ಸಾರುವ ಕೆಲಸ ಮಾಡಲು ಯೆಹೋವನು ಕೊಡುವ ತರಬೇತಿ
1. ಯೆಹೋವನು ಮಾನವರಿಗೆ ಒಂದು ಕೆಲಸವನ್ನು ಕೊಡುವಾಗ ಇನ್ನೇನು ಮಾಡುತ್ತಾನೆ?
1 ಯೆಹೋವನು ಮಾನವರಿಗೆ ಒಂದು ಕೆಲಸವನ್ನು ಕೊಡುವಾಗ, ಅದನ್ನು ಪೂರೈಸಲಿಕ್ಕಾಗಿ ಅಗತ್ಯವಿರುವ ಸಹಾಯವನ್ನೂ ಕೊಡುತ್ತಾನೆ. ಉದಾಹರಣೆಗೆ ನೋಹನು ಹಿಂದೆಂದೂ ಮಾಡಿರದಿದ್ದ ಕೆಲಸ ಅಂದರೆ ನಾವೆ ಕಟ್ಟುವ ಕೆಲಸವನ್ನು ಮಾಡಲು ಯೆಹೋವನು ಹೇಳಿದಾಗ ಅದನ್ನು ಹೇಗೆ ಕಟ್ಟಬೇಕೆಂದೂ ಹೇಳಿಕೊಟ್ಟನು. (ಆದಿ. 6:14-16) ಇಸ್ರಾಯೇಲ್ಯರ ಹಿರೀಪುರುಷರ ಮತ್ತು ಫರೋಹನ ಬಳಿ ಹೋಗುವಂತೆ ದೀನಭಾವದ ಕುರುಬ ಮೋಶೆಯನ್ನು ಯೆಹೋವನು ನೇಮಿಸಿದನು. ಆಗ ಅವನಿಗೆ, “ನಾನು ನಿನ್ನ ಬಾಯಿಗೆ ಸಹಾಯವಾಗಿದ್ದು ನೀನು ಮಾತಾಡಬೇಕಾದದ್ದನ್ನು ಬೋಧಿಸುವೆನು” ಎಂದು ಧೈರ್ಯತುಂಬಿಸಿದನು. (ವಿಮೋ. 4:12) ಸುವಾರ್ತೆ ಸಾರುವ ನಮ್ಮ ಕೆಲಸದ ವಿಷಯದಲ್ಲೂ ಯೆಹೋವನು ಇದನ್ನು ಮಾಡಿದ್ದಾನೆ. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಮತ್ತು ಸೇವಾ ಕೂಟದ ಮೂಲಕ ಆತನು ನಮ್ಮನ್ನು ಈ ಕೆಲಸಕ್ಕಾಗಿ ತರಬೇತುಗೊಳಿಸುತ್ತಿದ್ದಾನೆ. ಈ ತರಬೇತಿಯಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?
2. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಿಂದ ಹೇಗೆ ಪ್ರಯೋಜನ ಪಡೆಯಬಲ್ಲೆವು?
2 ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ: ಈ ಕೂಟಕ್ಕೆ ಹೋಗುವ ಮುಂಚೆ, ಶೆಡ್ಯೂಲ್ನಲ್ಲಿರುವ ವಿಷಯಭಾಗವನ್ನು ಓದಿ, ಅಧ್ಯಯನಮಾಡಿ. ಕೂಟದಲ್ಲಿ ವಿದ್ಯಾರ್ಥಿಗಳು ಈ ಮಾಹಿತಿಯನ್ನು ತಮ್ಮ ಭಾಷಣದಲ್ಲಿ ಬಳಸುವ ರೀತಿಯನ್ನು ನೋಡುವಾಗ, ಬೋಧಿಸುವುದು ಹೇಗೆಂಬುದರ ಬಗ್ಗೆ ನಿಮ್ಮ ತಿಳುವಳಿಕೆ ಹೆಚ್ಚುವುದು. (ಜ್ಞಾನೋ. 27:17) ನಿಮ್ಮ ಶುಶ್ರೂಷಾ ಶಾಲೆ ಪುಸ್ತಕವನ್ನು ಕೂಟಕ್ಕೆ ತನ್ನಿ. ಅದನ್ನು ಟಿಪ್ಪಣಿ ಪುಸ್ತಕದಂತೆ ಬಳಸಿರಿ. ಪ್ರತಿ ವಿದ್ಯಾರ್ಥಿ ಭಾಷಣದ ನಂತರ ಶಾಲಾ ಮೇಲ್ವಿಚಾರಕನು ಈ ಪುಸ್ತಕದಿಂದ ಏನಾದರೂ ಹೇಳುವಾಗ, ನೀವು ಅನ್ವಯಿಸಲು ಇಚ್ಛಿಸುವ ಮುಖ್ಯ ಅಂಶಗಳಿಗೆ ಅಡಿಗೆರೆ ಹಾಕಿ, ಪುಟದ ಅಂಚುಗಳಲ್ಲಿ ಟಿಪ್ಪಣಿ ಬರೆಯಿರಿ. ಈ ಶಾಲೆಯಿಂದ ಪ್ರಯೋಜನ ಪಡೆಯುವ ಅತ್ಯುತ್ತಮ ವಿಧಾನವು ಅದರಲ್ಲಿ ಭಾಗಿಗಳಾಗುವುದೇ. ನೀವು ಈ ಶಾಲೆಗೆ ದಾಖಲಾಗಿದ್ದೀರೊ? ನಿಮಗೆ ಭಾಷಣದ ನೇಮಕ ಸಿಕ್ಕಿದಾಗ, ಚೆನ್ನಾಗಿ ತಯಾರಿಸಿ, ನಿಮಗೆ ಕೊಡಲಾಗಿರುವ ಸಲಹೆಯನ್ನು ಅನ್ವಯಿಸಿಕೊಳ್ಳಿ. ಈ ಶಾಲೆಯಲ್ಲಿ ಕಲಿತದ್ದನ್ನು ಶುಶ್ರೂಷೆಯಲ್ಲಿ ಬಳಸಿರಿ.
3. ಸೇವಾ ಕೂಟದಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?
3 ಸೇವಾ ಕೂಟ: ವಿಷಯಭಾಗವನ್ನು ಮುಂಚೆಯೇ ಓದಿಬಂದರೆ ಮತ್ತು ಹೇಳಿಕೆಗಳನ್ನು ಕೊಡಲು ತಯಾರಿಸಿದರೆ ಈ ಕೂಟದಲ್ಲಿ ಕೊಡಲಾಗುವ ಸಲಹೆಗಳನ್ನು ಚೆನ್ನಾಗಿ ನೆನಪಿನಲ್ಲಿಡಲು ಸಾಧ್ಯವಾಗುವುದು. ನಾವು ಚುಟುಕಾದ ಹೇಳಿಕೆಗಳನ್ನು ಕೊಟ್ಟರೆ, ಹೆಚ್ಚು ಮಂದಿ ಹೇಳಿಕೆ ಕೊಡಲು ಶಕ್ತರಾಗುವರು. ಪ್ರತ್ಯಕ್ಷಾಭಿನಯಗಳಿಗೆ ನಿಕಟ ಗಮನಕೊಡಿರಿ. ನಿಮ್ಮ ಶುಶ್ರೂಷೆಯನ್ನು ಇನ್ನಷ್ಟು ಪರಿಣಾಮಕಾರಿ ಮಾಡುವುದೆಂದು ನಿಮಗನಿಸುವ ಯಾವುದೇ ಸಲಹೆಗಳನ್ನು ಅನ್ವಯಿಸಿ. ನಮ್ಮ ರಾಜ್ಯ ಸೇವೆಯ ಮುಖ್ಯ ಲೇಖನಗಳ ಪ್ರತಿಯನ್ನು ಮುಂದೆಂದಾದರೂ ಬಳಸಲಿಕ್ಕಾಗಿ ಜೋಪಾನವಾಗಿಡಿ.
4. ನಾವು ದೇವಪ್ರಭುತ್ವಾತ್ಮಕ ತರಬೇತಿಯ ಸದ್ಬಳಕೆ ಮಾಡಬೇಕು ಏಕೆ?
4 ನೋಹ ಮತ್ತು ಮೋಶೆಗೆ ಕೊಡಲಾದ ನೇಮಕಗಳಂತೆ, ಇಡೀ ಲೋಕದಲ್ಲಿ ಸುವಾರ್ತೆ ಸಾರುವ ನಮ್ಮ ನೇಮಕವೂ ಒಂದು ಪಂಥಾಹ್ವಾನ. (ಮತ್ತಾ. 24:14) ಆದುದರಿಂದ ನಮ್ಮ ಮಹೋನ್ನತ ಬೋಧಕನಾದ ಯೆಹೋವನ ಮೇಲೆ ಅವಲಂಬಿಸಿ, ಆತನು ಕೊಡುವ ತರಬೇತಿಯ ಸದ್ಬಳಕೆ ಮಾಡಿದರೆ ಈ ಕೆಲಸದಲ್ಲಿ ಯಶಸ್ವಿಗಳಾಗುವೆವು.—ಯೆಶಾ. 30:20.