ಒಂಟಿತನ—ಅದನ್ನು ಎದುರಿಸಲು ಮತ್ತು ಜಯಿಸಲು ನೀವು ನಿರ್ಧರಿಸಿದ್ದೀರೋ?
ನೀವು ಒಂಡಿಯಾಗಿದ್ದೀರೊ? ನೀವು ವಿವಾಹಿತರಾಗಿರಲಿ ಅಥವಾ ಒಂಟಿಗರಾಗಿರಲಿ, ನೀವೊಬ್ಬ ಸ್ತ್ರೀಯಾಗಿರಲಿ ಅಥವಾ ಒಬ್ಬ ಪುರುಷನಾಗಿರಲಿ, ನೀವು ಎಳೆಯವರಾಗಿರಲಿ ಅಥವಾ ವೃದ್ಧರಾಗಿರಲಿ, ಜೀವಿತದಲ್ಲಿ ಸ್ವಾಭಾವಿಕವಾಗಿ ಒಂಟಿತನವನ್ನು ಅನುಭವಿಸುವಂತಹ ಸಂದರ್ಭಗಳಿವೆ. ಏಕಾಂಗಿಯಾಗಿರುವುದು ಒಂಟಿತನವನ್ನು ಉಂಟುಮಾಡಬೇಕೆಂದಿರುವುದಿಲ್ಲ ಎಂಬುದನ್ನು ಸಹ ಗ್ರಹಿಸಿಕೊಳ್ಳಿರಿ. ತನ್ನ ಸಂಶೋಧನೆಯಲ್ಲಿ ಮಗ್ನನಾದ ಏಕಾಂಗಿಯಾದ ಒಬ್ಬ ಪಂಡಿತನು ಒಂಟಿಗನೆಂದು ಭಾವಿಸುವುದಿಲ್ಲ. ಒಂದು ವರ್ಣಚಿತ್ರವನ್ನು ರಚಿಸುತ್ತಿರುವ ಒಬ್ಬ ಒಂಟಿ ಕಲಾಕಾರನಿಗೆ ಒಂಟಿಗನೆಂದು ಭಾವಿಸಲು ಅವಕಾಶವಿಲ್ಲ. ಒಂದು ಏಕಾಂತ ಕ್ಷಣವನ್ನು ಅವರು ಸ್ವಾಗತಿಸುತ್ತಾರೆ, ಮತ್ತು ಆಗ ಏಕಾಂತತೆಯು ಅವರ ಅತ್ಯುತ್ತಮ ಸ್ನೇಹಿತನಾಗಿರುತ್ತದೆ.
ಒಂಟಿತನದ ನಿಜವಾದ ಭಾವನೆಯು ಹೊರ ತೋರ್ಕೆಗಿಂತಲೂ ನಮ್ಮ ಆಂತರ್ಯದಿಂದ ವೃದ್ಧಿಯಾಗುತ್ತದೆ. ಒಂದು ಸಾವು, ವಿವಾಹ ವಿಚ್ಛೇದ, ನಿರುದ್ಯೋಗಿಗಳಾಗುವುದು, ಯಾವುದೊ ದುರಂತವು—ಇಂತಹ ಕೆಲವು ದುಃಖಕರವಾದ ಘಟನೆಗಳಿಂದ ಬಹುಶಃ ಒಂಟಿತನವು ಪ್ರಚೋದಿಸಲ್ಪಡಬಹುದು. ನಮ್ಮನ್ನು ಸ್ವತಃ ನಾವು ಪ್ರಕಾಶಮಾನವಾಗಿ ಬೆಳಗಿಸಿಕೊಳ್ಳುವಾಗ, ಆ ಒಂಟಿತನವನ್ನು ಕುಗ್ಗಿಸಲು, ಪ್ರಾಯಶಃ ಸಕಾಲದಲ್ಲಿ ಅಗೋಚರವಾಗುವಂತೆ ಸಹ ಮಾಡಲು ಸಾಧ್ಯವಿದೆ, ಮತ್ತು ನಮ್ಮನ್ನು ಬಾಧಿಸಿದ ನಷ್ಟವನ್ನು ಹೊಂದಿಸಿಕೊಳ್ಳಲು ಸಾಧ್ಯವಿದೆ.
ನಿಮ್ಮ ಆಲೋಚನೆಗಳಿಂದ ಭಾವನೆಗಳು ಉದ್ಭವಿಸುತ್ತವೆ. ನಷ್ಟವೊಂದನ್ನು ಮೈಗೂಡಿಸಿಕೊಂಡು ಮತ್ತು ಅದು ಉತ್ಪತ್ತಿ ಮಾಡಿದ ಭಾವನೆಗಳು ಹಿನ್ನೆಲೆಯೊಳಗೆ ಕ್ರಮೇಣ ದೂರವಾಗುವಂತೆ ಬಿಡಲ್ಪಟ್ಟ ಅನಂತರ, ನಿಮ್ಮ ಕ್ರಿಯಾಶೀಲ ಜೀವಿತವನ್ನು ನೀವು ಮುಂದುವರಿಸುವಂತೆ ಅನುಮತಿಸುವ ಭಕ್ತಿವೃದ್ಧಿಯನ್ನುಂಟುಮಾಡುವ ಆಲೋಚನೆಗಳಿಗೆ ಪ್ರಾಧಾನ್ಯವನ್ನು ಕೊಡುವ ಸಮಯವು ಇದಾಗಿರುತ್ತದೆ.
ನಿಮ್ಮನ್ನು ಜಾಗೃತಿಪಡಿಸಿಕೊಳ್ಳಿರಿ. ನಿಮ್ಮನ್ನು ಹತೋಟಿಯಲ್ಲಿಟ್ಟುಕೊಂಡಿರ್ರಿ. ಮಾಡಬೇಕಾದ ಸಕಾರಾತ್ಮಕ ವಿಷಯಗಳಿವೆ. ಆದುದರಿಂದ ಸ್ನೇಹ ಭಾವದವರಾಗಿರ್ರಿ. ಯಾರಾದರೊಬ್ಬರಿಗೆ ಫೋನ್ ಮಾಡಿರಿ. ಪತ್ರವೊಂದನ್ನು ಬರೆಯಿರಿ. ಪುಸ್ತಕವೊಂದನ್ನು ಓದಿರಿ. ಜನರನ್ನು ನಿಮ್ಮ ಮನೆಗೆ ಆಮಂತ್ರಿಸಿರಿ. ಅಭಿಪ್ರಾಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಿರಿ. ಸ್ನೇಹಿತರನ್ನು ಸಂಪಾದಿಸಿಕೊಳ್ಳಲು, ಸ್ವತಃ ನಿಮ್ಮನ್ನು ಸ್ನೇಹ ಭಾವದವರಾಗಿ ತೋರ್ಪಡಿಸಿಕೊಳ್ಳಬೇಕು. ಇತರರೊಂದಿಗೆ ಕಲೆತುಕೊಳ್ಳಲಿಕ್ಕಾಗಿ ಸ್ವತಃ ನಿಮ್ಮ ಆಂತರ್ಯವನ್ನು ಪರೀಕ್ಷಿಸಿಕೊಳ್ಳಿರಿ. ಚಿಕ್ಕ ರೀತಿಯ ದಯಾಪರತೆಯನ್ನು ತೋರಿಸಿರಿ. ಸಾಂತ್ವನವನ್ನು ಒದಗಿಸುವ ಕೆಲವೊಂದು ಆತ್ಮಿಕ ತುಣುಕುಗಳನ್ನು ಅವರೊಂದಿಗೆ ಹಂಚಿಕೊಳ್ಳಿರಿ. “ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ” ಎಂಬ ಯೇಸುವಿನ ಮಾತುಗಳನ್ನು ಸತ್ಯವಾದದ್ದಾಗಿ ನೀವು ಕಂಡುಕೊಳ್ಳುವಿರಿ. “ಉದಾರಿಯು ಪುಷ್ಟನಾಗುವನು; ನೀರು ಹಾಯಿಸುವವನಿಗೆ ನೀರು ಸಿಕ್ಕುವುದು,” ಎಂಬ ಇನ್ನೊಂದು ಜ್ಞಾನೋಕ್ತಿಯ ಸತ್ಯವನ್ನು ನೀವು ಗ್ರಹಿಸುವಿರಿ.—ಅ. ಕೃತ್ಯಗಳು 20:35, NW; ಜ್ಞಾನೋಕ್ತಿ 11:25.
ಅದು ನಿಮ್ಮ ಜವಾಬ್ದಾರಿಯಾಗಿದೆ
ಇದನ್ನು ಮಾಡುವುದು ಕಷ್ಟವೊ? ಒಂಟಿತನವನ್ನು ಪರಿಹರಿಸಿಕೊಳ್ಳುವುದಕ್ಕಿಂತಲೂ ಅದರ ಕುರಿತು ಮಾತಾಡುವುದು ಸುಲಭವಾದದ್ದೆಂದು ನಿಮಗನಿಸುತ್ತದೊ? ಪ್ರಯೋಜನಕರವಾದದ್ದೆಲ್ಲವನ್ನು ಮಾಡುವುದಕ್ಕಿಂತಲೂ ಹೇಳುವುದು ಸುಲಭವಾಗಿದೆ. ಅದರ ಮಾಡುವಿಕೆಯಿಂದ ನಿಮ್ಮನ್ನು ತೃಪ್ತರಾಗಿ ಮಾಡುವುದು ಅದೇ. ವಿಶೇಷ ಪ್ರಯತ್ನವನ್ನು ನೀವು ಮುಂದಿಡಬೇಕಾಗಿದೆ. ನಿಮ್ಮ ಒಂದು ಭಾಗವು ಕೊಡುಗೆಯಲ್ಲಿ ಮಗ್ನವಾಗುತ್ತದೆ, ಮತ್ತು ನಿಮ್ಮ ಮನಸ್ಸಿನ ಸಮಾಧಾನ ಮತ್ತು ಸಂತೋಷವು ಹೆಚ್ಚು ಪ್ರಕಾಶಮಾನವಾಗಿ ಬೆಳಗುತ್ತದೆ. ನಿಮ್ಮ ಮೇಲೆ ಅಧಿಕಾರ ನಡೆಸುವ ಒಂಟಿತನವನ್ನು ಹೊರಡಿಸಲು ಪ್ರಯತ್ನವನ್ನು ಮಾಡುವುದು ನಿಮ್ಮ ಜವಾಬ್ದಾರಿಯಾಗಿದೆ. ಆಧುನಿಕ ಪ್ರೌಢಾವಸ್ಥೆ (ಮಾಡರ್ನ್ ಮ್ಯಾಟ್ಯುರಿಟಿ) ಪತ್ರಿಕೆಯ ಒಬ್ಬ ಬರಹಗಾರನು ಅಂದದ್ದು: “ನಿಮ್ಮ ಒಂಟಿತನಕ್ಕೆ ಯಾರೊಬ್ಬರೂ ಕಾರಣರಲ್ಲ, ಆದರೆ ಅದರ ಕುರಿತು ನೀವು ಏನನ್ನಾದರೂ ಮಾಡಸಾಧ್ಯವಿದೆ. ಒಂದು ಗೆಳೆತನದಿಂದಲೇ ನಿಮ್ಮ ಜೀವಿತವನ್ನು ವಿಸ್ತರಿಸಸಾಧ್ಯವಿದೆ. ನಿಮಗೆ ನೋವನ್ನುಂಟುಮಾಡಿದ್ದಾನೆಂದು ನೀವು ಭಾವಿಸುವ ಯಾರನ್ನಾದರೂ ನೀವು ಕ್ಷಮಿಸಸಾಧ್ಯವಿದೆ. ನೀವೊಂದು ಪತ್ರವನ್ನು ಬರೆಯಸಾಧ್ಯವಿದೆ. ಫೋನ್ ಕರೆಯೊಂದನ್ನು ನೀವು ಮಾಡಸಾಧ್ಯವಿದೆ. ನಿಮ್ಮ ಜೀವಿತವನ್ನು ನೀವು ಮಾತ್ರ ಬದಲಾಯಿಸಬಲ್ಲಿರಿ. ಬೇರೆ ಯಾವ ವ್ಯಕ್ತಿಯೂ ಅದನ್ನು ನಿಮಗೋಸ್ಕರ ಮಾಡಸಾಧ್ಯವಿಲ್ಲ.” ತಾನು ಸ್ವೀಕರಿಸಿದ ಒಂದು ಪತ್ರದ ಕುರಿತು ಅವನು ಉಲ್ಲೇಖಿಸಿದ್ದೇನೆಂದರೆ, ಅದು “ವಿಷಯವನ್ನು ನಿಖರವಾಗಿ ವಿವರಿಸುತ್ತದೆ: ‘ಒಂಟಿಯಾಗಿರುವುದರಿಂದ ಅಥವಾ ಅಸಫಲಗೊಳಿಸುವಿಕೆಯಿಂದ ತಮ್ಮ ಜೀವಿತಗಳನ್ನು ಕಾಪಾಡಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆಯೆಂದು ನಾನು ಜನರಿಗೆ ಹೇಳುತ್ತೇನೆ. ಎಚ್ಚರಿಕೆಯಿಂದಿರ್ರಿ, ಏನನ್ನಾದರೂ ಮಾಡಿರಿ!’”
ನಿಮಗೆ ಸಹಾಯಕವಾಗುವ ಸ್ನೇಹಿತರನ್ನು ಕೇವಲ ಮಾನವ ಜೀವಿಗಳಿಗೆ ಮಾತ್ರ ಸೀಮಿತಗೊಳಿಸುವ ಆವಶ್ಯಕತೆ ಇಲ್ಲ. “ವೃದ್ಧರನ್ನು ಬಾಧಿಸುತ್ತಿರುವ ಅತಿ ದೊಡ್ಡ ಸಮಸ್ಯೆಗಳು ಶಾರೀರಿಕ ಅಸ್ವಸ್ಥತೆಗಳಲ್ಲ, ಒಂಟಿತನ ಮತ್ತು ತಿರಸ್ಕಾರವನ್ನು ಅವರು ಅನುಭವಿಸುವುದೇ. ಆಗಿಂದಾಗ್ಗೆ ವೃದ್ಧರು ಸಮಾಜದಿಂದ ದೂರಮಾಡಲ್ಪಟ್ಟಾಗ, . . . ಸಹವಾಸವನ್ನು ಒದಗಿಸುವ ಮೂಲಕ, ಕೆಲವೊಮ್ಮೆ ಮುದ್ದಿನ ಪ್ರಾಣಿ (ನಾಯಿಗಳು ಒಳಗೊಂಡು)ಗಳು ಉದ್ದೇಶ ಮತ್ತು ಅರ್ಥವನ್ನು ಕೊಡುತ್ತವೆ,” ಎಂದು ಪಶುವೈದ್ಯರೊಬ್ಬರು ಹೇಳಿದರು. ಉತ್ತಮ ಮನೆಗಳು ಮತ್ತು ತೋಟಗಳು (ಬೆಟರ್ ಹೋಮ್ಸ್ ಆ್ಯಂಡ್ ಗಾರ್ಡನ್ಸ್) ಪತ್ರಿಕೆಯು ಹೇಳಿದ್ದು: “ಭಾವನಾತ್ಮಕವಾಗಿ ಕ್ಷೋಭೆಗೊಂಡವರಿಗೆ ಮುದ್ದಿನ ಪ್ರಾಣಿಗಳು ಸಹಾಯಮಾಡುತ್ತವೆ; ಶಾರೀರಿಕವಾಗಿ ಅಸ್ವಸ್ಥರಾಗಿರುವವರನ್ನು, ಅಂಗವಿಕಲರನ್ನು, ಮತ್ತು ಅಸಮರ್ಥರನ್ನು ಪ್ರೇರಿಸುತ್ತವೆ; ಮತ್ತು ಒಂಟಿಯಾಗಿರುವವರನ್ನು ಮತ್ತು ವೃದ್ಧರನ್ನು ಪುನಃ ಚೈತನ್ಯಗೊಳಿಸುತ್ತವೆ.” ಮುದ್ದಿನ ಪ್ರಾಣಿಗಳಲ್ಲಿ ಹೊಸದಾಗಿ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿರುವ ಜನರ ಕುರಿತು ಇನ್ನೊಂದು ಪತ್ರಿಕೆಯ ಲೇಖನವು ಹೇಳಿದ್ದು: “ರೋಗಿಯ ಚಿಂತೆಗಳು ಕಡಿಮೆಗೊಳಿಸಲ್ಪಡುತ್ತವೆ ಮತ್ತು ತಾವು ನಿರಾಕರಿಸಲ್ಪಡುತ್ತೇವೆಂಬ ಭಯವಿಲ್ಲದೆ ಅವರ ಮುದ್ದಿನ ಪ್ರಾಣಿಗಳಿಗೆ ಅವರು ಪ್ರೀತಿಯನ್ನು ವ್ಯಕ್ತಪಡಿಸುವರು. ಪ್ರಥಮವಾಗಿ ತಮ್ಮ ಮುದ್ದಿನ ಪ್ರಾಣಿಗಳ ಆರೈಕೆಯ ಕುರಿತು ಮಾತಾಡುತ್ತಾ, ತದನಂತರ ಜನರೊಂದಿಗೆ ಸಹವಾಸ ಮಾಡಲು ಅವರು ಆರಂಭಿಸುತ್ತಾರೆ. ಅವರಿಗೆ ಜವಾಬ್ದಾರಿಯ ಭಾವನೆಯುಂಟಾಗುತ್ತದೆ. ಅವರ ಮೇಲೆ ಏನಾದರೂ ಅವಲಂಬಿಸಿಕೊಂಡಿದೆ, ಅವರ ಆವಶ್ಯಕತೆ ಇದೆಯೆಂದು ಅವರು ಎಣಿಸುತ್ತಾರೆ.”
ತೀರ ಹೆಚ್ಚು ಬಾರಿ, ಒಂಟಿತನವನ್ನು ಅನುಭವಿಸುತ್ತಿರುವವನೊಬ್ಬನು ಸ್ವತಃ ಸಹಾಯಮಾಡಿಕೊಳ್ಳಲು, ನಿರಾಶೆಯ ಆಳಗಳಿಂದ ತನ್ನನ್ನು ಮೇಲಕ್ಕೆತ್ತಲು ತೊಡಗನು. ಆ ಮಟ್ಟವನ್ನು ತಲುಪಲು ಸ್ವತಃ ಪ್ರಯತ್ನಿಸುವಾಗ ಜಡತೆ, ಅಸಂತೋಷಗಳು ಇರುತ್ತವೆ, ಆದರೆ ಅವನ ಒಂಟಿತನದ ನಿಜವಾದ ಕಾರಣವನ್ನು ಅವನು ಗ್ರಹಿಸಬೇಕಾದರೆ, ಅದನ್ನು ಮಾಡಬೇಕು. ತಾವು ಅಂಗೀಕರಿಸಲು ಕಷ್ಟಕರವಾಗಿ ಕಂಡುಕೊಳ್ಳುವ ಸಲಹೆಗಳಿಗೆ ಜನರ ಪ್ರತಿರೋಧದ ಕುರಿತು ಡಾ. ಜೇಮ್ಸ್ ಲಿಂಚ್ ಬರೆದದ್ದು: “ಸಾಮಾನ್ಯವಾಗಿ ನಾವು ಇಷ್ಟಪಡದ ಸಮಾಚಾರವನ್ನು ಕೇಳುವುದನ್ನು, ಅಥವಾ ಕಡಿಮೆ ಪಕ್ಷ ಅದನ್ನು ನಮ್ಮ ನಡತೆಯಲ್ಲಿ ಸಂಯೋಜಿಸಿಕೊಳ್ಳುವುದನ್ನು ಪ್ರತಿರೋಧಿಸುವುದು ಮಾನವನ ಗುಣವಾಗಿದೆ.” ತನ್ನ ಒಂಟಿತನವನ್ನು ಪರಿಹರಿಸಿಕೊಳ್ಳಲು ವ್ಯಕ್ತಿಯೊಬ್ಬನು ಬಯಸಬಹುದು, ಆದರೆ ಬಿಡುಗಡೆಯನ್ನುಂಟುಮಾಡಲು ಅಗತ್ಯವಾಗಿರುವ ಇಚ್ಛಾಶಕ್ತಿಯನ್ನು ಒಟ್ಟುಗೂಡಿಸಲು ಅವನಿಗೆ ಅಪೇಕ್ಷೆ ಇಲ್ಲದಿರಬಹುದು.
ಅನುಭವಿಸಲು ಬಯಸುವಂತೆ ಕ್ರಿಯೆಗೈಯಿರಿ
ಒಂದು ಅಗಾಧವಾದ ಖಿನ್ನತೆಯನ್ನು ಜಯಿಸಲು, ಒಬ್ಬನು ನೈಜ ಉಲ್ಲಾಸ ಮತ್ತು ಸಹಾನುಭೂತಿಯನ್ನು ಅನುಸರಿಸುವುದರಲ್ಲಿ ದೃಢವಾಗಿ ಮುಂದುವರಿಯುವ ಆವಶ್ಯಕತೆಯಿದೆ. (ಹೋಲಿಸಿ ಅ. ಕೃತ್ಯಗಳು 20:35.) ನಿಶೇತ್ಚನಗೊಳಿಸುವ ಜಡತೆಯ ವಿರುದ್ಧವಾಗಿ ಕ್ರಿಯೆಗೈಯುವ ಮೂಲಕ ಭದ್ರ ಕಂದಕದಂತಿರುವ ಒಂಟಿತನದ ಮನೋಭಾವವನ್ನು ಭೇದಿಸಿಕೊಂಡು ಹೊರಬರುವಂತೆ ಇದು ಕರೆಕೊಡುತ್ತದೆ. ಸಂತೋಷದಿಂದ ಕ್ರಿಯೆಗೈಯಿರಿ, ನರ್ತಿಸಿರಿ, ಉಲ್ಲಾಸಕರ ಸಂಗೀತವೊಂದನ್ನು ಹಾಡಿರಿ. ಸಂತೋಷವನ್ನು ಪ್ರತಿಬಿಂಬಿಸುವ ಯಾವುದನ್ನಾದರೂ ಮಾಡಿರಿ. ಅದನ್ನು ಉತ್ಪ್ರೇಕ್ಷಿಸಿರಿ, ಅತಿಶಯಿಸಿರಿ, ಸಂತೋಷಭರಿತ ವಿಚಾರಗಳಿಂದ ವ್ಯಾಕುಲಿತ ಮನೋಭಾವವನ್ನು ಹೊರಕ್ಕೆ ದಬ್ಬಿರಿ. ಯಾವ ವಿಚಾರಗಳು?
ಫಿಲಿಪ್ಪಿ 4:8ರಲ್ಲಿ ವಿವರಿಸಲ್ಪಟ್ಟಿರುವಂತೆ: “ಕಡೇ ಮಾತೇನಂದರೆ, ಸಹೋದರರೇ, ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ.”
ನಿಮ್ಮ ಜೀವಿತಕ್ಕೆ ತುಸು ಅರ್ಥವನ್ನು ತುಂಬುವುದು ಆವಶ್ಯಕವಾದದ್ದಾಗಿದೆ. ನಿಮ್ಮ ಜೀವಿತಕ್ಕೆ ಅರ್ಥವಿದೆ ಎಂದು ನೀವು ಭಾವಿಸುವುದಾದರೆ, ಅದಕ್ಕೆ ಪ್ರತಿಕ್ರಿಯಿಸಲು ಮತ್ತು ಅದನ್ನು ನೆರವೇರಿಸಲು ಪ್ರಯತ್ನಿಸುವಂತೆ ನೀವು ಪ್ರಚೋದಿಸಲ್ಪಡುವಿರಿ. ಎದೆಗುಂದಿಸುವ ಒಂಟಿತನದ ಒಂದು ಭಾವನೆಯಲ್ಲಿ ನೀವು ಬೀಳುವ ಸಂಭವವಿರುವುದಿಲ್ಲ. ವಿಕ್ಟರ್ ಫ್ರಾಂಕ್ಲ್ನ ಅರ್ಥಕ್ಕಾಗಿ ಮಾನವನ ಶೋಧನೆ (ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್) ಎಂಬ ಪುಸ್ತಕದಲ್ಲಿ ಇದು ಕುತೂಹಲಕರವಾಗಿ ತೋರಿಸಲ್ಪಟ್ಟಿದೆ. ಆತನು ಅದನ್ನು ಹಿಟ್ಲರನ ಸೆರೆಶಿಬಿರಗಳಲ್ಲಿದ್ದ ಕೈದಿಗಳಿಗೆ ಸಂಬಂಧಿಸಿ ಚರ್ಚಿಸುತ್ತಾನೆ. ತಮ್ಮ ಜೀವಿತಗಳಲ್ಲಿ ಅರ್ಥ ಪ್ರಜ್ಞೆಯನ್ನು ಹೊಂದಿರದೆ ಇರುವವರು ಒಂಟಿತನಕ್ಕೆ ಬಲಿಬೀಳುತ್ತಾರೆ ಮತ್ತು ಜೀವಿಸುವ ಇಚ್ಛೆಯನ್ನು ಕಳೆದುಕೊಳ್ಳುತ್ತಾರೆ. “ಒಬ್ಬನ ಆಂತರಿಕ ಮೌಲ್ಯದ ಸ್ವಪ್ರಜ್ಞೆಯು ಆತ್ಮಿಕ ವಿಚಾರಗಳಲ್ಲಿ ಅತ್ಯಧಿಕವಾಗಿ ಕೇಂದ್ರೀಕರಿಸಲ್ಪಟ್ಟಿರುವುದಾದರೆ, ಸೆರೆಶಿಬಿರದ ಜೀವಿತದಿಂದ ಅವನು ಕದಲಿಸಲ್ಪಡಲಾರನು.” ಅವನು ಮುಂದುವರಿಸಿದ್ದು: “ಯಾವುದೋ ವಿಧದಲ್ಲಿ, ತ್ಯಾಗದ ಅರ್ಥದಂತಹ ಒಂದು ಅರ್ಥವನ್ನು ಕಂಡುಕೊಂಡ ಕ್ಷಣದಲ್ಲಿ ಕಷ್ಟಾನುಭವವು ಕಷ್ಟಾನುಭವವಾಗುವುದರಿಂದ ನಿಂತುಹೋಗುತ್ತದೆ. . . . ಸಂಪತ್ತನ್ನು ಗಳಿಸುವುದು ಅಥವಾ ವೇದನೆಯಿಂದ ತಪ್ಪಿಸಿಕೊಳ್ಳುವುದಲ್ಲ, ಆದಕ್ಕೆ ಬದಲಾಗಿ ಅವನ ಜೀವಿತದಲ್ಲಿ ಒಂದು ಅರ್ಥವನ್ನು ಕಂಡುಕೊಳ್ಳುವುದೇ ಮಾನವನ ಮುಖ್ಯ ಚಿಂತೆಯಾಗಿದೆ. ಆದುದರಿಂದಲೇ ಅಂತಹ ಪರಿಸ್ಥಿತಿಯಲ್ಲಿ, ಅವನ ಕಷ್ಟಾನುಭವವು ಒಂದು ಅರ್ಥವನ್ನು ಹೊಂದಿರುವಲ್ಲಿ ನಿಶ್ಚಯವಾಗಿಯೂ, ಕಷ್ಟವನ್ನು ಅನುಭವಿಸಲು ಕೂಡ ಮಾನವನು ಸಿದ್ಧನಾಗಿದ್ದಾನೆ.”
ನಿಮಗೆ ಅಗತ್ಯವಿರುವ ಅಂತಿಮ ಸಂಬಂಧ
ದೇವರಿಗೆ ಮತ್ತು ಆತನ ವಾಕ್ಯವಾದ ಬೈಬಲಿಗೆ ಸಂಪೂರ್ಣವಾದ ವಚನಬದ್ಧತೆಯನ್ನು ಮಾಡುವುದೇ ನಿಜವಾದ ಒಂದು ಆತ್ಮಿಕ ಮನೋಭಾವವನ್ನು ಸಾಧಿಸುವ ಮಾರ್ಗವಾಗಿದೆ. ದೇವರಲ್ಲಿ ನಂಬಿಕೆ ಮತ್ತು ಆತನಿಗೆ ಶೃದ್ಧಾಪೂರ್ವಕವಾದ ಪ್ರಾರ್ಥನೆಯನ್ನು ಮಾಡುವುದು ನಮ್ಮ ಜೀವಿತಗಳಿಗೆ ಅರ್ಥವನ್ನು ಕೊಡಬಲ್ಲವು. ಅನಂತರ, ಮಾನವ ಸಂಬಂಧಗಳು ನಶಿಸಲ್ಪಡುವುದಾದರು ಕೂಡ, ನಾವು ಒಬ್ಬೊಂಟಿಗರಾಗಿರುವುದಿಲ್ಲ, ಅಥವಾ ಒಂಟಿತನಕ್ಕೆ ಗುರಿಯಾಗುವುದಿಲ್ಲ. ಫ್ರಾಂಕ್ಲ್ ಹೇಳಿದಂತೆ, ಅರ್ಥಗರ್ಭಿತವಾದ ಕಷ್ಟಾನುಭವವು ಸಹ್ಯವೂ, ಸಂತೋಷದ ಮೂಲವೂ ಆಗಿದೆ. ಮಾನವ ಸ್ವಭಾವದ ಕುರಿತು ಒಬ್ಬ ನಿರೀಕ್ಷಕರು ಅಂದದ್ದು: “ಸಿಂಹಾಸನಾಸೀನನಾಗಿರುವ ಒಬ್ಬ ಅರಸನು ಅಸೂಯೆಪಡುವಷ್ಟು ಸಂತೋಷವು ಮರಣ ಕಂಬದ ಮೇಲಿರುವ ಒಬ್ಬ ಹುತಾತ್ಮನಲ್ಲಿರಬಹುದು.”
ಮನುಷ್ಯರಿಂದ ಹಿಂಸೆಗೊಳಗಾದಾಗ ಕ್ರಿಸ್ತನ ಅಪೊಸ್ತಲರು ಆನಂದವನ್ನು ಅನುಭವಿಸಿದ್ದರು; ಅವರಿಗೆ ಅಂತಹ ಕಷ್ಟಾನುಭವವು ಮಹತ್ತಾದ ಅರ್ಥವುಳ್ಳದ್ದಾಗಿತ್ತು. “ನೀತಿಯ ನಿಮಿತ್ತವಾಗಿ ಹಿಂಸೆಯನ್ನು ತಾಳಿಕೊಳ್ಳುವವರು ಧನ್ಯರು; ಪರಲೋಕ ರಾಜ್ಯವು ಅವರದು. ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವದು; ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನೂ ಹೀಗೆಯೇ ಹಿಂಸೆಪಡಿಸಿದರಲ್ಲಾ.” (ಮತ್ತಾಯ 5:10-12) ತದ್ರೀತಿಯ ಒಂದು ಪ್ರತಿಕ್ರಿಯೆಯು ಅ. ಕೃತ್ಯಗಳು 5:40, 41ರಲ್ಲಿ ದಾಖಲಿಸಲ್ಪಟ್ಟಿದೆ: “ಅವರು ಅಪೊಸ್ತಲರನ್ನು ಕರೆಸಿ ಹೊಡಿಸಿ ಯೇಸುವಿನ ಹೆಸರನ್ನು ಹೇಳಿ ಮಾತಾಡಬಾರದೆಂದು ಅಪ್ಪಣೆಕೊಟ್ಟು ಅವರನ್ನು ಬಿಟ್ಟುಬಿಟ್ಟರು. ಅಪೊಸ್ತಲರು ತಾವು ಆ ಹೆಸರಿನ ನಿಮಿತ್ತವಾಗಿ ಅವಮಾನಪಡುವದಕ್ಕೆ ಯೋಗ್ಯರೆನಿಸಿಕೊಂಡೆವೆಂದು ಸಂತೋಷಿಸುತ್ತಾ ಹಿರೀಸಭೆಯ ಎದುರಿನಿಂದ ಹೊರಟುಹೋಗಿ ಸಾರುತ್ತಾ ಇದ್ದರು.”
ಗುಲಾಬಿ ಹೂವೊಂದನ್ನು ಬೆಳೆಸುವ ಸ್ಥಳದಲ್ಲಿ, ಒಂದು ತಿಸ್ಲ್ ಹೂವು ಬೆಳೆಯಲಾರದು
ನಿಮ್ಮ ಮನಸ್ಸಿನ ನೆಲವನ್ನು ಮನೋಹರವಾದ ಬೀಜಗಳು ಮತ್ತು ಸಕಾರಾತ್ಮಕವಾದ ಉದ್ದೇಶದಿಂದ ತುಂಬಿಸಿರಿ; ನಕಾರಾತ್ಮಕವಾದ ನಿರಾಶೆ ಮತ್ತು ಉತ್ಸಾಹಶೂನ್ಯ ಒಂಟಿತನದ ಬೀಜಗಳಿಗೆ ಸ್ಥಳಾವಕಾಶ ಕೊಡದಿರ್ರಿ. (ಹೋಲಿಸಿ ಕೊಲೊಸ್ಸೆ 3:2; 4:2) ಅದನ್ನು ಮಾಡುವುದು ಕಷ್ಟಕರವಾದದ್ದಾಗಿದೆಯೊ? ನಿರ್ದಿಷ್ಟ ಪರಿಸ್ಥಿತಿಗಳ ಕೆಳಗೆ, ಬಹುಶಃ ಅದು ಅಸಾಧ್ಯವಾದದ್ದಾಗಿದೆ. ಕವಿಯಿತ್ರಿಯೊಬ್ಬಳು ಬರೆದದ್ದು: “ಗುಲಾಬಿ ಹೂವೊಂದನ್ನು ಬೆಳೆಸುವ ಸ್ಥಳದಲ್ಲಿ, . . . ಒಂದು ತಿಸ್ಲ್ ಹೂವು ಬೆಳೆಯಲಾರದು,” ಅದು ಪುನಃ ಸಕಾರಾತ್ಮಕವಾದ ಪ್ರಯತ್ನವನ್ನು ಮತ್ತು ಇಚ್ಛಾಶಕ್ತಿಯ ನಿಶ್ಚಿತ ಉಪಯೋಗವನ್ನು ಆವಶ್ಯಪಡಿಸುತ್ತದೆ. ಆದರೆ ಅದನ್ನು ಮಾಡಸಾಧ್ಯವಿದೆ, ಮಾಡಲ್ಪಡುತ್ತಾ ಇದೆ.
ಲಾರಲ್ ನಿಜ್ಬಟ್ಳ ಉದಾಹರಣೆಯನ್ನು ಗಮನಿಸಿ. ಅವಳು ಪೋಲಿಯೋದಿಂದ ಬಳಲುತ್ತಿದ್ದಳು ಮತ್ತು 36 ವರ್ಷ ಪ್ರಾಯದಲ್ಲಿ ಅವಳಿಗೆ ಕೃತಕ ಶ್ವಾಸಕೋಶವು ಅಳವಡಿಸಲ್ಪಟ್ಟಿದ್ದು, 37 ವರ್ಷಗಳ ವರೆಗೆ ಅವಳು ನಿಸ್ಸಹಾಯಳಾಗಿ ಹಾಸಿಗೆ ಹಿಡಿದಿದಳ್ದು. ಕುತ್ತಿಗೆಯಿಂದ ಕೆಳಗೆ ಸಂಪೂರ್ಣವಾಗಿ ಪಾರ್ಶ್ವವಾಯುವಿನಿಂದ ಬಾಧಿಸಲ್ಪಟ್ಟು, ಅವಳು ತಲೆಯನ್ನು ಮಾತ್ರ ಚಲಿಸಶಕ್ತಳಾಗಿದ್ದಳು. ಆರಂಭದಲ್ಲಿ ಅವಳು ನಿಸ್ಸಹಾಯಕಳೆಂಬ ಭಾವನೆಯುಂಟಾಗುವಷ್ಟು ದುಃಖಿತಳಾಗಿದಳ್ದು. ಅನಂತರ, ಸ್ವಾನುಕಂಪದ ಒಂದು ದಿನವು ಕಳೆದ ಬಳಿಕ, ‘ಈ ಸ್ವಾನುಕಂಪ ಸಾಕು!’ ಎಂದು ಅವಳು ನಿರ್ಧರಿಸಿದಳು, ಇಬ್ಬರು ಮಕ್ಕಳನ್ನು ಪೋಷಿಸುವ ಮತ್ತು ಗಂಡನನ್ನು ನೋಡಿಕೊಳ್ಳುವ ಜವಾಬ್ದಾರಿ ಅವಳಿಗಿತ್ತು. ಅವಳ ಜೀವಿತವನ್ನು ಅವಳು ಪುನಃ ಚೇತನಗೊಳಿಸಿಕೊಳ್ಳತೊಡಗಿದಳು; ಕೃತಕ ಶ್ವಾಸಕೋಶದಿಂದ ಪ್ರತಿಬಂಧಿಸಲ್ಪಟ್ಟಿರುವುದಾದರೂ ಅವಳ ಮನೆಯ ಜವಾಬ್ದಾರಿಯನ್ನು ನಿರ್ವಹಿಸಲು ಅವಳು ಕಲಿತಳು.
ಲಾರಲ್ ಸ್ಪಲ್ಪ ಸಮಯ ನಿದ್ರಿಸುತ್ತಿದ್ದಳು. ರಾತ್ರಿಜಾವದ ದೀರ್ಘವಾದ ತಾಸುಗಳನ್ನು ಅವಳು ಹೇಗೆ ಕಳೆಯುತ್ತಿದ್ದಳು? ಒಂಟಿತನಕ್ಕೆ ತನ್ನನ್ನು ಒಪ್ಪಿಸಿಕೊಂಡೊ? ಇಲ್ಲ. ಅವಳ ಸ್ವಂತ ಬಲಕ್ಕಾಗಿ, ಅವಳ ಕ್ರೈಸ್ತ ಸಹೋದರ ಮತ್ತು ಸಹೋದರಿಯರ ಕುರಿತಾಗಿ, ದೇವರ ರಾಜ್ಯದ ಕುರಿತು ಇತರರಿಗೆ ಸಾಕ್ಷಿ ನೀಡುವ ಸುಸಂದರ್ಭಗಳಿಗಾಗಿ, ಅವಳ ಸ್ವರ್ಗೀಯ ತಂದೆಯಾದ ಯೆಹೋವನಿಗೆ ಅವಳು ಪ್ರಾರ್ಥಿಸಿದಳು. ಸುವಾರ್ತೆಯನ್ನು ಸಾರುವ ಮಾರ್ಗಗಳನ್ನು ಅವಳು ಯೋಜಿಸಿಕೊಂಡಳು ಮತ್ತು ಯೆಹೋವನ ನಾಮದ ಕುರಿತಾದ ಅವಳ ಸಾಕ್ಷಿಯಿಂದ ಅನೇಕ ಜನರನ್ನು ಪ್ರಭಾವಿಸಿದಳು. ಒಂಟಿತನದ ತಿಸ್ಲ್ಗಳು ಬೆಳೆಯುವಂತೆ ಅವಳು ಬಿಡಲಿಲ್ಲ; ಗುಲಾಬಿಯನ್ನು ಬೆಳೆಸುವುದರಲ್ಲಿ ಅವಳು ಹೆಚ್ಚು ಕಾರ್ಯಮಗ್ನಳಾಗಿದ್ದಳು.
ಹ್ಯಾರಲ್ಡ್ ಕಿಂಗ್ ಎಂಬ ವಾಚ್ ಟವರ್ ಮಿಷನೆರಿಯೊಬ್ಬನ ಪರಿಸ್ಥಿತಿಯು ಇದೇ ರೀತಿಯದ್ದಾಗಿತ್ತು. ಚೀನಾದ ಸೆರೆಮನೆಯೊಂದರಲ್ಲಿ ಐದು ವರ್ಷಗಳ ಒಂಟಿಸೆರೆಯ ಶಿಕ್ಷೆ ವಿಧಿಸಲ್ಪಟ್ಟಿದ್ದರೂ, ಅವರು ಒಂಟಿತನದ ದೀರ್ಘ ಬಂಧನವನ್ನು ಅನುಭವಿಸಿದ್ದ ಒಬ್ಬ ವ್ಯಕ್ತಿಯಾಗಿದ್ದರು. ಅವರು ಆ ನಕಾರಾತ್ಮಕ ಮನೋಭಾವವನ್ನು ತಿರಸ್ಕರಿಸಿದರು, ಮತ್ತು ಇಚ್ಛಾಶಕ್ತಿಯ ಒಂದು ಉದ್ದೇಶಪೂರ್ವಕ ಕ್ರಿಯೆಯ ಮೂಲಕ ತಮ್ಮ ಮನಸ್ಸನ್ನು ಬೇರೆ ದಿಕ್ಕಿಗೆ ಪ್ರಯೋಗಿಸಿದರು. ತದನಂತರ ಅವರು ಅದನ್ನು ಈ ರೀತಿಯಲ್ಲಿ ವಿವರಿಸಿದರು:
“‘ಸಾರುವ’ ಚಟುವಟಿಕೆಯ ಕುರಿತಾದ ಒಂದು ಕಾರ್ಯಕ್ರಮವನ್ನು ನಾನು ಏರ್ಪಡಿಸಿದೆ. ಆದರೆ ಒಂಟಿಸೆರೆಯಲ್ಲಿರುವಾಗ ಒಬ್ಬನು ಯಾರಿಗೆ ಸುವಾರ್ತೆಯನ್ನು ಸಾರುತ್ತಾನೆ? ನಾನು ನೆನಪಿಸಿಕೊಳ್ಳಬಲ್ಲ ವಿಷಯಗಳಿಂದ ಸೂಕ್ತವಾದ ಬೈಬಲ್ ಪ್ರಸಂಗಗಳನ್ನು ನಾನು ತಯಾರಿಸುತ್ತಿದ್ದೆ ಮತ್ತು ಅನಂತರ ಕಾಲ್ಪನಿಕ ವ್ಯಕ್ತಿಗಳಿಗೆ ಅದನ್ನು ಸಾರುವೆನೆಂದು ನಾನು ನಿರ್ಧರಿಸಿದೆ. ತದನಂತರ ಕಾಲ್ಪನಿಕ ಬಾಗಿಲೊಂದನ್ನು ಬಡಿಯುವ ಮೂಲಕ ಮತ್ತು ಕಾಲ್ಪನಿಕ ಮನೆಯವನಿಗೆ ಸಾಕ್ಷಿ ನೀಡುತ್ತಾ, ಬೆಳಗಿನ ಸಮಯದಲ್ಲಿ ಅನೇಕ ಮನೆಗಳನ್ನು ಭೇಟಿ ಮಾಡುತ್ತಿದ್ದೇನೋ ಎಂಬಂತೆ, ನಾನು ಸಾರುವ ಕೆಲಸದಲ್ಲಿ ತೊಡಗಿದೆ. ಸಕಾಲದಲ್ಲಿ ಸ್ಪಲ್ಪ ಆಸಕ್ತಿಯನ್ನು ತೋರಿಸಿದ ಕಾಲ್ಪನಿಕ ಶ್ರೀಮತಿ ಕಾರ್ಟರ್ಳನ್ನು ನಾನು ಭೇಟಿಯಾದೆ, ಮತ್ತು ಅನೇಕ ಬಾರಿ ಪುನಃ ಸಂದರ್ಶನೆಗಳನ್ನು ಮಾಡಿದ ಅನಂತರ ಕ್ರಮವಾದ ಬೈಬಲ್ ಅಭ್ಯಾಸವೊಂದನ್ನು ನಡೆಸಲು ನಾವು ಏರ್ಪಾಡುಗಳನ್ನು ಮಾಡಿದೆವು. ನಾನು ಅವುಗಳನ್ನು ಜ್ಞಾಪಿಸಿಕೊಂಡಂತೆಲ್ಲಾ, ಈ ಅಭ್ಯಾಸದ ನಡುವೆ ‘ದೇವರು ಸತ್ಯವಂತನೇ ಸರಿ’ ಪುಸ್ತಕದಿಂದ ಮುಖ್ಯವಾದ ವಿಷಯಗಳನ್ನು ಚರ್ಚಿಸಿದೆವು. ಈ ವಿಷಯಗಳ ದೃಢತೆಯು ನನ್ನ ಮನಸ್ಸಿನ ಮೇಲೆ ಇನ್ನೂ ಹೆಚ್ಚಾಗಿ ಅಚ್ಚೊತ್ತುವಂತೆ ಮಾಡಲಿಕ್ಕಾಗಿ, ಇದನ್ನೆಲ್ಲಾ ನಾನು ಕೇಳಿಸುವಂತೆ ಗಟ್ಟಿಯಾಗಿ ಮಾಡಿದೆ.”
ಹಿಟ್ಲರನ ಕಾನ್ಸಂಟ್ರೇಷನ್ ಶಿಬಿರಗಳಲ್ಲಿ ಬಂಧಿಸಲ್ಪಟ್ಟಿದ್ದ ಸಾವಿರಗಟ್ಟಲೆ ಯೆಹೋವನ ಸಾಕ್ಷಿಗಳು ತಮ್ಮ ನಂಬಿಕೆಯನ್ನು ತ್ಯಜಿಸಿದ್ದಾದರೆ, ಸ್ವಾತಂತ್ರ್ಯವನ್ನು ಅವರು ಗಳಿಸಬಹುದಿತ್ತು. ಕೊಂಚ ಜನರು ಹಾಗೆ ಮಾಡಿದರು. ಕೆಲವರು ಗಲ್ಲಿಗೇರಿಸಲ್ಪಡುವ ಮೂಲಕ, ಕೆಲವರು ಅಸ್ವಸ್ಥತೆ ಮತ್ತು ನ್ಯೂನ ಪೋಷಣೆಯ ಮೂಲಕ—ಸಾವಿರಾರು ಮಂದಿ ನಂಬಿಗಸ್ತರಾಗಿ ಮರಣಪಟ್ಟರು. ಸೆರೆಯಲ್ಲಿಡಲ್ಪಟ್ಟ ಯೋಜೆಫ್ ಎಂಬ ಹೆಸರಿನ ಸಾಕ್ಷಿಯೊಬ್ಬನ ಇಬ್ಬರು ಸಹೋದರರು ಬೇರೆ ಶಿಬಿರಗಳಲ್ಲಿ ಬಂಧಿಸಲ್ಪಟ್ಟಿದ್ದರು. ಒಬ್ಬನು ಅವನ ತಲೆಯನ್ನು ಕತ್ತರಿಸಲು ಕೆಳಕ್ಕೆ ಇಳಿಯುತ್ತಿದ್ದ ಕತ್ತಿಯನ್ನು ದೃಷ್ಟಿಸಲಿಕ್ಕಾಗಿ ಮೇಲ್ಮುಖವಾಗಿ ಮಲಗುವಂತೆ ಒತ್ತಾಯಿಸಲ್ಪಟ್ಟನು. ಯೋಜೆಫ್ ವಿವರಿಸಿದ್ದು: “ಶಿಬಿರದಲ್ಲಿದ್ದ ಇತರರು ಇದನ್ನು ಕೇಳಿದಾಗ ಅವರು ನನ್ನನ್ನು ಅಭಿನಂದಿಸಿದರು. ಅವರ ಸಕಾರಾತ್ಮಕ ಮನೋಭಾವವು ನನ್ನಲ್ಲಿ ತೀವ್ರವಾದ ಪರಿಣಾಮವನ್ನುಂಟುಮಾಡಿತು. ಬದುಕಿ ಉಳಿಯುವುದಕ್ಕಿಂತಲೂ, ನಿಷ್ಠೆಯಿಂದ ಉಳಿಯುವುದು ನಮಗೆ ಹೆಚ್ಚಿನ ಅರ್ಥವುಳ್ಳದ್ದಾಗಿತ್ತು.”
ಗುಂಡುಹಾರಿಸುವ ದಳವೊಂದನ್ನು ಎದುರಿಸುತ್ತಿದ್ದ, ಅವನ ಮತ್ತೊಬ್ಬ ಸಹೋದರನನ್ನು, ಅಂತಿಮವಾಗಿ ಅವನಿಗೆ ಏನನ್ನಾದರೂ ಹೇಳುವ ಅಪೇಕ್ಷೆಯಿದೆಯೊ ಎಂದು ಕೇಳಲಾಯಿತು. ಪ್ರಾರ್ಥನೆಯನ್ನು ಮಾಡಲು ಅನುಮತಿ ನೀಡುವಂತೆ ಅವನು ಕೇಳಿಕೊಂಡನು, ಮತ್ತು ಅನುಮತಿ ನೀಡಲ್ಪಟ್ಟಿತು. ಅವನ ಪ್ರಾರ್ಥನೆಯು ಎಷ್ಟೊಂದು ಹೃದಯ ದ್ರಾವಕ ಮತ್ತು ಹೃತ್ಪೂರ್ವಕವಾಗಿ ಉಲ್ಲಾಸಭರಿತವಾಗಿತ್ತೆಂದರೆ, ಗುಂಡುಹಾರಿಸಲು ಆಜ್ಞೆಯು ಕೊಡಲ್ಪಟ್ಟಿದ್ದರೂ, ಸೇನಾದಳದಲ್ಲಿ ಯಾರೊಬ್ಬರೂ ಅದಕ್ಕೆ ವಿಧೇಯರಾಗಲಿಲ್ಲ. ಆಜ್ಞೆಯು ಪುನರಾವೃತ್ತಿಸಲ್ಪಟ್ಟಿತು, ತರುವಾಯ ಒಂದು ಗುಂಡು ಹಾರಿಸಲ್ಪಟ್ಟು ಅದು ಅವನ ದೇಹಕ್ಕೆ ಬಡಿಯಿತು. ಇದರಿಂದ ರೋಷಗೊಂಡ ಆಜ್ಞಾಧಿಕಾರಿಯು ಅವನ ಸ್ವಂತ ಪಿಸ್ತೂಲನ್ನು ತೆಗೆದುಕೊಂಡನು ಮತ್ತು ಮರಣದಂಡನೆಯನ್ನು ಪೂರೈಸಿದನು.
ಜೀವಿತಗಳನ್ನು ನಿಜವಾಗಿಯೂ ಅರ್ಥಭರಿತವನ್ನಾಗಿ ಯಾವುದು ಮಾಡಬಲ್ಲದು
ಈ ಎಲ್ಲಾ ನಿದರ್ಶನಗಳು ದೇವರಲ್ಲಿ ಬಲವಾದ ನಂಬಿಕೆಯನ್ನು ಒಳಗೊಂಡಿದ್ದವು. ಬೇರೆ ಎಲ್ಲವನ್ನೂ ಪ್ರಯತ್ನಿಸಿ ಸೋತುಹೋದಾಗ, ಒಂಟಿತನದ ವಿರುದ್ಧವಾಗಿ ಜಯಗಳಿಸುವಂತೆ ನಂಬಿಕೆಯು ಯಾವಾಗಲೂ ಸಹಾಯಮಾಡುತ್ತದೆ ಮತ್ತು ಒಮ್ಮೆ ಶೂನ್ಯವಾಗಿದ್ದ ಜೀವಿತಗಳನ್ನು ಅರ್ಥಭರಿತವಾದದ್ದಾಗಿ ಮಾಡುತ್ತದೆ. ಪ್ರಾಪಂಚಿಕ ರೀತಿಯಲ್ಲಿ ಅರ್ಥಭರಿತವಾದದ್ದೆಂದು ಪರಿಗಣಿಸಲ್ಪಟ್ಟ ಅನೇಕ ಜೀವಿತಗಳು ವಾಸ್ತವವಾಗಿ ಅರ್ಥಹೀನವಾಗಿವೆ. ಇದು ಯಾಕೆ ಹೀಗೆ? ಯಾಕಂದರೆ ಇದರ ಅಂತಿಮ ಫಲಿತಾಂಶವು ಮರಣವಾಗಿದೆ, ಅವರು ಮಣ್ಣಿಗೆ ಹಿಂತಿರುಗುತ್ತಾರೆ, ಮರೆಯಲ್ಪಡುತ್ತಾರೆ, ಮಾನವತ್ವದ ಸಮುದ್ರಗಳ ಮೇಲೆ ಕಿರುದೆರೆಗಳ ಗುರುತು ಬಿಡಲ್ಪಡುವುದಿಲ್ಲ, ಕಾಲವೆಂಬ ಮರಳಿನ ಮೇಲೆ ಹೆಜ್ಜೆಗುರುತುಗಳಿಲ್ಲ. ಪ್ರಸಂಗಿ 9:5 ಹೇಳುವಂತೆ ಅದು ಇದೆ: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; ಅವರಿಗೆ ಇನ್ನು ಮೇಲೆ ಪ್ರತಿಫಲವೇನೂ ಇಲ್ಲ, ಅವರ ಜ್ಞಾಪಕವೇ ಹೋಯಿತಲ್ಲವೆ.” ಯೆಹೋವನ ಉದ್ದೇಶಗಳಿಂದ ಪ್ರತ್ಯೇಕವಾಗಿ ಜೀವಿಸಲ್ಪಟ್ಟ ಜೀವಿತಗಳಿಗೆ ಕೊಡಲ್ಪಡುವ ಯಾವುದೇ ಅರ್ಥವು ವ್ಯರ್ಥವಾದದ್ದಾಗಿದೆ.
ನಕ್ಷತ್ರಭರಿತ ಆಕಾಶವನ್ನು ನೋಡಿರಿ, ಮಬ್ಬಾದ ಆಕಾಶ ಗುಮ್ಮಟದ ವಿಸ್ತಾರತೆಯ ಅನುಭವ ಪಡೆಯಿರಿ, ಮತ್ತು ನಿಮ್ಮ ಅರ್ಥಪೂರ್ಣತೆಯ ಪರಿಜ್ಞಾನದಿಂದಾಗಿ ನೀವು ತೀರ ಅಲ್ಪರೆಂಬ ಅನಿಸಿಕೆ ನಿಮಗಾಗುತ್ತದೆ. “ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ ನೀನು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡುವಾಗ—ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಸಬೇಕು? ಮಾನವನು ಎಷ್ಟರವನು, ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು,” ಎಂದು ಬರೆದಾಗ ಕೀರ್ತನೆಗಾರ ದಾವೀದನ ಭಾವನೆಗಳನ್ನು ನೀವು ಗ್ರಹಿಸಿರಿ. ದಾವೀದನ ಮಗನಾದ ಸೊಲೊಮೋನನು ಮಾನವನ ಕೆಲಸಗಳನ್ನು ತಳ್ಳಿಹಾಕುತ್ತಾ, ಅಂದದ್ದು, “ಸಮಸ್ತವೂ ವ್ಯರ್ಥ,” ಮತ್ತು ಮುಕ್ತಾಯಗೊಳಿಸಿದ್ದು: “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ ಕರ್ತವ್ಯವು ಇದೇ.”—ಕೀರ್ತನೆ 8:3, 4; ಪ್ರಸಂಗಿ 12:8, 13.
ಅನಂತರ, ಅಂತಿಮ ವಿಶೇಷ್ಲಣೆಯಲ್ಲಿ, ಒಬ್ಬೊಂಟಿಗನಾದ ವ್ಯಕ್ತಿಯೊಬ್ಬನು ಅಥವಾ ಯಾರಾದರೂ ಒಬ್ಬ ವ್ಯಕ್ತಿ, ಆ ವಿಚಾರದ ಕುರಿತು ತನ್ನ ಜೀವಿತಕ್ಕೆ ಅರ್ಥವನ್ನು ಹೇಗೆ ತುಂಬುತ್ತಾನೆ? ದೇವರ ಆಜೆಗ್ಞಳಿಗೆ ವಿಧೇಯನಾಗುತ್ತಾ, ದೇವರ ಭಯಕ್ಕನುಸಾರ ತನ್ನ ಜೀವಿತವನ್ನು ಜೀವಿಸುವ ಮೂಲಕವೇ. ಆಗ ಮಾತ್ರ ಅವನು ಈ ವಿಸ್ತಾರವಾದ ವಿಶ್ವದ ನಿರ್ಮಾಣಿಕನಾದ ದೇವರ ಉದ್ದೇಶಗಳೊಂದಿಗೆ ಹೊಂದಿಕೊಳ್ಳಬಲ್ಲನು, ಮತ್ತು ಆ ಶಾಶ್ವತವಾದ ದೈವಿಕ ಏರ್ಪಾಡಿನ ಭಾಗವಾಗಿರಬಲ್ಲನು.
ದೇವರು ನಿಮ್ಮೊಂದಿಗಿರುವಲ್ಲಿ, ನೀವು ಎಂದೂ ಒಬ್ಬಂಟಿಗರಲ್ಲ
ಆಫ್ರಿಕದ ನಂಬಿಗಸ್ತ ಯೆಹೋವನ ಸಾಕ್ಷಿಯೊಬ್ಬಳು, ಭೀಕರ ಹಿಂಸೆಯನ್ನು ಅನುಭವಿಸಿದ ಬಳಿಕ ಮತ್ತು ತೊರೆಯಲ್ಪಟ್ಟ ಮನೋಭಾವವುಳ್ಳವಳಾಗಿ ಹೇಳಿದ್ದೇನಂದರೆ, ಅವಳ ಮಾನವ ಸಂಬಂಧಗಳು ವಿಫಲಗೊಂಡರೂ, ಇನ್ನೂ ಅವಳು ಒಬ್ಬಂಟಿಗಳಾಗಿರಲಿಲ್ಲ. ಕೀರ್ತನೆ 27:10ನ್ನು ಅವಳು ಉಲ್ಲೇಖಿಸಿದಳು: “ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.” ಇದೇ ರೀತಿಯ ಅನುಭವವು ಯೇಸುವಿಗಾಯಿತು. “ನೋಡಿರಿ, ನಿಮ್ಮಲ್ಲಿ ಒಬ್ಬೊಬ್ಬನು ತನ್ನತನ್ನ ಸ್ಥಳಕ್ಕೆ ಚದರಿಹೋಗಿ ನನ್ನನ್ನು ಒಂಟಿಗನಾಗಿ ಬಿಡುವ ಕಾಲ ಬರುವದು, ಈಗ ಬಂದಿದೆ. ಆದರೆ ನಾನು ಒಂಟಿಗನಲ್ಲ, ತಂದೆಯು ನನ್ನ ಸಂಗಡ ಇದ್ದಾನೆ.”—ಯೋಹಾನ 16:32
ಯೇಸು ಒಬ್ಬೊಂಟಿಗನಾಗಿರಲು ಭಯಪಡುತ್ತಿರಲಿಲ್ಲ. ಆತನು ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಏಕಾಂತತೆಯನ್ನು ಆಯ್ದುಕೊಂಡನು. ಆತನು ಒಬ್ಬನೇ ಇದ್ದಾಗ ಏಕಾಂಗಿಯಾಗಿರಲಿಲ್ಲ. ಆತನು ದೇವರ ಆತ್ಮದ ಹರಿಯುವಿಕೆಗೆ ಸ್ವತಃ ತನ್ನನ್ನು ಒಪ್ಪಿಸಿಕೊಂಡನು ಮತ್ತು ಆತನ ಸೃಷ್ಟಿಗಳಿಂದ ಆವರಿಸಲ್ಪಟ್ಟಿರುವಾಗ ಆತನ ನಿಕಟ ಸಂಬಂಧವನ್ನು ಅನುಭವಿಸಿದ್ದನು. ದೇವರ ಸಹವಾಸದಲ್ಲಿ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಳ್ಳಲಿಕ್ಕಾಗಿ ಕೆಲವೊಮ್ಮೆ ಆತನು ಜನರ ಸಹವಾಸವನ್ನು ದೂರಮಾಡಿದನು. ಆತನು ‘ದೇವರ ಸಮೀಪಕ್ಕೆ ಬಂದನು; ದೇವರು ಆತನ ಸಮೀಪಕ್ಕೆ ಬಂದನು.’ (ಯಾಕೋಬ 4:8) ನಿಸ್ಸಂದೇಹವಾಗಿ ಆತನು ದೇವರ ಅತ್ಯಂತ ಆಪ್ತ ಸೇಹಿತನಾಗಿದ್ದನು.
ಶಾಸ್ತ್ರವಚನಗಳು ವಿವರಿಸುವಂತಹ ರೀತಿಯ ಒಬ್ಬ ಸ್ನೇಹಿತನು ಅಮೂಲ್ಯವಾದ ಒಂದು ವಸ್ತುವಾಗಿದ್ದಾನೆ. (ಜ್ಞಾನೋಕ್ತಿ 17:17; 18:24) ಯೆಹೋವ ದೇವರಲ್ಲಿ ಆತನಿಗಿದ್ದ ಸಮಗ್ರವಾದ ನಂಬಿಕೆ ಮತ್ತು ಯೆಹೋವನಿಗೆ ಆತನ ಸಂಪೂರ್ಣ ವಿಧೇಯತೆಯ ಕಾರಣದಿಂದ, ಅಬ್ರಹಾಮನಿಗೆ “ದೇವರ ಸ್ನೇಹಿತನು ಎಂಬ ಹೆಸರು . . . ಉಂಟಾಯಿತು.” (ಯಾಕೋಬ 2:23) ಯೇಸು ತನ್ನ ಹಿಂಬಾಲಕರಿಗೆ ಅಂದದ್ದು: “ನಾನು ನಿಮಗೆ ಕೊಟ್ಟ ಆಜೆಗ್ಞಳಿಗೆ ಸರಿಯಾಗಿ ನೀವು ನಡೆದರೆ ನೀವು ನನ್ನ ಸ್ನೇಹಿತರು. ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳನ್ನುವದಿಲ್ಲ; ಯಜಮಾನನು ಮಾಡುವಂಥದು ಆಳಿಗೆ ತಿಳಿಯುವದಿಲ್ಲ. ನಿಮ್ಮನ್ನು ಸ್ನೇಹಿತರೆಂದು ಹೇಳಿದ್ದೇನೆ; ತಂದೆಯ ಕಡೆಯಿಂದ ನಾನು ಕೇಳಿದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ.”—ಯೋಹಾನ 15:14, 15.
ಯೆಹೋವ ದೇವರು ಮತ್ತು ಯೇಸು ಕ್ರಿಸ್ತನಂತಹ ಸ್ನೇಹಿತರು ಇರುವಾಗ, ನಂಬಿಕೆಯುಳ್ಳವರೆಲ್ಲರು ಒಂಟಿತನದ ವಿರುದ್ಧವಾದ ಅವರ ಹೋರಾಟವನ್ನು ಜಯಿಸುವುದರಲ್ಲಿ ಹೇಗೆ ಸೋತುಹೋಗಸಾಧ್ಯವಿದೆ? (g93 9/22)
[ಪುಟ 8,9 ರಲ್ಲಿರುವ ಚಿತ್ರ]
ಪ್ರಾರ್ಥನೆ ಮತ್ತು ಇತರ ಚಟುವಟಿಕೆಗಳು ಒಂಟಿತನವನ್ನು ತ್ಯಜಿಸುವಂತೆ ನಿಮಗೆ ಸಹಾಯ ಮಾಡಬಲ್ಲವು
[ಪುಟ 10 ರಲ್ಲಿರುವ ಚಿತ್ರ]
ಯಾವುದೇ ಕೇಡಿನ ಪರಿಸ್ಥಿತಿಗಳ ಕೆಳಗೆ ದೇವರಲ್ಲಿ ನಂಬಿಕೆಯು ಒಂಟಿತನವನ್ನು ಜಯಿಸಬಲ್ಲದು ಎಂಬುದನ್ನು ಹ್ಯಾರಲ್ಡ್ ಕಿಂಗ್ ಮತ್ತು ಕಾನ್ಸಂಟ್ರೇಷನ್ ಶಿಬಿರಗಳಲ್ಲಿದ್ದ, ಇತರ ಸಾವಿರಗಟ್ಟಲೆ ಯೆಹೋವನ ಸಾಕ್ಷಿಗಳ ಅನುಭವಗಳು ನಿರೂಪಿಸುತ್ತವೆ.
[ಕೃಪೆ]
U.S. National Archives photo