ಹೊಸ ಬ್ರೋಷರನ್ನು ನೀಡಲಿದ್ದೇವೆ!
1. ನವೆಂಬರ್ ತಿಂಗಳ ನೀಡುವಿಕೆ ಏನು? ಈ ಪ್ರಕಾಶನದ ಉದ್ದೇಶವೇನು?
1 “ಸದಾ ಎಚ್ಚರವಾಗಿರಿ!” ಎಂಬ 2009ರ ಜಿಲ್ಲಾ ಅಧಿವೇಶನದಲ್ಲಿ ಬೈಬಲ್—ಅದರಲ್ಲಿ ಏನಿದೆ? ಎಂಬ ಹೊಸ ಬ್ರೋಷರ್ ಬಿಡುಗಡೆಯಾಗಿತ್ತು. ಅದನ್ನು ಜಗತ್ತಿನಾದ್ಯಂತ ಇರುವ ಸಭೆಗಳು ನವೆಂಬರ್ ತಿಂಗಳಲ್ಲಿ ಮೊದಲ ಬಾರಿ ಕ್ಷೇತ್ರದಲ್ಲಿ ನೀಡಲಿವೆ. ನಮ್ಮ ಟೆರಿಟೊರಿಯ ಜನರಿಗೆ ಈ ಪ್ರಕಾಶನದಿಂದ ಏನು ಪ್ರಯೋಜನ? ಅಧಿಕಾಂಶ ಜನರಿಗೆ ಅದರಲ್ಲೂ ಕ್ರೈಸ್ತರಲ್ಲದ ಜನರಿಗೆ ಬೈಬಲಿನ ಬಗ್ಗೆ ಅಲ್ಪಸ್ವಲ್ಪ ತಿಳಿದಿರುತ್ತದೆ. ಆದ್ದರಿಂದಲೇ ಈ ಬ್ರೋಷರಿನ 3ನೇ ಪುಟದಲ್ಲಿ ವಿವರಿಸಿರುವಂತೆ ಇದನ್ನು, “ಬೈಬಲಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಲು” ಪ್ರಕಾಶಿಸಲಾಗಿದೆ.
2. ಈ ಬ್ರೋಷರನ್ನು ಹೇಗೆ ನೀಡಬಲ್ಲೆವು?
2 ನೀಡುವುದು ಹೇಗೆ? ಮನೆಯವರು ಕ್ರೈಸ್ತಪ್ರಪಂಚದವರಾಗಿದ್ದಲ್ಲಿ ನಾವು ಹೀಗೆ ಹೇಳಬಹುದು: “ಈ ವಚನದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಯಲು ಇಚ್ಛಿಸುತ್ತೇವೆ. [2 ತಿಮೊಥೆಯ 3:16 ಓದಿ.] ನಾವು ಮಾತಾಡಿದವರಲ್ಲಿ ಕೆಲವರು ಈ ಮಾತನ್ನು ಒಪ್ಪಿದ್ದಾರೆ. ಇನ್ನೂ ಕೆಲವರು ಬೈಬಲ್ ಒಂದು ಒಳ್ಳೇ ಪುಸ್ತಕ ಅಷ್ಟೇ ಎಂದು ಹೇಳಿದ್ದಾರೆ. ನಿಮ್ಮ ಅಭಿಪ್ರಾಯವೇನು? [ಪ್ರತಿಕ್ರಿಯೆಗೆ ಅವಕಾಶಕೊಡಿ.] ನಮ್ಮ ನಂಬಿಕೆಗಳು ಏನೇ ಆಗಿದ್ದರೂ ನಾವು ಸ್ವತಃ ಬೈಬಲನ್ನು ಪರಿಶೀಲಿಸಿ ನೋಡಲು ಅನೇಕ ಕಾರಣಗಳಿವೆ. [ಪುಟ 3ರ ಮೇಲ್ಭಾಗದಲ್ಲಿನ ಪೀಠಿಕಾ ಪ್ಯಾರ ಓದಿ.] ಬೈಬಲಿನ ಬಗ್ಗೆ ಚುಟುಕಾದ ಸಾರಾಂಶವನ್ನು ಕೊಡುವ ಈ ಬ್ರೋಷರನ್ನು ನೀವು ಓದುವಾಗ ಬೈಬಲಿನುದ್ದಕ್ಕೂ ಒಂದೇ ಮುಖ್ಯ ವಿಷಯ ಮತ್ತು ಸಂದೇಶ ಇದೆ ಎಂಬ ಆಸಕ್ತಿಕರ ಸಂಗತಿಯನ್ನು ಕಂಡುಕೊಳ್ಳುವಿರಿ.”
3. ವಿಶೇಷವಾಗಿ ಕ್ರೈಸ್ತರಲ್ಲದ ಜನರೊಂದಿಗೆ ಮಾತಾಡುವಾಗ ನಾವು ಬಳಸಬಹುದಾದ ನಿರೂಪಣೆ ಯಾವುದು?
3 ಇನ್ನೊಂದು ನಿರೂಪಣೆ ಇಲ್ಲಿದೆ. ಇದನ್ನು ವಿಶೇಷವಾಗಿ ಕ್ರೈಸ್ತರಲ್ಲದ ಆದರೆ ಬೈಬಲ್ ಬಗ್ಗೆ ಗೌರವವಿರುವಂತೆ ತೋರುವ ಜನರೊಟ್ಟಿಗೆ ಮಾತಾಡುವಾಗ ಬಳಸಬಹುದು: “ಹೆಚ್ಚಾಗಿ ಇಂದು ಸಾಧುಸ್ವಭಾವದ ಜನರು ದಬ್ಬಾಳಿಕೆ, ಅನ್ಯಾಯಗಳಿಗೆ ಒಳಗಾಗುತ್ತಿದ್ದಾರೆ. ಇವರಿಗಾಗಿ ದೇವರು ಏನಾದರೂ ಮಾಡುವನೆಂದು ನಿಮಗನಿಸುತ್ತದೋ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಇಂಥವರ ಕಷ್ಟಪರಿಹರಿಸುವೆನು ಎಂದು ದೇವರು ಮಾತುಕೊಟ್ಟಿದ್ದಾನೆ. ಅದನ್ನು ಬೈಬಲಿನಿಂದ ನಿಮಗೆ ಓದಿಹೇಳಬಹುದೊ? [ಮನೆಯವರು ಒಪ್ಪುವಲ್ಲಿ ಕೀರ್ತನೆ 37:11 ಓದಿ.] ಈ ಭವಿಷ್ಯವಾಣಿ ನೆರವೇರುವಾಗ ಭೂಮಿ ಹೇಗಿರುವುದೆಂದು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಎಲ್ಲ ಸಂಸ್ಕೃತಿ, ಧರ್ಮದ ಜನರು ಬೈಬಲಿನಿಂದ ಪಡೆಯಬಹುದಾದ ನಿರೀಕ್ಷೆ ಮತ್ತು ಸಾಂತ್ವನಕ್ಕೆ ಇದು ಬರೀ ಒಂದು ಉದಾಹರಣೆ.” ಪುಟ 3ರ ಮೇಲ್ಭಾಗದಲ್ಲಿನ ಪ್ಯಾರವನ್ನು ಓದಿ. ನಂತರ ಬ್ರೋಷರನ್ನು ನೀಡಿ.
4. ಬೈಬಲ್ ಅಧ್ಯಯನ ಆರಂಭಿಸಲು ಈ ಬ್ರೋಷರನ್ನು ಹೇಗೆ ಬಳಸಬಹುದು?
4 ಬೈಬಲ್ ಅಧ್ಯಯನ ಆರಂಭಿಸಿ: ಪುನರ್ಭೇಟಿ ಮಾಡುವಾಗ ನಾವು ಕಳೆದ ಬಾರಿ ಮಾತಾಡಿದ ವಿಷಯವನ್ನು ಮನೆಯವರ ನೆನಪಿಗೆ ತರಬಹುದು. ನಂತರ ಆ ವಿಷಯಕ್ಕೆ ಸಂಬಂಧಪಟ್ಟ ಅಧ್ಯಾಯದಿಂದ ಒಂದೆರಡು ಪ್ಯಾರಗಳನ್ನು ಪುಟದ ಕೊನೆಯಲ್ಲಿರುವ ಪ್ರಶ್ನೆಗಳನ್ನು ಬಳಸಿ ಚರ್ಚಿಸಬಹುದು. ಅಥವಾ ನೇರವಾಗಿ ಬೈಬಲ್ ಬೋಧಿಸುತ್ತದೆ ಪುಸ್ತಕ ಕೊಡುವುದು ಸೂಕ್ತವೆಂದು ತೋರುವಲ್ಲಿ ಬ್ರೋಷರಿನ ಹಿಂಭಾಗದಲ್ಲಿರುವ ಮಾಹಿತಿಯನ್ನು ಅವರೊಂದಿಗೆ ಓದಿ, ಆ ಪುಸ್ತಕವನ್ನು ಅವರ ಕೈಯಲ್ಲಿ ಕೊಟ್ಟು, ಅವರಿಗೆ ಯಾವ ಅಧ್ಯಾಯ ತುಂಬ ಹಿಡಿಸಿತೆಂದು ಕೇಳಬಹುದು. ಆಮೇಲೆ ಆ ಅಧ್ಯಾಯದಿಂದ ಒಂದೆರಡು ಪ್ಯಾರಗಳನ್ನು ಚರ್ಚಿಸಬಹುದು. ನವೆಂಬರ್ ತಿಂಗಳಲ್ಲಿ ಈ ಬ್ರೋಷರನ್ನು ನೀಡುವುದರಲ್ಲಿ ನಾವೆಲ್ಲರೂ ಪೂರ್ಣವಾಗಿ ಭಾಗವಹಿಸೋಣ!