ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಅನೌಪಚಾರಿಕವಾಗಿ ಸಾಕ್ಷಿ ನೀಡಲು ಮೊದಲ ಹೆಜ್ಜೆ ತೆಗೆದುಕೊಳ್ಳಿ
ಏಕೆ ಪ್ರಾಮುಖ್ಯ: ಮನೆ-ಮನೆ ಸೇವೆ ಮಾಡುವಾಗ ಎಷ್ಟೋ ಸಾರಿ ಮನೆಗಳಲ್ಲಿ ಯಾರೂ ಸಿಗುವುದಿಲ್ಲ. ಅಂಥ ಜನರು ನಮಗೆ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಸುವಾಗ, ವೈದ್ಯರನ್ನು ಭೇಟಿಯಾಗಲು ಕಾಯುವಾಗ, ಶಾಲೆ ಅಥವಾ ಕೆಲಸದ ವಿರಾಮ ಸಮಯದಲ್ಲಿ ಸಿಗಬಹುದು. ಎಲ್ಲರೂ ತನ್ನ ರಾಜ್ಯದ ಕುರಿತು ತಿಳಿದುಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ. (1 ತಿಮೊ. 2:3, 4) ಆದ್ದರಿಂದ ಎಲ್ಲರಿಗೂ ಸಾಕ್ಷಿ ನೀಡಬೇಕೆಂದರೆ ಸಂಭಾಷಣೆಯನ್ನು ಆರಂಭಿಸಲು ನಾವೇ ಮೊದಲ ಹೆಜ್ಜೆ ತೆಗೆದುಕೊಳ್ಳಬೇಕು.
ಹೇಗೆ ಮಾಡುವುದು:
• ಯಾರ ಜೊತೆ ಮಾತಾಡಿದರೆ ಚೆನ್ನಾಗಿರುತ್ತದೆ, ಯಾರು ಚೆನ್ನಾಗಿ ಕೇಳಿಸಿಕೊಳ್ಳಬಹುದು ಎಂದು ಯೋಚಿಸಿ ಅಂಥವರೊಂದಿಗೆ ಮಾತಾಡಿ. ಜೊತೆಗೆ, ಸಂಭಾಷಣೆಯನ್ನು ಆರಂಭಿಸಲು ಇದು ಸೂಕ್ತ ಸಮಯವೋ ಎಂದು ಯೋಚಿಸಿ. ಕೆಲವು ಪ್ರಚಾರಕರು ಮೊದಲು ವ್ಯಕ್ತಿಯ ಮುಖ ನೋಡಿ ಮುಗುಳ್ನಗೆ ಬೀರುತ್ತಾರೆ. ಅದಕ್ಕೆ ಪ್ರತಿಯಾಗಿ ಆ ವ್ಯಕ್ತಿ ಸಹ ನಗುವುದಾದರೆ, ಆಗ ಸಂಭಾಷಣೆ ಆರಂಭಿಸುತ್ತಾರೆ.
• ಮಾತಾಡಲು ಧೈರ್ಯ ಸಾಲದಿದ್ದರೆ ಮನಸ್ಸಿನಲ್ಲೇ ಒಂದು ಚಿಕ್ಕ ಪ್ರಾರ್ಥನೆ ಮಾಡಿ.—ನೆಹೆ. 2:4; ಅ. ಕಾ. 4:29.
• ಒಂದು ಸಾಮಾನ್ಯ ವಿಷಯದ ಬಗ್ಗೆ ಮಾತಾಡುತ್ತಾ ಅಥವಾ ವಂದಿಸುತ್ತಾ ಸಂಭಾಷಣೆಯನ್ನು ಆರಂಭಿಸಿ. ಯೇಸು ಸಮಾರ್ಯದ ಸ್ತ್ರೀಯೊಂದಿಗೆ ಮಾತಾಡುವಾಗ, ಆರಂಭದಲ್ಲೇ ದೇವರ ರಾಜ್ಯದ ಕುರಿತು ತಿಳಿಸಲಿಲ್ಲ. (ಯೋಹಾ. 4:7) “ನಿಮ್ಮ ಮಕ್ಕಳನ್ನು ಎಷ್ಟು ಚೆನ್ನಾಗಿ ಬೆಳೆಸಿದ್ದೀರಿ!” ಎಂಬಂಥ ಮೆಚ್ಚುಗೆಯ ಮಾತನ್ನಾಡುವ ಮೂಲಕ ಸಂಭಾಷಣೆಯನ್ನು ಆರಂಭಿಸಬಹುದು. ಪ್ರಶ್ನೆಯನ್ನು ಕೇಳಿ ಸಹ ಸಂಭಾಷಣೆಯನ್ನು ಆರಂಭಿಸಬಹುದು. ಉದಾಹರಣೆಗೆ, “ನಿನ್ನೆ ನ್ಯೂಸ್ ನೋಡಿದ್ರಾ?” ಎಂದು ಕೇಳಿ.
• ಸಂಭಾಷಣೆಯನ್ನು ಆರಂಭಿಸಿದ ಕೂಡಲೇ ದೇವರ ರಾಜ್ಯದ ಬಗ್ಗೆ ಹೇಳಿಬಿಡಬೇಡಿ. ಅದರ ಕುರಿತು ತಿಳಿಸಲು ಸರಿಯಾದ ಅವಕಾಶಕ್ಕಾಗಿ ಕಾಯಿರಿ. ನಿಮ್ಮ ಸಂಭಾಷಣೆ ಸ್ವಾಭಾವಿಕವಾಗಿರಲಿ. ನೀವು ಹೇಳುವ ವಿಷಯ ಆ ವ್ಯಕ್ತಿಯ ಕುತೂಹಲ ಕೆರಳಿಸಿ, ಅವನೇ ನಿಮ್ಮಲ್ಲಿ ಪ್ರಶ್ನೆ ಕೇಳುವಂತಿರಬೇಕು. ಉದಾಹರಣೆಗೆ, ನೀವು ಕುಟುಂಬದ ಬಗ್ಗೆ ಮಾತಾಡುತ್ತಿದ್ದರೆ, “ಮಕ್ಕಳನ್ನು ಬೆಳೆಸುವುದರ ಬಗ್ಗೆ ಇರುವ ಉತ್ತಮ ಸಲಹೆಗಳನ್ನು ನಾನು ಓದಿದ್ದೇನೆ” ಎಂದು ಹೇಳಬಹುದು. ವಾರ್ತೆಯಲ್ಲಿ ಬಂದ ಯಾವುದೋ ಒಂದು ವಿಷಯದ ಕುರಿತು ಚರ್ಚಿಸುತ್ತಿರುವುದಾದರೆ, “ಅಪರೂಪವಾಗಿರುವ ಒಂದು ಒಳ್ಳೇ ಸುದ್ದಿಯನ್ನು ಇತ್ತೀಚಿಗೆ ಓದಿದೆ” ಎಂದು ಹೇಳಬಹುದು. ಸಾಕ್ಷಿನೀಡುವ ಮೊದಲೇ ಅಥವಾ ಅರ್ಧದಲ್ಲೇ ಸಂಭಾಷಣೆ ನಿಂತುಹೋದರೆ ನಿರುತ್ತೇಜನಗೊಳ್ಳಬೇಡಿ.
• ಜಾಣ್ಮೆ ಮತ್ತು ವಿವೇಚನೆ ತೋರಿಸಿ. ನಿಮ್ಮ ಮಾತು, ನೀವು ಹೇಳುವುದನ್ನೇ ಆ ವ್ಯಕ್ತಿ ಒಪ್ಪಿಕೊಳ್ಳುವಂತೆ ಒತ್ತಾಯಿಸುವ ಹಾಗಿರಬಾರದು. ಬೈಬಲ್ ವಿಷಯವನ್ನು ಹೇಳುವ ಮುಂಚೆ ಆ ವ್ಯಕ್ತಿಗೆ ಅದರ ಬಗ್ಗೆ ಆಸಕ್ತಿ ಇದೆಯಾ ಎಂದು ತಿಳಿದುಕೊಳ್ಳಲು ವಿವೇಚನೆಯಿಂದ ಪ್ರಶ್ನೆ ಕೇಳಿ.
• ಆಸಕ್ತರಿಗೆ ಕೊಡಲು ಕರಪತ್ರ ಅಥವಾ ಇತರ ಸಾಹಿತ್ಯಗಳನ್ನು ತೆಗೆದುಕೊಂಡು ಹೋಗಿ.
ಈ ತಿಂಗಳು ಇದನ್ನು ಮಾಡಲು ಪ್ರಯತ್ನಿಸಿ:
• ಅನೌಪಚಾರಿಕವಾಗಿ ಸಾಕ್ಷಿನೀಡುವ ಸಲುವಾಗಿ ಪ್ರತಿವಾರ ಕಡಿಮೆಪಕ್ಷ ಒಬ್ಬರೊಂದಿಗೆ ಸಂಭಾಷಣೆ ಆರಂಭಿಸಲು ಪ್ರಯತ್ನಿಸಿ.