ದೇವರು ಅಪೇಕ್ಷಿಸುವುದನ್ನು ಇತರರಿಗೆ ಕಲಿಸಿರಿ
1 “ಯೆಹೋವನ ಮಾತುಗಳನ್ನು ಕೇಳುವುದರಿಂದ” ಆತ್ಮಿಕವಾಗಿ ವಂಚಿತರಾಗಿರುವ ಅನೇಕ ಜನರನ್ನು ಈಗಲೂ ಕಂಡುಕೊಳ್ಳಸಾಧ್ಯವಿದೆ. (ಆಮೋಸ 8:11) ದೇವರು ಅಸ್ತಿತ್ವದಲ್ಲಿದ್ದಾನೆಂದು ಕೆಲವರು ನಂಬುವುದಾದರೂ, ಅವರಿಗೆ ಆತನ ಉದ್ದೇಶ ಮತ್ತು ಆವಶ್ಯಕತೆಗಳ ಕುರಿತಾದ ಅರಿವಿರುವುದಿಲ್ಲ. ಆದುದರಿಂದ, ನಾವು ಅವರಿಗೆ ಜೀವರಕ್ಷಕ ರಾಜ್ಯ ಸತ್ಯವನ್ನು ಕಲಿಸುವ ಅಗತ್ಯವಿದೆ. ಪ್ರತಿಯೊಂದು ಸಂದರ್ಭದಲ್ಲಿ ಸಾಕ್ಷಿನೀಡಲು ಯೋಗ್ಯವಾಗಿ ಸಜ್ಜಿತರೂ ಸಿದ್ಧರೂ ಆಗಿರುವ ಮೂಲಕ, ಯೆಹೋವನು ಏನನ್ನು ಅಪೇಕ್ಷಿಸುತ್ತಾನೊ ಅದನ್ನು ಕಲಿಯಲು ಬಯಸುವವರನ್ನು ನಾವು ತಲಪಸಾಧ್ಯವಿದೆ.
2 ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ, ವಿತರಿಸಲಿಕ್ಕಾಗಿ ಮತ್ತು ಚಂದಾಗಳನ್ನು ನೀಡುವಾಗ ಉಪಯೋಗಿಸಲಿಕ್ಕಾಗಿ ನಮ್ಮಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಹಳ ಸಮಯೋಚಿತವಾದ ಸಂಚಿಕೆಗಳಿರುವವು. ಇದಕ್ಕೆ ಕೂಡಿಸಿ, ಪ್ರಪ್ರಥಮ ಬಾರಿ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರನ್ನು ನಾವು ನೀಡುವೆವು. ಅದರ ಕಣ್ಸೆಳೆಯುವ ಚಿತ್ರಗಳು ಮತ್ತು ವಿಚಾರಪ್ರೇರಕ ಪ್ರಶ್ನೆಗಳು, ಈ ಬ್ರೋಷರಿಗೆ ವ್ಯಾಪಕವಾದ ಆಕರ್ಷಣೆಯನ್ನು ನೀಡುತ್ತವೆ. ನಮ್ಮ ಅತ್ಯುತ್ಕೃಷ್ಟ ಪ್ರಕಾಶನಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವಂತೆ ನಮಗೆ ಸಹಾಯ ಮಾಡಲು ಈ ಮುಂದಿನ ಸಲಹೆಗಳು ನೀಡಲ್ಪಟ್ಟಿವೆ.
3 ಜನರನ್ನು ಹುಡುಕುವುದು: ನಾವು ಮನೆಯಿಂದ ಮನೆಗೆ ಸಂದರ್ಶಿಸುವಾಗ ಅನೇಕ ಜನರು ಮನೆಯಲ್ಲಿರದ ಕ್ಷೇತ್ರಗಳಲ್ಲಿ, ಜನರನ್ನು ಹುಡುಕಿ ಅವರನ್ನು ಕಂಡುಕೊಳ್ಳುವಲ್ಲೆಲ್ಲಾ ಅವರೊಂದಿಗೆ ಮಾತಾಡುವುದು ಉಪಯುಕ್ತವಾಗಿ ಪರಿಣಮಿಸುತ್ತಿದೆ. ನವೆಂಬರ್ 1996ರ ನಮ್ಮ ರಾಜ್ಯದ ಸೇವೆಯ ಪುರವಣಿಯು, ನಾವು ಸುವಾರ್ತೆಯನ್ನು ಎಲ್ಲೆಡೆಯೂ—ಬೀದಿಯಲ್ಲಿ, ಸಾರ್ವಜನಿಕ ಸಾರಿಗೆಯಲ್ಲಿ, ಮತ್ತು ಉದ್ಯಾನವನಗಳಲ್ಲಿ, ವಾಹನನಿಲ್ಲಿಸುವ ಸ್ಥಳಗಳಲ್ಲಿ, ಹಾಗೂ ವ್ಯಾಪಾರದ ಸ್ಥಳಗಳಲ್ಲಿ—ಸಾರುವಂತೆ ನಮ್ಮನ್ನು ಪ್ರೋತ್ಸಾಹಿಸಿತು. ಅನೌಪಚಾರಿಕವಾಗಿ ಸಾರಲು ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಅಗತ್ಯದ ಕುರಿತಾಗಿಯೂ ಅದು ನಮಗೆ ಅರಿವನ್ನುಂಟುಮಾಡಿತು. ಇದರ ಒಂದು ಉದಾಹರಣೆಯೋಪಾದಿ, ಒಬ್ಬ ಪಯನೀಯರ್ ಸಹೋದರಿಯು, “ಅಪಾಯಕ್ಕೊಳಗಾಗಿರುವ ಜಾತಿಗಳು—ಏಕೆ ಚಿಂತಿತರಾಗಿರಬೇಕು?” ಎಂಬ ಸರಣಿಯುಳ್ಳ ಎಚ್ಚರ! (ಇಂಗ್ಲಿಷ್) ಪತ್ರಿಕೆಯ ಒಂದು ಸರಬರಾಯಿಯನ್ನು ತನ್ನೊಂದಿಗೆ ಮೃಗಾಲಯಕ್ಕೆ ಕೊಂಡೊಯ್ದಳು. ಒಂದು ಗಂಟೆಯೊಳಗೆ, ಅವಳು ತುಂಬ ಗಣ್ಯಭಾವದ ಪ್ರಾಣಿ ಪ್ರೇಮಿಗಳೊಂದಿಗೆ 40 ಪ್ರತಿಗಳನ್ನು ನೀಡಿದಳು! ಎಲ್ಲೆಡೆಯೂ ಸುವಾರ್ತೆಯನ್ನು ಸಾರುವುದರಲ್ಲಿ ನೀವು ಇಷ್ಟರ ವರೆಗೆ ಎಷ್ಟು ಯಶಸ್ಸನ್ನು ಅನುಭವಿಸಿದ್ದೀರಿ? ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಹಾಗೂ ಅಪೇಕ್ಷಿಸು ಬ್ರೋಷರ್ ವಿಶೇಷವಾಗಿ ಎಲ್ಲಾ ರೀತಿಯ ಸಾಕ್ಷಿನೀಡುವಿಕೆಗೆ ತಕ್ಕದ್ದಾಗಿವೆ. ಯಾಕಂದರೆ ಅವುಗಳು ಜನರ ಜೀವಿತಗಳನ್ನು ಬಾಧಿಸುವ ಮತ್ತು ಯೋಚನಾ ಸಾಮರ್ಥ್ಯವನ್ನು ಕೆರಳಿಸುವ ಮಾಹಿತಿಗಳನ್ನು ಸಾದರಪಡಿಸುತ್ತವೆ.
4 ಸಂಭಾಷಣೆಗಳನ್ನು ಆರಂಭಿಸುವುದು: ಅಕ್ಟೋಬರ್ 1996ರ ನಮ್ಮ ರಾಜ್ಯದ ಸೇವೆಯ ಹಿಂದಿನ ಪುಟವು, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸುವ ವಿಧದ ಕುರಿತಾಗಿ ವಿವರಗಳನ್ನು ಕೊಡುತ್ತದೆ. ಅಪೇಕ್ಷಿಸು ಬ್ರೋಷರ್ಗಾಗಿ ನಿಮ್ಮ ನಿರೂಪಣೆಯನ್ನು ತಯಾರಿಸುವಾಗ ಈ ಸಲಹೆಗಳೇ ಪರಿಣಾಮಕಾರಿಯಾಗಿರುವವು. ನಾವೇನನ್ನು ಹೇಳುತ್ತೇವೊ ಅದು ಕೆಲವೇ ವಾಕ್ಯಗಳಷ್ಟು ಸಂಕ್ಷಿಪ್ತ ಅಥವಾ ಒಂದು ಶಾಸ್ತ್ರೀಯ ವಿಚಾರವನ್ನು ಒಳಗೊಂಡಿರುವಷ್ಟು ಉದ್ದವಾಗಿರಸಾಧ್ಯವಿದೆ. ಆರಂಭದ ಮಾತುಗಳನ್ನು ಜಾಗರೂಕತೆಯಿಂದ ಆರಿಸಿಕೊಳ್ಳುವುದು ಪ್ರಾಮುಖ್ಯ. ಯಾಕಂದರೆ ಇವು, ನೀವು ಸಮೀಪಿಸುವ ವ್ಯಕ್ತಿಯು ಕಿವಿಗೊಡುವುದನ್ನು ಮುಂದುವರಿಸುವನೊ ಇಲ್ಲವೊ ಎಂಬುದನ್ನು ನಿರ್ಧರಿಸುವವು. ಕೆಲವರು ಈ ಆರಂಭದ ಹೇಳಿಕೆಯೊಂದಿಗೆ ಯಶಸ್ವಿಯಾಗಿದ್ದಾರೆ: “ನನಗೆ ಪ್ರೋತ್ಸಾಹದಾಯಕವಾಗಿದ್ದ ಒಂದು ಲೇಖನವನ್ನು ನಾನು ಓದಿದೆ, ಮತ್ತು ನಾನು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.” ಅಥವಾ ಆ ವ್ಯಕ್ತಿಯನ್ನು ಒಂದು ಸಂಭಾಷಣೆಗೆಳೆಯಲು, ಒಂದು ಆಸಕ್ತಿಕರ ಪ್ರಶ್ನೆಯನ್ನು ಹಾಕಸಾಧ್ಯವಿದೆ.
5 ನಿಮ್ಮ ಕ್ಷೇತ್ರದಲ್ಲಿ ಸೂಕ್ತವಾಗಿರುವಲ್ಲಿ, ಈ ತಿಂಗಳು ನಿಮ್ಮ ನಿರೂಪಣೆಗಳಲ್ಲಿ ನೀವು ಈ ಮುಂದಿನಂತಹ ಪ್ರಶ್ನೆಗಳನ್ನು ಕೇಳಲು ಪ್ರಯತ್ನಿಸಬಹುದು:
◼“ಇಂದು ನಾವು ಇಷ್ಟೊಂದು ಗೀರು ಚಿತ್ರಗಳು, ಕಸ ಮತ್ತು ಮಾಲಿನ್ಯವನ್ನು ನೋಡುತ್ತೇವೆ. ಭೂಮಿಯನ್ನು ಶುಚಿಗೊಳಿಸಿ, ಜೀವಿಸಲು ಒಂದು ಉತ್ತಮವಾದ ಸ್ಥಳವನ್ನಾಗಿ ಮಾಡಲು ಏನು ಬೇಕಾಗುವುದು?” ಪ್ರತಿಕ್ರಿಯೆಗಾಗಿ ಅನುಮತಿಸಿರಿ, ಮತ್ತು ಈ ಭೂಮಿಯು ಹೇಗೆ ಮತ್ತು ಯಾವಾಗ ಒಂದು ಭೌಗೋಲಿಕ ತೋಟವಾಗುವುದೆಂಬ ಆಶ್ವಾಸನೆಯನ್ನು ನಮಗೆ ಕೊಡುವ ಮಾಹಿತಿಯು ನಿಮ್ಮಲ್ಲಿದೆಯೆಂಬುದನ್ನು ಅನಂತರ ವಿವರಿಸಿರಿ. ಒಂದು ಪ್ರಚಲಿತ ಪತ್ರಿಕೆಯಿಂದ ಒಂದು ನಿರ್ದಿಷ್ಟ ಹೇಳಿಕೆ, ಒಂದು ಸಂಕ್ಷಿಪ್ತ ವಚನ, ಮತ್ತು ಒಂದು ವರ್ಣಮಯ ಚಿತ್ರವನ್ನು ಹಂಚಿಕೊಳ್ಳಿರಿ ಮತ್ತು ಈ ಪತ್ರಿಕೆಯನ್ನು ಅವನು ಹೇಗೆ ಕ್ರಮವಾಗಿ ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನು ವಿವರಿಸಿರಿ. ಚಂದಾ ನೀಡಿಕೆಯು ನಿರಾಕರಿಸಲ್ಪಡುವಲ್ಲಿ, ಪತ್ರಿಕೆಗಳ ಕೆಲವೊಂದು ಬಿಡಿ ಪ್ರತಿಗಳನ್ನು ನೀಡಲು ನಿಶ್ಚಿತರಾಗಿರಿ. ನೀವು ಸಂಭಾಷಣೆಯನ್ನು ಅಂತ್ಯಗೊಳಿಸುವ ಮುಂಚೆ, ಅದನ್ನು ಇನ್ನೊಂದು ಸಮಯದಲ್ಲಿ ಮುಂದುವರಿಸಲಿಕ್ಕಾಗಿ ಏರ್ಪಡನ್ನು ಮಾಡಲು ಪ್ರಯತ್ನಿಸಿರಿ.
◼“ನಾವು ಇಂದು ಎದುರಿಸುತ್ತಿರುವಂತಹ ರೀತಿಯ ತೊಂದರೆಗಳಿಂದ ಸುತ್ತುವರಿಯಲ್ಪಟ್ಟು ಜೀವಿಸುವಂತೆ ದೇವರು ಉದ್ದೇಶಿಸಿದನೆಂದು ನೀವು ನೆನಸುತ್ತೀರೊ?” ವ್ಯಕ್ತಿಯು ಉತ್ತರಿಸಿದ ನಂತರ, ನೀವು ಹೀಗೆ ಹೇಳಸಾಧ್ಯವಿದೆ: “ದೇವರ ರಾಜ್ಯವು ಬರುವಂತೆ ಪ್ರಾರ್ಥಿಸಲು ಯೇಸು ತನ್ನ ಹಿಂಬಾಲಕರಿಗೆ ಕಲಿಸಿದಂತಹ ಪ್ರಾರ್ಥನೆಯ ಕುರಿತಾಗಿ ನೀವು ಕೇಳಿರಬಹುದು. ಆ ದೇವರ ರಾಜ್ಯವು ಏನೆಂಬುದನ್ನು ತಿಳಿದುಕೊಳ್ಳಲು ನೀವು ಆಸಕ್ತರಾಗಿದ್ದೀರೊ?” ಅಪೇಕ್ಷಿಸು ಬ್ರೋಷರಿನಲ್ಲಿ ಪಾಠ 6ಕ್ಕೆ ತಿರುಗಿಸಿರಿ, ಮತ್ತು ಪಾಠದ ಆರಂಭದಲ್ಲಿ ಕೊಡಲ್ಪಟ್ಟಿರುವ ಪ್ರಶ್ನೆಗಳನ್ನು ಓದಿರಿ. ಅನಂತರ, ನೀವು 1ನೆಯ ಪ್ಯಾರಗ್ರಾಫನ್ನು ಓದುತ್ತಿದ್ದಂತೆ, ಪ್ರಥಮ ಪ್ರಶ್ನೆಯ ಉತ್ತರವನ್ನು ತೋರಿಸಿರಿ. ಉಳಿದಂತಹ ಪ್ರಶ್ನೆಗಳೂ ಅಷ್ಟೇ ಸಂಕ್ಷೇಪವಾಗಿ ಉತ್ತರಿಸಲ್ಪಟ್ಟಿವೆಯೆಂಬುದನ್ನು ವಿವರಿಸಿರಿ. ಬ್ರೋಷರನ್ನು ನೀಡಿರಿ ಮತ್ತು ರಾಜ್ಯದ ಕುರಿತಾದ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಿಕ್ಕಾಗಿ ಪುನಃ ಭೇಟಿಯಾಗಲು ಸಿದ್ಧರಿದ್ದೀರೆಂದು ಹೇಳಿರಿ.
◼“ಆಲೋಚನಾಪರರಾದ ಅನೇಕ ಜನರು, ಲೋಕದ ಧರ್ಮಗಳನ್ನು, ಮನುಷ್ಯನ ಸಮಸ್ಯೆಗಳ ಪರಿಹಾರವಾಗಿರುವ ಬದಲಿಗೆ ಅವುಗಳ ಕಾರಣದೋಪಾದಿ ವೀಕ್ಷಿಸಲು ಆರಂಭಿಸುತ್ತಿದ್ದಾರೆ. ನೀವು ಅದರ ಕುರಿತಾಗಿ ಏನು ನೆನಸುತ್ತೀರಿ?” ವ್ಯಕ್ತಿಯ ದೃಷ್ಟಿಕೋನಕ್ಕೆ ಕಿವಿಗೊಟ್ಟ ಬಳಿಕ, ಸುಳ್ಳು ಧರ್ಮದ ವಿಫಲತೆಯ ಕುರಿತಾಗಿ ಅಥವಾ ಅದರ ಸಮೀಪಿಸುತ್ತಿರುವ ಪತನದ ಕುರಿತಾಗಿ, ಅವರ ಗಮನವನ್ನು ಸರೆಹಿಡಿಯಬಹುದಾದ ಒಂದು ವಿಷಯವನ್ನು ಪ್ರಚಲಿತ ಪತ್ರಿಕೆಗಳಲ್ಲಿ ಒಂದರಿಂದ ತೋರಿಸಿರಿ. ಚಂದಾವನ್ನು ನೀಡಿರಿ. ಹೆಸರುಗಳನ್ನು ವಿನಿಮಯಮಾಡಿಕೊಳ್ಳಿರಿ, ಮತ್ತು ಸತ್ಯ ಧರ್ಮವು ಹೇಗೆ ಮಾನವಕುಲವನ್ನು ನಿರೀಕ್ಷೆಗೆಡಿಸುವುದಿಲ್ಲವೆಂಬುದನ್ನು ವಿವರಿಸಲು ಸಾಧ್ಯವಾಗುವಂತೆ ಅವರನ್ನು ಸಂಪರ್ಕಿಸಲು ಸಿದ್ಧರಿದ್ದೀರೆಂದು ಹೇಳಿರಿ.
◼“ಇಂದು ಕುಟುಂಬ ಜೀವನದಲ್ಲಿ ಇಷ್ಟೊಂದು ಸಮಸ್ಯೆಗಳಿರುವುದರಿಂದ, ಕುಟುಂಬ ಸಂತೋಷವನ್ನು ದೊರಕಿಸಿಕೊಳ್ಳುವ ರಹಸ್ಯವೇನು ಎಂಬುದರ ಕುರಿತಾಗಿ ನೀವು ಎಂದಾದರೂ ಕುತೂಹಲಪಟ್ಟಿದ್ದೀರೊ?” ಪ್ರತಿಕ್ರಿಯೆಗಾಗಿ ಕಾಯಿರಿ. ಕುಟುಂಬ ಸಂತೋಷದ ನಿಜ ರಹಸ್ಯವನ್ನು ದೇವರು ಬೈಬಲಿನಲ್ಲಿ ಪ್ರಕಟಪಡಿಸುತ್ತಾನೆಂಬುದನ್ನು ವಿವರಿಸಿರಿ. ನೀವು ಪ್ರಾಯಶಃ ಯೆಶಾಯ 48:17ನ್ನು ಓದಸಾಧ್ಯವಿದೆ. ಅನಂತರ ಅಪೇಕ್ಷಿಸು ಬ್ರೋಷರಿನಲ್ಲಿರುವ ಪಾಠ 8ಕ್ಕೆ ತಿರುಗಿಸಿರಿ ಮತ್ತು ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ ವಿಶ್ವಸನೀಯ ಮಾರ್ಗದರ್ಶನೆಯನ್ನು ಒದಗಿಸುವ ಕೆಲವು ಉದ್ಧೃತ ಬೈಬಲ್ ವಚನಗಳನ್ನು ತೋರಿಸಿರಿ. ಆ ಪಾಠದ ಆರಂಭದಲ್ಲಿರುವ ಪ್ರಶ್ನೆಗಳ ಪಟ್ಟಿಯನ್ನು ಓದಿರಿ. ಆ ವ್ಯಕ್ತಿಯು ಉತ್ತರಗಳನ್ನು ಓದಲು ಇಷ್ಟಪಡುವನೊ ಎಂದು ಕೇಳಿರಿ. ಅವನಿಗೆ ಬ್ರೋಷರನ್ನು ನೀಡಿರಿ ಮತ್ತು ಸಂತೋಷದ ಕುಟುಂಬ ಜೀವನಕ್ಕಾಗಿ ಬೈಬಲಿನಲ್ಲಿ ಅಡಕವಾಗಿರುವ ವ್ಯಾವಹಾರಿಕ ಮಾರ್ಗದರ್ಶನೆಯಲ್ಲಿ ಹೆಚ್ಚಿನದ್ದನ್ನು ಹಂಚಿಕೊಳ್ಳಲಿಕ್ಕಾಗಿ ಇನ್ನೊಂದು ಸಮಯದಲ್ಲಿ ಹಿಂದಿರುಗಲು ಸಿದ್ಧರಿದ್ದೀರೆಂದು ಹೇಳಿರಿ.
6 ಮಾರ್ಚ್ 1997ರ ನಮ್ಮ ರಾಜ್ಯದ ಸೇವೆಯಲ್ಲಿನ ಪುರವಣಿಯು, ಪುನರ್ಭೇಟಿಗಳನ್ನು ಮಾಡಲಿಕ್ಕಾಗಿ ನಾವು ಧೈರ್ಯವನ್ನು ಒಟ್ಟುಗೂಡಿಸುವಂತೆ ನಮ್ಮನ್ನು ಉತ್ತೇಜಿಸಿತು. ಬೈಬಲ್ ಅಭ್ಯಾಸಗಳನ್ನು, ಆರಂಭದ ಭೇಟಿಯಲ್ಲಿ ಅಲ್ಲದಿದ್ದರೆ, ಪುನರ್ಭೇಟಿಯಲ್ಲಾದರೂ ಆರಂಭಿಸಲಿಕ್ಕಾಗಿ ಅಪೇಕ್ಷಿಸು ಬ್ರೋಷರನ್ನು ಉಪಯೋಗಿಸುವಂತೆ ಅದು ಶಿಫಾರಸ್ಸು ಮಾಡಿತು. ದೇವರು ಏನನ್ನು ಅಪೇಕ್ಷಿಸುತ್ತಾನೊ ಅದನ್ನು ಅರಿತು, ಅನಂತರ ಅದನ್ನು ಮಾಡುವುದೇ ಮಾನವಕುಲದ ಅತ್ಯಂತ ಮಹತ್ತಾದ ಅಗತ್ಯವಾಗಿದೆ. (ಕೊಲೊ. 1:9, 10) ಜೀವಕ್ಕಾಗಿರುವ ಯೆಹೋವನ ಆವಶ್ಯಕತೆಗಳ ಕುರಿತಾಗಿ ನಮಗೇನು ತಿಳಿದಿದೆಯೊ ಅದನ್ನು ನಾವು ಇತರರಿಗೆ ಕಲಿಸಲಾರಂಭಿಸಲು ಸಾಧ್ಯವಾಗುವುದಾದರೆ, ನಾವು ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಇತರರಿಗೆ ಹೆಚ್ಚಿನ ಪ್ರಯೋಜನವನ್ನು ತರುವೆವು.—1 ಕೊರಿಂ. 9:23.