ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು
ಭಾಗ 7: ಅಧ್ಯಯನಕ್ಕಾಗಿ ಕೂಡಿರುವಾಗ ಪ್ರಾರ್ಥಿಸುವುದು
1. (ಎ) ಒಂದು ಬೈಬಲ್ ಅಧ್ಯಯನವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಿ ಮುಕ್ತಾಯಗೊಳಿಸುವುದು ಏಕೆ ಯೋಗ್ಯವಾಗಿದೆ? (ಬಿ) ನಾವು ಒಂದು ಬೈಬಲ್ ಅಧ್ಯಯನದಲ್ಲಿ ಪ್ರಾರ್ಥನೆಯನ್ನು ಹೇಗೆ ಪರಿಚಯಿಸಸಾಧ್ಯವಿದೆ?
1 ಬೈಬಲ್ ವಿದ್ಯಾರ್ಥಿಗಳು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಬೇಕಾದರೆ ಯೆಹೋವನ ಆಶೀರ್ವಾದವು ಅವಶ್ಯ. (1 ಕೊರಿಂ. 3:6) ಆದುದರಿಂದ, ಸ್ವಲ್ಪಕಾಲದಿಂದ ನಡೆಸಲ್ಪಡುತ್ತಿರುವ ಒಂದು ಅಧ್ಯಯನವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಿ ಮುಕ್ತಾಯಗೊಳಿಸುವುದು ಯೋಗ್ಯವಾಗಿದೆ. ಧಾರ್ಮಿಕ ವ್ಯಕ್ತಿಗಳೊಂದಿಗೆ ನಾವು ಪ್ರಾಯಶಃ ಮೊದಲ ಅಧ್ಯಯನದಿಂದಲೇ ಇದನ್ನು ಮಾಡಬಲ್ಲೆವು. ಇತರ ವಿದ್ಯಾರ್ಥಿಗಳ ವಿಷಯದಲ್ಲಿಯಾದರೋ, ಪ್ರಾರ್ಥನೆಯನ್ನು ಯಾವಾಗ ಪರಿಚಯಿಸುವುದು ಎಂಬುದನ್ನು ನಾವು ವಿವೇಚಿಸಿ ತೀರ್ಮಾನಿಸಬೇಕು. ಪ್ರಾರ್ಥನೆಯನ್ನು ಏಕೆ ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗೆ ಸಹಾಯಮಾಡುವ ಸಲುವಾಗಿ ನೀವು ಕೀರ್ತನೆ 25:4, 5 ಮತ್ತು 1 ಯೋಹಾನ 5:14ನ್ನು ಉಪಯೋಗಿಸಬಹುದು ಹಾಗೂ ಯೆಹೋವನಿಗೆ ಯೇಸು ಕ್ರಿಸ್ತನ ಮೂಲಕ ಪ್ರಾರ್ಥನೆಯನ್ನು ಮಾಡುವುದರ ಪ್ರಾಮುಖ್ಯತೆಯನ್ನು ವಿವರಿಸಲಿಕ್ಕಾಗಿ ನೀವು ಯೋಹಾನ 15:16ನ್ನೂ ಉಪಯೋಗಿಸಬಹುದು.
2. ಒಬ್ಬ ಸಹೋದರಿಯೊಂದಿಗೆ ಸ್ನಾತ ಸಹೋದರನೊಬ್ಬನು ಅಥವಾ ಅಸ್ನಾತ ಪ್ರಚಾರಕನೊಬ್ಬನು ಬೈಬಲ್ ಅಧ್ಯಯನಕ್ಕೆ ಹೋಗುವುದಾದರೆ, ಪ್ರಾರ್ಥನೆಯನ್ನು ಯಾರು ಮಾಡುವರು?
2 ಒಂದು ಬೈಬಲ್ ಅಧ್ಯಯನದಲ್ಲಿ ಯಾರು ಪ್ರಾರ್ಥನೆಯನ್ನು ಸಲ್ಲಿಸಬೇಕು? ಸ್ನಾತ ಸಹೋದರನೊಬ್ಬನು ಒಬ್ಬ ಸಹೋದರಿಯೊಂದಿಗೆ ಅಧ್ಯಯನಕ್ಕೆ ಹೋಗುವುದಾದರೆ, ತಲೆಗೆ ಮುಸುಕು ಹಾಕಿಕೊಂಡು ಆ ಸಹೋದರಿಯು ಅಧ್ಯಯನವನ್ನು ನಡೆಸುವುದಾದರೂ ಸಹೋದರನು ಪ್ರಾರ್ಥನೆಯನ್ನು ಸಲ್ಲಿಸಬೇಕು. (1 ಕೊರಿಂ. 11:5, 10) ಮತ್ತೊಂದು ಬದಿಯಲ್ಲಿ, ಒಬ್ಬ ಅಸ್ನಾತ ರಾಜ್ಯ ಪ್ರಚಾರಕನು ಒಬ್ಬ ಸಹೋದರಿಯೊಂದಿಗೆ ಅಧ್ಯಯನಕ್ಕೆ ಹೋಗುವುದಾದರೆ, ಸಹೋದರಿಯು ಪ್ರಾರ್ಥನೆಯನ್ನು ಸಲ್ಲಿಸುವಳು. ಇಂತಹ ಸಂದರ್ಭದಲ್ಲಿ, ಅವಳು ಪ್ರಾರ್ಥಿಸುವಾಗಲೂ ಅಧ್ಯಯನವನ್ನು ನಡೆಸುತ್ತಿರುವಾಗಲೂ ತಲೆಗೆ ಮುಸುಕನ್ನು ಹಾಕಿಕೊಂಡಿರುವಳು.
3. ಒಂದು ಬೈಬಲ್ ಅಧ್ಯಯನದ ಸಮಯದಲ್ಲಿ ಮಾಡಲ್ಪಡುವ ಪ್ರಾರ್ಥನೆಗಳಲ್ಲಿ ಸೇರಿಸಬೇಕಾದ ಯೋಗ್ಯ ವಿಷಯಗಳು ಯಾವುವು?
3 ಪ್ರಾರ್ಥನೆಯಲ್ಲಿ ಒಳಗೂಡಿರಬಹುದಾದ ವಿಷಯಗಳು: ಬೈಬಲ್ ಅಧ್ಯಯನಕ್ಕೆ ಕೂಡಿಬಂದಿರುವಾಗ ಉದ್ದುದ್ದವಾದ ಪ್ರಾರ್ಥನೆಗಳನ್ನು ಮಾಡಬೇಕೆಂದಿರುವುದಿಲ್ಲ, ಆದರೆ ಅವು ನಿರ್ದಿಷ್ಟವಾಗಿರಬೇಕು. ಅಧ್ಯಯನದ ಮೇಲೆ ದೇವರ ಆಶೀರ್ವಾದಕ್ಕಾಗಿ ಕೋರುವುದು ಮತ್ತು ಕಲಿತುಕೊಂಡ ಸತ್ಯಗಳಿಗಾಗಿ ಉಪಕಾರವನ್ನು ಸಲ್ಲಿಸುವುದರೊಂದಿಗೆ, ಉಪದೇಶದ ಮೂಲನಾಗಿರುವ ಯೆಹೋವನಿಗೆ ಸ್ತುತಿಯನ್ನು ಸಲ್ಲಿಸುವುದು ಉತ್ತಮವಾಗಿರುವುದು. (ಯೆಶಾ. 54:13) ವಿದ್ಯಾರ್ಥಿಯಲ್ಲಿರುವ ನಮ್ಮ ಪ್ರಾಮಾಣಿಕ ಆಸಕ್ತಿಯನ್ನು ಹಾಗೂ ಯೆಹೋವನು ಉಪಯೋಗಿಸುತ್ತಿರುವ ಸಂಘಟನೆಗಾಗಿ ಗಣ್ಯತೆಯನ್ನು ವ್ಯಕ್ತಪಡಿಸುವ ಅಭಿವ್ಯಕ್ತಿಗಳನ್ನೂ ನಾವು ಸೇರಿಸಸಾಧ್ಯವಿದೆ. (1 ಥೆಸ. 1:2, 3; 2:7, 8) ತಾನು ಕಲಿಯುತ್ತಿರುವ ವಿಷಯಗಳನ್ನು ಅನ್ವಯಿಸಿಕೊಳ್ಳಲು ವಿದ್ಯಾರ್ಥಿಯು ಮಾಡುವ ಪ್ರಯತ್ನಗಳ ಮೇಲೆ ಯೆಹೋವನ ಆಶೀರ್ವಾದವನ್ನು ಕೇಳಿಕೊಳ್ಳುವುದು, ‘ವಾಕ್ಯದ ಪ್ರಕಾರ ನಡೆಯುವವನಾಗಿರುವುದರ’ ಪ್ರಾಮುಖ್ಯತೆಯನ್ನು ಮನಗಾಣುವಂತೆ ವಿದ್ಯಾರ್ಥಿಗೆ ಸಹಾಯಮಾಡಬಲ್ಲದು.—ಯಾಕೋ. 1:22.
4. ಒಂದು ಬೈಬಲ್ ಅಧ್ಯಯನವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಿ ಮುಕ್ತಾಯಗೊಳಿಸುವುದು ಯಾವ ಪ್ರಯೋಜನಗಳನ್ನು ತರುತ್ತದೆ?
4 ಪ್ರಾರ್ಥನೆಯಿಂದ ಸಿಗುವ ಪ್ರಯೋಜನಗಳಾದರೋ ಅನೇಕ. ಅದು ದೇವರ ಆಶೀರ್ವಾದವನ್ನು ತರುತ್ತದೆ. (ಲೂಕ 11:13) ದೇವರ ವಾಕ್ಯವನ್ನು ಅಧ್ಯಯನ ಮಾಡುವುದರ ಗಂಭೀರತೆಗೆ ಅದು ಒತ್ತುನೀಡುತ್ತದೆ. ವಿದ್ಯಾರ್ಥಿಯು ನಮ್ಮ ಪ್ರಾರ್ಥನೆಗಳಿಗೆ ಕಿವಿಗೊಡುವಾಗ, ಹೇಗೆ ಪ್ರಾರ್ಥಿಸಬೇಕು ಎಂಬುದನ್ನು ಕಲಿಯುತ್ತಾನೆ. (ಲೂಕ 6:40) ಮಾತ್ರವಲ್ಲದೆ, ದೇವರಿಗಾಗಿರುವ ಪ್ರೀತಿ ಮತ್ತು ಆತನ ಹೋಲಿಸಲಸಾಧ್ಯವಾದ ಗುಣಗಳಿಗಾಗಿರುವ ಗಣ್ಯತೆಯೊಂದಿಗೆ ತುಂಬಿರುವ ಹೃದಯದಿಂದ ಬರುವ ಪ್ರಾರ್ಥನೆಗಳು, ವಿದ್ಯಾರ್ಥಿಯು ಯೆಹೋವನೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳಲು ಸಹಾಯಮಾಡಸಾಧ್ಯವಿದೆ.