ಅನನುಭವಿಗಳು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಿರಿ
1 ಶಿಷ್ಯರನ್ನಾಗಿ ಮಾಡುವ ಕೆಲಸದ ಮೂಲಕ, ನಾವು ಇತರರಿಗೆ, ದೇವರು ಅವರಿಂದ ಏನನ್ನು ಅಪೇಕ್ಷಿಸುತ್ತಾನೆಂಬುದನ್ನು ಕಲಿಸುತ್ತೇವೆ. (ಮತ್ತಾ. 28:19, 20) ಅದನ್ನು ಮಾಡಲಿಕ್ಕಾಗಿ, ಲೋಕವ್ಯಾಪಕವಾಗಿ 50 ಲಕ್ಷಕ್ಕಿಂತಲೂ ಹೆಚ್ಚಿನ ಸಾಕ್ಷಿಗಳಿಂದ ಪ್ರಚಂಡವಾದ ಪ್ರಯತ್ನವು ಮಾಡಲ್ಪಡುತ್ತಿದೆ. ವ್ಯಯಿಸಲ್ಪಟ್ಟ ತಾಸುಗಳು, ನೀಡಲ್ಪಟ್ಟಿರುವ ಸಾಹಿತ್ಯ, ಅಥವಾ ಆರಂಭಿಸಲ್ಪಟ್ಟಿರುವ ಬೈಬಲ್ ಅಭ್ಯಾಸಗಳಿಂದ ಯಶಸ್ಸು ಅಳೆಯಲ್ಪಡುವುದಿಲ್ಲ. ಜನರು, ತಾವೇನನ್ನು ಕಲಿಯುತ್ತಾರೊ ಅದನ್ನು ಅರ್ಥಮಾಡಿಕೊಂಡು, ಕ್ರಿಯೆಗೊಳ್ಳುವಾಗ, ನಾವು ನಮ್ಮ ಉದ್ದೇಶವನ್ನು ಸಾಧಿಸುತ್ತೇವೆ.
2 ಇತರರಿಗೆ ಆತ್ಮಿಕವಾಗಿ ಸಹಾಯಮಾಡುವುದರಲ್ಲಿ “ಅನನುಭವಿಗಳು ಅರ್ಥಮಾಡಿಕೊಳ್ಳುವಂತೆ ಮಾಡು”ವುದು (NW) ಒಳಗೊಂಡಿದೆ. (ಕೀರ್ತ. 119:130) ಜನರು “ಅದರ ಅರ್ಥವನ್ನು ತಿಳಿದು”ಕೊಂಡಾಗಲೇ, ಹೃದಯಗಳು ಪ್ರಭಾವಿಸಲ್ಪಡುತ್ತವೆ ಮತ್ತು ಅವರು ಪ್ರಚೋದಿಸಲ್ಪಡುತ್ತಾರೆ. (ಮತ್ತಾ. 15:10) ನಮ್ಮ ಕೆಲಸವು ವಿಸ್ತರಿಸಿದಂತೆ ಮತ್ತು ತೀವ್ರಗೊಂಡಂತೆ, ನಾವು ಸರಳತೆಯಿಂದ ಮಾತಾಡುವ ಮತ್ತು ಕಲಿಸುವ ಅಗತ್ಯವನ್ನು ಹೆಚ್ಚೆಚ್ಚು ಗಣ್ಯಮಾಡಲಾರಂಭಿಸುತ್ತೇವೆ. ಈ ಕಾರಣದಿಂದಲೇ ಸೊಸೈಟಿಯು, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರನ್ನು ಪ್ರಕಾಶಿಸಿದೆ. ಅದರಲ್ಲಿ, ಬೈಬಲಿನ ಮೂಲಭೂತ ಬೋಧನೆಗಳನ್ನು ಆವರಿಸುವ ಒಂದು ಸಮಗ್ರ ಅಧ್ಯಯನ ಕ್ರಮವು ಅಡಕವಾಗಿದೆ. ಪಾಠಗಳು ಚಿಕ್ಕದ್ದಾಗಿವೆ, ಶಬ್ದರಚನೆಯು ಜಟಿಲವಾದದ್ದಲ್ಲ, ಮತ್ತು ಉಪದೇಶವು ಗ್ರಹಿಸಲು ಸುಲಭವಾದುದಾಗಿದೆ. ಇದು ಬ್ರೋಷರಿಗೆ ವ್ಯಾಪಕವಾದ ಆಕರ್ಷಣೆಯನ್ನು ಕೊಡುತ್ತದೆ.
3 ಈ ಬ್ರೋಷರನ್ನು ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಚಂದಾಗಳ ಜೊತೆಗೆ ನೀಡಸಾಧ್ಯವಿದೆ. ಗತಸಮಯದಲ್ಲಿ ಸಿದ್ಧಮನಸ್ಸಿನಿಂದ ಸಾಹಿತ್ಯವನ್ನು ಸ್ವೀಕರಿಸಿರುವ ಜನರಿಗೆ ಈ ಬ್ರೋಷರನ್ನು ಕೊಂಡೊಯ್ಯಿರಿ. ಮಕ್ಕಳಿಗೆ ಕಲಿಸುವುದರಲ್ಲಿ, ನೀವು ಸುಲಲಿತವಾಗಿ ಮಾತಾಡಲಾರದ ಒಂದು ಭಾಷೆಯನ್ನಾಡುವ ಜನರಿಗೆ ಕಲಿಸುವುದರಲ್ಲಿ, ಮತ್ತು ಸೀಮಿತ ಓದುವ ಸಾಮರ್ಥ್ಯವುಳ್ಳವರಿಗೆ ಕಲಿಸುವುದರಲ್ಲಿ ಇದು ವಿಶೇಷವಾಗಿ ಉಪಯುಕ್ತವಾಗಿರಬಲ್ಲದು ಎಂಬುದನ್ನು ನೆನಪಿನಲ್ಲಿಡಿರಿ.
4 ಒಂದು ಸರಳವಾದ ಪ್ರಸ್ತಾವವನ್ನು ಉಪಯೋಗಿಸಿರಿ: ಅಪೇಕ್ಷಿಸು ಬ್ರೋಷರನ್ನು ಪ್ರಸ್ತುತಪಡಿಸುತ್ತಿರುವಾಗ, ಪುಟ 2ನ್ನು ತೋರಿಸಿರಿ. “ಈ ಬ್ರೋಷರ್ ಒಂದು ಬೈಬಲ್ ಅಧ್ಯಯನದ ಕ್ರಮದೋಪಾದಿ ವಿನ್ಯಾಸಿಸಲ್ಪಟ್ಟಿದೆ” ಎಂಬುದು ಅಲ್ಲಿ ವಿವರಿಸಲ್ಪಟ್ಟಿದೆ. ಆ ವ್ಯಕ್ತಿಯು ಬೈಬಲನ್ನು ಅಭ್ಯಾಸಿಸುವ ಅಗತ್ಯ ಏಕೆ ಇದೆಯೆಂಬುದನ್ನು ತೋರಿಸಲು ಪುಟ 3ರಲ್ಲಿರುವ ಪ್ಯಾರಗ್ರಾಫ್ 3ರ ಕಡೆಗೆ ಗಮನ ಸೆಳೆಯಿರಿ. ಸರಳವಾದ ಬೈಬಲ್ ಸತ್ಯಗಳನ್ನು ಪ್ರಕಟಪಡಿಸುವ ಪಾಠದ ಶೀರ್ಷಿಕೆಗಳಲ್ಲಿ ಕೆಲವು ಶೀರ್ಷಿಕೆಗಳ ಮೂಲಕ ಅವನ ಆಸಕ್ತಿಯನ್ನು ಕೆರಳಿಸಿರಿ. ಈ ಬ್ರೋಷರ್, ಕಲಿಯುವುದನ್ನು ಹೇಗೆ ಆನಂದದಾಯಕವನ್ನಾಗಿ ಮಾಡುತ್ತದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ, ಮತ್ತು ಅವನಿಗೆ ವೈಯಕ್ತಿಕ ಸಹಾಯವನ್ನು ಕೊಡಲು ಸಿದ್ಧರಿದ್ದೀರೆಂದು ಹೇಳಿರಿ.
5 ಒಂದು ಪ್ರಗತಿಪರ ಅಭ್ಯಾಸವನ್ನು ನಡಿಸಿರಿ: ನಮ್ಮ ಗುರಿಯು ಕೇವಲ ಅಭ್ಯಾಸಗಳನ್ನು ನಡಿಸುವುದಕ್ಕಿಂತ ಹೆಚ್ಚಿನದ್ದನ್ನು ಮಾಡುವುದಾಗಿದೆ—ಸತ್ಯಾರಾಧನೆಯ ದೃಢ ಬೆಂಬಲಿಗರಾಗಿ ಪರಿಣಮಿಸುವ ಶಿಷ್ಯರನ್ನು ನಾವು ಮಾಡಬಯಸುತ್ತೇವೆ. ಈ ಬ್ರೋಷರನ್ನು ಕೆಲವೇ ವಾರಗಳಲ್ಲಿ ಆವರಿಸಸಾಧ್ಯವಿದೆ ಮತ್ತು ಅದು ಜ್ಞಾನ ಪುಸ್ತಕದ ಒಂದು ಅಭ್ಯಾಸಕ್ಕೆ ನಡಿಸತಕ್ಕದ್ದು. (ಪುಟ 31ರಲ್ಲಿರುವ ಪಾದಟಿಪ್ಪಣಿಯನ್ನು ನೋಡಿರಿ.) ಆರಂಭದಿಂದಲೇ, ಯೆಹೋವನ ಸಂಸ್ಥೆಯನ್ನು ಗುರುತಿಸುವಂತೆ ವಿದ್ಯಾರ್ಥಿಗೆ ಸಹಾಯ ಮಾಡಿರಿ. (ರೀಸನಿಂಗ್ ಪುಸ್ತಕದ 283-4ನೆಯ ಪುಟಗಳನ್ನು ನೋಡಿರಿ.) ಸಭಾ ಕೂಟಗಳ ಮೌಲ್ಯವನ್ನು ಒತ್ತಿಹೇಳಿರಿ, ಮತ್ತು ಅವುಗಳಿಗೆ ಹಾಜರಾಗುವುದು, ಸತ್ಯಾರಾಧನೆಯನ್ನು ಕಾರ್ಯರೂಪಕ್ಕೆ ಹಾಕುವ ವಿಧದ ಕುರಿತಾದ ಸಮಗ್ರ ತಿಳಿವಳಿಕೆಯನ್ನು ಒದಗಿಸುತ್ತದೆಂಬುದನ್ನು ವಿವರಿಸಿರಿ.—ಇಬ್ರಿ. 10:24, 25.
6 ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಈ ವಿಶೇಷ ಕಾರ್ಯದಲ್ಲಿ ಪೂರ್ಣವಾದ ಪಾಲ್ಗೊಳ್ಳುವಿಕೆಯು, ಜೀವಕ್ಕೆ ನಡಿಸುವ “ತಿಳಿವಳಿಕೆಯನ್ನು ಪಡೆದುಕೊಳ್ಳು”ವಂತೆ (NW) ಪ್ರಾಮಾಣಿಕ ವ್ಯಕ್ತಿಗಳಿಗೆ ಸಹಾಯ ಮಾಡುವುದರಿಂದ ಬರುವ ಆನಂದವನ್ನು ನಮಗೆ ನಿಶ್ಚಯವಾಗಿಯೂ ತರುವುದು.—ಜ್ಞಾನೋ. 4:5.