ಒಂಟಿತನವು ನಿಮ್ಮ ಜೀವಿತವನ್ನು ಬತ್ತಿಸುವಂತೆ ಬಿಡದಿರಿ
ಒಂಟಿತನವು ವೃದ್ಧರ ಹಾಗೂ ಎಳೆಯರ ಜೀವಿತಗಳನ್ನು ಒಂದೇ ರೀತಿಯಲ್ಲಿ ಬತ್ತಿಸಬಲ್ಲದು. ಬರಹಗಾರ್ತಿ ಜೂಡಿತ್ ವೈಯಾರ್ಸ್ಟ್, ರೆಡ್ಬುಕ್ ಎಂಬ ಪತ್ರಿಕೆಯಲ್ಲಿ ಹೇಳುವುದು: “ಒಂಟಿತನವು ಹೃದಯದ ಮೇಲೆ ಒಂದು ಕಲ್ಲಿನಂತೆ ಇರುತ್ತದೆ. . . . ಒಂಟಿತನವು ನಮ್ಮನ್ನು ಬರಿದಾಗಿ ಮತ್ತು ಹತಾಶರನ್ನಾಗಿ ಮಾಡುತ್ತದೆ. ಒಂಟಿತನವು ನಮ್ಮನ್ನು ತಾಯಿಯಿಲ್ಲದ ಮಗುವಿನಂತೆ, ಎಷ್ಟೊಂದು ವಿಶಾಲವಾದ ಮತ್ತು ಚಿಂತಿಸದ ಒಂದು ಲೋಕದಲ್ಲಿ, ದಾರಿತಪ್ಪಿಹೋಗಿರುವ ಬಹಳಷ್ಟು ಚಿಕ್ಕದಾದ ಮತ್ತು ಕಳೆದುಹೋದ ಕುರಿಮರಿಯೋಪಾದಿ ಭಾವಿಸುವಂತೆ ಮಾಡುತ್ತದೆ.”—ಸಪ್ಟಂಬರ 1991.
ಮಿತ್ರರಿಂದ ಬೇರ್ಪಡಿಕೆ, ಅಪರಿಚಿತ ಪರಿಸರಗಳು, ವಿವಾಹ ವಿಚ್ಛೇದನ, ವಿಯೋಗ, ಯಾ ಸಂಸರ್ಗದಲ್ಲಿ ಕುಸಿತ—ಎಲ್ಲ ರೀತಿಯ ವಿಷಯಗಳು ನಿಮ್ಮನ್ನು ಒಬ್ಬಂಟಿಗರಾಗಿ ಮಾಡಬಲ್ಲವು. ಇತರ ಜನರಿಂದ ಸುತ್ತುವರಿಯಲ್ಪಟ್ಟಿರುವಾಗಲೂ, ಕೆಲವರು ಅತಿಯಾಗಿ ಒಬ್ಬಂಟಿಗರಾಗಿದ್ದಾರೆ.
ನೀವು ಏನು ಮಾಡಬಲ್ಲಿರಿ?
ಒಂಟಿತನವು ತಾಕಿದಾಗ, ನೀವು ಕೇವಲ ಒಬ್ಬ ನಿಸ್ಸಹಾಯಕ ಬಲಿಪಶುವಾಗಿರಬೇಕೊ? ಹೆಜ್ಜೆ ಹೆಜ್ಜೆಯಾಗಿ ಒಂಟಿತನವು ನಿಮ್ಮನ್ನು ನಾಶಮಾಡುವುದರಿಂದ ಯಾ ಜೀವಿಸಲಿರುವ ನಿಮ್ಮ ಇಚ್ಛೆಯನ್ನು ಬರಿದುಮಾಡುವುದರಿಂದ ತಡೆಯಲು ನೀವು ಏನಾದರೂ ಮಾಡಬಲ್ಲಿರೊ? ನಿಶ್ಚಯವಾಗಿ ನೀವು ಮಾಡಬಲ್ಲಿರಿ. ಹೆಚ್ಚಿನ ಸಹಾಯಕಾರಿ ಬುದ್ಧಿವಾದವು ಲಭ್ಯವಿದೆ. ದೇವರ ಪ್ರೇರಿತ ವಾಕ್ಯವಾದ ಬೈಬಲಿನಲ್ಲಿ ಹೆಚ್ಚಿನ ಒಳ್ಳೆಯ ಸಲಹೆಯು ಕೊಡಲ್ಪಟ್ಟಿದೆ. ಇಂತಹ ಉತ್ತೇಜನವು ಒಂಟಿತನದ ವಿರುದ್ಧ ಹೋರಾಡಲು ನಿಮಗೆ ಬೇಕಾಗಿದ್ದ ವಿಷಯವೇ ಆಗಿರಬಹುದು.—ಮತ್ತಾಯ 11:28, 29.
ಉದಾಹರಣೆಗೆ, ಸುಮಾರು 3,000 ವರ್ಷಗಳ ಹಿಂದೆ ಮಧ್ಯ ಪೂರ್ವದಲ್ಲಿ ಜೀವಿಸಿದ್ದ ಒಬ್ಬಾಕೆ ಯುವ ಸ್ತ್ರೀಯಾದ ರೂತಳ ಕುರಿತು ಓದುವುದನ್ನು ನೀವು ಉತ್ತೇಜನದಾಯಕವಾಗಿ ಕಂಡುಕೊಳ್ಳಬಹುದು. ಆಕೆ ಒಂಟಿತನವನ್ನು ಅನುಭವಿಸುವುದು ಬಹಳ ಸಂಭವನೀಯವಾಗಿತ್ತು. ಆಕೆಯ ಗಂಡನು ತೀರಿಕೊಂಡಾಗ, ಇಸ್ರಾಯೇಲಿನ ಅಪರಿಚಿತ ಪರಿಸರಗಳಲ್ಲಿ ಜೀವಿಸಲು ಆಕೆ ತನ್ನ ಅತೆಯ್ತೊಂದಿಗೆ ಹೋದಳು. (ರೂತಳು 2:11) ಆಕೆಗೆ ತನ್ನ ಕುಟುಂಬ ಮತ್ತು ಹಿಂದಿನ ಸ್ನೇಹಿತರು ಇಲ್ಲವಾಗಿದ್ದರೂ, ವಿಚಿತ್ರವಾದೊಂದು ದೇಶದಲ್ಲಿ ಒಬ್ಬಾಕೆ ವಿದೇಶೀಯಾಗಿದ್ದರೂ, ಒಂಟಿತನವು ಆಕೆಯನ್ನು ಸಂಪೂರ್ಣವಾಗಿ ಆವರಿಸುವಂತೆ ಆಕೆ ಅನುಮತಿಸಿದಳೆಂಬ ಯಾವ ಸೂಚನೆಯೂ ಬೈಬಲಿನಲ್ಲಿ ಇರುವುದಿಲ್ಲ. ಆಕೆಯ ಕಥೆಯನ್ನು ಬೈಬಲ್ ಪುಸ್ತಕವಾದ ರೂತಳು—ಇದರಲ್ಲಿ ನೀವು ಓದಬಲ್ಲಿರಿ.
ರೂತಳಂತೆ, ಒಂದು ಸಕಾರಾತ್ಮಕ ದೃಷ್ಟಿಕೋನವನ್ನು ಇಡುವ ಅಗತ್ಯ ನಿಮಗಿದೆ. ವಿಷಯಗಳ ಮತ್ತು ಘಟನೆಗಳ ಕುರಿತು ನೀವು ಯೋಚಿಸುವ ವಿಧವು ಒಂಟಿತನವನ್ನು ಪೋಷಿಸಬಲ್ಲದು. ನಾಲ್ಕು ವರ್ಷಗಳ ಕಾಲ ಒಂದು ಶಕ್ತಿಗುಂದಿಸುವ ಕಾಯಿಲೆಯ ಉದ್ದಕ್ಕೂ ತನ್ನ ತಂದೆಯನ್ನು ಪರಾಮರಿಸಿದ ಆ್ಯನ್, ಇದನ್ನು ಸಮರ್ಥಿಸುತ್ತಾಳೆ. ಆಕೆಯ ತಂದೆ ತೀರಿಕೊಂಡಾಗ, ಆಕೆ ವಿಪರೀತವಾಗಿ ಒಬ್ಬಂಟಿಗಳಾದಳು. “ನಾನೊಂದು ಶೂನ್ಯದಲ್ಲಿ, ಸಂಪೂರ್ಣವಾಗಿ ಅಯೋಗ್ಯಳಾಗಿ ಇರುವಂತೆ—ಇನ್ನುಮುಂದೆ ಯಾರಿಗೂ ನನ್ನ ಅಗತ್ಯ ಇರಲಿಲ್ಲವೆಂಬಂತೆ—ನನಗನಿಸಿತು,” ಎಂದು ಆಕೆ ಹೇಳುತ್ತಾಳೆ. “ಆದರೆ ನನ್ನ ಜೀವಿತವು ಈಗ ಬದಲಾಗಿದೆ ಎಂಬ ನಿಜತ್ವವನ್ನು ನಾನು ಎದುರಿಸಿದೆ, ಮತ್ತು ನನ್ನ ಒಂಟಿತನದ ವಿರುದ್ಧ ಹೋರಾಡಲು ನನಗೀಗ ಇರುವ ಪರಿಸ್ಥಿತಿಗಳ ಸದುಪಯೋಗವನ್ನು ಮಾಡಬೇಕಿತ್ತೆಂದು ನಾನು ಗ್ರಹಿಸಿದೆ.” ಕೆಲವೊಮ್ಮೆ ನಿಮ್ಮ ಪರಿಸ್ಥಿತಿಗಳನ್ನು ನೀವು ಬದಲಿಸಲಾಗುವುದಿಲ್ಲ, ಆದರೆ ಅವುಗಳ ಕಡೆಗೆ ನಿಮ್ಮ ಮನೋಭಾವವನ್ನು ನೀವು ಬದಲಿಸುವುದು ಸಂಭವನೀಯ.
ಅದು ಖಂಡಿತವಾಗಿ ಸಹಾಯ ಮಾಡುವುದಾದರೂ, ಪ್ರತಿಫಲವನ್ನೀಯುವ ಚಟುವಟಿಕೆಯಲ್ಲಿ ಕಾರ್ಯಮಗ್ನರಾಗಿರುವುದು ಒಂಟಿತನದ ವಿರುದ್ಧ ಹೋರಾಡುವುದಕ್ಕೆ ಸಮಸ್ತ ಉತ್ತರವಲ್ಲದಿದ್ದರೂ, ಅದು ಸಹಾಯ ಮಾಡುವುದು ಖಂಡಿತ. ವಿವಾಹದ ಕೇವಲ ಆರು ತಿಂಗಳುಗಳ ಅನಂತರ ವಿಧವೆಯಾದ ಐರೀನ್, ಇದು ತನ್ನ ವಿಷಯದಲ್ಲಿ ನಿಜವಾಗಿತ್ತೆಂದು ಕಂಡುಕೊಂಡಳು. “ನಾನು ಕಡಿಮೆ ಪ್ರಮಾಣದಲ್ಲಿ ಕಾರ್ಯಮಗ್ನಳಾಗಿರುವಾಗ ಒಂಟಿತನವು ಅತ್ಯಧಿಕವಾಗಿ ತಾಕಿತೆಂದು ನಾನು ನೋಡಿದೆ,” ಎಂಬುದಾಗಿ ಆಕೆ ಹೇಳುತ್ತಾಳೆ, “ಆದುದರಿಂದ ಇತರರೊಂದಿಗೆ ಒಳಗೊಳ್ಳುವ ಮತ್ತು ತಮ್ಮ ಸಮಸ್ಯೆಗಳೊಂದಿಗೆ ನಿಭಾಯಿಸುವಂತೆ ಅವರಿಗೆ ಸಹಾಯ ಮಾಡುವ ವಿಷಯದ ಮೇಲೆ ನಾನು ಕೇಂದ್ರೀಕರಿಸಿದೆ.” ಇತರರಿಗೆ ಸಹಾಯ ಮಾಡುವುದು ಸಂತೋಷವನ್ನು ತರುತ್ತದೆ, ಮತ್ತು ಒಂಟಿಯಾಗಿರುವ ಕ್ರೈಸ್ತರು ಕರ್ತನ ಕೆಲಸದಲ್ಲಿ ಹೆಚ್ಚನ್ನು ಮಾಡಲು ಕಂಡುಕೊಳ್ಳಬಲ್ಲರು.—ಅ. ಕೃತ್ಯಗಳು 20:35; 1 ಕೊರಿಂಥ 15:58.
ಸ್ನೇಹಿತರು ಸಹಾಯ ಮಾಡುವಂತೆ ಬಿಡಿರಿ
ದ ನ್ಯೂ ಯಾರ್ಕ್ ಟೈಮ್ಸ್ ಮ್ಯಾಗಜೀನ್, ಒಂಟಿ ಮಕ್ಕಳನ್ನು “ಮಿತ್ರರಾಹಿತ್ಯದ ಗಾಯಗಳ” ಮೂಲಕ ನೋಯಿಸಲ್ಪಟ್ಟಿರುವವರೋಪಾದಿ ವರ್ಣಿಸುತ್ತದೆ. (ಎಪ್ರಿಲ್ 28, 1991) ಅನೇಕ ಒಂಟಿ ಜನರು, ಯುವ ಜನರೂ ವೃದ್ಧರೂ, ತಾವು ಮಿತ್ರರಹಿತರೆಂದು ಭಾವಿಸುತ್ತಾರೆ. ಆದುದರಿಂದ, ಕಾಳಜಿವಹಿಸುವ ಕ್ರೈಸ್ತ ಸಭೆಯು ಒದಗಿಸುವ ಯಥಾರ್ಥವಾದ ಮಿತ್ರತ್ವವನ್ನು ಪಡೆಯುವುದು, ನಿಜವಾದ ಲಾಭವಾಗಿದೆ. ಸಭೆಯೊಳಗೆ ನಿಮ್ಮ ಮಿತ್ರರ ವೃತ್ತವನ್ನು ವಿಸ್ತರಿಸಲು ಕಷ್ಟಪಟ್ಟು ಶ್ರಮಿಸಿರಿ, ಮತ್ತು ಅವರಿಗೆ ಸಾಧ್ಯವಾಗುವ ಯಾವುದೇ ರೀತಿಯಲ್ಲಿ ನಿಮಗೆ ಸಹಾಯ ಮಾಡುವಂತೆ ಅವರನ್ನು ಬಿಡಿರಿ. ಸ್ನೇಹಿತರಿರುವ ಒಂದು ಸಂಗತಿಯು ಅದೇ ಆಗಿದೆ—ಕಷ್ಟದ ಸಮಯಗಳಲ್ಲಿ ಬೆಂಬಲವನ್ನು ಕೊಡಲಿಕ್ಕಾಗಿ.—ಜ್ಞಾನೋಕ್ತಿ 17:17; 18:24.
ಆದರೂ, ನಿಮ್ಮ ಭಾವನಾತ್ಮಕ ವೇದನೆಯಿಂದಾಗಿ ನೀವು, ನಿಮ್ಮ ಮಿತ್ರರು ನಿಮಗೆ ಸಹಾಯ ಮಾಡುವುದನ್ನು ನಿಜವಾಗಿಯೂ ಕಷ್ಟಕರವಾಗಿ ಮಾಡಬಹುದೆಂದು ಅರಿತುಕೊಳ್ಳಿರಿ. ಹೇಗೆ? ಬರಹಗಾರ ಜೆಫ್ರಿ ಯಂಗ್ ವಿವರಿಸುವುದು: “ಕೆಲವು ಒಂಟಿ ಜನರು . . . ಚರ್ಚೆಯನ್ನು ಏಕಸ್ವಾಧೀನ ಮಾಡುವ ಮೂಲಕವಾಗಲಿ ಯಾ ರೇಗಿಸುವ ಅಥವಾ ಸೂಕ್ತವಲ್ಲದ ವಿಷಯಗಳನ್ನು ಹೇಳುವ ಮೂಲಕವಾಗಲಿ, ಭಾವಿ ಸ್ನೇಹಿತರನ್ನು ವಿಕರ್ಷಿಸುತ್ತಾರೆ. ಒಂದು ಯಾ ಇನ್ನೊಂದು ವಿಧದಲ್ಲಿ, ತೀವ್ರವಾಗಿ ಒಂಟಿಯಾಗಿರುವ ಜನರು ನಿಕಟ ಸಂಬಂಧಗಳನ್ನು ಹಾನಿಗೊಳಿಸುವ ಪ್ರವೃತ್ತಯುಳ್ಳವರಾಗಿರುತ್ತಾರೆ.”—ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್, ಸಪ್ಟಂಬರ 17, 1984.
ಕೆಲವೊಮ್ಮೆ, ಇತರ ಜನರಿಂದ ನಿಮ್ಮನ್ನು ಪ್ರತ್ಯೇಕವಾಗಿಸಿಕೊಳ್ಳುವ ಮೂಲಕ ನೀವು ವಿಷಯಗಳನ್ನು ಹೆಚ್ಚು ಕೆಡಿಸಬಲ್ಲಿರಿ. ತನ್ನ 50 ಗಳ ವಯಸ್ಸಿನಲ್ಲಿದ್ದ ಪೀಟರ್ ಎಂಬ ಒಬ್ಬ ಮನುಷ್ಯ ಇದನ್ನು ಮಾಡಿದನು. ತನ್ನ ಹೆಂಡತಿ ಸತ್ತ ಬಳಿಕ, ತನ್ನ ಆಂತರಿಕ ಅನಿಸಿಕೆಗಳಲ್ಲಿ ಅವನಿಗೆ ಇತರರ ಸಹಾಯ ಬೇಕಾಗಿದ್ದರೂ, ಸ್ವತಃ ತಾನೇ ತನ್ನನ್ನು ಅವರಿಂದ ಪ್ರತ್ಯೇಕಿಸಿಕೊಳ್ಳುತ್ತಿರುವುದನ್ನು ಕಂಡುಕೊಂಡನು. “ಕೆಲವು ದಿನಗಳು,” ಅವನು ಹೇಳುವುದು, “ಇತರರ ಸಾಹಚರ್ಯವನ್ನು ಎದುರಿಸಲು ನನಗೆ ಸಾಧ್ಯವಾಗುತ್ತಿರಲಿಲ್ಲ, ಮತ್ತು ಸಕಾಲದಲ್ಲಿ ಸ್ವತಃ ನಾನೇ ನನ್ನನ್ನು ಜನರಿಂದ ಪ್ರತ್ಯೇಕಿಸಿಕೊಳ್ಳುತ್ತಿದ್ದೇನೆಂದು ಕಂಡುಕೊಂಡೆ.” ಇದು ಅಪಾಯಕಾರಿಯಾಗಿರಬಲ್ಲದು. ಏಕಾಂತತೆಯ ಅವಧಿಗಳು ಪ್ರಯೋಜನಕಾರಿಯಾಗಿರುವಾಗ, ಪ್ರತ್ಯೇಕವಾಗುವಿಕೆ ಹಾನಿಕಾರಕವಾಗಿದೆ. (ಜ್ಞಾನೋಕ್ತಿ 18:1) ಪೀಟರ್ ಇದನ್ನು ಗ್ರಹಿಸಿದನು. ಅವನು ಹೇಳುವುದು: “ಕಟ್ಟಕಡೆಗೆ ನಾನು ಇದನ್ನು ಜಯಿಸಿದೆ, ನನ್ನ ಸನ್ನಿವೇಶವನ್ನು ಎದುರಿಸಿದೆ, ಮತ್ತು, ನನ್ನ ಸ್ನೇಹಿತರ ಸಹಾಯದಿಂದ, ನನ್ನ ಜೀವಿತವನ್ನು ಪುನಃ ನಿರ್ಮಿಸಲು ಶಕ್ತನಾದೆ.”
ಆದರೆ, ಇತರರು ಸಹಾಯ ಮಾಡಲಿಕ್ಕಾಗಿ ಯಾವುದೋ ರೀತಿಯ ಹಂಗಿನಲಿದ್ಲಾರ್ದೆಂದು ಭಾವಿಸಬೇಡಿ. ತಗಾದೆ ಮಾಡುವವರಾಗದೆ ಇರಲು ಪ್ರಯತ್ನಿಸಿರಿ. ತೋರಿಸಲ್ಪಟ್ಟ ಯಾವುದೇ ದಯೆಯನ್ನು ಸಂತೋಷಕರವಾಗಿ ಸ್ವೀಕರಿಸಿ, ಮತ್ತು ಅದಕ್ಕಾಗಿ ಗಣ್ಯತೆಯನ್ನು ವ್ಯಕ್ತಪಡಿಸಿರಿ. ಆದರೆ ಜ್ಞಾನೋಕ್ತಿ 25:17 ರಲ್ಲಿ ಕಂಡುಕೊಳ್ಳಲ್ಪಡುವ ಈ ಒಳ್ಳೆಯ ಬುದ್ಧಿವಾದವನ್ನು ಸಹ ನೆನಪಿನಲ್ಲಿಡಿ: “ನೆರೆಯವನು ಬೇಸರಗೊಂಡು ಹಗೆಮಾಡದ ಹಾಗೆ ಅವನ ಮನೆಯಲ್ಲಿ ಅಪರೂಪವಾಗಿ ಹೆಜ್ಜೆಯಿಡು.” ವಿವಾಹದ 35 ವರ್ಷಗಳ ಅನಂತರ ತನ್ನ ಗಂಡನು ಸತ್ತಾಗ, ಆಳವಾದ ಒಂಟಿತನವನ್ನು ಎದುರಿಸಿದ ಫ್ರಾನ್ಸಸ್, ಇಂತಹ ಎಚ್ಚರಿಕೆ ಪ್ರಾಮುಖ್ಯವಾಗಿದೆ ಎಂದು ಭಾವಿಸುತ್ತಾಳೆ. “ನೀವು ಅಪೇಕ್ಷಿಸುವ ವಿಷಯದಲ್ಲಿ ವಿವೇಚನೆಯುಳ್ಳವರಾಗಿರ್ರಿ,” ಎಂದು ಆಕೆ ಹೇಳುತ್ತಾಳೆ, “ಮತ್ತು ಇತರರಿಂದ ಅತಿ ಹೆಚ್ಚನ್ನು ತಗಾದೆ ಮಾಡಬೇಡಿರಿ. ಸಹಾಯಕ್ಕಾಗಿ ಹುಡುಕುತ್ತಾ, ಯಾರದ್ದೋ ಮನೆಯ ಬಾಗಿಲಿನ ಮುಂದೆ ಸದಾ ಇರಬೇಡಿರಿ.”
ಯೆಹೋವನು ಚಿಂತಿಸುತ್ತಾನೆ
ಕೆಲವೊಮ್ಮೆ ಮಾನವ ಮಿತ್ರರು ನಿಮ್ಮನ್ನು ನಿರಾಶೆಗೊಳಿಸಿದರೂ, ಯೆಹೋವ ದೇವರನ್ನು ಇನ್ನೂ ನಿಮ್ಮ ಸ್ನೇಹಿತನಂತೆ ನೀವು ಇಟ್ಟುಕೊಳ್ಳಸಾಧ್ಯವಿದೆ. ಆತನು ನಿಮಗಾಗಿ ಚಿಂತಿಸುತ್ತಾನೆ ಎಂಬ ಭರವಸೆಯಿಂದಿರ್ರಿ. ನಿಮ್ಮ ಭರವಸೆಯನ್ನು ಆತನಲ್ಲಿ ಬಲವಾಗಿ ಇಡಿರಿ, ಮತ್ತು ಸತತವಾಗಿ ಆತನ ರಕ್ಷಣಾತ್ಮಕ ಪರಾಮರಿಕೆಯಲ್ಲಿ ಆಶ್ರಯವನ್ನು ಹುಡುಕಿರಿ. (ಕೀರ್ತನೆ 27:10; 91:1, 2; ಜ್ಞಾನೋಕ್ತಿ 3:5, 6) ಮೋವಾಬ್ಯಳಾದ ರೂತಳು ಇದನ್ನು ಮಾಡಿದಳು ಮತ್ತು ಹೇರಳವಾಗಿ ಆಶೀರ್ವದಿಸಲ್ಪಟ್ಟಳು. ಯಾಕೆ, ಅವಳು ಯೇಸು ಕ್ರಿಸ್ತನ ಪೂರ್ವಜಳು ಸಹ ಆದಳು!—ರೂತಳು 2:12; 4:17; ಮತ್ತಾಯ 1:5, 16.
ಸತತವಾಗಿ ಯೆಹೋವನಿಗೆ ಪ್ರಾರ್ಥಿಸಿರಿ. (ಕೀರ್ತನೆ 34:4; 62:7, 8) ಒಂಟಿತನವನ್ನು ನಿಭಾಯಿಸುವುದರಲ್ಲಿ ಮಾರ್ಗ್ರೆಟ್, ಪ್ರಾರ್ಥನೆಯನ್ನು ಮಹಾ ಬಲದ ಒಂದು ಮೂಲವಾಗಿ ಕಂಡುಕೊಂಡಳು. ತನ್ನ ಗಂಡನು ಇನ್ನೂ ಯುವಕನಾಗಿದ್ದಾಗಲೇ ಸತ್ತರೂ, ಆಕೆ ಆ ತನಕ ಅವನೊಂದಿಗೆ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಭಾಗವಹಿಸಿದಳು. “ಗಟ್ಟಿಯಾಗಿ ಪ್ರಾರ್ಥಿಸಿ ಯೆಹೋವನಿಗೆ ಎಲ್ಲವನ್ನು, ನನ್ನ ಎಲ್ಲ ಭಯಗಳನ್ನು ಮತ್ತು ಚಿಂತೆಗಳನ್ನು ಹೇಳುವುದು ಒಳ್ಳೆಯದೆಂದು ನಾನು ಯಾವಾಗಲೂ ಕಂಡುಕೊಂಡೆ,” ಎಂದು ಆಕೆ ಹೇಳುತ್ತಾಳೆ. “ಒಂಟಿತನವು ತಾಕಿದಾಗ ವಿಷಯಗಳನ್ನು ಸರಿಯಾದ ನೋಟದಲ್ಲಿಡುವಂತೆ ಅದು ನನಗೆ ಸಹಾಯ ಮಾಡಿತು. ಆ ಪ್ರಾರ್ಥನೆಗಳಿಗೆ ಯೆಹೋವನು ಉತ್ತರಿಸುವುದನ್ನು ನೋಡುವುದು, ನನಗೆ ಭರವಸೆಯನ್ನು ನೀಡಿತು.” ಅಪೊಸ್ತಲ ಪೇತ್ರನ ಬುದ್ಧಿವಾದವನ್ನು ಅನುಕರಿಸುವುದರಿಂದ ಆಕೆ ಬಹಳವಾಗಿ ಪ್ರಯೋಜನಪಡೆದುಕೊಳ್ಳುತ್ತಾಳೆ: “ಹೀಗಿರುವದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು. ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:6, 7; ಕೀರ್ತನೆ 55:22.
ಯೆಹೋವನೊಂದಿಗೆ ಒಂದು ಒಳ್ಳೆಯ ಸಂಬಂಧವು, ಒಂಟಿ ಜನರು ಅನೇಕ ವೇಳೆ ಕಳೆದುಕೊಳ್ಳುವ ಸಂಗತಿಯನ್ನು—ಆತ್ಮಗೌರವವನ್ನು—ಉಳಿಸಿಕೊಳ್ಳುವಂತೆ ನಿಮಗೆ ಸಹಾಯ ಮಾಡುವುದು. ತನ್ನ ಗಂಡ ಕ್ಯಾನ್ಸರ್ನಿಂದ ತೀರಿಕೊಂಡಾಗ, ಪತ್ರಿಕೋದ್ಯೋಗಿ ಜಿನೆಟ್ ಕುಪ್ಫರ್ಮನ್, “ಕಡಿಮೆ ಆತ್ಮಗೌರವದ ಹಾಗೂ ಅಯೋಗ್ಯತನದ ಭಾವನೆಗಳ” ಕುರಿತು ಬರೆದಳು. ಆಕೆ ಹೇಳಿದ್ದು: “ಅಯೋಗ್ಯತನದ ಈ ಭಾವನೆಯೇ ಅನೇಕ ವಿಧವೆಯರನ್ನು ಬಹುಮಟ್ಟಿಗೆ ಆತ್ಮಹತ್ಯಾತ್ಮಕ ಖಿನ್ನತೆಗೆ ನಡೆಸುವುದಾಗಿದೆ.”
ಯೆಹೋವನು ನಿಮ್ಮನ್ನು ಬಹಳ ಮಹತ್ವವುಳ್ಳವರೆಂದು ಎಣಿಸುತ್ತಾನೆಂದು ಜ್ಞಾಪಿಸಿಕೊಳ್ಳಿರಿ. ನೀವು ಅಯೋಗ್ಯರೆಂದು ಆತನು ನೆನಸುವುದಿಲ್ಲ. (ಯೋಹಾನ 3:16) ಗತಕಾಲದಲ್ಲಿ ತನ್ನ ಜನರಾದ ಇಸ್ರಾಯೇಲ್ಯರನ್ನು ಆತನು ಬೆಂಬಲಿಸಿದಂತೆ, ನಿಮ್ಮನ್ನು ದೇವರು ಬೆಂಬಲಿಸುವನು. ಆತನು ಅವರಿಗೆ ಅಂದದ್ದು: “ನಾನು ನಿನ್ನನ್ನು ಆರಿಸಿಕೊಂಡೆನು, ತಳ್ಳಲಿಲ್ಲ ಎಂದು ನಾನು ಹೇಳಿ ಸಂಬೋಧಿಸಿದ ಪ್ರಜೆಯೇ, ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ; ದಿಗ್ಭಮ್ರೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.”—ಯೆಶಾಯ 41:9, 10.
ದೇವರನ್ನು ದೂಷಿಸಬೇಡಿ
ಅತ್ಯಂತ ಪ್ರಾಮುಖ್ಯವಾಗಿ, ನಿಮ್ಮ ಒಂಟಿತನಕ್ಕಾಗಿ ದೇವರನ್ನು ದೂಷಿಸಬೇಡಿರಿ. ಯೆಹೋವನು ಜವಾಬ್ದಾರನಲ್ಲ. ನಿಮಗಾಗಿ, ಮತ್ತು ಎಲ್ಲ ಮಾನವಜಾತಿಗಾಗಿ, ಆತನ ಉದ್ದೇಶವು ಯಾವಾಗಲೂ ಒಳ್ಳೆಯ, ತೃಪ್ತಿಕರ ಸಾಹಚರ್ಯವನ್ನು ಅನುಭವಿಸುವುದೇ ಆಗಿದೆ. ದೇವರು ಆದಾಮನನ್ನು ಸೃಷ್ಟಿಸಿದಾಗ, ಆತನಂದದ್ದು: “ಮನುಷ್ಯನು ಒಂಟಿಗನಾಗಿರುವದು ಒಳ್ಳೇದಲ್ಲ; ಅವನಿಗೆ ಸರಿಬೀಳುವ ಸಹಕಾರಿಯನ್ನು ಉಂಟುಮಾಡುವೆನು.” (ಆದಿಕಾಂಡ 2:18) ಪ್ರಥಮ ಸ್ತ್ರೀಯಾದ ಹವ್ವಳನ್ನು ದೇವರು ಸೃಷ್ಟಿಸಿದಾಗ, ಆತನು ಅದನ್ನೇ ಮಾಡಿದನು. ಸೈತಾನನ ದಂಗೆಯು ಸಂಭವಿಸಿರದಿದ್ದರೆ, ಪುರುಷ ಮತ್ತು ಸ್ತ್ರೀ ಹಾಗೂ ಅವರು ಉತ್ಪಾದಿಸಿದ ಕುಟುಂಬಗಳು, ಒಂಟಿತನವನ್ನು ಎಂದಿಗೂ ಅನುಭವಿಸತ್ತಿರಲಿಲ್ಲ.
ಯೆಹೋವನಿಂದ ದುಷ್ಟತನದ ತಾತ್ಕಾಲಿಕ ಅನುಮತಿಯು, ನಿಶ್ಚಯವಾಗಿ, ಒಂಟಿತನವನ್ನು ಬೆಳೆಯುವಂತೆ ಮತ್ತು ಇತರ ಕಷ್ಟಾನುಭವವು ಸಂಭವಿಸುವಂತೆ ಅನುಮತಿಸಿದೆ. ಹಾಗಿದ್ದರೂ, ಇದು ತಾತ್ಕಾಲಿಕವಾಗಿದೆ ಎಂಬುದನ್ನು ಸ್ಪಷ್ಟವಾಗಿಗಿ ಮನಸ್ಸಿನಲ್ಲಿಡಿ. ಆತನ ಹೊಸ ಲೋಕದಲ್ಲಿ ದೇವರು ನಿಮಗಾಗಿ ಮಾಡುವ ಸಂಗತಿಯ ಬೆಳಕಿನಲ್ಲಿ ವೀಕ್ಷಿಸಲ್ಪಟ್ಟಾಗ, ಒಂಟಿತನದ ತೊಂದರೆಗಳು ಕಡಿಮೆ ಕಠಿನವಾಗಿ ತೋರುತ್ತವೆ. ಈ ನಡುವೆ ಆತನು ನಿಮ್ಮನ್ನು ಬೆಂಬಲಿಸುವನು ಮತ್ತು ಸಂತೈಸುವನು.—ಕೀರ್ತನೆ 18:2; ಫಿಲಿಪ್ಪಿ 4:6, 7.
ಇದನ್ನು ತಿಳಿದಿರುವುದು ನಿಮಗೆ ಬಲವನ್ನು ಕೊಡಬಲ್ಲದು. (ಮುಂಚೆ ಉಲ್ಲೇಖಿಸಲ್ಪಟ್ಟ) ಫ್ರಾನ್ಸಸ್ ವಿಧವೆಯಾದಾಗ, ಆಕೆ ಕೀರ್ತನೆ 4:8ರ ಮಾತುಗಳಲ್ಲಿ, ವಿಶೇಷವಾಗಿ ರಾತ್ರಿಯಲ್ಲಿ ಮಹಾ ಸಾಂತ್ವನವನ್ನು ಕಂಡುಕೊಂಡಳು: “ನಾನು ನಿರ್ಭಯವಾಗಿರುವದರಿಂದ ಮಲಗಿಕೊಂಡು ಕೂಡಲೆ ನಿದ್ದೆಮಾಡುವೆನು; ಯಾಕಂದರೆ ಯೆಹೋವನೇ, ನಾನು ಯಾವ ಅಪಾಯವೂ ಇಲ್ಲದೆ ಸುರಕ್ಷಿತನಾಗಿರುವಂತೆ ನೀನು ಕಾಪಾಡುತ್ತೀ.” ಕೀರ್ತನೆಯ ಪುಸ್ತಕದಲ್ಲಿ ಕಂಡುಬರುವಂತಹ ಇಂಥ ಭಾವನೆಗಳ ಮೇಲೆ ಮನನ ಮಾಡಿರಿ. ಕೀರ್ತನೆ 23:1-3 ರಲ್ಲಿ ವ್ಯಕ್ತಪಡಿಸಲಾಗಿರುವಂತೆ, ದೇವರು ನಿಮಗಾಗಿ ಹೇಗೆ ಚಿಂತಿಸುತ್ತಾನೆ ಎಂಬುದರ ಕುರಿತು ಆಲೋಚಿಸಿರಿ.
ಒಂಟಿಗರು ಹೇಗೆ ಸಹಾಯಿಸಲ್ಪಡಬಲ್ಲರು?
ಒಂಟಿಗರಿಗೆ ಸಹಾಯ ಮಾಡುವ ಒಂದು ಮುಖ್ಯ ವಿಧವು ಅವರಿಗೆ ಪ್ರೀತಿಯನ್ನು ತೋರಿಸುವುದೇ ಆಗಿದೆ. ಬೈಬಲ್ ದೇವರ ಜನರನ್ನು, ಅವರು ಒಬ್ಬರಿಗೊಬ್ಬರು ಪ್ರೀತಿಯನ್ನು ತೋರಿಸುವಂತೆ—ವಿಶೇಷವಾಗಿ ತೊಂದರೆಯ ಸಮಯಗಳಲ್ಲಿ—ಮತ್ತೆ ಮತ್ತೆ ಉತ್ತೇಜಿಸುತ್ತದೆ. “ಕ್ರೈಸ್ತ ಸಹೋದರರು ಅಣ್ಣತಮ್ಮಂದಿರೆಂದು ಒಬ್ಬರನ್ನೊಬ್ಬರು ಪ್ರೀತಿಸಿರಿ,” ಎಂದು ಅಪೊಸ್ತಲ ಪೌಲನು ಬರೆದನು. (ರೋಮಾಪುರ 12:10) ವಾಸ್ತವದಲ್ಲಿ, ದೇವರ ಪ್ರೇರಿತ ವಾಕ್ಯವು ಹೇಳುವುದು: “ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.” (1 ಕೊರಿಂಥ 13:8) ಒಂಟಿಗರಾಗಿರುವವರಿಗೆ ನೀವು ಪ್ರೀತಿಯನ್ನು ಹೇಗೆ ತೋರಿಸಬಲ್ಲಿರಿ?
ಒಂಟಿ ಜನರನ್ನು ತಿರಸ್ಕರಿಸುವ ಯಾ ಕಡೆಗಣಿಸುವ ಬದಲು, ಚಿಂತಿಸುವ ವ್ಯಕ್ತಿಗಳು ತಮ್ಮ ಕೋಮಲ ವಾತ್ಸಲ್ಯವನ್ನು, ಸಾಧ್ಯವಾದಾಗಲೆಲ್ಲಾ ಅವರಿಗೆ ತಾಳ್ಮೆಯಿಂದ ಸಹಾಯ ಮಾಡುವ ಮೂಲಕ ತೋರಿಸಬಲ್ಲರು. ಹೀಗೆ ಹೇಳಿದ ಮನುಷ್ಯನಾದ ಯೋಬನಂತೆ ಅವರು ಇರಬಲ್ಲರು: “ಏಕಂದರೆ ಅಂಗಲಾಚುವ ಬಡವನನ್ನೂ ಸಹಾಯಕನಿಲ್ಲದ ಅನಾಥನನ್ನೂ ರಕ್ಷಿಸುವವನಾಗಿದ್ದೆನು. . . . ವಿಧವೆಯ ಹೃದಯವನ್ನು ಉತ್ಸಾಹಗೊಳಿಸುತ್ತಿದ್ದೆನು.” (ಯೋಬ 29:12, 13) ಕ್ರೈಸ್ತ ಸಭೆಯಲ್ಲಿರುವ ನೇಮಿತ ಹಿರಿಯರು ಮತ್ತು ಕನಿಕರವುಳ್ಳ ಮಿತ್ರರು, ವಿವೇಚನೆ, ಅನುರಾಗ, ಮತ್ತು ಸಾಂತ್ವನದ ಮೂಲಭೂತ ಮಾನವ ಅಗತ್ಯಗಳನ್ನು ಒದಗಿಸುವ ಮೂಲಕ, ತದ್ರೀತಿಯ ದಾಕ್ಷಿಣ್ಯಪರ ವಿಧದಲ್ಲಿ ವರ್ತಿಸಬಲ್ಲರು. ಅವರು ಅನುಭೂತಿಯನ್ನು ತೋರಿಸಬಲ್ಲರು, ಮತ್ತು ಕೆಲವೊಮ್ಮೆ ಗುಪ್ತ ಮಾತುಕತೆಗಾಗಿರುವ ಅಗತ್ಯವನ್ನು ಅವರು ತುಂಬಬಲ್ಲರು.—1 ಪೇತ್ರ 3:8.
ಒಂಟಿ ಜನರಿಗಾಗಿ ಮಿತ್ರರು ಮಾಡುವ ಸಣ್ಣ ವಿಷಯಗಳೇ ಅನೇಕ ವೇಳೆ ಬಹಳ ಪ್ರಾಮುಖ್ಯವಾಗಿ ಪರಿಣಮಿಸುತ್ತವೆ. ಉದಾಹರಣೆಗೆ, ಒಬ್ಬ ಜೊತೆ ವಿಶ್ವಾಸಿಯು, ಪ್ರಿಯ ವ್ಯಕ್ತಿಯೊಬ್ಬನನ್ನು ಮರಣದಲ್ಲಿ ಕಳೆದುಕೊಳ್ಳುವಾಗ, ಯಥಾರ್ಥ ಮಿತ್ರತ್ವದ ದಯೆಯುಳ್ಳ ಕ್ರಿಯೆಗಳ ಮುಖಾಂತರ ಹೆಚ್ಚಿನ ಒಳಿತನ್ನು ಸಾಧಿಸಸಾಧ್ಯವಿದೆ. ಊಟವೊಂದಕ್ಕೆ ಆಮಂತ್ರಣ, ಸಹಾನುಭೂತಿಯುಳ್ಳ ಕಿವಿಗೊಡುವಿಕೆ, ಯಾ ಉತ್ತೇಜನವನ್ನೀಯುವ ಸಂಭಾಷಣೆ—ಇಂತಹ ಸಣ್ಣ ಉಪಕಾರಗಳನ್ನು ಕಡೆಗಣಿಸಬೇಡಿ. ಒಂಟಿತನದ ವಿರುದ್ಧ ಹೋರಾಡಲು ಒಬ್ಬ ವ್ಯಕ್ತಿಗೆ ಸಹಾಯ ಮಾಡುವುದರಲ್ಲಿ ಈ ವಿಷಯಗಳು ಬಹಳ ಪರಿಣಾಮಕಾರಿಯಾಗಿವೆ.—ಇಬ್ರಿಯ 13:16.
ಆಗಿಂದಾಗ್ಗೆ, ಬಹುಶಃ ನಾವೆಲ್ಲರೂ ಒಂಟಿತನದ ಸರದಿಗಳನ್ನು ಅನುಭವಿಸುವೆವು. ಆದರೂ, ಒಂಟಿತನವು ಒಂದು ಉಪದ್ರವವಾಗುವ ಅಗತ್ಯವಿಲ್ಲ. ನಿಮ್ಮ ಜೀವಿತವನ್ನು ಅರ್ಥಭರಿತ, ರಚನಾತ್ಮಕ ಚಟುವಟಿಕೆಗಳಿಂದ ತುಂಬಿರಿ. ಸ್ನೇಹಿತರು ಸಾಧ್ಯವಾದಾಗ ನಿಮಗೆ ಸಹಾಯ ಮಾಡುವಂತೆ ಬಿಡಿರಿ. ಯೆಹೋವ ದೇವರಲ್ಲಿ ಭರವಸೆಯುಳ್ಳವರಾಗಿರ್ರಿ. ಕೀರ್ತನೆ 34:19 ರಲ್ಲಿ ದಾಖಲಿಸಲ್ಪಟ್ಟಿರುವ ಉತ್ತೇಜನದಾಯಕ ವಾಗ್ದಾನವನ್ನು ಮನಸ್ಸಿನಲ್ಲಿ ಭದ್ರವಾಗಿಡಿ: “ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ.” ಸಹಾಯಕ್ಕಾಗಿ ಯೆಹೋವನ ಕಡೆಗೆ ತಿರುಗಿರಿ, ಮತ್ತು ಒಂಟಿತನವು ನಿಮ್ಮ ಜೀವಿತವನ್ನು ಬತ್ತಿಸುವಂತೆ ಬಿಡದಿರಿ.
[ಪುಟ 24 ರಲ್ಲಿರುವ ಚೌಕ]
ಒಂಟಿತನದ ವಿರುದ್ಧ ಹೋರಾಡುವ ಕೆಲವು ವಿಧಗಳು
▪ ಯೆಹೋವನಿಗೆ ನಿಕಟವಾಗಿರಿ
▪ ಬೈಬಲನ್ನು ಓದುವ ಮೂಲಕ ಸಾಂತ್ವನವನ್ನು ಹುಡುಕಿರಿ
▪ ಒಂದು ಸಕಾರಾತ್ಮಕ ಕ್ರಿಸ್ತೀಯ ದೃಷ್ಟಿಕೋನವನ್ನು ಕಾಪಾಡಿಕೊಳ್ಳಿರಿ
▪ ಅರ್ಥಭರಿತ ಚಟುವಟಿಕೆಯಲ್ಲಿ ಕಾರ್ಯಮಗ್ನರಾಗಿರ್ರಿ
▪ ನಿಮ್ಮ ಸ್ನೇಹಿತರ ವೃತ್ತವನ್ನು ವಿಸ್ತರಿಸಿರಿ
▪ ಸಹಾಯ ಮಾಡುವುದು ಮಿತ್ರರಿಗೆ ಸುಲಭವಾಗುವಂತೆ ಮಾಡಿರಿ
▪ ನಿಮ್ಮನ್ನು ಪ್ರತ್ಯೇಕಪಡಿಸಿಕೊಳ್ಳಬೇಡಿ, ಆದರೆ ಪ್ರತಿಕ್ರಿಯಿಸುವ ಪ್ರೀತಿಯನ್ನು ಬೆಳೆಸಿಕೊಳ್ಳಿ
▪ ಯೆಹೋವನು ನಿಮಗಾಗಿ ಚಿಂತಿಸುತ್ತಾನೆಂಬ ಭರವಸೆಯಿಂದಿರ್ರಿ
[ಪುಟ 24 ರಲ್ಲಿರುವ ಚೌಕ]
ಒಂಟಿಗರನ್ನು ನೀವು ಸಹಾಯ ಮಾಡಬಲ್ಲ ವಿಧ
▪ ವಿವೇಚನೆ, ಅನುರಾಗ, ಮತ್ತು ಸಾಂತ್ವನವನ್ನು ಒದಗಿಸಿರಿ
▪ ಗುಪ್ತ ಮಾತುಕತೆಗಾಗಿರುವ ಅಗತ್ಯವನ್ನು ತುಂಬಿರಿ
▪ ಸಹಾಯ ಮಾಡುವ ಸಣ್ಣ ವಿಷಯಗಳನ್ನು ಮಾಡುವುದರಲ್ಲಿ ಪಟ್ಟುಹಿಡಿದಿರುವವರಾಗಿರ್ರಿ
[ಪುಟ 23 ರಲ್ಲಿರುವ ಚಿತ್ರ]
ರೂತಳು, ಆಕೆಯ ಕಠಿನ ಪರಿಸ್ಥಿತಿಗಳ ಹೊರತೂ, ಒಂಟಿತನವು ಆಕೆಯ ಜೀವಿತವನ್ನು ಬತ್ತಿಸುವಂತೆ ಬಿಟ್ಟಳೆಂಬ ಯಾವ ಸೂಚನೆಯೂ ಇಲ್ಲ