ಸಿಹಿಸುದ್ದಿ ಕಿರುಹೊತ್ತಗೆಯಿಂದ ಕಲಿಸಿರಿ
1. ಸಿಹಿಸುದ್ದಿ ಕಿರುಹೊತ್ತಗೆಯನ್ನು ಯಾವ ರೀತಿ ವಿನ್ಯಾಸಿಸಲಾಗಿದೆ?
1 ಜುಲೈ ತಿಂಗಳ ನಮ್ಮ ರಾಜ್ಯ ಸೇವೆಯಲ್ಲಿ ಕಲಿತಂತೆ, ನಮಗೆ ಅನೇಕ ಬೋಧನಾ ಸಲಕರಣೆಗಳಿವೆ. ಅವುಗಳಲ್ಲಿ ಒಂದು ಮುಖ್ಯ ಸಲಕರಣೆ ದೇವರಿಂದ ನಿಮಗೊಂದು ಸಿಹಿಸುದ್ದಿ! ಕಿರುಹೊತ್ತಗೆ. ಮನೆಯವರು ವಚನಗಳನ್ನು ಬೈಬಲಿನಿಂದಲೇ ಓದಬೇಕೆಂಬ ಉದ್ದೇಶದಿಂದ ಈ ಕಿರುಹೊತ್ತಗೆಯಲ್ಲಿ ಕೊಡಲಾಗಿರುವ ವಚನಗಳಲ್ಲಿ ಏನಿದೆ ಎಂದು ಅಲ್ಲೇ ತಿಳಿಸಲಾಗಿಲ್ಲ. ಬೈಬಲ್ ಅಧ್ಯಯನಕ್ಕೆಂದು ಇರುವ ಇತರ ಸಾಹಿತ್ಯಗಳನ್ನು ಸ್ವತಃ ಮನೆಯವರೇ ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯ. ಆದರೆ ಈ ಕಿರುಹೊತ್ತಗೆಯನ್ನು ಒಬ್ಬ ವ್ಯಕ್ತಿ ಹೇಳಿಕೊಟ್ಟರೆ ಮಾತ್ರ ಅರ್ಥಮಾಡಿಕೊಳ್ಳುವಂಥ ರೀತಿಯಲ್ಲಿ ವಿನ್ಯಾಸಿಸಲಾಗಿದೆ. ಆದ್ದರಿಂದ ಇದನ್ನು ನೀವು ಕೊಡುವಾಗೆಲ್ಲಾ ಬೈಬಲ್ ಅಧ್ಯಯನ ಹೇಗೆ ಮಾಡುತ್ತೀರೆಂದು ತೋರಿಸಿ. ಹೀಗೆ ಮಾಡಿದರೆ, ಬೈಬಲಿನಿಂದ ಸಿಹಿಸುದ್ದಿಯನ್ನು ಕಲಿಯುವಾಗ ಎಷ್ಟು ಆನಂದ ಸಿಗುತ್ತದೆ ಅಂತ ಮನೆಯವರು ತಿಳಿದುಕೊಳ್ಳುತ್ತಾರೆ.—ಮತ್ತಾ. 13:44.
2. ಮೊದಲ ಭೇಟಿಯಲ್ಲಿ ಸಿಹಿಸುದ್ದಿ ಕಿರುಹೊತ್ತಗೆಯನ್ನು ಹೇಗೆ ಉಪಯೋಗಿಸಬಹುದು?
2 ಮೊದಲ ಭೇಟಿಯಲ್ಲಿ: ನೀವು ಹೀಗೆ ಮಾತಾಡಬಹುದು: “ಇವತ್ತು ನಮ್ಮ ಸುತ್ತಮುತ್ತ ನಡೆಯುತ್ತಿರುವ ಪರಿಸ್ಥಿತಿ ನೋಡಿ ಜನರು ಮುಂದೇನಾಗುತ್ತೋ ಅಂತ ಭಯಪಡುತ್ತಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಬಹುದಾ? [ಉತ್ತರಕ್ಕಾಗಿ ಕಾಯಿರಿ.] ಸಮಸ್ಯೆಗಳಿಗೆ ಹೇಗೆ ಪರಿಹಾರ ಸಿಗುತ್ತೆ ಅಂತ ನಮ್ಮ ಸೃಷ್ಟಿಕರ್ತ ಮಾತ್ರ ಹೇಳಲು ಸಾಧ್ಯ. ಈ ಕಿರುಹೊತ್ತಗೆ ನಾನು ಈಗ ಕೇಳಿದ ಪ್ರಶ್ನೆಗೆ ಮತ್ತು ಇನ್ನೂ ಅನೇಕ ಪ್ರಶ್ನೆಗಳಿಗೆ ಭರವಸಾರ್ಹ ಉತ್ತರ ಕೊಡುತ್ತದೆ.” ಮನೆಯವರಿಗೆ ಕಿರುಹೊತ್ತಗೆಯನ್ನು ಕೊಟ್ಟು ಅದರ ಕೊನೆಯ ಪುಟದಲ್ಲಿರುವ ಒಂದು ಪ್ರಶ್ನೆಯನ್ನು ಆರಿಸುವಂತೆ ತಿಳಿಸಿ. ಅವರು ಆರಿಸಿದ ಪಾಠದ ಮೊದಲನೇ ಪ್ಯಾರವನ್ನು ಉಪಯೋಗಿಸಿ ಬೈಬಲ್ ಅಧ್ಯಯನ ಹೇಗೆ ಮಾಡುತ್ತೀರೆಂದು ತೋರಿಸಿ. ಹೀಗೂ ಮಾಡಬಹುದು: ನೀವೇ ಒಂದು ಪಾಠವನ್ನು ಆರಿಸಿ ಅದನ್ನಾಧರಿಸಿದ ಒಂದು ಆಸಕ್ತಿಕರ ಪ್ರಶ್ನೆಯನ್ನು ಮನೆಯವರಿಗೆ ಕೇಳಿ. ನಂತರ, ಆ ಪ್ರಶ್ನೆಗೆ ದೇವರ ವಾಕ್ಯ ಕೊಡುವ ಉತ್ತರವನ್ನು ಈ ಕಿರುಹೊತ್ತಗೆಯಿಂದ ಹೇಗೆ ಪಡೆಯಬಹುದೆಂದು ತೋರಿಸಿ. ಕೆಲವು ಪ್ರಚಾರಕರು ತಾವು ಚರ್ಚಿಸುತ್ತಿರುವ ಪಾಠಕ್ಕೆ ಸಂಬಂಧಿಸಿದ ವಿಡಿಯೋ jw.orgನಲ್ಲಿ ಇರುವುದಾದರೆ ಮನೆಯವರಿಗೆ ಅದನ್ನು ತೋರಿಸುತ್ತಾರೆ.
3. ಸಿಹಿಸುದ್ದಿ ಕಿರುಹೊತ್ತಗೆಯಿಂದ ಬೈಬಲ್ ಅಧ್ಯಯನ ಹೇಗೆ ಮಾಡುವುದೆಂದು ವಿವರಿಸಿ.
3 ಬೈಬಲ್ ಅಧ್ಯಯನ ಹೇಗೆ ಮಾಡುವುದು?: (1) ಪ್ಯಾರ ಆರಂಭದಲ್ಲಿರುವ ದಪ್ಪಕ್ಷರದ ಪ್ರಶ್ನೆಗಳನ್ನು ಓದಿ. ಇದರಿಂದ ಮನೆಯವರು ಮುಖ್ಯವಿಷಯಕ್ಕೆ ಗಮನ ಕೊಡಲು ಸಾಧ್ಯವಾಗುತ್ತದೆ. (2) ಪ್ರಶ್ನೆಯ ಕೆಳಗಿರುವ ಪ್ಯಾರವನ್ನು ಓದಿ. (3) ದಪ್ಪಕ್ಷರದಲ್ಲಿ ಕೊಡಲಾಗಿರುವ ವಚನಗಳನ್ನು ಓದಿ. ಆರಂಭದಲ್ಲಿ ಓದಿದ ಪ್ರಶ್ನೆಗೆ ಈ ವಚನಗಳಿಂದ ಉತ್ತರವನ್ನು ಹೇಗೆ ಪಡೆಯುವುದೆಂದು ಮನೆಯವರು ಗ್ರಹಿಸಲು ಸಾಧ್ಯವಾಗುವಂತೆ ಜಾಣ್ಮೆಯಿಂದ ಪ್ರಶ್ನೆ ಕೇಳಿ. (4) ಪ್ರಶ್ನೆಯ ಕೆಳಗೆ ಇನ್ನೂ ಒಂದು ಪ್ಯಾರ ಇರುವುದಾದರೆ 2 ಮತ್ತು 3ನೇ ಹೆಜ್ಜೆಯನ್ನು ಪುನರಾವರ್ತಿಸಿ. ಆ ಪ್ರಶ್ನೆಗೆ ಸಂಬಂಧಿಸಿದ ವಿಡಿಯೋ ಇದ್ದು, ಅದನ್ನು ಇಲ್ಲಿಯವರೆಗೆ ನೀವು ಮನೆಯವರಿಗೆ ತೋರಿಸದೇ ಇರುವುದಾದರೆ ಅದನ್ನೀಗ ತೋರಿಸಿ. (5) ಮನೆಯವರಿಗೆ ವಿಷಯ ಅರ್ಥವಾಗಿದೆಯಾ ಎಂದು ತಿಳಿಯಲು ಆರಂಭದಲ್ಲಿ ಓದಿದ ಪ್ರಶ್ನೆಯನ್ನು ಅವರಿಗೆ ಕೇಳಿ.
4. ಈ ಅಮೂಲ್ಯ ಸಲಕರಣೆ ಉಪಯೋಗಿಸುವುದರಲ್ಲಿ ನಿಪುಣರಾಗಲು ಯಾವುದು ಸಹಾಯ ಮಾಡುತ್ತದೆ?
4 ಈ ಅಮೂಲ್ಯ ಸಲಕರಣೆಯಲ್ಲಿ ಏನೇನಿದೆ ಎಂದು ಚೆನ್ನಾಗಿ ತಿಳಿದುಕೊಳ್ಳಿ. ಸೂಕ್ತವಾಗಿರುವ ಪ್ರತಿ ಸಂದರ್ಭದಲ್ಲೂ ಇದನ್ನು ಉಪಯೋಗಿಸಿ. ಪ್ರತಿಯೊಂದು ಬೈಬಲ್ ಅಧ್ಯಯನಕ್ಕೆ ಹೋಗುವ ಮುಂಚೆ, ವಿದ್ಯಾರ್ಥಿಯನ್ನು ಮನಸ್ಸಿನಲ್ಲಿಟ್ಟು ತಯಾರಿಸಿ. ಪಾಠದಲ್ಲಿ ಕೊಡಲಾಗಿರುವ ವಚನಗಳನ್ನು ಉಪಯೋಗಿಸಿ, ವಿಷಯವನ್ನು ಅವರಿಗೆ ಹೇಗೆ ಮನದಟ್ಟು ಮಾಡುವುದು ಎಂದು ಯೋಚಿಸಿ. (ಜ್ಞಾನೋ. 15:28; ಅ. ಕಾ. 17:2, 3) ಹೀಗೆ, ನೀವು ಈ ಕಿರುಹೊತ್ತಗೆಯನ್ನು ಉಪಯೋಗಿಸುತ್ತಾ ಹೋದಂತೆ ನಿಪುಣರಾಗುವಿರಿ. ಜೊತೆಗೆ, ಜನರಿಗೆ ಸತ್ಯ ಕಲಿಸಲು ಇರುವ ಈ ಸಲಕರಣೆಯು ನಿಮಗೆ ಅಚ್ಚುಮೆಚ್ಚಿನದ್ದಾಗಬಹುದು.