ದೇವರಿಂದ ನಿಮಗೊಂದು ಸಿಹಿಸುದ್ದಿ!
ಕಿರುಹೊತ್ತಗೆಯನ್ನು ಬಳಸುವುದು ಹೇಗೆ? ಪುನರ್ಭೇಟಿಗಳನ್ನು ಮಾಡಲು ಹಾಗೂ ಬೈಬಲ್ ಅಧ್ಯಯನಗಳನ್ನು ಆರಂಭಿಸಲು ನೆರವಾಗುವ ಹೊಸ ಕಿರುಹೊತ್ತಗೆ
1. ಪುನರ್ಭೇಟಿ ಮಾಡಲು ಹಾಗೂ ಬೈಬಲ್ ಅಧ್ಯಯನ ಆರಂಭಿಸಲು ನೆರವಾಗುವ ಯಾವ ಕಿರುಹೊತ್ತಗೆ ‘ಹೃದಯವನ್ನು ಕಾಪಾಡಿಕೊಳ್ಳಿ’ ಜಿಲ್ಲಾ ಅಧಿವೇಶನದಲ್ಲಿ ಬಿಡುಗಡೆಯಾಯಿತು?
1 ‘ಹೃದಯವನ್ನು ಕಾಪಾಡಿಕೊಳ್ಳಿ’ ಜಿಲ್ಲಾ ಅಧಿವೇಶನದಲ್ಲಿ ದೇವರಿಂದ ನಿಮಗೊಂದು ಸಿಹಿಸುದ್ದಿ! ಎಂಬ ಕಿರುಹೊತ್ತಗೆ ನಮ್ಮ ಕೈಸೇರಿದಾಗ ರೋಮಾಂಚಿತರಾದೆವು! ಇದು ಪುನರ್ಭೇಟಿಗಳನ್ನು ಮಾಡಲು ಹಾಗೂ ಬೈಬಲ್ ಅಧ್ಯಯನಗಳನ್ನು ಆರಂಭಿಸಲು ನಮಗೆ ನೆರವಾಗುತ್ತದೆ. ಈ ಕಿರುಹೊತ್ತಗೆ ಈ ಮೊದಲಿದ್ದ ಅಪೇಕ್ಷಿಸು ಕಿರುಹೊತ್ತಗೆಗೆ ಬದಲಿಯಾಗಿದೆ. ಇದು ಅಪೇಕ್ಷಿಸು ಕಿರುಹೊತ್ತಗೆಯಂತೆಯೇ ಇದೆಯಾದರೂ ಪಾಠಗಳು ಸಂಕ್ಷಿಪ್ತವಾಗಿವೆ. ಮನೆಬಾಗಲಲ್ಲಿ ಅಧ್ಯಯನ ಆರಂಭಿಸಲು ಈ ಕಿರುಹೊತ್ತಗೆ ಹೇಳಿಮಾಡಿಸಿದಂತಿದೆ. ಅಪೇಕ್ಷಿಸು ಕಿರುಹೊತ್ತಗೆಯಲ್ಲಿ ಕ್ರೈಸ್ತರು ಅನುಸರಿಸಬೇಕಾದ ಮೌಲ್ಯಗಳ ಕುರಿತು ಚರ್ಚಿಸಲಾಗಿರುವುದರಿಂದ ಅವುಗಳನ್ನು ಅರ್ಥಮಾಡಿಕೊಂಡು ಒಪ್ಪಿಕೊಳ್ಳಲು ಹೊಸಬರಿಗೆ ಕಷ್ಟವಾಗಬಹುದು. ಆದರೆ ಹೊಸ ಕಿರುಹೊತ್ತಗೆ ಪೂರ್ಣವಾಗಿ ಬೈಬಲಿನಲ್ಲಿರುವ ಸುವಾರ್ತೆಯ ಮೇಲೆಯೇ ಕೇಂದ್ರೀಕರಿಸಿದೆ.—ಅ. ಕಾ. 15:35.
2. ಸಿಹಿಸುದ್ದಿ ಕಿರುಹೊತ್ತಗೆಯನ್ನು ಯಾಕೆ ಹೊರತರಲಾಯಿತು?
2 ಇದನ್ನು ಹೊರತರಲಾದ ಉದ್ದೇಶವೇನು? ಜನರನ್ನು ಸತ್ಯದ ಕಡೆಗೆ ಆಕರ್ಷಿಸಿ ಬೈಬಲ್ ಬೋಧಿಸುತ್ತದೆ ಪುಸ್ತಕದ ಕಡೆಗೆ ಅವರ ಗಮನ ಸೆಳೆಯಲು ಸುಲಭವಾದ ಸಲಕರಣೆ ಬೇಕೆಂದು ಜಗತ್ತಿನಾದ್ಯಂತ ಅನೇಕ ಸಹೋದರರು ಹೇಳುತ್ತಿದ್ದರು. ಮಾತ್ರವಲ್ಲ, ಪುಸ್ತಕದ ಗಾತ್ರ ನೋಡಿ ಬೆಚ್ಚಿಬೀಳುವ ಜನರು ಕಿರುಹೊತ್ತಗೆ ನೋಡಿದ ಮೇಲೆ ಬೈಬಲನ್ನು ಕಲಿಯಲು ಇಷ್ಟಪಡಬಹುದು. ಅಷ್ಟೇ ಅಲ್ಲದೆ ಕಿರುಹೊತ್ತಗೆಯನ್ನು ಅನೇಕ ಭಾಷೆಗಳಿಗೆ ಭಾಷಾಂತರಿಸುವುದು ಕೂಡ ಸುಲಭ.
3. ಇತರ ಬೈಬಲ್ ಅಧ್ಯಯನ ಪ್ರಕಾಶನಗಳಿಗಿಂತ ಈ ಕಿರುಹೊತ್ತಗೆ ಹೇಗೆ ಭಿನ್ನ?
3 ಇದರ ವಿಶೇಷತೆ: ಬೈಬಲ್ ಅಧ್ಯಯನ ಮಾಡಲು ಬಳಸುವ ನಮ್ಮ ಅನೇಕ ಪ್ರಕಾಶನಗಳನ್ನು ಹೇಗೆ ವಿನ್ಯಾಸಿಸಲಾಗಿದೆ ಅಂದರೆ ಒಬ್ಬ ವ್ಯಕ್ತಿ ಅದನ್ನು ತನ್ನಷ್ಟಕ್ಕೆ ಓದಿ ಕೂಡ ಸತ್ಯ ತಿಳಿದುಕೊಳ್ಳಬಹುದು. ಆದರೆ ಈ ಪ್ರಕಾಶನ ಹಾಗಲ್ಲ. ಬೈಬಲ್ ಅಧ್ಯಯನ ಮಾಡಲು ಗೈಡ್ ಆಗಿರುವ ಇದನ್ನು ಒಬ್ಬ ಬೈಬಲ್ ಟೀಚರ್ನ ಸಹಾಯದೊಂದಿಗೆ ಅಧ್ಯಯನ ಮಾಡುವಂತೆ ರಚಿಸಲಾಗಿದೆ. ಆದ್ದರಿಂದ ಇದನ್ನು ಯಾರಿಗಾದರೂ ನೀಡುವಾಗ ಅದರಿಂದ ಒಂದೋ ಎರಡೋ ಪ್ಯಾರಗಳನ್ನು ಚರ್ಚಿಸಿ. ಇದರಲ್ಲಿ ಚಿಕ್ಕಚಿಕ್ಕ ಪ್ಯಾರಗಳು ಇರುವುದರಿಂದ ಒಬ್ಬ ವ್ಯಕ್ತಿಯ ಮನೆಬಾಗಿಲಲ್ಲೇ ಅಥವಾ ಕೆಲಸ ಮಾಡುತ್ತಿರುವ ಸ್ಥಳದಲ್ಲೇ ಪರಿಗಣಿಸಬಹುದು. 1ನೇ ಅಧ್ಯಾಯದಿಂದ ಬೈಬಲ್ ಅಧ್ಯಯನ ಆರಂಭಿಸುವುದು ಸುಲಭವಾದರೂ ಕಿರುಹೊತ್ತಗೆಯ ಯಾವುದೇ ಅಧ್ಯಾಯವನ್ನು ನೀವು ಚರ್ಚಿಸಬಹುದು.
4. ನೇರವಾಗಿ ಬೈಬಲಿನಿಂದಲೇ ಕಲಿಸಲು ಈ ಕಿರುಹೊತ್ತಗೆ ಹೇಗೆ ಸಹಾಯಮಾಡುತ್ತದೆ?
4 ನಮ್ಮ ಅನೇಕ ಪ್ರಕಾಶನಗಳಲ್ಲಿ ಪ್ರಶ್ನೆಗಳಿಗೆ ನೇರ ಉತ್ತರ ಪ್ಯಾರಗಳಲ್ಲೇ ಇರುತ್ತೆ. ಆದರೆ ಈ ಕಿರುಹೊತ್ತಗೆಯಲ್ಲಿರುವ ಪ್ರಶ್ನೆಗಳಿಗೆ ಉತ್ತರ ಹೆಚ್ಚಾಗಿ ಪ್ಯಾರಗಳಲ್ಲಿಲ್ಲ, ಅಲ್ಲಿ ಕೊಟ್ಟಿರುವ ವಚನಗಳಲ್ಲಿದೆ. ಅನೇಕರು ಉತ್ತರಗಳನ್ನು ಪ್ರಕಾಶನಗಳಿಂದಲ್ಲ, ಬೈಬಲಿನಿಂದ ತಿಳಿಯಲು ಇಷ್ಟಪಡುತ್ತಾರೆ. ಹಾಗಾಗಿ ಇದರಲ್ಲಿ ಹೆಚ್ಚಿನ ವಚನಗಳನ್ನು ಉಲ್ಲೇಖಿಸಿದ್ದಾರೇ ಹೊರತು ಉದ್ಧರಿಸಿಲ್ಲ. ಅವುಗಳನ್ನು ಬೈಬಲ್ ತೆರೆದು ಓದಬೇಕು. ಹೀಗೆ ಮಾಡುವುದರಿಂದ ವಿದ್ಯಾರ್ಥಿಯು, ‘ದೇವರೇ ನನಗೆ ಕಲಿಸುತ್ತಿದ್ದಾರೆ’ ಎಂದು ಅರಿಯಲು ಸಾಧ್ಯವಾಗುತ್ತೆ.—ಯೆಶಾ. 54:13.
5. ಬೈಬಲ್ ಅಧ್ಯಯನ ನಡೆಸುವವರು ಪ್ರತಿ ಅಧ್ಯಯನಕ್ಕಾಗಿ ಚೆನ್ನಾಗಿ ತಯಾರಿ ಯಾಕೆ ಮಾಡಬೇಕು?
5 ಕಿರುಹೊತ್ತಗೆಯಲ್ಲಿ ಎಲ್ಲ ವಚನಗಳನ್ನು ಯಾಕೆ ವಿವರಿಸಿಲ್ಲ? ಯಾಕಂದ್ರೆ ವಿದ್ಯಾರ್ಥಿ ಪ್ರಶ್ನೆಗಳನ್ನು ಕೇಳಲು ಮತ್ತು ಕಲಿಸುವವರು ತಮ್ಮ ಬೋಧನಾ ಕೌಶಲವನ್ನು ಚೆನ್ನಾಗಿ ಬಳಸಲು ಇದು ಸಹಾಯಮಾಡುತ್ತೆ. ಆದ್ದರಿಂದ ನಾವು ಅಧ್ಯಯನಕ್ಕಾಗಿ ಒಳ್ಳೇ ತಯಾರಿ ಮಾಡುವುದು ಅವಶ್ಯ. ಆದರೆ ಒಂದು ಎಚ್ಚರಿಕೆ: ನೀವೇ ಜಾಸ್ತಿ ಮಾತಾಡಬೇಡಿ. ನಮಗೆ ವಚನಗಳನ್ನು ವಿವರಿಸಲು ತುಂಬಾ ಆಸೆ ಇರಬಹುದು. ಆದರೆ ವಿದ್ಯಾರ್ಥಿಗೇ ವಚನದ ಅರ್ಥವನ್ನು ವಿವರಿಸಲು ಹೇಳುವಾಗ ಹೆಚ್ಚು ಪ್ರಯೋಜನ ಸಿಗುತ್ತೆ. ಜಾಣ್ಮೆಯಿಂದ ಪ್ರಶ್ನೆಗಳನ್ನು ಕೇಳುವುದರಿಂದ ವಿದ್ಯಾರ್ಥಿಯು ತಾನಾಗಿಯೇ ಆ ವಚನದ ಅರ್ಥವೇನೆಂದು ವಿವರಿಸಲು ಸಹಾಯವಾಗುತ್ತದೆ.—ಅ. ಕಾ. 17:2.
6. ಈ ಕಿರುಹೊತ್ತಗೆಯನ್ನು ಬಳಸುವದು ಹೇಗೆಂದು ವಿವರಿಸಿ: (1) ಬೈಬಲ್ ಹಾಗೂ ದೇವರ ಬಗ್ಗೆ ಸಂಶಯ ಇರುವವರೊಂದಿಗೆ ಮಾತಾಡುವಾಗ (2) ಮನೆಮನೆ ಸೇವೆಯಲ್ಲಿ (3) ನೇರ ವಿಧಾನ ಬಳಸಿ ಬೈಬಲ್ ಅಧ್ಯಯನ ಶುರುಮಾಡಲು (4) ಪುನರ್ಭೇಟಿ ಮಾಡುವಾಗ.
6 ನಾವು ಅಧ್ಯಯನಕ್ಕಾಗಿ ಬಳಸುವ ಇತರ ಪ್ರಕಾಶನಗಳಂತೆಯೇ ಈ ಕಿರುಹೊತ್ತಗೆಯನ್ನು ಯಾವುದೇ ಸಮಯದಲ್ಲಿ ನೀಡಬಹುದು. ತಿಂಗಳಿನ ಸಾಹಿತ್ಯ ನೀಡುವಿಕೆ ಯಾವುದೇ ಇದ್ದರೂ ಇದನ್ನು ಬಳಸಬಹುದು. ಅನೇಕರು ನೇರ ವಿಧಾನ ಬಳಸಿ ಈ ಕಿರುಹೊತ್ತಗೆ ಮೂಲಕ ಬೈಬಲ್ ಅಧ್ಯಯನ ಶುರುಮಾಡುವುದರಲ್ಲಿ ಆನಂದಿಸುವರು ಖಂಡಿತ. ಅಷ್ಟೆ ಅಲ್ಲದೇ ಅಧಿವೇಶನದಲ್ಲಿ ಹೇಳಿದಂತೆ ಇದನ್ನು ‘ಪುನರ್ಭೇಟಿಯಲ್ಲಿ ಬಳಸುವಾಗ ತುಂಬ ಖುಷಿಯಾಗುತ್ತೆ!’—ಪುಟ 6-8ರಲ್ಲಿರುವ ಚೌಕಗಳನ್ನು ನೋಡಿ.
7. ಈ ಕಿರುಹೊತ್ತಗೆ ಬಳಸಿ ಬೈಬಲ್ ಅಧ್ಯಯನ ಶುರುಮಾಡುವುದು ಹೇಗೆ?
7 ಬೈಬಲ್ ಅಧ್ಯಯನ ಮಾಡಲು: ದಪ್ಪಕ್ಷರದ ಪ್ರಶ್ನೆಯನ್ನು ಕೇಳುವ ಮೂಲಕ ಚರ್ಚೆ ಆರಂಭಿಸಬಹುದು. ಆಮೇಲೆ ಪ್ಯಾರ ಓದಿ ದಪ್ಪಕ್ಷರದಲ್ಲಿರುವ ವಚನ(ಗಳನ್ನು) ಓದಿ. ನಂತರ ವಚನವನ್ನು ಮನೆಯವರು ತಾನಾಗಿಯೇ ಅರ್ಥಮಾಡಿಕೊಳ್ಳುವಂತೆ ಜಾಣ್ಮೆಯಿಂದ ಪ್ರಶ್ನೆಗಳನ್ನು ಕೇಳಿ. ಮುಂದಿನ ಭಾಗಕ್ಕೆ ಹೋಗುವ ಮುಂಚೆ ಈಗಾಗಲೇ ಓದಿರುವ ಪ್ರಶ್ನೆಗೆ ಉತ್ತರವನ್ನು ವಿವರಿಸುವಂತೆ ಮನೆಯವರಿಗೆ ಹೇಳಿ. ಮೊದಲ ಕೆಲವು ಭೇಟಿಗಳಲ್ಲಿ ಒಂದು ಪ್ರಶ್ನೆಯನ್ನು ಮಾತ್ರ ಚರ್ಚಿಸುವುದು ಒಳ್ಳೇದಿರಬಹುದು. ಸಮಯಸಂದಂತೆ ಇಡೀ ಅಧ್ಯಾಯವನ್ನು ಪರಿಗಣಿಸಬಹುದು.
8. ವಚನಗಳನ್ನು ಹೇಗೆ ಪರಿಚಯಿಸಬೇಕು? ಯಾಕೆ?
8 “ಓದಿ” ಎಂದು ಕೊಡಲಾಗಿರುವ ವಚನ ಪ್ರಶ್ನೆಗೆ ನೇರ ಉತ್ತರ ಕೊಡುತ್ತದೆ. ವಚನವನ್ನು ಪರಿಚಯಿಸುವಾಗ “ಅಪೊಸ್ತಲ ಪೌಲ ಬರೆದದ್ದು” ಅಥವಾ “ಯೆರೆಮೀಯ ಮುಂತಿಳಿಸಿದ್ದು” ಅಂತ ಹೇಳಬೇಡಿ. ಹಾಗೆ ಹೇಳುವುದಾದರೆ ನಾವು ಯಾರೋ ಮನುಷ್ಯರ ಮಾತುಗಳನ್ನು ಓದುತ್ತಿದ್ದೇವೆ ಎಂದು ಮನೆಯವರು ಅಂದುಕೊಳ್ಳಬಹುದು. ಅದರ ಬದಲು, “ದೇವರ ವಾಕ್ಯ ಹೇಳುವುದು” ಅಥವಾ “ಭವಿಷ್ಯದ ಬಗ್ಗೆ ಬೈಬಲ್ ಹೇಳಿರುವ ಮಾತನ್ನು ನೋಡೋಣ” ಅಂತ ಹೇಳುವುದು ಒಳ್ಳೇದು.
9. ಅಧ್ಯಯನ ಮಾಡುವಾಗ ಪ್ಯಾರದಲ್ಲಿ ಕೊಡಲಾಗಿರುವ ಎಲ್ಲ ವಚನಗಳನ್ನು ಓದಬೇಕಾ?
9 ಅಧ್ಯಯನ ಮಾಡುವಾಗ, ಕೊಟ್ಟಿರುವ ಎಲ್ಲ ವಚನಗಳನ್ನು ಓದಬೇಕಾ ಅಥವಾ “ಓದಿ” ಎಂದು ಕೊಡಲಾಗಿರುವ ವಚನಗಳನ್ನು ಮಾತ್ರ ಓದಬೇಕಾ? ಇದು ಸನ್ನಿವೇಶದ ಮೇಲೆ ಹೊಂದಿಕೊಂಡಿದೆ. ಪ್ಯಾರದಲ್ಲಿ ಕೊಟ್ಟಿರುವ ಮಾಹಿತಿ ಯಾವ ಬೈಬಲ್ ವಚನದ ಮೇಲೆ ಆಧರಿಸಿದೆ ಎಂದು ತೋರಿಸಲಷ್ಟೇ ವಚನಗಳನ್ನು ಕೊಡಲಾಗಿಲ್ಲ. ಪ್ರತಿಯೊಂದು ವಚನದಲ್ಲೂ ಚರ್ಚಿಸಲು ಯೋಗ್ಯವಾದ ಅಮೂಲ್ಯ ಮಾಹಿತಿಯಿದೆ. ಆದರೂ ಕೆಲವೊಮ್ಮೆ ವಿದ್ಯಾರ್ಥಿಗೆ ಹೆಚ್ಚು ಸಮಯ ಇಲ್ಲದಿರುವಲ್ಲಿ, ಆಸಕ್ತಿ ಕಡಿಮೆಯಿರುವಲ್ಲಿ, ಸರಿಯಾಗಿ ಓದಲು ಬಾರದಿರುವಲ್ಲಿ “ಓದಿ” ಎಂದು ಹೇಳಲಾಗಿರುವ ವಚನಗಳನ್ನಷ್ಟೇ ಓದಬೇಕಾಗಬಹುದು.
10. ಅಧ್ಯಯನವನ್ನು ಯಾವಾಗ ಬೈಬಲ್ ಬೋಧಿಸುತ್ತದೆ ಪುಸ್ತಕಕ್ಕೆ ಬದಲಾಯಿಸುವುದು ಒಳ್ಳೇದು?
10 ಅಧ್ಯಯನವನ್ನು ಬೈಬಲ್ ಬೋಧಿಸುತ್ತದೆ ಪುಸ್ತಕಕ್ಕೆ ಬದಲಾಯಿಸುವುದು ಯಾವಾಗ? ಸಿಹಿಸುದ್ದಿ ಕಿರುಹೊತ್ತಗೆಯಿಂದ ಅನೇಕ ಚರ್ಚೆಗಳಾದ ಮೇಲೆ, ಅಧ್ಯಯನ ಕ್ರಮಬದ್ಧವಾಗಿ ಸಾಗುತ್ತಿರುವಾಗ ಬೈಬಲ್ ಬೋಧಿಸುತ್ತದೆ ಪುಸ್ತಕದಿಂದ ಅಧ್ಯಯನ ಶುರುಮಾಡಬಹುದು ಅಥವಾ ಇದನ್ನೇ ಪೂರ್ಣವಾಗಿ ಅಧ್ಯಯನ ಮಾಡಬಹುದು. ಬೈಬಲ್ ಬೋಧಿಸುತ್ತದೆ ಪುಸ್ತಕ ಯಾವಾಗ ಕೊಡಬೇಕೆಂದು ಪ್ರಚಾರಕರೇ ವಿವೇಚನೆಯಿಂದ ನಿರ್ಧರಿಸಬೇಕು. ಪುಸ್ತಕ ಕೊಟ್ಟ ಮೇಲೆ ಮೊದಲನೇ ಅಧ್ಯಾಯದಿಂದಲೇ ಶುರುಮಾಡಬೇಕಾ? ಹಾಗೆ ಮಾಡಬೇಕಂತ ಯಾವುದೇ ನಿಯಮವಿಲ್ಲ. ಒಬ್ಬೊಬ್ಬರ ಸನ್ನಿವೇಶ ಒಂದೊಂದು ರೀತಿ ಇರಬಹುದು. ಕಿರುಹೊತ್ತಗೆಯಿಂದ ಕಲಿಯುತ್ತಿರುವ ವಿಷಯದ ಬಗ್ಗೆ ಇನ್ನಷ್ಟು ಮಾಹಿತಿ ಕೊಡುವ ಅಧ್ಯಾಯವನ್ನು ಚರ್ಚಿಸಿದರೆ ಅನೇಕರಿಗೆ ಪ್ರಯೋಜನ ಸಿಗುತ್ತೆ.
11. ಈ ಹೊಸ ಕಿರುಹೊತ್ತಗೆಯನ್ನು ನಾವು ಯಾಕೆ ಚೆನ್ನಾಗಿ ಬಳಸಬೇಕು?
11 ಲೋಕದಲ್ಲಿ ಸಿಹಿಸುದ್ದಿ ಸಿಗುವುದೇ ಅಪರೂಪ. ಆದರೆ, ದೇವರ ರಾಜ್ಯ ಬೇಗನೆ ಭೂಮಿ ಮೇಲೆ ಆಡಳಿತ ನಡೆಸುತ್ತದೆ ಮತ್ತು ನೀತಿಯ ಹೊಸ ಲೋಕವನ್ನು ತರುತ್ತದೆ ಅನ್ನುವ ಸಿಹಿಸುದ್ದಿಯನ್ನು ಹಂಚುವ ಸೌಭಾಗ್ಯ ನಮಗಿದೆ. (ಮತ್ತಾ. 24:14; 2 ಪೇತ್ರ 3:13) ಈ ಸುದ್ದಿ ತಿಳಿಯುವ ಎಲ್ಲರೂ ಈ ಮಾತುಗಳನ್ನು ಪ್ರತಿಧ್ವನಿಸುವರು: “ಪರ್ವತಗಳ ಮೇಲೆ ತ್ವರೆಪಡುತ್ತಾ ಶುಭಸಮಾಚಾರವನ್ನು ತಂದು ಸಮಾಧಾನವನ್ನು ಸಾರುವ ದೂತನ ಪಾದಗಳು ಎಷ್ಟೋ ಅಂದವಾಗಿವೆ! ಒಳ್ಳೆಯ ಶುಭವರ್ತಮಾನವನ್ನು, ಶುಭದ ಸುವಾರ್ತೆಯನ್ನು ತಂದು ರಕ್ಷಣೆಯನ್ನು ಪ್ರಕಟಿಸುತ್ತಾ—ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ ಎಂದು ಚೀಯೋನಿಗೆ ತಿಳಿಸುವವನಾಗಿದ್ದಾನೆ.” (ಯೆಶಾ. 52:7) ಈ ಹೊಸ ಕಿರುಹೊತ್ತಗೆ ಬಳಸಿ ದೇವರಿಂದ ಪಡೆದಿರುವ ಸಿಹಿಸುದ್ದಿಯನ್ನು ನಮ್ಮ ಸೇವಾ ಕ್ಷೇತ್ರದಲ್ಲಿ ಆಧ್ಯಾತ್ಮಿಕವಾಗಿ ಬಾಯಾರಿದವರಿಗೆ ಹಂಚೋಣ!
[ಪುಟ 6ರಲ್ಲಿರುವ ಚಿತ್ರ]
ದೇವರ ಬಗ್ಗೆ ಮತ್ತು ಬೈಬಲ್ ಬಗ್ಗೆ ಸಂಶಯ ಇರುವವರೊಟ್ಟಿಗೆ:
● ಕೆಲವು ಕ್ಷೇತ್ರಗಳಲ್ಲಿ “ದೇವರು,” “ಯೇಸು,” “ಬೈಬಲ್” ಅನ್ನುವ ಪದಗಳನ್ನು ಬಳಸಿದರೆ ಜನರು ನಮ್ಮ ಸಂದೇಶಕ್ಕೆ ಕಿವಿಗೊಡಲ್ಲ ಅಂತ ಅನೇಕ ಪ್ರಚಾರಕರು ಹೇಳುತ್ತಾರೆ. ಹಾಗಿದ್ದಲ್ಲಿ ಸ್ಥಳೀಯರನ್ನು ಚಿಂತೆಗೀಡು ಮಾಡಿರುವ ಸಾಮಾನ್ಯ ವಿಷಯದ ಕುರಿತು ಮೊದಲ ಭೇಟಿಯಲ್ಲಿ ಮಾತಾಡುವುದು ಒಳ್ಳೇದು. ಉದಾಹರಣೆಗೆ, ಒಳ್ಳೇ ಸರಕಾರದ ಅಗತ್ಯದ ಬಗ್ಗೆ, ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಎಲ್ಲಿಂದ ಸಿಗುತ್ತೆ? ಭವಿಷ್ಯತ್ತಿನಲ್ಲಿ ಏನು ಕಾದಿದೆ? ಎಂಬ ವಿಷಯಗಳ ಕುರಿತು ಮಾತಾಡಬಹುದು. ಹೀಗೆ, ದೇವರು ಇದ್ದಾರೆ ಅನ್ನುವುದಕ್ಕೆ ಮತ್ತು ಬೈಬಲನ್ನು ನಂಬುವುದಕ್ಕೆ ಯಾವ ಪುರಾವೆ ಇದೆ? ಅನ್ನುವುದನ್ನು ಹಲವಾರು ಭೇಟಿಗಳಲ್ಲಿ ಚರ್ಚಿಸಿದ ಮೇಲೆ ಸಿಹಿಸುದ್ದಿ ಕಿರುಹೊತ್ತಗೆಯನ್ನು ಪರಿಚಯಿಸಬಹುದು.
[ಪುಟ 7ರಲ್ಲಿರುವ ಚಿತ್ರ]
ಮನೆ-ಮನೆ ಸೇವೆಯಲ್ಲಿ:
● “ಎಲ್ಲ ಕಷ್ಟಕಾರ್ಪಣ್ಯಗಳನ್ನು ದೇವರು ಯಾವಾಗ ಕೊನೆಗೊಳಿಸ್ತಾರೆ ಅಂತ ನೀವು ಯಾವತ್ತಾದರೂ ಯೋಚಿಸಿದ್ದೀರಾ? [ಪ್ರತಿಕ್ರಿಯೆಗಾಗಿ ಕಾಯಿರಿ.] ಇದರ ಬಗ್ಗೆ ನಾನು ಬೈಬಲಿನಿಂದ ಕೆಲವು ವಿಷಯಗಳನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳಬಹುದಾ? [ಮನೆಯವರು ಆಸಕ್ತಿ ತೋರಿದರೆ ಮುಂದುವರಿಸಿ.] ಈ ಪ್ರಶ್ನೆಗೆ ಬೈಬಲಿನಲ್ಲಿರುವ ಉತ್ತರವನ್ನು ಕಂಡುಹಿಡಿಯಲು ಈ ಕಿರುಹೊತ್ತಗೆ ಸಹಾಯಮಾಡುತ್ತೆ. [ಕಿರುಹೊತ್ತಗೆಯನ್ನು ಮನೆಯವರಿಗೆ ಕೊಟ್ಟು, ಪಾಠ 1ರ ಮೊದಲ ಪ್ಯಾರ ಮತ್ತು ಯೆರೆಮೀಯ 29:11ನ್ನು ಓದಿ.] ಹಾಗಾದರೆ ದೇವರು ನಮಗಾಗಿ ಒಳ್ಳೇ ಭವಿಷ್ಯವನ್ನು ಕಾದಿರಿಸಿದ್ದಾರೆ ಅನ್ನುವುದರ ಬಗ್ಗೆ ನಿಮಗೆ ಹೇಗೆ ಅನಿಸ್ತದೆ? [ಪ್ರತಿಕ್ರಿಯೆಗಾಗಿ ಕಾಯಿರಿ.] ನೀವು ಬಯಸುವಲ್ಲಿ ಈ ಕಿರುಹೊತ್ತಗೆಯನ್ನು ಇಟ್ಟುಕೊಳ್ಳಬಹುದು. ಮುಂದಿನ ಸಾರಿ ಬಂದಾಗ ಎರಡನೇ ಪ್ಯಾರ ನೋಡೋಣ. ‘ನಮ್ಮ ಕಷ್ಟಗಳನ್ನು ದೇವರು ಹೇಗೆ ತೆಗೆದುಹಾಕ್ತಾರೆ?’ ಅನ್ನುವ ಪ್ರಶ್ನೆಗೆ ಬೈಬಲ್ ಏನು ಉತ್ತರ ಕೊಡುತ್ತೆ ಅಂತ ತಿಳಿಯೋಣ.” ಒಂದುವೇಳೆ ಮನೆಯವರಿಗೆ ಸಮಯವಿರುವಲ್ಲಿ ಮೊದಲ ಭೇಟಿಯಲ್ಲೇ ಎರಡನೇ ಪ್ಯಾರ ಮತ್ತು ಅದರಲ್ಲಿರುವ ಮೂರು ವಚನಗಳನ್ನು ಚರ್ಚಿಸಬಹುದು. ಮುಂದಿನ ಭೇಟಿಗಾಗಿ ಎರಡನೇ ಪ್ರಶ್ನೆಯನ್ನು ಬಿಟ್ಟು ಬರಬಹುದು.
● “ಅನೇಕರು ದೇವರಲ್ಲಿ ಪ್ರಾರ್ಥಿಸ್ತಾರೆ. ಸಮಸ್ಯೆಗಳು ಇದ್ದಾಗಂತೂ ಇನ್ನೂ ಹೆಚ್ಚು ಪ್ರಾರ್ಥನೆಗಳನ್ನು ಮಾಡ್ತಾರೆ. ನೀವೂ ಪ್ರಾರ್ಥಿಸ್ತಿರಾ? [ಪ್ರತಿಕ್ರಿಯೆಗಾಗಿ ಕಾಯಿರಿ.] ದೇವರು ಎಲ್ಲ ಪ್ರಾರ್ಥನೆಗಳನ್ನು ಕೇಳ್ತಾರಾ? ಎಂಥ ಪ್ರಾರ್ಥನೆಗಳನ್ನು ಅವರು ಕೇಳಲ್ಲ? [ಪ್ರತಿಕ್ರಿಯೆಗಾಗಿ ಕಾಯಿರಿ.] ಇದರ ಬಗ್ಗೆ ನಾನು ಬೈಬಲಿನಿಂದ ಕೆಲವು ವಿಷಯಗಳನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳಬಹುದಾ? [ಮನೆಯವರು ಆಸಕ್ತಿ ತೋರಿದರೆ ಮುಂದುವರಿಸಿ.] ಈ ಪ್ರಶ್ನೆಗಳಿಗೆ ಬೈಬಲಿನಲ್ಲಿರುವ ಉತ್ತರಗಳನ್ನು ಕಂಡುಹಿಡಿಯಲು ಈ ಕಿರುಹೊತ್ತಗೆ ಸಹಾಯಮಾಡುತ್ತೆ. [ಕಿರುಹೊತ್ತಗೆಯನ್ನು ಮನೆಯವರಿಗೆ ಕೊಟ್ಟು 12ನೇ ಪಾಠದ ಮೊದಲ ಪ್ಯಾರವನ್ನು ಮತ್ತು “ಓದಿ” ಎಂದು ಕೊಟ್ಟಿರುವ ವಚನಗಳನ್ನು ಓದಿ.] ದೇವರು ಪ್ರಾರ್ಥನೆಗಳನ್ನು ಕೇಳಲು ಬಯಸ್ತಾರೆ ಅನ್ನುವುದು ನಮಗೆ ಎಷ್ಟು ಖುಷಿ ತರುತ್ತಲ್ಲಾ? ನಾವು ಮಾಡುವ ಪ್ರಾರ್ಥನೆಯಿಂದ ನಮಗೆ ಪ್ರಯೋಜನ ಸಿಗಬೇಕಾದರೆ ದೇವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು. [ಪಾಠ 2ಕ್ಕೆ ತಿರುಗಿಸಿ ಉಪಶೀರ್ಷಿಕೆಗಳನ್ನು ತೋರಿಸಿ.] ನೀವು ಬಯಸುವಲ್ಲಿ ಈ ಕಿರುಹೊತ್ತಗೆಯನ್ನು ನಿಮ್ಮಲ್ಲಿ ಇಟ್ಟುಕೊಳ್ಳಬಹುದು. ಮುಂದಿನ ಸಾರಿ ನಾವು ಈ ಪ್ರಶ್ನೆಗಳಿಗೆ ಬೈಬಲ್ ಏನು ಉತ್ತರ ಕೊಡುತ್ತೆ ಅಂತ ಚರ್ಚಿಸೋಣ.”
● “ಲೋಕಕ್ಕೆ ಏನಾಗುತ್ತೋ ಅಂತ ಜನರು ತುಂಬ ಚಿಂತಿಸುತ್ತಾರೆ. ನಿಮಗೇನನಿಸುತ್ತೆ? ಈಗಿರೋ ಪರಿಸ್ಥಿತಿ ಏನಾದರೂ ಸುಧಾರಣೆ ಆಗ್ಬಹುದಾ? [ಪ್ರತಿಕ್ರಿಯೆಗಾಗಿ ಕಾಯಿರಿ.] ಈ ವಿಷಯದ ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ನಿಮ್ಮೊಟ್ಟಿಗೆ ಹಂಚಿಕೊಳ್ಳಬಹುದಾ? [ಮನೆಯವರು ಆಸಕ್ತಿ ತೋರಿದಲ್ಲಿ ಮುಂದುವರಿಸಿ.] ನಮ್ಮಲ್ಲಿ ನಿರೀಕ್ಷೆ ಮೂಡಿಸುವ ಒಳ್ಳೇ ಸುದ್ದಿ ಬೈಬಲಿನಲ್ಲಿರೋದನ್ನು ನೋಡಿ ತುಂಬ ಜನರಿಗೆ ಆಶ್ಚರ್ಯವಾಗಿದೆ. ಈ ಪ್ರಶ್ನೆಗಳಿಗೆ ಬೈಬಲ್ ಉತ್ತರ ಕೊಡುತ್ತದೆ.” ಕಿರುಹೊತ್ತಗೆ ಕೊಟ್ಟು ಕೊನೆ ಪುಟದಲ್ಲಿರುವ ಪ್ರಶ್ನೆಗಳನ್ನು ತೋರಿಸಿ, ಯಾವ ಪ್ರಶ್ನೆಗೆ ಉತ್ತರ ತಿಳಿಯಲು ಬಯಸುತ್ತಾರೆಂದು ಕೇಳಿ. ಅವರು ಆರಿಸಿದ ಪ್ರಶ್ನೆಯಿರುವ ಪಾಠವನ್ನು ತೆರೆದು ಅಧ್ಯಯನ ಮಾಡುವುದು ಹೇಗೆಂದು ತೋರಿಸಿ. ಆ ಪಾಠದಲ್ಲಿನ ಮುಂದಿನ ಪ್ರಶ್ನೆಯನ್ನು ಚರ್ಚಿಸಲು ಪುನಃ ಭೇಟಿಯಾಗುವ ಏರ್ಪಾಡುಮಾಡಿ.
[ಪುಟ 8ರಲ್ಲಿರುವ ಚಿತ್ರ]
ನೇರ ವಿಧಾನ ಬಳಸಿ (ಬೈಬಲ್ ಬಗ್ಗೆ ಗೌರವ ಇರುವವರಿಗೆ):
● “ಬೈಬಲ್ ಅಧ್ಯಯನದ ಒಂದು ಹೊಸ ಕಾರ್ಯಕ್ರಮದ ಬಗ್ಗೆ ನಿಮಗೆ ಹೇಳೋಣ ಅಂತ ನಾವು ಬಂದ್ವಿ. ಕೆಲವು ಪ್ರಾಮುಖ್ಯ ಪ್ರಶ್ನೆಗಳಿಗೆ ಬೈಬಲಿನಲ್ಲಿ ಉತ್ತರವನ್ನು ಕಂಡುಕೊಳ್ಳಲು ಈ ಕಿರುಹೊತ್ತಗೆಯಲ್ಲಿರುವ 15 ಪಾಠಗಳು ಸಹಾಯ ಮಾಡ್ತವೆ.” [ಮುಖಪುಟವನ್ನು ಮತ್ತು ಕೊನೆಪುಟವನ್ನು ತೋರಿಸಿ.] ಬೈಬಲನ್ನು ಅರ್ಥಮಾಡಿಕೊಳ್ಳಲು ನೀವು ಯಾವಾಗಲಾದರೂ ಪ್ರಯತ್ನಿಸಿದ್ದೀರಾ? [ಪ್ರತಿಕ್ರಿಯೆಗಾಗಿ ಕಾಯಿರಿ.] ಅದು ತುಂಬ ಸುಲಭ. ಈ ಕಿರುಹೊತ್ತಗೆಯ ಪಾಠಗಳಿಂದ ಅದು ನಮಗೆ ಗೊತ್ತಾಗುತ್ತದೆ. [3ನೇ ಪಾಠದ 3ನೇ ಪ್ರಶ್ನೆಯ ಕೆಳಗಿರುವ ಮೊದಲ ಪ್ಯಾರ ಓದಿ, ನಂತರ ಪ್ರಕಟನೆ 21:4, 5ನ್ನು ಓದಿ. ಸೂಕ್ತವೆನಿಸಿದರೆ ಮುಂದಿನ ಪ್ಯಾರ ಮತ್ತು “ಓದಿ” ವಚನಗಳನ್ನು ಪರಿಗಣಿಸಿ.] ನೀವು ಬಯಸಿದರೆ ಈ ಕಿರುಹೊತ್ತಗೆಯನ್ನು ನೀವಿಟ್ಟುಕೊಳ್ಳಬಹುದು. ಕಡಿಮೆಪಕ್ಷ ಒಂದು ಬಾರಿ ನಾವು ಇದರಿಂದ ಬೈಬಲ್ ಅಧ್ಯಯನ ಮಾಡೋಣ. ಒಳ್ಳೇದೆನಿಸಿದರೆ ಮುಂದುವರಿಸಬಹುದು. ಪಾಠಗಳು ಅಷ್ಟೇನೂ ಉದ್ದ ಕೂಡ ಇಲ್ಲ. ಮುಂದಿನ ಸಾರಿ ಮೊದಲನೇ ಪಾಠ ಚರ್ಚಿಸೋಣ.
[ಪುಟ 8ರಲ್ಲಿರುವ ಚಿತ್ರ]
ಪುನರ್ಭೇಟಿಗಳಿಗೆ ಪರಿಚಯಿಸುವಾಗ:
● ಆಸಕ್ತಿ ತೋರಿಸಿದವರನ್ನು ಪುನಃ ಭೇಟಿಯಾದಾಗ ಹೀಗೆ ಹೇಳಬಹುದು: “ಮತ್ತೆ ನಿಮ್ಮನ್ನು ಭೇಟಿಯಾಗಿ ತುಂಬ ಖುಷಿ ಆಯ್ತು. ನಾನು ನಿಮಗಂತ ಈ ಕಿರುಹೊತ್ತಗೆಯನ್ನು ತಂದಿದ್ದೇನೆ. ಇದು ಅನೇಕ ಪ್ರಾಮುಖ್ಯ ಪ್ರಶ್ನೆಗಳಿಗೆ ಬೈಬಲಿನಲ್ಲಿರುವ ಉತ್ತರಗಳನ್ನು ಕೊಡುತ್ತದೆ. [ಅವರಿಗೆ ಕಿರುಹೊತ್ತಗೆಯನ್ನು ಕೊಟ್ಟು, ಕೊನೆ ಪುಟವನ್ನು ನೋಡುವಂತೆ ಹೇಳಿ.] ಯಾವ ಪ್ರಶ್ನೆ ನಿಮಗಿಷ್ಟ? [ಪ್ರತಿಕ್ರಿಯೆಗಾಗಿ ಕಾಯಿರಿ. ಅವರು ಆರಿಸಿಕೊಳ್ಳುವ ಪಾಠಕ್ಕೆ ತಿರುಗಿಸಿ.] ಈ ಪ್ರಶ್ನೆಗೆ ಬೈಬಲ್ ಕೊಡುವ ಉತ್ತರವನ್ನು ಕಂಡುಕೊಳ್ಳುವುದು ಹೇಗೆ ಎಂದು ನಾನು ನಿಮಗೆ ತೋರಿಸುತ್ತೇನೆ.” ಒಂದೋ ಎರಡೋ ಪ್ಯಾರ ಮತ್ತು “ಓದಿ” ವಚನಗಳನ್ನು ಚರ್ಚಿಸುತ್ತಾ, ಅಧ್ಯಯನ ಮಾಡುವುದು ಹೇಗೆಂದು ತೋರಿಸಿ. ಹೀಗೆ ನೀವೊಂದು ಬೈಬಲ್ ಅಧ್ಯಯನವನ್ನು ಶುರುಮಾಡ್ತೀರಾ! ಮನೆಯವರಿಗೆ ಕಿರುಹೊತ್ತಗೆ ಕೊಟ್ಟು ಪುನಃ ಭೇಟಿಯಾಗಲು ಏರ್ಪಾಡು ಮಾಡಿ. ಕಲಿಯುತ್ತಿರುವ ಪಾಠ ಮುಗಿದ ಮೇಲೆ ಮನೆಯವರಿಗೆ ಆಸಕ್ತಿ ಇರುವ ಇನ್ನೊಂದು ಪಾಠ ಚರ್ಚಿಸಬಹುದು ಅಥವಾ ಮೊದಲನೇ ಪಾಠದಿಂದ ಶುರುಮಾಡಬಹುದು.