ಘನತೆ ತೋರಿಸುವ ಮೂಲಕ ಕ್ರಿಸ್ತನನ್ನು ಅನುಸರಿಸಿರಿ
1. ಈ ವರ್ಷದ ಅಧಿವೇಶನದ ಮುಖ್ಯವಿಷಯವು ಘನತೆ ತೋರಿಸುವ ವಿಷಯಕ್ಕೆ ಹೇಗೆ ಸಂಬಂಧಿಸಿದೆ?
1 ವಿಶ್ವ ಪರಮಾಧಿಕಾರಿಯಾದ ಯೆಹೋವನು ಪ್ರಭಾವಮಾನ ಘನತೆಗಳಿಂದ ಭೂಷಿತನಾಗಿದ್ದಾನೆಂದು ಬೈಬಲ್ ತಿಳಿಸುತ್ತದೆ. (ಕೀರ್ತ. 104:1) ಯೇಸುವಿನ ಮಾತುಗಳು ಮತ್ತು ಕ್ರಿಯೆಗಳು ಯಾವಾಗಲೂ ತನ್ನ ತಂದೆಯನ್ನು ಹಾಗೂ ಆತನ ಏರ್ಪಾಡುಗಳನ್ನು ಮಹಿಮೆಪಡಿಸುವ ರೀತಿಯಲ್ಲಿತ್ತು. (ಯೋಹಾ. 17:4) “ಕ್ರಿಸ್ತನನ್ನು ಅನುಸರಿಸೋಣ!” ಎಂಬ ಮುಂಬರಲಿರುವ ಜಿಲ್ಲಾ ಅಧಿವೇಶನಗಳಲ್ಲಿ ಯೇಸುವನ್ನು ಅನುಸರಿಸುತ್ತಾ ಯೆಹೋವನನ್ನು ಘನಪಡಿಸಲು ನಮಗೆಲ್ಲರಿಗೂ ಸದವಕಾಶಗಳಿವೆ.
2. ನಾವು ಪ್ರತಿಯೊಂದು ಸೆಷನ್ಗೂ ಉಪಸ್ಥಿತರಾಗಲಿಕ್ಕಾಗಿ ತಯಾರಿ ಮಾಡುವುದು ಹೇಗೆ ಯೆಹೋವನನ್ನು ಘನಪಡಿಸುತ್ತದೆ?
2 ಘನತೆಯುಳ್ಳ ಆರಾಧನೆ: ಯೆಹೋವನು ನಮಗಾಗಿ ತಯಾರಿಸಿರುವ ಆಧ್ಯಾತ್ಮಿಕ ಔತಣಕ್ಕಾಗಿ ಕೂಡಿಬರಲು ಆವಶ್ಯಕವಾದ ಏರ್ಪಾಡನ್ನು ಮಾಡುವ ಮೂಲಕ ನಾವು ಆತನನ್ನು ಘನಪಡಿಸಬಲ್ಲೆವು. ಶುಕ್ರವಾರವನ್ನೂ ಸೇರಿಸಿ ಅಧಿವೇಶನದ ಪ್ರತಿಯೊಂದು ದಿನ ಹಾಜರಾಗಲು ರಜೆಗಾಗಿ ನಿಮ್ಮ ಮಾಲೀಕನೊಡನೆ ಮಾತಾಡಿದ್ದೀರೋ ಮತ್ತು ನಿಮ್ಮ ಕೆಲಸಕಾರ್ಯಗಳನ್ನು ಏರ್ಪಡಿಸಿಕೊಂಡಿದ್ದೀರೋ? ಸಾಕಷ್ಟು ಮುಂಚಿತವಾಗಿಯೇ ಬಂದು ಆಸನಗಳನ್ನು ಕಂಡುಕೊಳ್ಳಲು ಮತ್ತು ಆರಂಭದ ಗೀತೆ ಹಾಗೂ ಪ್ರಾರ್ಥನೆಯಲ್ಲಿ ಭಾಗಿಗಳಾಗಲು ಯೋಜಿಸಿದ್ದೀರೋ? ನಿಮ್ಮ ಸಹೋದರರೊಂದಿಗೆ ಕೂಡಿ ಅಧಿವೇಶನದ ಸ್ಥಳದಲ್ಲಿಯೇ ಮಧ್ಯಾಹ್ನದ ಊಟಗಳನ್ನು ಮಾಡಲು ಯೋಜಿಸಿದ್ದೀರೋ? ಪ್ರತಿ ಸೆಷನ್ನ ಆರಂಭದಲ್ಲಿ ಸಂಗೀತವು ಪ್ರಾರಂಭವಾಗುವ ಮುಂಚೆ ನಾವು ಆಸನಗಳಲ್ಲಿ ಕುಳಿತುಕೊಳ್ಳುವಂತೆ ಅಧ್ಯಕ್ಷನು ವಿನಂತಿಸಿದ ಕೂಡಲೇ ನಾವು ನಮ್ಮ ಸಂಭಾಷಣೆಗಳನ್ನು ನಿಲ್ಲಿಸಿ ಕಾರ್ಯಕ್ರಮಕ್ಕಾಗಿ ಎದುರುನೋಡುತ್ತಾ ಕುಳಿತುಕೊಳ್ಳಬೇಕು.
3. ಕಾರ್ಯಕ್ರಮಕ್ಕೆ ನಿಕಟ ಗಮನ ಕೊಡುವುದು ನಮ್ಮ ಆರಾಧನೆಯನ್ನು ಹೇಗೆ ಘನಪಡಿಸುತ್ತದೆ?
3 ಕಾರ್ಯಕ್ರಮಗಳಿಗೆ ನಿಕಟ ಗಮನವನ್ನು ಕೊಡುವುದು ಕೂಡ ನಮ್ಮ ಸ್ವರ್ಗೀಯ ತಂದೆಯನ್ನು ಘನಪಡಿಸುತ್ತದೆ. ಸ್ಥಳೀಯ ಜಿಲ್ಲಾ ಅಧಿವೇಶನವನ್ನು ಗಮನಿಸಿದ ಒಬ್ಬ ವರದಿಗಾರನು ತಿಳಿಸಿದ್ದೇನೆಂದರೆ, “ಹಾಜರಾದವರು ಗೌರವದಿಂದ ಮೌನವಾಗಿ ಕಿವಿಗೊಡುತ್ತಿರುವ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ನಿರತರಾಗಿರುವ ಆದರ್ಶ ನಡವಳಿಕೆಯು” ನೋಡುವವರ ಮೇಲೆ ಗಾಢ ಪರಿಣಾಮವನ್ನು ಬೀರುವವು. ಅವನು ಮತ್ತೂ ಹೇಳಿದ್ದು: “ಹೆಚ್ಚಿನ ಮಕ್ಕಳು . . . ಅಸಾಮಾನ್ಯ ಸದ್ವರ್ತನೆಯನ್ನು ತೋರಿಸುತ್ತಾ ಪವಿತ್ರ ಬೈಬಲಿನ ವಚನಗಳನ್ನು ತೆರೆದು ನೋಡುವುದರಲ್ಲಿ ತಲ್ಲೀನರೂ ಆಗಿದ್ದರು.” ಸೆಷನಿನ ಕಾರ್ಯಕ್ರಮವು ಅನಾವಶ್ಯಕ ಮಾತುಕತೆ, ಮೊಬೈಲ್ನಲ್ಲಿ ಸಂದೇಶ ಕಳುಹಿಸುವುದು, ತಿನ್ನುವುದು ಅಥವಾ ಕಾರಿಡಾರ್ನಲ್ಲಿ ತಿರುಗಾಡುವುದು ಮುಂತಾದ ವಿಷಯಗಳಿಗಾಗಿರುವ ಸಮಯವಲ್ಲ. ಹದಿಹರೆಯದವರು ತಮ್ಮ ಹೆತ್ತವರೊಂದಿಗೆ ಕುಳಿತುಕೊಳ್ಳಬೇಕು. ಆಗ ಕಾರ್ಯಕ್ರಮದಿಂದ ಪ್ರಯೋಜನ ಪಡೆದುಕೊಳ್ಳುವಂತೆ ಹೆತ್ತವರು ಅವರಿಗೆ ಸಹಾಯ ನೀಡಬಲ್ಲರು. (ಧರ್ಮೋ. 31:12; ಜ್ಞಾನೋ. 29:15) ಈ ಎಲ್ಲ ಪ್ರಯತ್ನಗಳು ಇತರರಿಗೆ ಗೌರವವನ್ನೂ ಬಡಿಸಲ್ಪಡುವ ಅಮೂಲ್ಯವಾದ ಆಧ್ಯಾತ್ಮಿಕ ಆಹಾರಕ್ಕಾಗಿ ಗಣ್ಯತೆಯನ್ನೂ ತೋರಿಸುತ್ತವೆ.
4. ಅಧಿವೇಶನದಲ್ಲಿ ನಮ್ಮ ತೋರಿಕೆಯು ಘನತೆಯುಳ್ಳದ್ದಾಗಿರಬೇಕು ಏಕೆ?
4 ಘನತೆಯುಳ್ಳ ತೋರಿಕೆ: ಕಳೆದ ವರ್ಷದ ಜಿಲ್ಲಾ ಅಧಿವೇಶನದಲ್ಲಿ ಕೊಡಲ್ಪಟ್ಟ “ಎಲ್ಲ ಸಮಯಗಳಲ್ಲಿಯೂ ಕ್ರೈಸ್ತ ಘನತೆಯನ್ನು ತೋರಿಸಿರಿ” ಎಂಬ ಭಾಷಣದಲ್ಲಿ ನೀಡಲಾದ ಮರುಜ್ಞಾಪನವನ್ನು ಅನೇಕರು ಮಾನ್ಯಮಾಡಿದರು. ದೇವರ ಸೇವಕರು ತಮ್ಮ ಉಡುಪು ಹಾಗೂ ಕೇಶಾಲಂಕಾರದಲ್ಲಿ ಕ್ರೈಸ್ತ ಘನತೆಯನ್ನು ತೋರಿಸಬೇಕು ಎಂಬುದನ್ನು ಆ ಭಾಷಣವು ಒತ್ತಿ ಹೇಳಿತು. ಈ ವರ್ಷವೂ ನಾವು ಈ ವಿಷಯಕ್ಕೆ ಗಂಭೀರ ಗಮನ ಕೊಡಬೇಕು. ನಮ್ಮ ತೋರಿಕೆಯು ಯೆಹೋವನೆಡೆಗೆ ಮತ್ತು ಆತನ ಸಾಕ್ಷಿಗಳಾಗಿರುವ ಸುಯೋಗದೆಡೆಗೆ ನಮ್ಮ ಅನಿಸಿಕೆ ಏನೆಂಬುದನ್ನು ವ್ಯಕ್ತಪಡಿಸುತ್ತದೆ. ಆದುದರಿಂದ ‘ದೇವಭಕ್ತರಿಗೆ ಯುಕ್ತವಾಗಿರುವ’ ಉಡುಪುಗಳನ್ನೇ ನಾವು ಯಾವಾಗಲೂ ಧರಿಸಬೇಕು.—1 ತಿಮೊ. 2:9, 10.
5. ಅಧಿವೇಶನದ ನಗರದಲ್ಲಿ ನಮ್ಮ ವಿರಾಮದ ವೇಳೆ ನಾವು ಘನತೆಯುಳ್ಳ ತೋರಿಕೆಯನ್ನು ಹೇಗೆ ಕಾಪಾಡಿಕೊಳ್ಳಬಲ್ಲೆವು?
5 ಕಾರ್ಯಕ್ರಮಕ್ಕೆ ಹಾಜರಾಗುವಾಗ ಮಾತ್ರವೇ ನಾವು ಘನತೆಯುಳ್ಳ ತೋರಿಕೆಯನ್ನು ಹೊಂದಿರಬೇಕೋ? ಅಧಿವೇಶನದ ನಗರದಲ್ಲಿರುವಾಗ ನಾವು ಅಧಿವೇಶನದ ಬ್ಯಾಡ್ಜ್ ಧರಿಸಿರುವುದನ್ನು ಅನೇಕರು ಗಮನಿಸುವರು ಎಂಬುದನ್ನು ನೆನಪಿನಲ್ಲಿಡಿರಿ. ನಮ್ಮ ತೋರಿಕೆಯು ಜನಸಾಮಾನ್ಯರಿಂದ ನಮ್ಮನ್ನು ಪ್ರತ್ಯೇಕಿಸುವಂತಿರಬೇಕು. ಆದುದರಿಂದ, ಕಾರ್ಯಕ್ರಮದ ಅನಂತರ ವಿರಾಮದ ಸಮಯದಲ್ಲಿ ಅಂದರೆ ಊಟಕ್ಕಾಗಿ ಹೊರಗೆ ಹೋಗುವುದೇ ಮುಂತಾದ ಸಂದರ್ಭಗಳಲ್ಲೂ ನಾವು ಯೋಗ್ಯ ಉಡುಪನ್ನು ಧರಿಸಬೇಕು. ಕ್ರೈಸ್ತ ಅಧಿವೇಶನಕ್ಕೆ ಹಾಜರಾಗುವ ಉದ್ದೇಶದಿಂದ ಆ ನಗರಕ್ಕೆ ಬಂದಿರುವ ಶುಶ್ರೂಷಕರಿಗೆ ಇದು ಒಪ್ಪುವಂಥದ್ದಾಗಿರಬೇಕು. ಜೀನ್ಸ್, ಶಾರ್ಟ್ಸ್ ಅಥವಾ ಟಿ-ಶರ್ಟ್ಗಳು ಮುಂತಾದವುಗಳನ್ನು ಧರಿಸಬಾರದು. ಇದು ಸಮಾಜಕ್ಕೆ ಎಷ್ಟೊಂದು ಉತ್ತಮ ಸಾಕ್ಷಿಯಾಗಿರುವುದು! ಶುಶ್ರೂಷಕರಾಗಿರುವ ನಮ್ಮ ಪಾತ್ರವನ್ನು ನಮ್ಮ ತೋರಿಕೆಯು ಪ್ರತಿಬಿಂಬಿಸುವಾಗ ಯೆಹೋವನು ಪ್ರಸನ್ನನಾಗುತ್ತಾನೆ.
6. ಕ್ರೈಸ್ತ ಘನತೆಯನ್ನು ತೋರಿಸುವುದರ ಸಕಾರಾತ್ಮಕ ಫಲಿತಾಂಶಗಳು ಯಾವುವು?
6 ತೃಪ್ತಿದಾಯಕ ಫಲಿತಾಂಶಗಳು: ನಮ್ಮ ಅಧಿವೇಶನಗಳಲ್ಲಿ ಕ್ರೈಸ್ತ ಘನತೆಯನ್ನು ತೋರಿಸುವುದು ಅನೌಪಚಾರಿಕ ಸಾಕ್ಷಿ ಕೊಡುವ ಸದವಕಾಶವನ್ನು ಕಲ್ಪಿಸುತ್ತದೆ ಹಾಗೂ ನಮ್ಮನ್ನು ಗಮನಿಸುವ ಜನರಿಗೆ ನಮ್ಮ ಮೇಲೆ ಸದಭಿಪ್ರಾಯವನ್ನು ಮೂಡಿಸುತ್ತದೆ. ಒಂದು ಅಧಿವೇಶನದ ಕೊನೆಯಲ್ಲಿ ಒಬ್ಬ ಅಧಿಕಾರಿಯು ಹೇಳಿದ್ದು: “ಇಂಥ ಸಭ್ಯ ನಡತೆಯುಳ್ಳ ಜನರನ್ನು ನಾನು ಎಂದೂ ನೋಡಿಲ್ಲ. ನಿಮ್ಮಂತೆಯೇ ನಾವೂ ಇರುವಂತೆ ದೇವರು ಅಪೇಕ್ಷಿಸುತ್ತಾನೆ.” ಘನತೆ ತೋರಿಸುವ ಮೂಲಕ ನಾವು ಒಬ್ಬರಿಗೊಬ್ಬರು ಪ್ರೀತಿ ಗೌರವವನ್ನು ತೋರಿಸುತ್ತೇವೆ ಮತ್ತು ಯೆಹೋವನನ್ನು ಮಹಿಮೆಪಡಿಸುತ್ತೇವೆ. (1 ಪೇತ್ರ 2:12) ನಮಗೆ ದೇವಭಯವಿದೆ ಹಾಗೂ ನಮ್ಮ ಸ್ವರ್ಗೀಯ ತಂದೆಯಿಂದ ಬೋಧಿಸಲ್ಪಡುವ ಸುಯೋಗವನ್ನು ನಾವು ಮಾನ್ಯಮಾಡುತ್ತೇವೆ ಎಂದು ಇದು ತೋರಿಸುತ್ತದೆ. (ಇಬ್ರಿ. 12:28) “ಕ್ರಿಸ್ತನನ್ನು ಅನುಸರಿಸೋಣ!” ಎಂಬ ಈ ವರ್ಷದ ಜಿಲ್ಲಾ ಅಧಿವೇಶನಕ್ಕಾಗಿ ಕಾತರದಿಂದ ಮುನ್ನೋಡುವಾಗ ನಾವು ಘನತೆಯನ್ನು ತೋರಿಸಲಿಕ್ಕಾಗಿ ಸರ್ವಪ್ರಯತ್ನವನ್ನು ಮಾಡೋಣ.
[ಪುಟ 5ರಲ್ಲಿರುವಚೌಕ]
ಜಿಲ್ಲಾ ಅಧಿವೇಶನ ಮರುಜ್ಞಾಪನಗಳು
◼ ಕಾರ್ಯಕ್ರಮದ ಸಮಯಗಳು: ಮೂರು ದಿನಗಳಲ್ಲಿಯೂ ಕಾರ್ಯಕ್ರಮವು ಬೆಳ್ಳಿಗೆ 9:20ಕ್ಕೆ ಆರಂಭವಾಗುವುದು. ಸಭಾಂಗಣದ ಬಾಗಿಲುಗಳನ್ನು ಬೆಳಿಗ್ಗೆ 8:00 ಗಂಟೆಗೆ ತೆರೆಯಲಾಗುವುದು. ರಾಜ್ಯ ಸಂಗೀತವು ನುಡಿಸಲ್ಪಡುವಾಗ ನಾವೆಲ್ಲರೂ ನಮ್ಮ ಆಸನಗಳಲ್ಲಿ ಕುಳಿತುಕೊಳ್ಳಬೇಕು. ಇದರಿಂದಾಗಿ ಕಾರ್ಯಕ್ರಮವನ್ನು ಗೌರವಾನ್ವಿತ ರೀತಿಯಲ್ಲಿ ಆರಂಭಿಸಲು ಸಾಧ್ಯವಾಗುತ್ತದೆ. ಕಾರ್ಯಕ್ರಮವು ಶುಕ್ರವಾರ ಮತ್ತು ಶನಿವಾರದಂದು ಸಂಜೆ 5:05ಕ್ಕೆ ಹಾಗೂ ಭಾನುವಾರದಂದು ಸಂಜೆ 4:10ಕ್ಕೆ ಕೊನೆಗೊಳ್ಳುವುದು.
◼ ಪಾರ್ಕಿಂಗ್: ಪಾರ್ಕಿಂಗ್ ಸೌಕರ್ಯಗಳನ್ನು ಪಡೆದಿರುವಂಥ ಎಲ್ಲ ಅಧಿವೇಶನ ಸ್ಥಳಗಳಲ್ಲಿ ವಾಹನಗಳು ಬರುವ ಕ್ರಮಕ್ಕನುಸಾರ ಫ್ರೀ ಪಾರ್ಕಿಂಗ್ ನೀಡಲಾಗುವುದು. ಅಧಿವೇಶನದ ಬ್ಯಾಡ್ಜ್ ಕಾರ್ಡ್ ಪಾರ್ಕಿಂಗ್ಗಾಗಿರುವ ಐಡೆಂಟಿಫಿಕೇಷನ್ ಆಗಿದೆ. ಅಂಗವಿಕಲರಿಗೆ ಮೀಸಲಾಗಿರುವ ಪಾರ್ಕಿಂಗ್ ಸ್ಥಳದಲ್ಲಿ ಕೇವಲ ಅವರ ವಾಹನಗಳನ್ನು ಮಾತ್ರ ಪಾರ್ಕಿಂಗ್ ಮಾಡಲು ಅನುಮತಿಸಲಾಗುವುದು. ಸಾಮಾನ್ಯವಾಗಿ ಪಾರ್ಕಿಂಗ್ ಸ್ಥಳವು ಸೀಮಿತವಾಗಿರುವುದರಿಂದ ಕಾರಿನಲ್ಲಿ ಆದಷ್ಟು ಹೆಚ್ಚು ಮಂದಿ ಒಟ್ಟಾಗಿ ಸೇರಿ ಬರಲು ಪ್ರಯತ್ನಿಸಬೇಕು.
◼ ಆಸನಗಳನ್ನು ಕಾದಿರಿಸುವುದು: ಕಾರ್ನಲ್ಲಿ ನಿಮ್ಮೊಂದಿಗೆ ಪ್ರಯಾಣಿಸುತ್ತಿರುವವರಿಗೆ ಅಥವಾ ನಿಮ್ಮ ಮನೆಯಲ್ಲಿ ವಾಸಿಸುತ್ತಿರುವವರಿಗೆ ಮಾತ್ರ ಆಸನಗಳನ್ನು ಕಾದಿರಿಸಬಹುದು.
◼ ಮಧ್ಯಾಹ್ನದ ಊಟ: ಮಧ್ಯಾಹ್ನದ ವಿರಾಮದಲ್ಲಿ ಊಟಮಾಡಲು ಅಧಿವೇಶನ ಸ್ಥಳದಿಂದ ಹೊರಗೆ ಹೋಗುವ ಬದಲಿಗೆ ಲಘು ಊಟವನ್ನು ತನ್ನಿರಿ. ನಿಮ್ಮ ಸೀಟಿನ ಕೆಳಗೆ ಇಡಬಹುದಾದ ಚಿಕ್ಕ ಟಿಫಿನ್ ಕ್ಯಾರಿಯರ್ಗಳನ್ನು ಬಳಸುವುದು ಉಚಿತ. ದೊಡ್ಡ ದೊಡ್ಡ ಟಿಫಿನ್ಗಳು, ಗಾಜಿನ ಪಾತ್ರೆಗಳು ಮತ್ತು ಮದ್ಯಪಾನೀಯಗಳಿಗೆ ಅಧಿವೇಶನ ಸೌಕರ್ಯದಲ್ಲಿ ಅನುಮತಿಯಿಲ್ಲ.
◼ ದಾನಗಳು: ಒಂದು ಜಿಲ್ಲಾ ಅಧಿವೇಶನವನ್ನು ಏರ್ಪಡಿಸಲು ಬಹಳಷ್ಟು ಖರ್ಚಿದೆ. ನಮ್ಮ ಲೋಕವ್ಯಾಪಕ ಕಾರ್ಯಕ್ಕಾಗಿ ರಾಜ್ಯ ಸಭಾಗೃಹದಲ್ಲಿ ಅಥವಾ ಅಧಿವೇಶನದಲ್ಲಿ ಸ್ವಯಂ ಪ್ರೇರಿತ ದಾನಗಳನ್ನು ನೀಡುವ ಮೂಲಕ ನಾವು ನಮ್ಮ ಗಣ್ಯತೆ ತೋರಿಸಬಲ್ಲೆವು. ನೀವು ಅಧಿವೇಶನದಲ್ಲಿ ಕಾಣಿಕೆಯಾಗಿ ಹಾಕುವ ಯಾವುದೇ ಚೆಕ್ಗಳನ್ನು “ವಾಚ್ ಟವರ್”ಗೆ ಸಂದಾಯವಾಗಬೇಕೆಂದು ಗುರುತಿಸಬೇಕು.
◼ ಅಪಘಾತಗಳು ಮತ್ತು ತುರ್ತುಪರಿಸ್ಥಿತಿಗಳು: ತುರ್ತು-ಪ್ರತಿಕ್ರಿಯೆಯ ಸೇವೆಯವರು ಚಿಕ್ಕ ಪುಟ್ಟ ವಿಷಯಕ್ಕೆಲ್ಲಾ ತಮಗೆ ಅನೇಕಾನೇಕ ಮೊಬೈಲ್ ಕರೆಗಳು ಬರುತ್ತಿವೆಯೆಂದು ಹೇಳಿದ್ದಾರೆ. ಆದುದರಿಂದ, ಅಧಿವೇಶನದ ಸ್ಥಳದಲ್ಲಿ ಯಾವುದೇ ವೈದ್ಯಕೀಯ ತುರ್ತುಪರಿಸ್ಥಿತಿ ಏಳುವಾಗ ಹತ್ತಿರದಲ್ಲಿರುವ ಅಟೆಂಡೆಂಟ್ನನ್ನು ಸಂಪರ್ಕಿಸಿರಿ. ಅವನು ಪ್ರಥಮ ಚಿಕಿತ್ಸೆ ಇಲಾಖೆಗೆ ತಿಳಿಸುವನು ಮತ್ತು ನುರಿತ ಪ್ರಥಮ ಚಿಕಿತ್ಸಕನು ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ಬೇಕಾದ ಸಹಾಯವನ್ನು ನೀಡುವನು. ಅಗತ್ಯವಿದ್ದಲ್ಲಿ ಅವನು 102 ನಂಬರಿಗೆ ಕರೆಮಾಡುವನು.
◼ ಕಿವಿ ಕೇಳಿಸದವರಿಗೆ: ಬೆಂಗಳೂರಿನ ಇಂಗ್ಲಿಷ್ ಅಧಿವೇಶನದಲ್ಲಿ ಮಾತ್ರ ಈ ಕಾರ್ಯಕ್ರಮವು ಅಮೆರಿಕನ್ ಸನ್ನೆ ಭಾಷೆಯಲ್ಲಿ ಪ್ರಸ್ತುತಪಡಿಸಲಾಗುತ್ತದೆ.
◼ ರೆಕಾರ್ಡಿಂಗ್: ಯಾವುದೇ ರೀತಿಯ ರೆಕಾರ್ಡಿಂಗ್ ಉಪಕರಣಗಳನ್ನು ಅಧಿವೇಶನ ಸೌಕರ್ಯದ ವಿದ್ಯುತ್ ಅಥವಾ ಧ್ವನಿವರ್ಧಕ ವ್ಯವಸ್ಥೆಗಳಿಗೆ ಜೋಡಿಸಬಾರದು ಮತ್ತು ಇವನ್ನು ಇತರರಿಗೆ ಅಡ್ಡಿಯನ್ನುಂಟುಮಾಡದ ರೀತಿಯಲ್ಲಿ ಮಾತ್ರವೇ ಉಪಯೋಗಿಸಬೇಕು.
◼ ಸುಗಂಧ ದ್ರವ್ಯಗಳು: ಹೆಚ್ಚಿನ ಅಧಿವೇಶನಗಳು ಯಾಂತ್ರಿಕ ವಾಯುಸಂಚಾರವಿರುವ ಸಭಾಂಗಣಗಳಲ್ಲಿ ನಡೆಸಲ್ಪಡುತ್ತವೆ. ಆದುದರಿಂದ ಉಸಿರಾಟ ಅಥವಾ ಅದಕ್ಕೆ ಸಂಬಂಧಿಸಿದ ತೊಂದರೆಗಳಿಂದ ಬಳಲುತ್ತಿರುವವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಾದ ವಿಪರೀತ ಸುವಾಸನೆಯ ಸೆಂಟ್ಗಳ ಬಳಕೆಯನ್ನು ಸೀಮಿತಗೊಳಿಸುವ ಮೂಲಕ ನಾವು ಅವರಿಗೆ ದಯೆ ತೋರಿಸಬಲ್ಲೆವು.—1 ಕೊರಿಂ. 10:24.
◼ ಫಾಲೋ-ಅಪ್ ಫಾರ್ಮ್ಸ್: ಅಧಿವೇಶನದ ಸಮಯದಲ್ಲಿ ಅನೌಪಚಾರಿಕ ಸಾಕ್ಷಿ ನೀಡಿದ ಪರಿಣಾಮವಾಗಿ ಕಂಡುಕೊಂಡ ಆಸಕ್ತ ವ್ಯಕ್ತಿಗಳ ಕುರಿತು ಮಾಹಿತಿಯನ್ನು ಒದಗಿಸಲು ಪ್ಲೀಸ್ ಫಾಲೋ ಅಪ್ (S-43) ಫಾರ್ಮ್ ಅನ್ನು ಉಪಯೋಗಿಸಬೇಕು. ಅಧಿವೇಶನಕ್ಕೆ ಬರುವಾಗ ಪ್ರಚಾರಕರು ಒಂದೆರಡು ಫಾರ್ಮ್ಗಳನ್ನು ತರತಕ್ಕದ್ದು. ಈ ಫಾರ್ಮ್ಗಳು ಅಧಿವೇಶನದ ಬುಕ್-ರೂಮ್ ಇಲಾಖೆಯಲ್ಲಿಯೂ ಲಭ್ಯವಿರುತ್ತವೆ. ಭರ್ತಿಮಾಡಿದ ಫಾರ್ಮ್ಗಳನ್ನು ಅಧಿವೇಶನದ ಬುಕ್ ರೂಮ್ಗೆ ಅಥವಾ ನೀವು ಹಿಂದಿರುಗಿದ ಬಳಿಕ ನಿಮ್ಮ ಸಭಾ ಸೆಕ್ರಿಟರಿಗೆ ಕೊಡತಕ್ಕದ್ದು.—ಫೆಬ್ರವರಿ 2005ರ ನಮ್ಮ ರಾಜ್ಯದ ಸೇವೆಯ ಪುಟ 6ನ್ನು ನೋಡಿರಿ.
◼ ರೆಸ್ಟಾರಂಟ್ಗಳು: ಅನೇಕ ಸ್ಥಳಗಳಲ್ಲಿ ತಮಗೆ ನೀಡಲ್ಪಡುವ ಸೇವೆಗನುಸಾರ 10-15% ಟಿಪ್ಸ್ ನೀಡುವುದು ರೂಢಿಯಾಗಿದೆ.
◼ ಹೋಟೆಲ್ಗಳು: (1) ದಯವಿಟ್ಟು ಅಗತ್ಯಕ್ಕಿಂತ ಹೆಚ್ಚು ರೂಮ್ಗಳನ್ನು ಕಾದಿರಿಸಬೇಡಿ ಮತ್ತು ಅನುಮತಿ ಇರುವುದಕ್ಕಿಂತ ಹೆಚ್ಚು ಮಂದಿಯನ್ನು ನಿಮ್ಮ ರೂಮಿನಲ್ಲಿ ಇರಗೊಡಿಸಬೇಡಿ. (2) ನಿಮ್ಮ ರಿಸರ್ವೇಷನ್ ಅನ್ನು ರದ್ದುಗೊಳಿಸಲೇಬೇಕಾದಲ್ಲಿ ಕೂಡಲೆ ಅದನ್ನು ಹೋಟೆಲ್ನವರಿಗೆ ತಿಳಿಸಿರಿ. (3) ನೀವು ಎಲ್ಲ ಸಾಮಾನನ್ನು ಸಿದ್ಧವಾಗಿಟ್ಟ ಬಳಿಕವೇ ತಳ್ಳುಗಾಡಿಯನ್ನು ತೆಗೆದುಕೊಳ್ಳಿ ಮತ್ತು ಇತರರು ಉಪಯೋಗಿಸಲಾಗುವಂತೆ ಅದನ್ನು ಆ ಕೂಡಲೆ ಹಿಂದಿರುಗಿಸಿ. (4) ಅಪ್ಪಣೆ ವಿನಃ ರೂಮಿನಲ್ಲಿ ಅಡಿಗೆ ಮಾಡಬಾರದು. (5) ನಿಮ್ಮ ಕೋಣೆ ಶುಚಿ ಮಾಡುವವನಿಗೆ ಪ್ರತಿದಿನ ಟಿಪ್ಸ್ ಇಟ್ಟುಹೋಗಿರಿ. (6) ಹೋಟೆಲಿನ ಅತಿಥಿಗಳಿಗಾಗಿ ಪುಕ್ಕಟೆಯಾಗಿ ಕೊಡುವ ಉಪಹಾರ, ಕಾಫಿ ಅಥವಾ ಐಸ್ಕ್ಯೂಬ್ಗಳನ್ನು ಕ್ರೈಸ್ತರಾದ ನಾವು ಖಂಡಿತ ದುರುಪಯೋಗಿಸಬಾರದು. (7) ಹೋಟೆಲ್ ಸಿಬ್ಬಂದಿಯೊಂದಿಗೆ ವ್ಯವಹರಿಸುವಾಗಲೆಲ್ಲಾ ದೇವರಾತ್ಮದ ಫಲಗಳನ್ನು ತೋರಿಸಿರಿ. (8) ಶಿಫಾರಸು ಮಾಡಲ್ಪಟ್ಟಿರುವ ಲಾಜಿಂಗ್ ಲಿಸ್ಟ್ನಲ್ಲಿರುವ ರೂಮ್ನ ದರಗಳು ದಿನವೊಂದಕ್ಕೆ ತೆರಬೇಕಾದ ಪೂರ್ಣ ಬೆಲೆಯಾಗಿದೆ. ಇದರಲ್ಲಿ ತೆರಿಗೆಯು ಸೇರಿಸಲ್ಪಟ್ಟಿಲ್ಲ. ನೀವು ವಿನಂತಿಸದ ಅಥವಾ ಬಳಸದ ಯಾವುದಕ್ಕಾದರೂ ಹೆಚ್ಚು ಹಣವನ್ನು ನಿಮ್ಮ ಬಿಲ್ಗೆ ಹಾಕಿದ್ದಲ್ಲಿ ಅದಕ್ಕೆ ಒಪ್ಪಬೇಡಿ ಮತ್ತು ಅದನ್ನು ಅಧಿವೇಶನದ ರೂಮಿಂಗ್ ಡಿಪಾರ್ಟ್ಮೆಂಟ್ಗೆ ಆದಷ್ಟು ಬೇಗ ತಿಳಿಸಿರಿ. (9) ಹೋಟೆಲ್ ರೂಮ್ನ ಸಂಬಂಧದಲ್ಲಿ ಯಾವುದೇ ಸಮಸ್ಯೆ ಏಳುವಲ್ಲಿ ಅಧಿವೇಶನದ ಸಮಯದಲ್ಲೇ ರೂಮಿಂಗ್ ಡಿಪಾರ್ಟ್ಮೆಂಟ್ಗೆ ತಪ್ಪದೇ ತಿಳಿಸಿರಿ.