ಜೋಪಾನವಾಗಿಡಿ
ಕ್ಷೇತ್ರ ಸೇವೆಗಾಗಿ ಸೂಚಿಸಲ್ಪಟ್ಟ ನಿರೂಪಣೆಗಳು
ಈ ಪುರವಣಿಯನ್ನು ಉಪಯೋಗಿಸುವ ವಿಧ
ಇಲ್ಲಿ ಕೊಡಲ್ಪಟ್ಟಿರುವ ನಿರೂಪಣೆಗಳಲ್ಲಿ ಹೆಚ್ಚಿನವು ನಮ್ಮ ರಾಜ್ಯದ ಸೇವೆಯ ಹಿಂದಿನ ಸಂಚಿಕೆಗಳಲ್ಲಿ ಕೊಡಲ್ಪಟ್ಟಿದ್ದವು. ಇವುಗಳಲ್ಲಿ ಎಷ್ಟನ್ನು ನೀವು ನಿಮ್ಮ ಸಾಕ್ಷಿಕಾರ್ಯದಲ್ಲಿ ಉಪಯೋಗಿಸಲು ಬಯಸುತ್ತೀರೋ ಅಷ್ಟನ್ನು ಉಪಯೋಗಿಸಿ, ಎಂತಹ ಫಲಿತಾಂಶಗಳನ್ನು ಪಡೆದುಕೊಳ್ಳುತ್ತೀರಿ ಎಂಬುದನ್ನು ನೋಡಿರಿ. ಈ ಪುರವಣಿಯನ್ನು ಜೋಪಾನವಾಗಿಡಿ, ಮತ್ತು ಶುಶ್ರೂಷೆಗಾಗಿ ತಯಾರಿ ಮಾಡುವಾಗ ಇದನ್ನು ಉಪಯೋಗಿಸಿ.
ವಿಷಯವನ್ನು ಚುಟುಕಾಗಿ ಹೇಳುವ ಮೂಲಕ ನೀವು ದೇವರ ವಾಕ್ಯದಲ್ಲಿ ಆಸಕ್ತಿಯನ್ನು ಹುಟ್ಟಿಸಬಹುದು. ಒಂದು ನಿರ್ದಿಷ್ಟವಾದ ಪ್ರಶ್ನೆಯನ್ನು ಕೇಳಿರಿ, ನಂತರ ಸಂಕ್ಷಿಪ್ತವಾದ ಶಾಸ್ತ್ರೀಯ ಉತ್ತರವನ್ನು ಓದಿರಿ. ನೀವು ಈ ಸಲಹೆಗಳನ್ನು ಉಪಯೋಗಿಸಿ ನೋಡಿ:
“ನೀವು ಭವಿಷ್ಯದ ಕುರಿತಾಗಿ ಯೋಚಿಸುವಾಗ, ನಿಮಗೆ ನಿರೀಕ್ಷೆಗಳಿವೆಯೋ ಸಂದೇಹಗಳಿವೆಯೋ? [ಪ್ರತಿಕ್ರಿಯೆಗಾಗಿ ಅನುಮತಿಸಿ.] ನಾವಿಂದು ಎದುರಿಸುವ ಕ್ಷೋಭೆಗೊಳಿಸುವ ಘಟನೆಗಳನ್ನು ಮತ್ತು ಅದರ ಫಲಿತಾಂಶಗಳನ್ನು ಬೈಬಲು ಮೊದಲೇ ಮುಂತಿಳಿಸಿದೆ.”—2 ತಿಮೊ. 3:1, 2, 5; ಜ್ಞಾನೋ. 2:21, 22.
“ಇಂದು ಆರೋಗ್ಯಾರೈಕೆಯ ಬಗ್ಗೆ ಬಹಳ ಚಿಂತೆಯಿದೆ. ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ದೇವರು ಶಾಶ್ವತವಾಗಿ ತೆಗೆದುಹಾಕುವನು ಎಂಬ ವಾಗ್ದಾನಗಳ ಬಗ್ಗೆ ನಿಮಗೆ ತಿಳಿದಿದೆಯೋ?”—ಯೆಶಾ. 33:24; ಪ್ರಕ. 21:3, 4.
“ಇಡೀ ಲೋಕಕ್ಕೆ ಅಂತಿಮವಾಗಿ ಒಂದೇ ಸರಕಾರವಿರುವುದು ಎಂಬುದನ್ನು ಬೈಬಲು ಮುಂತಿಳಿಸುತ್ತದೆಂಬುದು ನಿಮಗೆ ತಿಳಿದಿತ್ತೋ?”—ದಾನಿ. 2:44; ಮತ್ತಾ. 6:9, 10.
“ಯೇಸು ಕ್ರಿಸ್ತನು ಭೂಮಿಯನ್ನು ಆಳುವುದಾದರೆ ಪರಿಸ್ಥಿತಿಗಳು ಹೇಗಿರಬಹುದು ಎಂದು ನೀವು ನೆನಸುತ್ತೀರಿ?”—ಕೀರ್ತ. 72:7, 8.
ಒಬ್ಬ ಹಿಂದೂ ವ್ಯಕ್ತಿಗೆ: “ನಿಮ್ಮ ಸ್ವಂತ ಧರ್ಮ ನಿಮಗೆ ಹೆಚ್ಚು ಪ್ರಾಮುಖ್ಯವಾದದ್ದಾಗಿದೆ. ಆದರೆ ಸಮಾಧಾನದಿಂದ ಜೀವಿಸುವುದರ ಕುರಿತು ನಾವಿಬ್ಬರೂ ಆಸಕ್ತರಾಗಿದ್ದೇವೆ ಎಂಬುದನ್ನು ನೀವು ಒಪ್ಪಿಕೊಳ್ಳುವಿರಿ ಎಂಬುದು ನನ್ನ ಅನಿಸಿಕೆ. ಈ ಭೂಮಿಯ ಮೇಲೆ ಒಂದು ಸಮಾಧಾನಕರ ವಾತಾವರಣವನ್ನು ನೀವು ನೋಡುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿ.] ದುಷ್ಟತನವು ತೆಗೆದುಹಾಕಲ್ಪಡುವುದಾದರೆ, ಖಂಡಿತವಾಗಿಯೂ ಸಮಾಧಾನವಿರುತ್ತದೆ. ಈ ಪವಿತ್ರ ಪುಸ್ತಕದಲ್ಲಿ ಕೊಡಲ್ಪಟ್ಟಿರುವ ವಾಗ್ದಾನವನ್ನು ದಯವಿಟ್ಟು ನೋಡಿರಿ.”—ಕೀರ್ತ. 46:9; 72:7, 8.
“ಇಂದು ಹೆಚ್ಚಿನ ಜನರು ಸಮಸ್ಯೆಗಳ ಬಗ್ಗೆ ಕೇಳಿ ಕೇಳಿ ಬೇಸತ್ತುಹೋಗಿದ್ದಾರೆ. ಈಗ ಅವರು ಇವುಗಳ ಕುರಿತಾದ ಪರಿಹಾರಗಳ ಕುರಿತು ಕೇಳಿಸಿಕೊಳ್ಳಲು ಇಷ್ಟಪಡುತ್ತಾರೆ. ಆದರೆ, ನಮ್ಮ ಸಮಸ್ಯೆಗಳಿಗೆ ನಿಜ ಪರಿಹಾರಗಳನ್ನು ನಾವೆಲ್ಲಿ ಕಂಡುಕೊಳ್ಳಸಾಧ್ಯವಿದೆ?”—2 ತಿಮೊ. 3:16, 17.
ಒಬ್ಬ ಮುಸ್ಲಿಮ್ ವ್ಯಕ್ತಿಗೆ: “ನಮ್ಮ ಹಿನ್ನೆಲೆಯು ಏನೇ ಆಗಿರಲಿ, ಇಂದಿನ ಲೋಕದಲ್ಲಿ ನಾವೆಲ್ಲರೂ ಒಂದೇ ರೀತಿಯ ಅನೇಕ ಕಷ್ಟಗಳನ್ನು ಎದುರಿಸುತ್ತೇವೆ ಎಂಬುದನ್ನು ನೀವು ಒಪ್ಪಿಕೊಳ್ಳುವಿರಿ. ಈ ಸಂತತಿಯು ಎದುರಿಸುವಂಥ ದೊಡ್ಡ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವು ಖಂಡಿತವಾಗಿಯೂ ಬರುವುದೆಂದು ನೀವು ನಂಬುತ್ತೀರೋ? ಸಮಸ್ಯೆಗಳಿಗೆ ಪರಿಹಾರವು ಅಬ್ರಹಾಮನ ಸಂತಾನದ ಮೂಲಕ ಬರುವುದು.”—ಆದಿ. 22:18.
“ಲಿಂಗಜಾತಿ, ಧರ್ಮ, ಅಥವಾ ಜಾತಿಯ ಕಾರಣದಿಂದ ಅನೇಕ ಜನರು ಭೇದಭಾವವನ್ನು ಅನುಭವಿಸುತ್ತಾರೆ. ಈ ರೀತಿಯ ಪೂರ್ವಕಲ್ಪಿತ ಅಭಿಪ್ರಾಯದ ಕುರಿತು ದೇವರಿಗೆ ಹೇಗನಿಸಬಹುದು ಎಂದು ನೀವು ನೆನಸುತ್ತೀರಿ?”—ಅ. ಕೃ. 10:34, 35.
ಸಂಭಾಷಣಾ ಪ್ರಾರಂಭಕಗಳು
ಕೆಳಗಡೆ ಕೊಡಲ್ಪಟ್ಟಿರುವ ಪ್ರಶ್ನೆಗಳ ಪಟ್ಟಿಯು, ರೀಸನಿಂಗ್ ಪುಸ್ತಕದಲ್ಲಿರುವ ವಿಷಯಗಳಿಂದ ಸಂಗ್ರಹಿಸಲ್ಪಟ್ಟು, ಪ್ರತಿಯೊಂದು ಉತ್ತರವನ್ನು ಕಂಡುಕೊಳ್ಳಬಹುದಾದ ಪುಟದ ಸಂಖ್ಯೆಯನ್ನು ತೋರಿಸುತ್ತದೆ:
ನಾವೇಕೆ ವೃದ್ಧರಾಗಿ ಸಾಯುತ್ತೇವೆ? (98)
ಮೃತರ ಸ್ಥಿತಿ ಏನಾಗಿದೆ? (100)
ದೇವರಲ್ಲಿ ನಂಬಿಕೆಯಿಡಲು ದೃಢವಾದ ಕಾರಣಗಳಿವೆಯೋ? (145)
ಮಾನವರಾದ ನಮ್ಮೊಂದಿಗೆ ಏನು ನಡೆಯುತ್ತಿದೆ ಎಂಬುದರ ಕುರಿತು ದೇವರು ನಿಜವಾಗಿಯೂ ಚಿಂತಿತನಾಗಿದ್ದಾನೋ? (147)
ದೇವರು ಒಬ್ಬ ನೈಜ ವ್ಯಕ್ತಿಯಾಗಿದ್ದಾನೋ? (147)
ಎಲ್ಲ ಒಳ್ಳೇ ಜನರು ಸ್ವರ್ಗಕ್ಕೆ ಹೋಗುತ್ತಾರೋ? (162)
ನಿಜವಾಗಿಯೂ ಸಂತೋಷವುಳ್ಳ ಒಂದು ಭವಿಷ್ಯತ್ತನ್ನು ಅನುಭವಿಸಲಿಕ್ಕಾಗಿ ಒಬ್ಬ ಮನುಷ್ಯನು ಸ್ವರ್ಗಕ್ಕೆ ಹೋಗಬೇಕೋ? (163)
ದೇವರ ವೈಯಕ್ತಿಕ ಹೆಸರನ್ನು ತಿಳಿದುಕೊಳ್ಳುವುದು ಮತ್ತು ಅದನ್ನು ಉಪಯೋಗಿಸುವುದು ಏಕೆ ಪ್ರಾಮುಖ್ಯವಾಗಿದೆ? (196)
ಯೇಸು ಕ್ರಿಸ್ತನು ವಾಸ್ತವದಲ್ಲಿ ದೇವರಾಗಿದ್ದಾನೋ? (212)
ದೇವರ ರಾಜ್ಯವು ಏನನ್ನು ಸಾಧಿಸುವುದು? (227)
ಮಾನವ ಜೀವಿತದ ಉದ್ದೇಶವೇನು? (243)
ವಿವಾಹ ಜೀವನವನ್ನು ಉತ್ತಮಗೊಳಿಸಲು ಯಾವುದು ಸಹಾಯಮಾಡುವುದು? (253)
ಎಲ್ಲ ಧರ್ಮಗಳು ದೇವರಿಗೆ ಸ್ವೀಕಾರಾರ್ಹವಾಗಿವೆಯೋ? (322)
ಸತ್ಯ ಧರ್ಮ ಯಾವುದೆಂದು ಒಬ್ಬ ವ್ಯಕ್ತಿಯು ಹೇಗೆ ತಿಳಿದುಕೊಳ್ಳಸಾಧ್ಯವಿದೆ? (328)
ಇಂದಿನ ಲೋಕದಲ್ಲಿ ಸೈತಾನನು ಎಷ್ಟು ಪ್ರಭಾವಶಾಲಿ ವ್ಯಕ್ತಿಯಾಗಿದ್ದಾನೆ? (364)
ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆ? (393)
ಇಷ್ಟೊಂದು ದುಷ್ಟತನವು ಏಕೆ ಇದೆ? (427)
ಈ ಲೋಕವನ್ನು ಆಳುತ್ತಿರುವುದು ಯಾರು—ದೇವರೋ ಸೈತಾನನೋ? (436)
ಅಪೇಕ್ಷಿಸು ಬ್ರೋಷರನ್ನು ನೀಡಲಿಕ್ಕಾಗಿ ಸಲಹೆಗಳು
“ಅನೇಕ ಜನರು ದೇವರಲ್ಲಿ ನಂಬಿಕೆಯಿಡುತ್ತಾರೆ ಎಂಬುದನ್ನು ನೀವು ನಿಸ್ಸಂದೇಹವಾಗಿಯೂ ಒಪ್ಪಿಕೊಳ್ಳುವಿರಿ. ದೇವರಲ್ಲಿ ನಂಬಿಕೆಯಿಡುವವರೆಲ್ಲರೂ, ಆತನು ನಮ್ಮಿಂದ ಏನನ್ನೋ ಅಪೇಕ್ಷಿಸುತ್ತಾನೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಅವರು ಪರಸ್ಪರ ಒಪ್ಪಿಕೊಳ್ಳದ ಒಂದು ವಿಷಯವೇನೆಂದರೆ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬುದೇ.” ನಂತರ ಅಪೇಕ್ಷಿಸು ಬ್ರೋಷರನ್ನು ನೀಡಿ, ಪಾಠ 1ನ್ನು ತೆರೆದು, ಅದನ್ನು ಚರ್ಚಿಸಿರಿ.
“ಕುಟುಂಬ ಜೀವನದಲ್ಲಿ ಇಂದು ಇಷ್ಟೊಂದು ಸಮಸ್ಯೆಗಳಿರುವುದರಿಂದ, ಕುಟುಂಬ ಸಂತೋಷವನ್ನು ದೊರಕಿಸಿಕೊಳ್ಳುವ ರಹಸ್ಯವೇನು ಎಂಬುದರ ಕುರಿತಾಗಿ ನೀವು ಎಂದಾದರೂ ಕುತೂಹಲಪಟ್ಟಿದ್ದೀರೊ?” ಪ್ರತಿಕ್ರಿಯೆಯನ್ನು ಪಡೆದುಕೊಂಡ ನಂತರ, ಕುಟುಂಬ ಸಂತೋಷದ ನಿಜ ರಹಸ್ಯವನ್ನು ದೇವರು ಬೈಬಲಿನಲ್ಲಿ ಪ್ರಕಟಪಡಿಸುತ್ತಾನೆಂಬುದನ್ನು ವಿವರಿಸಿರಿ. ಯೆಶಾಯ 48:17ನ್ನು ಓದಿರಿ. ಅನಂತರ ಅಪೇಕ್ಷಿಸು ಬ್ರೋಷರಿನಲ್ಲಿರುವ ಪಾಠ 8ನ್ನು ತೆರೆಯಿರಿ, ಮತ್ತು ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ ವಿಶ್ವಾಸಾರ್ಹ ಮಾರ್ಗದರ್ಶನವನ್ನು ಒದಗಿಸುವ ಕೆಲವು ಉದ್ಧೃತ ಬೈಬಲ್ ವಚನಗಳನ್ನು ತೋರಿಸಿರಿ. ಪಾಠದ ಆರಂಭದಲ್ಲಿರುವ ಪ್ರಶ್ನೆಗಳ ಪಟ್ಟಿಯನ್ನು ಓದಿರಿ. ಆ ವ್ಯಕ್ತಿಯು ಉತ್ತರಗಳನ್ನು ಓದಲು ಇಷ್ಟಪಡುವನೊ ಎಂದು ಕೇಳಿರಿ.
“ಈ ಬ್ರೋಷರ್, ಬೈಬಲಿನ ಮೂಲಭೂತ ಬೋಧನೆಗಳನ್ನು ಆವರಿಸುವ ಒಂದು ಸಮಗ್ರ ಅಧ್ಯಯನ ಕ್ರಮವನ್ನು ಒಳಗೊಂಡಿದೆ. ಪ್ರತಿಯೊಂದು ಪುಟದಲ್ಲಿ, ಶತಮಾನಗಳಿಂದ ಜನರಿಗೆ ಕ್ಷೋಭೆಯನ್ನುಂಟುಮಾಡಿರುವ ಪ್ರಶ್ನೆಗಳಿಗೆ ನೀವು ಉತ್ತರಗಳನ್ನು ಕಂಡುಕೊಳ್ಳುವಿರಿ. ಉದಾಹರಣೆಗಾಗಿ, ಭೂಮಿಗಾಗಿ ದೇವರ ಉದ್ದೇಶವು ಏನು?” ಪಾಠ 5ಕ್ಕೆ ತೆರೆಯಿರಿ, ಮತ್ತು ಪಾಠದ ಆರಂಭದಲ್ಲಿರುವ ಪ್ರಶ್ನೆಗಳನ್ನು ಓದಿರಿ. ಮನೆಯವನಿಗೆ ಯಾವ ಪ್ರಶ್ನೆಯು ಅತ್ಯಂತ ಆಸಕ್ತಿಕರವಾಗಿದೆ ಎಂಬುದನ್ನು ಕೇಳಿರಿ, ಮತ್ತು ತರುವಾಯ ಅದಕ್ಕೆ ಅನುಗುಣವಾದ ಪ್ಯಾರಗ್ರಾಫ್(ಗಳ)ನ್ನು ಓದಿ, ಸೂಕ್ತವಾದ ಶಾಸ್ತ್ರವಚನಗಳನ್ನು ತೆರೆದು ತೋರಿಸಿ. ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಂಡಷ್ಟೇ ಸುಲಭವಾಗಿ ಇತರ ಪ್ರಶ್ನೆಗಳಿಗೂ ಸಂತೃಪ್ತಿಕರವಾದ ಉತ್ತರಗಳನ್ನು ಕಂಡುಕೊಳ್ಳಸಾಧ್ಯವಿದೆ ಎಂಬುದನ್ನು ವಿವರಿಸಿರಿ. ಇನ್ನೊಂದು ಪ್ರಶ್ನೆ ಹಾಗೂ ಉತ್ತರವನ್ನು ಚರ್ಚಿಸಲಿಕ್ಕಾಗಿ ನೀವು ಪುನಃ ಹಿಂದಿರುಗಿ ಬರುವಿರೆಂದು ಹೇಳಿರಿ.
“ಸಾರ್ವಜನಿಕ ಶಾಲೆಗಳಲ್ಲಿ ನಡೆಯುವ ಹಿಂಸಾಚಾರಕ್ಕೆ ಕಾರಣ ಏನೆಂದು ನೀವು ನೆನಸುತ್ತೀರಿ? ಹೆತ್ತವರು ನೀಡಬೇಕಾದ ತರಬೇತಿಯ ಕೊರತೆಯಿಂದಾಗಿ ಇದು ಪರಿಣಮಿಸುತ್ತದೋ? ಅಥವಾ ಅದು ಬೇರಾವುದೋ ಸಂಗತಿ, ಅಂದರೆ, ಒಂದುವೇಳೆ ಪಿಶಾಚನ ಪ್ರಭಾವವಾಗಿರಬಹುದೋ?” ಪ್ರತಿಕ್ರಿಯೆಗಾಗಿ ಅನುಮತಿಸಿ. ಅದು ಪಿಶಾಚನ ಪ್ರಭಾವದಿಂದಾಗಿದೆ ಎಂದು ಆ ವ್ಯಕ್ತಿಯು ಹೇಳುವುದಾದರೆ, ಪ್ರಕಟನೆ 12:9, 12ನ್ನು ಓದಿರಿ. ಈ ಲೋಕದಲ್ಲಿ ಗಲಭೆಯನ್ನು ಪ್ರವರ್ಧಿಸುವ ವಿಷಯದಲ್ಲಿ ಪಿಶಾಚನು ವಹಿಸುವ ಪಾತ್ರದ ಬಗ್ಗೆ ತಿಳಿಸಿರಿ. ತದನಂತರ, ಅಪೇಕ್ಷಿಸು ಬ್ರೋಷರಿನಲ್ಲಿ ಪಾಠ 4ನ್ನು ತೆರೆಯಿರಿ, ಮತ್ತು ಪಿಶಾಚನು ಎಲ್ಲಿಂದ ಬಂದನೆಂಬುದರ ಬಗ್ಗೆ ಆ ವ್ಯಕ್ತಿ ಎಂದಾದರೂ ಯೋಚಿಸಿದ್ದಾನೋ ಎಂದು ಕೇಳಿರಿ. ತರುವಾಯ, ಮೊದಲಿನ ಎರಡು ಪ್ಯಾರಗ್ರಾಫ್ಗಳನ್ನು ಓದಿ, ಚರ್ಚಿಸಿರಿ. ಆದರೆ, ಶಾಲೆಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ “ಹೆತ್ತವರು ನೀಡಬೇಕಾದ ತರಬೇತಿಯ ಕೊರತೆ”ಯೇ ಕಾರಣವೆಂದು ಆ ವ್ಯಕ್ತಿಯು ಹೇಳಿದರೆ, 2 ತಿಮೊಥೆಯ 3:1-3ನ್ನು ಓದಿ, ಈ ಸಮಸ್ಯೆಗೆ ಹೆಚ್ಚನ್ನು ಕೂಡಿಸುವ ಗುಣಗಳ ಕಡೆಗೆ ಸೂಚಿಸಿರಿ. ತರುವಾಯ ಅಪೇಕ್ಷಿಸು ಬ್ರೋಷರಿನ ಪಾಠ 8ನ್ನು ತೆರೆದು, 5ನೇ ಪ್ಯಾರಗ್ರಾಫನ್ನು ಓದಿ, ಚರ್ಚೆಯನ್ನು ಮುಂದುವರಿಸಿರಿ.
“ಯಶಸ್ವಿಕರವಾದ ಒಂದು ಕುಟುಂಬ ಜೀವನವನ್ನು ಕಟ್ಟಲು ಅಗತ್ಯವಿರುವ ಜ್ಞಾನವನ್ನು ಸೃಷ್ಟಿಕರ್ತನು ನಮಗೆ ಕೊಡುವನೆಂಬುದನ್ನು ನಿರೀಕ್ಷಿಸುವುದು ಸಮಂಜಸವಾದದ್ದಾಗಿದೆಯೆಂದು ನೀವು ಭಾವಿಸುತ್ತೀರೊ?” ಪ್ರತಿಕ್ರಿಯೆಯ ನಂತರ, ಅಪೇಕ್ಷಿಸು ಬ್ರೋಷರನ್ನು ಪರಿಚಯಿಸಿರಿ. ಪಾಠ 8ನ್ನು ತೆರೆಯಿರಿ, ಮತ್ತು ಅದರಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗಾಗಿ ಬೈಬಲಿನಿಂದ ತೆಗೆಯಲ್ಪಟ್ಟಿರುವ ಮೂಲತತ್ತ್ವಗಳು ಇವೆ ಎಂಬುದನ್ನು ವಿವರಿಸಿರಿ. ಆ ಬ್ರೋಷರಿನಿಂದ ಅತ್ಯುತ್ತಮವಾದ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ, ಅದನ್ನು ಬೈಬಲಿನೊಂದಿಗೆ ಉಪಯೋಗಿಸುವ ವಿಧವನ್ನು ಪ್ರತ್ಯಕ್ಷಾಭಿನಯಿಸಿ ತೋರಿಸಬಹುದೋ ಎಂದು ಕೇಳಿರಿ.
“ಆಧುನಿಕ ದಿನದ ಜೀವಿತದಲ್ಲಿ ನಾವು ಎದುರಿಸಬೇಕಾಗಿರುವ ಎಲ್ಲಾ ಪಂಥಾಹ್ವಾನಗಳೊಂದಿಗೆ, ಪ್ರಾರ್ಥನೆಯು ನಮಗೆ ನಿಜವಾದ ಸಹಾಯವಾಗಿರಸಾಧ್ಯವಿದೆ ಎಂದು ನೀವು ಎಣಿಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಪ್ರಾರ್ಥನೆಯು ತಮಗೆ ಆಂತರಿಕ ಬಲವನ್ನು ಕೊಡುತ್ತದೆಂದು ಅನೇಕರು ಹೇಳುತ್ತಾರೆ. [ಫಿಲಿಪ್ಪಿ 4:6, 7ನ್ನು ಓದಿರಿ.] ಆದರೂ, ತನ್ನ ಪ್ರಾರ್ಥನೆಗಳು ಉತ್ತರಿಸಲ್ಪಡುವುದಿಲ್ಲವೆಂಬ ಅನಿಸಿಕೆ ಒಬ್ಬ ವ್ಯಕ್ತಿಗೆ ಆಗಬಹುದು. [ಅಪೇಕ್ಷಿಸು ಬ್ರೋಷರಿನಲ್ಲಿ ಪಾಠ 7ನ್ನು ತೆರೆಯಿರಿ.] ಪ್ರಾರ್ಥನೆಯು ಹೇಗೆ ನಮಗೆ ಅತಿ ಹೆಚ್ಚು ಪ್ರಯೋಜನವನ್ನು ತರಬಲ್ಲದು ಎಂಬುದನ್ನು ಈ ಬ್ರೋಷರ್ ವಿವರಿಸುತ್ತದೆ.”
“ಲೋಕದಲ್ಲಿ ಇಷ್ಟೊಂದು ವಿಭಿನ್ನ ಧರ್ಮಗಳು ಏಕೆ ಇವೆಯೆಂಬುದರ ಕುರಿತಾಗಿ ನಾವು ನಮ್ಮ ನೆರೆಹೊರೆಯವರೊಂದಿಗೆ ಮಾತಾಡುತ್ತಿದ್ದೇವೆ. ಆದರೂ, ಇರುವುದು ಒಂದೇ ಬೈಬಲಲ್ಲವೇ. ಧರ್ಮಗಳ ಕುರಿತಾಗಿ ಇರುವ ಗಲಿಬಿಲಿಯ ಕಾರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು? [ಪ್ರತಿಕ್ರಿಯೆಗಾಗಿ ಅನುಮತಿಸಿ. ಅಪೇಕ್ಷಿಸು ಬ್ರೋಷರಿನ ಪಾಠ 13ನ್ನು ತೆರೆಯಿರಿ ಮತ್ತು ಆರಂಭದ ಪ್ರಶ್ನೆಗಳನ್ನು ಓದಿರಿ.] ಈ ಪಾಠವನ್ನು ಓದುವುದರ ಮೂಲಕ ನೀವು ಆ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರಗಳನ್ನು ಪಡೆದುಕೊಳ್ಳಬಹುದು.”
ಒಬ್ಬ ವ್ಯಕ್ತಿಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡಿದ ನಂತರ, ಒಂದು ಬ್ರೋಷರಿನಿಂದ ಒಂದು ಚಿಕ್ಕ ಪ್ಯಾರಗ್ರಾಫನ್ನು ಓದಬಹುದೇ ಎಂದು ಅವನನ್ನು ಕೇಳಿ. ಅನುಮತಿ ಸಿಗುವಲ್ಲಿ, ಅಪೇಕ್ಷಿಸು ಬ್ರೋಷರಿನ ಪಾಠ 5ನ್ನು ತೆರೆಯಿರಿ. ಪಾಠದ ಆರಂಭದಲ್ಲಿ ಪಟ್ಟಿಮಾಡಲ್ಪಟ್ಟಿರುವ ಪ್ರಶ್ನೆಗಳಿಗೆ ಸೂಚಿಸಿರಿ, ಮತ್ತು ಮೊದಲನೇ ಪ್ರಶ್ನೆಗಿರುವ ಉತ್ತರಕ್ಕಾಗಿ, ನೀವು ಆರಂಭದ ಪ್ಯಾರಗ್ರಾಫನ್ನು ಓದುವಾಗ ಅವನು ಕಿವಿಗೊಡುವಂತೆ ಅವನಿಗೆ ಹೇಳಿ. ಪ್ಯಾರಗ್ರಾಫನ್ನು ಓದಿದ ನಂತರ, ಪ್ರಶ್ನೆಯನ್ನು ಕೇಳಿ ಮತ್ತು ಅವನ ಉತ್ತರವನ್ನು ಪಡೆದುಕೊಳ್ಳಿ. ಬ್ರೋಷರನ್ನು ನೀಡಿರಿ; ಅದು ಸ್ವೀಕರಿಸಲ್ಪಡುವುದಾದರೆ, ಪಟ್ಟಿಯಲ್ಲಿರುವ ಮುಂದಿನ ಎರಡು ಪ್ರಶ್ನೆಗಳಿಗೆ ಅವನ ಪ್ರತ್ಯುತ್ತರಗಳನ್ನು ಪಡೆದುಕೊಳ್ಳಲಿಕ್ಕಾಗಿ ಪುನಃ ಬರುವ ಏರ್ಪಾಡುಗಳನ್ನು ಮಾಡಿರಿ.
ಜ್ಞಾನ ಪುಸ್ತಕವನ್ನು ನೀಡಲಿಕ್ಕಾಗಿ ಸಲಹೆಗಳು
ಬೈಬಲನ್ನು ಕೈಯಲ್ಲಿ ಹಿಡಿದು, ಹೀಗೆ ಹೇಳುವ ಮೂಲಕ ಆರಂಭಿಸಿ: “ನಿಮ್ಮ ಬೀದಿಯಲ್ಲಿರುವ ಪ್ರತಿಯೊಬ್ಬರಿಗೂ ನಾವು ಈ ದಿನ ಒಂದು ಶಾಸ್ತ್ರವಚನವನ್ನು ತೋರಿಸುತ್ತಿದ್ದೇವೆ. ಅದರಲ್ಲಿ ಹೀಗೆ ಹೇಳಲಾಗಿದೆ . . .” ಯೋಹಾನ 17:3ನ್ನು ಓದಿರಿ, ಮತ್ತು ಹೀಗೆ ಕೇಳಿರಿ: “ನಮಗೆ ಸರಿಯಾದ ರೀತಿಯ ಜ್ಞಾನವು ಇರುವುದಾದರೆ ನಮಗೆ ಏನು ವಾಗ್ದಾನಿಸಲ್ಪಟ್ಟಿದೆ ಎಂಬುದನ್ನು ಗಮನಿಸಿದಿರೋ? [ಪ್ರತಿಕ್ರಿಯೆಗಾಗಿ ಅನುಮತಿಸಿ.] ಒಬ್ಬ ವ್ಯಕ್ತಿಯು ಈ ರೀತಿಯ ಜ್ಞಾನವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?” ಪ್ರತ್ಯುತ್ತರವನ್ನು ಪಡೆದುಕೊಂಡ ನಂತರ, ಜ್ಞಾನ ಪುಸ್ತಕವನ್ನು ತೋರಿಸಿ ಹೀಗೆ ಹೇಳಿ: “ನಿತ್ಯಜೀವಕ್ಕೆ ನಡೆಸುವಂಥ ಜ್ಞಾನದೆಡೆಗೆ ಈ ಪುಸ್ತಕವು ಮಾರ್ಗದರ್ಶಿಸುತ್ತದೆ. ಬೈಬಲಿನ ಕುರಿತು ಜನರಿಗಿರುವ ಅತಿ ಸಾಮಾನ್ಯವಾದ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವುದರ ಮೂಲಕ ಹಾಗೆ ಮಾಡುತ್ತದೆ.” ಪರಿವಿಡಿಯನ್ನು ತೋರಿಸಿರಿ, ಮತ್ತು ಇದರಲ್ಲಿ ಯಾವುದೇ ವಿಷಯದ ಕುರಿತು ಆ ವ್ಯಕ್ತಿಯು ಎಂದಾದರೂ ಯೋಚಿಸಿದ್ದಾನೋ ಎಂದು ಕೇಳಿರಿ.
“ನಮ್ಮ ಸುತ್ತಲೂ ನಾವು ನೋಡುತ್ತಿರುವ ಅಥವಾ ಸ್ವತಃ ಅನುಭವಿಸುತ್ತಿರುವ ಅನೀತಿ ಮತ್ತು ಕಷ್ಟಾನುಭವದ ಕುರಿತಾಗಿ ದೇವರು ನಿಜವಾಗಿಯೂ ಚಿಂತಿತನಾಗಿದ್ದಾನೋ ಎಂದು ನೀವು ಎಂದಾದರೂ ಕುತೂಹಲಪಟ್ಟಿದ್ದುಂಟೋ? [ಪ್ರತಿಕ್ರಿಯೆಗಾಗಿ ಅನುಮತಿಸಿ.] ದೇವರು ನಮ್ಮನ್ನು ಪ್ರೀತಿಸುತ್ತಾನೆ ಮತ್ತು ಸಂಕಷ್ಟದ ಸಮಯಗಳಲ್ಲಿ ಆತನು ನಮಗೆ ಸಹಾಯಮಾಡುತ್ತಾನೆ ಎಂಬ ಆಶ್ವಾಸನೆಯನ್ನು ಬೈಬಲ್ ಕೊಡುತ್ತದೆ.” ಕೀರ್ತನೆ 72:12-17ರ ಭಾಗಗಳನ್ನು ಓದಿರಿ. ಜ್ಞಾನ ಪುಸ್ತಕದ 8ನೇ ಅಧ್ಯಾಯವನ್ನು ತೆರೆದು, ದೇವರು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ? ಎಂದು ಲಕ್ಷಾಂತರ ಮಂದಿ ಕೇಳಿರುವ ಪ್ರಶ್ನೆಗೆ ಇದು ತೃಪ್ತಿದಾಯಕ ಉತ್ತರವನ್ನು ಕೊಡುತ್ತದೆ ಎಂಬುದನ್ನು ಸೂಚಿಸಿ ಹೇಳಿ. ಸಾಧ್ಯವಿರುವಲ್ಲಿ, 3ರಿಂದ 5ನೆಯ ಪ್ಯಾರಗ್ರಾಫ್ಗಳಲ್ಲಿ ಆವರಿಸಲ್ಪಟ್ಟಿರುವ ಶಾಸ್ತ್ರೀಯ ವಿಚಾರಗಳಲ್ಲಿ ಕೆಲವನ್ನು ಚರ್ಚಿಸಿರಿ, ಅಥವಾ ಪುನರ್ಭೇಟಿಯ ಸಮಯದಲ್ಲಿ ಹಾಗೆ ಮಾಡಿರಿ.
“ನಮ್ಮಲ್ಲಿ ಹೆಚ್ಚಿನವರು ಮರಣದಲ್ಲಿ ಪ್ರಿಯ ವ್ಯಕ್ತಿಗಳನ್ನು ಕಳೆದುಕೊಂಡಿದ್ದೇವೆ. ಅವರನ್ನು ನಾವು ಪುನಃ ನೋಡುವೆವೊ ಎಂಬುದರ ಕುರಿತಾಗಿ ನೀವು ಎಂದಾದರೂ ಕುತೂಹಲಪಟ್ಟಿದ್ದೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಮ್ಮ ಪ್ರಿಯ ವ್ಯಕ್ತಿಗಳು ಮರಣದಿಂದ ರಕ್ಷಿಸಲ್ಪಡಬಲ್ಲರು ಎಂಬುದನ್ನು ಯೇಸು ರುಜುಪಡಿಸಿದನು. [ಯೋಹಾನ 11:11, 25, 44ನ್ನು ಓದಿರಿ.] ಇದು ಶತಮಾನಗಳ ಹಿಂದೆ ಸಂಭವಿಸಿತಾದರೂ, ನಮಗಾಗಿ ದೇವರು ಏನು ಮಾಡಲು ವಾಗ್ದಾನಿಸಿದ್ದಾನೆಂಬುದನ್ನು ಅದು ತೋರಿಸುತ್ತದೆ.” ಜ್ಞಾನ ಪುಸ್ತಕದ 85ನೆಯ ಪುಟದಲ್ಲಿರುವ ಚಿತ್ರವನ್ನು ತೋರಿಸಿ, ವಿವರಣೆಯ ಬರಹವನ್ನು ಓದಿರಿ. ಅನಂತರ 86ನೆಯ ಪುಟದಲ್ಲಿರುವ ಚಿತ್ರವನ್ನು ತೋರಿಸಿ, ಅದರ ಕುರಿತಾಗಿ ಹೇಳಿಕೆಯನ್ನು ನೀಡಿರಿ. ಮುಂದಿನ ಭೇಟಿಗಾಗಿ ತಳಪಾಯವನ್ನು ಹಾಕುತ್ತಾ ಈ ಪ್ರಶ್ನೆಯನ್ನು ಕೇಳಿರಿ: “ಮನುಷ್ಯರು ವೃದ್ಧರಾಗುವುದು ಮತ್ತು ಸಾಯುವುದು ಏಕೆ ಎಂಬ ಕಾರಣವನ್ನು ನೀವು ತಿಳಿದುಕೊಳ್ಳಲು ಬಯಸುವಿರೋ?” 6ನೆಯ ಅಧ್ಯಾಯವನ್ನು ಚರ್ಚಿಸಲಿಕ್ಕಾಗಿ ಹಿಂದಿರುಗಿ ಹೋಗಿ.
“ಮನುಷ್ಯರು ದೀರ್ಘಾಯುಷ್ಯಕ್ಕಾಗಿ ಏಕೆ ಹಾತೊರೆಯುತ್ತಾರೆಂದು ನೀವು ಎಂದಾದರೂ ಕುತೂಹಲಪಟ್ಟಿದ್ದೀರೊ?” ಪ್ರತ್ಯುತ್ತರವನ್ನು ಪಡೆದುಕೊಂಡ ನಂತರ, ಜ್ಞಾನ ಪುಸ್ತಕದ 6ನೇ ಅಧ್ಯಾಯವನ್ನು ತೆರೆದು, 3ನೆಯ ಪ್ಯಾರಗ್ರಾಫನ್ನು ಓದಿರಿ. ಉದ್ಧೃತ ಶಾಸ್ತ್ರವಚನಗಳನ್ನು ಪರ್ಯಾಲೋಚಿಸಿರಿ. ಪ್ಯಾರಗ್ರಾಫ್ನ ಕೊನೆಯಲ್ಲಿರುವ ಎರಡು ಪ್ರಶ್ನೆಗಳಿಗೆ ಸೂಚಿಸುತ್ತಾ, ಅದರ ಉತ್ತರಗಳನ್ನು ಸ್ವತಃ ನೋಡಲು ಬಯಸುತ್ತೀರೋ ಎಂದು ಮನೆಯವನನ್ನು ಕೇಳಿರಿ. ಪ್ರತ್ಯುತ್ತರವು ಸಕಾರಾತ್ಮಕವಾಗಿದ್ದರೆ, ಮುಂದಿನ ಕೆಲವು ಪ್ಯಾರಗ್ರಾಫ್ಗಳನ್ನು ಚರ್ಚಿಸಿರಿ.
“ಇದನ್ನು ನಂಬುತ್ತೀರೋ ಎಂಬುದಾಗಿ ನಾವು ಜನರನ್ನು ಕೇಳುತ್ತಿದ್ದೇವೆ . . . ” ಆದಿಕಾಂಡ 1:1ನ್ನು ಓದಿ, ನಂತರ ಹೀಗೆ ಕೇಳಿ: “ಈ ವಾಕ್ಯವನ್ನು ನೀವು ಒಪ್ಪಿಕೊಳ್ಳುತ್ತೀರೋ?” ವ್ಯಕ್ತಿಯು ಒಪ್ಪಿಕೊಳ್ಳುವುದಾದರೆ, ಹೀಗೆ ಹೇಳಿ: “ನಾನೂ ಒಪ್ಪಿಕೊಳ್ಳುತ್ತೇನೆ. ಆದರೂ, ದೇವರು ಎಲ್ಲವನ್ನೂ ಸೃಷ್ಟಿಸಿರುವುದಾದರೆ, ಎಲ್ಲ ದುಷ್ಟತನಕ್ಕೂ ಆತನೇ ಜವಾಬ್ದಾರನಾಗಿದ್ದಾನೆ ಎಂದು ನಿಮಗೆ ಅನಿಸುತ್ತದೋ?” ಆ ವ್ಯಕ್ತಿಯ ಉತ್ತರವನ್ನು ಪರಿಗಣಿಸಿದ ನಂತರ, ಪ್ರಸಂಗಿ 7:29ನ್ನು ಓದಿ. ಜ್ಞಾನ ಪುಸ್ತಕದ 8ನೆಯ ಅಧ್ಯಾಯವನ್ನು ತೆರೆದು, 2ನೆಯ ಪ್ಯಾರಗ್ರಾಫನ್ನು ಓದಿ. ಆ ವಾಕ್ಯವನ್ನು ಮನೆಯವನು ಒಪ್ಪದಿದ್ದರೆ, ಸೃಷ್ಟಿಕರ್ತನು ಅಸ್ತಿತ್ವದಲ್ಲಿದ್ದಾನೆ ಎಂಬುದರ ರುಜುವಾತನ್ನು ಪರಿಶೀಲಿಸುವಂತೆ ಅವನನ್ನು ಪ್ರೋತ್ಸಾಹಿಸಿರಿ.—ರೀಸನಿಂಗ್ ಪುಸ್ತಕದ 84-6ನೆಯ ಪುಟಗಳನ್ನು ನೋಡಿರಿ.
“ಇಂದಿನ ನೈತಿಕ ಮೌಲ್ಯಗಳು ಇಷ್ಟೊಂದು ತೀವ್ರವಾಗಿ ಬದಲಾಗುತ್ತಿರುವುದರಿಂದ, ಜೀವಿತದಲ್ಲಿ ಭರವಸಾರ್ಹವಾದ ಮಾರ್ಗದರ್ಶನದ ಅಗತ್ಯ ನಮಗಿದೆ ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲು, ಇರುವ ಪುಸ್ತಕಗಳಲ್ಲಿಯೇ ಅತ್ಯಂತ ಹಳೆಯ ಪುಸ್ತಕವಾಗಿರುವುದಾದರೂ, ಆಧುನಿಕ ಜೀವನಕ್ಕಾಗಿ ಮತ್ತು ಸಂತೋಷಭರಿತ ಕುಟುಂಬ ಜೀವಿತಕ್ಕಾಗಿ ಪ್ರಾಯೋಗಿಕ ಸಲಹೆಯನ್ನು ಕೊಡುತ್ತದೆ.” ಅನಂತರ ಜ್ಞಾನ ಪುಸ್ತಕದ 2ನೇ ಅಧ್ಯಾಯವನ್ನು ತೆರೆದು, 2 ತಿಮೊಥೆಯ 3:16, 17ನ್ನು ಸೇರಿಸಿ, 10ನೇ ಪ್ಯಾರಗ್ರಾಫ್ ಅನ್ನು ಮತ್ತು 11ನೆಯ ಪ್ಯಾರಗ್ರಾಫ್ನ ಮೊದಲ ವಾಕ್ಯವನ್ನು ಓದಿರಿ.
“ನಮಗಾಗಿ ಮತ್ತು ಭೂಮಿಗಾಗಿ ಭವಿಷ್ಯತ್ತಿನಲ್ಲಿ ಏನು ಕಾದಿದೆಯೆಂದು ನೀವು ಎಂದಾದರೂ ಕುತೂಹಲಪಟ್ಟಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲು ಭವಿಷ್ಯತ್ತನ್ನು ಒಂದೇ ಶಬ್ದದಲ್ಲಿ ಸಾರಾಂಶಿಸುತ್ತದೆ—ಪರದೈಸ್! ದೇವರು, ಮೊದಲ ಮಾನವ ದಂಪತಿಯನ್ನು ಸೃಷ್ಟಿಸಿದಾಗ ಅವರನ್ನು ಒಂದು ಪರದೈಸಿನಲ್ಲಿಯೇ ಇರಿಸಿದನು. ಅದು ಹೇಗಿರಬಹುದಿತ್ತೆಂಬುದರ ಕುರಿತಾದ ಈ ವರ್ಣನೆಯನ್ನು ಗಮನಿಸಿರಿ.” ಜ್ಞಾನ ಪುಸ್ತಕದ 8ನೆಯ ಪುಟವನ್ನು ತೆರೆಯಿರಿ, ಮತ್ತು “ಪರದೈಸಿನಲ್ಲಿ ಜೀವನ” ಎಂಬ ಉಪಶೀರ್ಷಿಕೆಯ ಕೆಳಗಿರುವ 9ನೆಯ ಪ್ಯಾರಗ್ರಾಫನ್ನು ಓದಿರಿ. ಅನಂತರ 10ನೆಯ ಪ್ಯಾರಗ್ರಾಫ್ನಲ್ಲಿರುವ ಅಂಶಗಳನ್ನು ಚರ್ಚಿಸಿರಿ, ಮತ್ತು ಉದ್ಧರಿಸಲ್ಪಟ್ಟ ಶಾಸ್ತ್ರವಚನವಾದ, ಯೆಶಾಯ 55:10, 11ನ್ನು ಓದಿರಿ. ಪುನಃಸ್ಥಾಪಿಸಲ್ಪಟ್ಟ ಪರದೈಸಿನಲ್ಲಿ ಜೀವನವು ಹೇಗಿರುವುದೆಂಬ ಚರ್ಚೆಯನ್ನು ಮುಂದುವರಿಸುತ್ತಾ, 11-16ನೆಯ ಪ್ಯಾರಗ್ರಾಫ್ಗಳನ್ನು ಆವರಿಸಲು ಸಿದ್ಧರಿದ್ದೀರೆಂದು ಹೇಳಿರಿ.
ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಪಡೆದುಕೊಂಡಿರುವ ವ್ಯಕ್ತಿಗಳಿಗೆ ಪುನರ್ಭೇಟಿಗಳನ್ನು ಮಾಡುವಾಗ, ನೀವು ಹೀಗೆ ಹೇಳಬಹುದು:
“ಹೋದ ಸಲ ನಿಮ್ಮನ್ನು ಭೇಟಿಯಾದಾಗ, ನಿಮ್ಮೊಂದಿಗೆ ಕಾವಲಿನಬುರುಜು ಪತ್ರಿಕೆಯ ಒಂದು ಪ್ರತಿಯನ್ನು ಬಿಟ್ಟುಹೋಗಿದ್ದೆ. ಈ ಪತ್ರಿಕೆಯ ಇಡೀ ಶೀರ್ಷಿಕೆಯು ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು ಎಂದಾಗಿದೆ ಎಂಬುದನ್ನು ನೀವು ಗಮನಿಸಿರಬಹುದು. ಆ ರಾಜ್ಯವು ಏನಾಗಿದೆ ಮತ್ತು ಅದು ನಿಮಗೂ ನಿಮ್ಮ ಕುಟುಂಬಕ್ಕೂ ಏನನ್ನು ಅರ್ಥೈಸುತ್ತದೆ ಎಂಬುದನ್ನು ನಾನು ಇಂದು ವಿವರಿಸಲು ಬಯಸುತ್ತೇನೆ.” ತರುವಾಯ ಅಪೇಕ್ಷಿಸು ಬ್ರೋಷರಿನ ಪಾಠ 6ನ್ನು ತೆರೆದು, ಆ ವ್ಯಕ್ತಿಗೆ ವ್ಯಯಿಸಸಾಧ್ಯವಿರುವಷ್ಟು ಸಮಯ ಅದನ್ನು ಓದಿ ಚರ್ಚಿಸಿರಿ.
“ನಾನು ಇತ್ತೀಚೆಗೆ ನಿಮ್ಮನ್ನು ಸಂದರ್ಶಿಸಿ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರತಿಗಳನ್ನು ಬಿಟ್ಟುಹೋಗಿದ್ದೆ. ಈ ಪತ್ರಿಕೆಗಳು ಬೈಬಲಿಗಾಗಿ ಮತ್ತು ಅದರ ನೈತಿಕ ನಿರ್ದೇಶನಕ್ಕಾಗಿ ಜನರ ಗೌರವವನ್ನು ಹೆಚ್ಚಿಸುತ್ತವೆ. ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಅತ್ಯಾವಶ್ಯಕವೆಂದು ನನಗೆ ಅನಿಸುವುದರಿಂದ, ಅದನ್ನು ಮಾಡಲು ಸಹಾಯಮಾಡುವ ಒಂದು ವಿಷಯವನ್ನು ನಿಮಗೆ ತೋರಿಸಲು ನಾನು ಪುನಃ ಬಂದಿದ್ದೇನೆ.” ಅಪೇಕ್ಷಿಸು ಬ್ರೋಷರ್ ಅಥವಾ ಜ್ಞಾನ ಪುಸ್ತಕವನ್ನು ಪರಿಚಯಿಸಿ, ಒಂದು ಬೈಬಲ್ ಅಧ್ಯಯನದ ನೀಡುವಿಕೆಯನ್ನು ಮಾಡಿರಿ.
ಯಾವುದೇ 192 ಪುಟದ ಹಳೆಯ ಪುಸ್ತಕಗಳನ್ನು ನೀವು ನೀಡಲಿರುವಾಗ, ಈ ನಿರೂಪಣೆಯನ್ನು ಪ್ರಯತ್ನಿಸಿ ನೋಡಬಹುದು:
“ಗುಣಮಟ್ಟದ ಶಿಕ್ಷಣಕ್ಕಾಗಿರುವ ಅಗತ್ಯಕ್ಕೆ ಇಂದು ಹೆಚ್ಚು ಮಹತ್ವವನ್ನು ಕೊಡಲಾಗಿದೆ. ನಿಮ್ಮ ಅಭಿಪ್ರಾಯದಲ್ಲಿ, ಜೀವಿತದಲ್ಲಿ ಅತ್ಯಂತ ಹೆಚ್ಚಿನ ಸಂತೋಷವನ್ನೂ ಯಶಸ್ಸನ್ನೂ ಖಾತ್ರಿಪಡಿಸಿಕೊಳ್ಳಲಿಕ್ಕಾಗಿ ಒಬ್ಬ ವ್ಯಕ್ತಿಯು ಯಾವ ರೀತಿಯ ಶಿಕ್ಷಣವನ್ನು ಬೆನ್ನಟ್ಟಬೇಕು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ, ಜ್ಞಾನೋಕ್ತಿ 9:10, 11ನ್ನು ಓದಿರಿ.] ಈ ಕೈಪಿಡಿಯು [ನೀವು ನೀಡುತ್ತಿರುವ ಪುಸ್ತಕದ ಶೀರ್ಷಿಕೆಯನ್ನು ಹೇಳಿರಿ] ಬೈಬಲಿನ ಮೇಲೆ ಆಧಾರಿತವಾಗಿದೆ. ನಿತ್ಯಜೀವಕ್ಕೆ ನಡೆಸಬಲ್ಲ ಒಂದೇ ಮೂಲವನ್ನು ಇದು ಸೂಚಿಸುತ್ತದೆ.” ಒಂದು ನಿರ್ದಿಷ್ಟವಾದ ಉದಾಹರಣೆಯನ್ನು ಪುಸ್ತಕದಿಂದ ತೋರಿಸಿರಿ, ಮತ್ತು ಅದನ್ನು ಓದುವಂತೆ ಆ ವ್ಯಕ್ತಿಯನ್ನು ಪ್ರೋತ್ಸಾಹಿಸಿರಿ.
ಇತರ ಪ್ರಕಾಶನಗಳು
ಹೆಚ್ಚಿನ ಪುಸ್ತಕಗಳು ಮತ್ತು ಬ್ರೋಷರ್ಗಳಿಗಾಗಿ ಸೂಚಿಸಲ್ಪಟ್ಟ ನಿರೂಪಣೆಗಳನ್ನು ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ನಲ್ಲಿ ಈ ಕೆಳಗಿನ ಎರಡು ಉಪಶೀರ್ಷಿಕೆಗಳ ಕೆಳಗೆ ಕಂಡುಕೊಳ್ಳಬಹುದು:
ನಿರೂಪಣೆಗಳು
List by Publication
ನೇರವಾದ ಪ್ರಸ್ತಾವ
ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲಿಕ್ಕಾಗಿ, ಈ ನೇರವಾದ ಪ್ರಸ್ತಾವಗಳಲ್ಲಿ ಒಂದನ್ನು ಉಪಯೋಗಿಸಲು ಪ್ರಯತ್ನಿಸಿ:
“ಕೇವಲ ಕೆಲವೇ ನಿಮಿಷಗಳಲ್ಲಿ, ಪ್ರಾಮುಖ್ಯವಾದ ಒಂದು ಬೈಬಲ್ ಪ್ರಶ್ನೆಗೆ ನೀವು ಉತ್ತರವನ್ನು ಪಡೆಯಬಲ್ಲಿರೆಂಬುದು ನಿಮಗೆ ತಿಳಿದಿತ್ತೋ? ಉದಾಹರಣೆಗಾಗಿ, . . .” ಅನಂತರ, ಅಪೇಕ್ಷಿಸು ಬ್ರೋಷರಿನ ಪಾಠಗಳಲ್ಲೊಂದರ ಆರಂಭದಲ್ಲಿ ಕಂಡುಬರುವ ಮತ್ತು ಅದು ಆ ವ್ಯಕ್ತಿಯ ಆಸಕ್ತಿಯನ್ನು ಕೆರಳಿಸುವುದು ಎಂದು ನೀವು ನೆನಸುವ ಒಂದು ಪ್ರಶ್ನೆಯನ್ನು ಕೇಳಿರಿ.
“ನಮ್ಮ ಬೈಬಲ್ ಅಧ್ಯಯನದ ಉಚಿತ ಏರ್ಪಾಡಿನ ಕುರಿತಾಗಿ ತೋರಿಸಲು ನಾನಿಲ್ಲಿಗೆ ಬಂದೆ. ಅದನ್ನು ಪ್ರತ್ಯಕ್ಷಾಭಿನಯಿಸಲು ಸುಮಾರು ಐದು ನಿಮಿಷಗಳು ಹಿಡಿಯಬಹುದು. ನೀವು ನನಗೆ ಐದು ನಿಮಿಷಗಳನ್ನು ಕೊಡಬಲ್ಲಿರೋ?” ಉತ್ತರವು ಹೌದಾಗಿರುವುದಾದರೆ, ಅಧ್ಯಯನವನ್ನು ಪ್ರತ್ಯಕ್ಷಾಭಿನಯಿಸಲಿಕ್ಕಾಗಿ ಅಪೇಕ್ಷಿಸು ಬ್ರೋಷರಿನಲ್ಲಿರುವ ಪಾಠ 1ನ್ನು ಉಪಯೋಗಿಸಿ. ಅದರಲ್ಲಿ ಕೇವಲ ಒಂದು ಅಥವಾ ಎರಡು ಆಯ್ದ ಶಾಸ್ತ್ರವಚನಗಳನ್ನು ಬಳಸಿರಿ. ತರುವಾಯ ಹೀಗೆ ಕೇಳಿ: “ಮುಂದಿನ ಪಾಠವನ್ನು ಆವರಿಸಲಿಕ್ಕಾಗಿ ನಿಮ್ಮಲ್ಲಿ ಸುಮಾರು 15 ನಿಮಿಷಗಳು ಯಾವಾಗ ದೊರೆಯಬಹುದು?”
“ಅನೇಕರ ಬಳಿ ಒಂದು ಬೈಬಲ್ ಇದೆ, ಆದರೆ ನಾವೆಲ್ಲರೂ ಜೀವನದಲ್ಲಿ ಎದುರಿಸುವಂತಹ ಪ್ರಾಮುಖ್ಯ ಪ್ರಶ್ನೆಗಳಿಗೆ ಇದು ಉತ್ತರಗಳನ್ನು ಕೊಡುತ್ತದೆ ಎಂಬುದು ಅವರಿಗೆ ತಿಳಿದಿಲ್ಲ. ಈ ಅಧ್ಯಯನ ಸಹಾಯಕ [ಅಪೇಕ್ಷಿಸು ಬ್ರೋಷರ್ ಅಥವಾ ಜ್ಞಾನ ಪುಸ್ತಕ]ವನ್ನು, ವಾರಕ್ಕೊಂದಾವರ್ತಿ ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಉಪಯೋಗಿಸುವುದರಿಂದ, ಬೈಬಲಿನ ಮೂಲಭೂತ ತಿಳಿವಳಿಕೆಯನ್ನು ನೀವು ಕೇವಲ ಕೆಲವೇ ತಿಂಗಳುಗಳಲ್ಲಿ ಪಡೆದುಕೊಳ್ಳಬಲ್ಲಿರಿ. ಈ ಅಧ್ಯಯನವು ಹೇಗೆ ನಡೆಸಲ್ಪಡುತ್ತದೆಂಬುದನ್ನು ತೋರಿಸಲು ನಾನು ಸಂತೋಷಿಸುವೆ.”
“ಬೈಬಲ್ ಕೋರ್ಸ್ನ ಒಂದು ಉಚಿತವಾದ ನೀಡುವಿಕೆಯನ್ನು ನಿಮಗೆ ಮಾಡಲು ನಾನು ಸಂದರ್ಶಿಸುತ್ತಿದ್ದೇನೆ. ಸುಮಾರು 200 ದೇಶಗಳಲ್ಲಿನ ಜನರು, ಬೈಬಲನ್ನು ಮನೆಯಲ್ಲಿ ಕುಟುಂಬ ಗುಂಪುಗಳೋಪಾದಿ ಹೇಗೆ ಚರ್ಚಿಸುತ್ತಾರೆಂಬುದನ್ನು ಪ್ರದರ್ಶಿಸಲು, ನಿಮ್ಮ ಅನುಮತಿಯಿರುವಲ್ಲಿ ನಾನು ಕೇವಲ ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ಈ ವಿಷಯಗಳಲ್ಲಿ ಯಾವುದೇ ವಿಷಯವನ್ನು ನಾವು ಚರ್ಚೆಗಾಗಿ ಆಧಾರವಾಗಿ ಉಪಯೋಗಿಸಬಲ್ಲೆವು. [ಜ್ಞಾನ ಪುಸ್ತಕದಲ್ಲಿರುವ ಪರಿವಿಡಿಯನ್ನು ತೋರಿಸಿರಿ.] ನಿಮಗೆ ಯಾವುದು ವಿಶೇಷವಾಗಿ ಆಸಕ್ತಿಯುಳ್ಳದ್ದಾಗಿದೆ?” ವ್ಯಕ್ತಿಯು ಒಂದು ಆಯ್ಕೆಯನ್ನು ಮಾಡುವಂತೆ ಕಾಯಿರಿ. ಆರಿಸಲ್ಪಟ್ಟ ಅಧ್ಯಾಯವನ್ನು ತೆರೆಯಿರಿ, ಮತ್ತು ಪ್ರಥಮ ಪ್ಯಾರಗ್ರಾಫ್ನಲ್ಲಿ ಅಧ್ಯಯನವನ್ನು ಆರಂಭಿಸಿರಿ.
“ನಾನು ಬೈಬಲ್ ಪಾಠಗಳನ್ನು ಉಚಿತವಾಗಿ ಕಲಿಸುತ್ತೇನೆ ಮತ್ತು ಹೆಚ್ಚಿನ ವಿದ್ಯಾರ್ಥಿಗಳಿಗಾಗಿ ನನ್ನ ಕಾರ್ಯತಖ್ತೆಯಲ್ಲಿ ಸಮಯವಿದೆ. ನಾವು ಉಪಯೋಗಿಸುವಂತಹ ಬೈಬಲ್ ಅಧ್ಯಯನದ ಸಹಾಯಕ ಇದಾಗಿದೆ. [ಜ್ಞಾನ ಪುಸ್ತಕವನ್ನು ತೋರಿಸಿರಿ.] ಈ ಕೋರ್ಸ್ ಕೇವಲ ಕೆಲವೇ ತಿಂಗಳದ್ದಾಗಿರುತ್ತದೆ ಮತ್ತು ದೇವರು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ? ನಾವು ವೃದ್ಧರಾಗುವುದೂ ಸಾಯುವುದೂ ಏಕೆ? ಮತ್ತು ಮೃತರಾದ ನಮ್ಮ ಪ್ರಿಯರಿಗೆ ಏನು ಸಂಭವಿಸುತ್ತದೆ? ಎಂಬಂತಹ ಪ್ರಶ್ನೆಗಳನ್ನು ಬೈಬಲ್ ಹೇಗೆ ಉತ್ತರಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ. ನಾನು ಒಂದು ಪಾಠವನ್ನು ಪ್ರತ್ಯಕ್ಷಾಭಿನಯಿಸಿ ತೋರಿಸಬಹುದೋ?”
ಆಸಕ್ತಿಯನ್ನು ಕೆರಳಿಸುವುದರಲ್ಲಿ ಫಲಿತಾಂಶಗಳನ್ನು ತರುವ ಪರಿಣಾಮಕಾರಿ ನಿರೂಪಣೆಯೊಂದನ್ನು ನೀವು ಈಗಾಗಲೇ ಕಂಡುಕೊಂಡಿರುವಲ್ಲಿ, ನಿಶ್ಚಯವಾಗಿಯೂ ಅದನ್ನು ಉಪಯೋಗಿಸುತ್ತಾ ಮುಂದುವರಿಯಿರಿ! ಆದರೆ ಅದನ್ನು ಸದ್ಯದ ತಿಂಗಳಿನ ನೀಡುವಿಕೆಯೊಂದಿಗೆ ಸರಿಹೊಂದಿಸಿ.