ವಿಶೇಷ ಟ್ರ್ಯಾಕ್ಟ್ ಕಾರ್ಯಾಚರಣೆ ನವೆಂಬರ್ 10—ಡಿಸೆಂಬರ್ 7!
1 ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಎಂಬ ಹೊಸ ಟ್ರ್ಯಾಕ್ಟ್ನ ವಿಶೇಷ ವಿತರಣೆಯನ್ನು ನವೆಂಬರ್ 10 ಸೋಮವಾರದಿಂದ ಆರಂಭಿಸಿ ನಾಲ್ಕು ಪೂರ್ಣ ವಾರಗಳಲ್ಲಿ ಮಾಡಲಿರುವೆವು. ಪ್ರಪಂಚದೆಲ್ಲೆಡೆಯಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಾಚರಣೆಯು ಸತ್ಯದ ಒಂದೇ ಉಗಮದೆಡೆಗೆ ಜನರ ಆಸಕ್ತಿಯನ್ನು ಹೆಚ್ಚಿಸುವುದೆಂದು ನಿರೀಕ್ಷಿಸಲಾಗುತ್ತದೆ.—ಯೋಹಾ. 17:17.
2 ಈ ಟ್ರ್ಯಾಕ್ಟ್ ಆರು ಪ್ರಾಮುಖ್ಯ ಪ್ರಶ್ನೆಗಳಿಗೆ ಬೈಬಲಿನ ಸಂಕ್ಷಿಪ್ತ ಉತ್ತರಗಳನ್ನು ನೀಡುತ್ತದೆ. ಅವು ಯಾವುವೆಂದರೆ, “ದೇವರಿಗೆ ನಮ್ಮ ಬಗ್ಗೆ ಚಿಂತೆ ಇದೆಯೇ?” “ಯುದ್ಧ ಮತ್ತು ಕಷ್ಟ ಕೊನೆಗೊಳ್ಳುವವೋ?” “ಸತ್ತ ಮೇಲೆ ನಮಗೆ ಏನಾಗುತ್ತದೆ?” “ಸತ್ತವರನ್ನು ಪುನಃ ನೋಡಲು ಸಾಧ್ಯವಿದೆಯೋ?” “ನಾನು ಹೇಗೆ ಪ್ರಾರ್ಥನೆಮಾಡಿದರೆ ದೇವರು ಕಿವಿಗೊಡುತ್ತಾನೆ?” “ನಾನು ಜೀವನದಲ್ಲಿ ಹೇಗೆ ಸಂತೋಷವಾಗಿರಬಲ್ಲೆ?” ಈ ಪ್ರಶ್ನೆಗಳಿಗೆ ಕ್ರೈಸ್ತ ಪ್ರಪಂಚದ ಚರ್ಚುಗಳು ಎಂದಿಗೂ ತೃಪ್ತಿಕರ ಉತ್ತರವನ್ನು ನೀಡಿಲ್ಲ. ಇಂಥ ಪ್ರಶ್ನೆಗಳ ಬಗ್ಗೆ ಕ್ರೈಸ್ತರಲ್ಲದ ಅನೇಕರು ಸಹ ಯೋಚಿಸಿದ್ದಾರೆ. ಆದರೆ, ಇವಕ್ಕಿರುವ ಸ್ಪಷ್ಟವಾದ ಉತ್ತರವು ಬೈಬಲಿನಲ್ಲಿದೆ ಎಂಬುದು ಅವರಿಗೆ ತಿಳಿದಿಲ್ಲ. ಆದುದರಿಂದ, ಖಂಡಿತವಾಗಿಯೂ ಈ ಟ್ರ್ಯಾಕ್ಟ್ನಲ್ಲಿರುವ ಸಂದೇಶವು ಜನರ ಮನಸ್ಸನ್ನು ಸೂರೆಮಾಡಲೇಬೇಕು.
3 ನಿಮ್ಮ ಟೆರಿಟೊರಿಯನ್ನು ಸಂಪೂರ್ಣವಾಗಿ ಆವರಿಸಿ: ಮನೆಮನೆಯ ಸೇವೆ ಮಾಡುವ ಟೆರಿಟೊರಿಯನ್ನು ಸಾಧ್ಯವಾದಷ್ಟು ಆವರಿಸಲು ಪ್ರಯತ್ನಿಸಿ. ಒಂದು ವೇಳೆ ನಿಮ್ಮ ಟೆರಿಟೊರಿ ತುಂಬಾ ದೊಡ್ಡದಾಗಿರುವುದಾದರೆ, ಆರಂಭದ ಭೇಟಿಯಲ್ಲೇ ಮನೆಯಲ್ಲಿರದವರಿಗಾಗಿ ಒಂದು ಪ್ರತಿಯನ್ನು ಬಿಟ್ಟುಬರುವಂತೆ ನಿಮಗೆ ಹಿರಿಯರು ಹೇಳಬಹುದು. ನಿಮ್ಮ ಪಕ್ಕದಮನೆಯವರಿಗೆ, ಸಂಬಂಧಿಕರಿಗೆ, ಕೆಲಸದಲ್ಲಿ ಅಥವಾ ಶಾಲೆಯಲ್ಲಿ ಪರಿಚಯವಿರುವವರಿಗೆ ಹಾಗೂ ಆಗಾಗ ನೀವು ಭೇಟಿಯಾಗುವವರಿಗೆ ಟ್ರ್ಯಾಕ್ಟ್ ನೀಡಲು ಮರೆಯಬೇಡಿ. ನೀವು ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಮಾಡಲು ಸಹ ಯೋಜಿಸಬಹುದು. ಆಧ್ಯಾತ್ಮಿಕ ಪ್ರಗತಿ ಮಾಡುತ್ತಿರುವ ಮಗನೋ ಮಗಳೋ ಅಥವಾ ಬೈಬಲ್ ವಿದ್ಯಾರ್ಥಿ ನಿಮಗಿದ್ದಾರೋ? ಮತ್ತು ಅವರು ಅಸ್ನಾತ ಪ್ರಚಾರಕರಾಗಿ ಈ ಕಾರ್ಯಾಚರಣೆಯಲ್ಲಿ ನಮ್ಮೊಂದಿಗೆ ಜೊತೆಗೂಡಬಹುದೋ? ಹಾಗಿದ್ದಲ್ಲಿ, ಹಿರಿಯರೊಂದಿಗೆ ಅದರ ಕುರಿತು ಪ್ರಸ್ತಾಪಿಸಿ.
4 ಆಸಕ್ತಿಯನ್ನು ಪತ್ತೆಹಚ್ಚಿ: ಮನೆಯವನೊಂದಿಗೆ ಸ್ನೇಹಪರ ಸಂಭಾಷಣೆಯನ್ನು ಆರಂಭಿಸಿ. ಅವರಿಗೆ ಆಸಕ್ತಿಯಿದೆಯೋ ಎಂಬುದನ್ನು ಕೂಡಲೇ ಪತ್ತೆಹಚ್ಚಿರಿ. ಒಂದು ವೇಳೆ ವ್ಯಕ್ತಿಗೆ ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿಯಿಲ್ಲವೆಂದು ಕಂಡುಬರುವುದಾದರೆ ವಂದನೆ ತಿಳಿಸಿ ಅಲ್ಲಿಂದ ಹೊರಡಿ. ಆಸಕ್ತಿಯಿದೆ ಎಂದು ಕಂಡುಬಂದಲ್ಲಿ ಮಾತ್ರ ಸಂಭಾಷಣೆಯನ್ನು ಮುಂದುವರಿಸಿ.
5 ಏನು ಹೇಳಬೇಕು: ಹೆಚ್ಚಿನ ಜನರಿಗೆ ಸಂದೇಶವನ್ನು ತಲಪಿಸುವ ಸಲುವಾಗಿ ಮನೆಯವರೊಂದಿಗೆ ಚುಟುಕಾಗಿ ಮಾತಾಡಿ ಮುಗಿಸುವುದು ಉತ್ತಮ. ಟ್ರ್ಯಾಕ್ಟ್ನ ಮುಖಪುಟದಲ್ಲಿರುವ ಆರು ಪ್ರಶ್ನೆಗಳಲ್ಲಿ, ಮನೆಯವನಿಗೆ ಸೂಕ್ತವಾಗಿರುವ ಒಂದನ್ನು ಆರಿಸಿಕೊಳ್ಳಿ. ಆ ಪ್ರಶ್ನೆಯನ್ನು ಮನೆಯವನಿಗೆ ಕೇಳಿ, ನಂತರ ಅದರಲ್ಲಿರುವ ಉತ್ತರವನ್ನು ಅವನಿಗೆ ತೋರಿಸಿ. ಇದು ಟೆರಿಟೊರಿಗೆ ತಕ್ಕ ಹಾಗೆ ತಮ್ಮ ನಿರೂಪಣೆಗಳನ್ನು ಹೊಂದಿಸಿಕೊಳ್ಳುವಂತೆ ಪ್ರಚಾರಕರಿಗೆ ಅವಕಾಶ ನೀಡುವುದು. ಯಾರಾದರೂ ಆಸಕ್ತಿ ತೋರಿಸುವಲ್ಲಿ ಅದನ್ನು ಬರೆದಿಟ್ಟು ಮತ್ತೆ ಅವರನ್ನು ಭೇಟಿಮಾಡಿ. ವಾರಾಂತ್ಯಗಳಲ್ಲಿ ಟ್ರ್ಯಾಕ್ಟ್ನೊಂದಿಗೆ ಪ್ರಚಲಿತ ಪತ್ರಿಕೆಗಳನ್ನು ನೀಡಬಹುದು. ಡಿಸೆಂಬರ್ 7ರಂದು ಕಾರ್ಯಾಚರಣೆ ಮುಗಿದ ನಂತರ ನಾವು ಮಹಾನ್ ಪುರುಷ ಪುಸ್ತಕವನ್ನು ನೀಡುವೆವು. ಮಿಕ್ಕ ಟ್ರ್ಯಾಕ್ಟ್ಗಳನ್ನು ಇತರ ಟ್ರ್ಯಾಕ್ಟ್ಗಳಂತೆ ಉಪಯೋಗಿಸಲಾಗುವುದು.
6 ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಿ: ಬೈಬಲ್ ಅಧ್ಯಯನಗಳನ್ನು ಆರಂಭಿಸಲು ನಮಗೆ ಸಹಾಯವಾಗುವಂತೆ ಈ ಟ್ರ್ಯಾಕ್ಟ್ ಅನ್ನು ಸಿದ್ಧಪಡಿಸಲಾಗಿದೆ. ಆಸಕ್ತಿ ತೋರಿಸಿದ ವ್ಯಕ್ತಿಯನ್ನು ಪುನರ್ಭೇಟಿಮಾಡುವಾಗ, ಬೈಬಲಿನ ಯಾವ ಸತ್ಯವು ಅವನಿಗೆ ಸಮಾಧಾನ ಅಥವಾ ಸಾಂತ್ವನ ನೀಡಿತು ಎಂದು ನೀವು ಕೇಳಬಹುದು. ಬಳಿಕ, ನಮ್ಮ ಬೈಬಲ್ ಅಧ್ಯಯನದ ಕುರಿತು ಟ್ರ್ಯಾಕ್ಟ್ನ ಕೊನೆಯ ಪುಟದಲ್ಲಿರುವ ವಿಷಯಕ್ಕೆ ಗಮನ ಸೆಳೆಯಿರಿ ಮತ್ತು ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ನೀಡಿ. ಸಾಧ್ಯವಾಗುವಲ್ಲಿ, ಆ ವ್ಯಕ್ತಿ ಇಷ್ಟಪಟ್ಟ ವಿಷಯದ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸುವ ಅಧ್ಯಾಯದಿಂದ ಒಂದೆರಡು ಪ್ಯಾರಗ್ರಾಫ್ಗಳನ್ನು ಚರ್ಚಿಸಿ.
7 ತನ್ನನ್ನು “ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ” ಆರಾಧಿಸುವ ಜನರಿಗಾಗಿ ಯೆಹೋವನು ಹುಡುಕುತ್ತಿದ್ದಾನೆ. (ಯೋಹಾ. 4:23) ಜನರು ಸತ್ಯವನ್ನು ತಿಳಿದುಕೊಳ್ಳುವಂತೆ ನೆರವಾಗಲು ನಾವೆಲ್ಲರೂ ಈ ವಿಶೇಷ ಕಾರ್ಯಾಚರಣೆಯಲ್ಲಿ ಕೈಜೋಡಿಸೋಣ!