ಮೂಲಕ ದೊರೆಯುತ್ತವೆ. ನಿಮ್ಮ ಮನೆಯ ಸೌಕರ್ಯಗಳನ್ನು ಬಿಟ್ಟುಹೋಗದೆನೇ, ನೀವು ಇವೆಲ್ಲವನ್ನೂ ಪ್ರತಿಯೊಂದು ಕ್ಷೇತ್ರದ ಜ್ಞಾನಭಂಡಾರಗಳಾದ ಪುಸ್ತಕ ಮತ್ತು ಇತರ ಪ್ರಕಾಶನಗಳನ್ನು ಓದಿ ಅನುಭವಿಸಬಹುದು. ಬೈಬಲು ಹೇಳುವಂತೆ, “ಬಹುಗ್ರಂಥಗಳ ರಚನೆಗೆ ಮಿತಿಯಿಲ್ಲ.” (ಪ್ರಸಂಗಿ 12:12) ಉತ್ತಮ ವಾಚನ ಈ ಭಂಡಾರದಿಂದ ನೀವು ಹೀರಿಕೊಳ್ಳುವಂತೆ ಸಾಧ್ಯ ಮಾಡುವುದು.
ಯಾವುದನ್ನು ಜಯಿಸುವುದು ಪ್ರಯೋಜನಕರವೊ ಅಂಥ ಒಂದು ಅಡ್ಡಿ
ದುಃಖಕರವಾದ ವಿಷಯವೇನಂದರೆ, ಲೋಕವ್ಯಾಪಕವಾಗಿ 15 ವಯಸ್ಸಿನ ಮೇಲಿನ 80 ಕೋಟಿ ಜನರು ಅನಕ್ಷರಸ್ಥರು. ಇದರಿಂದಾಗಿ ಅವರ ಓದುವ ಮತ್ತು ಸಂಪರ್ಕಿಸುವ ಸಾಮರ್ಥ್ಯ ತೀರಾ ಸೀಮಿತವಾಗುತ್ತದೆ. ಇದು ಅವರ ಯೋಚನಾಸಾಮರ್ಥ್ಯವನ್ನು ತಡೆಹಿಡಿದು, ಅವರು ಓದುಗರನ್ನು ಆಶ್ರಯಿಸುವಂತೆ ಮಾಡಿ, ಅಧೀನತೆಗೊಳಗಾಗುವ ಯಾ ಶೋಷಣೆಗೊಳಗಾಗುವ ಅಪಾಯಕ್ಕೆ ಅವರನ್ನು ಬಲಿಯಾಗಿಸುತ್ತದೆ.
ಅನಕ್ಷರಸ್ಥರಿಗೆ ದೈನಂದಿನ ಮಾಮೂಲಿ ಚಟುವಟಿಕೆಗಳು ಸಹ ಮುಚ್ಚಿದ ಗುಂಡಿಗಳಾಗಬಲ್ಲವು. ದೃಷ್ಟಾಂತಕ್ಕೆ, ಬಸ್ ನಿಲ್ದಾಣ, ರೈಲ್ವೆ ಸೇಶ್ಟನ್, ವಿಮಾನ ನಿಲ್ದಾಣಗಳಲ್ಲಿ, ರಸ್ತೆಯಲ್ಲಿರುವ ದಿಕ್ಕು ದೆಸೆಗಳ ಸೂಚನೆಗಳನ್ನು ಓದಲಾಗದಿರುವಲ್ಲಿ, ಸಂಚಾರ ಗಲಿಬಿಲಿಯದ್ದಾಗುತ್ತದೆ. ಇನ್ನೊಬ್ಬನು ತಮ್ಮ ವ್ಯಕ್ತಿಪರ ಪತ್ರ, ಪ್ರಮಾಣ ಪತ್ರಗಳನ್ನು ಓದುವಂತೆ ಕೇಳಿಕೊಳ್ಳುವುದು ಯಾ ಸರಳವಾದ ಫಾರ್ಮುಗಳನ್ನು ಭರ್ತಿ ಮಾಡುವಂತೆ ಕೇಳಿಕೊಳ್ಳುವುದು ಅನನುಕೂಲ ಹಾಗೂ ನಾಚಿಕೆಯ ಕೆಲಸ. ಆಹಾರ, ಔಷಧಗಳ ಮಾಹಿತಿಗಳನ್ನು ಓದಲಾಗದ ತಾಯಂದಿರು ಅಪಾಯಕಾರಕ ವಸ್ತುಗಳನ್ನು ತಮ್ಮ ಮಕ್ಕಳಿಗೆ ಕೊಡುವ ಅಪಾಯವಿದೆ.
ಅನಕ್ಷರತೆ ದೊಡ್ಡ ತೊಂದರೆಯೆಂಬುದು ಸ್ಪಷ್ಟ. ಆದರೂ ತುಸು ಸಹಾಯ ದೊರೆಯುವಲ್ಲಿ ಅದನ್ನು ಜಯಿಸಸಾಧ್ಯವಿದೆ. ಇದು ಮಾರ್ಟೆ ಎಂಬ ಸ್ತ್ರೀಯ ಪರಿಸ್ಥಿತಿಗೆ ಹೋಲಿಕೆಯಾಗಿದೆ. 70 ವಯಸ್ಸಿನ ಈಕೆ, 20 ವರ್ಷಗಳಿಂದ ಕುರುಡಿಯಾಗಿದಳ್ದು. ಬೆಳಕು ಮತ್ತು ಬಣ್ಣಗಳ ಲೋಕ ಹೇಗಿತ್ತೆಂಬುದರ ಕೇವಲ ಜ್ಞಾಪಕ ಅವಳಿಗಿತ್ತು. ಆ ಬಳಿಕ ಒಬ್ಬ ಸರ್ಜನ್ ಅವಳ ಮೇಲೆ ಶಸ್ತ್ರಕ್ರಿಯೆ ನಡೆಸಿದರು. ಇದು, ದೃಷ್ಟಿಯ ಅದ್ಭುತಕರ ಲೋಕಕ್ಕೆ—ಮತ್ತು ಓದುವ ಸುಖಾನುಭವಕ್ಕೆ—ಅವಳ ಕಣ್ಣನ್ನು ತೆರೆಯಿತು. ಹಾಗೆಯೆ ಕಾಲೂ ಎಂಬವನಿದ್ದಾನೆ. ಅವನಿಗೆ ಈಗ 70 ವಯಸ್ಸು. ಯುವಕನಾಗಿದ್ದಾಗ ಅವನು ಮುದ್ರಿತ ಪುಟದ ವಿಷಯದಲ್ಲಿ “ಕುರುಡ”ನಾಗಿದ್ದನು. ಅವನಿಗೆ ಓದಲಿಕ್ಕೆ ಬರುತ್ತಿರಲಿಲ್ಲ. ಆದರೆ ಅವನು ಒಂದು ಸಾಕ್ಷರತಾ ಕ್ಲಾಸಿಗೆ ಸೇರಿದನು. ಅವನೀಗ ಮೂರು ಭಾಷೆಗಳಲ್ಲಿ ಓದಿ ಬರೆಯುತ್ತಾನೆ.
ಮಾರ್ಟೆಯಂತಿರುವವರು ಕೆಲವರೇ ಇರಬಹುದಾದರೂ ಓದಲು ಕಲಿತು ತಮ್ಮ ಅಡಿತ್ಡಡೆಯನ್ನು ಕಾಲೂವಿನಂತೆ ಜಯಿಸಿರುವವರು ಸಾವಿರಾರು ಮಂದಿ. ಹೌದು, ಅದು ರಾತ್ರಿಬೆಳಗಾಗುವುದರೊಳಗೆ ಸಂಭವಿಸುವುದಿಲ್ಲವೆಂಬುದು ಖರೆ. ಇದಕ್ಕೆ ಸಮಯ, ಪ್ರಯತ್ನ, ಮತ್ತು ಎಲ್ಲಕ್ಕೂ ಮಿಗಿಲಾಗಿ, ಹೇರಳ ಪ್ರೋತ್ಸಾಹನೆ ಮತ್ತು ಸಹಾಯ ಅಗತ್ಯ. ನೀವು ಯಾವನಿಗಾದರೂ ಸಹಾಯ ಮಾಡಬಲ್ಲಿರೆ? ಯೆಹೋವನ ಸಾಕ್ಷಿಗಳು ಅನೇಕ ದೇಶಗಳಲ್ಲಿ, ಕಾಲೂವಿಗೆ ಸಹಾಯ ಮಾಡಿದ ರೀತಿಯ ಸಾಕ್ಷರತಾ ಕ್ಲಾಸುಗಳನ್ನು ನಡೆಸುತ್ತಾರೆ. ಮತ್ತು ಇದು ಸಾಕ್ಷಿಗಳ ಮಧ್ಯೆ ಇರುವ ಉನ್ನತ ಮಟ್ಟದ ಸಾಕ್ಷರತೆಗೆ ಸಹಾಯ ಮಾಡಿದೆ. ಉದಾಹರಣೆಗೆ, ನೈಜೀರಿಯದಲ್ಲಿ, ಯೆಹೋವನ ಸಾಕ್ಷಿಗಳ ಮಧ್ಯೆ ಇರುವ ಸಾಕ್ಷರತೆಯ ಪ್ರಮಾಣ ಇತರ ಜನಸಂಖ್ಯೆಗಿಂತ ಇಮ್ಮಡಿ ಇದೆ.
ಹೆಚ್ಚು ಉತ್ತಮ ವಾಚಕರಾಗಿರಿ
ನಿಮಗೆ ಅನಕ್ಷರತೆಯ ಸಮಸ್ಯೆ ಪ್ರಾಯಶಃ ಇರಲಿಕ್ಕಿಲ್ಲ. ಆದರೆ ನೀವೆಷ್ಟು ಉತ್ತಮ ವಾಚಕರು? ಒಂದು ವೇಳೆ ನೀವು ಶ್ರಮಪಟ್ಟು ಓದುತ್ತಾ ಹಿಮ್ಮರಳುವವರಾಗಿರಬಹುದು, ಅಂದರೆ, ಒಂದು ಗೆರೆ ಯಾ ವಾಕ್ಯದ ಅರ್ಧದಲ್ಲಿ ವಾಡಿಕೆಯಾಗಿ ನಿಂತು, ಅದನ್ನು ಪುನಃ ಓದಲು ನೀವು ಹಿಂದೆ ಹೋಗುವವರಾಗಿರಬಹುದು. ಅಥವಾ, ಪದಗಳನ್ನು ತಪ್ಪಾಗಿ ಉಚ್ಚರಿಸುತ್ತಿರಬಹುದು ಅಥವಾ ಅವುಗಳ ಅರ್ಥ ತಿಳಿಯವುದು ನಿಮಗೆ ಕಷ್ಟವಾಗಬಹುದು. ಈ ಸಮಸ್ಯೆಗಳನ್ನು ಬಗೆಹರಿಸುವುದು ಸಾಧ್ಯವೆ?
ಹದಿಮೂರು ವಯಸ್ಸಿನ ಬೇಅಟ್ರೀಸ್ಗೆ ಪದಗಳನ್ನು ವಿಚಾರಗಳೊಂದಿಗೆ ಒಂದುಗೂಡಿಸುವುದು ಸಾಧ್ಯವಾಗಿದ್ದರೂ ಅವುಗಳನ್ನು ಉಚ್ಚರಿಸುವುದು ಕಷ್ಟವಾಗುತ್ತಿತ್ತು. ಅವಳು “ವ್ಯಕ್ತಿ”ಯನ್ನು “ಯಾವನೊ ಒಬ್ಬ”ನೆಂದೂ “ಕಟ್ಟಡ”ವನ್ನು “ಮನೆ” ಎಂದೂ ಓದುತ್ತಿದ್ದಳು. ಒಬ್ಬನು ಅವಳಿಗೆ ಭಾಷಾಧ್ವನಿ ನಿರೂಪಕ—ವ್ಯಂಜನ ಮತ್ತು ಸ್ವರಾಕ್ಷರಗಳ ಸದ್ದು ಕೂಡಿಸಿ ಇತರ ಸದ್ದುಗಳನ್ನು ಮಾಡುವ ವಿಧ—ವನ್ನು ಕಲಿಸಿದರು. ಅವನು ಬೈಬಲ್ ಕಥೆಗಳ ನನ್ನ ಪುಸ್ತಕ (My Book of Bible Stories) ಎಂಬ ಪುಸ್ತಕವನ್ನು ಅವಳು, ಅದರ ರೆಕಾರ್ಡಿಂಗನ್ನು ಕೇಳುತ್ತಿರುವಾಗ ಓದುವಂತೆಯೂ ಪ್ರೋತ್ಸಾಹಿಸಿದನು.a ಇದರ ಪರಿಣಾಮವಾಗಿ ಅವಳಿಗೆ ಪದಗಳ ಮತ್ತು ಅವುಗಳ ಉಚ್ಚಾರಣೆಗಳ ತಿಳಿವಳಿಕೆ ಹೆಚ್ಚಾಯಿತು. ಮತ್ತು ಈಗ ಅವಳಿಗೆ ಓದುವುದು ಹೆಚ್ಚು ಇಷ್ಟಕರವಾಗಿದೆ.
ಪ್ರಾಯಶಃ ನೀವು ಸಹ ಧ್ವನಿನಿರೂಪಣವನ್ನು ಉತ್ತಮಗೊಳಿಸಬೇಕಾಗಿರಬಹುದು. ನೀವು ಈ ಲೇಖನವನ್ನು ಓದುತ್ತಿರುವುದರಿಂದ, ಅಕ್ಷರಗಳು ಯಾವುವೆಂದು ಆಗಲೇ ಬಲ್ಲಿರಿ. ಈ ಜ್ಞಾನವನ್ನು ಉಚ್ಚಾರಣೆಯ ಅಭ್ಯಾಸಗಳಲ್ಲಿ ಪ್ರಯೋಗಿಸಿರಿ. ಒಂದು ಪದವನ್ನು ತಕ್ಕೊಂಡು, ಅವುಗಳನ್ನು ಅಕ್ಷರಗಳಾಗಿ ಒಡೆದು, ಪ್ರತಿ ಅಕ್ಷರವನ್ನು ಉಚ್ಚರಿಸಿರಿ. (ಉದಾಹರಣೆ: ಸ್ವ-ರ-ಅ-ಕ್ಷ-ರ) ಆ ಬಳಿಕ ಅವುಗಳನ್ನು ಒಟ್ಟುಗೂಡಿಸಿ ಪೂರ್ತಿಯಾಗಿ ಉಚ್ಚರಿಸಿರಿ. ಇತರ ಪದಗಳನ್ನೂ ಹೀಗೆಯೆ ಓದುತ್ತಾ ಅಭ್ಯಾಸ ಮಾಡಿ, ಆ ಬಳಿಕ ಅಕ್ಷರಗಳನ್ನು ವಿಂಗಡಿಸದೆ ಒಟ್ಟಾಗಿ ಓದಲು ಪ್ರಯತ್ನಿಸಿರಿ. ಪದಗಳನ್ನು ಉಚ್ಚರಿಸದೆ ಇಡೀ ಪದಗಳನ್ನು ಗುರುತಿಸಲು ಕಲಿಯಿರಿ.
ಉತ್ತಮ ಓದುಗರು ಶಬ್ದಗಳನ್ನು ಬಿಡಿಯಾಗಿ ಓದುವುದಿಲ್ಲ. ಅವರು ಇಡೀ ಪದಸರಣಿಗಳನ್ನು ನೋಡಿ ವಿಚಾರ ಗುಂಪು ಯಾ ಪೂರ್ಣ ವಿಚಾರಗಳನ್ನು ಗ್ರಹಿಸುತ್ತಾರೆ. ಹೀಗೆ, ನಿಂತು ನಿಂತು, ಪ್ರತಿಯೊಂದು ಪದವನ್ನು ನೋಡುವುದರ ಬದಲು, ಪ್ರತಿಯೊಂದು ದೃಷ್ಟಿ ನೆಲೆಯಲ್ಲಿ ಅನೇಕ ಪದಗಳನ್ನು ನೋಡ ಪ್ರಯತ್ನಿಸಿರಿ. ಮತ್ತು ಪ್ರತಿಯೊಂದು ದೃಷ್ಟಿ ನೆಲೆಯು ಪ್ರಜ್ಞೆಯಿಲ್ಲದ ದೃಷ್ಟಿ ವಿರಾಮ, ಕಣ್ಷಿಕ ನೋಟವಾಗಿರಬೇಕು. ಅಭ್ಯಾಸದಿಂದ ನಿಮಗೆ ಇದನ್ನು ಮಾಡುವುದು ಸಾಧ್ಯ. ಆದರೆ ಹಿಮ್ಮರಳುವ ಪ್ರವೃತ್ತಿಯ ವಿಷಯ ಎಚ್ಚರಿಕೆ. ವಾಕ್ಯಗಳ ಭಾಗಗಳನ್ನು ಓದಲು ಹಿಂದಿರುಗುವುದು, ನಿಮ್ಮ ಯೋಚನಾಪ್ರವಾಹವನ್ನು ಮುರಿದು ಗ್ರಹಿಕೆಯನ್ನು ತಡೆಯುವುದು. ಆದುದರಿಂದ, ನೇರವಾಗಿ ಓದುತ್ತಾ ಹೋಗಲು ಅಭ್ಯಾಸಿಸಿರಿ.
ಸರಾಗವಾಗಿ ಓದುವ ಸಾಮರ್ಥ್ಯ ನಿಮಗಿರುವಾಗಲೂ ಉತ್ತಮ ಓದುಗರಾಗುವುದರಲ್ಲಿ ಇತರ ವಿಷಯಗಳು ಅಡಗಿವೆ. ಗ್ರಹಿಕೆ, ಜ್ಞಾಪಿಸಿಕೊಳ್ಳುವ ಶಕ್ತಿ, ಮತ್ತು ಸಮೃದ್ಧ ಶಬ್ದಕೋಶ—ಇವೆಲ್ಲ ಬೆನ್ನಟಲ್ಟು ಪ್ರಯೋಜನಕರವಾದ ಗುರಿಗಳು. ಜೊತೆಗಿರುವ ಬಾಕ್ಸ್ಗಳು ಇವನ್ನು ಸಾಧಿಸುವ ವಿಧಕ್ಕೆ ಕೆಲವು ಸೂಚನೆಗಳನ್ನು ಕೊಡುತ್ತವೆ. ಈ ಸೂಚನೆಗಳನ್ನು ಉಪಯೋಗಿಸಿ ನೀವು ಹೇಗೆ ಮುಂದುವರಿಯುತ್ತಿದ್ದೀರೆಂದು ಏಕೆ ಪರೀಕ್ಷಿಸಬಾರದು?
ಸಮರ್ಪಕವಾದ ಪುಸ್ತಕಗಳನ್ನು ಆಯ್ದುಕೊಳ್ಳಿರಿ
ಹೆಚ್ಚಿದ ಓದುವ ಸಾಮರ್ಥ್ಯದಿಂದಾಗಿ ಜ್ಞಾನದ ಒಂದು ಜಗತ್ತು—ಮುದ್ರಿತ ಪುಟಗಳಲ್ಲಿ ದೊರೆಯುವ ಜ್ಞಾನೈಶ್ವರ್ಯ—ನಿಮಗೆ ತೆರೆಯುವುದು. ಟೀವೀ ಮತ್ತು ವಿಡಿಯೊಟೇಪ್ಗಳ ಮೂಲಕ ನೀವು ಇವುಗಳಲ್ಲಿ ಕೆಲವನ್ನು ಕಲಿಯಬಲ್ಲಿರೆಂಬುದು ನಿಶ್ಚಯ. ಆದರೆ ಓದುವಿಕೆ ನಿಮ್ಮ ಯೋಚನಾ ಕಾರ್ಯಗತಿಯನ್ನು, ನಿಮ್ಮ ಕಲ್ಪನೆಯನ್ನು, ಮತ್ತು ತಿಳಿಯಪಡಿಸುವ ಯೋಗ್ಯತೆಯನ್ನು ಉದ್ರೇಕಿಸಿ ಅಭಿವೃದ್ಧಿಗೊಳಿಸುತ್ತದೆ. ಅದು ನಿಮಗೆ ಜ್ಞಾಪಿಸಿಕೊಳ್ಳಲು, ಒಂದು ವಿಷಯದಲ್ಲಿ ಮಾತಾಡಲು, ಮತ್ತು ಅನೇಕ ವಿಷಯಗಳ ಸಂಬಂಧದಲ್ಲಿ ಬರೆಯಲು ಬೇಕಾದ ಪದಗಳನ್ನೂ ಮಾನಸಿಕ ಚಿತ್ರಗಳನ್ನೂ ಕೊಟ್ಟು, ನಿಮ್ಮನ್ನು ಒಡನಾಡಿಯಾಗಲು ರಸಕರವಾದ ವ್ಯಕ್ತಿಯನ್ನಾಗಿ ಮಾಡುತ್ತದೆ.
ಆದರೂ, ಪರಿಶೋಧಿಸಲು ಇಷ್ಟೊಂದು ವಿಷಯಗಳಿರುವಾಗ ಆರಂಭಿಸುವುದಾದರೂ ಎಲ್ಲಿಂದ? ಬೈಬಲಿನ ವಚನವೊಂದು, “ಬಹುಗ್ರಂಥಗಳ ರಚನೆಗೆ ಮಿತಿಯಿಲ್ಲ; ಅತಿ ವ್ಯಾಸಂಗವು ದೇಹಕ್ಕೆ ಆಯಾಸ”ವೆಂದು ಹೇಳುತ್ತದೆ. (ಪ್ರಸಂಗಿ 12:12) ನೀವು ಎಲ್ಲವನ್ನೂ ಓದಲಾರಿರಿ—ಸಮಸ್ತ ವಿಷಯಗಳು ಹಿತಕರವೂ ಅಲ್ಲ, ಸತ್ಯವೂ ಅಲ್ಲ. ಆದುದರಿಂದ ಆಯ್ಕೆ ಮಾಡಿರಿ. ನಿಮ್ಮ ವ್ಯಕ್ತಿತ್ವಕ್ಕೆ ಉತ್ತಮ ಆಕಾರವನ್ನು ಕೊಡುವಂಥವುಗಳನ್ನು ಓದುವಲ್ಲಿ, ಅದು ನಿಮಗೆ ಉದ್ಯೋಗ, ಶಾಲೆ, ಯಾ ನಿಮ್ಮ ಕುಟುಂಬದ ಜವಾಬ್ದಾರಿಯನ್ನು ಪರಾಮರಿಸುವುದರಲ್ಲಿ ಸಹಾಯ ನೀಡುವುದು. ನೀವು ಎಚ್ಚರ!ದಂಥ ಅಂತಾರಾಷ್ಟ್ರೀಯ ಪ್ರಕಾಶನಗಳನ್ನು ಓದುವಲ್ಲಿ ನಿಮ್ಮ ಜ್ಞಾನಮಿತಿಯನ್ನು ವಿಕಸಿಸಬಲ್ಲಿರಿ. ಕೆಲವೇ ಪುಟಗಳಿಂದ, ಲೋಕವ್ಯಾಪಕವಾಗಿ ಶೇಖರಿಸಿರುವ ಮಾಹಿತಿಯಲ್ಲಿ ಆನಂದಿಸಬಲ್ಲಿರಿ.
ಆಯ್ಕೆ ಮಾಡುವ ಸಾಮರ್ಥ್ಯ ನಿಮ್ಮ ಓದುವಿಕೆಯನ್ನು ಉದ್ದೇಶ ಸಾಧಕವಾಗಿ ಮಾಡಿ, ನಿಮಗೆ ಪ್ರಾಯೋಗಿಕ, ಬೌದ್ಧಿಕ, ಮತ್ತು ಆತ್ಮಿಕ ಪ್ರಯೋಜನಗಳನ್ನು ದೊರಕಿಸುವುದು. ಆದುದರಿಂದ ಉತ್ತಮ ಆಯ್ಕೆ ಮಾಡಿ, ಮನೆಯಲ್ಲಿ, ಉದ್ಯೋಗ ಸ್ಥಳದ ವಿರಾಮ ಸಮಯದಲ್ಲಿ, ಕಾಯುತ್ತಿರುವಾಗ, ಪ್ರಯಾಣಿಸುತ್ತಿರುವಾಗ, ಮತ್ತು ಇತರ ಸಂದರ್ಭಗಳಲ್ಲಿ ಓದಲು ಸಮಯವನ್ನು ಖರೀದಿಸಿರಿ. ಓದಿರಿ—ಅದು ನಿಮ್ಮ ಜ್ಞಾನಮಿತಿಯನ್ನು ವಿಕಸಿಸುವುದು. (g91 7/22)
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಪ್ರಕಾಶನ.
[ಪುಟ 29ರಲ್ಲಿರುವಚೌಕ]
ಗ್ರಹಿಕೆಯನ್ನು ಉತ್ತಮಗೊಳಿಸುವ ವಿಧ
● ಓದುತ್ತಿರುವಾಗ ಕ್ರಿಯಾಶೀಲತೆಯಿಂದ ಯೋಚಿಸುತ್ತಾ, ಪ್ರಶ್ನೆ ಕೇಳುತ್ತಾ, ತೀರ್ಮಾನಕ್ಕೆ ಬರುತ್ತಾ ಓದಿರಿ.
● ಲೇಖನದ ಮುಖ್ಯ ವಿಷಯ ಮತ್ತು ಉಪ ಶಿರೋನಾಮಗಳನ್ನು ಮನಸ್ಸಿನಲ್ಲಿಡಿರಿ.
● ಮುಖ್ಯ ವಿಷಯದೊಂದಿಗೆ ಪ್ರತಿ ಪರಿಚ್ಛೇದ
ಹೇಗೆ ಜೋಡಿಸಲ್ಪಟ್ಟಿದೆ ಎಂದು ನೋಡಲು ಪ್ರಯತ್ನಿಸಿರಿ.
● ನಿಮಗೆ ಆಗಲೆ ತಿಳಿದಿರುವ ವಿಷಯಕ್ಕೆ ಈ ವಿಷಯವನ್ನು ಸಂಬಂಧಿಸಿರಿ.
● ಆ ವಿಷಯವನ್ನು ನಿಮ್ಮ ಜೀವಿತ ಮತ್ತು ಅನುಭವಕ್ಕೆ ಅನ್ವಯಿಸಿರಿ.
ಹೆಚ್ಚು ದೊಡ್ಡ ಶಬ್ದಕೋಶವನ್ನು ಬೆಳೆಸಿರಿ
● ಓದುತ್ತಿರುವಾಗ ಅಪರಿಚಿತ ಶಬ್ದಗಳನ್ನು ಗುರುತು ಮಾಡಿರಿ.
● ಪೂರ್ವಾಪರದಲ್ಲಿ ಆ ಶಬ್ದಗಳು ಹೇಗೆ ಬಳಸಲ್ಪಟ್ಟಿವೆ ಎಂದು ಗಮನಿಸಿರಿ.
● ಓದುತ್ತಿರುವಾಗಲೇ ಶಬ್ದದ ಅರ್ಥಗಳಿಗಾಗಿ ಒಂದು ಡಿಕ್ಸನೆರಿಯನ್ನು ನೋಡಿರಿ.
● ಶಬ್ದಗಳನ್ನು ಸರಿಯಾಗಿ ಉಚ್ಚರಿಸಲು ಕಲಿಯಿರಿ.
● ಸಂಭಾಷಣೆಯಲ್ಲಿ ಇತರರೊಂದಿಗೆ ಹೊಸ ಶಬ್ದಗಳನ್ನು ಬಳಸುವುದನ್ನು ಅಭ್ಯಾಸಿಸಿರಿ.