ಬೈಬಲ್ ಅಭ್ಯಾಸವನ್ನು ಯಾರು ಸ್ವೀಕರಿಸಬಹುದು?
1 ಇಸ್ರಾಯೇಲ್ ದೇಶದಲ್ಲಿ ಕ್ಷಾಮವು ಇರುವುದೆಂದು ಪ್ರವಾದಿಯಾದ ಆಮೋಸನು ಘೋಷಿಸಿದನು. ಇದು “ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮ”ವಾಗಿದೆ. (ಆಮೋ. 8:11) ಆತ್ಮಿಕವಾಗಿ ಹಸಿದು ಬಾಯಾರಿರುವವರ ಪ್ರಯೋಜನಕ್ಕಾಗಿ, ಯೆಹೋವನ ಸಂಸ್ಥೆಯು ಲೋಕವ್ಯಾಪಕವಾಗಿ ಧಾರಾಳವಾಗಿ ಬೈಬಲ್ ಸಾಹಿತ್ಯವನ್ನು ಹಂಚುತ್ತಿದೆ.
2 ಇಷ್ಟರ ವರೆಗೆ, ನಾವು 7 ಕೋಟಿ ಜ್ಞಾನ ಪುಸ್ತಕಗಳನ್ನು ಮತ್ತು 9 ಕೋಟಿ 10 ಲಕ್ಷ ಅಪೇಕ್ಷಿಸು ಬ್ರೋಷರುಗಳನ್ನು ಮುದ್ರಿಸಿದ್ದೇವೆ. ಸತ್ಯವನ್ನು ಕಲಿಸುವುದರಲ್ಲಿ, ಈ ಪ್ರಕಾಶನಗಳ ಸರಳತೆ ಮತ್ತು ಪರಿಣಾಮಕಾರಿತ್ವವನ್ನು ನಾವು ಗಣ್ಯಮಾಡುತ್ತೇವೆ. ಹೀಗಿದ್ದರೂ, ನಮ್ಮ ಸಾಹಿತ್ಯವನ್ನು ಪಡೆದುಕೊಂಡಿರುವ ಎಷ್ಟೋ ಜನರು ನಮ್ಮೊಂದಿಗೆ ಬೈಬಲನ್ನು ಇನ್ನೂ ಅಭ್ಯಾಸಮಾಡಿರುವುದಿಲ್ಲ. ಇದರ ಕುರಿತು ನಾವು ಏನನ್ನು ಮಾಡಬಹುದು?
3 ಪ್ರತಿಯೊಂದು ನೀಡಿಕೆಯ ಅರ್ಥ ಒಂದು ಭಾವಿ ಅಭ್ಯಾಸ!: ಒಬ್ಬಾಕೆ ಸ್ತ್ರೀಯೊಂದಿಗೆ ಪ್ರಥಮ ಬಾರಿ ಮಾತಾಡಿದಾಗಲೇ ಆಕೆಗೆ ಅಭ್ಯಾಸದ ನೀಡಿಕೆಯನ್ನು ಮಾಡಿದ ಪ್ರಚಾರಕನೊಬ್ಬನ ಅನುಭವವನ್ನು ಪರಿಗಣಿಸಿರಿ. ಅವಳು ಅಭ್ಯಾಸಮಾಡಲು ತತ್ಕ್ಷಣವೇ ಒಪ್ಪಿಕೊಂಡಳು. ನಂತರ ಅವಳು ಅವನಿಗೆ ಹೀಗೆ ಹೇಳಿದಳು, “ನನ್ನೊಂದಿಗೆ ಬೈಬಲನ್ನು ಅಭ್ಯಾಸಮಾಡುವ ನೀಡಿಕೆಯನ್ನು ಮಾಡಿದ ಮೊದಲ ವ್ಯಕ್ತಿಯು ನೀವೇ ಆಗಿದ್ದೀರಿ.” ನಿಮ್ಮ ಕ್ಷೇತ್ರದಲ್ಲಿ ನಮ್ಮ ಸಾಹಿತ್ಯವನ್ನು ಈಗಾಗಲೇ ಪಡೆದುಕೊಂಡಿರುವ ಎಷ್ಟು ಜನರು ಹೀಗೆ ಹೇಳಬಹುದು? ಪ್ರತಿಯೊಂದು ನೀಡಿಕೆಯು ಪುನರ್ಭೇಟಿಗಳಿಗೆ ಮತ್ತು ಮನೆ ಬೈಬಲ್ ಅಭ್ಯಾಸಗಳಿಗೆ ಅವಕಾಶವನ್ನು ಒದಗಿಸುತ್ತದೆ.
4 ಈಗಾಗಲೇ ನಮ್ಮ ಪ್ರಕಾಶನಗಳನ್ನು ಹೊಂದಿರುವ ಜನರನ್ನು ನಾವು ಸಂಧಿಸುತ್ತೇವಾದ್ದರಿಂದ, ನಮ್ಮ ಸಾಹಿತ್ಯಗಳಲ್ಲೇನಿದೆ ಎಂಬುದನ್ನು ಕಲಿಯುವಂತೆ ಅವರ ಆಸಕ್ತಿಯನ್ನು ನಾವು ಹೇಗೆ ಕೆರಳಿಸಬಹುದು? ಸಾಕ್ಷಿಯೊಬ್ಬಳು ಮನೆಯಾಕೆಗೆ ಯಾವುದಾದರೂ ಬೈಬಲ್ ಪ್ರಶ್ನೆಗಳಿವೆಯೋ ಎಂದು ನೇರವಾಗಿ ಕೇಳಿದಳು. ಆದರೆ ಅವಳು ಕೇವಲ “ಇಲ್ಲ” ಎಂದು ಉತ್ತರಿಸಿ ಸುಮ್ಮನಾದಳು. ಸಹೋದರಿಯು ಪಟ್ಟುಹಿಡಿದು, “ಖಂಡಿತವಾಗಿಯೂ ನಿಮಗೆ ಕೆಲವು ಪ್ರಶ್ನೆಗಳು ಇರಲೇಬೇಕು.” ಹೌದು, ಆ ಸ್ತ್ರೀಗೆ ಪ್ರಶ್ನೆಗಳಿದ್ದವು ಮತ್ತು ಒಂದು ಅಭ್ಯಾಸವು ಆರಂಭಿಸಲ್ಪಟ್ಟಿತು. ಮನೆಯವನಿಗೆ ಸಂಬಂಧಿಸುವ ಒಂದು ವಿಷಯ ಅಥವಾ ಪ್ರಶ್ನೆಯ ಕುರಿತು ಬೈಬಲಿನ ದೃಷ್ಟಿಕೋನವೇನಾಗಿದೆ ಎಂಬುದನ್ನು ಕಲಿಯಲು ಬಯಸುತ್ತಾನೋ ಎಂದು ಏಕೆ ಕೇಳಿನೋಡಬಾರದು? ಅವನ ಮನಸ್ಸಿಗೆ ಆಗ ಯಾವುದೇ ವಿಷಯವು ಹೊಳೆಯದಿರುವಲ್ಲಿ, ಒಂದು ಆಸಕ್ತಿಕರ ಪ್ರಶ್ನೆಯನ್ನು ಎಬ್ಬಿಸಲು ಸಿದ್ಧರಾಗಿರಿ. ಇಂತಹ ಚರ್ಚೆಗಳು ಮೂಲಭೂತ ಬೈಬಲ್ ಸತ್ಯಗಳ ಕ್ರಮವಾದ ಅಭ್ಯಾಸಕ್ಕೆ ದಾರಿಯನ್ನು ಮಾಡಿಕೊಡಬಹುದು.
5 ಬೈಬಲ್ ಅಭ್ಯಾಸದ ಚಟುವಟಿಕೆಯು ನಮ್ಮ ಶುಶ್ರೂಷೆಯ ಮುಖ್ಯಭಾಗವಾಗಿದೆ. ಒಂದು ಬೈಬಲ್ ಅಭ್ಯಾಸವನ್ನು ಯಾರು ಸ್ವೀಕರಿಸಬಹುದು ಎಂಬುದು ನಮಗೆ ನಿಖರವಾಗಿ ಗೊತ್ತಿಲ್ಲದಿರುವುದರಿಂದ, ನಾವು ಭೇಟಿಯಾಗುವ ಪ್ರತಿಯೊಬ್ಬರಿಗೂ ಅಭ್ಯಾಸದ ನೀಡಿಕೆಯನ್ನು ಮಾಡಲು ಹಿಂಜರಿಯಬಾರದು. ಪ್ರಾರ್ಥನೆಯಲ್ಲಿ ವಿಷಯವನ್ನು ಯೆಹೋವನ ಮುಂದೆ ತಂದು, ನಿಮ್ಮ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ ಕಾರ್ಯನಡೆಸಿರಿ. ಆಗ ನೀವು ಯಾರಿಗೆ ಒಂದು ಅಭ್ಯಾಸದ ನೀಡಿಕೆಯನ್ನು ಮಾಡುತ್ತೀರೊ ಅವರಲ್ಲಿ ಒಬ್ಬರಾದರೂ ಅದನ್ನು ಸ್ವೀಕರಿಸುವರೆಂಬುದನ್ನು ನೀವು ಬೇಗನೇ ಕಂಡುಕೊಳ್ಳಬಹುದು!—1 ಯೋಹಾ. 5:14, 15.