ಇತರರಿಗಾಗಿ ಯಥಾರ್ಥವಾಗಿ ಚಿಂತಿಸುವ ಮೂಲಕ ಯೆಹೋವನನ್ನು ಅನುಕರಿಸಿರಿ
1 ಇತರರಿಗಾಗಿ ಯಥಾರ್ಥವಾದ ಚಿಂತೆಯನ್ನು ಪ್ರದರ್ಶಿಸುವುದರಲ್ಲಿ ಯೆಹೋವನು ಅತ್ಯಂತ ಮಹಾನ್ ಮಾದರಿಯಾಗಿದ್ದಾನೆ. ವಿಶ್ವಸಾರ್ವಭೌಮನೋಪಾದಿ, ತನ್ನ ಮಾನವ ಸೃಷ್ಟಿಯ ಅಗತ್ಯಗಳಿಗೆ ಆತನು ಸೂಕ್ಷ್ಮಸಂವೇದಿಯಾಗಿದ್ದಾನೆ. (1 ಪೇತ್ರ 5:7) ನೀತಿವಂತರೂ ಅನೀತಿವಂತರೂ ಆದ ಜನರ ಮೇಲೆ ಸೂರ್ಯನು ಉದಯಿಸುವಂತೆ ಮತ್ತು ಮಳೆಯು ಸುರಿಯುವಂತೆ ಮಾಡುವ ತನ್ನ ತಂದೆಯ ಗುಣಗಳನ್ನು ಪ್ರದರ್ಶಿಸುವಂತೆ ಯೇಸು ತನ್ನ ಹಿಂಬಾಲಕರನ್ನು ಉತ್ತೇಜಿಸಿದನು. (ಮತ್ತಾ. 5:45) ಇತರರಿಗಾಗಿ ಯಥಾರ್ಥ ಚಿಂತೆಯನ್ನು ತೋರಿಸುವ ಮೂಲಕ ನೀವು ಯೆಹೋವನನ್ನು ಅನುಕರಿಸಬಲ್ಲಿರಿ—ನೀವು ಸಂಧಿಸುವ ಪ್ರತಿಯೊಬ್ಬರೊಂದಿಗೆ ರಾಜ್ಯ ಸಂದೇಶವನ್ನು ಹಂಚಿಕೊಳ್ಳಲು ಸಿದ್ಧರಾಗಿರುವುದರ ಮೂಲಕವೇ. ಜುಲೈ ತಿಂಗಳಿನಲ್ಲಿ ಶುಶ್ರೂಷೆಯಲ್ಲಿ ಉಪಯೋಗಿಸಲ್ಪಡಲಿರುವ ಬ್ರೋಷರ್ಗಳೊಂದಿಗೆ ಸಂಪೂರ್ಣವಾಗಿ ಪರಿಚಿತರಾಗಿರುವ ಮೂಲಕ, ನೀವು ಇತರರಿಗೆ ಆತ್ಮಿಕ ನೆರವನ್ನೀಯಲು ಒಂದು ಒಳ್ಳೆಯ ಸ್ಥಾನದಲ್ಲಿರುವಿರಿ. ಆರಂಭದ ಭೇಟಿಗಾಗಿ ನೀವು ಹೇಗೆ ತಯಾರಿಸಬಹುದು ಮತ್ತು ಅನಂತರ ಸಮಯೋಚಿತ ಪುನರ್ಭೇಟಿಗಳೊಂದಿಗೆ ಆಸಕ್ತಿಯನ್ನು ಅನುಸರಿಸಬಹುದೆಂಬುದರ ಕುರಿತಾದ ಕೆಲವು ವಿಚಾರಗಳನ್ನು ಈ ಮುಂದಿನ ಸಲಹೆಗಳು ನೀಡುತ್ತವೆ.
2 “ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?” ಎಂಬ ಬ್ರೋಷರನ್ನು ನೀಡುತ್ತಿರುವಾಗ, ನೀವು ಹೀಗೆ ಹೇಳಸಾಧ್ಯವಿದೆ:
◼ “ದೇವರು ಮಾನವರ ಕುರಿತು ನಿಜವಾಗಿಯೂ ಚಿಂತಿಸುತ್ತಾನಾದರೆ ಅವರು ಕಷ್ಟಾನುಭವಿಸುವಂತೆ ಆತನು ಏಕೆ ಅನುಮತಿಸುತ್ತಾನೆಂದು ನೀವೆಂದಾದರೂ ಸೋಜಿಗಪಟ್ಟಿದ್ದೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಬ್ರೋಷರ್ ಈ ಪ್ರಶ್ನೆಗೆ ಕೇವಲ ತೃಪ್ತಿಕರವಾದ ಉತ್ತರವನ್ನು ನೀಡುತ್ತದೆ ಮಾತ್ರವಲ್ಲ, ಮನುಷ್ಯನು ತನ್ನ ಮೇಲೆ ಮತ್ತು ತನ್ನ ಭೌಮಿಕ ಗೃಹದ ಮೇಲೆ ತಂದಿರುವ ಸಕಲ ಹಾನಿಯನ್ನು ತೊಡೆದುಹಾಕಲು ದೇವರು ವಾಗ್ದಾನಿಸಿದ್ದಾನೆಂಬುದನ್ನೂ ತೋರಿಸುತ್ತದೆ.” ಪುಟ 27ರಲ್ಲಿರುವ ಪ್ಯಾರಗ್ರಾಫ್ 23ನ್ನು ಓದಿರಿ. ಅದರ ಕೆಳಗಿರುವ ಚಿತ್ರವನ್ನು ತೋರಿಸಿ, ಪ್ಯಾರಗ್ರಾಫ್ 22ರಿಂದ ಕೀರ್ತನೆ 145:16ನ್ನು ಓದಿರಿ. ಬ್ರೋಷರನ್ನು ನೀಡಿರಿ. ಅದು ಸ್ವೀಕರಿಸಲ್ಪಟ್ಟಲ್ಲಿ, ಮುಂದಿನ ಭೇಟಿಯಲ್ಲಿ ಉತ್ತರಿಸಲ್ಪಡಸಾಧ್ಯವಿರುವ ಇಂಥ ಒಂದು ಪ್ರಶ್ನೆಯನ್ನು ಕೇಳಿರಿ: “ಮಾನವಕುಲಕ್ಕೆ ಆಶೀರ್ವಾದಗಳನ್ನು ತರುವ ಮತ್ತು ಈ ಭೂಮಿಯನ್ನು ಒಂದು ಪ್ರಮೋದವನವನ್ನಾಗಿ ರೂಪಾಂತರಿಸುವುದರ ಕುರಿತಾದ ತನ್ನ ಉದ್ದೇಶವನ್ನು ದೇವರು ಹೇಗೆ ಪೂರೈಸಲಿರುವನು ಎಂಬುದನ್ನು ತಿಳಿದುಕೊಳ್ಳಲು ನೀವು ಇಚ್ಛಿಸುವಿರೋ?”
3 ನೀವು “ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?” ಎಂಬ ಬ್ರೋಷರನ್ನು ನೀಡಿರುವವರಲ್ಲಿಗೆ ಹಿಂದಿರುಗಿಹೋಗುವಾಗ, ಮತ್ತೊಂದು ಚರ್ಚೆಯನ್ನು ನೀವು ಈ ವಿಧದಲ್ಲಿ ಆರಂಭಿಸಬಹುದು:
◼ “ಕಳೆದ ಬಾರಿ ನಾನು ಭೇಟಿಯಾದಾಗ, ದೇವರು ನಮ್ಮ ಕುರಿತಾಗಿ ನಿಶ್ಚಯವಾಗಿಯೂ ಚಿಂತಿಸುತ್ತಾನೆ ಮತ್ತು ಮನುಷ್ಯನು ತನ್ನ ಮೇಲೆ ಮತ್ತು ತನ್ನ ಭೌಮಿಕ ಗೃಹದ ಮೇಲೆ ತಂದಿರುವ ಸಕಲ ಹಾನಿಯನ್ನು ತೊಡೆದುಹಾಕುವುದು ಆತನ ಉದ್ದೇಶವಾಗಿದೆ ಎಂಬುದನ್ನು ನಾವು ಪರಿಗಣಿಸಿದೆವು.” ಬ್ರೋಷರನ್ನು ಪುಟಗಳು 2-3ರಲ್ಲಿರುವ ಚಿತ್ರಕ್ಕೆ ತೆರೆದು, ಹೀಗೆ ಹೇಳಿರಿ: “ಮಾನವಕುಲಕ್ಕೆ ಆಶೀರ್ವಾದಗಳನ್ನು ತರುವ ಮತ್ತು ಈ ಭೂಮಿಯನ್ನು ಒಂದು ಪ್ರಮೋದವನವನ್ನಾಗಿ ರೂಪಾಂತರಿಸುವುದರ ಕುರಿತಾದ ತನ್ನ ಉದ್ದೇಶವನ್ನು ದೇವರು ಹೇಗೆ ಪೂರೈಸಲಿರುವನು? ಎಂಬ ಪ್ರಶ್ನೆಯೊಂದಿಗೆ ನಾವು ನಮ್ಮ ಸಂಭಾಷಣೆಯನ್ನು ಮುಕ್ತಾಯಗೊಳಿಸಿದೆವು. ನೀವೇನು ನೆನಸುತ್ತೀರಿ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಪುಟ 17ಕ್ಕೆ ತಿರುಗಿಸಿ, ಪ್ಯಾರಗ್ರಾಫ್ 2 ಮತ್ತು ದಾನಿಯೇಲ 2:44ನ್ನು ಓದಿರಿ. ಅನಂತರ, ಪುಟ 18ರಲ್ಲಿರುವ ಪ್ಯಾರಗ್ರಾಫ್ 12ನ್ನು ಓದಿರಿ. ನಿಮ್ಮೊಂದಿಗೆ ಮನೆಯವನು ಬ್ರೋಷರಿನ ಭಾಗ 9ನ್ನು ಪರಿಗಣಿಸಲು ಇಚ್ಛಿಸುವನೋ ಎಂದು ಅವನನ್ನು ಕೇಳಿರಿ. ಅವನು ಇಚ್ಛಿಸುವಲ್ಲಿ, ಅದನ್ನು ಅವನೊಂದಿಗೆ ಅಭ್ಯಸಿಸಿರಿ.
4 “ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ” ಎಂಬ ಬ್ರೋಷರನ್ನು ನೀಡುವುದರಲ್ಲಿ ಉಪಯೋಗಿಸಬಹುದಾದ ಒಂದು ಪ್ರಸ್ತಾವನೆಯು ಇಲ್ಲಿದೆ. ಅದರ ಮುಖಪುಟವನ್ನು ತೋರಿಸಿ, ಹೀಗೆ ಹೇಳಿರಿ:
◼ “ಮರಣದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಲಕ್ಷಾಂತರ ಜನರಿಗೆ, ಸಾಂತ್ವನವನ್ನೂ ನಿರೀಕ್ಷೆಯನ್ನೂ ತಂದಿರುವ ಈ ಬ್ರೋಷರನ್ನು ನಾವಿಂದು ಹಂಚುತ್ತಿದ್ದೇವೆ. ಮೃತರಿಗಾಗಿ ಯಾವ ನಿರೀಕ್ಷೆಯಿದೆ ಎಂಬುದಾಗಿ ನೀವೆಂದಾದರೂ ಸೋಜಿಗಪಟ್ಟಿದ್ದೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಪುನರುತ್ಥಾನವೊಂದರ ದೇವರ ವಾಗ್ದಾನದ ಕುರಿತಾಗಿ ಬೈಬಲ್ ಸ್ಫುಟವಾಗಿ ಹೇಳುತ್ತದೆ.” ಯೋಹಾನ 5:28, 29ನ್ನು ಓದಿರಿ. ಬ್ರೋಷರನ್ನು ತೆರೆದು, ಪುಟ 28ರಲ್ಲಿನ ಕೊನೆಯ ಪ್ಯಾರಗ್ರಾಫ್ ಮತ್ತು ಪುಟ 31ರಲ್ಲಿನ ಮೊದಲನೆಯ ಪ್ಯಾರಗ್ರಾಫ್ನಲ್ಲಿ ಉಲ್ಲೇಖಿಸಲ್ಪಟ್ಟಿರುವ ಅಂಶಗಳ ಕುರಿತು ಹೇಳಿಕೆಯನ್ನೀಯಿರಿ. ಜೊತೆಗೂಡಿರುವ ಚಿತ್ರಗಳನ್ನು ತೋರಿಸಿರಿ. ಬ್ರೋಷರನ್ನು ನೀಡಿರಿ. “ಕಟ್ಟಕಡೆಗೆ ಮರಣವು ಸಂಪೂರ್ಣವಾಗಿ ನಿರ್ಮೂಲಗೊಳಿಸಲ್ಪಡುವುದು ಎಂಬುದರ ಕುರಿತಾಗಿ ನಾವು ಹೇಗೆ ನಿಶ್ಚಯದಿಂದಿರಬಲ್ಲೆವು?” ಎಂದು ಕೇಳುವ ಮೂಲಕ, ಪುನರ್ಭೇಟಿಯೊಂದಕ್ಕಾಗಿ ನೀವು ಮಾರ್ಗವನ್ನು ತಯಾರಿಸಬಲ್ಲಿರಿ.
5 “ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ” ಎಂಬ ಬ್ರೋಷರನ್ನು ನೀವು ನೀಡಿರುವಲ್ಲಿ, ಪುನರ್ಭೇಟಿಯಲ್ಲಿ ಈ ನಿರೂಪಣೆಯನ್ನು ಉಪಯೋಗಿಸಲು ನೀವು ಬಯಸಬಹುದು:
◼ “ನಾವು ಈ ಮುಂಚೆ ಮಾತಾಡಿದಾಗ, ಪುನರುತ್ಥಾನವೊಂದರ ಅದ್ಭುತಕರವಾದ ನಿರೀಕ್ಷೆಯ ಕುರಿತಾಗಿ ನಾವು ಚರ್ಚಿಸಿದೆವು. ನಾನು ನಿಮ್ಮಲ್ಲಿ ಬಿಟ್ಟುಹೋದ ಬ್ರೋಷರ್, ಕಟ್ಟಕಡೆಗೆ ಮರಣವು ಸಂಪೂರ್ಣವಾಗಿ ನಿರ್ಮೂಲಗೊಳಿಸಲ್ಪಡುವುದು ಎಂಬುದರ ಕುರಿತು ನಾವು ಏಕೆ ನಿಶ್ಚಯದಿಂದಿರಸಾಧ್ಯವಿದೆ ಎಂಬುದನ್ನು ವಿವರಿಸುತ್ತದೆ. ದೇವರ ವಾಗ್ದಾನಗಳು ಸಾಂತ್ವನದಾಯಕವೂ ಪುನರಾಶ್ವಾಸನೀಯವೂ ಆದವುಗಳಾಗಿ ನೀವು ಕಂಡುಕೊಳ್ಳಲಿಲ್ಲವೋ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಬ್ರೋಷರನ್ನು ಪುಟ 31ಕ್ಕೆ ತಿರುಗಿಸಿ, ಪ್ರಕಟನೆ 21:1-4ರೊಂದಿಗೆ, ಎರಡನೆಯ ಮತ್ತು ಮೂರನೆಯ ಪ್ಯಾರಗ್ರಾಫ್ಗಳನ್ನು ಓದಿರಿ. ಎಂದೂ ಸಾಯದೇ ಜೀವನವನ್ನು ಆನಂದಿಸುವ ನಮ್ಮ ಪ್ರತೀಕ್ಷೆಯನ್ನು ಅತ್ಯುಜ್ವಲಪಡಿಸಿರಿ. ತೋರಿಸಲ್ಪಟ್ಟ ಆಸಕ್ತಿ ಮತ್ತು ಆ ಕ್ಷಣದಲ್ಲಿನ ಸಂದರ್ಭಗಳ ಮೇಲೆ ಆಧರಿಸಿ, ನೀವು ಜ್ಞಾನ ಪುಸ್ತಕದಲ್ಲಿ ಒಂದು ಬೈಬಲ್ ಅಭ್ಯಾಸಕ್ಕಾಗಿ ಕೇಳಿಕೊಳ್ಳಬಹುದು ಅಥವಾ ಮುಂದಿನ ಪುನರ್ಭೇಟಿಗಾಗಿ ಮಾರ್ಗವನ್ನು ತೆರೆಯಲು ಮತ್ತೊಂದು ಪ್ರಶ್ನೆಯನ್ನು ಕೇಳಬಹುದು.
6 “ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?” ಎಂಬ ಬ್ರೋಷರನ್ನು ನೀಡುವಾಗ, ಈ ಮುಂದಿನ ವಿಷಯವನ್ನು ನೀವು ಹೇಳಬಹುದು:
◼ “ಜೀವಿತದ ಉದ್ದೇಶವೇನೆಂಬುದರ ಕುರಿತು ಅನೇಕ ಜನರು ಸೋಜಿಗಪಟ್ಟಿದ್ದಾರೆ. ಅವರು ತಮ್ಮನ್ನೇ ಹೀಗೆ ಕೇಳಿಕೊಂಡಿದ್ದಾರೆ: ‘ನಾನು ಇಲ್ಲಿರುವುದೇಕೆ? ನಾನು ಎಲ್ಲಿಗೆ ಹೋಗುತ್ತಿದ್ದೇನೆ? ಭವಿಷ್ಯತ್ತು ನನಗಾಗಿ ಏನನ್ನು ಕಾದಿರಿಸಿದೆ?’ ಉತ್ತರಗಳನ್ನು ನಾವೆಲ್ಲಿ ಕಂಡುಕೊಳ್ಳಬಲ್ಲೆವೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲ್ ಏನು ಹೇಳುತ್ತದೆಂಬುದನ್ನು ಗಮನಿಸಿರಿ. [ಕೀರ್ತನೆ 36:9ನ್ನು ಓದಿರಿ.] ನಾವು ಇಲ್ಲಿ ಏಕೆ ಇದ್ದೇವೆಂಬುದನ್ನು ವಿವರಿಸಲು, ಮನುಷ್ಯನ ಸೃಷ್ಟಿಕರ್ತನು ಅತ್ಯುತ್ತಮವಾದ ಸ್ಥಾನದಲ್ಲಿದ್ದಾನೆಂದು ನಾವು ತೀರ್ಮಾನಿಸುವುದು ನ್ಯಾಯಸಮ್ಮತವಾಗಿರುವುದಿಲ್ಲವೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಮಗಾಗಿ ದೇವರು ಇಟ್ಟಿರುವ ಮಹತ್ವದ ಉದ್ದೇಶವನ್ನು ಈ ಬ್ರೋಷರ್ ತೋರಿಸುತ್ತದೆ.” ಪುಟಗಳು 20-1ಕ್ಕೆ ತಿರುಗಿಸಿ, ವಿವರಣೆಯ ಬರಹವನ್ನು ಓದಿರಿ, ಮತ್ತು ಚಿತ್ರದ ಕುರಿತು ಹೇಳಿಕೆಯನ್ನೀಯಿರಿ; ಅನಂತರ ಬ್ರೋಷರನ್ನು ನೀಡಿರಿ. ಸ್ವೀಕರಿಸಲ್ಪಟ್ಟಲ್ಲಿ, ಹೀಗೆ ಕೇಳಿರಿ: “ಮಾನವರು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾಕಾಲ ಜೀವಿಸುವುದು ಇನ್ನೂ ದೇವರ ಉದ್ದೇಶವಾಗಿದೆ ಎಂಬುದರ ಕುರಿತು ನಾವು ಹೇಗೆ ಖಾತ್ರಿಯಿಂದಿರಬಲ್ಲೆವು?” ಹಿಂದಿರುಗಲು ಒಂದು ಸಮಯವನ್ನು ನಿಗದಿಪಡಿಸಿರಿ.
7 “ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?” ಎಂಬ ಬ್ರೋಷರ್ ನೀಡಲ್ಪಟ್ಟಿರುವಲ್ಲಿ, ನೀವು ಹಿಂದಿರುಗಿದಾಗ ಈ ರೀತಿಯ ಯಾವುದಾದರೂ ವಿಷಯವನ್ನು ಹೇಳಸಾಧ್ಯವಿದೆ:
◼ “ನನ್ನ ಹಿಂದಿನ ಭೇಟಿಯಲ್ಲಿ, ಮಾನವ ಜೀವಿತವು ನಿಜವಾಗಿಯೂ ಒಂದು ಉದ್ದೇಶವನ್ನು ಹೊಂದಿದೆ ಎಂಬ ಬೈಬಲಿನ ವೀಕ್ಷಣವನ್ನು ನಿಮ್ಮೊಂದಿಗೆ ಚರ್ಚಿಸುವುದರಲ್ಲಿ ನಾನು ನಿಜವಾಗಿಯೂ ಆನಂದಿಸಿದೆ.” ಪುಟ 31ರಲ್ಲಿರುವ ಚಿತ್ರವನ್ನು ತೋರಿಸಿರಿ ಮತ್ತು “ಮಾನವರು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾಕಾಲ ಜೀವಿಸುವುದು ಇನ್ನೂ ದೇವರ ಉದ್ದೇಶವಾಗಿದೆ ಎಂಬುದರ ಕುರಿತು ನಾವು ಹೇಗೆ ಖಾತ್ರಿಯಿಂದಿರಬಲ್ಲೆವು?” ಎಂದು ಕೇಳಿರಿ. ಪುಟ 20ರಲ್ಲಿರುವ ಪ್ಯಾರಗ್ರಾಫ್ 3ನ್ನು ಓದಿರಿ. ಪುಟ 21ರಲ್ಲಿರುವ “ಇನ್ನೂ ದೇವರ ಉದ್ದೇಶ” ಎಂಬ ಉಪಶೀರ್ಷಿಕೆಯ ಕೆಳಗಿರುವ ಅಂಶಗಳನ್ನು ಚರ್ಚಿಸಿರಿ. ಬ್ರೋಷರಿನ ಹಿಂದಿನ ಆವರಣಕ್ಕೆ ತಿರುಗಿಸಿ, ಉಚಿತ ಮನೆ ಬೈಬಲ್ ಅಭ್ಯಾಸದ ನೀಡುವಿಕೆಯ ಕುರಿತಾಗಿ ಓದಿರಿ. ಜ್ಞಾನ ಪುಸ್ತಕವನ್ನು ಪರಿಚಯಿಸಿರಿ, ಮತ್ತು ಬೈಬಲನ್ನು ಅಭ್ಯಸಿಸಲು ಸಹಾಯಕ ಸಾಧನದೋಪಾದಿ ನಾವು ಇದನ್ನು ಹೇಗೆ ಉಪಯೋಗಿಸುತ್ತೇವೆಂಬುದನ್ನು ಪ್ರತ್ಯಕ್ಷಾಭಿನಯಿಸಲು ಕೇಳಿಕೊಳ್ಳಿರಿ.
8 ನಮ್ಮ ಶುಶ್ರೂಷೆಯು, ಪ್ರಾಮಾಣಿಕ ಹೃದಯದ ಜನರಿಗೆ “ಸತ್ಯದ ನಿಷ್ಕೃಷ್ಟ ಜ್ಞಾನಕ್ಕೆ ಬರಲು” ಸಹಾಯಮಾಡುವುದರಲ್ಲಿ ನಮಗಿರುವ ಯಥಾರ್ಥ ಆಸಕ್ತಿಯನ್ನು ಪ್ರತಿಬಿಂಬಿಸಬೇಕು. (1 ತಿಮೊ. 2:4, NW) ಆದುದರಿಂದ, ಶುಶ್ರೂಷೆಯಲ್ಲಿ ಪಾಲುತೆಗೆದುಕೊಳ್ಳುತ್ತಿರುವಾಗ ನಿಮಗೆ ಎದುರಾಗುವ ಸಂಭಾವ್ಯತೆಯಿರುವ ಎಲ್ಲ ಭಾಷೆಗಳ ಬ್ರೋಷರ್ಗಳನ್ನು ಕೊಂಡೊಯ್ಯಿರಿ. ನೀವು ಬ್ರೋಷರನ್ನು ನೀಡಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಹಿಂದಿರುಗಿಹೋಗಿ ನೋಡಲು ನಿಮ್ಮ ಸೇವಾ ತಖ್ತೆಯಲ್ಲಿ ಸಮಯವನ್ನು ಮಾಡಿಕೊಳ್ಳಿರಿ. ಅವರಿಗಾಗಿ ನೀವು ನಿಜವಾದ ಚಿಂತೆಯನ್ನು ಪ್ರದರ್ಶಿಸುವುದು, ಸುಳ್ಳು ಧರ್ಮದಲ್ಲಿ ಆಚರಿಸಲ್ಪಡುತ್ತಿರುವ ಅಸಹ್ಯಕರವಾದ ವಿಷಯಗಳ ಕುರಿತಾಗಿ ನರಳಿ, ಗೋಳಾಡುತ್ತಿರುವವರಿಗೆ, ಪಾರಾಗಿ ಉಳಿಯಲಿಕ್ಕಾಗಿ ಗುರುತಿಸಲ್ಪಡುವಂತೆ ಸಹಾಯ ಮಾಡುವುದರಲ್ಲಿ ಫಲಿಸಬಹುದು. (ಯೆಹೆ. 9:4, 6) ಇತರರಿಗಾಗಿ ಯಥಾರ್ಥವಾಗಿ ಚಿಂತಿಸುವ ಮೂಲಕ ನೀವು ಯೆಹೋವನನ್ನು ಅನುಕರಿಸುತ್ತಿದ್ದೀರೆಂಬುದನ್ನು ತಿಳಿಯುವುದರಿಂದ ಬರುವ ಹರ್ಷವನ್ನು ಮತ್ತು ಸಂತೃಪ್ತಿಯನ್ನು ನೀವೂ ಅನುಭವಿಸುವಿರಿ.—ಫಿಲಿಪ್ಪಿ 2:20ನ್ನು ಹೋಲಿಸಿರಿ.