ಒಂದು ವಿಶೇಷ ಕಾರ್ಯಾಚರಣೆ ಅಕ್ಟೋಬರ್ 16—ನವೆಂಬರ್ 12!
1 “ಧರ್ಮದ ಹೆಸರಿನಲ್ಲಿ ನಡೆಯುವ ದುಷ್ಕೃತ್ಯಗಳು ಅಂತ್ಯವಾಗುವವೊ?” ಇದು, ರಾಜ್ಯ ವಾರ್ತೆ ನಂ. 37ರ ಶೀರ್ಷಿಕೆಯಾಗಿದೆ. ಇದನ್ನು ಮುಂದಿನ ತಿಂಗಳಿನಿಂದ ಲೋಕವ್ಯಾಪಕವಾಗಿ ವಿತರಿಸಲಾಗುವುದು. ಅಕ್ಟೋಬರ್ ತಿಂಗಳಿನ ಆರಂಭದ 15 ದಿನಗಳ ವರೆಗೆ ನಾವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡಲಿರುವೆವು. ಆದರೆ ಅಕ್ಟೋಬರ್ 16ರ ಸೋಮವಾರದಿಂದ ಆರಂಭಿಸುತ್ತಾ ನವೆಂಬರ್ 12ರ ಭಾನುವಾರದ ವರೆಗೆ, ರಾಜ್ಯ ವಾರ್ತೆ ನಂ. 37ನ್ನು ತೀವ್ರ ಉತ್ಸಾಹದಿಂದ ವಿತರಿಸುವುದರಲ್ಲಿ ನಾವು ಪಾಲ್ಗೊಳ್ಳಲಿದ್ದೇವೆ. ಮತ್ತು ಈ ವಿಶೇಷ ಕಾರ್ಯಾಚರಣೆಯ ವಾರಾಂತ್ಯಗಳಲ್ಲಿ ನಾವದನ್ನು ಪ್ರಸ್ತುತ ಪತ್ರಿಕೆಗಳೊಂದಿಗೆ ನೀಡುವೆವು.
2 ಯಾರು ಪಾಲ್ಗೊಳ್ಳಸಾಧ್ಯವಿದೆ?: ಸುವಾರ್ತೆಯನ್ನು ಸಕ್ರಿಯವಾಗಿ ಸಾರುತ್ತಿರುವವರೆಲ್ಲರೂ ಈ ಕಾರ್ಯಾಚರಣೆಯಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ಬಯಸುವರು. ಕೆಲವರು ಆಕ್ಸಿಲಿಯರಿ ಪಯನೀಯರ್ ಸೇವೆಮಾಡಲು ಶಕ್ತರಾಗಿರುವರು. ಆಧ್ಯಾತ್ಮಿಕವಾಗಿ ಪ್ರಗತಿಯನ್ನು ಮಾಡುತ್ತಿರುವ ಮಕ್ಕಳು ಅಥವಾ ಬೈಬಲ್ ವಿದ್ಯಾರ್ಥಿಗಳು ನಿಮಗಿದ್ದಾರೋ? ಹಾಗಿರುವಲ್ಲಿ, ಅವರು ಅಸ್ನಾತ ಪ್ರಚಾರಕರಾಗಲು ಅರ್ಹರೋ ಎಂಬುದನ್ನು ತಿಳಿದುಕೊಳ್ಳಲು ಹಿರಿಯರನ್ನು ಸಮೀಪಿಸುವಂತೆ ಅವರಿಗೆ ಸಹಾಯಮಾಡಿರಿ. ಅಕ್ರಿಯ ಪ್ರಚಾರಕರೊಂದಿಗೆ ಮಾತಾಡಿ, ಈ ಕಾರ್ಯಾಚರಣೆಯಲ್ಲಿ ಭಾಗವಹಿಸುವಂತೆ—ಪ್ರಾಯಶಃ ನುರಿತ ಪ್ರಚಾರಕರೊಂದಿಗೆ ಕೆಲಸಮಾಡುವಂತೆ—ಅವರನ್ನು ಪ್ರೋತ್ಸಾಹಿಸಲು ಹಿರಿಯರು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳಬೇಕು.
3 ರಾಜ್ಯ ವಾರ್ತೆ ನಂ. 37ನ್ನು, ಪ್ರತಿ ಪ್ರಚಾರಕರು ಮತ್ತು ಪಯನೀಯರರು ಕಡಿಮೆಪಕ್ಷ 50 ಪ್ರತಿಗಳನ್ನು ಪಡೆದುಕೊಳ್ಳಲಾಗುವಂತೆ ಎಲ್ಲ ಸಭೆಗಳಿಗೆ ಅವುಗಳ ಪ್ರಧಾನ ಭಾಷೆಯಲ್ಲಿ ಸರಬರಾಯಿಯನ್ನು ಕಳುಹಿಸಲಾಗುತ್ತದೆ. ಇನ್ನೂ ಪ್ರಚಾರಕರಾಗಿರದ ಆಸಕ್ತ ಜನರು ಸಹ ತಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ನೀಡಲು 5 ಪ್ರತಿಗಳನ್ನು ಪಡೆದುಕೊಳ್ಳಬಹುದು. ಎಲ್ಲರೂ ತಾವು ವಿತರಿಸುವ ರಾಜ್ಯ ವಾರ್ತೆ ನಂ. 37ನ್ನು ಲೆಕ್ಕಿಸಿ, ಆ ಸಂಖ್ಯೆಯನ್ನು ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಕ್ಷೇತ್ರಸೇವಾ ವರದಿಗಳ ಹಿಂಬದಿಯಲ್ಲಿ ಬರೆಯಬೇಕು. ಸೆಕ್ರಿಟರಿ ಸಭೆಯಾಗಿ ವಿತರಿಸಿದ ಪ್ರತಿಗಳ ಒಟ್ಟು ಸಂಖ್ಯೆಯನ್ನು ಆಯಾ ತಿಂಗಳಿನ ಕೊನೆಯಲ್ಲಿ ಬ್ರಾಂಚ್ ಆಫೀಸಿಗೆ ವರದಿಸುವನು. ಈ ಕಾರ್ಯಾಚರಣೆಯ ನಂತರ ಉಳಿಯುವ ರಾಜ್ಯ ವಾರ್ತೆ ಪ್ರತಿಗಳನ್ನು ಸೇವೆಯ ವಿವಿಧ ವೈಶಿಷ್ಟ್ಯಗಳಲ್ಲಿ ಉಪಯೋಗಿಸಬಹುದು.
4 ಏನು ಹೇಳಬೇಕು?: ನಿಮ್ಮ ನಿರೂಪಣೆಯನ್ನು ಸಂಕ್ಷಿಪ್ತವಾಗಿಡಿರಿ. ಇದರಿಂದ ಈ ಸಂದೇಶವನ್ನು ಹೆಚ್ಚು ವಿಸ್ತಾರವಾಗಿ ಪ್ರಕಟಿಸಲು ಸಾಧ್ಯವಾಗುವುದು. ನೀವು ಹೀಗೆ ಹೇಳಬಹುದು: “ನಾನು ಒಂದು ಸಾರ್ವಜನಿಕ ಸೇವೆಯನ್ನು ಮಾಡುತ್ತಿದ್ದೇನೆ. ಲೋಕವ್ಯಾಪಕವಾಗಿ ತಿಳಿಯಪಡಿಸಲಾಗುತ್ತಿರುವ ಈ ಪ್ರಾಮುಖ್ಯ ಸಂದೇಶವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ಪ್ರತಿಯನ್ನು ನಿಮಗೆ ಉಚಿತವಾಗಿ ನೀಡುತ್ತಿದ್ದೇನೆ, ದಯವಿಟ್ಟು ಓದಿರಿ.” ಸಂದೇಶವು ತುಂಬ ಪ್ರಬಲವಾಗಿರುವುದರಿಂದ, ವಿವೇಚನೆಯುಳ್ಳವರಾಗಿದ್ದು ಯಾವುದೇ ವಾದವಿವಾದಗಳಲ್ಲಿ ಸಿಲುಕಿಕೊಳ್ಳದಂತೆ ಜಾಣ್ಮೆಯಿಂದ ನಡೆದುಕೊಳ್ಳಿರಿ. ಕ್ಷೇತ್ರಸೇವೆಯ ಬ್ಯಾಗನ್ನು ತೆಗೆದುಕೊಂಡು ಮನೆಮನೆಗೆ ಹೋಗದೆ ಇರುವುದು ಒಳ್ಳೆಯದು. ಆಸಕ್ತಿ ತೋರಿಸುವವರ ದಾಖಲೆಯನ್ನು ನಿಶ್ಚಯವಾಗಿ ಇಟ್ಟುಕೊಳ್ಳಿರಿ.
5 ನಿಮ್ಮ ಟೆರಿಟೊರಿಯನ್ನು ಆವರಿಸುವ ವಿಧ: ರಾಜ್ಯ ವಾರ್ತೆಯನ್ನು ಬೀದಿ ಸಾಕ್ಷಿಕಾರ್ಯದಲ್ಲಿ ವಿತರಿಸುವ ಬದಲು, ನಿಮ್ಮ ಮನೆಮನೆ ಸೇವೆಯ ಟೆರಿಟೊರಿಯನ್ನು ಮತ್ತು ವ್ಯಾಪಾರದ ಟೆರಿಟೊರಿಯನ್ನು ಸಾಧ್ಯವಾದಷ್ಟು ಆವರಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಜನರು ಉದ್ವೇಗಗೊಂಡು ಸಮಸ್ಯೆಯನ್ನುಂಟುಮಾಡಬಲ್ಲ ಕ್ಷೇತ್ರಗಳನ್ನು ಬಿಟ್ಟುಬಿಡಿರಿ. ಮನೆಯಲ್ಲಿಲ್ಲದವರ ದಾಖಲೆಯನ್ನಿಟ್ಟುಕೊಂಡು ಬೇರೆ ಸಮಯದಲ್ಲಿ ಇಲ್ಲವೆ ವಾರದ ಮತ್ತೊಂದು ದಿನದಲ್ಲಿ ಅವರನ್ನು ಪುನಃ ಭೇಟಿಮಾಡಲು ಪ್ರಯತ್ನಿಸಿ. ನವೆಂಬರ್ 6ರ ಸೋಮವಾರದಿಂದಾರಂಭಿಸಿ, ಮನೆಯಲ್ಲಿಲ್ಲದವರ ಬಾಗಿಲಲ್ಲಿ ಒಂದು ಪ್ರತಿಯನ್ನು ಬಿಟ್ಟುಬರಬಹುದು. ಒಂದುವೇಳೆ, ನೇಮಿತ ಸಮಯದೊಳಗೆ ಸಭೆಯ ಇಡೀ ಟೆರಿಟೊರಿಯನ್ನು ಆವರಿಸಲು ಅಸಾಧ್ಯವಾಗಿರುವಲ್ಲಿ, ಕಾರ್ಯಾಚಾರಣೆಯ ಸಮಯಾವಧಿಯಾದ್ಯಂತ ಮನೆಯಲ್ಲಿಲ್ಲದವರ ಬಾಗಿಲಲ್ಲಿ ರಾಜ್ಯ ವಾರ್ತೆಯನ್ನು ಬಿಟ್ಟುಬರುವಂತೆ ಹಿರಿಯರು ನಿರ್ಧರಿಸಬಹುದು.
6 ‘ಮಹಾ ಬಾಬೆಲಿನ’ ನಾಶನವು ಶೀಘ್ರವಾಗಿ ಸಮೀಪಿಸುತ್ತಿದೆ. ಅವಳು ಸಂಪೂರ್ಣವಾಗಿ ನಾಶವಾಗುವ ಮುಂಚೆ ಜನರು ಅವಳನ್ನು ಬಿಟ್ಟುಬರುವುದು ಅಗತ್ಯ. (ಪ್ರಕ. 14:8; 18:8) ಆದುದರಿಂದ, ಈ ಲೋಕವ್ಯಾಪಕ ಕಾರ್ಯಾಚರಣೆಯಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ಈಗಲೇ ಯೋಜನೆಗಳನ್ನು ಮಾಡಿರಿ. ಹೀಗೆ, ಧರ್ಮದ ಹೆಸರಿನಲ್ಲಿ ನಡೆಯುವ ದುಷ್ಕೃತ್ಯಗಳ ಅಂತ್ಯವು ಸಮೀಪವಿದೆ ಎಂಬುದನ್ನು ಎಲ್ಲರೂ ತಿಳಿಯುವಂತಾಗಲಿ!