ಆಧ್ಯಾತ್ಮಿಕ ಆಹಾರವನ್ನು ಉಂಡು ಉಲ್ಲಾಸಿಸುವ ಒಂದು ಸುಸಂದರ್ಭ
1. ಯೆಹೋವನು ತನ್ನ ಸೇವಕರ ಆಧ್ಯಾತ್ಮಿಕ ಅಗತ್ಯಗಳನ್ನು ಹೇಗೆ ಪರಾಮರಿಸುತ್ತಾನೆ?
1 ಯೆಹೋವನು ತನ್ನ ಸೇವಕರ ಆಧ್ಯಾತ್ಮಿಕ ಅಗತ್ಯಗಳನ್ನು ಪ್ರೀತಿಯಿಂದ ಪರಾಮರಿಸುತ್ತಾನೆ. ಭೂಮಿಯಲ್ಲಿರುವ ಅನೇಕ ಜನರು ಆಧ್ಯಾತ್ಮಿಕ ಹಸಿವಿನಿಂದ ಬಳಲುತ್ತಿರುವಾಗ, ನಮಗಾದರೋ ಆಧ್ಯಾತ್ಮಿಕ ಆಹಾರ ಹೇರಳವಾಗಿ ಲಭಿಸುತ್ತಿದೆ. (ಯೆಶಾ. 65:13) ಯೆಹೋವನು ನಮಗೆ ಆಧ್ಯಾತ್ಮಿಕ ಆಹಾರವನ್ನು ಹೇರಳವಾಗಿ ಬಡಿಸುವ ಒಂದು ವಿಧವು ನಮ್ಮ ವಾರ್ಷಿಕ ಜಿಲ್ಲಾ ಅಧಿವೇಶನಗಳ ಮೂಲಕವಾಗಿದೆ. ಮುಂಬರಲಿರುವ, “ಪವಿತ್ರಾತ್ಮದ ಮಾರ್ಗದರ್ಶನ” ಎಂಬ ಜಿಲ್ಲಾ ಅಧಿವೇಶನದ ಎಲ್ಲಾ ದಿನಗಳ ಕಾರ್ಯಕ್ರಮವನ್ನು ಹಾಜರಾಗಲು ನೀವು ಸಿದ್ಧತೆಗಳನ್ನು ಮಾಡುತ್ತಿದ್ದೀರೋ? ನಿಮಗಾಗಿ ಅಲ್ಲಿ ರುಚಿಕರವಾದ ಆಧ್ಯಾತ್ಮಿಕ ಪೌಷ್ಟಿಕ ಭೋಜನವನ್ನು ಏರ್ಪಡಿಸಲಾಗಿದೆ.
2. ಅಧಿವೇಶನಕ್ಕಾಗಿ ನಾವು ಯಾವ ಪೂರ್ವಸಿದ್ಧತೆಯನ್ನು ಮಾಡಬೇಕು?
2 ಮುಂಚೆಯೇ ಯೋಜಿಸಿ: “ಶ್ರದ್ಧೆಯುಳ್ಳವನ ಯೋಜನೆಗಳಿಂದ ಸಮೃದ್ಧಿ.” (ಜ್ಞಾನೋ. 21:5, NIBV) ಆದುದರಿಂದ, ಅಧಿವೇಶನದ ಮೂರು ದಿನಗಳನ್ನು ಹಾಜರಾಗಲು ನೀವು ಯೋಜಿಸುವಾಗ, ನಿಮಗೆ ರಜೆಯ ಅಗತ್ಯವಿರುವುದಾದರೆ ಈಗಲೇ ನಿಮ್ಮ ಮಾಲೀಕರೊಂದಿಗೆ ಮಾತಾಡಿ. ರಾತ್ರಿ ತಂಗಲು ನಿಮಗೆ ವಸತಿ ಬೇಕಾಗಿರುವುದಾದರೆ, ಅದಕ್ಕಾಗಿ ಏರ್ಪಾಡು ಮಾಡಿದ್ದೀರೋ? ಅಧಿವೇಶನ ಸ್ಥಳದಲ್ಲಿ ನಿಮ್ಮ ಸಹೋದರರೊಂದಿಗೆ ಕುಳಿತು ಮಧ್ಯಾಹ್ನದ ಊಟವನ್ನು ಉಣ್ಣಲು ನೀವು ಲಘು ಆಹಾರವನ್ನು ತೆಗೆದುಕೊಂಡು ಹೋಗಲು ಸಹ ಯೋಜಿಸಬೇಕಾಗುತ್ತದೆ. ಪ್ರತಿದಿನವೂ ಅಧಿವೇಶನಕ್ಕೆ ಬೆಳಗ್ಗೆ ಬೇಗನೆ ಹಾಜರಾಗಿ ಆಸನವನ್ನು ಕಂಡುಕೊಂಡು ಆರಂಭದ ಗೀತೆಯನ್ನು ಹಾಡಲು ಮತ್ತು ಪ್ರಾರ್ಥನೆಯನ್ನು ಆಲಿಸಲು ಬೇಕಾದ ಯೋಜನೆಯನ್ನು ಮಾಡಿರಿ.
3. ಯಾವ ತರದ ವಸ್ತ್ರಗಳನ್ನು ನಾವು ಧರಿಸಲು ಯೋಜಿಸಬೇಕು?
3 ನಾವು ಧರಿಸುವ ಉಡುಪು ಸಹ ಮರ್ಯಾದೆಗೆ ತಕ್ಕದ್ದಾಗಿರಬೇಕು. (1 ತಿಮೊ. 2:9, 10) ಸಮಾಜಕ್ಕೆ ಒಂದು ಒಳ್ಳೆಯ ಸಾಕ್ಷಿ ನೀಡುವಂತೆ ಜಿಲ್ಲಾ ಅಧಿವೇಶನಗಳು ನಮಗೆ ಸದವಕಾಶ ಒದಗಿಸುತ್ತವೆ. ಅಧಿವೇಶನದ ನಗರದಲ್ಲಿ ನಾವಿರುವಾಗ ನಮ್ಮ ಉತ್ತಮ ತೋರಿಕೆಯನ್ನು ಕಾಪಾಡಿಕೊಳ್ಳುವ ಮೂಲಕ ಮತ್ತು ಅಧಿವೇಶನದ ಬ್ಯಾಡ್ಜ್ಗಳನ್ನು ಹಾಕಿಕೊಳ್ಳುವ ಮೂಲಕ, ಅವಿಶ್ವಾಸಿಗಳಿಂದ ನಾವು ಭಿನ್ನರಾಗಿ ಕಾಣುತ್ತೇವೆ. ಇದು ನಮ್ಮನ್ನು ಗಮನಿಸುವವರ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ.
4. ನಾವು ಮತ್ತು ನಮ್ಮ ಕುಟುಂಬ, ಕಾರ್ಯಕ್ರಮದಿಂದ ಹೆಚ್ಚು ಪ್ರಯೋಜನ ಪಡೆಯುವಂತೆ ಯಾವುದು ಸಹಾಯಮಾಡುವುದು?
4 ಗಮನಕೊಟ್ಟು ಆಲಿಸಿ: ಖಂಡಿತವಾಗಿಯೂ, ಈ ಆಧ್ಯಾತ್ಮಿಕ ಔತಣದಲ್ಲಿ ಒಂದು ತುತ್ತು ಆಹಾರವನ್ನಾದರೂ ಕಳೆದುಕೊಳ್ಳಲು ನಾವು ಬಯಸೆವು! (ಜ್ಞಾನೋ. 22:17, 18) ಶಾಸ್ತ್ರವಚನಗಳು ಓದಲ್ಪಡುವಾಗ ನಾವು ಸಹ ನಮ್ಮ ಬೈಬಲ್ ತೆರೆದು ಗಮನಿಸುವುದಾದರೆ ಮತ್ತು ಚುಟುಕಾದ ಟಿಪ್ಪಣಿಗಳನ್ನು ಬರೆದುಕೊಳ್ಳುವುದಾದರೆ, ನಾವು ಅಪಕರ್ಷಿತರಾಗದಂತೆಯೂ ಕಾರ್ಯಕ್ರಮವನ್ನು ನಿಕಟವಾಗಿ ಗಮನಿಸುವಂತೆಯೂ ಸಹಾಯವಾಗುವುದು. ಅನಂತರ ಸಾಯಂಕಾಲದ ಸಮಯಗಳಲ್ಲಿ ಕಾರ್ಯಕ್ರಮದ ಮುಖ್ಯಾಂಶಗಳನ್ನು ಇತರರೊಂದಿಗೆ ಚರ್ಚಿಸಲು ನಮ್ಮ ಟಿಪ್ಪಣಿಯನ್ನು ಉಪಯೋಗಿಸಬಹುದು. ಇತ್ತೀಚೆಗಿನ ವರ್ಷಗಳಲ್ಲಿ ಗಮನಿಸಲ್ಪಟ್ಟ ವಿಷಯವೇನೆಂದರೆ, ಕೆಲವು ಯುವ ಜನರು ಅಧಿವೇಶನದಲ್ಲಿ ಕಾರ್ಯಕ್ರಮ ನಡೆಯುತ್ತಿರುವಾಗ ಒಟ್ಟಿಗೆ ಕುಳಿತುಕೊಂಡು ಇಲ್ಲವೆ ಹೊರಗೆ ನಿಂತುಕೊಂಡು ಮಾತಾಡುತ್ತಿರುತ್ತಾರೆ ಅಥವಾ ತಮ್ಮ ಮೊಬೈಲ್ ಫೋನ್ಗಳಲ್ಲಿ ಸಂದೇಶ ಕಳುಹಿಸುತ್ತಿರುತ್ತಾರೆ. ನಮ್ಮ ಮಕ್ಕಳನ್ನು, ಅವರು ಹದಿಹರೆಯದ ಮಕ್ಕಳಾಗಿರುವುದಾದರೆ ಸಹ ಅವರನ್ನು ಇತರ ಯುವ ಜನರೊಂದಿಗೆ ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಬಿಡದೆ ನಮ್ಮೊಂದಿಗೆ ಕೂರಿಸಿಕೊಂಡು ಒಟ್ಟಾಗಿ ಕಾರ್ಯಕ್ರಮವನ್ನು ಆಲಿಸುವುದು ಪ್ರಯೋಜನಕರ.
5. ಅಧಿವೇಶನದಲ್ಲಿ ನಾವು ನಮ್ಮ ಆನಂದವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು?
5 ಸಹವಾಸದಲ್ಲಿ ಆನಂದಿಸಿ: ರುಚಿಕರ ಊಟವನ್ನು ಇತರರೊಂದಿಗೆ ಹಂಚಿಕೊಂಡು ತಿಂದಾಗಲೇ ಅದರ ರುಚಿ ಹೆಚ್ಚಾಗುತ್ತದೆ. (ಜ್ಞಾನೋ. 15:17) ತದ್ರೀತಿಯಲ್ಲಿ, ಅಧಿವೇಶನದಲ್ಲಿನ ನಮ್ಮ ಆನಂದವನ್ನು ಸಹೋದರ-ಸಹೋದರಿಯರೊಂದಿಗಿನ ಸಹವಾಸವು ಹೆಚ್ಚಿಸುತ್ತದೆ. ಆದುದರಿಂದ, ಕಾರ್ಯಕ್ರಮದ ವಿರಾಮದ ಸಮಯದಲ್ಲಿ, ಬೇರೆಯವರ ಪರಿಚಯ ಮಾಡಿಕೊಳ್ಳಲು ನಾವು ಮೊದಲ ಹೆಜ್ಜೆ ತೆಗೆದುಕೊಂಡು ಅವರೊಂದಿಗಿನ ಸಹವಾಸವನ್ನು ಸವಿಯುವುದು ಎಷ್ಟೊಂದು ರಮ್ಯವಾಗಿರುತ್ತದೆ! (ಕೀರ್ತ. 133:1) ಅಧ್ಯಕ್ಷನು ಸಂಗೀತ ಆರಂಭವಾಗುವ ಮುನ್ನ ನಮ್ಮ ನಮ್ಮ ಆಸನಗಳಲ್ಲಿ ಕುಳಿತುಕೊಳ್ಳುವಂತೆ ವಿನಂತಿಸುವಾಗ, ನಾವು ನಮ್ಮ ಸಂಭಾಷಣೆಯನ್ನು ನಿಲ್ಲಿಸಿ ಕಾರ್ಯಕ್ರಮ ಆರಂಭಗೊಳ್ಳುವಂತೆ ಕುಳಿತುಕೊಳ್ಳತಕ್ಕದ್ದು.
6. ಅಧಿವೇಶನ ನಗರದಲ್ಲಿರುವ ಜನರಿಗೆ ಹೇಗೆ ಸಾಕ್ಷಿ ನೀಡಬಹುದೆಂದು ತೋರಿಸುವ ನಿಮ್ಮ ವೈಯಕ್ತಿಕ ಅನುಭವವೊಂದನ್ನು ತಿಳಿಸಿ.
6 ಸಾಕ್ಷಿ ನೀಡಲು ಸದಾ ಸಿದ್ಧವಾಗಿರಿ: ಸಾಮಾನ್ಯವಾಗಿ ಅಧಿವೇಶನದ ಸಮಯದಲ್ಲಿ ಸಾಕ್ಷಿ ನೀಡಲು ಹಲವಾರು ಉತ್ತಮ ಸಂದರ್ಭಗಳಿರುತ್ತವೆ. ಕಾರ್ಯಕ್ರಮದ ನಂತರ ಅನೇಕ ಅಧಿವೇಶನಗಾರರು ಹೋಟೆಲ್ಗಳಿಗೆ ಹೋದಾಗ ಅವರ ಬ್ಯಾಡ್ಜ್ನಲ್ಲಿದ್ದ ಮುಖ್ಯ ವಿಷಯವನ್ನು ಅಲ್ಲಿದ್ದ ವೇಟರ್ಸ್ ಹಾಗೂ ಇತರರು ವಿಚಾರಿಸಿದ್ದಾರೆ. ಹೀಗೆ ಸಂಭಾಷಣೆ ಆರಂಭಗೊಂಡು ಸತ್ಯದ ಕುರಿತು ಸಾಕ್ಷಿ ನೀಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಅಧಿವೇಶನಕ್ಕೆ ಬರುವಂತೆ ಅವರನ್ನು ಆಮಂತ್ರಿಸಿದಾಗ ಕೆಲವರು ಕಾರ್ಯಕ್ರಮಕ್ಕೂ ಬಂದಿದ್ದಾರೆ.
7. ಅಧಿವೇಶನ ಸಭಾಂಗಣದಲ್ಲಿ ಯಾವ ಶಾಸ್ತ್ರೀಯ ಮೂಲತತ್ತ್ವವು ನಮ್ಮ ಕ್ರೈಸ್ತ ವರ್ತನೆಯನ್ನು ಪ್ರಭಾವಿಸುತ್ತದೆ?
7 ಕ್ರೈಸ್ತ ವರ್ತನೆಗಳು, ಪವಿತ್ರಾತ್ಮದಿಂದ ನಡೆಸಲ್ಪಡುತ್ತಿರುವುದಕ್ಕೆ ಗುರುತು: ಕೆಲವು ಸದಸ್ಯರು ಅಟೆಂಡೆಂಟ್ರೊಂದಿಗೆ ಸಹಕರಿಸದಿರುವುದನ್ನು, ಅವರೊಂದಿಗೆ ಅಕ್ರೈಸ್ತ ರೀತಿಯಲ್ಲಿ ಮಾತಾಡುವುದನ್ನೂ ಗಮನಿಸಲಾಗಿದೆ. ‘ನಾ-ಮೊದಲು’ ಮನೋಭಾವವು ಒಬ್ಬನನ್ನು ಸತ್ಕಾರ್ಯ ಮಾಡುವವನಾಗಿ ಗುರುತಿಸುವುದಿಲ್ಲ ಇಲ್ಲವೆ ಅದು ಯೆಹೋವ ದೇವರಿಗೆ ಸ್ತುತಿಯನ್ನೂ ತರುವುದಿಲ್ಲ. ನಾವು ಪ್ರೀತಿಪರರೂ, ತಾಳ್ಮೆಯುಳ್ಳವರೂ ಸಹಕರಿಸುವವರೂ ಆಗಿದ್ದು, ನಮ್ಮ ಜೀವನ ಕ್ರಮವು ದೇವರ ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಡುತ್ತಿದೆ ಎಂಬುದನ್ನು ತೋರಿಸೋಣ. (ಗಲಾ. 5:22, 23, 25) ಅದಲ್ಲದೆ ಆಸನಗಳನ್ನು ಕಾದಿರಿಸುವ ಸಮಸ್ಯೆಯು ಇನ್ನೂ ಮುಂದುವರಿಯುತ್ತಿದೆ. ಅಧಿವೇಶನ ಸಭಾಂಗಣದ ಬಾಗಿಲುಗಳು ಬೆಳಿಗ್ಗೆ 8 ಗಂಟೆಗೆ ತೆರೆಯುತ್ತಿರುವಾಗಲೇ ಕೆಲವು ಸಹೋದರ ಸಹೋದರಿಯರು ದೌಡಾಯಿಸುತ್ತಾ “ಒಳ್ಳೇ” ಸ್ಥಳಕ್ಕಾಗಿ ನೂಕುನುಗ್ಗಲು ಮಾಡುವುದು ಕಂಡುಬಂದಿದೆ. ಇಂಥ ಅಸಭ್ಯ ವರ್ತನೆಯ ಪರಿಣಾಮವಾಗಿ ಕೆಲವರು ಗಾಯಗೊಂಡಿರುವುದೂ ಉಂಟು. ಕೆಲವು ಸಹೋದರರು ತಮ್ಮ ಕುಟುಂಬದೊಡನೆ ಸಭಾಂಗಣಕ್ಕೆ ಬೇಗನೆ ಬಂದಾಗ ಆ ಮೊದಲೇ ಹೆಚ್ಚಿನ ಆಸನಗಳು ಕಾದಿರಿಸಲ್ಪಟ್ಟಿದ್ದವೆಂದು ವರದಿಸಿದ್ದಾರೆ. ಅನೇಕ ಸಂದರ್ಭಗಳಲ್ಲಿ ಕೆಲವರು ಸಭಾಂಗಣ ತೆರೆಯುವ ಸಮಯಕ್ಕೆ ಬಂದು ತಮ್ಮ ಕುಟುಂಬ-ಮಿತ್ರರಿಗಾಗಿ ಆಸನಗಳ ಇಡೀ ಸಾಲುಗಳನ್ನು ಹಿಡಿಯುತ್ತಾರೆ. ನಿಜ ಪ್ರೀತಿಯು ಸ್ವಾರ್ಥಪರವಲ್ಲ. ನಿಸ್ವಾರ್ಥ ಪ್ರೀತಿ ತನ್ನ ಶಿಷ್ಯರ ಪ್ರಮುಖ ಗುರುತಾಗಿರುವುದೆಂದೂ ಯೇಸು ತಿಳಿಸಿದನು. (ಯೋಹಾ. 13:35) ಅಧಿಕ ಸಂಖ್ಯೆಯಲ್ಲಿ ಆಸನಗಳನ್ನು ಹಿಡಿದಿಡುವುದು, ದೈವಿಕ ಪ್ರೀತಿಯನ್ನು ತೋರಿಸಿದಂತಾಗುತ್ತದೋ? ಕ್ರೈಸ್ತ ಪ್ರೀತಿಯು ಕ್ರಿಸ್ತನು ಹೇಳಿದ್ದನ್ನು ಮಾಡುವಂತೆ ನಮ್ಮನ್ನು ಪ್ರಚೋದಿಸಬೇಕು. ಅದೇನೆಂದರೆ: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.”—ಮತ್ತಾ. 7:12.
8. ಮುಂಬರಲಿರುವ ಜಿಲ್ಲಾ ಅಧಿವೇಶನವನ್ನು ನಾವೇಕೆ ಹಾಜರಾಗಲೇ ಬೇಕು?
8 ಅಧಿವೇಶನದ ಕಾರ್ಯಕ್ರಮವನ್ನು ಸಿದ್ಧಪಡಿಸಲು, ಅದರ ಸೌಕರ್ಯಗಳನ್ನು ಆಯೋಜಿಸಲು, ಅಧಿವೇಶನದ ಇಲಾಖೆಗಳನ್ನು ಏರ್ಪಡಿಸಲು ಮತ್ತು ಭಾಷಣಗಳನ್ನು ತಯಾರಿಸಲು ಸಾವಿರಾರು ಗಂಟೆಗಳು ತಗಲಿವೆ. ಈ ಆಧ್ಯಾತ್ಮಿಕ ಭೋಜನವನ್ನು ಸಿದ್ಧಪಡಿಸಲು ಪ್ರೀತಿಯಿಂದ ವೆಚ್ಚಮಾಡಿದ ಎಲ್ಲ ರೀತಿಯ ಶ್ರಮಗಳು, ಯೆಹೋವನು ತನ್ನ ಜನರೆಡೆಗೆ ಕೋಮಲವಾದ ಕಾಳಜಿಯನ್ನು ಹೊಂದಿದ್ದಾನೆಂದು ತೋರಿಸುತ್ತವೆ. ನಾವೆಲ್ಲರೂ ಅಲ್ಲಿ ಹಾಜರಿದ್ದು, ಮನಪೂರ್ವಕವಾಗಿ ಉಂಡು ಸವಿಯೋಣ! ಹಾಗೆ ಮಾಡುವಾಗ, ಈ ಲೋಕದವರಿಗಿಂತ ಭಿನ್ನವಾಗಿ ನಾವು ‘ಹೃದಯಾನಂದದಿಂದ ಹರ್ಷಧ್ವನಿಗೈಯುವೆವು.’—ಯೆಶಾ. 65:14.
[ಪುಟ 5ರಲ್ಲಿರುವಚೌಕ]
ಜಿಲ್ಲಾ ಅಧಿವೇಶನ ಮರುಜ್ಞಾಪನಗಳು
◼ ಕಾರ್ಯಕ್ರಮದ ಸಮಯಗಳು: ಮೂರು ದಿನಗಳಲ್ಲಿಯೂ ಕಾರ್ಯಕ್ರಮವು ಬೆಳಿಗ್ಗೆ 9:20ಕ್ಕೆ ಆರಂಭವಾಗುವುದು. ಸಭಾಂಗಣದ ಬಾಗಿಲುಗಳನ್ನು ಬೆಳಿಗ್ಗೆ 8:00 ಗಂಟೆಗೆ ತೆರೆಯಲಾಗುವುದು. ಆರಂಭದ ರಾಜ್ಯ ಸಂಗೀತವು ನುಡಿಸಲ್ಪಡುವಾಗ ನಾವೆಲ್ಲರೂ ನಮ್ಮ ಆಸನಗಳಲ್ಲಿ ಕುಳಿತುಕೊಳ್ಳಬೇಕು. ಇದರಿಂದಾಗಿ ಕಾರ್ಯಕ್ರಮವನ್ನು ಗೌರವಾನ್ವಿತ ರೀತಿಯಲ್ಲಿ ಆರಂಭಿಸಲು ಸಾಧ್ಯವಾಗುತ್ತದೆ. ಕಾರ್ಯಕ್ರಮವು ಶುಕ್ರವಾರ ಮತ್ತು ಶನಿವಾರದಂದು ಸಂಜೆ 4:55ಕ್ಕೆ ಹಾಗೂ ಭಾನುವಾರದಂದು ಸಂಜೆ 4:00ಕ್ಕೆ ಕೊನೆಗೊಳ್ಳುವುದು.
◼ ಪಾರ್ಕಿಂಗ್: ಪಾರ್ಕಿಂಗ್ ಸೌಕರ್ಯಗಳನ್ನು ಪಡೆದಿರುವಂಥ ಎಲ್ಲ ಅಧಿವೇಶನ ಸ್ಥಳಗಳಲ್ಲಿ ವಾಹನಗಳು ಬರುವ ಕ್ರಮಕ್ಕನುಸಾರ ಫ್ರೀ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗುವುದು. ಅಧಿವೇಶನದ ಬ್ಯಾಡ್ಜ್ ಕಾರ್ಡ್ಗಳು ಪಾರ್ಕಿಂಗ್ಗಾಗಿರುವ ಗುರುತು ಆಗಿದೆ.
◼ ಆಸನಗಳನ್ನು ಕಾದಿರಿಸುವುದು: ಕಾರ್ನಲ್ಲಿ ನಿಮ್ಮೊಂದಿಗೆ ಪ್ರಯಾಣಿಸುತ್ತಿರುವವರಿಗೆ ಅಥವಾ ನಿಮ್ಮ ಮನೆಯಲ್ಲಿ ವಾಸಿಸುತ್ತಿರುವವರಿಗೆ ಮಾತ್ರ ಆಸನಗಳನ್ನು ಕಾದಿರಿಸಬಹುದು.
◼ ಮಧ್ಯಾಹ್ನದ ಊಟ: ಮಧ್ಯಾಹ್ನದ ವಿರಾಮದಲ್ಲಿ ಊಟಕ್ಕಾಗಿ ಅಧಿವೇಶನ ಸ್ಥಳದಿಂದ ಹೊರಗೆ ಹೋಗುವ ಬದಲು ದಯವಿಟ್ಟು ಊಟವನ್ನು ನೀವೇ ತನ್ನಿರಿ. ನಿಮ್ಮ ಸೀಟಿನ ಕೆಳಗೆ ಇಡಬಹುದಾದ ಚಿಕ್ಕ ಟಿಫಿನ್ಕ್ಯಾರಿಯರ್ಗಳನ್ನು ಬಳಸುವುದು ಉಚಿತ. ದೊಡ್ಡ ದೊಡ್ಡ ಟಿಫಿನ್ಗಳು, ಗಾಜಿನ ಪಾತ್ರೆಗಳು ಮತ್ತು ಮದ್ಯಪಾನೀಯಗಳಿಗೆ ಅಧಿವೇಶನ ಸೌಕರ್ಯದಲ್ಲಿ ಅನುಮತಿಯಿಲ್ಲ.
◼ ದಾನಗಳು: ನಮ್ಮ ಲೋಕವ್ಯಾಪಕ ಕಾರ್ಯಕ್ಕಾಗಿ ರಾಜ್ಯ ಸಭಾಗೃಹದಲ್ಲಿ ಅಥವಾ ಅಧಿವೇಶನದಲ್ಲಿ ಸ್ವಯಂ ಪ್ರೇರಿತ ದಾನಗಳನ್ನು ನೀಡುವ ಮೂಲಕ ನಾವು ನಮ್ಮ ಅಧಿವೇಶನ ಏರ್ಪಾಡುಗಳಿಗಾಗಿ ಗಣ್ಯತೆ ತೋರಿಸಬಲ್ಲೆವು. ನೀವು ಅಧಿವೇಶನದಲ್ಲಿ ಕಾಣಿಕೆಯಾಗಿ ಹಾಕುವ ಯಾವುದೇ ಚೆಕ್ಗಳಲ್ಲಿ “ವಾಚ್ಟವರ್”ಗೆ ಸಂದಾಯವಾಗಬೇಕೆಂದು ಗುರುತಿಸಬೇಕು.
◼ ಅಪಘಾತಗಳು ಮತ್ತು ತುರ್ತುಪರಿಸ್ಥಿತಿಗಳು: ಅಧಿವೇಶನದ ಸ್ಥಳದಲ್ಲಿ ಯಾವುದೇ ವೈದ್ಯಕೀಯ ತುರ್ತುಪರಿಸ್ಥಿತಿ ಏಳುವಾಗ ದಯವಿಟ್ಟು ಹತ್ತಿರದಲ್ಲಿರುವ ಅಟೆಂಡೆಂಟ್ನನ್ನು ಸಂಪರ್ಕಿಸಿರಿ. ಅವನು ಕೂಡಲೇ ಪ್ರಥಮ ಚಿಕಿತ್ಸೆ ಇಲಾಖೆಗೆ ತಿಳಿಸುವನು ಮತ್ತು ನುರಿತ ಪ್ರಥಮ ಚಿಕಿತ್ಸಕನು ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ಬೇಕಾದ ಸಹಾಯವನ್ನು ನೀಡುವನು. ಅಗತ್ಯವಿದ್ದಲ್ಲಿ ಅವನು 102 ನಂಬರಿಗೆ ಕರೆಮಾಡುವನು.
◼ ಶ್ರವಣ ಶಕ್ತಿಗುಂದಿದವರಿಗೆ: ಕೊಯಮತ್ತೂರು, ಕೊಚ್ಚಿ ಮತ್ತು ಬೆಂಗಳೂರಿನ ಇಂಗ್ಲಿಷ್ ಅಧಿವೇಶನದಲ್ಲಿ ಕಾರ್ಯಕ್ರಮವನ್ನು ಸನ್ನೆ ಭಾಷೆಯಲ್ಲಿ ಪ್ರಸ್ತುತಪಡಿಸಲಾಗುತ್ತದೆ.
◼ ಮಕ್ಕಳ ತಳ್ಳುಕುರ್ಚಿ: ಮಕ್ಕಳ ತಳ್ಳುಕುರ್ಚಿಯನ್ನು ಅಧಿವೇಶನ ಸ್ಥಳಕ್ಕೆ ತರಬಾರದು. ಆದರೆ, ಹೆತ್ತವರು ತಮ್ಮ ಆಸನದ ಪಕ್ಕದಲ್ಲಿ ಇಟ್ಟುಕೊಳ್ಳಸಾಧ್ಯವಿರುವ ಮಗುವಿನ ಸುರಕ್ಷೆಯ ಕುರ್ಚಿಯನ್ನು ತರಬಹುದು.
◼ ಸುಗಂಧ ದ್ರವ್ಯಗಳು: ಕೆಲವು ಅಧಿವೇಶನಗಳು ಯಾಂತ್ರಿಕ ವಾಯುಸಂಚಾರವಿರುವ ಸಭಾಂಗಣಗಳಲ್ಲಿ ನಡೆಸಲ್ಪಡುತ್ತವೆ. ಆದುದರಿಂದ, ಉಸಿರಾಟ ಅಥವಾ ಅದಕ್ಕೆ ಸಂಬಂಧಿಸಿದ ತೊಂದರೆಗಳಿಂದ ಬಳಲುತ್ತಿರುವವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಾದ ವಿಪರೀತ ಸುವಾಸನೆಯ ಸೆಂಟ್ಗಳ ಬಳಕೆಯನ್ನು ಸೀಮಿತಗೊಳಿಸುವ ಮೂಲಕ ನಾವು ಅವರಿಗೆ ದಯೆ ತೋರಿಸಬಲ್ಲೆವು.—1 ಕೊರಿಂ. 10:24.
◼ ಫಾಲೋ-ಅಪ್ ಫಾರ್ಮ್ಸ್: ಅಧಿವೇಶನದ ಸಮಯದಲ್ಲಿ ಅನೌಪಚಾರಿಕ ಸಾಕ್ಷಿ ನೀಡಿದ ಪರಿಣಾಮವಾಗಿ ಕಂಡುಕೊಂಡ ಆಸಕ್ತ ವ್ಯಕ್ತಿಗಳ ಕುರಿತು ಮಾಹಿತಿಯನ್ನು ಒದಗಿಸಲು ಪ್ಲೀಸ್ಫಾಲೋ ಅಪ್ (S-43) ಫಾರ್ಮ್ ಅನ್ನು ಉಪಯೋಗಿಸಬೇಕು. ಅಧಿವೇಶನಕ್ಕೆ ಬರುವಾಗ ಪ್ರಚಾರಕರು ಒಂದೆರಡು ಫಾರ್ಮ್ಗಳನ್ನು ತರತಕ್ಕದ್ದು. ಭರ್ತಿಮಾಡಿದ ಫಾರ್ಮ್ಗಳನ್ನು ಅಧಿವೇಶನದ ಬುಕ್ರೂಮ್ಗೆ ಅಥವಾ ನೀವು ಹಿಂದಿರುಗಿದ ಬಳಿಕ ನಿಮ್ಮ ಸಭಾ ಸೆಕ್ರಿಟರಿಗೆ ಕೊಡತಕ್ಕದ್ದು.—ಫೆಬ್ರವರಿ 2005ರ ನಮ್ಮ ರಾಜ್ಯದ ಸೇವೆಯ ಪುಟ 6ನ್ನು ನೋಡಿರಿ.
◼ ರೆಸ್ಟಾರಂಟ್ಗಳು: ರೆಸ್ಟಾರಂಟ್ಗಳಲ್ಲಿ ನಿಮ್ಮ ಸದ್ವರ್ತನೆಯ ಮೂಲಕ ಯೆಹೋವನ ನಾಮವನ್ನು ಮಹಿಮೆಪಡಿಸಿರಿ. ಅನೇಕ ಸ್ಥಳಗಳಲ್ಲಿ ತಮಗೆ ನೀಡಲ್ಪಡುವ ಸೇವೆಗನುಸಾರ 10% ಟಿಪ್ಸ್ ನೀಡುವುದು ರೂಢಿಯಲ್ಲಿದೆ.
◼ ಹೋಟೆಲ್ಗಳು: (1) ದಯವಿಟ್ಟು ಅಗತ್ಯಕ್ಕಿಂತ ಹೆಚ್ಚು ರೂಮ್ಗಳನ್ನು ಕಾದಿರಿಸಬೇಡಿ ಮತ್ತು ಅನುಮತಿ ಇರುವುದಕ್ಕಿಂತ ಹೆಚ್ಚು ಮಂದಿ ನಿಮ್ಮ ರೂಮಿನಲ್ಲಿ ಉಳುಕೊಳ್ಳಬಾರದು. (2) ನಿಮ್ಮ ರಿಸರ್ವೇಷನ್ ಅನ್ನು ರದ್ದುಗೊಳಿಸಲೇಬೇಕಾದಲ್ಲಿ ಕೂಡಲೆ ಅದನ್ನು ಹೋಟೆಲ್ನವರಿಗೆ ತಿಳಿಸಿರಿ. (3) ನೀವು ಎಲ್ಲ ಸಾಮಾನನ್ನು ಸಿದ್ಧವಾಗಿಟ್ಟ ಬಳಿಕವೇ ತಳ್ಳುಗಾಡಿಯನ್ನು ತೆಗೆದುಕೊಳ್ಳಿ ಮತ್ತು ಇತರರು ಉಪಯೋಗಿಸಲಾಗುವಂತೆ ಅದನ್ನು ಆ ಕೂಡಲೆ ಹಿಂದಿರುಗಿಸಿ. (4) ಅಪ್ಪಣೆ ವಿನಃ ರೂಮಿನಲ್ಲಿ ಅಡಿಗೆ ಮಾಡಬಾರದು. (5) ನಿಮ್ಮ ಕೋಣೆ ಶುಚಿ ಮಾಡುವವನಿಗೆ ಪ್ರತಿದಿನ ಟಿಪ್ಸ್ ಇಟ್ಟುಹೋಗಿರಿ. (6) ಹೋಟೆಲಿನ ಅತಿಥಿಗಳಿಗಾಗಿ ಪುಕ್ಕಟೆಯಾಗಿ ಕೊಡುವ ಉಪಹಾರ, ಕಾಫಿ ಅಥವಾ ಐಸ್ಕ್ಯೂಬ್ಗಳನ್ನು ದುರುಪಯೋಗಿಸಬೇಡಿ. (7) ಹೋಟೆಲ್ಸಿಬ್ಬಂದಿಯೊಂದಿಗೆ ವ್ಯವಹರಿಸುವಾಗಲೆಲ್ಲಾ ದೇವರಾತ್ಮದ ಫಲಗಳನ್ನು ತೋರಿಸಿರಿ. (8) ಶಿಫಾರಸು ಮಾಡಲ್ಪಟ್ಟಿರುವ ಲಾಜಿಂಗ್ ಲಿಸ್ಟ್ನಲ್ಲಿರುವ ರೂಮ್ನ ದರಗಳು ದಿನವೊಂದಕ್ಕೆ ತೆರಬೇಕಾದ ಪೂರ್ಣ ಬೆಲೆಯಾಗಿದೆ. ಇದರಲ್ಲಿ ತೆರಿಗೆಯು ಸೇರಿಸಲ್ಪಟ್ಟಿಲ್ಲ. ನೀವು ವಿನಂತಿಸದ ಅಥವಾ ಬಳಸದ ಯಾವುದಕ್ಕಾದರೂ ಹೆಚ್ಚು ಹಣವನ್ನು ನಿಮ್ಮ ಬಿಲ್ಗೆ ಹಾಕಿದ್ದಲ್ಲಿ ಅದಕ್ಕೆ ಒಪ್ಪಬೇಡಿ ಮತ್ತು ಅದನ್ನು ಅಧಿವೇಶನದ ರೂಮಿಂಗ್ ಡಿಪಾರ್ಟ್ಮೆಂಟ್ಗೆ ಆದಷ್ಟು ಬೇಗ ತಿಳಿಸಿರಿ. (9) ಹೋಟೆಲ್ ರೂಮ್ನ ಸಂಬಂಧದಲ್ಲಿ ಯಾವುದೇ ಸಮಸ್ಯೆ ಏಳುವಲ್ಲಿ ಅಧಿವೇಶನದ ಸಮಯದಲ್ಲೇ ರೂಮಿಂಗ್ ಡಿಪಾರ್ಟ್ಮೆಂಟ್ಗೆ ತಪ್ಪದೇ ತಿಳಿಸಿರಿ.