ಒಂಟಿತನ ಗುಪ್ತವಾದ ಯಾತನೆ
ಗುಂಪೊಂದರಲ್ಲಿ ಅವರನ್ನು ನೀವು ಗುರುತಿಸಬಲ್ಲಿರೋ? ಒಂಟಿತನವು ಅವರ ಮುಖಗಳಲ್ಲಿ ವ್ಯಕ್ತವಾಗುತ್ತದೊ? ಅವರು ನಿಮ್ಮನ್ನು ಅಭಿವಂದಿಸುವಾಗ, ಅವರ ನಗುವು ಅದನ್ನು ಮರೆಮಾಡುತ್ತದೊ? ಅವರ ನಡೆಯಿಂದ, ಅವರ ನಿಲುವಿನಿಂದ ನೀವದನ್ನು ಹೇಳಬಲ್ಲಿರೊ? ಪಾರ್ಕಿನ ಕಲ್ಲಿನ ಆಸನದ ಮೇಲೆ ಕುಳಿತುಕೊಂಡಿರುವ ಒಬ್ಬ ವೃದ್ಧ ವ್ಯಕ್ತಿಯನ್ನು ಅಥವಾ ಕಲಾ ಪ್ರದರ್ಶನ ಮಂದಿರದಲ್ಲಿ ತಾನೇ ಇರುವ ಯುವ ಸ್ತ್ರೀಯನ್ನು ಗಮನಿಸಿ—ಅವರು ಒಂಟಿತನದಿಂದ ಪೀಡಿಸಲ್ಪಟ್ಟವರಾಗಿದ್ದಾರೊ? ತಾಯಿ, ಮಗಳು, ಮತ್ತು ಮೊಮ್ಮಗುವಿನಿಂದ ಸೂಚಿಸಲ್ಪಟ್ಟ ಮೂರು ಸಂತತಿಗಳವರು ಪೇಟೆಯಲ್ಲಿ ಸಂಚರಿಸುತ್ತಿರುವುದನ್ನು ಗಮನಿಸಿ. ಅವರು ಸಾಕಷ್ಟು ಸಂತೋಷಿತರಾಗಿರುವಂತೆ ಕಾಣುವರು, ಆದರೆ ನೀವದನ್ನು ನಿಶ್ಚಯವಾಗಿ ಹೇಳಬಲ್ಲಿರೊ? ನಿಮ್ಮ ಸಹೋದ್ಯೋಗಿಗಳನ್ನು ಪರಿಗಣಿಸಿ. ಕುಟುಂಬಗಳನ್ನು ಪೋಷಿಸುವ ಮತ್ತು ಅವರನ್ನು ಹಿತಕರವಾಗಿ ಬೆಂಬಲಿಸಿಕೊಳ್ಳಲು ಸಾಕಾದಷ್ಟು ಆದಾಯವನ್ನು ಹೊಂದಿದ್ದು ಸಂತೋಷಿತರಾಗಿರುವ ಜನರು ಅವರಾಗಿದ್ದಾರೆಂದು ನೀವು ತಿಳಿದಿರಬಹುದು. ಆದರೂ, ಅವರಲ್ಲಿ ಒಬ್ಬನು “ನಾನು ಒಬ್ಬೊಂಟಿಗನು” ಎಂದು ನಿಜವಾಗಿಯೂ ಹೇಳಬಲ್ಲವನಾಗಿರುವುದು ಸಾಧ್ಯವೊ? ಮತ್ತು ಸಂತೋಷವುಳ್ಳ, ಕ್ರಿಯಾಶೀಲ ಹದಿವಯಸ್ಕನೊಬ್ಬನು ಏಕಾಂಗಿಯಾಗಿರಲು ಯಾವ ಸಾಧ್ಯತೆಗಳಿವೆ? ಈ ಪ್ರಶ್ನೆಗಳಿಗೆ ನೀಡಲ್ಪಡುವ ಉತ್ತರಗಳು ನಿಮ್ಮನ್ನು ಆಶ್ಚರ್ಯಗೊಳಿಸಬಹುದು.
ವೆಬ್‌ಸ್ಟರ್ಸ್ ನೈನ್ತ್ ನ್ಯೂ ಕಲೀಜಿಯೆಟ್ ಡಿಕ್‌ಷನರಿ “ಏಕಾಂಗಿ” ಶಬ್ದದ ಅರ್ಥವನ್ನು “ಒಂದು ನಿರಾಶಾದಾಯಕ ಅಥವಾ ಏಕಾಂತತೆಯ ಭಾವನೆಯನ್ನು ಉತ್ಪಾದಿಸುವುದು” ಎಂದು ವಿವರಿಸುತ್ತದೆ. ಏನನ್ನಾದರೂ ಕಳೆದುಕೊಳ್ಳುವ, ಸದಾ ವ್ಯಕ್ತಿಯೊಬ್ಬನ ಬಾಹ್ಯ ತೋರಿಕೆಯಲ್ಲಿ ಗೋಚರವಾಗದಿರುವ, ಮತ್ತು ಆಂತರಿಕ ಶೂನ್ಯತೆಯ ಕುರಿತಾದ ಒಂದು ಅನಿಸಿಕೆಯು ಅದಾಗಿದೆ. “ನಮ್ಮ ಸಮಾಜದಲ್ಲಿ, ಒಂಟಿತನವು ನಾವು ಬಹಿರಂಗಪಡಿಸದ ಒಂದು ರಹಸ್ಯವಾಗಿದೆ—ಕೆಲವೊಮ್ಮೆ ನಾವು ಒಂಟಿಗರಾಗಿದ್ದೇವೆ ಎಂಬುದನ್ನು ಸ್ವತಃ ನಾವು ಒಪ್ಪಿಕೊಳ್ಳುವುದಿಲ್ಲ. ಒಂಟಿತನಕ್ಕೆ ಒಂದು ಕಳಂಕ ಅಂಟಿಕೊಂಡಿದೆ. ನೀವು ಒಬ್ಬೊಂಟಿಗರಾಗಿರುವುದಾದರೆ, ಅದು ನಿಮ್ಮ ಸ್ವಂತ ದೋಷವಾಗಿರಲೇ ಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿರುತ್ತದೆ. ಇಲ್ಲದಿದ್ದರೆ, ನಿಶ್ಚಯವಾಗಿಯೂ ನಿಮಗೆ ಅನೇಕ ಮಂದಿ ಸ್ನೇಹಿತರಿರುತ್ತಿದ್ದರು, ಅಲ್ಲವೆ?” ಎಂದು ಸಂಶೋಧಕಿಯೊಬ್ಬಳು ಹೇಳುತ್ತಾಳೆ. ವಿಶೇಷವಾಗಿ ನಾವು ಇತರರಿಂದ ಯುಕ್ತವಾಗಿರುವುದಕ್ಕಿಂತಲೂ ಅಧಿಕವಾದುದನ್ನು ನಿರೀಕ್ಷಿಸುವಾಗ ಅಥವಾ ಒತ್ತಾಯಿಸುವಾಗ ಇದು ಸತ್ಯವಾಗಿರಬಲ್ಲದು.
ಒಂಟಿ ಸ್ತ್ರೀಯರು
ಪುರುಷರಿಗಿಂತಲೂ ಹೆಚ್ಚಾಗಿ ಎಲ್ಲಾ ವಯೋಮಿತಿಗಳ ಸ್ತ್ರೀಯರು—ವಿಶೇಷವಾಗಿ ವಿವಾಹಿತ ಸ್ತ್ರೀಯರು—ಜೀವಿತದಿಂದ ಅಧಿಕವಾದದ್ದನ್ನು ನಿರೀಕ್ಷಿಸುತ್ತಾರೆಂಬುದನ್ನು ಪರಿಣತರು ಒಪ್ಪುವಂತೆ ತೋರುತ್ತದೆ. ವಿವೇಚನೆಯುಳ್ಳವರಾಗಿಯೆ ವಿಧವೆಯರು, ವಿಚ್ಛೇದಿತ ಸ್ತ್ರೀಯರು, ಮತ್ತು ವಯಸ್ಸಾದ ಒಂಟಿ ಸ್ತ್ರೀಯರು ಕೆಲವೊಮ್ಮೆ ಒಬ್ಬೊಂಟಿಗರಾಗಿರುತ್ತಾರೆ. ಆದರೆ ಸಂತೋಷಿತರಂತೆ ತೋರುವ ಕುಟುಂಬಗಳೊಂದಿಗಿರುವ ವಿವಾಹಿತ ಸ್ತ್ರೀಯರ ಕುರಿತೇನು? ಉದಾಹರಣೆಗೆ, 40 ವರ್ಷ ಪ್ರಾಯದ ಶಾಲಾ ಉಪಾಧ್ಯಾಯಿನಿಯೊಬ್ಬಳಿಂದ ಬಂದ ಈ ರೋದನವನ್ನು ಪರಿಗಣಿಸಿ: “ಸ್ನೇಹಿತರೊಂದಿಗೆ ಕಳೆಯಲು ನನಗೆ ಸಮಯವಿಲ್ಲ; ಅದರ ವಿಪರೀತ ನಷ್ಟದ ಅನಿಸಿಕೆ ನನಗಾದರೂ ಅದನ್ನು ಹೇಳುವಾಗ ಸಹ ನನಗೆ ಕಳವಳದ ಭಾವನೆಯುಂಟಾಗುತ್ತದೆ. ಒಂಟಿಯಾಗಿರುವುದರ ಕುರಿತು ನಾನು ಹೇಗೆ ದೂರಬಲ್ಲೆನು . . . ? ನನ್ನ ಸಂಪೂರ್ಣ ಪರಿಸ್ಥಿತಿಯನ್ನು ನೋಡುವಾಗ, ಒಂದು ಅದ್ಭುತವಾದ ವಿವಾಹ, ಒಳ್ಳೆಯ ಮಕ್ಕಳು, ಒಂದು ಸುಂದರವಾದ ಮನೆ, ನಾನು ಆನಂದಿಸುವಂತಹ ಒಂದು ಉದ್ಯೋಗವು ನನಗಿದೆ. ನಾನೇನನ್ನು ಪೂರೈಸಿದ್ದೇನೊ ಅದರ ಕುರಿತು ನಾನು ಹೆಮ್ಮೆಪಡುವವಳಾಗಿದ್ದೇನೆ. ಆದರೆ ಯಾವುದೋ ಒಂದು ವಿಷಯ ಇಲ್ಲದವಳಾಗಿದ್ದೇನೆ.”
ಸ್ತ್ರೀಯರು ತಮ್ಮ ಗಂಡಂದಿರನ್ನು ನಿಜವಾಗಿ ಪ್ರೀತಿಸುತ್ತಿರುವುದಾದರೂ ಮತ್ತು ಅವರಿಗಾಗಿ ತಮ್ಮನ್ನು ಮೀಸಲಾಗಿಟ್ಟುಕೊಂಡರೂ ಮತ್ತು ತದ್ರೀತಿಯ ಒಂದು ಪ್ರತಿಕ್ರಿಯೆಯನ್ನು ಅವರ ಸಂಗಾತಿಗಳಿಂದ ಪಡೆದುಕೊಂಡಿರುವುದಾದರೂ, ಸಹವಾಸಕ್ಕಾಗಿರುವ ಅವರ ಎಲ್ಲಾ ಆವಶ್ಯಕತೆಗಳನ್ನು ಅಂತಹ ಪ್ರೀತಿಯು ಪೂರ್ಣಗೊಳಿಸಬೇಕೆಂದಿರುವುದಿಲ್ಲ. ಮೇಲೆ ಉಲ್ಲೇಖಿಸಲ್ಪಟ್ಟ ಶಾಲಾ ಉಪಾಧ್ಯಾಯಿನಿಯು ವಿವರಿಸುವುದು: “ನನ್ನ ಗಂಡನು ನನ್ನ ಅತ್ಯುತ್ತಮ ಸ್ನೇಹಿತನಾಗಿರುವುದಾದರು ಕೂಡ, ಸ್ತ್ರೀಯರಲ್ಲಿ ಒಳ್ಳೆಯ ಸ್ನೇಹಿತೆಯರನ್ನು ಹೊಂದಿರದೆ ಇರುವುದಕ್ಕೆ ಇದು ಪರಿಹಾರವನ್ನು ಒದಗಿಸುವುದಿಲ್ಲ. ಪುರುಷರು ಕಿವಿಗೊಡಬಹುದು, ಆದರೆ ಸ್ತ್ರೀಯರು ಆಲಿಸುತ್ತಾರೆ. ನಾನು ಎಷ್ಟು ಭಾವಪರವಶಳಾಗಿದ್ದೇನೆಂಬದನ್ನು ತಿಳಿದುಕೊಳ್ಳಲು ನನ್ನ ಗಂಡನು ಬಯಸುವುದಿಲ್ಲ. ಶೀಘ್ರವಾಗಿ ಕ್ರಿಯೆಗೈಯಲು ಮತ್ತು ಸಮಸ್ಯೆಯನ್ನು ಪರಿಹರಿಸಲು ಅವನು ಬಯಸುತ್ತಾನೆ. ಆದರೆ ನನ್ನ ಸ್ನೇಹಿತೆಯರು ನಾನು ಅದರ ಕುರಿತು ಮಾತಾಡುವಂತೆ ಅನುಮತಿಸುತ್ತಾರೆ. ಮತ್ತು ಕೆಲವೊಮ್ಮೆ ನನಗೆ ಮಾತಾಡುವುದೇ ಅವಶ್ಯ.”
ಸ್ತ್ರೀಯೊಬ್ಬಳು ಮರಣ ಅಥವಾ ವಿವಾಹ ವಿಚ್ಛೇದನೆಯಲ್ಲಿ ಪ್ರಿಯನೊಬ್ಬನನ್ನು ಕಳೆದುಕೊಂಡಾಗ, ಅವಳ ಭಾವನಾತ್ಮಕ ಕ್ಷೋಭೆಯು ಬಹುಶಃ ತೀವ್ರವಾಗಬಹುದು. ಒಂಟಿತನ ಬಂದು ನೆಲೆಸುತ್ತದೆ. ಸಂಕಟವನ್ನನುಭವಿಸುತ್ತಿರುವ ವಿಧವೆ ಅಥವಾ ವಿವಾಹ ವಿಚ್ಛೇದಿತೆಯು ಆಧಾರಕ್ಕಾಗಿ ಅವಳ ಕುಟುಂಬ ಮತ್ತು ಸ್ನೇಹಿತೆಯರ ಕಡೆಗೆ ತಿರುಗಬೇಕು ಮಾತ್ರವಲ್ಲ, ಹೊಸ ವಾಸ್ತವಿಕತೆಗೆ ಹೊಂದಿಸಿಕೊಳ್ಳಲಿಕ್ಕಾಗಿ ಅವಳ ಸ್ವಂತ ಬಲದ ಮೇಲೆ ಕೂಡ ಆತುಕೊಳ್ಳಬೇಕು. ಅವಳಿಗೆ ಸಂಭವಿಸಿದ ನಷ್ಟವು ಸದಾ ಅವಳ ಜೀವಿತದ ಒಂದು ಭಾಗವಾಗಿರುವುದಾದರೂ, ಕ್ರಿಯಾಶೀಲ ಜೀವಿತವನ್ನು ಮುಂದುವರಿಸುವಲ್ಲಿ ಒಂದು ಅಡಚಣೆಯಾಗುವಂತೆ ಅದನ್ನು ಸಮ್ಮತಿಸಬಾರದೆಂಬುದನ್ನು ಅವಳು ಸ್ಪಷ್ಟವಾಗಿಗಿ ಗ್ರಹಿಸಬೇಕು. ಇತರರಿಗಿಂತಲೂ ಹೆಚ್ಚು ವೇಗವಾಗಿ ಪ್ರಬಲವಾದ ವ್ಯಕ್ತಿತ್ವಗಳುಳ್ಳವರು ಹಲವು ಬಾರಿ ಅವರ ಒಂಟಿತನವನ್ನು ಜಯಿಸಬಹುದೆಂದು ಪರಿಣತರು ಕಂಡುಕೊಂಡಿದ್ದಾರೆ.
ವಿಧವೆ ಅಥವಾ ವಿವಾಹ ವಿಚ್ಛೇದಿತೆ—ಇವರಲ್ಲಿ ಯಾರು ಅಧಿಕ ಸಂಕಟವನ್ನು ಅನುಭವಿಸುತ್ತಾರೆ ಎಂಬುದರ ಕುರಿತ ಅಭಿಪ್ರಾಯದಲ್ಲಿ ವ್ಯತ್ಯಾಸವಿದೆ. 50 ಪ್ಲಸ್ ಪತ್ರಿಕೆಯು ವರದಿಮಾಡಿದ್ದು: “ಪರಸ್ಪರ ಪ್ರೋತ್ಸಾಹ ಮತ್ತು ಚರ್ಚೆಯಿಂದ ಪ್ರಯೋಜನ ಪಡೆದುಕೊಳ್ಳುವ ವಿಧವೆಯರ ಗುಂಪುಗಳೊಂದಿಗೆ ವಿವಾಹ ವಿಚ್ಛೇದಿತ ಜನರನ್ನು ನಾವು ಆಮಂತ್ರಿಸಿದಾಗ, ಎರಡೂ ಕಡೆಯವರು ಯಾರ ನೋವು ಅಧಿಕವಾದದ್ದು ಎಂಬುದರ ಕುರಿತು ವಾದಿಸುವುದನ್ನು ಕೊನೆಗೊಳಿಸುತ್ತಾರೆ. ‘ಕಡಿಮೆ ಪಕ್ಷ ನಿನ್ನ ವಿವಾಹ ಸಂಗಾತಿಯು ಬದುಕಿದ್ದಾನೆ,’ ಎಂದು ವಿಯೋಗಿಯಾದ ವ್ಯಕ್ತಿಯು ಹೇಳುವಾಗ, ‘ನನ್ನಂತೆ ನೀನು ವೈಯಕ್ತಿಕವಾಗಿ ತಿರಸ್ಕರಿಸಲ್ಪಟ್ಟಿಲ್ಲ. ಅಪಜಯದ ಅನಿಸಿಕೆ ನಿನಗಿಲ್ಲ,’ ಎಂದು ವಿಚ್ಛೇದಿತ ವ್ಯಕ್ತಿಯು ಹೇಳುತ್ತಾಳೆ.”
ಒಂಟಿ ಪುರುಷರು
ಒಂಟಿತನದ ವಿಷಯಕ್ಕೆ ಬರುವಾಗ, ಸ್ತ್ರೀ ಮತ್ತು ಪುರುಷ ಜಾತಿಯಲ್ಲಿ, ತಾವು ಪ್ರಬಲರಾಗಿದ್ದೇವೆಂದು ಪುರುಷರು ಹೆಮ್ಮೆ ಪಡಲು ಸಾಧ್ಯವಿಲ್ಲ. “ಪುರುಷರು, ಭಾವಾವೇಶಕ್ಕಿಂತಲೂ ಹೆಚ್ಚು ಶಾರೀರಿಕವಾಗಿ ವಿಷಯಗಳನ್ನು ನಿರ್ವಹಿಸುತ್ತಾರೆ. ಸ್ತ್ರೀಯರು ಅವರ ಭಾವನಾತ್ಮಕ ನೋವುಗಳ ಕುರಿತು ಪದೇ ಪದೇ ಮಾತಾಡುತ್ತಾರೆ, ಆದರೆ ಪುರುಷರು ದುಃಖವನ್ನು ಅನುಭವಿಸುವುದಕ್ಕೆ ಬದಲಾಗಿ ಮರುವಿವಾಹವಾಗಲು ಪ್ರಯತ್ನಿಸುತ್ತಾರೆ.” ಎಂದು ವಿಯೋಗಿ ವ್ಯಕ್ತಿಗಳ ಸಹಾಯಕ್ಕಾಗಿರುವ ಎಎಆರ್‌ಪಿ (ನಿವೃತ್ತ ವ್ಯಕ್ತಿಗಳ ಅಮೆರಿಕನ್ ಸಂಘ)ಯ ಕಾರ್ಯಕ್ರಮ ವಿಶೇಷಜ್ಞೆಯಾದ ಆ್ಯನ್ ಸ್ಟಡ್ನರ್ ಹೇಳುತ್ತಾರೆ. ಅವರ ಭಾವನಾತ್ಮಕ ಅನಿಸಿಕೆಗಳನ್ನು ಚರ್ಚಿಸಲು ಅವರು ಆರಂಭಿಸುವುದಕ್ಕೆ ಮೊದಲು, ಸಲಹೆಗಾರರು ವಿಯೋಗಿ ವ್ಯಕ್ತಿಗಳೊಂದಿಗೆ ಗಮನಾರ್ಹ ಸಮಯವನ್ನು ಕಳೆಯಬಹುದು.
ಸ್ತ್ರೀಯರಿಗೆ ಅಸದೃಶವಾಗಿ, ಆಂತರ್ಯದ ವಿಚಾರಗಳನ್ನು ತಿಳಿಯಪಡಿಸಲು ಒಬ್ಬ ಪುರುಷನಿಗಿಂತಲೂ ಹೆಚ್ಚಾಗಿ ಸ್ತ್ರೀಯೊಬ್ಬಳ ಸಹವಾಸವನ್ನು ಪುರುಷರು ಹುಡುಕುತ್ತಾರೆಂದು ಪರಿಣತರು ಕಂಡುಕೊಂಡಿದ್ದಾರೆ. ಭಾವನಾತ್ಮಕವಾಗಿ ಸಂಬಂಧವನ್ನು ಹೊಂದಿದ್ದೇವೆಂಬ ಅನಿಸಿಕೆಯುಂಟಾಗುವಷ್ಟು ಆಳವಾಗಿ ಪುರುಷರು ಒಬ್ಬರಿಗೊಬ್ಬರು ವಿಶ್ವಾಸವಿಡುವುದಿಲ್ಲವೆಂದು ರಾಚೆಸ್ಟರ್ ವಿಶ್ವವಿದ್ಯಾನಿಲಯದ ಒಂಟಿತನದ ಕುರಿತು ಪರಿಣತರಾದ ಡಾ. ಲ್ಯಾಡ್ ವ್ಹೀಲರ್, ತಿಳಿಸುತ್ತಾರೆ. “ಪತ್ನಿಯೊಬ್ಬಳನ್ನು ಕಳೆದುಕೊಂಡ ಅನಂತರ ಮಿತಿಮೀರಿದ ಭಾವನಾತ್ಮಕ ಪ್ರತ್ಯೇಕತೆಯನ್ನು ತಪ್ಪಿಸಿಕೊಳ್ಳುವ ಅಗತ್ಯದಿಂದಾಗಿ, ಮತ್ತು ತರುವಾಯ ಸ್ನೇಹಿತೆಯೊಬ್ಬಳೊಂದಿಗೆ ಸಂಸರ್ಗ ಮಾಡುವುದು, ವೈಧವ್ಯ ಅಥವಾ ವಿಚ್ಛೇದನೆಯ ಅನಂತರ ಅತಿ ಬೇಗನೆ ಸ್ತ್ರೀಯರಿಗಿಂತಲೂ ಹೆಚ್ಚಾಗಿ ಪುರುಷರು ಯಾಕೆ ಮರುವಿವಾಹ ಮಾಡಿಕೊಳ್ಳುತ್ತಾರೆ ಎಂಬುದನ್ನು ವಿವರಿಸಲು ಕೂಡ ಸಹಾಯಮಾಡಬಹುದು.”—50 ಪ್ಲಸ್ ಪತ್ರಿಕೆ.
ಒಂಟಿಯಾಗಿರುವ ಎಳೆಯರು
ಮಕ್ಕಳು ಮತ್ತು ಹದಿವಯಸ್ಕರು ಒಬ್ಬೊಂಟಿಗರಾಗಲು ಅನೇಕ ಕಾರಣಗಳು ಇವೆ. ಇವು ಅನೇಕ ವೇಳೆ ವೃದ್ಧ ಜನರನ್ನು ಬಾಧಿಸುವ ಕಾರಣಗಳಿಗೆ ಸಮಾನವಾಗಿವೆ. ಸ್ನೇಹಿತರನ್ನು ಬಿಟ್ಟು ಹೋಗುವುದು ಮತ್ತು ಹೊಸ ನೆಲೆಯೊಂದಕ್ಕೆ ಸ್ಥಳ ಬದಲಾಯಿಸುವುದು; ಹೊಸ ಶಾಲೆಯೊಂದರಲ್ಲಿ ಸಹಪಾಠಿಗಳಿಂದ ಮೆಚ್ಚಲ್ಪಡದಿರುವುದು; ಧಾರ್ಮಿಕ ಮತ್ತು ಕುಲ ಸಂಬಂಧವಾದ ಹಿನ್ನೆಲೆಗಳು; ಕುಟುಂಬದಲ್ಲಿ ವಿವಾಹ ವಿಚ್ಛೇದ; ಹೆತ್ತವರಿಂದ ಪ್ರೀತಿಸಲ್ಪಡುತ್ತಿಲ್ಲ ಎಂಬ ಭಾವನೆ; ವಿರುದ್ಧ ಲಿಂಗದ ಸದಸ್ಯರಿಂದ ತಿರಸ್ಕರಿಸಲ್ಪಡುವುದು—ಒಂಟಿತನವನ್ನು ಉಂಟುಮಾಡುವ ಸಂಗತಿಗಳಲ್ಲಿ ಅಂತಹ ವಿಷಯಗಳು ಗಮನಾರ್ಹವಾಗಿವೆ.
ತಮ್ಮ ಆಟದ ಕಾರ್ಯಚಟುವಟಿಕೆಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳುವುದಕ್ಕೆ ಅತಿ ಎಳೆಯರು ಅಪೇಕ್ಷಿಸುತ್ತಾರೆ. ಅವರಿಗೆ ಭಾವನಾತ್ಮಕ ಬೆಂಬಲ ಮತ್ತು ತಿಳಿವಳಿಕೆಯ ಅಗತ್ಯವಿದೆ. ಅವರಿಗೆ ಮಮತೆ ಮತ್ತು ತಮ್ಮ ಸ್ವಂತ ಅರ್ಹತೆಯ ಸಮರ್ಥನೆ ಅವಶ್ಯ. ಇತರರು ನಿಷ್ಠೆಯುಳ್ಳವರು ಮತ್ತು ನಂಬಿಕೆಗೆ ಅರ್ಹರು ಎಂಬುದನ್ನು ಅವರು ತಿಳಿಯಬೇಕು. ಪ್ರೀತಿಸಲ್ಪಡುವಾಗ, ಅವರಿಗೆ ಭದ್ರತೆಯ ಭಾವನೆಯುಂಟಾಗುತ್ತದೆ ಮತ್ತು ಅವರು ಕೂಡ ಇತರರಿಗೆ ಪ್ರೀತಿಯನ್ನು ತೋರಿಸಲು ಕಲಿಯುತ್ತಾರೆ. ಈ ಸಾಮಾಜಿಕ ಬೆಂಬಲಗಳು—ಕುಟುಂಬ, ಸಮವಯಸ್ಕರು, ಮತ್ತು ಮುದ್ದಿನ ಪ್ರಾಣಿಗಳು—ಬೇರೆ ಬೇರೆ ಮೂಲಗಳಿಂದ ಕೂಡ ಬರಬಹುದು.
ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು, ಪ್ರಾಥಮಿಕ ಪಾಠಶಾಲೆಯಿಂದ ಕಾಲೇಜು ವ್ಯಾಸಂಗದ ತನಕ, ಅವರ ಸಮಾನಸ್ಥರು ಅವರನ್ನು ಸ್ವೀಕರಿಸುವುದಿಲವ್ಲೆಂಬ ಕಾರಣದಿಂದ ಆಗಿಂದಾಗ್ಗೆ ಒಂದೇ ರೀತಿಯ ಒಂಟಿತನವನ್ನು ಅನುಭವಿಸುತ್ತಾರೆ. “ನಾನು ಏಕಾಂಗಿಯಾಗಿದ್ದೇನೆ ಮತ್ತು ನಾನು ಮಾತಾಡುವುದಿಲ್ಲವಾದ್ದರಿಂದ ನನಗೆ ಬೇಸರವಾಗುತ್ತದೆ. ಶಿಕ್ಷಕಿ ಹೇಳುವುದನ್ನು ಕೇಳುತ್ತೇನೆ, ನನ್ನ ಶಾಲಾ ಮನೆಗೆಲಸವನ್ನು ಮಾಡುತ್ತೇನೆ ಮತ್ತು ಅದಕ್ಕಿಂತ ಹೆಚ್ಚಿನದ್ದೇನೂ ನನಗೆ ಮಾಡಲಿಕ್ಕಿಲ್ಲ. ಬಿಡುವಿನ ಸಮಯವಿರುವಾಗ, ನಾನು ಅಲ್ಲೇ ಕುಳಿತು, ಚಿತ್ರ ಬಿಡಿಸುತ್ತೇನೆ ಅಥವಾ ಏನನ್ನಾದರೂ ಮಾಡುತ್ತಿರುತ್ತೇನೆ. ಎಲ್ಲರೂ ಒಬ್ಬರಿಗೊಬ್ಬರು ಮಾತಾಡುತ್ತಿರುತ್ತಾರೆ, ಆದರೆ ನನ್ನೊಂದಿಗೆ ಯಾರೂ ಮಾತಾಡುವುದಿಲ್ಲ. . . . ಸಂಸರ್ಗ ಮಾಡದೆನೇ ಸದಾ ಇರಲು ನನ್ನಿಂದ ಸಾಧ್ಯವಿಲ್ಲವೆಂದು ನಾನು ತಿಳಿದಿದ್ದೇನೆ. ಆದರೆ ಈಗ ನನಗೆ ಮಾಡಸಾಧ್ಯವಿರುವುದು ಅಷ್ಟೇ.” ಎಂದು ಪ್ರಾಢ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಪ್ರಲಾಪಿಸಿದಳು.
ಹಾಗಿದ್ದರೂ, ದೋಷವನ್ನು, ಇತರ ಜನರ ಉದಾಸೀನತೆ ಅಥವಾ ದೊಡ್ಡಸ್ತಿಕೆಯ ಮೇಲೆ ಯಾವಾಗಲೂ ನೇರವಾಗಿ ಆರೋಪಿಸಲು ಸಾಧ್ಯವಿಲ್ಲ. ವಿಪರೀತ ಲಜ್ಜೆಯುಳ್ಳವನಾಗಿರುವುದು, ಚಂಚಲ ಪ್ರಕೃತಿಯವನಾಗಿರುವುದು, ಮತ್ತು ಅತಿಯಾಗಿ ಆವೇಗಪರನಾಗಿರುವುದು ಮತ್ತು ಅವಳ ಅಥವಾ ಅವನ ಸಮವಯಸ್ಕರೊಂದಿಗೆ ಜತೆಗೂಡುವುದರಲ್ಲಿ ಕ್ಲಿಷ್ಟತೆಯನ್ನು ಹೊಂದಿರುವುದು, ಇಂತಹ ಸಾಮಾಜಿಕ ಅಥವಾ ನಡವಳಿಕೆಗೆ ಸಂಬಂಧಿಸಿದ ತೊಂದರೆಗಳು ಒಬ್ಬನಿಗೆ ಇರಬಹುದು. ಬಲಿಷ್ಠರೂ ಸ್ನೇಹ ಭಾವದವರೂ ಆಗಿರದ ಹೊರತು ಎಲ್ಲಾ ವಯೋಮಿತಿಗಳ ಯುವಜನರು ಒಂಟಿತನವನ್ನು ಅನುಭವಿಸುವಂತೆ ಅಂಗವಿಕಲತೆಯು ಸಹ ಒಂದು ವಿನಾಶಕರ ಪಾತ್ರವನ್ನು ನಿರ್ವಹಿಸಬಲ್ಲದು.
ನಿಮ್ಮನ್ನು ಸಹಾಯಿಸಿಕೊಳ್ಳುವ ಆವಶ್ಯಕತೆ
ಕ್ಯಾಲಿಫೋರ್ನಿಯದ ಫುಲ್ಲರ್‌ಟನ್‌ನಲ್ಲಿರುವ, ಕ್ಯಾಲಿಫೋರ್ನಿಯ ರಾಜ್ಯ ವಿಶ್ವವಿದ್ಯಾನಿಲಯದ ಆರೋಗ್ಯ ಶಿಕ್ಷಕಿ ಡಲೋರಸ್ ಡೆಲ್‌ಕೋಮ, ಒಂಟಿತನವನ್ನು ಎದುರಿಸಲು ವ್ಯಕ್ತಿಯೊಬ್ಬನು ಮಾಡುವ ಪ್ರಯತ್ನದ ಕುರಿತು ವ್ಯಾಖ್ಯಾನಿಸಿದಾಗ ಆಕೆ ಒಂದು ಪ್ರಾಮುಖ್ಯವಾದ ಸತ್ಯವನ್ನು ಗುರುತಿಸಿದಳು: “ವ್ಯಕ್ತಿಯ ಆಂತರ್ಯದಿಂದ ಪ್ರಯತ್ನವು ಹೊರಕ್ಕೆ ಬರುವ ಆವಶ್ಯಕತೆಯಿದೆ. ಅವನ ಸಮಸ್ಯೆಯನ್ನು ಅವನು ಕಟ್ಟಕಡೆಗೆ ಗ್ರಹಿಸಲೇಬೇಕು ಯಾಕಂದರೆ ಅವನಿಗೆ ಸಹಾಯಮಾಡಲು ಇತರ ಜನರು ಎಷ್ಟೇ ಪ್ರಯತ್ನಿಸಿದರೂ, ಅವನು ಹೆಚ್ಚು ಬಾಹ್ಯ ಪ್ರವೃತ್ತನಾಗುವಂತೆ ಸಹಾಯಮಾಡಬಲ್ಲ ವ್ಯಕ್ತಿ ಅವನೇ ಆಗಿದ್ದಾನೆ.”
ತಮ್ಮಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಷ್ಟಕರವನ್ನಾಗಿ ಕಂಡುಕೊಳ್ಳುವವರು ಒಂಟಿತನದ ಪ್ರವೃತ್ತಿಯುಳ್ಳ ವ್ಯಕ್ತಿಗಳೆಂದು ಡಾ. ವಾರನ್ ಜೋನ್ಸ್ ಗುರುತಿಸುತ್ತಾರೆ: “ಇತರರೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳುವುದರಿಂದ ಅವರನ್ನು ತಡೆಯುವಂತಹ ವಿಷಯಗಳನ್ನು ಈ ಜನರು ಉದ್ದೇಶಪೂರ್ವಕವಲ್ಲದೇ ಮಾಡುತ್ತಾರೆ. ಹೇಗೆ ಕಿವಿಗೊಡಬೇಕೆಂಬದು ಕೆಲವರಿಗೆ ತಿಳಿದಿಲ್ಲ, ಮತ್ತು ಅವರು ಸಂಭಾಷಣೆಯನ್ನು ಏಕಸ್ವಾಧೀನಗೊಳಿಸಲು ಪ್ರಯತ್ನಿಸುತ್ತಾರೆ. ಇತರರ ಕುರಿತು ಮತ್ತು ಸ್ವತಃ ಅವರ ಕುರಿತು ಹೆಚ್ಚು ವಿಮರ್ಶಾತ್ಮಕ ಪ್ರವೃತ್ತಿಯುಳ್ಳವರಾಗಿರುತ್ತಾರೆ; ಅವರು ಕೆಲವೇ ಪ್ರಶ್ನೆಗಳನ್ನು ಕೇಳುತ್ತಾರೆ, ಮತ್ತು ಹಲವು ಬಾರಿ ತುಚ್ಛವಾದ ಅಥವಾ ಆಕ್ಷೇಪಣೀಯ ವಿಷಯಗಳನ್ನು ಹೇಳುವುದರಿಂದ ಗೆಳೆತನವನ್ನು ಕಳೆದುಕೊಳ್ಳುತ್ತಾರೆ.”
ಮೂಲಭೂತವಾಗಿ ಆತ್ಮಾಭಿಮಾನದ ಕೊರತೆಯಿರುವವರ ಜೊತೆಗೆ, ಇತರರಿಗೆ ನಿವೇದಿಸಿಕೊಳ್ಳಲು ಅಗತ್ಯವಿರುವ ಸಾಮಾಜಿಕ ಕೌಶಲ್ಯಗಳ ನ್ಯೂನತೆಯುಳ್ಳ ಇತರರೂ ಇದ್ದಾರೆ. ಅವರ ಕುರಿತು, ಎವನ್ಲ್ ಮೋಶಟ ಎಂಬ ವೈದ್ಯರು ಹೇಳುವುದು: “ಒಬ್ಬೊಂಟಿಗರಾಗಿರುವ ಜನರು ಸ್ವತಃ ತಮ್ಮ ಕುರಿತು ಮಾನಸಿಕವಾಗಿ ಒಂದು ಒಳ್ಳೆಯ ಅಭಿಪ್ರಾಯವನ್ನು ಹೊಂದಿರುವುದಿಲ್ಲ. ತಿರಸ್ಕಾರವನ್ನು ನಿರೀಕ್ಷಿಸುತ್ತಾ, ಎಟಕಿಸಿಕೊಳ್ಳಲು ಅವರು ಪ್ರಯತ್ನಿಸುವುದಿಲ್ಲ.”
ಹಾಗಿದ್ದರೂ, ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಜ್ಞಾನಕ್ಕೆ ವ್ಯತಿರಿಕ್ತವಾಗಿ, ಯುವಜನರಿಗಿಂತಲೂ ವಯಸ್ಸಾದ ಸ್ತ್ರೀಯರು ಮತ್ತು ಪುರುಷರು ಕಡಿಮೆ ಒಂಟಿತನವನ್ನು ಅನುಭವಿಸುತ್ತಾರೆಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅದರ ಕಾರಣವು ಅವರಿಗೆ ತಿಳಿದಿಲ್ಲ. ವೃದ್ಧರಿಂದ ಒಂಟಿತನವು ಅನುಭವಿಸಲ್ಪಡುವಾಗ, ರಕ್ತಸಂಬಂಧಿಗಳಿಗಿಂತಲೂ ಹೆಚ್ಚಾಗಿ ಸ್ನೇಹಿತರ ಕೊರತೆಯು ಇದಕ್ಕೆ ಕಾರಣವೆಂದು ಸಹ ಅವರು ಕಂಡುಕೊಂಡಿದ್ದಾರೆ. “ವೃದ್ಧರಿಗೆ ಕುಟುಂಬ ಸಂಬಂಧಗಳು ಅಪ್ರಾಮುಖ್ಯವೆಂದು ಇದರ ಅರ್ಥವಾಗಿರುವುದಿಲ್ಲ. ಆಸರೆಗಾಗಿ ಅವರು ಕುಟುಂಬವನ್ನು ಅವಲಂಬಿಸಿರುತ್ತಾರೆ. ಆದರೆ ಅವರಿಗೆ ಆಸರೆ ನೀಡುವ ಅನೇಕ ಕುಟುಂಬಗಳನ್ನು ಅವರು ಹೊಂದಿರಸಾಧ್ಯವಿದೆ, ಆದರೂ ಸ್ನೇಹಿತರು ಇಲ್ಲದಿದ್ದಲ್ಲಿ ಅಸಾಧ್ಯ ಒಂಟಿತನವನ್ನು ಅವರು ಅನುಭವಿಸುತ್ತಾರೆ.”
ಆಪ್ತ ಸ್ನೇಹಿತರ ಆವಶ್ಯಕತೆ
ಎಲ್ಲಾ ವಯೋಮಿತಿಗಳ ಜನರಿಗೆ, ಕುಟುಂಬ ಮತ್ತು ಸಂಬಂಧಿಕರು ಒದಗಿಸಸಾಧ್ಯವಿರುವುದಕ್ಕಿಂತಲೂ ಮಿಗಿಲಾದ ಒಂದು ಆವಶ್ಯಕತೆಯನ್ನು ಆಪ್ತ ಸ್ನೇಹಿತರು ತುಂಬುತ್ತಾರೆ. ನೋಯಿಸಲ್ಪಡುತ್ತೇವೆಂಬ ಭಯವಿಲ್ಲದೆ, ತಮ್ಮನ್ನು ಹೊರಪಡಿಸಿಕೊಳ್ಳಲು ಅಥವಾ ತಮ್ಮ ಆಂತರಿಕ ವಿಚಾರಗಳನ್ನು ತಿಳಿಯಪಡಿಸಲು ನಂಬಿಕೆಗೆ ಅರ್ಹನಾದ ಒಬ್ಬನನ್ನು, ಒಬ್ಬ ಸ್ನೇಹಿತನನ್ನು, ಒಬ್ಬ ಆಪ್ತಮಿತ್ರನನ್ನು ಜನರು ಅಪೇಕ್ಷಿಸುತ್ತಾರೆ. ಅಂತಹ ಒಬ್ಬ ಸ್ನೇಹಿತನಿಲ್ಲದೆ, ಒಂಟಿತನವು ಹೆಚ್ಚಾಗಬಹುದು. ಅಂತಹ ಒಬ್ಬ ಸ್ನೇಹಿತನ ಕುರಿತು ಅಮೆರಿಕದ ಪ್ರಬಂಧಕಾರನಾದ ರಾಲ್ಫ್ ವಾಲ್ಡೊ ಎಮರ್‌ಸನ್ ಬರೆದದ್ದು: ‘ನನ್ನ ಭಾವನೆಗಳನ್ನು ನಾನು ವ್ಯಕ್ತಪಡಿಸಬಲ್ಲ ಒಬ್ಬ ವ್ಯಕ್ತಿ ಸ್ನೇಹಿತನಾಗಿದ್ದಾನೆ.’ ಅಂತಹ ಒಬ್ಬ ವ್ಯಕ್ತಿಯು ನಂಬಿಕೆಗೆ ಅರ್ಹನಾದವನಾಗಿದ್ದು ನಿಮ್ಮನ್ನು ಅಗೌರವಿಸಲು ಅಥವಾ ಇತರರು ನಿಮ್ಮನ್ನು ನೋಡಿ ನಗುವಂತೆ ಮಾಡಲು ನಿಮ್ಮ ರಹಸ್ಯಗಳು ಉಪಯೋಗಿಸಲ್ಪಡುವವೆಂಬ ವಿಶ್ವಾಸಘಾತಕತೆ ಅಥವಾ ವ್ಯಾಕುಲತೆಯ ಭಯವಿಲ್ಲದೇ ಸಂಪೂರ್ಣವಾಗಿ ನಿಮ್ಮನ್ನು ಹೊರಪಡಿಸಿಕೊಳ್ಳ ಸಾಧ್ಯವಿದೆ. ನಿಷ್ಠೆಯುಳ್ಳವರೆಂದು ನೀವು ಪರಿಗಣಿಸಬಹುದಾದ ಕೆಲವರು ಯಾವಾಗಲೂ ನಿಮ್ಮ ಭರವಸೆಗೆ ಯೋಗ್ಯರಾಗಿ ನಡೆದುಕೊಳ್ಳದಿರಬಹುದು, ಆದರೆ “ಒಬ್ಬನ ಗುಟ್ಟನ್ನು ಹೊರಪಡಿಸದ,” ಮತ್ತು “ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ,” “ಒಬ್ಬ ಮಿತ್ರನು” ಇದ್ದಾನೆ.—ಜ್ಞಾನೋಕ್ತಿ 18:24; 25:9.
ಬಿಗುಪುಳ್ಳವರಾಗಿ ಮತ್ತು ಇತರರ ಆವಶ್ಯಕತೆಯಿಲ್ಲವೆಂದು ತೋರ್ಪಡಿಸಿಕೊಳ್ಳುವವರೂ ಇದ್ದಾರೆ. ತಾವು ಸ್ವತಂತ್ರರು ಮತ್ತು ಸ್ವಾವಲಂಬಿಗಳು ಎಂದು ಅವರು ವಾದಿಸುತ್ತಾರೆ. ಆದರೂ, ಅವರು ಆಗಾಗ್ಗೆ ಪುಂಡರೆಂದು ಕರೆಯಲ್ಪಡುವ ಗುಂಪುಗಳಲ್ಲಿ ಒಟ್ಟುಗೂಡುತ್ತಾರೆ. ಮಕ್ಕಳಿಗೆ ಕ್ಲಬ್‌ಗಳಿವೆ, ಸಂಘದ ಕಟ್ಟಡಗಳನ್ನು ಕಟ್ಟುತ್ತಾರೆ, ಗ್ಯಾಂಗ್‌ಗಳನ್ನು ರಚಿಸುತ್ತಾರೆ; ಯೌವನಸ್ಥರಿಗಾಗಿ ಮೋಟಾರ್‌ಸೈಕಲ್ ಗ್ಯಾಂಗ್‌ಗಳಿವೆ; ಅಪರಾಧಿಗಳಿಗೆ ಅವರ ಅಪರಾಧವನ್ನು ರಟ್ಟು ಮಾಡದ ಆಪ್ತ ಮಿತ್ರರಿದ್ದಾರೆ; ಕುಡಿತದ ಸಮಸ್ಯೆ ಇರುವವರು ತಮ್ಮ ಚಟವನ್ನು ಜಯಿಸಲಿಕ್ಕಾಗಿ ಮದ್ಯವ್ಯಸನಿಗಳ ಅನಾಮಕ (ಆ್ಯಲ್ಕೊಹಾಲಿಕ್ ಅನಾನಿಮಸ್) ಸಂಸ್ಥೆಯನ್ನು ಸೇರುತ್ತಾರೆ; ಬೊಜ್ಜಿನ ಸಮಸ್ಯೆಯೊಂದಿಗೆ ಹೋರಾಡುತ್ತಿರುವವರು ಅದನ್ನು ಜಯಿಸುವಂತೆ ಜನರಿಗೆ ಸಹಾಯಮಾಡುವ ವೆಯ್ಟ್ ವಾಚರ್ಸ್ ಸಂಸ್ಥೆಯನ್ನು ಸೇರಿಕೊಳ್ಳುತ್ತಾರೆ. ಜನರು ಸಂಘ ಜೀವಿಗಳಾಗಿದ್ದಾರೆ; ಬೆಂಬಲಕ್ಕಾಗಿ ಅವರು ಗುಂಪಾಗಿ ಒಟ್ಟುಗೂಡುತ್ತಾರೆ. ಅವರಿಗೆ ಸಮಸ್ಯೆಗಳಿರುವಾಗಲು ಕೂಡ, ತದ್ರೀತಿಯ ಸಮಸ್ಯೆಗಳನ್ನು ಹೊಂದಿರುವ ಜನರೊಂದಿಗೆ ಸಹವಾಸಮಾಡಲು ಅವರು ಅಪೇಕ್ಷಿಸುತ್ತಾರೆ. ಮತ್ತು ಅವರು ಒಂಟಿತನವನ್ನು ಒಮ್ಮತದಿಂದ ದ್ವೇಷಿಸುತ್ತಾರೆ. ಒಂಟಿತನದ ಕುರಿತು ಏನು ಮಾಡಸಾಧ್ಯವಿದೆ?
[ಪುಟ 5 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಒಬ್ಬೊಂಟಿಗರಾಗಿರುವ ಜನರಿಗೆ ಸ್ವತಃ ತಮ್ಮ ಕುರಿತು ಒಳ್ಳೆಯ ಅಭಿಪ್ರಾಯವಿರುವುದಿಲ್ಲ”