“ಕ್ರಿಸ್ತನನ್ನು ಅನುಸರಿಸೋಣ!” ಜಿಲ್ಲಾ ಅಧಿವೇಶನವನ್ನು ಪ್ರಕಟಪಡಿಸಲು ಲೋಕವ್ಯಾಪಕವಾದ ವಿಶೇಷ ಪ್ರಯತ್ನ
ಪ್ರಚಾರಕರು ಇನ್ನೊಮ್ಮೆ ವಿಶೇಷ ಕರಪತ್ರವನ್ನು ವಿತರಿಸುವರು
1 ಕಳೆದ ವರ್ಷ, “ಬಿಡುಗಡೆಯು ಸಮೀಪವಿದೆ!” ಜಿಲ್ಲಾ ಅಧಿವೇಶನವನ್ನು ಪ್ರಕಟಪಡಿಸಲು ನಡೆಸಿದ ಲೋಕವ್ಯಾಪಕ ಕಾರ್ಯಚರಣೆಯು ಆಸಕ್ತ ಜನರ ಮೇಲೆ ಬಲವಾದ ಪ್ರಭಾವ ಬೀರಿತ್ತು. ಈ ವಿಶೇಷ ಆಮಂತ್ರಣಕ್ಕೆ ಓಗೊಟ್ಟು ಬಂದವರು, ಯೆಹೋವನ ಸಾಕ್ಷಿಗಳ ಮಧ್ಯೆ ಇರುವ ಪುಷ್ಕಳ ಆಧ್ಯಾತ್ಮಿಕ ಭೋಜನವು ಎಂಥಾದ್ದು ಎಂಬುದನ್ನು ಮೊದಲ ಬಾರಿಗೆ ಸವಿದುನೋಡಿದರು. (ಯೆಶಾ. 65:13) ನಮ್ಮ ಬೆಚ್ಚಗಿನ ಐಕ್ಯ ಕ್ರೈಸ್ತ ಸಹೋದರತ್ವದ ಒಡನಾಟದಲ್ಲಿ ಅವರು ಹರ್ಷಿಸಿದರು. (ಕೀರ್ತ. 133:1) “ಕ್ರಿಸ್ತನನ್ನು ಅನುಸರಿಸೋಣ!” ಜಿಲ್ಲಾ ಅಧಿವೇಶನಕ್ಕೆ ಸಾಧ್ಯವಾದಷ್ಟು ಹೆಚ್ಚು ಜನರು ಹಾಜರಾಗುವಂತೆ ನೆರವಾಗಲು ಒಂದು ವಿಶೇಷ ಕರಪತ್ರದ ಲೋಕವ್ಯಾಪಕ ವಿತರಣೆಯಲ್ಲಿ ನಾವು ಇನ್ನೊಮ್ಮೆ ಜೊತೆಗೂಡುವೆವು.
2 ಕಳೆದ ವರ್ಷದ ಫಲಿತಾಂಶಗಳು: “ಬಿಡುಗಡೆಯು ಸಮೀಪವಿದೆ!” ಜಿಲ್ಲಾ ಅಧಿವೇಶನವನ್ನು ಪ್ರಕಟಪಡಿಸಿದರಿಂದ ಅತ್ಯುತ್ತಮ ಫಲಿತಾಂಶಗಳು ದೊರಕಿವೆ ಎಂಬುದನ್ನು ಲೋಕದ ಎಲ್ಲೆಡೆಯಿಂದ ಬಂದ ವರದಿಗಳು ರುಜುಪಡಿಸಿದವು. ಅನೇಕ ಕಡೆಗಳಲ್ಲಿ ನಮಗೆ ಒಳ್ಳೆಯ ಪ್ರಸಿದ್ಧಿ ದೊರಕಿತು. ಉದಾಹರಣೆಗೆ, ಒಂದು ನಗರದ ವಾರ್ತಾಪತ್ರಿಕೆಯು ಈ ಕಾರ್ಯಚರಣೆಯ ಕುರಿತ ಲೇಖನವನ್ನು ಆರು ಅಂಕಣಗಳಲ್ಲಿ ಮುದ್ರಿಸಿತು. ಅದು ತಿಳಿಸಿದ್ದು: “ತಕ್ಕ ಸಮಯದೊಳಗೆ ಎಲ್ಲರನ್ನೂ ತಲಪುವ ಸಲುವಾಗಿ ಸಾಕ್ಷಿಗಳು ವಿಶೇಷ ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡುತ್ತಿದ್ದಾರೆ. ನೆರೆಹೊರೆಗಳಲ್ಲಿ ತುಂಬ ಹೊತ್ತು ಕೆಲಸಮಾಡುತ್ತಾರೆ, ತುಂಬ ದೂರ ನಡೆಯುತ್ತಾರೆ ಮತ್ತು ತ್ವರಿತವಾಗಿ ಮಾತಾಡುತ್ತಾರೆ.” ಕರಪತ್ರದ ಸಂಘಟಿತ ವಿತರಣೆಯು ಇನ್ನೊಂದು ನಗರದ ಸ್ಥಳೀಯ ವಾರ್ತಾಮಾಧ್ಯಮದ ಆಸಕ್ತಿಯನ್ನು ಕೆರಳಿಸಿದ್ದರಿಂದ ಅದು ಕಾರ್ಯಚರಣೆಯ ಪೂರ್ಣ ವಿವರಗಳನ್ನು ಛಾಪಿಸಿತು. ಅಧಿವೇಶನಕ್ಕೆ ಮುಂಚೆ ಕಡಿಮೆಪಕ್ಷ ಮೂರು ವಾರ್ತಾಪತ್ರಿಕೆಗಳು ನಮ್ಮ ಚಟುವಟಿಕೆಯ ಕುರಿತು ಒಳ್ಳೇ ವರದಿ ನೀಡಿದವು. ಒಂದು ವಾರ್ತಾಪತ್ರದ ಭಾನುವಾರ ಸಂಚಿಕೆಯಲ್ಲಿ ಪತ್ರಕರ್ತನೊಬ್ಬನು ಎರಡು ಪುಟಗಳಿಗೂ ಮೀರಿದ ಸವಿಸ್ತಾರ ಲೇಖನಗಳನ್ನು ಬರೆದನು. ಅದರಲ್ಲಿ ನಮ್ಮ ನಂಬಿಕೆಗಳು, ನಮ್ಮ ಸಹೋದರತ್ವ, ಕರಪತ್ರದ ವಿತರಣೆ ಮತ್ತು ಅಧಿವೇಶನದ ಕುರಿತ ಕೂಲಂಕಷ ಮಾಹಿತಿಯಿತ್ತು. ಈ ಕರಪತ್ರವನ್ನು ಒಬ್ಬ ಪ್ರಚಾರಕಳು ಮನೆಯವಳಿಗೆ ನೀಡಿದಾಗ ಅವಳು ಮಧ್ಯೆ ಮಾತಾಡಿ ಹೇಳಿದ್ದು: “ಹೌದು. ನಾನೀಗಷ್ಟೇ ಅದರ ಕುರಿತು ಪತ್ರಿಕೆಯಲ್ಲಿ ಓದುತ್ತಿದ್ದೆ!” ಇನ್ನೊಬ್ಬ ಮನೆಯಾಕೆ ಉದ್ಗರಿಸಿದ್ದು: “ನಾನು ಈಗಷ್ಟೇ ನಿಮ್ಮ ಕುರಿತು ಓದುತ್ತಿದ್ದೆ, ತಲೆಯೆತ್ತಿದರೆ ಎದುರು ನೀವೇ ಇದ್ದೀರಿ! ಈ ಕರೆಯೋಲೆ ನನಗಾ?” ಆಕೆ ಮತ್ತೂ ಹೇಳಿದ್ದು: “ಯೆಹೋವನ ಸಾಕ್ಷಿಗಳು ಮಾಡುತ್ತಿರುವ ಈ ಕೆಲಸವು ಮೆಚ್ಚತಕ್ಕದ್ದೇ.”
3 ಅನೇಕ ಆಸಕ್ತ ಜನರು ಕರಪತ್ರವನ್ನು ಹಿಡಿದುಕೊಂಡೇ ಅಧಿವೇಶನಗಳಿಗೆ ಬರುತ್ತಿರುವುದನ್ನು ಗಮನಿಸಲಾಯಿತು. ಕೆಲವು ಆಸಕ್ತ ಜನರು ಅಧಿವೇಶನದ ಸೆಷನ್ಗಳಿಗೆ ಹಾಜರಾಗಲು ದೂರದ ನಗರಗಳಿಂದ ಬಂದರು. ಬೇರೆಯವರನ್ನು ಆಮಂತ್ರಿಸುವುದರಲ್ಲಿ ನಮ್ಮ ಶ್ರದ್ಧಾಪೂರ್ವಕ ಪ್ರಯತ್ನವು ಹೆಚ್ಚಿನ ಹಾಜರಿಗೆ ಕಾರಣವಾಯಿತು. ಒಂದು ದೇಶದ ಹಾಜರಿಯಾದರೊ ಕಳೆದ ವರ್ಷದ ಅಧಿವೇಶನಕ್ಕಿಂತ 27% ಹೆಚ್ಚಾಗಿತ್ತು.
4 ಟೆರಿಟೊರಿಯ ಆವರಿಸುವಿಕೆ: ನಿಮ್ಮ ಅಧಿವೇಶನವು ಆರಂಭಗೊಳ್ಳುವ ಮೂರು ವಾರಗಳ ಮುಂಚೆ ನೀವು ಕರಪತ್ರದ ವಿತರಣೆಯನ್ನು ಪ್ರಾರಂಭಿಸಬಹುದು. ಸಭೆಯ ಟೆರಿಟೊರಿಯನ್ನು ಪೂರ್ತಿಯಾಗಿ ಆವರಿಸುವಂತೆ ಪೂರ್ಣ ಪ್ರಯತ್ನ ಮಾಡತಕ್ಕದ್ದು. ವಿಸ್ತಾರ ಟೆರಿಟೊರಿಯಿರುವ ಸಭೆಗಳಲ್ಲಿ ಅಧಿವೇಶನದ ಅಂತಿಮ ವಾರದಂದು ಪ್ರಚಾರಕರು ವಿವೇಚನೆಯನ್ನು ಉಪಯೋಗಿಸಿ ಮನೆಯಲ್ಲಿರದವರಿಗಾಗಿ ಕರಪತ್ರವನ್ನು ಬಿಟ್ಟುಬರಬಹುದು. ಸಭಾ ಸದಸ್ಯರು ತಮ್ಮ ಪಾಲಿನ ಎಲ್ಲ ಕರಪತ್ರಗಳನ್ನು ವಿತರಿಸುವಂತೆ ಮತ್ತು ಆದಷ್ಟು ಹೆಚ್ಚು ಟೆರಿಟೊರಿಯನ್ನು ಆವರಿಸುವಂತೆ ಶ್ರಮಿಸಬೇಕು. ಮಿಕ್ಕ ಕರಪತ್ರಗಳನ್ನು ಸಭೆಯ ಪಯನೀಯರರು ಬಳಸಬಲ್ಲರು.
5 ಏನು ಹೇಳಬೇಕು: ನೀವು ಈ ರೀತಿ ಹೇಳಬಹುದು: “ಮುಂಬರಲಿರುವ ಒಂದು ಅಧಿವೇಶನದ ಆಮಂತ್ರಣ ಪತ್ರವನ್ನು ಲೋಕವ್ಯಾಪಕವಾಗಿ ವಿತರಿಸುವುದರಲ್ಲಿ ನಾವು ಭಾಗವಹಿಸುತ್ತಿದ್ದೇವೆ. ಇದು ನಿಮ್ಮ ಕರೆಯೋಲೆ. ಇತರ ವಿವರಗಳು ಇದರಲ್ಲಿವೆ.” ನಿರೂಪಣೆಯನ್ನು ಚುಟುಕಾಗಿಟ್ಟಲ್ಲಿ ಹೆಚ್ಚಿನ ವಿತರಣೆ ಸಾಧ್ಯ. ಆದರೆ ಮನೆಯವನಿಗೆ ಪ್ರಶ್ನೆಗಳಿರುವುದಾದರೆ ಅವುಗಳನ್ನು ಉತ್ತರಿಸಲು ಸಮಯ ತೆಗೆದುಕೊಳ್ಳಿ. ಆಸಕ್ತಿ ತೋರಿಸಿದವರ ದಾಖಲೆಯನ್ನಿಟ್ಟು ಆದಷ್ಟು ಬೇಗ ಅವರನ್ನು ಪುನರ್ಭೇಟಿ ಮಾಡಿರಿ.
6 ಕ್ರಿಸ್ತನನ್ನು ಅನುಸರಿಸಲು ಶ್ರಮಿಸುವುದು ಎಷ್ಟು ಪ್ರಾಮುಖ್ಯ! (ಯೋಹಾ. 3:36) ನಮ್ಮ ಮುಂಬರುವ ಜಿಲ್ಲಾ ಅಧಿವೇಶನವು ಹಾಜರಾಗುವವರೆಲ್ಲರಿಗೆ ಅದನ್ನೇ ಮಾಡಲು ನೆರವುನೀಡುವುದು. “ಕ್ರಿಸ್ತನನ್ನು ಅನುಸರಿಸೋಣ!” ಜಿಲ್ಲಾ ಅಧಿವೇಶನವನ್ನು ಪ್ರಕಟಪಡಿಸಲು ಮಾಡಲಿರುವ ಈ ವಿಶೇಷ ಪ್ರಯತ್ನದ ಫಲಿತಾಂಶವಾಗಿ ಒಂದು ಪ್ರಚಂಡ ಸಾಕ್ಷಿಯು ಪುನಃ ಕೊಡಲ್ಪಡುವುದನ್ನು ನಾವು ಮುನ್ನೋಡಬಲ್ಲೆವು ಖಂಡಿತ. ಆದುದರಿಂದ ಆದಷ್ಟು ಹೆಚ್ಚು ಜನರು ಹಾಜರಾಗುವಂತೆ ಎಲ್ಲರನ್ನು ಉತ್ಸಾಹದಿಂದ ಆಮಂತ್ರಿಸಿರಿ. ವಿಶೇಷವಾದ ಈ ಲೋಕವ್ಯಾಪಕ ಕಾರ್ಯಚರಣೆಯಲ್ಲಿ ನೀವು ಭಾಗವಹಿಸುವಾಗ ಯೆಹೋವನ ಹೇರಳ ಆಶೀರ್ವಾದವು ನಿಮ್ಮ ವೈಯಕ್ತಿಕ ಪ್ರಯತ್ನಗಳ ಮೇಲಿರಲಿ.