ಯೆಹೋವನಿಗಾಗಿ ಎದುರುನೋಡುತ್ತಾ ಇರಿ
1. ಅಧಿವೇಶನದ ಮುಖ್ಯ ವಿಷಯವೇನಾಗಿದೆ, ಮತ್ತು ಇದು ಯಾಕೆ ಸಮಯೋಚಿತವಾಗಿದೆ?
1 “ಯೆಹೋವನು ನ್ಯಾಯಸ್ವರೂಪನಾದ ದೇವರು; ಆತನಿಗಾಗಿ ಕಾದಿರುವವರೆಲ್ಲರೂ [“ಎದುರುನೋಡುವವರೆಲ್ಲರೂ” NW] ಧನ್ಯರು” ಎಂದು ಯೆಶಾಯನು ಬರೆದನು. (ಯೆಶಾ. 30:18ಬಿ) ದೇವರು ತನ್ನ ಶತ್ರುಗಳ ಮೇಲೆ ನ್ಯಾಯತೀರ್ಪನ್ನು ಜಾರಿಗೊಳಿಸಿ, ತನ್ನ ನಂಬಿಗಸ್ತ ಸೇವಕರಿಗೆ ಬಿಡುಗಡೆಯನ್ನೊದಗಿಸಿದ ಅನೇಕ ವೃತ್ತಾಂತಗಳು ಬೈಬಲಿನಲ್ಲಿವೆ. ಇಂದು ಆ ವೃತ್ತಾಂತಗಳು ಯೆಹೋವನ ಆರಾಧಕರಿಗೆ ಯಾವ ಪಾಠಗಳನ್ನು ಕಲಿಸುತ್ತವೆ? ‘ಯೆಹೋವನ ಆಗಮನದ ಭಯಂಕರವಾದ ಮಹಾದಿನಕ್ಕೆ’ ಸಿದ್ಧರಾಗಿರಲು ಈಗ ನಾವೇನು ಮಾಡಸಾಧ್ಯವಿದೆ? (ಯೋವೇ. 2:30, 31) ಮುಂಬರಲಿರುವ “ಬಿಡುಗಡೆಯು ಸಮೀಪವಿದೆ!” ಎಂಬ ನಮ್ಮ ಜಿಲ್ಲಾ ಅಧಿವೇಶನವು ಈ ಪ್ರಶ್ನೆಗಳ ಬಗ್ಗೆ ಪರ್ಯಾಲೋಚಿಸಲು ಮತ್ತು ಸ್ವಪರೀಕ್ಷೆ ಮಾಡಿಕೊಳ್ಳಲು ನಮ್ಮನ್ನು ಪ್ರೇರೇಪಿಸುವುದು ಮತ್ತು ಯೆಹೋವನನ್ನು ಎದುರುನೋಡುತ್ತಾ ಇರಲು ನಮಗೆ ಸಹಾಯಮಾಡುವುದು.
2. ನಮ್ಮ ಜಿಲ್ಲಾ ಅಧಿವೇಶನಕ್ಕಾಗಿ ನಾವು ಹೇಗೆ ಗಣ್ಯತೆಯನ್ನು ತೋರಿಸಸಾಧ್ಯವಿದೆ?
2 ಅಧಿವೇಶನದ ಮೂರೂ ದಿನಗಳನ್ನು ಹಾಜರಾಗಿ, ಇಡೀ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆಯಲು ನೀವು ಏರ್ಪಾಡುಗಳನ್ನು ಮಾಡಿದ್ದೀರೋ? ಉದಾಹರಣೆಗೆ, ಅಧಿವೇಶನಕ್ಕೆ ಹಾಜರಾಗಲು ರಜೆಯನ್ನು ನೀಡುವಂತೆ ನಿಮ್ಮ ದಣಿಯ ಬಳಿ ಈಗಾಗಲೇ ವಿನಂತಿಸಿಕೊಂಡಿದ್ದೀರೋ? ಸುಲಭದಲ್ಲಿ ನಿಮಗೆ ರಜೆಸಿಗುವುದೆಂದು ನೆನಸಬೇಡಿ. ಇದನ್ನು ನಿಮ್ಮ ಪ್ರಾರ್ಥನೆಗಳಲ್ಲಿ ಒಳಗೂಡಿಸಿರಿ ಮತ್ತು ತದನಂತರ ನಿಮ್ಮ ದಣಿಯ ಬಳಿ ಹೋಗಿ ಮಾತಾಡಿರಿ. (ನೆಹೆ. 2:4, 5) ತದ್ರೀತಿಯಲ್ಲಿ ಸಾರಿಗೆ, ವಸತಿಸೌಕರ್ಯ ಮತ್ತು ಇತರ ಪ್ರಾಮುಖ್ಯ ವಿಷಯಗಳಿಗಾಗಿ ಏರ್ಪಾಡುಮಾಡುವುದನ್ನು ನಾವು ಮುಂದೂಡಬಾರದು. ಈ ರೀತಿಯಲ್ಲಿ ಉತ್ತಮ ಯೋಜನೆಯನ್ನು ಮಾಡುವಾಗ, ಆಧ್ಯಾತ್ಮಿಕ ಆಹಾರವನ್ನು ಉಣಿಸಲು ಯೆಹೋವನು ಏರ್ಪಡಿಸಿರುವ ಕಾರ್ಯಕ್ರಮಕ್ಕಾಗಿ ನಮ್ಮಲ್ಲಿ ಆಳವಾದ ಗಣ್ಯತಾಭಾವವಿದೆ ಎಂದು ನಾವು ತೋರಿಸುತ್ತೇವೆ. ಅಧಿವೇಶನದ ಏರ್ಪಾಡುಗಳನ್ನು ಮಾಡಲು ಯಾರಿಗೆ ಸಹಾಯದ ಅಗತ್ಯವಿದೆಯೋ ಅವರಿಗೆ, ವಿಶೇಷವಾಗಿ ಸಭೆಯಲ್ಲಿರುವ ವೃದ್ಧರಿಗೆ ಹಿರಿಯರು ಜಾಗರೂಕ ಗಮನವನ್ನು ಕೊಡಬೇಕು.—ಗಲಾ. 6:10.
3. ಅಧಿವೇಶನದ ನಗರದಲ್ಲಿ ಯೆಹೋವನ ಜನರು ಯಾವ ಗುಣಗಳನ್ನು ತೋರಿಸಬೇಕು?
3 ಒಳ್ಳೇ ನಡತೆಯು ದೇವರನ್ನು ಘನಪಡಿಸುತ್ತದೆ: ನಾವು ಅಧಿವೇಶನಗಳಿಗೆ ದೊಡ್ಡ ಸಂಖ್ಯೆಯಲ್ಲಿ ಒಟ್ಟುಗೂಡುವಾಗ ನಮ್ಮ ನಡತೆಯು ಅಲ್ಲಿನ ಸಮುದಾಯದ ಜನರಿಗೆ ಒಳ್ಳೆಯ ಸಾಕ್ಷಿಯನ್ನು ಕೊಡುತ್ತದೆ. ಈ ವಿಷಯವು ನಮ್ಮಿಂದ ಏನನ್ನು ಅವಶ್ಯಪಡಿಸುತ್ತದೆ? ನಾವು ಹೋಟೆಲ್ಗಳು, ರೆಸ್ಟರಾಂಟ್ಗಳು ಮತ್ತು ಅಧಿವೇಶನ ಕ್ಷೇತ್ರದ ಸುತ್ತಮುತ್ತಲಿರುವ ಇತರ ವ್ಯಾಪಾರ ಕ್ಷೇತ್ರಗಳಲ್ಲಿ ಯಾರೊಂದಿಗೆ ವ್ಯವಹರಿಸುತ್ತೇವೋ ಅವರಿಗೆ ನಮ್ಮ ದೀರ್ಘಶಾಂತಿ, ಸಾಧುತ್ವ, ಸ್ವನಿಯಂತ್ರಣ ಮತ್ತು ನ್ಯಾಯಸಮ್ಮತತೆಯಂತಹ ಕ್ರೈಸ್ತ ಗುಣಗಳು ಸಂತೋಷವನ್ನುಂಟುಮಾಡಬೇಕು. (ಗಲಾ. 5:22, 23; ಫಿಲಿ. 4:5) ‘ಮರ್ಯಾದೆಗೆಟ್ಟು ನಡೆಯದ, ಸ್ವಪ್ರಯೋಜನವನ್ನು ಚಿಂತಿಸದ, ಮತ್ತು ಸಿಟ್ಟುಗೊಳ್ಳದಂಥ’ ರೀತಿಯ ಪ್ರೀತಿಯನ್ನು ನಾವೆಲ್ಲರೂ ತೋರಿಸಬೇಕು. ತೊಂದರೆಗಳು ಮತ್ತು ಅನನುಕೂಲ ಪರಿಸ್ಥಿತಿಗಳು ಎದುರಾಗುವಾಗಲೂ, ನಾವು “ಎಲ್ಲವನ್ನೂ ದೇವರ ಘನತೆಗಾಗಿ” ಮಾಡಬೇಕು.—1 ಕೊರಿಂ. 10:31; 13:4, 5.
4. ಯೆಹೋವನಿಗೆ ಸ್ತುತಿಯನ್ನು ತರುವಂತಹ ರೀತಿಯಲ್ಲಿ ಮಕ್ಕಳು ನಡೆದುಕೊಳ್ಳುವಂತೆ ಹೆತ್ತವರು ಹೇಗೆ ಸಹಾಯಮಾಡಬಲ್ಲರು?
4 ಒಂದು ಅಧಿವೇಶನದ ನಂತರ, ನಮ್ಮ ಯುವಜನರ ನಡತೆ ಹಾಗೂ ತೋರಿಕೆಯಿಂದ ಹೋಟೆಲಿನ ಮ್ಯಾನೆಜರನೊಬ್ಬನು ಎಷ್ಟು ಪ್ರಭಾವಿತನಾದನೆಂದರೆ, “ಯಾವಾಗಲೂ ಯೆಹೋವನ ಸಾಕ್ಷಿಗಳನ್ನೇ ಅವನ ಹೋಟೆಲಿನ ಅಥಿತಿಗಳಾಗಿ ಪಡೆಯುವ” ಆಸೆಯನ್ನು ಅವನು ವ್ಯಕ್ತಪಡಿಸಿದನು. ಇದನ್ನು ಕೇಳಲು ಎಷ್ಟೊಂದು ಸಂತೋಷವಾಗುತ್ತದೆ! ಇದು ಹೆತ್ತವರಾದ ನೀವು ನೀಡಿದ ತರಬೇತಿ ಮತ್ತು ಮೇಲ್ವಿಚಾರಣೆಗೆ ಸಲ್ಲಬೇಕಾದ ಕೀರ್ತಿಯಾಗಿದೆ. ಹೋಟೆಲ್ ರೂಮ್ಗಳಲ್ಲಿ ಹೆತ್ತವರು ಮಕ್ಕಳನ್ನು ಯಾವುದೇ ಮೇಲ್ವಿಚಾರಣೆಯಿಲ್ಲದೆ ಬಿಡುವುದು ವಿವೇಕಯುತವಾಗಿರುವುದಿಲ್ಲ. ಹೆತ್ತವರು ಮಕ್ಕಳ ಮೇಲೆ ಯಾವಾಗಲೂ ನಿಗಾ ಇಡಬೇಕು. (ಜ್ಞಾನೋ. 29:15) ಅವರ ಒಳ್ಳೆಯ ನಡತೆಯು ಯೆಹೋವನಿಗೆ ಮಹಿಮೆಯನ್ನು ತರಲಿ ಮತ್ತು ಆತನ ಹೃದಯವನ್ನು ಯಾವಾಗಲೂ ಸಂತೋಷಪಡಿಸುವಂತಾಗಲಿ!—ಜ್ಞಾನೋ. 27:11.
5. ನಮ್ಮ ಉಡುಪು ಮತ್ತು ಕೇಶಾಲಂಕಾರದ ಮೂಲಕ ನಾವು ಯೆಹೋವನಿಗೆ ಹೇಗೆ ಗೌರವ ಸಲ್ಲಿಸಬಲ್ಲೆವು?
5 ಉಡುಪು ಮತ್ತು ಕೇಶಾಲಂಕಾರ: ವಿಚಿತ್ರ ತೋರಿಕೆಯದ್ದೂ, ವಿಪರೀತ ಸ್ಟೈಲ್ನದ್ದೂ, ಅಸಭ್ಯ ಇಲ್ಲವೆ ಅತಿ ಮಾಮೂಲಿಯಾದ ಉಡುಪು ಮತ್ತು ಕೇಶಾಲಂಕಾರವನ್ನು ಬಳಸದಿರುವ ಮೂಲಕ ನಮ್ಮಲ್ಲಿರುವ ಪ್ರತಿಯೊಬ್ಬರೂ ಅಧಿವೇಶನದಿಂದಾಗಿ ಜನರಲ್ಲಿ ಮೂಡುವ ಒಳ್ಳೇ ಅಭಿಪ್ರಾಯಕ್ಕೆ ಹೆಚ್ಚನ್ನು ಕೂಡಿಸಸಾಧ್ಯವಿದೆ. ಈ ಮಾತು, ಅಧಿವೇಶನದ ಸ್ಥಳಕ್ಕೆ ಪ್ರಯಾಣಿಸುವಾಗ ಮತ್ತು ಅಲ್ಲಿಂದ ಹಿಂದಿರುಗುವಾಗ, ಅಧಿವೇಶನ ನಡೆಯುವ ಸ್ಥಳವನ್ನು ಸಿದ್ಧಗೊಳಿಸಲು ಸಹಾಯಮಾಡುತ್ತಿರುವಾಗ ಮತ್ತು ಕಾರ್ಯಕ್ರಮಕ್ಕೆ ಹಾಜರಾಗುವಾಗ ಅನ್ವಯಿಸುತ್ತದೆ. ದೇವರ ಸೇವಕರಾಗಿರುವ ನಮಗೆ, ನಮ್ಮ ಸ್ವಂತ ಅಭಿರುಚಿ ಇಲ್ಲವೆ ಹಿತಕ್ಕಿಂತ ಯೆಹೋವನ ನಾಮ ಮತ್ತು ಪ್ರಸಿದ್ಧಿಯು ಪ್ರಥಮ ಚಿಂತೆಯಾಗಿದೆ. ಕುಟುಂಬದ ತಲೆಗೆ ತನ್ನ ಕುಟುಂಬದವರ ತೋರಿಕೆಯು ಎಲ್ಲ ಸಮಯದಲ್ಲಿಯೂ ಡಂಭವಿಲ್ಲದ್ದೂ ಮರ್ಯಾದೆಗೆ ತಕ್ಕದ್ದೂ ಆಗಿದೆಯೆಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಇದೆ.—1 ತಿಮೊ. 2:9.
6. ಅಧಿವೇಶನದ ಸೆಷನ್ಗಳು ನಡೆಯುವ ಸಮಯದಲ್ಲಿ ನಾವು ತೋರಿಸುವ ಘನತೆಯುಳ್ಳ ತೋರಿಕೆಯನ್ನೇ ನಾವು ವಿರಾಮದ ಸಮಯದಲ್ಲೂ ಏಕೆ ಕಾಪಾಡಿಕೊಳ್ಳಬೇಕು?
6 ವಿರಾಮದ ಸಮಯದಲ್ಲಿ ಅಂದರೆ ಹೋಟೆಲ್, ರೆಸ್ಟರಾಂಟ್ ಮತ್ತು ಅಂಗಡಿಗಳಲ್ಲಿರುವಾಗಲೂ ನಮ್ಮ ತೋರಿಕೆಯು ಅಷ್ಟೇ ಘನತೆಯುಳ್ಳದ್ದಾಗಿರಬೇಕು. ಸೆಷನ್ಗಳ ನಂತರ ಭೋಜನಕ್ಕಾಗಿ ನಾವು ತೆರಳುವುದಾದರೆ ಆಗ ಸಹ ನಾವು ನಮ್ಮ ಅಧಿವೇಶನದ ಉಡುಪನ್ನು ಧರಿಸುವುದು ಸೂಕ್ತ. ನಮ್ಮ ಅಧಿವೇಶನದ ಬ್ಯಾಡ್ಜ್ ಕಾರ್ಡ್ಗಳನ್ನು ಯಾವಾಗಲೂ ಧರಿಸಿರುವುದು ಅನೌಪಚಾರಿಕವಾಗಿ ಸಾಕ್ಷಿನೀಡಲು ಅವಕಾಶಗಳನ್ನು ಸೃಷ್ಟಿಸುತ್ತದೆ.—2 ಕೊರಿಂ. 6:3, 4.
7. ಅಧಿವೇಶನದ ಸುವ್ಯವಸ್ಥೆಗೆ ಮತ್ತು ಆನಂದಕ್ಕೆ ನಾವು ಹೇಗೆ ನೆರವು ನೀಡಬಲ್ಲೆವು? (“ಜಿಲ್ಲಾ ಅಧಿವೇಶನದ ಮರುಜ್ಞಾಪನಗಳು” ಚೌಕವನ್ನು ನೋಡಿರಿ.)
7 ಯೆಶಾಯನು ಮುಂತಿಳಿಸಿದ್ದು: “ಯೆಹೋವನು ನಿಮಗೆ ಕೃಪೆತೋರಿಸಬೇಕೆಂದು ಕಾದಿರುವನು; ನಿಮ್ಮನ್ನು ಕರುಣಿಸಬೇಕೆಂದು ಉನ್ನತೋನ್ನತನಾಗಿ ಕಾಣಿಸಿಕೊಳ್ಳುವನು.” (ಯೆಶಾ. 30:18ಎ) ಯೆಹೋವನ ಕೃಪೆ ಹಾಗೂ ಅಪಾತ್ರದಯೆಗಾಗಿ ನಮಗಿರುವ ಕೃತಜ್ಞತೆಯು, ಅಧಿವೇಶನಗಳಿಗೆ ನಾವು ಕೂಡಿಬರುವಾಗ ನಮ್ಮ ನಡತೆ ಮತ್ತು ತೋರಿಕೆಯ ಮೂಲಕ ಆತನನ್ನು ಗೌರವಿಸುವಂತೆ ನಮ್ಮನ್ನು ಪ್ರೇರೇಪಿಸಬೇಕು. “ಬಿಡುಗಡೆಯು ಸಮೀಪವಿದೆ!” ಜಿಲ್ಲಾ ಅಧಿವೇಶನವು ನಮ್ಮ ದೇವರನ್ನು ಘನಪಡಿಸಲಿ ಮತ್ತು ಯೆಹೋವನನ್ನು ಎದುರುನೋಡುತ್ತಾ ಇರಲು ನಮಗೆ ಸಹಾಯಮಾಡಲಿ!
[ಪುಟ 5ರಲ್ಲಿರುವಚೌಕ]
ಜಿಲ್ಲಾ ಅಧಿವೇಶನದ ಮರುಜ್ಞಾಪನಗಳು
◼ ಕಾರ್ಯಕ್ರಮದ ಸಮಯಗಳು: ಎಲ್ಲ ಮೂರು ದಿನಗಳಲ್ಲಿಯೂ ಕಾರ್ಯಕ್ರಮವು ಬೆಳ್ಳಿಗೆ 9:30ಕ್ಕೆ ಆರಂಭವಾಗುವುದು. ಸಭಾಂಗಣದ ದ್ವಾರಗಳನ್ನು ಬೆಳಿಗ್ಗೆ 8:00 ಗಂಟೆಗೆ ತೆರೆಯಲಾಗುವುದು. ಕಾರ್ಯಕ್ರಮವು ಆರಂಭಗೊಳ್ಳುವುದಕ್ಕೆ ಕೆಲವು ನಿಮಿಷಗಳ ಮುಂಚೆ, ರಾಜ್ಯ ಸಂಗೀತವು ನುಡಿಸಲ್ಪಡುತ್ತಿರುವಾಗ ಅಧ್ಯಕ್ಷನು ವೇದಿಕೆಯ ಮೇಲೆ ಕುಳಿತಿರುವನು. ಆ ಸಮಯದಲ್ಲಿ ನಾವೆಲ್ಲರೂ ನಮ್ಮ ಆಸನಗಳಿಗೆ ಹೋಗಿ ಕುಳಿತುಕೊಳ್ಳಬೇಕು. ಇದರಿಂದಾಗಿ ಕಾರ್ಯಕ್ರಮವನ್ನು ಗೌರವಾನ್ವಿತ ರೀತಿಯಲ್ಲಿ ಆರಂಭಿಸಲು ಸಾಧ್ಯವಾಗುತ್ತದೆ. ಕಾರ್ಯಕ್ರಮವು ಶುಕ್ರವಾರದಂದು ಸಂಜೆ 5:15ಕ್ಕೆ ಮತ್ತು ಶನಿವಾರದಂದು ಸಂಜೆ 5:05ಕ್ಕೆ ಹಾಗೂ ಭಾನುವಾರದಂದು ಸಂಜೆ 4:10ಕ್ಕೆ ಕೊನೆಗೊಳ್ಳುವುದು.
◼ ಪಾರ್ಕಿಂಗ್: ಪಾರ್ಕಿಂಗ್ ಸೌಕರ್ಯಗಳನ್ನು ಪಡೆದಿರುವಂಥ ಎಲ್ಲ ಅಧಿವೇಶನ ಸ್ಥಳಗಳಲ್ಲಿ ವಾಹನಗಳು ಬಂದ ಕ್ರಮಕ್ಕನುಸಾರವಾಗಿ ಪಾರ್ಕಿಂಗ್ ಸ್ಥಳವನ್ನು ನೀಡಲಾಗುವುದು. ಅಧಿವೇಶನದ ಬ್ಯಾಡ್ಜ್ ಕಾರ್ಡ್ ನಿಮ್ಮಲ್ಲಿದ್ದರೆ ಮಾತ್ರ ಪಾರ್ಕಿಂಗ್ ಮಾಡಲು ನಿಮಗೆ ಅನುಮತಿ ದೊರೆಯುವುದು. ಪಾರ್ಕಿಂಗ್ ಸ್ಥಳವು ಸಾಮಾನ್ಯವಾಗಿ ಕೊಂಚವೇ ಇರುವ ಕಾರಣ, ಒಂದು ಕಾರಿನಲ್ಲಿ ಒಬ್ಬರು ಅಥವಾ ಇಬ್ಬರು ಬರುವ ಬದಲು ಆದಷ್ಟು ಮಟ್ಟಿಗೆ ಅನೇಕರು ಒಟ್ಟಾಗಿ ಬರಲು ಪ್ರಯತ್ನಿಸಬೇಕು.
◼ ಆಸನಗಳನ್ನು ಕಾದಿರಿಸುವುದು: ನಿಮ್ಮೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿರುವವರಿಗೆ ಮಾತ್ರ ಆಸನಗಳನ್ನು ಕಾದಿರಿಸಬಹುದು.
◼ ಮಧ್ಯಾಹ್ನದ ಊಟ: ಮಧ್ಯಾಹ್ನದ ವಿರಾಮ ಸಮಯದಲ್ಲಿ ಊಟಮಾಡಲು ಅಧಿವೇಶನ ಸ್ಥಳದಿಂದ ಹೊರಗೆ ಹೋಗುವ ಬದಲಿಗೆ, ಸರಳವಾದ ಊಟವನ್ನು ನಿಮ್ಮೊಂದಿಗೆ ತನ್ನಿರಿ. ಚಿಕ್ಕದಾಗಿರುವ ಚೀಲ ಮತ್ತು ಟಿಫಿನ್ ಕ್ಯಾರಿಯರ್ಗಳನ್ನು ಆಸನದ ಕೆಳಗೆ ಇಡಬಹುದು. ನಡುದಾರಿಯಲ್ಲಿ ಹೋಗಿಬರಲು ಜನರಿಗೆ ಅಡ್ಡಿಯನ್ನು ಉಂಟುಮಾಡಬಹುದಾದ ದೊಡ್ಡ ವಸ್ತುಗಳನ್ನು ಕ್ಲೋಕ್ ರೂಮಿನಲ್ಲಿ ಇಡಬೇಕು.
◼ ದಾನಗಳು: ಒಂದು ಜಿಲ್ಲಾ ಅಧಿವೇಶನವನ್ನು ಏರ್ಪಡಿಸಲು ಬಹಳಷ್ಟು ಖರ್ಚುವೆಚ್ಚವಾಗುತ್ತದೆ. ಲೋಕವ್ಯಾಪಕವಾಗಿ ನಡೆಯುವ ನಮ್ಮ ಕೆಲಸಕ್ಕಾಗಿ ರಾಜ್ಯ ಸಭಾಗೃಹದಲ್ಲಿ ಅಥವಾ ಅಧಿವೇಶನದಲ್ಲಿ ಸ್ವಯಂ ಪ್ರೇರಿತ ದಾನಗಳನ್ನು ನೀಡುವ ಮೂಲಕ ನಾವು ನಮ್ಮ ಗಣ್ಯತೆಯನ್ನು ವ್ಯಕ್ತಪಡಿಸಬಲ್ಲೆವು. ನೀವು ಅಧಿವೇಶನದಲ್ಲಿ ಹಾಕುವ ಯಾವುದೇ ಚೆಕ್ಗಳನ್ನು “ವಾಚ್ ಟವರ್”ಗೆ ಸಂದಾಯವಾಗಬೇಕೆಂದು ಗುರುತಿಸಬೇಕು.
◼ ಅಪಘಾತಗಳು ಮತ್ತು ತುರ್ತುಪರಿಸ್ಥಿತಿಗಳು: ಅಧಿವೇಶನದ ಸ್ಥಳದಲ್ಲಿ ಯಾವುದೇ ವೈದ್ಯಕೀಯ ತುರ್ತುಪರಿಸ್ಥಿತಿ ಏಳುವಾಗ, ಹತ್ತಿರದಲ್ಲಿರುವ ಅಟೆಂಡೆಂಟ್ರನ್ನು ಸಂಪರ್ಕಿಸಿ. ಅವರು ಪ್ರಥಮ ಚಿಕಿತ್ಸೆ ಇಲಾಖೆಗೆ ತಿಳಿಸುವರು ಮತ್ತು ಪ್ರಥಮ ಚಿಕಿತ್ಸೆಯಲ್ಲಿ ತರಬೇತಿಹೊಂದಿರುವ ವ್ಯಕ್ತಿಗಳು ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ನಿಮಗೆ ಬೇಕಾಗಿರುವ ಸಹಾಯವನ್ನು ನೀಡುವರು.
◼ ಕಿವಿ ಕೇಳಿಸದವರಿಗೆ: ಸನ್ನೆ ಭಾಷೆಯ ಸೆಷನ್ಗಳನ್ನು ಸಿಕಂದ್ರಬಾದ್ ಇಂಗ್ಲಿಷ್ ಅಧಿವೇಶನದಲ್ಲಿ ಏರ್ಪಡಿಸಲಾಗಿದೆ.
◼ ರೆಕಾರ್ಡಿಂಗ್: ಯಾವುದೇ ರೀತಿಯ ರೆಕಾರ್ಡಿಂಗ್ ಉಪಕರಣಗಳನ್ನು ಅಧಿವೇಶನ ಸೌಕರ್ಯದ ವಿದ್ಯುತ್ ಅಥವಾ ಧ್ವನಿವರ್ಧಕ ವ್ಯವಸ್ಥೆಗಳಿಗೆ ಜೋಡಿಸಬಾರದು ಮತ್ತು ಇಂತಹ ಉಪಕರಣಗಳನ್ನು ಇತರರಿಗೆ ಅಡ್ಡಿಯನ್ನುಂಟುಮಾಡದ ರೀತಿಯಲ್ಲಿ ಮಾತ್ರ ಉಪಯೋಗಿಸಬೇಕು.
◼ ಫೋಟೋ ತೆಗೆಯುವುದು: ನೀವು ಫೋಟೋಗಳನ್ನು ತೆಗೆಯುವುದಾದರೆ, ದಯವಿಟ್ಟು ಕಾರ್ಯಕ್ರಮದ ಸಮಯದಲ್ಲಿ ಫ್ಲ್ಯಾಷ್ ಉಪಯೋಗಿಸಬೇಡಿ.
◼ ಪೇಜರ್ಗಳು ಮತ್ತು ಸೆಲ್ ಫೋನ್ಗಳು: ಇದರಿಂದ ತೊಂದರೆಯಾಗದಂತೆ ಸೈಲೆಂಟ್ ಮೋಡ್ನಲ್ಲಿಡಬೇಕು.
◼ ಸುಗಂಧ ದ್ರವ್ಯಗಳು: ಇತ್ತೀಚಿಗೆ ಕೆಲವು ಅಧಿವೇಶನಗಳು ಕೃತಕ ಅಥವಾ ಯಾಂತ್ರಿಕ ವಾಯುಸಂಚಾರವಿರುವ ಸಭಾಂಗಣಗಳಲ್ಲಿ ನಡೆಸಲ್ಪಡುತ್ತವೆ. ಪರಿಮಳ ಅಥವಾ ಸೆಂಟನ್ನು ಉಪಯೋಗಿಸುವುದರಿಂದ ಉಸಿರಾಟದ ಅಥವಾ ಅದಕ್ಕೆ ಸಂಬಂಧಿಸಿದ ತೊಂದರೆಗಳಿಂದ ಬಳಲುತ್ತಿರುವವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗಬಹುದು. ಆದಕಾರಣ ಈ ರೀತಿಯ ದ್ರವ್ಯಗಳನ್ನು ಉಪಯೋಗಿಸುವುದನ್ನು ಮಿತಗೊಳಿಸುವುದು ಅಂಥವರ ಕಡೆಗೆ ನಾವು ತೋರಿಸುವ ದಯಾಪರ ಕೃತ್ಯವಾಗಿರಬಲ್ಲದು.—1 ಕೊರಿಂ. 10:24.
◼ ಪ್ಲೀಸ್ ಫಾಲೋ ಅಪ್ ಫಾರ್ಮ್ಗಳು: ಅಧಿವೇಶನದ ಸಮಯಾವಧಿಯಲ್ಲಿ ನಾವು ಅನೌಪಚಾರಿಕ ಸಾಕ್ಷಿ ನೀಡಿದ್ದರಿಂದ ಆಸಕ್ತಿ ತೋರಿಸಿದ ವ್ಯಕ್ತಿಗಳ ಕುರಿತು ಮಾಹಿತಿಯನ್ನು ಒದಗಿಸಲು ಪ್ಲೀಸ್ ಫಾಲೋ ಅಪ್ (S-43) ಫಾರ್ಮನ್ನು ಉಪಯೋಗಿಸಬೇಕು. ಅಧಿವೇಶನಕ್ಕೆ ಬರುವಾಗ ಪ್ರಚಾರಕರು ಒಂದು ಅಥವಾ ಎರಡು ಫಾರ್ಮ್ಗಳನ್ನು ತಮ್ಮೊಂದಿಗೆ ತರತಕ್ಕದ್ದು. ಈ ಫಾರ್ಮ್ಗಳು ಅಧಿವೇಶನದ ಬುಕ್ ರೂಮ್ನಲ್ಲಿಯೂ ಲಭ್ಯವಿರುತ್ತವೆ. ಭರ್ತಿಮಾಡಿದ ಫಾರ್ಮ್ಗಳನ್ನು ಅಧಿವೇಶನದ ಬುಕ್ ರೂಮ್ಗೆ ಅಥವಾ ನೀವು ಹಿಂದಿರುಗಿದ ಬಳಿಕ ನಿಮ್ಮ ಸಭೆಯ ಕಾರ್ಯದರ್ಶಿಗೆ ಕೊಡತಕ್ಕದ್ದು.—ಫೆಬ್ರವರಿ 2005ರ ನಮ್ಮ ರಾಜ್ಯದ ಸೇವೆಯ ಪುಟ 6ನ್ನು ನೋಡಿರಿ.
◼ ರೆಸ್ಟರಾಂಟ್ಗಳು: ಅನೇಕ ಸ್ಥಳಗಳಲ್ಲಿ, ತಮಗೆ ನೀಡಲ್ಪಟ್ಟ ಸೇವೆಗೆ ಹೊಂದಿಕೆಯಲ್ಲಿ ಟಿಪ್ಸ್ ನೀಡುವುದು ಸರ್ವಸಾಮಾನ್ಯವಾಗಿದೆ.
◼ ಹೋಟೆಲ್: (1) ಅಗತ್ಯವಿರುವುದಕ್ಕಿಂತ ಹೆಚ್ಚು ರೂಮ್ಗಳನ್ನು ಕಾದಿರಿಸಬೇಡಿರಿ ಮತ್ತು ಅನುಮತಿಸಲ್ಪಟ್ಟಿರುವದಕ್ಕಿಂತ ಹೆಚ್ಚು ಮಂದಿಯನ್ನು ರೂಮಿನಲ್ಲಿ ಇರಗೊಡಿಸಬೇಡಿರಿ. (2) ನಿಮ್ಮ ರಿಸರ್ವೇಷನ್ ಅನ್ನು ರದ್ದುಗೊಳಿಸಲೇಬೇಕಾದ ಪರಿಸ್ಥಿತಿ ಏಳುವಲ್ಲಿ, ಕೂಡಲೆ ಅದನ್ನು ಹೋಟೆಲ್ನವರಿಗೆ ತಿಳಿಯಪಡಿಸಿರಿ. (3) ಸಾಮಾನುಗಳನ್ನು ತಳ್ಳಿಕೊಂಡು ಹೋಗುವ ಗಾಡಿಯನ್ನು ನೀವು ಎಲ್ಲ ಸಾಮಾನನ್ನು ಸಿದ್ಧವಾಗಿಟ್ಟ ಬಳಿಕವೇ ತೆಗೆದುಕೊಳ್ಳಿ. (4) ರೂಮಿನಲ್ಲಿ ಅಡಿಗೆಮಾಡಲು ಅನುಮತಿಯಿಲ್ಲದಿದ್ದರೆ ಅಡಿಗೆಮಾಡಬೇಡಿರಿ. (5) ಪ್ರತಿದಿನ ನಿಮ್ಮ ಕೋಣೆಯನ್ನು ಶುದ್ಧಮಾಡುವವನಿಗೆ ಟಿಪ್ಸ್ ಇಟ್ಟುಹೋಗಿರಿ. (6) ಹೋಟೆಲಿನ ಅತಿಥಿಗಳು ಹೋಟೆಲಿನಲ್ಲಿರುವಾಗ ಉಪಯೋಗಿಸಲು ಉಚಿತವಾಗಿ ಒದಗಿಸಲ್ಪಡುವ ಉಪಹಾರ, ಕಾಫಿ ಅಥವಾ ಐಸ್ಕ್ಯೂಬ್ಗಳ ಒದಗಿಸುವಿಕೆಗಳನ್ನು ಕ್ರೈಸ್ತರಾದ ನಾವು ಖಂಡಿತವಾಗಿಯೂ ದುರುಪಯೋಗಿಸಬಾರದು. (7) ಹೋಟೆಲ್ ರೂಮ್ಗಳನ್ನು ಬಾಡಿಗೆಗೆ ತೆಗೆದುಕೊಳ್ಳುವ ಮತ್ತು ಖಾಲಿಮಾಡುವಂಥ ಕಾರ್ಯನಿರತ ಸಮಯಗಳಲ್ಲಿ ಹೋಟೆಲ್ ಸಿಬ್ಬಂದಿಯೊಂದಿಗೆ ವ್ಯವಹರಿಸುವಾಗ ದೇವರಾತ್ಮದ ಫಲವನ್ನು ಪ್ರದರ್ಶಿಸಿರಿ.